ಸಾವಿರ ರುಪಾಯಿಯ ಫೋಟೋ ಮತ್ತು ಲಕ್ಷದ ಪ್ರಚಾರ
ಡಾ ಅಶೋಕ್ ಕೆ ಆರ್.
ವೈಯಕ್ತಿಕ ವಿಷಯದಿಂದ ಲೇಖನವೊಂದನ್ನು ಪ್ರಾರಂಭಿಸುವುದು ಅಷ್ಟೇನೂ ಸರಿಯಲ್ಲವಾದರೂ ಈ ಲೇಖನಕ್ಕೆ ಪೂರಕವಾಗಿರುವ ಘಟನೆಯಾಗಿರುವುದರಿಂದ ಹೇಳುತ್ತಿದ್ದೇನೆ, ಕ್ಷಮೆಯಿರಲಿ. ಮದುವೆಯಾಗುವ ದಿನ ಹೊಸದೇನನ್ನಾದರೂ ಮಾಡಬೇಕೆಂಬ ಆಸೆಯಿಂದ ನನ್ನ ಗೆಳೆಯನೊಬ್ಬ ಮದುವೆಗೆ ಬಂದವರಿಗೆಲ್ಲ ಒಂದೊಂದು ಗಿಡ ಹಂಚಿದ್ದ, ಒಟ್ಟು ಎರಡು ಸಾವಿರ ಗಿಡಗಳು. ಬಂದವರಿಗೆಲ್ಲ ಯಾವುದಾದರೊಂದು ಪುಸ್ತಕವನ್ನು ತಾಂಬೂಲದ ರೂಪದಲ್ಲಿ ಕೊಡಬೇಕೆಂಬುದು ನನ್ನಾಸೆಯಾಗಿತ್ತು. ಮದುವೆ ನಿಶ್ಚಿತವಾಗುವಷ್ಟರೊಳಗೆ ನನ್ನದೇ ಹದಿನೈದರಷ್ಟು ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕಾರಣ ನನ್ನದೇ ಕಥಾ ಸಂಕಲನ ಬಿಡುಗಡೆಗೊಳಿಸಿ ಮದುವೆಮನೆಯಲ್ಲೇ ತಾಂಬೂಲದ ಜೊತೆಗೆ ಕೊಡುವ ನಿರ್ಧಾರವೂ ಆಯಿತು. ಮಾಧ್ಯಮದವರನ್ನೂ ಕರೆಯುವ ತೀರ್ಮಾನವನ್ನೂ ಕೈಗೊಂಡೆವು. ಮದುವೆ ದಿನ ತಾಳಿ ಕಟ್ಟಿದ ಮೇಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮಾಧ್ಯಮದವರು ವಿಡಿಯೋ ಕ್ಯಾಮೆರಾಗಳ ಜೊತೆಗೆ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು. ಆಗ ಗಾಬರಿಯಾಗಿದ್ದು ಹುಡುಗಿ ಮತ್ತು ನನ್ನ ಮನೆ ಕಡೆಯ ನೆಂಟರು!! ಕೆಲವರಿಗಷ್ಟೇ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿಸಿದ್ದೆವು, ಇನ್ನುಳಿದವರಿಗೆ ಅಂದೇ ತಿಳಿಯಲಿ ಎಂದು ಸುಮ್ಮನಿದ್ದೆವು. ಮೀಡಿಯಾದವರು ಕ್ಯಾಮೆರ ಸಮೇತ ದಾಂಗುಡಿಯಿಟ್ಟಿದ್ದು ಕಂಡು ಗಾಬರಿಗೊಂಡ ಜನ ಅವರ ಬಳಿ ಹೋಗಿ ಏನು ಸಮಾಚಾರ ಎಂದು ವಿಚಾರಿಸಿ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿದು ನಿಟ್ಟುಸಿರುಬಿಟ್ಟರು!! ಜನ ಗಾಬರಿಗೊಂಡಿದ್ದಾದರೂ ಯಾಕೆ? ಯಾವುದೇ ದೃಶ್ಯ ಮಾಧ್ಯಮದಲ್ಲಿ ಮದುವೆಯ ಸುದ್ದಿ ಬರುವುದು ಹುಡುಗ/ಹುಡುಗಿ ಓಡಿ ಹೋದಾಗ ಅಥವಾ ಮತ್ಯಾವುದೋ ರಂಪ ರಾಮಾಯಣವಾದಾಗ. ಮಾಧ್ಯಮದವರಿದ್ದಾರೆಂದರೆ ಅಲ್ಲೇನೋ ಕೆಟ್ಟದ್ದು ನಡೆಯುತ್ತಿದೆ ಎಂಬ ಭಾವನೆಯೇ ತುಂಬಿ ಹೋಗಿದೆ ಜನರಲ್ಲಿ. ಅದೇ ಕಾರಣದಿಂದ ನನ್ನ ಮದುವೆಯ ದಿನ ನೆಂಟರಿಷ್ಟರು ಗಾಬರಿಯಾಗಿದ್ದರು! ಇದು ನಮ್ಮ ಮಾಧ್ಯಮಗಳು ಬೆಳೆಸಿಕೊಂಡಿರುವ ಪ್ರಭಾವಳಿ! ಮತ್ತಷ್ಟು ಓದು