ವಿಷಯದ ವಿವರಗಳಿಗೆ ದಾಟಿರಿ

ಜುಲೈ 22, 2013

ಅನ್ನ ಭಾಗ್ಯದ ಮುಂದೆ ಇನ್ನು ಭಾಗ್ಯವುಂಟೆ?

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

dantavillada_kathegalu_nilumeಉಡುಪಿ ಕೃಷ್ಣನ ದರ್ಶನಕ್ಕೆ ಕನಕನ ಕಿಂಡೀಲಿ ಭಕ್ತರು ಕಾದಿದ್ದಂತೆ, ಕೃಷ್ಣಾ ಮುಂದೆ ಬೆಳಗಿನ ಥಂಡೀಲಿ ಸಾವಿರಾರು ಜನ ಸಿಎಂ ಸಾಹೇಬ್ರ  ದರ್ಶನಕ್ಕೆ ಕಾದಿದ್ರು. ಅಂತೂ ಸಿಎಂ ಸಾಹೇಬ್ರು ಕಾರಿಳಿದು ಸರ ಸರ ಬಂದ್ರು. ಅವರದ್ದೇ ಪಕ್ಷದ ಎಮ್ಮೆಲ್ಯೆ ಓಡಿ ಬಂದು ಒಂದು ಅರ್ಜಿ ಕೊಟ್ರು:

‘ಏನ್ರೀ ಇದು? ಟ್ರಾನ್ಸ್‍ಫರ್ ಕ್ಯಾನ್ಸಲೇಶನ್‍ಗೆ ಅರ್ಜಿ ಕೊಟ್ಟಿದೀರಿ?’

‘ ನನ್ನ ಕ್ಷೇತ್ರದಲ್ಲಿ  ಇದ್ದ ಬದ್ದ  ಆಫೀಸರ್‍ಗಳನ್ನೆಲ್ಲಾ ಎತ್ತಂಗಡಿ ಮಾಡಿದೀರಿ.ಎಲೆಕ್ಷನ್‍ನಲ್ಲಿ ನಮ್ ಕೈ ಬಲಪಡಿಸೋಕೆ ಎಷ್ಟೆಲ್ಲಾ ದುಡ್ದಿದಾರೆ. ಒಂದಿಷ್ಟು  ಕೈ ಬಿಸಿ ಮಾಡ್ಕೊಳಾದು ಬೇಡ್ವಾ? ಅಷ್ಟರಲ್ಲೇ ಎಲ್ಲರನ್ನ ಎತ್ತಂಗಡಿ ಮಾಡುದ್ರೆ ಹೇಗೆ?  ಎಲ್ಲರನ್ನ ವಾಪಸ್ ಹಾಕುಸ್ಕೊಡಬೇಕು’

‘ಸರಿ! ನೋಡೋಣ ನಡೀರಿ, ನೆಕ್ಸ್ಟ್..!’ ಒಬ್ಬ ಹುಡುಗ ಒಂದು ಅರ್ಜಿ ಹಿಡ್ಕಂಡು ಬಂದ.

‘ಸಾರ್! ಕೆಪಿಎಸ್‍ಸಿ ಹುದ್ದೇಲಿ ಅನ್ಯಾಯ ಆಗಿದೆ’

‘ಸಿಐಡಿ ತನಿಖೆ ಮಾಡುಸ್ತಿದೀವಲ್ಲ..’

‘ಅಯ್ಯೋ ಈ ಬ್ಯಾಚಿಂದು ಅಲ್ಲ ಸರ್, 2008ರದ್ದು. ಸಿಓಡಿ ರಿಪೋರ್ಟ್ ದೂಳು ತಿಂತಿದೆಯಲ್ಲ..ಏನೂ ಆಕ್ಷನ್ನೆ ತಂಗಡಿಲ್ಲವಲ್ಲ ಸರ್..ಒಂದು ಕೆಲಸ ಕೊಡಿಸಬೇಕು ಸರ್’

‘ಅರ್ಜಿ ತಂದಿದೀಯಾ?’

