ವಿಷಯದ ವಿವರಗಳಿಗೆ ದಾಟಿರಿ

ಮೇ 2, 2013

3

ದೇವನೂರು ಮಹಾದೇವರ ಪ್ರತಿಕ್ರಿಯೆ ಮತ್ತು ನನ್ನ ಗೊಂದಲಗಳು

‍ನಿಲುಮೆ ಮೂಲಕ

-ಡಾ.ಸಂತೋಷ್ ಕುಮಾರ‍್ ಪಿ.ಕೆ

ಪ್ರಜಾವಾಣಿಯಲ್ಲಿ ದೇವನೂರು ಮಹಾದೇವ ರವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ.

Vachana Charcheನನ್ನ ವಿದ್ಯಾರ್ಥಿ ಜೀವನದಿಂದಲೂ ದೇವನೂರು ಮಹಾದೇವ ಎಂಬ ಆದರ್ಶವ್ಯಕ್ತಿಯ ಕುರಿತು ಕೇಳಿದ್ದೆ, ಹಾಗೂ ಕೆಲವೊಮ್ಮೆ ನೋಡುವ ಭಾಗ್ಯವೂ ಒದಗಿತ್ತು. ಕನ್ನಡ ಬಂಡಾಯ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಶಾಂತಿ ಮತ್ತು ಅಹಿಂಸಾ ಮಾರ್ಗವಾಗಿ ಹೋರಾಡುತ್ತಿರುವುದು ಅವರ ವ್ಯಕ್ತಿತ್ವದ ಆಕರ್ಷಣೆಯಾಗಿದೆ. ಇದಕ್ಕೆ ಮಾರುಹೋದ ಹಲವಾರು ಯುವಸಮುದಾಯಗಳು ಅವರನ್ನು “ಆಧುನಿಕ ಸಂತ” ಎಂಬಂತೆ ಬಿಂಬಿಸುತ್ತವೆ. ಅಷ್ಟು ಶಾಂತಚಿತ್ತ ಮತ್ತು ಧೀಮಂತ ಹೋರಾಟಗಾರೆಂದೆ ಖ್ಯಾತಿ ಪಡೆದ ದೇವನೂರು ರವರು ಏನೇ ಬರೆದರೂ ಅದನ್ನು ಓದಲು ನನ್ನನ್ನೂ ಸೇರಿ ಅಪಾರ ಅಭಿಮಾನಿಗಳ ಬಳಗವೇ ಇದೆ. ವಚನ ಕುರಿತ ಚರ್ಚೆಗೆ ಅವರ ಪ್ರತಿಕ್ರಿಯೆಯನ್ನು ಓದಿದ ಮೇಲೆ ಅವರ ಮೇಲಿದ್ದ ನನ್ನ ಗೌರವ, ನಂಬಿಕೆಗಳು ಆ ಲೇಖನವನ್ನು ಅವರೇ ಬರೆದಿದ್ದಾ ಎಂಬ ಅನುಮಾನವನ್ನು ಮೂಢಿಸಿದೆ. ಅದೇನೇ ಇದ್ದರೂ ದೇವನೂರು ಮಹಾದೇವ ರವರು ಕೆಲವು ತಪ್ಪುನಂಬಿಕೆಗಳ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆದಿದ್ದಾರೆ, ಅವುಗಳನ್ನು ನನ್ನ ಓದಿನ ಮಿತಿಯಲ್ಲಿ ಚರ್ಚಿಸಲು ಬಯಸುತ್ತೇನೆ.

೧. ಲೇಖನದ ಪ್ರಾರಂಭದಲ್ಲಿ  ಒಂದು ಉದಾಹರಣೆಯನ್ನು ನೀಡುವ ಮೂಲಕ ಅಂಕಿ ಸಂಖ್ಯೆಯ ಆಧಾರವಾದ ವಿವರಣೆಯನ್ನು ವಿರೋಧಿಸಿದ್ದಾರೆ: ಅದೆಂದರೆ “ತಾಯಿಯನ್ನು ’ತಾಯಿ” ಎಂದು ಇಷ್ಟು ಸಾರಿ (ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ) ಕರೆಯದಿದ್ದರೆ ಬಂಜೆ ಎಂದು ಕರೆದು ದಿಗ್ವಿಜಯ ಸಾಧಿಸಿಬಿಡುತ್ತಾರೆ”. ಇಲ್ಲಿ ತೆಗೆದುಕೊಂಡಿರುವ ಉದಾಹರಣೆಯನ್ನು ಮತ್ತೊಂದು ರೀತಿಯಲ್ಲಿ ಇಡಬಹುದು, ಒಲ್ಲೊಬ್ಬರು ಮಹಿಳೆ ಇದ್ದಾರೆ ಹಾಗೂ ಮಗನ ವಯಸ್ಸಿನ ವ್ಯಕ್ತಿಯೊಬ್ಬ ಇದ್ದಾನೆ ಎಂದಿಟ್ಟುಕೊಳ್ಳಿ. ಆಕೆಗೆ ಅಪಾರ ಆಸ್ತಿ ಇದ್ದು ಬೇರೆ ಯಾರೂ ವಾರಸ್ದಾರರು ಇಲ್ಲ ಎಂದಿಟ್ಟುಕೊಳ್ಳುವ, ಅವಳ ಆಸ್ತಿಯನ್ನು ಕಬಳಿಸಲು ಯಾರೋ ಆಕೆಯನ್ನು ಅಮ್ಮ ಅಮ್ಮ ಎಂದು ನೂರು ಸಾವಿರ ಲಕ್ಷ ಬಾರಿ ಕರೆಯುತ್ತಾರೆ ಎಂದಾದರೆ, ಅವರ ನಡುವೆ ಇರುವುದು ತಾಯಿ ಮಕ್ಕಳ ಸಂಬಂಧವೆ? ಅಥವಾ ಬೇರೆ ತರಹದ ಸಂಬಂಧವೆ? ಇಲ್ಲಿ ಆಸ್ತಿಗೋಸ್ಕರ ಆತ ಎಷ್ಟು ಬಾರಿ ತಾಯಿ ಎಂದು ಕರೆದರೂ ಆಕೆ ಆತನಿಗೆ ತಾಯಿಯಾಗಲು ಸಾಧ್ಯವಿಲ್ಲ, ಇದನ್ನು ಪ್ರಮಾಣೀಕರಿಸುವುದು ಹೇಗೆ? ಹೇಗೆಂದರೆ ಅವರ ನಡುವೆ ನಿಜವಾಗಿಯೂ ತಾಯಿ-ಮಗನ ಸಂಬಂಧವಿದೆಯೇ? ಎಂದು ಪರೀಕ್ಷೆ ಮಾಡುವುದು. ಆ ಪರೀಕ್ಷೆಯನ್ನೇ ಮಾಡದೆ ಕೆಲವು ಬಾರಿ ಆತ ಆಕೆಯನ್ನು ತಾಯಿ ಎಂದು ಕರೆದಿದ್ದಾನೆ ಆದ್ದರಿಂದ ಆಕೆ ಆತನ ತಾಯಿಯೇ ಎಂದು ನಿರ್ಣಯಕ್ಕೆ ಬರುವುದು ತೀರಾ ಅವಾಸ್ತವಿಕವಾಗುತ್ತದೆ. ಅಂತೆಯೇ ಜಾತಿ, ಕುಲ ಎಂಬ ಪದಗಳು ವಚನಗಳಲ್ಲಿ ಇದ್ದ ಮಾತ್ರಕ್ಕೆ ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಜಾತಿ ವಿರೋಧ ಎಂದು ನಿರ್ಣಯಕ್ಕೆ ಬರುವುದು ಅವಸರದ ತೀರ್ಮಾನವಾಗುತ್ತದೆ. ಹಾಗೆ ನೋಡಿದರೆ  ಅಂಕಿ ಅಂಶಗಳ ಮೂಲಕ ವಚನಗಳನ್ನು ಅರ್ಥೈಸುವುದು ಮುಖ್ಯವಾದ ಗುರಿ ನಮ್ಮದಲ್ಲ ಹಾಗೂ ಅದರ ಆಧಾರದ ಮೇಲೆಯೇ ವಚನಗಳ ಕುರಿತ ವಾದವೂ ಬೆಳೆದಿಲ್ಲ, ಬದಲಿಗೆ ವಚನಗಳನ್ನು ಸಮಗ್ರವಾಗಿ ನೋಡಿದಾಗ ಹೇಗೆ ಕಾಣುತ್ತದೆ ಎಂಬುದನ್ನು ವಾದಿಸುವ ಸಂದರ್ಭದಲ್ಲಿ ನಗಣ್ಯವಾಗಿ ಅಥವಾ ಅಷ್ಟೇನೂ ಪ್ರಮುಖವಲ್ಲದ ವಿಷಯ ಅದಾಗಿದೆ.

೨. ಆ ಲೇಖನದಲ್ಲಿ ಮತ್ತೊಂದು ಉಪಮೆ ಕೊಡುತ್ತಾರೆ,  ಅದೆಂದರೆ “ಬಡವನೊಬ್ಬ ಸಂತೆಗೆ ಆಡು ಮಾರಲು ಹೊರಟಾಗ ಕಳ್ಳರು ಅವನಿಗೆ ಮಂಕುಬೂದಿ ಎರಚಿ ನಾಯಿ ಎಂದು ನಂಬಿಸಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ”. ಇದರ ಅರ್ಥ (ದೇವನೂರು ರವರ ಪ್ರಕಾರವೇ) ಬಾಲುರವರ ಸಂಶೋಧನೆ ಇಲ್ಲಿರುವ ಜನರಿಗೆ ಮಂಕುಬೂದಿ ಎರಚುತ್ತಿದೆ, ಬಾಲು ಬರಹಗಳನ್ನು ಓದಿದ ಮತ್ತು ಓದುತ್ತಿರುವ ಬುದ್ದಿಜೀವಿಗಳು, ಜನಸಾಮಾನ್ಯರು ಇವೆರಲ್ಲರಿಗೂ ಮಂಕು ಕವಿದಿದೆ. ಆದರೆ ವಾಸ್ತವ ಸ್ಥಿತಿ ತೀರಾ ಭಿನ್ನವಾಗಿ ಇದೆ. ವಚನಗಳನ್ನು ಕೆಲವು ಸಂಪ್ರದಾಯಗಳು ಮುಂದುವರೆಸಿಕೊಂಡು ಬಂದಿವೆ, ಅವರು ಮುಂದುವರೆಸಿಕೊಂಡು ಬಂದಿರುವ ವಚನ ಸಂಪ್ರದಾಯಗಳನ್ನು ಜಾತಿವಿರೋಧಿ ಚಳುವಳಿ ಎಂದು ಹೇಳಿ ಮಂಕುಬೂದಿ ಎರಚುತ್ತಿರುವವರು ಯಾರು? ಭಾರತಕ್ಕೆ ಬಂದ ಪಾಶ್ಚಾತ್ಯರು ಅದೊಂದು ಪ್ರಾಟಸ್ಟಂಟ್ ಚಳುವಳಿ ಎಂದು ಹೇಳಿದರು, ಏಕೆಂದರೆ ಹಾಗೆ ಹೇಳಲು ಅವರಿಗೆ ಅವರ ಸಾಂಸ್ಕೃತಿಕ ಹಿನ್ನೆಲೆ, ಮತ್ತು ಕ್ರಿಶ್ಚಿಯಾನಿಟಿಯಲ್ಲಾದ ಸುಧಾರಣಾ ಚಳಿವಳಿಗಳು ಚೌಕಟ್ಟೊಂದನ್ನು ರೂಪಿಸಿಕೊಟ್ಟಿತ್ತು. ಆದರೆ ಅದೇ ವಾದವನ್ನು ಪರೀಕ್ಷಿಸದೆ ಇರುವ ಕೆಲವು ವಚನಗಳನ್ನೇ ಪದೇ ಪದೇ ಹೇಳುವ ಮೂಲಕ ವಚನಗಳನ್ನು ಮುಂದುವರೆಸಿಕೊಂಡು ಬಂದ ಸಂಪ್ರದಾಯಗಳಿಗೆ ಮಂಕುಬೂದಿ ಎರಚಿದರವರು ಯಾರು ಎಂಬುದು ಮೇಲ್ನೋಟಕ್ಕೆ ವೇದ್ಯವಾಗುತ್ತದೆ. ಅಷ್ಟೆ ಅಲ್ಲದೆ ಅದೇ ವಿವರಣೆಯನ್ನು ಎಲ್ಲರೂ ಒಪ್ಪುವಂತೆ ಧಮಕಿ ಹಾಕುವುದು ದೇವನೂರು ಮಹಾದೇವ ರಂತಹ ಚಿಂತಕರಿಂದ ಅನಿರೀಕ್ಷಿತವಾದುದು. ಅಂತೆಯೇ ವಚನಗಳ ಕುರಿತು ಮತ್ತೊಂದು ರೀತಿಯಲ್ಲಿ ಅರ್ಥೈಸಲು ಪ್ರಯತ್ನಿಸಿರುವ ಎಲ್. ಬಸವರಾಜುರವರ ನಿರೂಪಣೆಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?

೩. ಜಾತಿ ಜಾತಿಗಳ ನಡುವೆ ಇರುವ ಮೇಲು ಕೀಳು ಇಲ್ಲವೆಂದು ಬಾಲುರವರು ವಾದಿಸುತ್ತಾರೆಂದು ದೇವನೂರು ರವರು ಹೇಳುತ್ತಾರೆ. ಜಾತಿವ್ಯವಸ್ಥೆ ಇಲ್ಲ ಎಂದಾದರೆ ತಾರತಮ್ಯವೇ ಇಲ್ಲ ಎಂದು ಹೇಳಿದಂತಾಗುವುದಾದರೂ ಹೇಗೆ? ಇಲ್ಲಿ ಜಾತಿ ಆಧಾರಿತ ಮತ್ತು ಜಾತಿಆಧಾರಿತವಲ್ಲದ ತಾರತಮ್ಯಗಳಿವೆ, ಅವುಗಳನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಜಾತಿಆಧಾರಿತ ತಾರತಮ್ಯಗಳು ಎಷ್ಟು ಪ್ರಮುಖವೋ ಜಾತಿರಹಿತ ಅಥವಾ ಜಾತಿಹೊರತಾದ ತಾರತಮ್ಯ ಅನ್ಯಾಯಗಳೂ ಅಷ್ಟೆ ಮುಖ್ಯ. ಇವನ್ನು ಹೋಗಲಾಡಿಲು ಇದೊಂದು ರಾಚನಿಕ ಅನ್ಯಾಯ ಎಂದು ಪರಿಗಣಿಸಿ ರಚನೆಯನ್ನು ಟೀಕಿಸಿದರೆ ಅನ್ಯಾಯ ಸಂಪೂರ್ಣವಾಗಿ(ಅಥವಾ ಅಪೂರ್ಣವಾಗಿ) ಹೋಗಲು ಸಾಧ್ಯವಿಲ್ಲ, ಇದಕ್ಕೆ ಎರಡು ಸಾಧ್ಯತೆಗಳಿವೆ, ೧. ಜಾತಿವ್ಯವಸ್ಥೆಯೇ ಸಾಮಾಜಿಕ ರಚನೆಯಾಗದಿರುವಾಗ ಜಾತಿವ್ಯವಸ್ಥೆಯೇ ಸಾಮಾಜಿಕ ರಚನೆ ಎಂದು ಟೀಕೆ ಮಾಡುವುದರಿಂದ ಇಲ್ಲದೆ ಇರುವ ವ್ಯವಸ್ಥೆಯನ್ನು ಹೋಗಲಾಡಿಸಲು ವ್ಯರ್ಥಪ್ರಯತ್ನ ಮಾಡಿದ ಹಾಗೆ ಆಗುತ್ತದೆ, ಇದಕ್ಕೆ ಕಳೆದ ೬೦ ವರ್ಷಗಳಲ್ಲಿ ಶೋಷಿತ ಸಮುದಾಯಗಳ ಮೇಲೆ ಕಡಿಮೆಯಾಗದ ದಬ್ಬಾಳಿಕೆಗಳೇ ನಿದರ್ಶನಗಳಾಗಿವೆ, (ಖೈರ್ಲಾಂಜಿ, ಕಂಬಾಲಪಲ್ಲಿ). ಜಾತಿಯ ತಾರತಮ್ಯಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗುತ್ತದೆ, ಅದು ಮೇಲ್ಜಾತಿಯವರಿರಲಿ ಅಥವಾ ಕೆಳಜಾತಿಯವರಿರಲಿ. ೨. ಈ ಮೊದಲೇ ಹೇಳಿದಂತೆ ಜಾತಿಯ ಹೊರತಾದ ಶೋಷಣೆ, ತಾರತಮ್ಯಗಳೂ ಭಾರತದಲ್ಲಿ ಇವೆ, ಕೇವಲ ಜಾತಿವ್ಯವಸ್ಥೆಯಿಂದ ಮಾತ್ರ ಅನ್ಯಾಯ ಆಗುತ್ತಿದೆ ಎಂದು ಹೇಳುವುದರಿಂದ ಜಾತಿಯ ಹೊರತಾಗಿ ನಡೆಯುತ್ತಿರುವ ಅನ್ಯಾಯಗಳನ್ನು ಗುರುತಿಸುವಲ್ಲಿ ಸೋಲುತ್ತೇವೆ. ಹಾಗೆಯೇ ಸಮಾಜದಲ್ಲಿರುವ ಶೋಷಣೆಗಳನ್ನು ಪರಿಹರಿಸಲು ಜಾತಿ ಚೌಕಟ್ಟೊಂದೇ ಸಾಕು ಎಂಬುದರ ಅರ್ಥ ಜಾತಿ ಹೊರತಾದ ಅನ್ಯಾಯಗಳು ಮುಖ್ಯವಲ್ಲ ಎಂಬುದೇ ಆಗಿರುತ್ತದೆ. ಆದ್ದರಿಂದ ಸಮಾಜದಲ್ಲಿರುವ ಎಲ್ಲಾ ರೀತಿಯ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸುವಲ್ಲಿ ಈ ಜಾತಿವ್ಯವಸ್ಥೆ ಸಿದ್ಧಾಂತ ಸೋಲುತ್ತದೆ. ಜೊತೆಗೆ ಮಾನವೀಯ ಸಂಬಂಧಗಳಲ್ಲಿ ಹುಟ್ಟುವ ಹಲವಾರು ಸಮಸ್ಯೆಗಳನ್ನು ಜಾತಿಸಮಸ್ಯೆಯನ್ನಾಗಿ ಬದಲಾಯಿಸುತ್ತದೆ. ಹಾಗಾಗಿ ಎಲ್ಲಾ ರೀತಿಯ ಅನ್ಯಾಯಗಳು ತೊಲಗಿ ಉತ್ತಮ ಸಮಾಜದ ಅಗತ್ಯವಿಲ್ಲ ಕೆಲವು ರೀತಿಯ ಶೋಷಣೆಗಳು ಮಾತ್ರ ತೊಲಗಲಿ ಎಂಬುದು ದೇವನೂರು ಮಹಾದೇವರವರ ಆಶಯ ಅಲ್ಲ ಎಂದು ನಂಬುತ್ತೇನೆ.

ಮೊತ್ತೊಂದು ವಿಷಯ, ವರ್ಣಬೇದ ಈ ಜಗತ್ತು ಕಂಡ ಘನ ಘೋರ ಅನ್ಯಾಯ, ಅದು ಪಾಶ್ಚಿಮಾತ್ಯ ರಾಷ್ಟದಲ್ಲಿ ಸಾಮಾಜಿಕ ರಚನೆಯ ಸಮಸ್ಯೆ ಎಂದು ಪರಿಗಣಿಸದೆ ಅದನ್ನು ಪರಿಹರಿಸುವತ್ತ ಹೆಚ್ಚಿನ ಗಮನ ಹರಿಸಿ ಯಶಸ್ವಿಯಾದರು.. ಆದರೆ ಇಲ್ಲಿ ಜಾತಿ ತಾರತಮ್ಯಗಳನ್ನು ರಚನಾತ್ಮಕ ಎಂದು ಪರಿಗಣಿಸಿ ದಿನೇ ದಿನೇ ಅದು ಕಡಿಮೆಯಾಗುವ ಸಾಧ್ಯತೆಯನ್ನು ದೂರವಿಡುವಂತೆ ಕಾಣುತ್ತಿದೆ. ಆದ್ದರಿಂದಲೆ ಇಂತಹ ಅನ್ಯಾಯಗಳನ್ನು ಪರಿಹರಿಸಲು ರಾಚನಿಕ ಎಂದು ಪರಿಗಣಿಸುವ ಬದಲು ಅದೊಂದು ಶೋಷಣೆ ಎಂದು ಪರಿಗಣಿಸಬೇಕಾಗಿದೆ. ಶೋಷಣೆ ಎಂದು ಪರಿಗಣಿಸಿದ್ದರೂ ಸಹ ಅದರ ಮೂಲ ಜಾತಿವ್ಯವಸ್ಥೆ ಎಂದು ತಪ್ಪಾಗಿ ಭಾವಿಸಲಾಗಿದೆ. ಇಲ್ಲಿ ನಮ್ಮ ಪ್ರಶ್ನೆ, ಶೋಷಣೆಯನ್ನು ಹೋಗಲಾಡಿಸುವುದು ಮುಖ್ಯವೋ ಅಥವಾ ಇಲ್ಲದ ಮೂಲವನ್ನು ಹುಡುಕಿಕೊಂಡು ಹೋಗುವುದು ಮುಖ್ಯವೋ? ಅದರ ಮೂಲ ಎಂದು ಗುರುತಿಸಿರುವ ಸಂಗತಿಯ ಬಗ್ಗೆ ಇನ್ನೂ ೧೦೦ ವರ್ಷ ಹಾಗೆಯೇ ಮುಂದುವರೆದು ಇರುವ ಶೋಷಣೆಯನ್ನು ಹೆಚ್ಚಿಸುವುದು ಮುಖ್ಯವೋ? ಇದನ್ನು ಬಾಲುರವರು ಸಂಶೋಧನೆಯ ಮೂಲಕ ಹೇಳಿದರೆ ಅದು ತೀರ ಮುಳ್ಳು ಚುಚ್ಚಿಸಿಕೊಂಡವರಂತೆ ಅಲವತ್ತುಕೊಳ್ಳುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಸಂಶೋಧಕರಿಗೂ ಇತರರಿಗೆ ಇರುವಂತೆ ಸಾಮಾಜಿಕ ಕಾಳಜಿ ಇದ್ದೇ ಇರುತ್ತದೆ. ಅನ್ಯಾಯ, ಶೋಷಣೆಗಳನ್ನು ಹೋಗಲಾಡಿಸಲು ಒಬ್ಬರು ಕಂಡುಕೊಂಡ ಪರಿಹಾರ ಮಾರ್ಗ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದೆನಿಸಿದರೆ ಮತ್ತೊಬ್ಬರು ಮತ್ತೊಂದು ಮಾರ್ಗವನ್ನು ಕಂಡುಕೊಳ್ಳುವಲ್ಲಿ ತಪ್ಪೇನಿದೆ? ಇಂತಹ ಮಾರ್ಗವನ್ನೇ ಕಂಡುಕೊಳ್ಳಬಾರದು ಎಂಬ ಕಟ್ಟಪ್ಪಣೆ ಮಹಾದೇವರಂತವರಿಂದ ಬರತಕ್ಕದ್ದಲ್ಲ. ಅದರ ಬದಲಿಗೆ ನಿಮ್ಮ ಪರಿಹಾರ ಮಾರ್ಗ ನಮ್ಮ ಮಾರ್ಗಕ್ಕಿಂತ ಹೇಗೆ ಹೆಚ್ಚು ಸಮಂಜಸ ಎಂದು ಚರ್ಚೆಮಾಡಬಹುದಿತ್ತು. ಇದುವರೆಗಿನ ಪರಿಹಾರ ಮಾರ್ಗವನ್ನು ನಾನು ಅರ್ಥೈಸಿಕೊಂಡಿರುವಂತೆ ಅದನ್ನು  ದೇವನೂರು ರವರ ಭಾಷೆಯಲ್ಲೇ ಹೇಳುವುದಾದರೆ ಇಲಿಯನ್ನು ಹಿಡಿದು ಗುಡ್ಡ ತೆಗೆಯುತ್ತಿದ್ದಾರೆ. ಇಲಿ ತೆಗೆಯುವ ಬದಲು ಗುಡ್ಡವನ್ನು ತೆಗೆಯುವ ಮಹಾತ್ಕಾರ್ಯಕ್ಕೆ ಕೈಹಾಕಿದ್ದಾರೆ. (ಇಲ್ಲಿ ಇಲಿ ಎಂದರೆ ತಾರತಮ್ಯ ಹಾಗೂ ಗುಡ್ಡ ಎಂಬುದು ಇಡೀ ಭಾರತೀಯ ಸಂಸ್ಕೃತಿ)

೪. ಕಣ್ಣೆದುರು ಕಾಣುತ್ತಿರುವ ಸತ್ಯವನ್ನು ನಿಜವಾಗಿಯೂ ಯಾರು ಮರೆಮಾಚುತ್ತಿದ್ದಾರೆ? ದೇವನೂರುರವರಾ ಅಥವಾ ಬಾಲುರವರಾ? ಒಂದೊಮ್ಮೆ ದೇವನೂರು ರವರು ಹೇಳುವ ಹಾಗೆ ನಮ್ಮ ಸಮಾಜ,  ಸಂಸ್ಕೃತಿ ಕೇವಲ ತಾರತಮ್ಯ ಮಾಡಿಕೊಂಡು ಬಂದಿರುವುದೇ ಹೌದಾದರೆ ಈ ಮುಂದಿನ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ: ೧. ಇಲ್ಲಿ ಯಾರ ನಡುವೆಯೂ ಮಾನವೀಯ ಸಂಬಂಧವೇ ಇದ್ದಿಲ್ಲ  ಎಂದಾದರೆ ಒಂದು ಸಮಾಜವಾಗಿ ಅಥವಾ ಹಲವು ಸಮಾಜಗಳಾಗಿ ಇಲ್ಲಿಯವರೆಗೂ ಬದುಕಿ ಬಂದಿರಲು ಹೇಗೆ ಸಾಧ್ಯ? ಹಾಗೂ ಕೇವಲ ಅನ್ಯಾಯ ತಾರತಮ್ಯ ಮಾಡಿಕೊಂಡೇ ಶತಮಾನಗಳ ಕಾಲ ಒಂದು ಸಮಾಜ ನಡೆದು ಬರುತ್ತದೆ ಎಂದರೆ ಅದಕ್ಕಿಂತ ಪರಮಾಶ್ಚರ್ಯವಾದ ವಿಷಯ ಮತ್ತೊಂದಿಲ್ಲ, ಒಂದೊಮ್ಮೆ ಹಾಗೆ ಮಾಡಿಕೊಂಡು ಬಂದರೆ ಯಾವ ಸಮಾಜವೂ ಇಲ್ಲಿಯವರೆಗೆ ಬದುಕಿರಲು ಸಾಧ್ಯವೇ ಇಲ್ಲ.

೫. ಜಾತಿವ್ಯವಸ್ಥೆ ಇಲ್ಲ ಎಂದರೆ ಜಾತಿಗಳನ್ನು ನಾಶಮಾಡಿ ಉಪಜಾತಿಗಳಿಂದ ಕೂಡಿದ ಭಾರತವನ್ನು ಕಟ್ಟಬೇಕೆಂದು ಬಾಲು ತಂಡ ವಾದಿಸುತ್ತದೆ ಎಂದು ದೇವನೂರು ರವರು ಆರೋಪಿಸುತ್ತಾರೆ. ಜಾತಿ ಮತ್ತು ಉಪಜಾತಿಯ ಸಂಕೀರ್ಣ ಸಂಬಂಧದ ಕುರಿತು ಜಾತಿವ್ಯವಸ್ಥೆಯ ಸಿದ್ಧಾಂತ ತನ್ನ ವಾದವನ್ನು ಮಂಡಿಸುತ್ತದೆ. ಅಂದರೆ ಜಾತಿವ್ಯವಸ್ಥೆಯ ಅಸ್ತಿತ್ವಕ್ಕೆ ಜಾತಿ ಮತ್ತು ಉಪಜಾತಿ ಗಳ ನಡುವಿನ ಸಂಬಂಧ ಮುಖ್ಯವಾದವು ಎಂಬಂತೆ ಆ ಸಿದ್ಧಾಂತಗಳು ತಿಳಿಸುತ್ತವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜಾತಿವ್ಯವಸ್ಥೆ ಇರದಿದ್ದರೆ ಜಾತಿ ಉಪಜಾತಿಗಳ ಸಂಬಂಧದ ಪ್ರಶ್ನೆಯೇ ಏಳುವುದಿಲ್ಲ. ಹಾಗೆ ನೋಡಿದರೆ ಉಪಜಾತಿಗಳು ಎಂಬ ಪ್ರಭೇದದ ಅಸ್ತಿತ್ವವೇ ಇಲ್ಲವಾಗಿಬಿಡುತ್ತದೆ, ಹಾಗೆಂದ ಮೇಲೆ ಬಾಲು ರವರು ಅವುಗಳ ಅಸ್ತಿತ್ವವನ್ನೇ ಅನುಮಾನದಲ್ಲಿಟ್ಟಿರುವಾಗ ಉಪಜಾತಿಗಳಿಂದ ಕೂಡಿದ ಭಾರತವನ್ನು ಕಟ್ಟಲು ಹೊರಟಿದ್ದಾರೆ ಎಂಬ ವಾದವನ್ನು ಮಂಡಿಸಲು ಹೇಗೆ ಸಾಧ್ಯ? ಜಾತಿವ್ಯವಸ್ಥೆ ಇಲ್ಲ ಜಾತಿ ಇದೆ ಎಂದು ಹೇಳುತ್ತಿರುವುದನ್ನು ದೇವನೂರು ರವರು ಸ್ವತಃ ನಮೂದಿಸುತ್ತಾರೆ, ಆದರೆ ಜಾತಿ ಇದೆ ಎಂದ ಮಾತ್ರಕ್ಕೆ ಉಪಜಾತಿಗಳೂ ಇವೆ ಎಂಬ ಅರ್ಥವನ್ನು ಅದು ಹೊರಡಿಸುವುದಿಲ್ಲ. ಜಾತಿವ್ಯವಸ್ಥೆಯ ಸಿದ್ಧಾಂತಕ್ಕೆ ಉಪಜಾತಿಗಳ ವರ್ಗೀಕರಣ ಮುಖ್ಯವಾಗುತ್ತದೆಯೇ ಹೊರತು ಆ ಸಿದ್ಧಾಂತವನ್ನು ವಿರೋಧಿಸಲು ಅಲ್ಲ, ಹಾಗೆ ನೋಡಿದರೆ ಆ ಸಿದ್ಧಾಂತವನ್ನು ವಿರೋಧಿಸುವುದು ಉಪಜಾತಿ ವರ್ಗೀಕರಣವನ್ನೂ ಸಹ ವಿರೋಧಿಸಿದಂತೆಯೇ ಆಗುತ್ತದೆ. ಮತ್ತೊಂದು ವಿಷಯವೆಂದರೆ ಬಾಲುರವರು ಜಾತಿ ನಾಶವಾಗಬೇಕು ಅಥವಾ ಇರಬೇಕು ಎಂಬಂತಹ ನಿರ್ಣಾಯಕ ವಾದವನ್ನು ನನಗೆ ತಿಳಿದಿರುವ ಮಟ್ಟಿಗೆ ಎಲ್ಲಿಯೂ ಮಂಡಿಸಿಲ್ಲ, ಹಾಗೆಯೇ ಉಪಜಾತಿಗಳು ಇರಬೇಕು ಎಂದೂ ಸಹ ಹೇಳಿಲ್ಲ. ಆದ್ದರಿಂದ ಬಾಲುರವರನ್ನು ಟೀಕಿಸುವವರು ಅವರ ಬರಹಗಳನ್ನು ಸರಿಯಾಗಿ ಓದದೆ, ತಿರುಚಿ ಮಾತನಾಡುತ್ತಿದ್ದಾರೆ ಈ ಕಾರಣಕ್ಕೆ ಬಾಲುರವರ ಕುರಿತು ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆ ಎಂಬ ಅನುಮಾನ ಬರುತ್ತದೆ. ಇನ್ನು ಆಚರಣೆಗಳು ಮತ್ತು ಉಪಜಾತಿಗಳ ನಡುವೆ ಏನು ಸಂಬಂಧ ಎಂದೂ ಸಹ ಮಹಾದೇವ ರವರು ಎಲ್ಲಿಯೂ ವಿವರಿಸಿಲ್ಲ. ನನ್ನ ಪ್ರಕಾರ ಅವೆರಡಕ್ಕೂ ಯಾವ ಸಂಬಂಧವೂ ಇಲ್ಲ, ಅಂದರೆ ಒಂದು ಆಚರಣೆಯನ್ನು ಮಾಡಿಕೊಂಡು ಹೋಗುವುದಕ್ಕೂ ಒಂದು ಜಾತಿ ಅಸ್ತಿತ್ವಕ್ಕೆ ಬರುವುದಕ್ಕೂ ಏನು ಸಂಬಂಧವಿದೆ ಎಂದು ಇದುವರೆಗೂ ಯಾರೂ ವಿವರಿಸಿಲ್ಲ.

೬. ಭಾರತದಲ್ಲಿ ಧರ್ಮಗಳು ಇರಬಾರದು ಎನ್ನುವುದು ಬಾಲು ರವರ ಹುನ್ನಾರ ಎಂದು ಮಹಾದೇವರ ರವರ ಮತ್ತೊಂದು ಆರೋಪ. ಆದರೆ ಬಾಲು ತಮ್ಮ ಹೀದನ್ ಇನ್ ಹಿಸ್ .. ಪುಸ್ತಕದಲ್ಲಿ ಭಾರತದಲ್ಲಿ ಧರ್ಮವಿರಬಾರದು ಎಂದು ವಾದಿಸಿಲ್ಲ, ಬದಲಿಗೆ ರಿಲಿಜನ್ ಎಂದು ಕರೆಯುವಂತಹ ವಿದ್ಯಮಾನ ಭಾರತದಲ್ಲಿ ಇಲ್ಲ, ಇಲ್ಲಿರುವುದು ಸಂಪ್ರದಾಯ ಎನ್ನುತ್ತಾರೆ. ಹಾಗೆಯೇ ರಿಲಿಜನ್ ನ್ನು ಧರ್ಮ ಎಂದು ತಪ್ಪಾಗಿ ಅನುವಾದ ಮಾಡಿಕೊಂಡು ಬಳಸುತ್ತಿದ್ದೇವೆ. ಹಾಗೂ ನಮ್ಮ ಧರ್ಮಕ್ಕೆ ಬೇರೆ ಬೇರೆಯದೇ ಅರ್ಥಗಳಿವೆ, ಅವುಗಳನ್ನು ರಿಲಿಜನ್ ಅಂದು ಅರ್ಥೈಸಲು ಸಾಧ್ಯವಿಲ್ಲ. ಹಾಗಾಗಿ ರಿಲಿಜನ್ ಮತ್ತು ಧರ್ಮ ಇವೆರಡೂ ಒಂದೇ ಅಲ್ಲ. ಒಂದೊಮ್ಮೆ ಬಾಲು ಧರ್ಮದ ಐಕ್ಯತೆಯನ್ನು ಒಡೆಯುತ್ತಿದ್ದಾರೆ, ಧರ್ಮ ಇರಬಾರದು ಎಂದು ಹೇಳುತ್ತಿದ್ದಾರೆ ಎಂದು ದೇವನೂರುರವರು ಹೇಳುತ್ತಿರುವುದನ್ನು ಈ ಮುಂದಿನಂತೆ ಅರ್ಥಮಾಡಿಕೊಳ್ಳಬಹುದೆ: ಭಾರತದಲ್ಲಿ ರಿಲಿಜಿಯನ್ ಇರಬೇಕು, ರಿಲಿಜಿಯನ್ ಐಕ್ಯತೆ ಇರಬೇಕು ‌ಎಂದು ಮಹಾದೇವರವರು ವಾದಿಸುತ್ತಿರಬಹುದೆ? ಒಂದೊಮ್ಮೆ ಹೀಗೆ ವಾದಿಸುತ್ತಿದ್ದಾರೆಂದರೆ ಹಿಂದುತ್ವವನ್ನು ಅವರು ವಿರೋಧಿಸಲು ಹೇಗೆ ಸಾಧ್ಯ? ಹಿಂದೂಯಿಸಂ ಎಂಬ ರಿಲಿಜನ್ ಇಲ್ಲವೆಂದು ಬಾಲುರವರು ಹೇಳಿದರೆ ಅವರು ಬಲಪಂಥೀಯ ಎಂಬ ಆರೋಪ ಬರುತ್ತದೆ, ಆದರೆ ದೇವನೂರುರವರು ಧಾರ್ಮಿಕ ಐಕ್ಯತೆ ಬೇಕು ಎಂದು ಮಾತನಾಡುತ್ತಾರೆ, ಆದರೂ ಅವರು ಬಲಪಂಥೀಯರಾಗುವುದಿಲ್ಲ, ಈ ವಿರೋಧಾಬಾಸವೇ ನನಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ಬಾಲು ರವರು “ರಿಲಿಜನ್” ಬಗ್ಗೆ ಏನು ಹೇಳುತ್ತಿದ್ದಾರೆಂದು ಅಪಾರ್ಥ ಮಾಡಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಘನವ್ಯಕ್ತಿತ್ವ ಹೊಂದಿರುವಂತಹ ದೇವನೂರುರವರಿಗೆ ತಕ್ಕುದಾದುದಲ್ಲ.

೭. ಲೋಕದ ಡೊಂಕ ನೀವೇಕೆ ತಿದ್ದಿವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವಾ…ಈ ವಚನವನ್ನು ದೇವನೂರು ರವರು ಸರಿಯಾಗಿ ಅರ್ಥೈಸುತ್ತಿದ್ದೇನೆಂದು ಈ ಮುಂದಿನಂತೆ ಹೇಳುತ್ತಾರೆ: “ಲೋಕದ ಡೊಂಕ ನೀವೇಕೆ ತಿದ್ದುವಿರಿ ಎನ್ನುವುದರಲ್ಲಿ ಲೋಕದ ಡೊಂಕು ನಿಮ್ಮಲ್ಲೂ ಇದೆ ಅದನ್ನು ತಿದ್ದಿಕೊಳ್ಳಿ, ಆಗ ಲೋಕದ ಡೊಂಕು ಅದಾಗಿಯೇ ಅಳಿಸಿಹೋಗುತ್ತದೆ.. ಆದರೆ ಲೋಕದ ಡೊಂಕು ನಿಮ್ಮಲ್ಲೂ ಇದೆ ಮತ್ತು ನಿಮ್ಮಲ್ಲೇ ಇದೆ ಎಂದು ಹೇಳುವ ವಿಧಾನದಲ್ಲಿ ವ್ಯತ್ಯಾಸವಿದೆ. ನಿಮ್ಮಲ್ಲೂ ಆ ಡೊಂಕು ಇದೆ ಎಂಬುದರ ಅರ್ಥ ಲೋಕದಲ್ಲಿರುವ ಡೊಂಕು ಅಥವಾ ಅದರ ಪ್ರಭಾವ ನಿಮ್ಮಲ್ಲೂ ಬೇರೂರಿದೆ ಎಂದಾಗುತ್ತದೆ, ಆದರೆ ನಿಮ್ಮಲ್ಲೇ ಇದೆ ಎಂದರೆ, ಲೋಕದಲ್ಲಿ ಏನಿದಿಯೋ ತಿಳಿಯದು ಆದರೆ ಅಲ್ಲಿ ಡೊಂಕಿದೆ ಎಂಬ ತೀರ್ಮಾನ ನಿಮ್ಮ ತಲೆಯಲ್ಲಿ ಇದೆ ಎಂದಾಗುತ್ತದೆ. ಹಾಗಾದರೆ ವಚನಕಾರರು ಇಲ್ಲಿ ಯಾವುದನ್ನು ಹೇಳುತ್ತಿದ್ದಾರೆ. ಖಂಡಿತವಾಗಿಯೂ ಬಸವಣ್ಣನವರು ಈ ವಚನದಲ್ಲಿ ಎರಡನೆಯ ಅರ್ಥವನ್ನು ಹೇಳುತ್ತಿದ್ದಾರೆ. ಅದನ್ನು ಮತ್ತೂ ಸ್ಪಷ್ಟ ಪಡಿಸುವಂತೆ ಅದೇ ವಚನದ ಕೊನೆಯ ಸಾಲುಗಳು ನೆರಮನೆಯ ದುಖಕ್ಕೆ ಅಳಬೇಡಿ ಎಂದೂ ಸಹ ಹೇಳುತ್ತಾರೆ, ಅದರ ಅರ್ಥವೇನು? ಈ ಲೋಕದ ಜಂಜಾಟಕ್ಕೆ ಕಿವಿಗೊಡಬೇಡಿ, ಕೂಡಲ ಸಂಗಮನನ್ನು ಆರಾಧಿಸಿ ಎಂಬ ಅರ್ಥವನ್ನು ನೀಡುತ್ತಿಲ್ಲವೆ? ನಿಮ್ಮನ್ನು ನೀವು ಅರಿತುಕೊಳ್ಳುವುದು ಬಿಟ್ಟು ಜಗತ್ತಿನ ವ್ಯವಹಾರಕ್ಕೆ ಮಾರುಹೋದರೆ ಶರಣರಾಗಿರುವವರಿಗೆ ಕೂಡಲ ಸಂಗಮ ಮೆಚ್ಚುವುದಿಲ್ಲ ಎಂಬ ಅರ್ಥವನ್ನು ಅವರು ಹೇಳುತ್ತಿಲ್ಲವೆ? ಹೆಗಡೆಯವರ ಲೇಖನವೂ ಸಹ ಈ ವಚನವನ್ನು ಹೀಗೆಯೇ ಅರ್ಥಮಾಡಿಕೊಂಡಿರುವುದು. ಲೋಕದಲ್ಲಿ ಡೊಂಕು ಇದೆ ಎಂದು ಭಾವಿಸಿ ನರಳಬೇಡಿ, ಆ ಡೊಂಕು ಇರುವುದು ನಿಮ್ಮಲ್ಲಿ ಅದನ್ನು ಸರಿಪಡಿಸಿಕೊಳ್ಳಿ ಎಂದು, ಹಾಗಾದರೆ ಲೋಕದ ಡೊಂಕು ಅದಾಗಿಯೇ ಸರಿಯಾಗುತ್ತದೆ ಎಂದು ವಚನಕಾರರು ಎಲ್ಲಿ ಹೇಳಿದ್ದಾರೆ? ಅದನ್ನು ಸುಮ್ಮನೆ ಕಲ್ಪಿಸಿಕೊಂಡು ಹೇಳುವ ಅಗತ್ಯವಾದರೂ ಏನಿದೆ? ವಚನಗಳಲ್ಲಿ ಏನನ್ನು ಹೇಳಲಾಗಿದೆಯೋ ಅದನ್ನು ಅರ್ಥೈಸುವುದು ಬಿಟ್ಟು ನಾವು ನಂಬಿಕೊಂಡಿರುವ ಐಡಿಯಾಲಜಿಯನ್ನು ಏಕೆ ವಚನಗಳ ಮೇಲೆ ಹೇರಬೇಕು?

ಹಾಗೆಯೇ ಮತ್ತೊಂದು ವಚನವನ್ನೂ ಉಲ್ಲೇಖಿಸಬಹುದು, ಪರಚಿಂತೆ ಎಮಗೇಕಯ್ಯ?ನಮ್ಮ ಚಿಂತೆ ನಮಗೆ ಸಾಲದೆ? ಕೂಡಲ ಸಂಗಯ್ಯ ಒಲಿದನೋ ಒಲಿಯನೋ ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು. ಇದನ್ನು ಹೇಗೆ ಅರ್ಥೈಸುತ್ತೀರಿ?

ಇಲ್ಲಿ ದೇವನೂರು ರವರು ಪರ ಚಿಂತೆ ಎಮಗೇಕಯ್ಯ..ವಚನವನ್ನು ಹೇಗೆ ಅರ್ಥೈಸುತ್ತಾರೆಂಬುದು ಕುತೂಹಲಕಾರಿಯಾದ ಸಂಗತಿಯಾಗಿದೆ.

೮. Performative knowledge ಅಥವಾ ಕ್ರಿಯಾಜ್ಞಾನವನ್ನು ಮಹಾದೇವ ಎಷ್ಟು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬಾಲು ಹೇಳುವುದು ಈ ಮುಂದಿನಂತೆ: ಭಾರತದಲ್ಲಿರುವ ಸಮುದಾಯಗಳು ಬದುಕಲು ಅಗತ್ಯವಿರುವ ಜ್ಞಾನವನ್ನು ಕ್ರಿಯೆಯಲ್ಲಿ ತೊಡಗಿಸಿಕೊಂಡೇ ಕಲಿಯುತ್ತವೆ, ಕ್ರಿಯೆಯನ್ನು ಮಾಡುತ್ತಾ ಮಾಡುತ್ತಾ ಜ್ಞಾನವನ್ನು ಕಟ್ಟಿಕೊಳ್ಳುವ ವಿಧಾನ ಇದಾಗಿದೆ. ಇದು ಭಾರತದಲ್ಲಿ ಪ್ರಧಾನವಾಗಿದೆ, ಹಾಗೆಯೇ ಮತ್ತೊಂದೆಡೆ ಸೈದ್ಧಾಂತಿಕ ಜ್ಞಾನವೂ ಇದೆ ಅದು ಪಾಶ್ಚಿಮಾತ್ಯರಲ್ಲಿ ಪ್ರಧಾನವಾಗಿದ್ದು ಅವರಲ್ಲಿ ಕ್ರಿಯಾಜ್ಞಾನ ಅಧೀನ ವಾಗಿರುತ್ತದೆ ಎಂಬುದು ಬಾಲುರವರ ವಾದ. ಇಷ್ಟು ಸರಳವಾಗಿ ಇಡಲು ಸಾಧ್ಯವಿಲ್ಲ ಆದರೂ ಪ್ರಯತ್ನಿಸಿದ್ದೇನೆ.. ಆದ್ದರಿಂದ, ಕ್ರಿಯಾಜ್ಞಾನವೆಂದರೆ ಸತಿಪದ್ದತಿ, ನರಬಲಿ ಎಂಬಂತಹ ಆಚರಣೆಗಳಿಗೆ ಇಳಿಸಿ ಹೊಸ ರೀತಿಯ ಅರ್ಥವನ್ನು ದೇವನೂರು ರವರು ನೀಡುತ್ತಿದ್ದಾರೆ. ಹಾಗಾದರೆ ಇಡೀ ಭಾರತದಲ್ಲಿ ಸತಿ, ಮತ್ತು ಅಂತಹ ಅಮಾನುಷ ಆಚರಣೆಗಳು ಮಾತ್ರ ಇದ್ದವೆ? ಅದಕ್ಕಿಂತ ಹೊರತಾದ ಯಾವ ಆಚರಣೆಗಳೂ ಇರಲಿಲ್ಲವೆ? ಪ್ರತಿಯೊಂದು ಸಮಾಜದಲ್ಲಿಯೂ ಆದರ್ಶಯುತವಾದ ಮೌಲ್ಯಗಳು ಹಾಗೂ ಅದಕ್ಕೆ ವಿರುದ್ಧವಾದ ಚಟುವಟಿಕೆಗಳು ಇದ್ದೇ ಇರುತ್ತವೆ. ಅಂತೆಯೇ ಭಾರತದಲ್ಲಿಯೂ ಅಂತಹ ಅಮಾನುಷ ಆಚರಣೆಗಳು ಇದ್ದವು ತದನಂತರ ಅವುಗಳ ತೊಂದರೆಯನ್ನು ಮನಗಂಡು ಅವುಗಳನ್ನು ಬಿಟ್ಟರು. ಹಾಗೆಂದು ಆ ಎರಡು ಆಚರಣೆಗಳು ಮಾಯವಾದ ತಕ್ಷಣ ಎಲ್ಲವೂ ಅತ್ಯತ್ತಮವಾದ ಆಚರಣೆಗಳೇ ಇಲ್ಲಿವೆ ಎಂಬುದಾಗಿಯೂ ಹೇಳಲು ಸಾಧ್ಯವಿಲ್ಲ, ಅಲ್ಲಲ್ಲಿ ಇರುವ ಹುಳುಕುಗಳನ್ನು ಸರಿಮಾಡಿಕೊಂಡು ಸಮಾಜ ಮುಂದುವರೆದುಕೊಂಡು ಹೋಗುತ್ತದೆ. ಬಾಲುರವರ ಕ್ರಿಯಾಜ್ಞಾನದ ಸಿದ್ಧಾಂತವನ್ನು ಹೀಗೆ ಅಪಭ್ರಂಶಗೊಳಿಸಿ ಅರ್ಥೈಸಿಕೊಳ್ಳಲು ಏಕೆ ಮುಂದಾಗುತ್ತಿದ್ದಾರೆ ಎಂಬುದು ನನ್ನಂತ ಕಿರಿಯನಿಗೆ ಅರ್ಥವಾಗದ ಸಂಗತಿಯಾಗಿದೆ. ಜೊತೆಗೆ ನನ್ನ ಓದಿನ ಪ್ರಕಾರ,  ಕ್ರಿಯಾಜ್ಞಾನಕ್ಕೂ ಮೇಲಿನ ಆಚರಣೆಗಳಿಗೂ ಸಂಬಂಧವೇ ಇಲ್ಲದಿರುವ ಸಾಧ್ಯತೆಯ ಕುರಿತು ದೇವನೂರಿಗೆ ಒಂದಿಷ್ಟು ಮಾಹಿತಿ ಇರಲಿಕ್ಕಿಲ್ಲ. ಏಕೆಂದರೆ ಬಾಲುರವರು ಅದರ ಕುರಿತು ಬರೆದಿರುವ ಬರಹವನ್ನು ಓದಿರಲಿಕ್ಕಿಲ್ಲ.

ದೇವನೂರು ಮಹಾದೇವರವರಿಂದ ಒಂದು ವೈಚಾರಿಕ ಮತ್ತು ಚರ್ಚಾಸ್ಪದವಾದ ಲೇಖನವನ್ನು ನಿರೀಕ್ಷಿಸಿ ಅವರ ಬರೆಹ ವನ್ನು ಓದಿದೆ. ಆದರೆ ನಿಜವಾಗಿಯೂ ನಿರಾಶೆಯಾಯಿತು. ’ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ದೇವನೂರು ರವರು ಬರೆದಿರುವ ಕೆಲವು ಉತ್ತಮ ಒಳನೋಟಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡೇ ಅವರ ಪ್ರತಿಕ್ರಿಯೆಗಳನ್ನು ಓದಿದ್ದಕ್ಕೆ ಬಹುಶಃ ನನಗೆ ನಿರಾಶೆಯಾಗಿರಬಹುದು. ಹಾಗೂ ಚರ್ಚೆ ಮಾಡುವ ಅಂಕಣದಲ್ಲಿ ಆಜ್ಞೆ ಹೊರಡಿಸುವಂತಹ ಲೇಖನವನ್ನು ಅವರಿಂದ ನಾನು ನಿರೀಕ್ಷಿಸಿರಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂಬುದು ಲೇಖನ ಓದಿದಾಗಿನಿಂದ ನನ್ನ ತಲೆ ಕೊರೆಯುತ್ತಿದೆ…

3 ಟಿಪ್ಪಣಿಗಳು Post a comment
 1. Umesh
  ಮೇ 3 2013

  I read Devanur’s article in Prajavani. I have great regard for Devanur however I think he has responded at an emotional level, and not from facts to arrive at a correct understanding of the true purport of vachanas. Devanur has said, without substantiating, Balu and others of acting on behalf of corporates or imperialists. He seems to have mis-understood history vis-a-vis hinduism and buddhism. There are so many reasons why Buddhism went out of India,one of them being its pessimistic attitude towards life(Nairashyavaada). He thinks Buddha dharma is the answer to solving caste problems in India. However look at recent events in Burma, where there is violent clashes going on between Buddhists and Rohangya muslims.If Buddhism is so non-violent why then there are clashes?
  What is required here is an impartial look at the issue at hand, not from an emotional outburst.

  ಉತ್ತರ
 2. ಮೇ 3 2013

  Good Writing Rakesh…keep it up

  ಉತ್ತರ
 3. ವಿಜಯ್ ಪೈ
  ಮೇ 6 2013

  ದೇವನೂರ ಮಹಾದೇವರ ಪ್ರತಿಕ್ರಿಯೆ ಓದಿದಾಗ, ಸಾಕಷ್ಟು ಓದುಗರಿಗೆ (ಅವರ ಮೇಲೆ ಗೌರವವಿದ್ದೂ) ದೇವನೂರರು ಪಳೆಯುಳಿಕೆ ಆಗುತ್ತಿದ್ದಾರೆ ಅನಿಸಿದರೆ ಆಶ್ಚರ್ಯವೇನಿಲ್ಲ. ಅವರ ಪ್ರತಿಕ್ರಿಯೆಯ ತುಂಬೆಲ್ಲ ಅದೇ ವೈದಿಕಶಾಹಿ, ಮನು, ಹುನ್ನಾರ ಮುಂತಾದ ಅವೇ ಹಳಹಳಿಕೆಗಳು. ಬದಲಾವಣೆಯೇ ಇಲ್ಲ.

  ಹೊಸದಾಗಿ ಕಂಡುಬಂದ ವಿಷಯವೆಂದರೆ ಕಾರ್ಪೊರೇಟ್ ಹುನ್ನಾರ. ಬಾಲೂಬಳಗದ ಸಂಶೋಧನೆಯ ಹಿಂದೆ ಕಾರ್ಪೊರೇಟ್ ಹುನ್ನಾರವಿರಬಹುದೆಂಬ ದೇವನೂರರ ಸಂಶೋಧನೆ ಮಜಭೂತಾದದ್ದು. ಜಾತಿ, ಜಾತಿ ತಾರತಮ್ಯ ಇರಲಿಲ್ಲವೆಂದು ಭ್ರಮಿಸುವಂತೆ ಮಾಡಿ, ಮಿಸಲಾತಿಯನ್ನು ಕಸಿದುಕೊಳ್ಳುವ ಹುನ್ನಾರವಿದಂತೆ!, ‘ತಿಕದ ಮೇಲೆ ಒದ್ದರೆ ಹಲ್ಲು ಉದುರುತ್ತೆ’ ಎಂಬಷ್ಟೇ ಸಶಕ್ತವಾದ ಸಂಶೋಧನೆಯಿದು.

  ಬಾಲೂಬಳಗದ ಸಂಶೋಧನೆ ಕೇವಲ ಅಂಕಿ-ಅಂಶ ಆಧಾರಿಸಿದ್ದು, ಬಾಲಿಶವಾದದ್ದು ಎನ್ನುವುದಕ್ಕೆ ದೇವನೂರರು ಬಂಜೆ ತಾಯಿಯ ಭರ್ಜರಿ ಉದಾಹರಣೆ ಕೊಡುತ್ತಾರೆ. ಬಾಲೂ ಬಳಗದ ಸಂಶೋಧನೆ ತಾಯಿ ಬಂಜೆ ಎಂದು ಸಾಧಿಸುವ ನಿಟ್ಟಿನಲ್ಲಿಲ್ಲ, ಆದರೆ ‘ಆ’ ತಾಯಿ ‘ಈ’ ಮಗನನ್ನು ಹೆರಬೇಕೆಂಬ ಏಕೈಕ ಉದ್ದೇಶದಿಂದ ಜನ್ಮ ತಳೆದವಳಲ್ಲ ಎಂದು ಸಾಧಿಸುವ ನಿಟ್ಟಿನಲ್ಲಿದೆ ಎಂಬುದು ದೇವನೂರರ ಲಕ್ಷಕ್ಕೆ ಬರುವುದಿಲ್ಲ..ಬಂದರೂ ತಮ್ಮ ತಳಪಾಯ ಗಟ್ಟಿ ಮಾಡಿಕೊಳ್ಳುವ ಭರದಲ್ಲಿ ಈ ‘ಕರುಳು ಕೊಯ್ಯು’ವ ಉದಾಹರಣೆ ನಮ್ಮ ಮುಂದಿಡುತ್ತಾರೆ.

  ‘ಕಣ್ಣೆದುರು ಕಾಣುವುದನ್ನು ಮರೆಮಾಚಿ ತಮಗೆ ಬೇಕಾದ್ದನ್ನು ವಿಜೃಂಭಿಸಿ ವಾದಿಸುವ ವಕೀಲರಂತಾಗಿಬಿಟ್ಟಿದ್ದಾರೆ.’ ಎನ್ನುವ ದೇವನೂರರು ತಾವು ವರ್ತಮಾನಕ್ಕೆ ಕಣ್ಣು ತೆರೆದಿದ್ದಾರೆಯೆ? ತೆರೆದಿದ್ದರೆ ಕೆನೆ ಪದರ ಮೀಸಲಾತಿಯ ವಿಷಯದಲ್ಲಿ ಗಮನಾರ್ಹ ಹೋರಾಟ ಮಾಡಿದ್ದಾರೆಯೆ? ಅರ್ಹ ದಲಿತನಿಗೆ ಸಿಗಬೇಕಾದದ್ದನ್ನು ಬಲಿತ ದಲಿತ ನುಂಗುತ್ತಿರುವುದನ್ನು ನೋಡಿ ಪ್ರತಿಭಟಿಸಿದ್ದಾರೆಯೆ? ಲೋಕದ ಡೊಂಕನ್ನು ತಿದ್ದುವ ಮೊದಲು ತಮ್ಮವರ ಡೊಂಕನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆಯೆ?

  ‘ದುಡಿಯುವ ವರ್ಗ ಒಂದಾಗದಂತೆ ಮಾಡುವ ಈ ಸಂಶೋಧನೆಯು ಯೂರೋ ಲಿಂಕ್ ಸಂಚಿನ ಫಲವೇ? ಗುಮಾನಿ ಹುಟ್ಟುತ್ತಿದೆ. ಇವರ ಚಲನವಲನಗಳ ಮೇಲೆ ಕಣ್ಣಿಡಬೇಕಾಗಿದೆ.’ ಇದು ದೇವನೂರರ ಮಾತು. ಸ್ವಾಮಿ..ಇನ್ನು ಕೆಲವೇ ವರ್ಷಗಳಲ್ಲಿ ದುಡಿಯುವ ವರ್ಗ ಯಾವುದು ಎಂದು ಕಂಡು ಹಿಡಿಯಲು ಹೊಸ ಸಂಶೋಧನೆ ಕೈಗೊಳ್ಳ ಬೇಕಾಗುತ್ತದೆ.

  ಭಾರತದಲ್ಲಿ ಸಮಾನತೆ ಎಂಬುದು ಯಾವಾಗ ಬರುತ್ತದೆಯೆಂಬುದನ್ನು ದೇವನೂರರು ದಯವಿಟ್ಟು ತಿಳಿಸುವುದು ಒಳ್ಳೆಯದು..ಅದು ಇಲ್ಲಿಯ ಕಟ್ಟ ಕಡೆಯ ದಲಿತ ರಾಷ್ಟ್ರದ ಪ್ರಧಾನಿ/ರಾಷ್ಟ್ರಪತಿಯಾದ ಮೇಲೊ ಅಥವಾ ಪೇಜಾವರರ ಪೀಠದಲ್ಲಿ ಕುಳಿತ ಮೇಲೋ ಅನ್ನುವುದು ತಿಳಿದರೆ ಮೇಲ್ವರ್ಗದಲ್ಲಿ ಹುಟ್ಟಿ ತಪ್ಪು ಮಾಡಿದವರು ಎಲ್ಲಿಯವರೆಗೆ ಪಾಪಪ್ರಜ್ಞೆಯಲ್ಲಿ ನರಳುತ್ತ, ತಲೆ ತಗ್ಗಿಸಿ ನಡೆಯಬೇಕು ಎಂದಾದರೂ ಗೊತ್ತಾಗುತ್ತದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments