ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 21, 2012

1

ದೀಪ. ಭಾಗ-೧

‍ನಿಲುಮೆ ಮೂಲಕ

– ವಿಜಯ್ ಹೂಗಾರ್

ಸುಳಿಗಾಳಿಯಿಂದ ಹಗುರಾಗಿ ತೇಲಿದ ಮಣ್ಣು ಬಿಸಿಲಿನ ಪ್ರಭೆಗೆ ಮೊನಚಾಗಿ ಇಡೀ ಊರನ್ನ ಸಿಂಪಡಿಸಿದಂತೆ ಆವರಿಸಿತ್ತು.ಅಲ್ಲಲ್ಲಿ ತಲೆಯೆತ್ತಿದ ಮರಗಳು ತುಂಡು ತುಂಡಾಗಿ ನೆಲವನ್ನು ನೇವರಿಸುವಂತೆ ಬೇರುರಿದ್ದವು.ಊರ ಮಧ್ಯ ನಡುಗಡ್ದೆಯಂತೆ ಇರುವ ದೈತ್ಯ ಬೆಟ್ಟದ ಸುತ್ತಲೂ ಹರಿಯದ ನೀರಿನಂತೆ ಹರಿದ ಮನೆಗಳು ಕಲಸುಮೇಲೋಗರವಾಗಿ ಹರಡಿಕೊಂಡಿದ್ದವು.ಬೆಟ್ಟದ ಮೇಲೆ ಊರ ಕಾಯೋ ಪಹರೆದಾರನಂತೆ ಲಕ್ಷ್ಮಿ ದೇವತೆ ಭಕ್ತರ ಸೇವೆ ಸ್ವೀಕರಿಸುತ್ತಾ ವಾಸವಾಗಿದ್ದಳು.ಬೆಟ್ಟದ ಅಪರಭಾಗದಲ್ಲಿ ಬೀಕೋ ಅನ್ನುತ್ತಿರುವ ಬತ್ತಿ ಹಗುರಾದ ಕೆರೆ, ಆಡಿ ಹೋದ ಪುಟ್ಟ ಮಕ್ಕಳ ಹೆಜ್ಜೆಯ ಬರೆದಿಡುವ ಕಾಗದದಂತಿತ್ತು.ಬಿಸಿಲಿನ ಹೊಳೆಗೆ ತಟಸ್ಥವಾಗಿ ನಿಂತಿರುವ ಬೆವತ ಮನೆಗಳು ಶೋಕಸಾಗರದಲ್ಲಿ ಕಳೆದುಹೋದಂತೆ ಶಾಂತವಾಗಿದ್ದವು.

ಕಮಲಜ್ಜಿಗೆ ವಯಸ್ಸಾದರೂ ಈಗಲೂ ಚೂಟಿಯಾಗಿ ವಯಸ್ಸಿನ ಹುಡುಗಿಯರು ನಾಚುವಂತೆ ಕೆಲಸ ಮಾಡುತಿದ್ದಳು. ಮಗಳಮಗ ಹನುಮಂತನ ಮದುವೆಯಾಗಿ ಐದು ಸಂವತ್ಸರ ಕಳೆದರು ಮಕ್ಕಳಾಗಲಿಲ್ಲ ಅಂತ ತುಂಬಾ ಬೇಸರಿಸಿದ್ದಳು. ಮುತ್ತಜ್ಜಿಯಾಗಿ ಮರಿ ಮೊಮ್ಮಗನನ್ನು ಆಡಿಸಬೇಕೆಂದು ಬಲು ಆಸೆಯಿಂದ ಹನುಮಂತನ ಮದುವೆಯಾದ ಹೊಸತರಲ್ಲಿ ನವದಂಪತಿಗಳಿಗೆ ಖಾಸಗಿ ಕೋಣೆಯಲ್ಲಿ ಖಾಸಗಿಯಾಗಿ ಬಿಟ್ಟು ಕೊಟ್ಟಿಗೆಯಲ್ಲಿ ಇರುವ ಚಿಕ್ಕ ಕೋಣೆಯಲ್ಲಿ ಎಷ್ಟೋ ದಿವಸ ಒಬ್ಬಳೇ ಮಲಗಿದ್ದಳು.ಅದರಿಂದ ಫಲ ಕಾಣದೆ ಹೋದಾಗ ಪ್ಯಾಟೆಯಲ್ಲಿರುವ ದೊಡ್ಡ ಮಗ ರಾಮಪ್ಪನ ಹತ್ತಿರ ‘ಸೊಸೆಯನ್ನ ನೋಡಬೇಕೆನಿಸಿತು’ ಅಂತ  ಹೇಳಿ ಪದೇ ಪದೇ ಹೋಗಿ ಬರುತ್ತಿದ್ದಳು.’ಈ ಕೈಯ್ಯಾಗ ಎಷ್ಟು ಬಾಣಂತನ ಮಾಡಿಲ್ಲ ಲಕ್ಷ್ಮಿಯಕ್ಕ,ಆದರ ನಮ್ಮ ದೇವಕಿಯ (ಹನುಮಂತನ ಹೆಂಡತಿ) ಬಾಣಂತನ ನನ್ನ ಕೈಯಾರ ಮಾಡಬೇಕೆಂಬುದು ಬಕ್ಕುಳ್ ಆಸೆ ಆಗ್ಯದ ನೋಡು’ ಅಂತ ತನ್ನ ಸಂಕಟದ ಆಶಯ ಲಕ್ಷ್ಮಿಯಕ್ಕನ ಮುಂದೆ ತೋಡಿಕೊಳ್ಳುತ್ತಿದ್ದಳು.ಪರಾಗಸ್ಪರ್ಷದ ಅಮೃತ ಘಳಿಗೆಯ ಕಾಯುವ ಹೂವಾಡಗಿತ್ತಿಯಂತೆ ದೇವಕಿಯಿಂದ ಹೂವಿನಂಥ ಮಗು ಬಯಸುತ್ತಿದ್ದಳು.ಇವಳ ಕೊನೆಗಾಣದ ಕೊರಗು ಕಂಡು ಕಮಲಜ್ಜಿಯ ಗಂಡ ಪೂಜಾರಪ್ಪ ಮಾತ್ರ “ಸ್ವಲ್ಪ ದಮ್ ತಿನು,ಬಿತ್ತಿದ ಪ್ರತಿವರ್ಷ ಬೆಳೆ ಚನ್ನಾಗಿ ಬರಬೇಕು ಅಂತೇನಿಲ್ಲ….ಕೆಲವೊಂದುಸಲ ಮಳೆ ಬಿದ್ದಿಲ್ಲ ಅಂದ್ರೆ ಬಿತ್ತಿದೆಲ್ಲ ಲುಕ್ಸಾನು ಆಗ್ತದ” ಅಂತ ಸಮಾಧಾನ  ಮಾಡ್ತಿದ್ದ.ಅದಕ್ಕೆ ಕಮಲಜ್ಜಿ “ಹು ಲುಕ್ಸಾನ ಯಾಕ ಆಗ್ತದ,ಮಳಿ ಬರಾದ ನೋಡೇ ಬಿತ್ತೊಕೆನಾಗ್ತದ” ಅಂತ ಹೌಹಾರುತ್ತಿದ್ದಳು.

ಹೆಂಡತಿ ಮಕ್ಕಳ ಸಮೇತ ಹಿರಿಯ ಮಗ ರಾಮಪ್ಪ ದಸರಾ ರಜೆಗಂತ ಊರಿಗೆ ಬರುತ್ತಿದ್ದ.ರಾಮಪ್ಪನ ಮಾತು ಲಕ್ಷ್ಮಣ ರೇಖೆಯಂತೆ.ಯಾರು ಮೀರುತ್ತಿರಲಿಲ್ಲ.ಅವನ ಮಾತೆ ಕೊನೆಯದ್ದು.ಕಷ್ಟ ಕಾಲದಲ್ಲಿದ್ದಾಗ ಒಪ್ಪತ್ತು ಊಟ ಮಾಡಿ ಪ್ರತಿದಿನ ಹದಿನೈದು ಕಿಲೋಮೀಟರು ನಡೆದು ಹಾಯ್ ಸ್ಕೂಲ್ ಮುಗಿಸಿ ಸರಕಾರಿ ಕೆಲಸ ಗಿಟ್ಟಿಸಿ ಮನೆ ಸಾಗಿಸಿದ್ದ.ಹೆಂಡತಿ ಮಕ್ಕಳು ಅಂತ ಆದ ಮೇಲೆ ಸಹಾಯ ಹಸ್ತ ಕಡಿಮೆಯಾದರೂ ನಿಂತಿರಲಿಲ್ಲ.ರಾಮಪ್ಪನಿಗೆ ಸರಕಾರಿ ಕೆಲಸ ಸಿಕ್ಕಿದ್ದು ಖುಷಿಯಾದರೆ ಚಿಕ್ಕವ ರಮೇಶನ ಬೇಜವಾಬ್ದಾರಿತನ ಕಮಲಜ್ಜಿಯನ್ನು ಕಾಡುತಿತ್ತು.ಹಾಯ್ ಸ್ಕೂಲ್ ಮುಗಿದ ಮೇಲೆ ಒಂದು ವರ್ಷದ TCH ಕೋರ್ಸ್ ಮುಗಿಸಿದರೆ ಸಾಕಾಗಿತ್ತು ಸರಕಾರಿ ಕೆಲಸ ಸಿಗೋದಕ್ಕೆ.ರಾಮಪ್ಪ ಅದಕ್ಕೆಲ್ಲ ವ್ಯವಸ್ಥೆ ಮಾಡಿ,ಫೀಸು ತುಂಬಿ ಆಶ್ರಯ ಕೂಡ ಕೊಟ್ಟಿದ್ದ.ಆದರೆ ಒಂದು ತಿಂಗಳಲ್ಲಿ ಒಂದು ಕ್ಲಾಸಿಗೂ ಹೋಗದೆ ಯಾರಿಗೂ ಹೇಳದೆ ಕೇಳದೆ ಊರಿಗೆ ಓಡಿ ಬದಿದ್ದ.ರಾಮಪ್ಪನ ಹೆಂಡತಿ ಜಲಜ ಎರಡು ಸಾವಿರ ಫೀಸು ಸುಮ್ನೆ ಹಾಳಯ್ತಲ್ಲ ಅಂತ ಗಂಡನಿಗೆ ಹೇಳಲಾಗದೆ ಕೊರಗಿದ್ದಳು. ಅವನ ಬೇಜವಾಬ್ದಾರಿತನದ ಅಸಲಿಗೆ ಕಮಲಜ್ಜಿ ಕೊರಗಿನ ಬಡ್ಡಿ ಕಟ್ಟುತ್ತಿದ್ದಳು.ಕಮಲಜ್ಜಿಯ ಸಂಕಟ ನೋಡಕ್ಕಾಗದೆ ಪಾಯಿ ಪಾಯಿ ಕೂಡಿಟ್ಟ ಹಣದಿಂದ ರಾಮಪ್ಪ ಅವನಿಗೊಂದು ಸೆಕೆಂಡ್ ಹ್ಯಾಂಡ್ ಜೀಪ್ ಕೊಡಿಸಿದ್ದರು.ಡ್ರೈವರ್ಗಿರಿ ಕಲಿತ.ವ್ಯವಹಾರದಲ್ಲಿ ಸಮಯಕ್ಕೆ ಕೊಡಬೇಕಾದ ಬೆಲೆ ಕೊಡದೆ ಹೋಗಿದ್ದರಿಂದ ವ್ಯವಹಾರ ಲಾಭ ಬರೋದು ದೂರನೇ ಉಳಿತು,ಅದನ್ನ ಉಳಿಸಿಕೊಂಡಿ ಹೋಗೋದಕ್ಕೂ ಆಗಲಿಲ್ಲ.ಈಗ ತೋಟ ಮಾಡ್ತೀನಿ ಅಂತ ಮುಂದಾಗಿದ್ದಾನೆ.ಆಗಲೇ ಹತ್ತು ಗಜ ಭಾವಿ ತೊಡಿದರು ಭಾವಿಗಿನ್ನು ನೀರು ಹತ್ತಿರಲಿಲ್ಲ.ಅದರಲ್ಲಿ ಮಳೆ ನೀರ ಸಂಗ್ರಹಿಸಿ ಒಂದು ಬೆಳೆಗಾದ್ರು ಆಯ್ತಲ್ಲ ಅಂತ ಹುಸಿ ಹೆಮ್ಮೆಪಡುತ್ತ ವ್ಯವಸಾಯ ಮಾಡುತ್ತಿದ್ದಾನೆ.ರಮೇಶನಿಗೆ ವಿನೋದ (ಇನ್ಯಾ) ಹುಟ್ಟಿದ ಮೇಲೆ ದುಡ್ಡು ಸಂಪಾದನೆ ಮಾಡೋಕ್ಕಾಗಲ್ಲ ಅಂತ ಊರಲ್ಲೇ ಬೇರೆ ಮನೆ ಮಾಡಿದ್ದಾನೆ.ಹಬ್ಬ ಹುಣ್ಣಿಮೆ ಬಂದರೆ ಎಷ್ಟೇ ಬೇಡ ಅಂತ ಸಿಟ್ಟಿನಿಂದ ಹೋದರು ಕಮಲಜ್ಜಿ ಮಗನಿಗೆ ಹೋಳಿಗೆ ಊಟ ಮಾಡಿಸುವದು ಮಾತ್ರ ಬಿಡುವದಿಲ್ಲ.ಎಷ್ಟೇ ವೈಮನಸು ಮೂಡಿದರು ಕಮಲಜ್ಜಿ  ಲಕ್ಷ್ಮಿ ದೇವರಿಗೆ ಕೈ ಮುಗಿದು,ಚಿಕ್ಕವ ರಮೇಶನಿಗೆ ಒಳ್ಳೆಯದಾಗಲಿ ಪ್ರತಿ ದಸರೆಗೆ ಹರಕೆ ಹೊತ್ತೋದು ಇನ್ನು ಬಿಟ್ಟಿರಲಿಲ್ಲ.

1 ಟಿಪ್ಪಣಿ Post a comment
 1. vijayhugar
  ಏಪ್ರಿಲ್ 21 2012

  ನಿಲುಮೆ ಬಳಗದವರಿಗೆ ತುಂಬಾ ಧನ್ಯವಾದಗಳು.

  ಪ್ರಕಟಿಸಿದ ನನ್ನ ಕಥೆಯಲ್ಲಿ ಕೆಲ ಪದಗಳು ಒಂದು ಇನ್ನೊಂದರಲ್ಲಿ ಕೂಡಿಕೊಂಡಿವೆ.ಸಾಧ್ಯವಾದರೆ ಅದನ್ನ ತಿದ್ದಿ ಮರುಪ್ರಕಟಿಸಿ.

  ಒಲುಮೆಯಿಂದ
  ವಿಜಯ್ ಹೂಗಾರ್

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments