ದೇಹಾಂತರದ ಪಯಣ
– ರಾಜ್ ಕುಮಾರ್
ನನ್ನ ಬಾಲ್ಯದ ಒಂದು ಘಟನೆ. ನಮ್ಮ ಊರಿನ ದೊಡ್ಡ ಮನೆಯಲ್ಲಿ ಬಾವಿಯೊಂದನ್ನು ತೊಡುವ ಬಗ್ಗೆ ಹಿರಿಯರು ನಿರ್ಧರಿಸಿಬಿಟ್ಟರು. ಇನ್ನೇನು ನೀರು ತೋರಿಸುವುದಕ್ಕೊಸ್ಕರ ಒಬ್ಬರು ಬಂದೇ ಬಿಟ್ಟು ಕೈಯಲ್ಲಿ ಬೆತ್ತವೊಂದನ್ನು ಹಿಡಿದುಕೊಂಡು ಕೈ ಅತ್ತಿತ್ತ ತಿರುಗಿಸುತ್ತಾ ಗುಡ್ಡೆ ಎಲ್ಲ ತಿರುಗಿ ತಿರುಗಿ ಪಾದೆ ಕಲ್ಲಿನ ಮೇಲೆ ನಿಂತು ಅಲ್ಲೇ ಗುರುತು ಮಾಡಿಬಿಡುವಂತೆ ಹೇಳಿದರು. ಕರ್ರಗಿನ ಪಾದೆ ಆ ಬೇಸಿಗೆ ಕಾಲದ ಬಿಸಿಲಿಗೆ ಕಾದು ಬರಿ ಕಾಲಲ್ಲಿ ನಿಲ್ಲುವ ಹಾಗಿರಲಿಲ್ಲ. ಸುಡುತ್ತಿತ್ತು. ನಮಗೆಲ್ಲ ಅಶ್ಚರ್ಯ. ಇಲ್ಲಿ ಈ ಕಲ್ಲಿನಲ್ಲಿ ನೀರು ಸಿಗುವುದೇ? ಮಣ್ಣಿನ ಅಂಶ ಲವಲೇಶವೂ ಇಲ್ಲದ ಈ ಬರಡು ಜಾಗದಲ್ಲಿ ನೀರು ಸಿಗಬಹುದೇ? ಆಶ್ಚರ್ಯ. ನಮಗೆಲ್ಲಿ ಅರಿವಿತ್ತು. ಪ್ರಕೃತಿ ಇಂತಹ ಹಲವು ವಿಸ್ಮಯ ನಿಗೂಢತೆಗಳನ್ನು ಬಸಿರಲ್ಲಿರಿಸಿದೆ ಎಂದು.
ಬಾವಿ ತೋಡುವ ಕೆಲಸ ಆರಂಭವಾಯಿತು. ಅಲ್ಲಿ ನೆಲವನ್ನು ಸಾಕಷ್ಟು ಸಜ್ಜುಗೊಳಿಸಿ ವೃತ್ತಾಕಾರದಲ್ಲಿ ಆಕಾರವನ್ನು ಒಂದೆರಡು ಆಳುಗಳು ಅಗೆಯುವುದಕ್ಕೆ ಆರಂಭಿಸಿದರು.ನಾಲ್ಕು ಸಲ ಗುದ್ದಲಿ ಎತ್ತಿ ಅಗೆದಾಗ ಸಣ್ಣ ಚಿಪ್ಪು ಹಾರಿ ಬರುತ್ತಿತ್ತು. ಇಂತಹ ಕಠಿಣ ಸ್ಥಳದಲ್ಲಿ ನೀರು ಸಿಗಬಹುದೇ ನಮಗೆಲ್ಲ ಆಶ್ಚರ್ಯವಾಗುತ್ತಿತ್ತು. ಪ್ರಕೃತಿಯ ವಿಸ್ಮಯಕ್ಕೆ ಕುತೂಹಲವಾಗುತ್ತಿತ್ತು. ದಿನವಿಡೀ ಅಗೆದರೂ ಅರ್ಧ ಅಡಿಗಿಂತ ಹೆಚ್ಚು ಅಗೆಯಲು ಸಾಧ್ಯವಾಗದ ಸ್ಥಳದಲ್ಲಿ ನೀರಿದೆ ! ಎಂತಹ ವಿಸ್ಮಯ. ದಿನ ಕಳೆದಂತೆ ಕಲ್ಲಿನಂಶ ಕಡಿಮೆಯಾಗಿ ಕಲ್ಲು ಮೆತ್ತಗಾಗುವ ಭಾಸವಾಗುತ್ತಿತ್ತು.. ಕಲ್ಲು ಕರಗಿ ಮಣ್ಣಾದಂತೆ ನಿಧಾನವಾಗಿ ಭೂಗರ್ಭದೊಳಗೆ ನೀರಿನ ಗಮ್ಯದೆಡೆಗಿನ ಪಯಣ ಸಾಗುವಂತಿತ್ತು. ಆರಂಭದಲ್ಲಿ ಇರದಿದ್ದ ವಿಶ್ವಾಸ, ವಿಸ್ಮಯ ವಾಸ್ತವದಲ್ಲಿ ಸತ್ಯವಾಗುವ ಭಾವನೆಯನ್ನು ಮೂಡಿಸಿತು. ಕಲ್ಲು ಕರಗಿ ಮಣ್ಣಾಗಿ ಮುಂದೊಂದು ದಿನ ಅಂತರಂಗ ಗಂಗೆಯ ದರ್ಶನವಾದಾಗ ಸಂತಸಕ್ಕೆ ಪಾರವಿರಲಿಲ್ಲ