ಅವಮಾನಿಸಲು ಕರೆಸಿದವರು ಬಿರುದುಕೊಟ್ಟು ಕಳುಹಿಸಿದರು
– ಸಂತೋಷ್ ತಮ್ಮಯ್ಯ
೧೯೪೭. ಹಳೆಯ ದೆಹಲಿಯ ಪುರಾನಾ ಕಿಲಾ. ದೇಶಕ್ಕೆ ಸ್ವಾತಂತ್ರ್ಯ ಬಂದು ಅತ್ತ ಲಾಲ್ ಕಿಲಾದಲ್ಲಿ ತಿರಂಗಾ ಹಾರಿ ಜನರು ಕುಣಿಯುತ್ತಿದ್ದರೆ ಪುರಾನಾ ಕಿಲಾಕ್ಕೆ ಆ ಭಾಗ್ಯವಿರಲಿಲ್ಲ. ಏಕೆಂದರೆ ಅದೇ ಹೊತ್ತಿಗೆ ದೇಶವೂ ತುಂಡಾಗಿ, ಪಾಕಿಸ್ಥಾನದಿಂದ ರಾಶಿರಾಶಿ ಹೆಣಗಳೂ , ಹಿಂಡುಹಿಂಡಾಗಿ ನಿರ್ವಸಿತರೂ ದಿಕ್ಕಿಲ್ಲದೆ ಬರುತ್ತಿದ್ದರು. ಆಗ ಅವರಿಗೆಲ್ಲಾ ತಾತ್ಕಾಲಿಕ ನೆಲೆಯನ್ನು ಕೊಟ್ಟಿದ್ದು ಈ ಪುರಾನಾ ಕಿಲಾ. ಹಳೆಯ ಕೋಟೆ. ಧ್ವಜ ಹಾರದ ಕೋಟೆ. ಹಾರಿಸಿದರೂ ಯಾರೂ ಸಂತೋಷ ಪಡದಿರುವಂಥ ಕೋಟೆ. ದೂರದ ಮುಲ್ತಾನ್, ಸಿಂಧ್, ಪಂಜಾಬ್ಗಳಿಂದ ಬಂದವರೆಲ್ಲಾ ಅಲ್ಲಿ ನೆರೆದು ಬೇರೆಯೇ ಆದ ಒಂದು ಭಾರತ ಅಲ್ಲಿ ನಿರ್ಮಾಣವಾಗಿತ್ತು. ಪುನರ್ವಸತಿ ಆಗುವವರೆಗೆ ಅವರಿಗೆಲ್ಲಾ ಅದೇ ಮನೆ. ಅದೇ ನೆಲೆ. ಅಂಥ ಒಂದು ದಿನ ಸಂಘಟನೆಯೊಂದು ನಿರ್ವಸಿತರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿತ್ತು. ಅಲ್ಲಿ ಹನ್ನೆರಡು ವರ್ಷದ ಬಾಲಕ ಜನರ ನಡುವೆ ನುಸುಳುತ್ತಿದ್ದ. ದೊಡ್ಡ ಕೈಗಳ ಮಧ್ಯೆ ಸಣ್ಣ ಕೈಗೆ ಪೊಟ್ಟಣಗಳು ಎಟುಕುತ್ತಿರಲಿಲ್ಲ. ದೊಡ್ಡ ಕೈಗಳು ಸಂತ್ರಪ್ತವಾದ ಮೇಲೆ ಹಸಿದಿದ್ದ ಆ ಬಾಲಕನಿಗೂ ಆಹಾರದ ಪೊಟ್ಟಣ ಸಿಕ್ಕಿತ್ತು.
ಆ ಬಾಲಕ ಮುಂದೆ ಫ್ಲೈಯಿಂಗ್ ಸಿಕ್ಖ್ ಎಂದೇ ಹೆಸರಾದ ಖ್ಯಾತ ಅಥ್ಲೆಟ್ ಮಿಲ್ಖಾ ಸಿಂಗ್. ಪುರಾನಾ ಕಿಲಾದಲ್ಲಿ ಆಹಾರದ ಪೊಟ್ಟಣವನ್ನು ವಿತರಿಸಿದ ಆ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರೆಸ್ಸೆಸ್ಸ್. ಆ ಬಾಲಕ ಫ್ಲೈಯಿಂಗ್ ಸಿಕ್ಖ್ ಆಗುವಲ್ಲಿ ಆ ಆಹಾರ ಪೊಟ್ಟಣದ ಪಾತ್ರವೂ ಇದೆ. ಯಾರೂ ಹೇಳದಿದ್ದರೂ, ಯಾರೂ ಬರೆಯದಿದ್ದರೂ, ಯಾರೂ ತೋರಿಸದಿದ್ದರೂ ಅದರ ಪಾತ್ರವನ್ನು, ಅಂದಿನ ಸತ್ಯವನ್ನು ಅಲ್ಲಗೆಳೆಯಲಾಗದು. ದೇಶವಿಭಜನೆಯ ಮಹಾದುರಂತದ ಒಂದು ಉಳಿಕೆ, ಒಂದು ಚಿಹ್ನೆ, ಒಂದು ಜೀವಂತ ಸ್ಮಾರಕವಾದವರು ಸರ್ದಾರ್ ಮಿಲ್ಖಾ ಸಿಂಗ್. ದೇಶ ವಿಭಜನೆಯ ಹೊತ್ತಲ್ಲಿ ಪಾಕಿಸ್ಥಾನದಿಂದ ಓಡಿ ಭಾರತಕ್ಕೆ ಬಂದವರಿಗೆಲ್ಲಾ ಲಾಲ್ ಕೃಷ್ಣ ಅಧ್ವಾನಿ, ಸರ್ದಾರ್ ಮನಮೋಹನ ಸಿಂಗರಾಗುವ ಅದೃಷ್ಟವಿರಲಿಲ್ಲ. ಅಂಥವರಲ್ಲಿ ಮಿಲ್ಖಾ ಸಿಂಗ್ರಂಥವರೇ ಹೆಚ್ಚಿದ್ದರೆಂಬುದು ಇತಿಹಾಸದ ವಾಸ್ತವ. ಅದು ತಿಳಿಯುವುದು ಮಿಲ್ಖಾ ಸಿಂಗನ The Race of my life ನಂಥ ಆತ್ಮ ಕಥೆಗಳಿಂದ.





