ಸಂಕವ್ವನ ಸ್ವಾತಂತ್ರ್ಯ
– ಸಂತೆಬೆನ್ನೂರು ಫೈಜ್ನಟ್ರಾಜ್’
ಜೈಹಿಂದ್,
ಜೈ ಹಿಂದ್,
ಮಹಾತ್ಮಗಾಂಧಿ ಕಿ ಜೈ.
ಭಾರತ್ಮಾತಾಕಿ ಜೈ.
ಇಡೀ ಹಳ್ಳಿಗೆ ಹಳ್ಳಿಯೇ ಕಂಪಿಸುವಂತೆ ಘೋಷಣೆಗಳು ಅನುರಣಿಸುತ್ತಿದ್ದವು. ನಾಗೇನಹಳ್ಳಿ ಊರಗೌಡ್ರು ಸರ್ಜಾ ಸಂಕಣ್ಣ ನಾಯಕರ ಮನೆ ಮಾತ್ರ ಅಂದು ಸ್ಮಶಾನಕ್ಕಿಂತಲೂ ಮೌನ-ಮೌನವಾಗಿತ್ತು !ಹುರಿ-ಹುರಿ ಮೀಸೆಯ, ಕಚ್ಚೆ ಪಂಚೆಯ, ಇಟ್ಟಗಿ ಖಾದಿಯ ಜುಬ್ಬಾ ತಲೆ ಮೇಲೂ ಅಲ್ಲಿಯ ಚೌಕಾಕಾರದ ಗಾಂಧಿಟೋಪಿ ಧರಿಸಿ ಅದ್ಯಾವುದೋ ಶೂನ್ಯ ದಿಟ್ಟಿಸ್ತಾ ಗೌಡರು ಹಜಾರದ ಕಂಬವೊಂದನ್ನು ಬಲಗೈಲಿ ಹಿಡಿದು ನಿಂತಿದ್ದರು!
ಸುರಪುರದ ವೆಂಕಟಪ್ಪನಾಯಕನ ವಂಶಸ್ಥರಾದ ಈ ಸರ್ಜಾ ಸಂಕಣ್ಣನಾಯಕರ ಮನೆಯಲ್ಲೂ ಅಂದು ಸಣ್ಣ ಚಳವಳಿ ಪ್ರಾರಂಭಗೊಂಡಿತ್ತು. ಅಡಿಗೆ ಖೋಲಿಯ ಮೂಲೆಯಲ್ಲಿ ಗೌಡತಿ ಸಂಕವ್ವ ಸೆರಗು ಒದ್ದೆಯಾಗುವಂತೆ ಮುಸಿ-ಮುಸಿ ಅಳ್ತಾನೇ ಇದ್ದದ್ದು ಅದು ನಿನ್ನೆ ರಾತ್ರಿಯಿಂದ ಗೌಡರ ರಕ್ತ ಕೋಪವಾಗಿ ಬರಲು ಕಾರಣವಾಗಿತ್ತು!
ಚಳವಳಿ ತೀವ್ರಗೊಂಡ ಸಂದರ್ಭ ಇಡೀ ದೇಶ ಮಹಾತ್ಮ ಗಾಂಧೀಜಿಯವರ ನೆರಳಾಗಿ ಜೈ. ಅಂದಿತ್ತು ಹೀಗಿರುವಾಗ ನಾಗೇನಹಳ್ಳಿ ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ದಕ್ಷಿಣ ಭಾರತದ ಹೆಮ್ಮೆಯ ಕೂಸು ಕರ್ನಾಟಕದ ಹೆಸರು ಚಿರಸ್ಥಾಯಿಯಾಗಲೆಂಬಂತೆ ನಾಗೇನಹಳ್ಳಿ ತನು-ಮನ ಧನದಿ ಗಾಂಧೀಜಿ ಕೂಗಿಗೆ ಸ್ಪಂದಿಸಿತ್ತು.
ಅದರಲ್ಲೂ ಸರ್ಜಾ ಮನೆತನ ತುಸು ಮುಂದಾಗಿ ತಾತ-ಮುತ್ತಾತರ ಆದಿಯಾಗಿ ಚಳವಳಿಗೆ ಬೆಂಗಾವಲಾಗಿ ನಡೆದಾಗ ಸಂಕಣ್ಣನಾಯಕರು ಕೂಡ ಗಾಂಧೀಜಿ ಹಾದಿ ಹಿಂಬಾಲಿಸಿ ಹೊರಟಿದ್ದರು. ಗೌಡತಿ ಮಾತ್ರ ಇದನ್ನು ನಂಬಿರಲಿಲ್ಲ !
ಹಾಗೆ ಹೊರಟ ಸಂಕಣ್ಣನವರ ಚಳವಳಿಯ ದಾರಿ ನೇರ ಚಳವಳಿ ಮುಟ್ತಿಲ್ಲ ಅನ್ನೋದೇ ಗೌಡ್ತಿ ಸಂಕವ್ವನ ಅಳಲು! ಅದರದ್ದೇ ಮುಸುಕಿನ ಗುದ್ದಾಟ ಇಷ್ಟು ದಿನ ಇದ್ದದ್ದು; ಇಂದು ಬೆಳಗಾವಿ ಅಧಿವೇಶನಕ್ಕೆ ಗಾಂಧೀಜಿ ಬರ್ತಾ ಇದ್ದಾರೆ ಇರೋ ಎಲ್ಲಾ ಒಡವೆ-ಬಂಗಾರ-ದುಡ್ಡು ದುಗ್ಗಾಣಿ ಕೊಡು ಎಂಬ ಗೌಡರಾಣತಿಗೆ ಗೌಡ್ತಿ- ಇಷ್ಟು ದಿನ ಚಳವಳಿಗಂತ ಒಯ್ದ ರೊಕ್ಕ ಚಳವಳಿ ಮುಖ ಕಂಡಿಲ್ಲ ; ಒಡ್ಯಾಣ ಡಾಬು ಎಲ್ಲಾ ಸೂಳ್ಯಾರ ಚೆನ್ನಿ ಬಾಯಾಗ ಹಾಕ್ಲಿಕತ್ತೀರಿ ಈಗ ಈ ಸಂಪತ್ತೂ ಗಾಂಧೀಜಿ ಹೆಸರಾsಗ ಹಾದರಗಿತ್ತಿ ಪಾಲಾಗಾಕ ನಾ ಬಿಡುದಿಲ್ಲ.-ಎಂಬ ಹಠ ಗೌಡರ ಕೋಪ ಕೆಂಡವಾಗಿ ನಿನ್ನೆಯಿಂದಲೇ ಮುದ್ದೆ ಕೋಲಿನಂಥಾ ಕಟ್ಟಿಗೆಗಳು ಗೌಡ್ತಿ ಮೈಮೇಲೆ ಪುಡಿ-ಪುಡಿಯಾಗ್ತಿದ್ವು!
ರಾತ್ರಿಯಿಂದ ನಡೆದ ಘರ್ಷಣೆ ಬೆಳಗಾಗುವಷ್ಟರಲ್ಲಿ ಅಂತಿಮ ಹಂತಕ್ಕೆ ಬಂದಿತ್ತು ಗೌಡ್ರು ಎರಡೇ ತೀರ್ಮಾನಕ್ಕೆ ಬಂದಿದ್ರು; ಒಂದು -ಒಡವೆ – ದುಗ್ಗಾಣಿ ಕೊಡು, ಇಲ್ಲಾ ಮನೆ ಬಿಟ್ಟು, ಊರು ಬಿಟ್ಟು ಹೊಂಡು ! ಮೌನದ ಮುಸುಕಲ್ಲಿ ಮುಗ್ಧೆ ಸಂಕವ್ವಳ ರೋಧನ ಎದೆ ಸೀಳಿ ಸೀಳಿ ಬರುತ್ತಿದ್ದು, ದಿಕ್ಕು ಕಾಣದಾಗಿತ್ತು. ದೊಡ್ಡಮನೆ ಗೌಡತಿ ದೊಡ್ಡಾಳಿನ ಹೆಂಡತಿಯೆಂದು ನಾಲ್ಕು ಹಜಾರದ ಹದಿನೆಂಟು ಖೋಲಿ ಮನೇಲಿ ರಾಣಿಯಾಗಿಯೇ ಇದ್ದೆ; ಇದೀಗ ಗಾಂಧೀಜಿ ಹೆಸರಲ್ಲಿ ಸ್ವಾತಂತ್ರ್ಯದ ನೆಪದಲ್ಲಿ ಗಂಡ ಹಾದಿ ತಪ್ಪಿರುವುದನ್ನು ಕಂಡು ಪ್ರತಿಭಟಿಸಿದ್ದಕ್ಕೆ ಈ ಶಿಕ್ಷೆ ಮನೆಯಿಂದ ಹೊರಕ್ಕೆ ! ಹೌದು ಮನೆಯಿಂದ ಹೊರಕ್ಕೆ……… ಸಂಕವ್ವ ಗಟ್ಟಿ ಮನಸ್ಸು ಮಾಡಿದಳು ದೃಢವಾದಳು…….ದೇಶವೆಂಬ ಮನೆಯಿಂದ ಹೊರಕ್ಕೆ ಬ್ರಿಟೀಷರು ಹೋಗಲೇಬೇಕಾದರೆ ನಾನೂ ಈ ಮನೆಯಿಂದ ಹೊರ ಹೋಗಲೇ ಬೇಕು. ಗಂಡನ ದಾಸಿಯಾಗಿ, ಆತ ಹಾಳಾಗಲಿಕ್ಕೆ ಪ್ರಚೋದಿಸುವುದು ಬಿಟ್ಟು ತಾನೇ ಸ್ವತಂತ್ರಳಾಗಬೇಕು. ….ಗಾಂಧೀಜಿಯವರ ಸತ್ಯಾಗ್ರ್ರಹ, ಚಳವಳಿಗಳಲ್ಲಿ ಸೇರಬೇಕು….ಅಂದು ಕೊಂಡೇ… ಕಣ್ಣೊರಿಸಿ ಎದ್ದವಳೇ ಹೊರಗೆ ಹೆಜ್ಜೆ ಇಟ್ಟೇ ಬಿಟ್ಟಳು !
ಜೈ ಹಿಂದ್
ಭಾರತ ಮಾತಾಕಿ ಜೈ –
ಘೋಷಣೆ ಇನ್ನೂ ಕೇಳುತ್ತಿದ್ದವು
ಸಂಕವ್ವ ಬಲು ದೂರ ನಡೆದಿದ್ದಳು !
ಚಿತ್ರ ಕೃಪೆ : rnyjourney.blogspot.com





