Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
ಹದಿಮೂರು ವರ್ಷದ ವಿಪುಲ್ ಕೌಲ್ ಜಮ್ಮು ಕಾಶ್ಮೀರ ರಾಜ್ಯದ ಲೋಕೋಪಯೋಗಿ ಇಲಾಖೆಯ ನಾಲ್ಕನೇ ವರ್ಗದ ನೌಕರರೊಬ್ಬರ ಮಗ. ಹಲವು ವ್ಯಾಧಿಗಳಿಂದ ಬಳಲುತ್ತಿರುವ ವಿಪುಲ ಅವನ ಕುಟುಂಬ ತನ್ನ ಭವಿಷ್ಯವನ್ನೇ ಬಲಿಕೊಟ್ಟು ಕೊಡಿಸುತ್ತಿರುವ ಚಿಕಿತ್ಸೆಯ ಕಾರಣದಿಂದಾಗಿ ಇಂದು ಬದುಕಿದ್ದಾನೆ. 2001ರಲ್ಲಿ ಆತನ ಕುಟುಂಬದವರು ಸಹಾಯಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು, ಅಂತೆಯೇ ಅವರಿಗೆ 20ಲಕ್ಷ ರೂ ಸಹಾಯ ಧನದ ಭರವಸೆಯನ್ನು ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ಸಹಾಯ ನಿಂತುಹೋಯಿತು. ತತ್ಕಾಲಕ್ಕೆ ಗೃಹ ಮಂತ್ರಾಲಯ ಮಧ್ಯಪ್ರವೇಶಿಸಿ ನೆರವನ್ನು ಮುಂದುವರಿಸುವಂತೆ ಸೂಚಿಸಿತು. ಇಷ್ಟಾದ ಮೇಲೂ ಅವರಿಗೆ ದೊರಕಿದ್ದು ದಿ 24 ಜುಲೈ 2007ರ ಒಂದು ಪತ್ರ, ಪತ್ರದ ಒಕ್ಕಣೆಯಲ್ಲಿ “ಸಂವಿಧಾನದ ವಿಧಿ 370ರ ಅನ್ವಯ ಜಮ್ಮು ಕಾಶ್ಮೀರ ಸರ್ಕಾರ ಗೃಹ ಮಂತ್ರಾಲಯದ ಸೂಚನೆಯನ್ನು ಪಾಲಿಸುವ ಬಾಧ್ಯತೆಯನ್ನು ಹೊಂದಿರುವುದಿಲ್ಲ.” ಎಂದು ಉಲ್ಲೇಖಿಸಲಾಗಿತ್ತು !
ಇದೊಂದು 370ನೇ ವಿಧಿಯ ದುರುಪಯೋಗದ ಪ್ರತ್ಯೇಕ ಪ್ರಕರಣವಲ್ಲ. 1950ರಲ್ಲಿ ಸಂವಿಧಾನ ಜಾರಿಗೆ ಬಂದಾಗಿನಿಂದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದ ಸ್ವಾರ್ಥ ಉದ್ಧೇಶಗಳ ಪೂರ್ತಿಗಾಗಿ 370ನೇ ವಿಧಿಯ ನಿಂದನೆ ಮತ್ತು ದುರುಪಯೋಗ ಮತ್ತೆ ಮತ್ತೆ ನಡೆಯಲ್ಪಟ್ಟಿದೆ.
ಆಗಿನ ತುರ್ತು ಸನ್ನಿವೇಶಕ್ಕೆ ಹಂಗಾಮಿ ಏರ್ಪಾಡಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲಾಗಿತ್ತು. ಜಮ್ಮು ಕಾಶ್ಮೀರದ ಮೇಲೆ ಆಕ್ರಮಣವೆಸಗಿದ್ದ ಪಾಕಿಸ್ತಾನ ರಾಜ್ಯದ ಭೂಭಾಗವನ್ನು ನ್ಯಾಯಬಾಹಿರವಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ವಿಷಯವನ್ನು ವಿಶ್ವಸಂಸ್ಥೆಗೆ ಒಯ್ಯಲಾಗಿ ವಿಶ್ವಸಂಸ್ಥೆಯ ಭದ್ರತಾ ಮಂಢಳಿಯು ಕೆಲವು ಪೂರ್ವಾನ್ವಯ ಷರತ್ತುಗಳೊಂದಿಗೆ ಜನಮತಗಣನೆಯನ್ನು ನಡೆಸುವ ಗೊತ್ತುವಳಿಯನ್ನು ಅಂಗೀಕರಿಸಿತು. ಆ ಷರತ್ತುಗಳೆಂದರೆ ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ತಾನು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ತಗೆದುಹಾಕಬೇಕು. ಹಾಗೆಯೇ ಭಾರತದ ಸಂವಿಧಾನವನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ನಿರಾಕರಿಸಲ್ಪಡುವುದು.