ಅದೆಷ್ಟು ಸುಂದರ ಹಾಸ್ಟೆಲ್ ಜೀವನ
– ತುಳಜಪ್ಪ ಬುಧೇರ
ಹಾಸ್ಟೆಲ್ ಹುಡಗ್ರೆಲ್ಲಾ ಕೆಟ್ಟವರು, ಟಪೋರಿಗಳು ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುತ್ತಿರುತ್ತಾರೆ. ಅವರಲ್ಲಿ ಜೀವನ ಸುಧಾರಿಸಿಕೊಳ್ಳಬೇಕೆಂಬುದರ ಬಗ್ಗೆ ಸಿರಿಯಸ್‍ನೆಸ್ಸೇ ಇರಲ್ಲಾ, ಅನ್ನೋ ಮಾತುಗಳು ಆಗಾಗ ಕೇಳುತ್ತಿರುತ್ತೇವೆ. ತಂದೆ ತಾಯಂದಿರಂತೂ ತಮ್ಮ ಮಕ್ಕಳಿಗೆ ಹಾಸ್ಟೆಲ್ ಹುಡುಗರ ಸಹವಾಸ ಮಾಡಬೇಡ ಎಂಬ ಸ್ಟ್ರಿಕ್ಟ್ ಆದೇಶ ಮಾಡಿರುವುದನ್ನು ನೋಡಿರುತ್ತೇವೆ. ಇದೇ ಪಾಠವನ್ನು ಚಿಕ್ಕವನಿದ್ದಾಗ ನನ್ನ ಗೆಳೆಯ ಮಾಡಿದ್ದ. ಅವನಿಗೆ ಯಾರು ಹೇಳಿದ್ದರೋ ಅವನೇ ಬಲ್ಲ.
ಪಕ್ಕದೂರಾದ ಮನ್ನಳ್ಳಿಯಲ್ಲಿ ಹೈಸ್ಕೂಲ್ ಇದ್ದಿದ್ದರಿಂದ ಪ್ರೌಢ ಶಿಕ್ಷಣ ಯಾವುದೇ ಚಿಂತೆಯಿಲ್ಲದೇ ಆರಾಮಾಗಿ ಮುಗಿಯಿತು. ಮುಂದೆ ಕಾಲೇಜ್‍ಗೆ ಸೇರಲೇಬೇಕಲ್ಲವೆ, ಬೀದರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆದಾಯಿತು. ದಿನಾಲು ಹೋಗಿ ಬರಬೇಕೆಂದರೆ ನಮ್ಮೂರಿಗೆ ಸರಿಯಾಗಿ ಬಸ್ಸುಗಳೇ ಇಲ್ಲ. ಇದ್ದರೂ ಅಮಾಸೆಗೋ ಹುಣ್ಣಿಮೆಗೋ ಎಂಬಂತೆ ಅಪರೂಪ. ಸಮಯದ ಪಾಲನೆಯಂತು ಅವರಪ್ಪನಾಣೆಗೂ ಇಲ್ಲವೇ ಇಲ್ಲ. ಹೀಗಾಗಿ ಕಾಲೇಗೆ ಹೋಗಿ ಬರೋದೆ ಒಂದ್ ದೊಡ್ಡ ಸಮಸ್ಯೆಯಾಯಿತು. ಆಗ ಅಪ್ಪನ ತಲೆಯಲ್ಲಿ ಬಂದ ಐಡಿಯಾನೆ ಹಾಸ್ಟೆಲ್. ಈ ಶಬ್ದ ಕಿವಿಗೆ ಬಿದ್ದೊಡನೆ ಕಾಲಿನಿಂದ ತಲೆಯವರೆಗೂ ಜುಮ್ ಎಂದು ರಕ್ತ ಸಂಚಾರವೇ ನಿಂತಂತಾಗಿ ನಿಸ್ತೇಜನಾಗಿ ನಿಂತಲ್ಲೇ ಕುಸಿದು ಬಿಟ್ಟೆ. ಆದರೆ ಅನ್ಯ ಮಾರ್ಗವೇ ಇರಲಿಲ್ಲ. ಅಲ್ಲಿಗೆ ಹೋಗಲೇಬೇಕಾಯಿತು.