ಭಗವದ್ಗೀತೆಯ ನೈತಿಕ ಜಿಜ್ಞಾಸೆ
– ರಮಾನಂದ ಐನಕೈ
ಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಂಥ ವಿವಾದಕ್ಕೆ ಎಡೆಯಾಗುತ್ತಲಿದೆ. ಭಗವದ್ಗೀತೆಯನ್ನು ಟೀಕಿಸುವ ಬಹುತೇಕ ಜನ ಅದನ್ನು ಓದಿಯೇ ಇಲ್ಲ. ಇನ್ನೂ ಕೆಲವು ಓದಿದವರಿಗೆ ಅದು ಅರ್ಥವೇ ಆಗಿಲ್ಲ. ಅದನ್ನು ಓದಿ ಅರ್ಥಮಾಡಿಕೊಂಡವರಿಗೆ ಈ ವಿವಾದ ಎಬ್ಬಿಸಿದವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಇಷ್ಟೆಲ್ಲ ಗೊಂದಲವಾಗಲು ಮುಖ್ಯ ಕಾರಣವೆಂದರೆ ನಾವು ಭಗವದ್ಗೀತೆಯನ್ನು ಗೃಹಿಸುತ್ತಿರುವ ರೀತಿ. ಭಗವದ್ಗೀತೆಯನ್ನುವುದು ಒಂದು ಕತೆಯಲ್ಲ. ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ. ಅದು ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ.
ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂತು. ಏಕೆಂದರೆ ಪಾಶ್ಚಾತ್ಯರು ಪ್ರೊಟೆಸ್ಟಾಂಟ್ ವಿಚಾರಧಾರೆಯ ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆ ರಿಲಿಜನ್ನಿನ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು. ಇದು ಇಂದು ಆಧುನಿಕ ಭಾರತದಲ್ಲಿ ಭಗವದ್ಗೀತೆಯ ಕುರಿತಾಗಿ ಅಖಾಡವನ್ನೇ ನಿರ್ಮಾಣ ಮಾಡುತ್ತಲಿದೆ. ಹಾಗಾಗಿ ಭಗವದ್ಗೀತೆಯಲ್ಲಿ ಏನಿದೆ ಮತ್ತು ಅದು ಏನು ಹೇಳುತ್ತಲಿದೆ ಎಂಬುದನ್ನು ಈ ಶತಮಾನದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.