ಕಟ್ಟಡ ವಿನ್ಯಾಸದಲ್ಲಿ ನೈಸರ್ಗಿಕ ಬೆಳಕಿನ ಬಳಕೆ
-ವಿ.ಆರ್ ಭಟ್
ವಾಸ್ತುಶಿಲ್ಪ ಮತ್ತು ಬೆಳಕು ಎಂಬೆರಡು ಪರಿಕಲ್ಪನೆಗಳು ಇತಿಹಾಸಕಾಲದಿಂದಲೂ ಪರಸ್ಪರ ಅವಲಂಬಿತವಾಗಿಯೇ ಇರುವುದನ್ನು ಕಾಣುತ್ತೇವೆ. ಈ ಸಂಬಂಧ ಹೊಸದೇನೂ ಅಲ್ಲ ಮತ್ತು ಹೊಸತಲೆಮಾರಿನ ಸ್ಥಪತಿಗಳು, ವಿನ್ಯಾಸಗಾರರು ಅದನ್ನು ನಿರ್ಲಕ್ಷ್ಯಿಸುವಂತಿಲ್ಲ ಎನ್ನುತ್ತಾರೆ ವಾಸ್ತುವಿನ್ಯಾಸಗಾರ ಪ್ರಶಾಂತ್ ನಂದಿಪ್ರಸಾದ್. ಬೆಳಕಿನ ಕಥೆಯನ್ನು ಅವರ ಬಾಯಲ್ಲೇ ಕೇಳುವುದು ಬಹಳ ಚಂದ:
ವಿದ್ಯುತ್ತಿನಂತಹ ಕೃತ್ರಿಮ ಬೆಳಕಿನ ಮೂಲಗಳು ಬಳಕೆಗೆ ಸಿಗದಿದ್ದ ಕಾರಣ, ಗೋಡೆ ಮತ್ತು ಮುಚ್ಚಿಗೆಗಳಿಂದ ಆವರಿಸಲ್ಪಡುವ ಜಾಗಗಳಲ್ಲಿ ನೈಸರ್ಗಿಕ ಬೆಳಕಿನ ಲಭ್ಯತೆಗಳಿಗೆ ಆದ್ಯತೆಯನ್ನಿತ್ತ ಪ್ರಾಚೀನ ವಾಸ್ತುಶಿಲ್ಪಶಾಸ್ತ್ರದಲ್ಲಿ, ಸ್ಥಾಪತ್ಯ ಮತ್ತು ಬೆಳಕು ಇವೆರಡೂ ಪರಸ್ಪರ ಅಂತರ್ಗತವಾಗಿ ಹೆಜ್ಜೆಹಾಕಿವೆ. ಹೀಗಾಗಿ ವಾಸ್ತುಶಿಲ್ಪಶಾಸ್ತ್ರ ಎಂಬುದು ’ನಾಲ್ಕುಗೋಡೆ ಮತ್ತು ಒಂದು ಛಾವಣಿ’ ಎಂಬುದಕ್ಕಿಂದ ವಿಸ್ತೃತವಾದ ವಿಷಯವಾಗಿದೆ. ಅಂಗಣದ ಭೂಭಾಗದ ತಗ್ಗು ದಿಣ್ಣೆಗಳನ್ನು ಅನುಕೂಲಕ್ಕೆ ತಕ್ಕಂತೇ ಪರಿವರ್ತಿಸಿ, ಕಟ್ಟಡದೊಳಗೆ ಬೆಳಕಿನ ಹರಿವು ಹೆಚ್ಚುವಂತೇ ಮಾಡುವ ಮೂಲಕ ಅಲ್ಲಿನ ನಿವಾಸಿಗಳಿಗೆ ಪುಷ್ಕಳ ಬೆಳಕು ಲಭ್ಯವಾಗುವಂತೇ ನೋಡಿಕೊಳ್ಳುತ್ತಿದ್ದುದು ಅಂದಿನ ಸಂಪ್ರದಾಯ. ಉತ್ತಮ ಬೆಳಕಿನ ಪ್ರವಾಹ ಇರುವ ಕಟ್ಟಡಗಳಲ್ಲಿ ನಾವದನ್ನು ಹೆಚ್ಚಾಗಿ ಗಮನಿಸುವುದೇ ಇಲ್ಲ, ಆದರೂ ಬೆಳಕಿನಿಂದಾಗಿಯೇ ನಾವಲ್ಲಿ ಆಕರ್ಷಿತರಾಗಿರುತ್ತೇವೆ, ಅಲ್ಲಿಯೇ ಇರಲು ಇಷ್ಟಪಡುತ್ತೇವೆ.
ಹಿಂದೂ ಮತ್ತು ಇಸ್ಲಾಂ ವಾಸ್ತುಶಿಲ್ಪ ಶಾಸ್ತ್ರಗಳಲ್ಲಿ, ಅವರ ವಸಾಹತುಗಳುಳ್ಳ ಭೂಖಂಡದ ಕೆಲವು ಪೂಜಾ/ಪ್ರಾರ್ಥನಾ ಪ್ರದೇಶಗಳಲ್ಲಿ, ಬೆಳಕೆಂಬ ಮೂಲವಸ್ತುವಿನ ಬಳಕೆ ಹಲವೆಡೆಗಳಲ್ಲಿ ನಿಯಂತ್ರಣಕ್ಕೆ ಒಳಪಡುತ್ತಿತ್ತು. ವ್ಯವಸ್ಥಾಪನೆಗೊಳಪಟ್ಟ ಪ್ರದೇಶಗಳಲ್ಲಿ ಪದರಗಳನ್ನು ನಿರ್ಮಾಣಮಾಡುವ ಮೂಲಕ ಹೊರಜಗತ್ತಿನ ಗದ್ದಲ, ಧೂಳು ಮತ್ತು ಸುಡುವ ಬಿಸಿಲು ನೇರವಾಗಿ ಒಳಗೆ ಬರದಂತೇ ತಡೆಯಲಾಗುತ್ತಿತ್ತು. ಉದಾಹರಣೆಗೆ: ವಿಶೇಷ ದಿನಗಳಲ್ಲಿ ಸೇರುವ ಜನಸಂದಣಿಯನ್ನು ಗಣನೆಯಲ್ಲಿಟ್ಟುಕೊಂಡು, ಪ್ರಮುಖ ಪೂಜಾಸ್ಥಳ ಮತ್ತು ಬರುವ ಜನರ ಅನುಕೂಲಕ್ಕಾಗಿ ನಿರ್ಮಿಸುವ ಸಭಾಗೃಹ ಇತ್ಯಾದಿಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರಿಸಲಾಗುತ್ತಿತ್ತು. ಗರ್ಭಗುಡಿಗಳಲ್ಲಂತೂ ಸೂರ್ಯನ ಬೆಳಕು ಪ್ರವೇಶಿಸದೇ ಇರುವಂತಿದ್ದು, ಅಲ್ಲಿಯೇ ಉರಿಸಲ್ಪಡುವ ಎಣ್ಣೆಯ ದೀಪಗಳಿಂದ ಹೊಮ್ಮುವ ಬೆಳಕು ವಿಗ್ರಹಗಳ ದಿವ್ಯಪ್ರಭಾವಲಯಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದವು. ವಿನ್ಯಾಸ ಮತ್ತು ಬೆಳಕಿನ ವಿಶಿಷ್ಟ ಬಳಕೆಗಳು ಈಜಿಪ್ಟ್ ನಲ್ಲಿಯೂ ಕಂಡುಬಂದಿದ್ದು, ಅವರ ದೇವಾಲಯಗಳಲ್ಲಿರುವ ಮಾನವ ಶರೀರಕ್ಕಿಂತ ದೊಡ್ಡದಾದ, ಬೃಹದಾಕಾರದ ವಿಗ್ರಹಗಳನ್ನು ದರ್ಶಿಸಲು ಇದೇ ಮಾದರಿಯ ವ್ಯವಸ್ಥೆ ಅಲ್ಲಿತ್ತು.