‘ಇಲ್ಲ ಸರ್, ಕವನ ಬರ್ಕಂಡು ಬಂದಿದೀನಿ..ಕೇಳಿ ಸರ್. ಅನ್ನ ಭಾಗ್ಯದ ಮುಂದೆ ಇನ್ನು ಭಾಗ್ಯವುಂಟೆ? ಛತ್ತೀಸ್‍ಗಡದ ತೀಸ್ ಕೆಜಿ ಅಕ್ಕಿ ಪಡೆಯದ ಹತಭಾಗ್ಯರುಂಟೆ? ಎಪಿಎಲ್ ಮಂದಿಯಂತ ಏಪ್ರಿಲ್ ಫೂಲ್‍ಗಳುಂಟೆ? .! ಇನ್ನೊಂದು ಕೇಳಿ ಸರ್-ಇದು ಭಾಗ್ಯ, ಇದು ಭಾಗ್ಯ, ಅನ್ನ ಭಾಗ್ಯವಯ್ಯಾ! ನಮ್ಮ ಸಿದ್ದರಾಮರ ಭಜನೆ ಸುಖವಯ್ಯ, ಕಲ್ಲಾಗಿ ಇರಬೇಕು ಅಕ್ಕಿಮೂಟೆಯೊಳಗೆ, ಬಿಲ್ಲಾಗಿ ಇರಬೇಕು ಮೇಡಂ ಮನದೊಳಗೆ, ಬಾಣವಾಗಿರಬೇಕು ಭಿನ್ನಮತೀಯರೊಳಗೆ’

‘ವಾಹ್!  ನಮ್ ದತ್ತಣ್ಣನ ತರ ಚೆನ್ನಾಗಿ ಬರೆದಿದೀಯ ಕಣಯ್ಯ, ನಿಂಗ್ಯಾಕೆ ಕೆಲಸ ? ನಮ್ಮ ಪಾರ್ಟಿ ಸೇರ್ಕೊ.! ನೆಕ್ಸ್ಟ್..!’

ಒಬ್ರು ವಯಸ್ಸಾದ ವ್ಯಕ್ತಿ ಬಂದ್ರು. ‘ನಿಮ್ದೇನ್ರೀ? ಅರ್ಜಿನೇ ಇಲ್ಲದೆ ಬಂದಿದೀರ?’ ಅಂದ್ರು ಸಿಎಂ.

‘ಅದೇ ಸರ್, ಆ ಹುಡುಗ ಕೊಟ್ಟೋದ್ನಲ್ಲ, ಆ ಅರ್ಜಿನೂ ಇಲ್ಲದ ಹಾಗೆ ಮಾಡಬೇಕು’

‘ಏನ್ರೀ ಹೇಳ್ತಿದೀರ?’

‘ಹಿಂದೆ ಕೆಪಿಎಸ್‍ಸಿ ಹುದ್ದೆಗೆ ಕಾಲ್ ಮಾಡಿದಾಗ ನಾನೇ ಆ ಹುಡುಗನ್ನ ಸಂದರ್ಶನ ಮಾಡಿದ್ದು.ಅಧ್ಯಕ್ಷರ ಮಾತು ಕೇಳಿ ಮಣ್ಣು ತಿನ್ನೋ ಕೆಲಸ ಮಾಡ್ಕಂಬುಟ್ಟಿದ್ದೆ. ಈಗ ನಿಮ್ ಪಾರ್ಟಿಲೇ ಇದೀನಿ..ಪಾರ್ಟಿ ಫಂಡೂ ಕೊಟ್ಟಿದೀನಿ..ಕೈ ಬಿಡಬಾರದು ಸರ್..’

‘ರೀ! ಫಂಡು ಗಿಂಡು ಅಂತ ಮಾತಾಡ್ತಿರಲ್ರೀ..! ಇದು ಜನತಾ ದರ್ಶನ..ಸುಮ್ನೆ ನಡೀರ್ರೀ..ಆಮೇಲೆ ನೋಡೋಣ.’.

ಮೈಲಾರಿ ಒಂದೈದು ಜನನ್ನ ಗುಡ್ಡೆ ಹಾಕ್ಕಂಡು ಕೂತಿರೋದನ್ನ ನೋಡುದ್ರು ಸಿಎಂ. ‘ಯಾರ್ರೀ ಅವರು ಧರಣಿ ಮಾಡ್ತಿರೋರು, ಅವರನ್ನ ಎಬ್ಬುಸ್ರಿ’  ಅಂದ್ರು ಸಿಎಂ.

‘ಅವರು ಧರಣಿ ಮಾಡ್ತಿಲ್ಲ ಸರ್, ಕಾದು ಕಾದು ಸುಸ್ತಾಗಿ ಏಳಕ್ಕಾಗಲ್ಲ ಅಂತ ಕೂತಿದಾರೆ ಸರ್’ಅಂದ್ರು ಪಿಎ. ಸಿಎಂ ಸಾಹೇಬರೇ ಖುದ್ದಾಗಿ ಅವರ ಬಳಿ ಹೋದ್ರು. ಮೈಲಾರಿ’ನಮಸ್ಕಾರ ಬುದ್ದಿ.’ ಅಂದ. ‘ಏನ್ರಪ್ಪ, ಯಾಕಿಷ್ಟು ಸುಸ್ತಾಗಿದೀರಿ?’ ವಿಚಾರಿಸುದ್ರು ಸಿಎಂ.

‘ಉಂಡು ಮೂರು ದಿನ ಆಯ್ತು ಬುದ್ದಿ‘

‘ಛೇ! ಅಕಟಕಟಾ? ಅನ್ನ ಭಾಗ್ಯ ಜಾರಿಯಾಗಿರೋ ನಾಡಲ್ಲಿ ನನ್ನ ಪ್ರಜೆಗಳು ಉಪವಾಸದಿಂದಿರುವುದೇ? ಶಿವ ಶಿವಾ..ಯಾಕೆ ನಿಮಗೆ ರೂಪಾಯಿಗೆ ಕೆಜಿ ಅಕ್ಕಿ ಸಿಕ್ಕಿಲ್ಲವಾ?’ ಕನಲಿದರು ಸಿಎಂ ಸಾಹೇಬರು.

‘ರೇಶನ್ ಅಂಗ್ಡಿ ಮುಂದೆ ಕಾದು ನಿಂತ್ಕಳಕ್ಕೆ ಆಯ್ತಿಲ್ಲ ಬುದ್ದಿ… ಈ ಬ್ಯಾಂಕಿಗೆ ಗ್ಯಾಸಿಂದು,ಕೂಲಿ ದುಡ್ಡು ನೇರವಾಗಿ ಹಾಕ್ತೀರಲ್ಲ..ಅಂಗೇ ಮನೆ ಡಬ್ಬಕ್ಕೇ ನೇರವಾಗಿ ಅಕ್ಕಿ ಹಾಕ್ಸೋ ಯೋಜ್ನೆ ಇಲ್ಲವಾ ಬುದ್ದಿ?’

ಸಿಎಂ ಸಾಹೇಬ್ರು ಬೆಚ್ಚಿ ಬಿದ್ರು. ‘ಮುಂದೆ ಅದೂ ಬರಬಹುದು, ನೋಡೋಣ, ಈಗ ನಿಮಗೆ ಕ್ಯೂನಲ್ಲಿ ನಿಂತ್ಕೊಳೋಕೆ ಯಾಕೆ ಆಗ್ತಿಲ್ಲ?’

‘ಮುದ್ದೆ ತಿರುವೋರೇ ಇಲ್ಲ ಬುದ್ದಿ, ಮುದ್ದೆ ತಿನ್ನದೆ ಉಸ್ ಉಸ್ ಅಂತ ತೇಲ್‍ಗಣ್ ಮೇಲ್‍ಗಣ್ ಬಿಡೋ ಅಂಗಾಗಿದೆ. ನಿಂತ್ಕೊಳಕ್ಕೇ ಆಗ್ತಿಲ್ಲ..’

‘ ಮುದ್ದೆ ತಿಂದು ಗೌಡ್ರ ತರ ನಿದ್ದೆ ಹೊಡೀಬೇಕಾ? ಅನ್ನಭಾಗ್ಯ ಯೋಜನೆ ತಂದು ರೂಪಾಯಿಗೆ ಕೆಜಿ ಅಕ್ಕಿ ಕೊಡ್ತಿಲ್ಲವಾ? ಅಕ್ಕಿ ತಿಂದು ಲಕ್ಕಿ ಆಗಿ’

‘ಅಯ್ಯೋ! ಅಕ್ಕಿ ಮುಕ್ಕಿ ಮುಕ್ಕಿ ಸಾಕಾಗಿದೆ ಬುದ್ದಿ. ರೂಪಾಯಿ ಕೆಜಿ ಅಕ್ಕಿ ಕೊಟ್ರಾಯ್ತಾ? ಸೈಡ್ಸ್ ಬೇಡವಾ ಬುದ್ದಿ?’

‘ಹೂ ಬುದ್ದಿ, ಅನ್ನ ಭಾಗ್ಯ ಅಂತ ಬರೀ ಎಷ್ಟು ಅಂತ ಅನ್ನ, ನುಚ್ಚಿನುಂಡೆ, ನುಚ್ಚಿನುಪ್ಪಿಟ್ಟು ತಿನ್ನಕ್ಕಾಗುತ್ತೆ? ನನ್ ಹೆಂಡ್ರು ಭಾಗ್ಯ ಬರೀ ಅಕ್ಕಿ ತಂದು ಸುರಿದ್ರೆ ಆಯ್ತಾ? ಬೇಳೆ, ಮಸಾಲೆ, ಎಣ್ಣೆ, ಬೆಣ್ಣೆ ಇಲ್ಲದಿದ್ರೆ ಏನು ಬೇಸಿ ಹಾಕ್ಲಿ ಅಂತ ಕೂಗಾಡ್ತಾಳೆ. ಚಿಕನ್ ಭಾಗ್ಯ, ರಸಂ ಭಾಗ್ಯ ಹೋಗಲಿ, ಚಿತ್ರಾನ್ನ ಕಲಸ್ಕೊಳೋ ಮಸಾಲೆ ಭಾಗ್ಯನಾದರೂ ಪುಕ್ಕಟೆ ಕೊಡೋದು ಬ್ಯಾಡವಾ ಬುದ್ದಿ?’

‘ಇಲ್ಲ ಅಂದ್ರೆ ಒಂದು ‘ಎಣ್ಣೆ ಭಾಗ್ಯ’ ಸ್ಕೀಂ ಮಾಡ್‍ಬುಡಿ. ಅನ್ನದ ಜೊತೆಗೆ ಸೈಡ್ಸೇ ಬೇಡ, ಮೆಣಸಿನಕಾಯಿ ಕಿವುಚಿ  ಹೊಡುದು ಬಿಡ್ತೀವಿ. ನೀವು ಸಿದ್ಧ ರಾ ’ಮಲ್ಯ’ ಅಂತ ಫೇಮಸ್  ಆಗಿಬಿಡ್ತೀರಿ.ಬೆಳಿಗ್ಗೆ ಮಕ್ಳಿಗೆ ಹಾಲು, ರಾತ್ರಿ ಅಪ್ಪಂದಿರಿಗೆ ಅಲ್ಕೋಹಾಲು’

ಇದ್ಯಾಕೋ ವಿಪರೀತಕ್ಕೆ ಹೋಗ್ತಿದೆ ಅನಿಸ್ತು ಸಿಎಂ ಸಾಹೇಬ್ರಿಗೆ! ಇವರಿಗೆಲ್ಲಾ ಒಂದು ಚಿತ್ರಾನ್ನದ ಪ್ಯಾಕೆಟ್ ಕೊಟ್ಟು ಕಳಿಸಿ ಅಂತ ಆರ್ಡರ್ ಮಾಡಿ ಮುಂದಕ್ಕೆ ನಡುದ್ರು. ಮಹಿಳಾಮಣಿಗಳ ತಂಡ ಅರ್ಜಿ ಹಿಡಿದು ನಿಂತಿತ್ತು. ‘ಏನ್ರಮ್ಮ ನಿಮ್ ಕಷ್ಟ?’

‘ ಸರ್, ಸೀರೆನೇ ಉಡಬೇಡ ಅಂದ್ರೆ ಹೇಗೆ ಸರ್?’

‘ಅಯ್ಯಯ್ಯೋ! ಯಾರಮ್ಮ ಹಾಗಂದಿದ್ದು?’

‘ ಬಾರ್ ಹುಡುಗೀರು ಸೀರೆ ಉಡಬಾರದು ಅಂತ ಮಾಡಿದೀರಿ? ಇವತ್ತು ಬಾರ್ ಹುಡುಗೀರು ಅಂತೀರಿ, ನಾಳೆ ಬೋರಿಗೆ ಬರೋ ಹುಡುಗೀರು ಅಂತೀರಿ. ಸೀರೆ ನಮ್ಮ ಭಾರತ ನೀರೆಯ ಸಂಸ್ಕೃತಿ ಸರ್..ಅದನ್ನೇ ಬೇಡ ಅಂದ್ರೆ ಯಡಿಯೂರಪ್ಪನೋರು ಕೊಟ್ಟಿರೋ ಸೀರೆಗಳನ್ನ, ಮೊನ್ನೆ ಎಲೆಕ್ಷನ್‍ನಲ್ಲಿ ಕೊಟ್ಟಿರೋ ಸೀರೆಗಳನ್ನ ಏನು ಮಾಡಬೇಕು?’

‘ಆಯ್ತು ಬಿಡಿ, ನನಗೆ ಸೀರೆ ವಿಷಯಕ್ಕೆ ಕೈ ಹಾಕಿ ಅನುಭವ ಇಲ್ಲ’ ಎಂದು ಸಮಾಧಾನ ಮಾಡಿದರು ಸಿಎಂ. ಒಬ್ರು ವ್ಯಕ್ತಿ ಬಂದ್ರು. ‘ಏನ್ರೀ ನಿಮ್ಮ ಕಷ್ಟ?’

‘ ಸರ್! ಅಕ್ರಮ ಸಕ್ರಮ ಮಾಡಿಕೊಡಬೇಕು’

‘ಅಯ್ಯೋ ರಾಮ! ನಮ್ ರಾಜ್ಯಪಾಲರು ಸೈನ್ ಹಾಕಿದ್ದಾಯ್ತಲ್ಲ ! ಏನು ಸರ್ಕಾರಿ ಜಮೀನಲ್ಲಿ ಮನೆ ಕಟ್ಕಂಡಿದ್ರಾ?’

‘ ಏನೋ ಎಡವಟ್ಟು ಮಾಡ್ಕಂಬುಟ್ಟಿದೀನಿ ಸರ್! ಮನೆ ಜೊತೆಗೆ ಒಂದು ಔಟ್‍ಹೌಸ್ ಅಂದ್ರೆ ಚಿನ್ನವೀಡು ಮಾಡ್ಕಂಡಿದೀನಿ’

‘ ಎರಡು ಮನೆ ಇದ್ರೆ ಏನ್ರೀ? ಅದರಲ್ಲಿ ತಪ್ಪೇನಿದೆ?’

‘ ಎರಡರಲ್ಲೂ ನಂದೇ ಸಂಸಾರ ಸರ್! ಇನ್ನೊಂದು ಸೆಟಪ್‍ನೂ ಸಕ್ರಮ ಮಾಡಿಕೊಟ್ಟು ಪರಿಹಾರ ಧನ ಕೊಡುಸ್ಬೇಕು ಸರ್..’

‘ ಸಾಕು ಮುಚ್ಚಯ್ಯ ಬಾಯಿ..ಇಂತದ್ದೆಲ್ಲಾ ಸಾಧ್ಯನೇ ಇಲ್ಲ..ಇದನ್ನೆಲ್ಲಾ  ಸಕ್ರಮ ಮಾಡುದ್ರೆ ವಿ.ಪ.ನಾಯಕ ಜೋಕು ಮಾರಪ್ಪನೋರಿಗೆ ಅನುಕೂಲ ಮಾಡಿಕೊಟ್ಟಂಗಾಗುತ್ತೆ..ಕಳುಸ್ರೀ ಇವರನ್ನ ಮುಂದಕ್ಕೆ..’ಅವರು ಹೋದ್ರು. ಲೀಲಾ ವಿಲಾಸ ಸ್ವಾಮೀಜಿ  ಬಂದ್ರು.

‘ಸರ್ವಸಂಗ ಪರಿತ್ಯಾಗಿಗಳು ನೀವು..ನಾವು ನಿಮ್ ದರ್ಶನ ಮಾಡಕ್ಕೆ ಬರಬೇಕು,ನೀವೇ  ಜನತಾ ದರ್ಶನಕ್ಕೆ ಬಂದು ಬಿಟ್ಟಿದೀರಲ್ಲ’ ಸಿಎಂ ಕೈ ಕೈ ಹಿಸುಕಿಕೊಂಡ್ರು.

‘ಹೊಸ ಬಜೆಟ್ ಮಾಡ್ತೀರಂತೆ..ಮಠಗಳಿಗೆ ಏನೂ ಕೊಡಬೇಡಿ.ಆ ಕೆಟ್ಟ ಸಂಪ್ರದಾಯಕ್ಕೆ ಇತಿ ಶ್ರೀ ಹಾಡಿ..’ಸಿಎಂ ಉಬ್ಬಿ ಹೋದ್ರು. ನಮ್ಮ ನಾಡಲ್ಲಿ ಇಂಥ ಸ್ವಾಮಿಗಳೂ ಇದಾರಲ್ಲ ಅಂತ ಖುಷಿಯಾದ್ರು.  ‘ಆಯ್ತು ಸ್ವಾಮೀಜಿ..ನಿಮ್ಮಂತ ಸ್ವಾಮಿಗಳಿರೋದು ನಮ್ಮ ನಾಡಿನ ಪುಣ್ಯ..’

‘ ಹೌದು ನನ್ನ ಮಠವೂ ಸೇರಿದಂತೆ ಯಾವ ಮಠಕ್ಕೆ ಏನೂ ಕೊಡಬೇಡಿ. ಮಠ,ಮಠದ ಪಕ್ಕದ ಜಾಗ ನನ್ನ ಹೆಸರಿಗೆ ಬರೆಸಿ ಕೊಟ್ಟು ಬಿಡಿ..ಮಠಗಳನ್ನ ಮುಚ್ಚಿಬಿಡಬೇಕು..ಆ ಕೆಲಸ ನನ್ನಿಂದಲೇ ಶುರುವಾಗಲಿ..!’ ಸ್ವಾಮಿಗಳು ಅರ್ಜಿ ಪಿಎ ಕೈಗಿಟ್ಟು ಸಿಎಂ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿ ಅಲ್ಲಿಂದ ಹೊರಟರು. ಶಾಕ್‍ನಿಂದ ಸಿಎಂ ಸುಧಾರಿಸಿಕೊಳ್ಳುವಷ್ಟರಲ್ಲಿ ಪಿಎ ಪೋನ್ ಕಿರುಗುಟ್ಟಿತು. ರಿಸೀವ್ ಮಾಡಿ ಸಿಎಂ ಕಿವಿಯಲ್ಲಿ ಏನೋ ಪಿಸುಗುಟ್ಟಿದ. ಸಿಎಂ ಬೆಚ್ಚಿಬಿದ್ದು ಸರ ಸರ ಅಲ್ಲಿಂದ ಹೊರಟರು.

‘ಬುದ್ದಿ ಜನತಾ ದರ್ಶನ ಮುಗಿದೇ ಇಲ್ಲ,  ಹೊಂಟು ಬಿಟ್ರಿ’ ಜನ ಅಡ್ಡಗಟ್ಟುದ್ರು.

‘ಅಯ್ಯೋ! ಡಿಸಿಎಂ ಕ್ಯಾಂಡಿಡೇಟು ಪರಮ್ ಡಿಶ್ಯುಂ ಅಂತ  ಮೇಡಂ ದರುಶನಕ್ಕೆ ಪ್ಲೇನ್ ಹತ್ತಿ ಬಿಟ್ರಂತೆ. ಜನ ‘ತಾ’ ಅಂತ ಕರೆದಿದಾರೆ..ನಮ್ಮೋರನ್ನ ಕರ್ಕೊಂಡು ಮೇಡಂ ದರ್ಶನಕ್ಕೆ ಹೋಗಬೇಕು’ ಎಂದು ಸಿಎಂ ಒಂದೇ ಉಸುರಿಗೆ ಕಾರು ಹತ್ತಿದರು.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments