ವಿಷಯದ ವಿವರಗಳಿಗೆ ದಾಟಿರಿ

ಜುಲೈ 15, 2013

ಸಿದ್ರಾಮಣ್ಣನ ೧.ರೂ ಅಕ್ಕಿಯ ಸುತ್ತಮುತ್ತ

‍ನಿಲುಮೆ ಮೂಲಕ

-ಪ್ರಸನ್ನ,ಬೆಂಗಳೂರು

Anna Bhaagya೧ ರೂ ಅಕ್ಕಿ ಯೋಜನೆಯನ್ನು ಸಮರ್ಥಿಸುತ್ತಾ ಕೆಲವರು ಗ್ಯಾಸ್ ಮತ್ತು ಪೆಟ್ರೋಲ್ ಸಬ್ಸಿಡಿ ಬಗ್ಗೆ ಹೇಳುತ್ತಿದ್ದಾರೆ, ಪೆಟ್ರೋಲ್ ಮೇಲೆ ಶೇ ೪೦ ಕ್ಕೂ ಹೆಚ್ಚು ತೆರಿಗೆಯೂ ಇದೆ ಸಬ್ಸಿಡಿಯೂ ಇದೆ ಎನ್ನುವ ಸಣ್ಣ ಮಾಹಿತಿಯೂ ಇವರಲ್ಲಿ ಇಲ್ಲವೆ? ಬಹುತೇಕ ಮಧ್ಯಮ ವರ್ಗದ ಜನ ದುಡಿದು ಸಂಪಾದಿಸಿದ ಹಣದಲ್ಲಿ ಬದುಕುತ್ತಿದ್ದಾರೆ. ೧ ರೂ ಅಕ್ಕಿಯಂತಹ ಯೋಜನೆಗಳು ಅವನ ಮೇಲೆ ಹೊರೆ ಹೆಚ್ಚಿಗೆ ಮಾಡುತ್ತದೆ ಎನ್ನುವ ಕಾಳಜಿ ಅವನದು.

ಇನ್ನೂ ಕೆಲವರು ಐಟಿ ವಲಯಕ್ಕೆ ಕೊಡುವ ಸಬ್ಸಿಡಿ, ಭೂಮಿಯ ಬಗ್ಗೆ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ವಲಯಗಳು ಸೃಷ್ಠಿಸಿರುವ ಮತ್ತು ಅದರಿಂದ ಒದಗುವ ಉದ್ಯೋಗವಕಾಶ ಅದರಿಂದ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿರುವುದನ್ನು ಮರೆಯುವುದು ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಅಥವ ಅಂಧಾಭಿಮಾನದ ಪ್ರತೀಕ. ಸ್ವಂತವಾಗಿ ಉದ್ಯೋಗ ಸೃಷ್ಠಿಸಲಾಗದ ಅಸಹಾಯಕ ಸರ್ಕಾರಗಳು ಈ ವಲಯಕ್ಕೆ ಸೌಕರ್ಯ ಒದಗಿಸಿ ಉದ್ಯೋಗಿಗಳ ತೆರಿಗೆ
ಹಣದಿಂದ ಬೊಕ್ಕಸ ತುಂಬಿಸಿಕೊಳ್ಳುತ್ತಿಲ್ಲವೆ? ಆ ವಲಯದಿಂದ ಆದಾಯವಿಲ್ಲದೆ ಯಾವ ಸರ್ಕಾರವೂ ಕಣ್ಣುಮುಚ್ಚಿ ಸೌಕರ್ಯಗಳನ್ನು ಒದಗಿಸುತ್ತಿಲ್ಲ.

ಆಸ್ತಿತೆರಿಗೆಯ ಜೊತೆಗೆ ಕಸ, ಭಿಕ್ಷುಕ ಪುನರ್ವಸತಿ, ಚರಂಡಿ, ರಸ್ತೆ ಎಲ್ಲವುದಕ್ಕೂ ತೆರಿಗೆ ಪ್ರತ್ಯೇಕವಾಗಿ ಕೊಡುತ್ತಿದ್ದಾನೆ. ನೀರನ್ನೂ ಸಹ ಆತ ಕೊಳ್ಳುತ್ತಿದ್ದಾನೆ. ಆತನಿಗೆ ಒದಗಿಸಿರುವ ಸೇವೆಗಳಿಗೆ ಸೇವಾತೆರಿಗೆ ಕೊಡುತ್ತಿದ್ದಾನೆ. ಇದಲ್ಲದೆ ತಾನು ಕೊಳ್ಳುವ ಪ್ರತಿಯೊಂದು ವಸ್ತುವಿನ ಮೇಲೂ ತೆರಿಗೆ ಕಟ್ಟುತ್ತಿದ್ದಾನೆ. ಪ್ರತಿಯೊಬ್ಬ ಮಧ್ಯಮವರ್ಗದ ಪ್ರಜೆ ಸರಾಸರಿ ೧೦ ಸಾವಿರ ಆದಾಯ ತೆರಿಗೆ ಕೊಡುತ್ತಿದ್ದಾನೆ. ಇವೆಲ್ಲವನ್ನು ಒಟ್ಟುಗೂಡಿಸಿದರೆ ಆತನಿಗೆ ಪೆಟ್ರೋಲ್ ಮತ್ತು ಗ್ಯಾಸ್ ಮೇಲೆ ಸಿಗುವ ಸಬ್ಸಿಡಿ ಅತ್ಯಂತ ಕಡಿಮೆ.ಕೂಲಿಗಾಗಿ ಕಾಳು ಯೋಜನೆ ಬಂದಾಗ ಯಾವ ಮಧ್ಯಮ ವರ್ಗದವರೂ ಚಕಾರವೆತ್ತಲಿಲ್ಲ ವಿರೋಧಿಸಿಲ್ಲ. ಕಾರಣ ಅದು ಆತನ ಹಕ್ಕು ದುಡಿದು ತಿನ್ನುವುದರಿಂದ ಯಾವ ಸಮಸ್ಯೆಯೂ ಇರುವುದಿಲ್ಲ, ಸಮಸ್ಯೆ ಇರುವುದು ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು ಎಂಬ ಬಗ್ಗೆ. ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಜನಪ್ರಿಯ ಗಾದೆ ಮರೆತು ಹೋಗಿರಬೇಕು.

ದುಡಿದು ತಿನ್ನುವ ಶಕ್ತಿ ಇರುವವನಿಗೆ ಕೆಲಸ ಕೊಡಿ,ಕೂಲಿ ಕೊಡಿ. ದುಡಿಯಲಾಗದ ಅಶಕ್ತ, ಅಂಗವಿಕಲ, ದಿಕ್ಕಿಲ್ಲದ,  ವಯಸ್ಸಾದ, ಕೈಲಾಗದವರಿಗೆ ಸಹಾಯ ‘ಹಸ್ತ’ ಚಾಚಿ.  ಅವರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಿ ಸ್ವ ಉದ್ಯೋಗ ಕೈಗೊಳ್ಳುವಂತೆ ಗುಡಿ ಕೈಗಾರಿಕೆಗಳನ್ನು ಬೆಂಬಲಿಸಲಿ. ಅವನಿರುವ ಅವನು ಮಾಡುವ ಉದ್ಯೋಗಕ್ಕೆ ಯೋಗ್ಯ ಬೆಲೆ ಬರುವಂತೆ ಮಾಡಲಿ ಆದರೆ ಬಡವ ಎಂಬ ಅನುಕಂಪದ ನಾಟಕವಾಡುತ್ತ ಒಂದು ಇಡೀ ವರ್ಗವನ್ನೆ ಸೋಮಾರಿಗಳಾಗಿಸಿ ಅವರ ಮತಗಳಿಗೆ ಕನ್ನ ಹಾಕಿ ಮಧ್ಯಮವರ್ಗದವರ ಬದುಕನ್ನು ನರಕವಾಗಿಸುವುದು ಬೇಡ. ಇಷ್ಟಕ್ಕೂ ೬೦ ವರ್ಷಗಳಿಂದ ಬಡವನಾಗೇ ಬದುಕುತ್ತಿದ್ದಾನೆ ಎಂದರೆ ಇಡೀ ಯೋಜನೆಗಳಲ್ಲೇ ನ್ಯೂನತೆಯಿದೆ ಅದನ್ನು ಮೊದಲು ಸರಿ ಪಡಿಸಿಕೊಳ್ಳುವುದು ಸೂಕ್ತ. ದುಡಿದು ತಿನ್ನುವವ ಎಂದೂ ಬಡವನಲ್ಲ.ಅವನಿಗೆ ದುಡಿದು ತಿನ್ನಲು ಮಾರ್ಗ ತೋರಿಸಿ ಸೋಮಾರಿಯಾಗಲಲ್ಲ. ಸೋಮಾರಿ ಮಾತ್ರ ಬಡವ. ದುಡಿಯಲು ಬಲ್ಲವನು ಬಡವನಾಗಲು ಸಾಧ್ಯವಿಲ್ಲ. ಆವನನ್ನು ಬಡವನ್ನನ್ನಾಗೆ ಇರಿಸಲು ಯೋಜನೆಗಳು ಬೇಡ. ಸರ್ಕಾರಗಳು ಜನರಿಗೆ ಜೀವನ ಪೂರ್ತಿ ಸ್ವಾವಲಂಬನೆಯಿಂದ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ಳುವುದನ್ನುಕಲಿಸಬೇಕು. ಸೋಮಾರಿಗಳಾಗಲು ಮಾರ್ಗ ತೋರಿಸಿ ಅಧೋಗತಿಗಿಳಿಸಿ ಅವರ ಮತ ಕಬಳಿಸುವುದಲ್ಲ.

ಸರ್ಕಾರದ ಯೋಜನೆಗಳು ಜನರಿಗೆ ಸ್ವಾಲಂಬನೆಯನ್ನು ಕಲ್ಪಿಸುವಂತಿರಬೇಕೆ ವಿನಃ,ಬಡವನಾಗಿ ಹುಟ್ಟಿದ ತಪ್ಪಿಗಾಗಿ ಬಡವನಾಗಿಯೇ ಸಾಯಿಸುವಂತಿರಬಾರದು ಅಂತ ಹೇಳಿದರೆ ಅದರಲ್ಲಿ ಅಮಾನವೀಯವಾದದ್ದು ಏನಾದರೂ ಕಾಣುತ್ತದೆಯೇ? ಈ ಚರ್ಚೆಯಲ್ಲಿ ಇನ್ನೊಂದು ಅಂಶವನ್ನು ಗಮನಿಸಬಹುದು.ಹಿಂದೆಲ್ಲ ಅಂಕಿ-ಅಂಶ,ಪುರಾವೆ ಅಂತೆಲ್ಲ ಮಾತನಾಡುತಿದ್ದವರು ಇತ್ತೀಚೆಗೆ ಭಾವುಕತೆಯ ಮಾತನಾಡುತಿದ್ದಾರೆ.ಅವರು ಹೇಳಿದ್ದು ನಿಜ, ದೊಡ್ಡ ದೊಡ್ಡ ಬ್ಯುಸಿನೆಸ್ ಕುಳಗಳ ಸಾಲಪಾವತಿಗಳನ್ನು ಸರ್ಕಾರಗಳು ಮಾಫಿ ಮಾಡುವುದು ತಪ್ಪೇ.ಹಿಂದೊಮ್ಮೆ ಬಳ್ಳಾರಿ ಧಣಿಯೊಬ್ಬರ ವಿದ್ಯುತ್ ಬಾಕಿ ಬಿಲ್ (ನೆನಪು ಸರಿಯಿದ್ದರೆ ೫೦ ಲಕ್ಷಗಳಷ್ಟಿತ್ತು) ಅನ್ನು ಕಾಂಗ್ರೆಸ್ಸ್ ಸರ್ಕಾರವೇ ಮಾಫಿ ಮಾಡಿತ್ತು.ಆಗ ನೀವ್ಯಾಕೆ ಕೇಳಲಿಲ್ಲ ಅಂತ ನಾವು ಅವರನ್ನು ಮರುಪ್ರಶ್ನಿಸಬಹುದು.ಆದರೆ ಹಾಗೆ ಮರುಪ್ರಶ್ನಿಸುತ್ತ ನಡೆದರೆ ಅದು ಆರೋಗ್ಯಕರ ಚರ್ಚೆಯಾಗುವುದಿಲ್ಲ.ಹಿಂದಿನ ಸರ್ಕಾರಗಳು ಮಾಡಿದ ತಪ್ಪನ್ನೇ ನೀವು ಮಾಡುತ್ತೀರಿ ಅನ್ನುವುದಾದರೆ ನಮಗೆ ಹಿಂದಿನ ಸರ್ಕಾರವೇ ಸಾಕಿತ್ತು.ನಿಮ್ಮನ್ನು ಜನ ಹೊಸತಾಗಿ ಆರಿಸಿ ಕಳಿಸಿದ್ದಾರೆ ಅಂದರೆ ಅವರು ನಿಮ್ಮಿಂದ ಹೊಸತನ್ನೇನೋ ನಿರೀಕ್ಷಿಸುತಿದ್ದಾರೆ ಅಂತಲೇ ಅರ್ಥ.ಆ ಬಗ್ಗೆ ಯೋಚಿಸಿ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments