’ಹರಶರಣ ದೆನಿಲೋನ ಹಾದಿಯಲ್ಲಿ’ ಶಿವಪ್ರಕಾಶರ ಲೇಖನಕ್ಕೊಂದು ಪ್ರತಿಕ್ರಿಯೆ
-ಬಾಲಚಂದ್ರ ಭಟ್
ಈ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾದ ಎಚ್.ಎಸ್.ಶಿವಪ್ರಕಾಶರ ಜುಲೈ ೫ ರಂದು ಪ್ರಕಟವಾದ ’ಹರಶರಣ ದೆನಿಲೋನ ಹಾದಿಯಲ್ಲಿ’ ಬರಹಕ್ಕೆ ಪ್ರತಿಕ್ರಿಯೆ. ಬಹಳಷ್ಟು ವಿಷಯಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದನ್ನು ಓದಿದ ನಂತರ ಸ್ವಲ್ಪ ಲೇಖನ ಏನು ಹೇಳಹೊರಟಿದೆಯೆಂಬುದರ ಬಗ್ಗೆ ಗೊಂದಲ ಮೂಡಿತು. ನಾನು ತಿಳಿದುಕೊಂಡಂತೆ ಲೇಖಕರು ಒಟ್ಟಾರೆಯಾಗಿ ಏನು ಹೇಳುತ್ತಾರೆಂದರೆ,
೧. ಆಲೆನ್ ದೆನಿಲೋ ನ ವಿಚಾರಗಳು, ಬಹುತೇಕ ಭಾರತೀಯ ಆಧ್ಯಾತ್ಮಿಕ ಪರಿಕಲ್ಪನೆಗಳಿಗಿಂತ(‘ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತ’) ಭಿನ್ನವಾಗಿತ್ತು, ಹಾಗೂ
೨. ಭಾರತದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ’ಸ್ಟೀರಿಯೊಟೈಪಡ್ ಪೌರಾತ್ಯ’ ಚಿಂತನೆಗಳಿಂದ, ಹಾಗೂ ವಸಾಹತುಶಾಹಿ ಪರಿಕಲ್ಪನೆಗಳಿಂದ ಹೊರತಾಗಿದ್ದವು.
ಈ ಮೇಲಿನ ಎರಡು ಲೇಖಕರ ಅಭಿಪ್ರಾಯಗಳನ್ನು ಈ ಕೆಳಗಿನಂತೆ ವಿಮರ್ಶಿಸಿದ್ದೇನೆ.ಹಾಗೆಯೆ ಪ್ರಶ್ನೆಗಳ ಮೂಲಕ ನನ್ನಲ್ಲಿನ ಗೊಂದಲಗಳನ್ನ ಪ್ರಸ್ತಾಪಿಸಿದ್ದೇನೆ. ತಪ್ಪಿದ್ದಲ್ಲಿ ಸರಿಪಡಿಸಿ.
೧. ನಾನು ಹಾಗೆ ತಿಳಿದುಕೊಳ್ಳಲು ಕಾರಣ ಶಿವಪ್ರಕಾಶರು ಹೀಗೆ ಉಲ್ಲೇಖಿಸಿರುವದು: “ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತವನ್ನೇ ಭಾರತದ ಸಾರ ಸರ್ವಸ್ವವೆನ್ನುವರು ಆ ಕಾಲದ ಬಹಳ ಮಂದಿ ವಿದ್ವಾಂಸರು. ಅವರಲ್ಲಿ ಬಹುತೇಕ ಪ್ರಭೃತಿಗಳು ಭಾರತೀಯರೆಂದರೆ ಜೀವನೋತ್ಸಾಹ, ರಾಗರತಿಗಳಿಲ್ಲದ ಓಡುಗಾಲ ಯೋಗಿಗಳೆಂದು ಬಗೆದಿದ್ದರು. ಆದರೆ ವಿದ್ವತ್ತು, ರಸಗ್ರಾಹಿತ್ವ ಮತ್ತು ವ್ಯಕ್ತಿಗತ ಆಧ್ಯಾತ್ಮಿಕ ಸಾಧನೆಗಳ ತ್ರಿವೇಣಿಸಂಗಮವಾಗಿದ್ದ ದೆನಿಲೋ ಒತ್ತು ನೀಡಿದ್ದು ಭಾರತೀಯರ ರಸವಿಮುಖಿಯಾದ ಸಮಣಪಂಥೀಯ ಅಧ್ಯಾತ್ಮವಾದಕ್ಕಲ್ಲ, ಐಂದ್ರಿಕ ಜಗತ್ತಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಂಡು ಹಾಕುವ ಪ್ರತಿಯೊಂದು ತುತ್ತನ್ನೂ ಬಿಂದುವಾಗಿ ಮಾಡಿಕೊಂಡ ಶೈವ-ಶಾಕ್ತರ ಪೂರ್ಣಾದ್ವೈತಕ್ಕೆ.”