ಇರ್ಫಾನ್ ಹೇಳಿದ ಗುಜರಾತಿ ಮುಸ್ಲಿಮರ ಹೊಸ ಶಕೆ
-ಸಂತೋಷ್ ತಮ್ಮಯ್ಯ
೩೫ ವರ್ಷದ ಮೆಮನ್ ಮುಸಲ್ಮಾನ ಯುವಕ. ರಾಜ್‌ಕೋಟ್ ಜಿಲ್ಲೆಯವರು. ಪೋರ್ ಬಂದರ್ ನಿಂದ ೭೦ ಕಿ.ಮೀ ದೂರದ ಉಪ್ಲೇಟಾ ಎಂಬ ತಾಲೂಕು ಕೇಂದ್ರದವರು. ಉಪ್ಲೇಟಾದಲ್ಲೇ ಹುಟ್ಟಿ ಬೆಳೆದು ಕಳೆದ ೧೨ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದವರು. ಓದಿದ್ದು ಇಂಗ್ಲೀಷ್ ಎಂ.ಎ. ಉದ್ಯೋಗ ಔಷಧ ಮಾರಾಟ ಕಂಪನಿಯೊಂದರಲ್ಲಿ ಸೇಲ್ಸ್ ಮತ್ತು ಮಾರ್ಕೇಟಿಂಗ್ ಅಧಿಕಾರಿ. ಟ್ವಿಟರ್ ನಲ್ಲಿ ಸಕ್ರೀಯರು. ಬ್ಲಾಗ್ ಬರಹಗಾರರು. ಈಗಾಗಲೇ FATAL ADMIRATION ಎಂಬ ಇಂಗ್ಲಿಷ್ ಕಾದಂಬರಿಯೊಂದನ್ನು ಕೂಡಾ ಬರೆದವರು.
ಅಚಾನಕ್ಕಾಗಿ ಮಾತಿಗೆ ಸಿಕ್ಕ ಇರ್ಫಾನ್ ಇಕ್ಬಾಲ್ ಘೆಟ್ಹಾ ತಾನೊಬ್ಬ ಸಾಮಾನ್ಯ ಮುಸಲ್ಮಾನ ಎಂದು ಪರಿಚಯ ಮಾಡಿಕೊಂಡರು. ಆದರೆ ಅವರು ಗುಜರಾತನ್ನು ಹೇಳುತ್ತಾ ಹೋದಂತೆ ಪತ್ರಿಕೆಗಳು ಬರೆಯದೇ ಇರುವ, ಟಿವಿಗಳು ತೋರಿಸದೇ ಇರುವ ಗುಜರಾತ್ ಇನ್ನೂ ಎಷ್ಟಿವೆ ಎಂದೆನಿಸುತ್ತಿತ್ತು. ಅವರು ಮಾತಾಡುತ್ತಿದ್ದರೆ “ಮೋದಿ ಮುಸಲ್ಮಾನರನ್ನು ಪ್ರತಿನಿಸುವುದಿಲ್ಲ” ಎಂದವರ ಮಾತುಗಳು ಸಮುದ್ರಪಾಲಾಗುತ್ತಿದ್ದವು.
ಇರ್ಫಾನ್ ಹೇಳುತ್ತಾ ಹೋದರು.
“ನಮ್ಮ ಗುಜರಾತಿನಲ್ಲಿ ಹುಟ್ಟಿ ವಿಶ್ವವಿಖ್ಯಾತರಾದವರಲ್ಲಿ ಗಾಂಧೀಜಿಯ ಅನಂತರದ ಹೆಸರು ಮೋದಿಯವರದ್ದೇ. ಪಟೇಲರೂ ಕೂಡಾ ಮಹಾವ್ಯಕ್ತಿಯೇ ಆದರೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದವರು ನಮ್ಮ ನರೇಂದ್ರ ಭಾಯಿಯೇ. ಅವರ ಪ್ರಭಾವವೆಷ್ಟಿದೆಯೆಂದರೆ ನನ್ನಂಥ ಒರ್ವ ಸಾಮಾನ್ಯ ಗುಜರಾತಿಯನ್ನೂ ಜನ ನನ್ನ ನಾಯಕನ ಹೆಸರಿನಿಂದಲೇ ಗುರುತ್ತಿಸುತ್ತಾರೆ. ನಮ್ಮನ್ನು ಪರಿಚಯವಾದ ತಕ್ಷಣ ಜನ ನಮ್ಮನ್ನು ಮೋದಿಯವರ ಬಗ್ಗೆ ಪ್ರಶ್ನಿಸುತ್ತಾರೆ. ತನ್ನೂರಿನ ಬಗ್ಗೆ ಹೆಮ್ಮೆ ಪಡದವನೂ ಕೂಡ ಇಂಥ ಅನುಭವಗಳಿಂದ ಹೆಮ್ಮೆ ಪಡುತ್ತಾನೆ. ಇಂಥ ಹೆಮ್ಮೆ-ಪುಳಕ ಎಷ್ಟು ರಾಜ್ಯದ ಪ್ರಜೆಗಳಿಗೆ ಸಿಕ್ಕಿದೆ? ಅದೃಷ್ಟವಶಾತ್ ಮೋದಿ ಭಾಯಿ ಗುಜರಾತಿಗಳಿಗೆ ಅದನ್ನು ಒದಗಿಸಿದ್ದಾರೆ. ನನ್ನನ್ನು ನಾನು ಗುಜರಾತಿ ಎಂದು ಪರಿಚಯ ಮಾಡಿಕೊಂಡಾಗ, ಪೋರ್ ಬಂದರಿನ ಸಮೀಪದವನು ಎಂದಾಗ ಜನ ಗಾಂಧೀಜಿ ಬಗ್ಗೆ ಪ್ರಶ್ನಿಸುವುದಿಲ್ಲ. ಮೋದಿ ಬಗ್ಗೆ ಪ್ರಶ್ನಿಸುತ್ತಾರೆ. ಇದು ಆಧುನಿಕ ಗುಜರಾತಿಗೆ ಸಲ್ಲುವ ಗೌರವ. ನನ್ನ ನಾಯಕ ನನಗೆ ನೀಡಿರುವ ಅಪೂರ್ವ ಅವಕಾಶ” ಎಂದು ಅವರು ಹೇಳುತ್ತಿದ್ದರೆ “ಏನ್ ಸ್ವಾಮಿ, ನಿಮ್ಮ ಮುಖ್ಯಮಂತ್ರಿಗಳು ಯಾವುದೋ ರಾಜ್ಯದ ವೇದಿಕೆಯಲ್ಲಿ ಕುರಿ ಹಿಡ್ಕೊಂಡು ನಿಂತಿರುವ ಫೋಟೋ ಬಂದಿದೆ ” ಎಂದು ಕೇಳಬೇಕಾದ ಸಂಕಟದ ಮುಂದೆ ಗುಜರಾತಿಗಳ ಹಿತಾನುಭವ ಅರ್ಥವಾಗಿತ್ತು.