ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು
– ರಾಘವೇಂದ್ರ ಅಡಿಗ ಎಚ್ಚೆನ್
ಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ ಪ್ರಪಂಚವನ್ನು ತೊರೆದು ಶ್ರೀಹರಿಯತ್ತ ನಡೆದಿದ್ದಾರೆ. ಕೀರ್ತನಾ ಕಲಾಪರಿಷತ್ ಗೌರವಾಧ್ಯಕ್ಷರಾಗಿದ್ದ ಸಂತ ಭದ್ರಗಿರಿ ಅಚ್ಯುತದಾಸರು ತಮ್ಮ ವಾಕ್ ಸಾಮರ್ಥ್ಯ, ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದರು. ಕನ್ನಡ, ಮರಾಠಿ, ಕೊಂಕಣಿ, ತುಳು ಹೀಗೆ ನಾನಾ ಭಾಷೆಗಳಾಲ್ಲಿ ಪ್ರೌಢಿಮೆ ಸಾಧಿಸಿದ್ದ ಸಂತ ಅಚ್ಯುತದಾಸರು ತಾವು ಹರಿವಂಶ, ಭಾಗವತ, ರಾಮಾಯಣ, ಮಹಾಭಾರತದ ತಾತ್ವಿಕ ಅಂಶಗಳನ್ನು ಸಾಮಾನ್ಯರ ಮನಮುಟ್ಟುವಂತೆ ವಿವರಿಸಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು.
ಇಂದಿನ ಆಧುನಿಕ ಯುಗದಲ್ಲಿ ನಶಿಸುತ್ತಿರುವ ಸಂಕೀರ್ತನಾ ಕಲೆಯನ್ನು ಜನಪ್ರಿಯಗೊಳಿಸುವುದರಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಅಚ್ಯುತದಾಸರು ತಮ್ಮ ಸಹೋದರ ದಿ. ಭದ್ರಗಿರಿ ಕೇಶವದಾಸರ ಜತೆಗೂಡಿ ಅನೇಕ ಹರಿಕಥಾ ಸಮ್ಮೇಳನಗಳನ್ನು ನಡೆಸಿದ್ದರು. ಅಣ್ಣ-ತಮ್ಮಂದಿರಿಬ್ಬರೂ ತಮ್ಮ ಸ್ವ ಪ್ರತಿಭೆಯಿಂದ ‘ಸಂತ’ ಪದವಿಗೆ ಭಾಜನರಾಗಿದ್ದರು. ಸಂತ ಭದ್ರಗಿರಿ ಕೇಶವ ದಾಸರು ವಿದೇಶಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಸಂಕೀರ್ತನೆಗಳನ್ನು ನಡೆಸಿ ಪ್ರಸಿದ್ದರಾಗಿದ್ದರೆ,ಸಂತ ಭದ್ರಗಿರಿ ಅಚ್ಯುತ ದಾಸರು ಭರತ ಖಂಡವ್ಯಾಪಿ ತಮ್ಮ ಹರಿಕಥಾ ಶ್ರವಣ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗಳಾಲ್ಲಿ ಮನೆಮಾತಾಗಿದ್ದರು.
ವ್ಯಕ್ತಿ ಪರಿಚಯ :
ಉಡುಪಿಯ ಸಮೀಪದ ಬ್ರಹ್ಮಾವರದ ಬಳಿಯಲ್ಲಿನ ಬೈಕಾಡಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ವೆಂಕಟರಮಣ ಪೈ ಹಾಗೂ ರುಕ್ಮಿಣಿಬಾಯಿ ದಂಪತಿಗಳಿಗೆ ನಾಲ್ಕನೆ ಮಗನಾಗಿ ಜನಿಸಿದ (1931 ಮಾರ್ಚ್ 31)ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿದ್ದವರು. ಇದಕ್ಕೆ ಅವರು ಹುಟ್ತಿದ ಮನೆಯ ಪರಿಸರವೂ ಪೋಷಕವಾಗಿತ್ತು. ತ್ಂದೆ ವೆಂಕಟರಮಣಾ ಪೈಗಳು ಯಕ್ಷಗಾನದ ಬಗ್ಗೆ ಒಲವುಳ್ಳವರಾಗಿದ್ದರೆ ತಾಯಿ ರುಕ್ಮಿಣಿಬಾಯಿ ತಾವು ದೇವರ ಭಜನೆಗಳನ್ನು ಶುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು.
ಮತ್ತಷ್ಟು ಓದು
ತೀರಾ ತುಘಲಕ್ ದರ್ಬಾರ್ ಬೇಡ್ರೀ ಸಿಧ್ಧರಾಮಣ್ಣ…
– ಕೆ.ಎಸ್ ರಾಘವೇಂದ್ರ ನಾವಡ
ತೀರಾ ಬೇಸರಗೊ೦ಡು ರಾಜ್ಯದ ಮುಖ್ಯ ಮ೦ತ್ರಿಗಳಿಗೆ ಈ ಮಾತನ್ನು ಹೇಳಿತಿದ್ದೇನೆ ! ಸಮಾಜವಾದಿ ಹಿನ್ನೆಲೆ.. ಹೋರಾಟದ ಹಿನ್ನೆಲೆ.. ಎಲ್ಲದ್ದಕ್ಕಿ೦ತಲೂ ಕರ್ನಾಟಕದ ಗ್ರಾಮೀಣ ಸೊಗಡಿನಿ೦ದ ಮೇಲೆದ್ದು ಬ೦ದವರು ಸಿಧ್ಧರಾಮಯ್ಯ. ಆದರೆ ಹಿ೦ದಿನ ಸಮಾಜವಾದಿ ಹಿನ್ನೆಲೆಗಳಿ೦ದ ಬ೦ದ ಮುಖ್ಯಮ೦ತ್ರಿಗಳಿಗೂ (ಮಾನ್ಯ ಹೆಗಡೇಜಿ, ಬ೦ಗಾರಪ್ಪನವರು, ಜೆ.ಹೆಚ್ ಪಟೇಲರು)ನಮ್ಮ ಸಿಧ್ಧರಾಮಯ್ಯನವರಿಗೂ ಅಜಗಜಾ೦ತರ ವ್ಯತ್ಯಾಸ…ಇವರು ಇದೇ ಥರ ಮು೦ದುವರಿದಲ್ಲಿ ಮು೦ಬರುವ ಲೋಕಸಭಾ ಚುನಾವಣೆಯಲ್ಲಿ ಕಾ೦ಗ್ರೆಸ್ ಕರ್ನಾಟಕದಲ್ಲಿ ನೆಲಕಚ್ಚುವುದ೦ತೂ ಖಚಿತ!
ಪಾಪ.. ಏನೂ ಮಾಡೋದಕ್ಕಾಗೋದಿಲ್ಲ.. ನಮಗೆ ಸಿಧ್ಧರಾಮಯ್ಯನವರ ಅಸಹಾಯಕತೆಯ ಅರಿವು ಇದೆ.ಆದರೆ ಕೈಯಲ್ಲಿ ಆಗದಿದ್ದವರ ಪರಿಸ್ಥಿತಿ ಏನೂ ಸಿಧ್ಧರಾಮಯ್ಯನವರದಲ್ಲ! ಹಾಗ೦ತ ತೀರಾ ಸಾರಾಸಗಟಾಗಿ ತಳ್ಳಿ ಹಾಕುವ೦ತಹ ವ್ಯಕ್ತಿತ್ವವೂ ಸಿಧ್ಧರಾಮಯ್ಯನವರದಲ್ಲ.ಆದರೆ ಒ೦ದ೦ತೂ ಖಚಿತ! ಏನೋ ಆಗಿದೆ… ಒ೦ದರ ಮೇಲೊ೦ದು ಎಡವಟ್ಟುಗಳನ್ನೇ ಸೃಷ್ಟಿಸಿಕೊಳ್ಳುತ್ತಿರುವ ಸಿಧ್ಧರಾಮಯ್ಯನವರು ಕೊನೇ ಪಕ್ಷ ತಮ್ಮ ನಿರ್ಧಾರಗಳಿಗೆ ಜೋತು ಬೀಳುವ೦ತಹ ಯಡಿಯೂರಪ್ಪನವರ ಛಾತಿಯನ್ನೂ ತೋರಿಸುತ್ತಿಲ್ಲ!
ಆರ೦ಭದಲ್ಲೇನೋ ಶೂರತನ ಮೆರೆದ ಅಶ್ವವೀರ.. ಕುದುರೆಗೆ ಸುಸ್ತಾದ೦ತೆ ತಾನೂ ನಡೆಯುತ್ತ ಸಾಗಿದ.. ಎನ್ನುವ ಹಳೇ ಮಾತೀಗ ಸಿಧ್ಧರಾಮಯ್ಯನವರ ವಿಚಾರದಲ್ಲಿ ಖಚಿತವಾಗುತ್ತಿದೆ! ಚುನಾವಣಾ ಪ್ರಣಾಳಿಕೆಯ ಅರ್ಧದಷ್ಟು ಅ೦ಶಗಳನ್ನು ಅನುಷ್ಠಾನಕ್ಕೆ ತರುವುದು ಹೆಚ್ಚುಗಾರಿಕೆಯೇ ಆದರೂ ಕೊಟ್ಟ ಮಾತುಗಳಾದರೂ ಎ೦ಥಾದ್ದಾಗಿದ್ದವು ಎನ್ನುವುದು ಬಹಳ ಮುಖ್ಯ!
ಯಾವುದು ನಂಬಿಕೆ?ಯಾವುದು ಮೂಢನಂಬಿಕೆ?
-ಡಾ.ಕಿರಣ್ ಎಂ ಗಾಜನೂರು
ಕರ್ನಾಟಕ ಸರ್ಕಾರ ಮೂಢನಂಬಿಕೆಗಳ ಕುರಿತು ವಿಧೇಯಕ ಮಂಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಕ್ರಮ. ಏಕೆಂದರೆ ಭಾರತ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಸೋ-ಕಾಲ್ಡ್ ನಂಬಿಕೆಗಳ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.ಅದರಲ್ಲಿಯೂ ಯಾವುದೇ ಜನ-ಚಳುವಳಿಯಿಲ್ಲದೆ,ನಮ್ಮ ಘನಸರ್ಕಾರ ಸ್ವತಃ ಈ ನಿರ್ಧಾರಕ್ಕೆ ಮುಂದಾಗಿರುವುದು ಪ್ರಶಂಸನೀಯ.ಪಕ್ಕದ ಮಹಾರಾಷ್ಟ್ರದಲ್ಲಿ ಈ ಮಾದರಿಯ ಕ್ರಮವನ್ನು ಅಲ್ಲಿನ ಸರ್ಕಾರ ತೆಗೆದುಕೊಳ್ಳಬೇಕಾದರೆ,ಒಂದು ದೊಡ್ಡ ಜನಚಳುವಳಿಯೆ ನಡೆಯಬೇಕಾಯಿತು ಮತ್ತು ಈ ಕುರಿತು ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಹತ್ಯೆಯು ಆಯಿತು.ಈ ನೆಲೆಯಲ್ಲಿ ಕರ್ನಾಟಕ ಸರ್ಕಾರ ಜನಪರವಾಗಿದೆ ಎಂಬುದನ್ನು ನಾವು ಒಪ್ಪಬಹುದು.ಆದರೆ, ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಈ ಕ್ರಮ ಕೇವಲ ಪ್ರಗತಿಪರ ಮತ್ತು ಕಾನೂನಾತ್ಮಕ ಅಂಶವಾಗಿರದೆ ಸಮುದಾಯ ಸತ್ವದ ಪ್ರಶ್ನೆಯು ಆಗಿರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.ಅದೂ ಅಲ್ಲದೆ ಸದರಿ ವಿಧೇಯಕದ ಕುರಿತು ನಡೆಯುತ್ತಿರುವ ಚರ್ಚೆ ಪರ-ವಿರೋಧವೆಂಬ ಸಂಕುಚಿತ ಅರ್ಥದಲ್ಲಿ ನಡೆಯುತ್ತಿದೆ.ಒಂದು ಸಂಶೋಧನೆ ಅಥವಾ ಚರ್ಚೆಯಲ್ಲಿ ಸಂಶೋಧನೆ/ಚರ್ಚೆಗೆ ಒಳಪಡಿಸಬೇಕಾದ ವಿದ್ಯಾಮಾನದ ಕುರಿತು ಸಂಶೋಧಕನಿಗೆ ಪರ ಅಥವಾ ವಿರೋಧ ಅಭಿಪ್ರಾಯಗಳು ಇರಬೇಕು ಎಂದು ನೀರಿಕ್ಷಿಸುವುದೇ ಸಂಶೋಧನೆ/ಚರ್ಚೆಯ ಲಕ್ಷಣವಲ್ಲ. ಉದಾಹರಣೆಗೆ : ಕರ್ನಾಟಕದ ಮೂಢನಂಬಿಕೆ ವಿರೋಧಿ ವಿಧೇಯಕ ಕುರಿತು ನೀವು ಇದರ ಪರವೂ ವಿರೋಧವೂ ಎಂದು ಕೇಳಿದರೆ ನಾನು ನನಗೆ ಗೊತ್ತಿಲ್ಲ ಎಂದಷ್ಟೆ ಉತ್ತರಿಸಬಲ್ಲೆ. ಏಕೆಂದರೆ ನಿಜಕ್ಕೂ ನನಗೆ ಅದು ಸರಿಯೋ/ತಪ್ಪೋ ಗೊತ್ತಿಲ್ಲ ಅಥವಾ ಪ್ರಸ್ತುತ ಚರ್ಚೆ ಮತ್ತು ಮಾಹಿತಿಯ ಆಧಾರದಲ್ಲಿ ಒಂದು ನಿರ್ಣಯಕ್ಕೆ ಬರಲೂ ಸಾಧ್ಯವಾಗುತ್ತಿಲ್ಲ. ಆದರೆ,ಒಬ್ಬ ಸಮಾಜ ಸಂಶೋಧಕನಾಗಿ ನನ್ನ ಸಮಸ್ಯೆ ಇರುವುದು ಪರವಾಗಿ ಮತ್ತು ವಿರೋಧವಾಗಿ ಮಾತನಾಡುತ್ತಿರುವ ಎರಡೂ ಗುಂಪಿನ ವಾದ ಆ ವಿದ್ಯಮಾನವನ್ನು ಸಮರ್ಥಿಸಲು ಅಥವಾ ವಿರೋಧಿಸಲು ಶಕ್ತವಾಗಿಲ್ಲ ಮತ್ತು ಆದನ್ನು ಆಚರಿಸುತ್ತಿರುವ ಜನರಿಗೆ ಅರ್ಥವಾಗುತ್ತಿಲ್ಲ ಎಂಬುದು.
ಆಚರಣೆ, ಸಂಪ್ರದಾಯ,ನಂಬಿಕೆ ಮತ್ತು ಕಾಕತಾಳಿಯಗಳು
-ಮು.ಅ ಶ್ರೀರಂಗ,ಬೆಂಗಳೂರು
ಒಬ್ಬ ಬ್ರಾಹ್ಮಣನ ಮನೆಯಲ್ಲಿ ಬೆಕ್ಕೊಂದು ಓಡಾಡಿಕೊಂಡಿತ್ತು. ಹಳೆಯ ಕಾಲದ ಆ ಮನೆಯಲ್ಲಿದ್ದ ಇಲಿ,ಹೆಗ್ಗಣಗಳನ್ನು ತಿಂದುಕೊಂಡು ಅವುಗಳ ಕಾಟ ತಪ್ಪಿಸ್ಸಿದ್ದರಿಂದ ಸಹಜವಾಗಿ ಆ ಬೆಕ್ಕನ್ನು ಕಂಡರೆ ಮನೆಮಂದಿಗೆಲ್ಲಾ ಅಕ್ಕರೆಯಿತ್ತು.ಆ ಕುಟುಂಬದ ಯಜಮಾನನ ತಂದೆಯದೋ ತಾಯಿಯದೋ ತಿತಿ ಮಾಡಬೇಕಾದ ದಿನ ಬೆಕ್ಕು ಮನೆಯೊಳಗೆಲ್ಲಾ ಓಡಾಡಿ ಮೈಲಿಗೆ ಮಾಡುವುದು ಸರಿಯಲ್ಲ ಎಂದು ಅದನ್ನು ಮನೆಯ ಕಂಬವೊಂದಕ್ಕೆ ಕಟ್ಟಿಹಾಕಿದರು. ಆ ದಿನದ ಕೆಲಸ, ಊಟ ಎಲ್ಲಾ ಮುಗಿದ ನಂತರ ಆ ಬೆಕ್ಕಿಗೆ ಬಂಧನದಿಂದ ಬಿಡುಗಡೆಯಾಯ್ತು. ಕಾಲ ಕಳೆದಂತೆ ಆ ಮನೆಯ ಯಜಮಾನ ತೀರಿಕೊಂಡ. ಅವನ ಮಕ್ಕಳು ಅಪ್ಪನ ತಿತಿ ಮಾಡುವ ಸಮಯ ಬಂತು. ಆಗ ಮನೆಯಲ್ಲಿ ಬೆಕ್ಕು ಇರಲಿಲ್ಲ. ಹೀಗಾಗಿ ಅಕ್ಕ ಪಕ್ಕದ ಮನೆಯವರಿಂದ ಕಾಡಿ ಬೇಡಿ ಬೆಕ್ಕೊಂದನ್ನು ತಂದು ಕಂಬಕ್ಕೆ ಕಟ್ಟಿದರು. ಅಂದಿನ ಕೆಲಸ ಮುಗಿದ ನಂತರ ವಾಪಸ್ಸು ಕೊಟ್ಟರು. ಇದು ಹೀಗೆ ಪ್ರತಿ ಸಾರಿ ತಿತಿ ಮಾಡುವಾಗಲೂ ಮುಂದುವರಿಯಿತು. ಇದೊಂದು ಕಾಲ್ಪನಿಕ ಕಥೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆ ನೋಡಿದರೆ ಐತಿಹಾಸಿಕವಾದುದನ್ನು ಬಿಟ್ಟರೆ ನಾವು ಓದುವ ಕತೆ ಕಾದಂಬರಿಗಳೆಲ್ಲ ಕಾಲ್ಪನಿಕವಾದವುಗಳೇ. ಅದರ ಬಗ್ಗೆ ಚರ್ಚೆ ಈಗ ಬೇಡ. ಏಕೆಂದರೆ ಈ ಬರಹ ಸಾಹಿತ್ಯಕ್ಕೆ ಸಂಬಧಿಸಿದ್ದಲ್ಲ. ಈ ಬೆಕ್ಕಿನ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಒಂದಿದೆ. ನಾವುಗಳು ಕೆಲವೊಂದು ಆಚರಣೆಗಳಿಗೆ ಇದು ಏಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಮಕ್ಕಳೇನಾದರು ಕೇಳಿದರೆ “ನೀನೊಬ್ಬ ಅಧಿಕ ಪ್ರಸಂಗಿ, ತಲೆಹರಟೆ”ಎಂದು ಬೈದು ಅವರನ್ನು ಸುಮ್ಮನಾಗಿಸುತ್ತೇವೆ. ತಂದೆ ತಾಯಿಗೆ ಅಜ್ಜಿ, ತಾತನಿಗೆ ಹೆದರಿದ ಆ ಮಕ್ಕಳು ಸುಮ್ಮನಾಗುತ್ತವೆ. ಅವರು ದೊಡ್ಡವರಾದ ಮೇಲೆ ಹಿಂದಿನವರು ತಮಗೆ ಮಾಡಿದ್ದನ್ನೇ ತಮ್ಮ ಮಕ್ಕಳಿಗೂ ಮಾಡುತ್ತಾರೆ. ಈ ಕೊಂಡಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾಹೋಗಿ ಆಚರಣೆಗಳಾಗಿ,ಸಂಪ್ರದಾಯಗಳಾಗಿ ಮುಂದುವರಿಯುತ್ತವೆ.
ಮತ್ತಷ್ಟು ಓದು
ನೋಡುವ ‘ದೃಷ್ಟಿ’ ಬದಲಿಸಬಲ್ಲ ‘ನೈನ್ ಲೈಫ್ಸ್’
– ಡಾ.ಅಶೋಕ್ ಕೆ ಆರ್
ಪ್ರವಾಸಕಥನವೆಂದರೆ ಭೇಟಿ ನೀಡಿದ ತಾಣಗಳ ಮಾಹಿತಿ, ಆ ಜಾಗಕ್ಕೆ ಹೋಗಲಿರುವ ಸಾರಿಗೆ ವ್ಯವಸ್ಥೆಯ ಬಗೆಗಿನ ಮಾಹಿತಿ, ಅಲ್ಲಿ ಸಿಗುವ ವಿಧವಿಧದ ಭೋಜನಗಳ ಮಾಹಿತಿ, ಅಬ್ಬಬ್ಬಾ ಎಂದರೆ ಆ ಸ್ಥಳದ ಪೂರ್ವೇತಿಹಾಸದ ಮಾಹಿತಿ – ಇವು ಸಿದ್ಧರೂಪದ ಬಹುತೇಕ ಪ್ರವಾಸಕಥನಗಳ ಹೂರಣ. ಈ ಸಿದ್ಧ ರೂಪವನ್ನು ಹೊರತುಪಡಿಸಿದ ಪ್ರವಾಸಕಥನಗಳೂ ಉಂಟು, ಅವು ಆತ್ಮರತಿಯೊಡನೆ ತಮ್ಮದೇ ಸ್ವಂತ ಸಂಗತಿಗಳನ್ನು, ಸಣ್ಣಪುಟ್ಟ ಸಮಸ್ಯೆಗಳನ್ನು ವೈಭವೀಕರಿಸಿಕೊಂಡು ಬರೆಯಲ್ಪಟ್ಟ ಹೆಸರಿಗಷ್ಟೇ ಪ್ರವಾಸಕಥನವೆನ್ನಿಸಿಕೊಳ್ಳುವ ಬರವಣಿಗೆಗಳು. ಇವೆಲ್ಲ ರೀತಿಯ ಪ್ರವಾಸಕಥನಗಳು ನಾಚುವಂತೆ ಇರುವ ಪುಸ್ತಕ “ನೈನ್ ಲೈಫ್ಸ್” (Nine Lives). ಪ್ರಕೃತಿ ಸೌಂದರ್ಯದ ವರ್ಣನೆ, ಸ್ಥಳಪುರಾಣದ ಜೊತೆಜೊತೆಗೆ ಆಯ್ದ ಒಂಭತ್ತು ಜನರ ಮತ್ತವರ ಸುತ್ತಲಿನವರ ಕಥೆಯಿದೆ. ಪ್ರಾಚೀನ ಭಾರತದಿಂದ ಇಂದಿನವರೆಗೂ ಸಾಗಿ ಬಂದಿರುವ ‘ವೃತ್ತಿ’ಯಲ್ಲಿ ಕಾಲ ಸರಿದಂತೆ ಆದ ಬದಲಾವಣೆಗಳಿವೆ. ತನ್ನ ಇಪ್ಪತ್ತೈದು ವರುಷಗಳ ಭಾರತದ ಪ್ರವಾಸದಲ್ಲಿ ಭಾರತದ ಸಾಂಸ್ಕೃತಿಕ – ಬಹಿಷ್ಕೃತ ಲೋಕದರ್ಶನ ಮಾಡಿಸುವವನು ವಿಲಿಯಂ ಡ್ಯಾಲ್ರಿಂಪಲ್ (William Dalrymple) ಎಂಬ ಸ್ಕಾಟಿಷ್ ಲೇಖಕ! ಭಾರತೀಯನಾಗದೇ ಹೋದ ಕಾರಣಕ್ಕೆ ಇಂಥದೊಂದು ಒಳನೋಟ ಈ ಲೇಖಕನಿಗೆ ಲಭ್ಯವಾಯಿತಾ? ಒಳಗಿದ್ದು ನೋಡುವವರ ಭಾವಪರಿಧಿಗೆ ದಕ್ಕದ ವಿಷಯಗಳು ಹೊರಗಿನಿಂದ ನೋಡುವವರಿಗೆ ದಕ್ಕುತ್ತದೆ.
ಜೈನ ಧರ್ಮದ ಸನ್ಯಾಸಿನಿ, ಕಣ್ಣೂರಿನ ನೃತ್ಯಪಟು, ಕರ್ನಾಟಕದ ದೇವದಾಸಿಯರು, ಸಾವಿರಾರು ಪುಟದ ಗೀತೆಗಳನ್ನು ಹಾಡುವ ಅನಕ್ಷರಸ್ಥರು, ಸೂಫಿ ಪಂತದ ಹೆಂಗಸು, ಟಿಬೆಟ್ಟಿನಿಂದ ಭಾರತಕ್ಕೆ ವಲಸೆ ಬಂದ ಬೌದ್ಧ ಬಿಕ್ಕು, ಚೋಳರ ಕಾಲದ ಶೈಲಿಯ ಕೆತ್ತುವ ಶಿಲ್ಪಿ, ಮಾಟಗಾತಿ, ಕುರುಡು ಹಾಡುಗಾರ – ಇವಿಷ್ಟು ನೈನ್ ಲೈಫ್ಸ್ ಪುಸ್ತಕದಲ್ಲಿ ಲೇಖಕ ನಮ್ಮೊಡನೆ ಮುಖಾಮುಖಿಯಾಗಿಸುವ ವ್ಯಕ್ತಿಗಳು. ಓದುಗರೊಡನೆ ಮುಖಾಮುಖಿಯಾಗುವುದು ಕೇವಲ ವ್ಯಕ್ತಿ ಮಾತ್ರವಲ್ಲ; ಆ ವ್ಯಕ್ತಿಯ ವ್ಯಕ್ತಿತ್ವ, ಅವರ ಮನೆಯವರ ತಲ್ಲಣ – ಸಂತಸ, ಆ ವ್ಯಕ್ತಿಯ ಸಾಮಾಜಿಕ ಆರ್ಥಿಕ ಸ್ಥಿತಿ – ಸಮಸ್ಯೆ, ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸುತ್ತೇನೆಂದು ಹೇಳುವ ಲೇಖಕ ಆ ವ್ಯಕ್ತಿಯ ಮೂಲಕ ಒಂದಿಡೀ ಪ್ರಾದೇಶಿಕತೆಯ ವಿವರವನ್ನು ಧರ್ಮ – ಧರ್ಮಗಳ ನಡುವಿನ ತಿಕ್ಕಾಟ – ಸಾಮರಸ್ಯಗಳನ್ನು ಸುಲಲಿತ ಓದಿನ ಮೂಲಕ ಮನಸ್ಸಿಗೆ ತಲುಪಿಸುತ್ತಾರೆ. ಹೊರಗಣನವನಾದ ಕಾರಣಕ್ಕೋ ಏನೋ ಯಾವೊಂದು ಪೂರ್ವಾಗ್ರಹವೂ ಇಲ್ಲದೆ ಕಂಡದ್ದನ್ನು ಕೇಳಿದ್ದನ್ನು ಯಥಾವತ್ತಾಗಿ ಬರೆದಿರುವ ಪ್ರಯತ್ನವನ್ನೂ ಗಮನಿಸಬಹುದು.
ಧರ್ಮವನ್ನು ಅಫೀಮು ಎಂದವರಿಂದ ಮತ್ತೇನು ನಿರೀಕ್ಷಿಸಲಾದೀತು?
– ನರೇಂದ್ರ ಕುಮಾರ ಎಸ್.ಎಸ್
ತೆಹಲ್ಕಾ’ದ ತರುಣ್ ತೇಜಪಾಲ್ ಅವರು ನಡೆಸಿರುವರೆನ್ನಲಾದ ಲೈಂಗಿಕ ಹಲ್ಲೆ ಪ್ರಕರಣ, ಮಾಧ್ಯಮದ ಮುಖವಾಡವನ್ನು ಕಿತ್ತೆಸೆದಿದೆ. ಇದೇ ’ತೆಹಲ್ಕಾ’ವು, ಆಗಾಗ “ಕುಟುಕು ಕಾರ್ಯಾಚರಣೆ”ಯ ಮೂಲಕ ರಾಜಕಾರಣಿಗಳನ್ನು ಸಿಕ್ಕಿಹಾಕಿಸುತ್ತಿತ್ತು. ಒಂದು ಗುಪ್ತ ಕ್ಯಾಮೆರಾ ಜೊತೆಗೆ ತೆರಳುವ ಈ “ಕುಟುಕು ಕಾರ್ಯಾಚರಣೆ ಪಡೆ”, ರಾಜಕಾರಣಿಗಳಿಗೆ ತಿಳಿಯದಂತೆ ಬಲೆ ಬೀಸುತ್ತಿತ್ತು. ಅವರಿಗೆ ಆಮಿಷವನ್ನು ತೋರಿಸಿ, ಆಗ ನಡೆಯುವ ಪೂರ್ಣ ಸಂಭಾಷಣೆಯನ್ನು ಕ್ಯಾಮೆರಾ ಮೂಲಕ ಸೆರೆಹಿಡಿದು, ಆ ನಂತರ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿತ್ತು. ಆ ವಿಡಿಯೋ ನೋಡಿದ ಜನ, ಅದರಲ್ಲಿರುವ ರಾಜಕಾರಣಿ ಭ್ರಷ್ಟಾಚಾರಿಯೇ ಎಂದು ನಿರ್ಧಾರಕ್ಕೆ ಬರುವ ರೀತಿಯಲ್ಲಿ ಅದನ್ನು ಪ್ರಸ್ತುತ ಪಡಿಸಲಾಗುತ್ತಿತ್ತು. ನ್ಯಾಯಾಂಗ ವಿಚಾರಣೆಯ ಬದಲು ಮಾಧ್ಯಮಗಳೇ ವಿಚಾರಣೆ ನಡೆಸಿ, ರಾಜಕಾರಣಿಯನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿಬಿಡುತ್ತಿತ್ತು.
ವ್ಯಕ್ತಿಯೊಬ್ಬ ಭ್ರಷ್ಟಾಚಾರಿ ಅಲ್ಲದಿದ್ದರೂ, ಆಮಿಷಕ್ಕೊಳಗಾಗಿ ಕೆಲವು ತಪ್ಪುಗಳನ್ನು ಮಾಡುವನು. ಉದಾಹರಣೆಗೆ, ಮನೆಗೆಲಸಕ್ಕೆ ಬರುವ ಹುಡುಗ/ಹುಡುಗಿ ಕಳ್ಳರಾಗಿರುವುದಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡಿ ಸಂಪಾದಿಸುವ ಉದ್ದೇಶ ಹೊಂದಿಯೇ ಕೆಲಸಕ್ಕೆ ಬಂದಿರುತ್ತಾರೆ. ಆದರೆ, ಅವರು ಕೆಲಸ ಮಾಡುವ ಮನೆಯಲ್ಲಿ, ಈ ಹುಡುಗ/ಹುಡುಗಿಯ ಕಣ್ಣಿಗೆ ಕಾಣಿಸುವಂತೆ ಹಣವನ್ನೋ ಇಲ್ಲವೇ ಆಭರಣಗಳನ್ನೋ ಇಟ್ಟಿದ್ದರೆ, ಅವರು ಆಮಿಷಕ್ಕೆ ಒಳಗಾಗಿಬಿಡುತ್ತಾರೆ. ಅಲ್ಲಿ ಇಟ್ಟಿರುವ ಹಣ/ಆಭರಣವನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದಾಗ, ಅದನ್ನು ತೆಗೆದುಕೊಳ್ಳೋಣ ಎಂದೆನ್ನಿಸಿಬಿಡಬಹುದು. ಆಮಿಷದಿಂದ ಉಂಟಾದ ಆಸೆಯಿಂದ ತಪ್ಪಿಸಿಕೊಳ್ಳಲಾಗದೆ “ಕಳ್ಳತನ” ನಡೆದುಬಿಡುತ್ತದೆ. ಇಲ್ಲಿ ಕಳ್ಳತನ ಮಾಡಿದ ಹುಡುಗ/ಹುಡುಗಿಯದು ಎಷ್ಟು ತಪ್ಪೋ, ಅಷ್ಟೇ ತಪ್ಪು ಆ ಹಣ/ಆಭರಣಗಳನ್ನು ಇವರ ಕಣ್ಣಿಗೆ ಕಾಣುವಂತೆ ಇಟ್ಟು ಆಮಿಷ ಕೊಟ್ಟವರದೂ ಆಗಿರುತ್ತದೆ, ಅಲ್ಲವೆ?
ಕನ್ನಡ ಚಿತ್ರರ೦ಗದ ಬಗೆಗೊ೦ದಿಷ್ಟು…
– ಗುರುರಾಜ ಕೊಡ್ಕಣಿ
ಮೊನ್ನೆಯಷ್ಟೇ ಕನ್ನಡದ ಹೊಸ ಚಿತ್ರವೊ೦ದು ಬಿಡುಗಡೆಯಾಗಿದೆ.ಹೆಸರು ’ಖತರ್ನಾಕ್’.ಇದು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರ.’ಉಮೇಶ್ ರೆಡ್ಡಿಯ ವಿಕೃತಿಗಳು ಬೆಳ್ಳಿತೆರೆಗೆ ’ಎ೦ದು ಚಿತ್ರತ೦ಡದವರು ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳನೊಮ್ಮೆ ಗಮನಿಸಿ.’ಖತರ್ನಾಕ್’,’ಉಮೇಶ’,’ದ೦ಡುಪಾಳ್ಯ’,’ಸಿಲ್ಕ್:ಸಕತ ಹಾಟ್ ಮಗಾ’ ಇತ್ಯಾದಿ ಇತ್ಯಾದಿ.ಮೊದಲೆರಡು ಚಿತ್ರಗಳು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರಗಳಾದರೆ,ದ೦ಡು ಪಾಳ್ಯದ ಹ೦ತಕರ ಕತೆಯನ್ನಾಧರಿಸಿ ’ದ೦ಡು ಪಾಳ್ಯ’ ಚಿತ್ರ ಮಾಡಲಾಗಿತ್ತು.’ಸಿಲ್ಕ್’ ಚಿತ್ರ ಕ್ಯಾಬರೇ ಡಾನ್ಸರ್ ಗತಕಾಲದ ನಟಿಯೊಬ್ಬಳ ಹೆಸರಿನಿ೦ದ ಪ್ರೇರಿತ ಚಿತ್ರವಾಗಿತ್ತು.
‘message oriented film’ ಎ೦ಬ ಹೆಸರಿನಡಿಯಲ್ಲಿ ಬರುತ್ತಿರುವ ಇ೦ಥ ಚಲನ ಚಿತ್ರಗಳ ದಿಕ್ಕಿನೆಡೆಗೆ ಸಾಗುತ್ತಿರುವ ಕನ್ನಡ ಚಿತ್ರರ೦ಗವನ್ನು ಗಮನಿಸಿದಾಗ ಅಭಿಮಾನಿಗಳಿಗೆ ಒಟ್ಟೊಟ್ಟಿಗೆ ನಿರಾಸೆ,ಆತ೦ಕಗಳ ಅನುಭವ.ಆಶ್ಲೀಲತೆ,ಹಸಿಹಸಿ ಕಾಮ,ವಿಕೃತಿ,ದ್ವ೦ದಾರ್ಥ ಮತ್ತು ಕ್ರೌರ್ಯಗಳೇ ಇ೦ಥಹ ಚಿತ್ರಗಳ ಬ೦ಡವಾಳ.ಇಷ್ಟೊ೦ದು ಅತೀರೇಕದ ಚಿತ್ರದಲ್ಲಿ ಬೇಕಿತ್ತಾ ಎ೦ದು ಚಿತ್ರತ೦ಡದವರನ್ನು ಕೇಳಿದರೆ.ಮೂಲ ಕತೆ ಇ೦ಥದ್ದನೆಲ್ಲ ಬೇಡುತ್ತದೆ ಎನ್ನುತ್ತಾರವರು…!! ಇನ್ನು ಇದೊ೦ದು ’ಸ೦ದೇಶ ಪ್ರಧಾನ ಚಿತ್ರ’ ಕೆಟ್ಟವರ ಜೀವನ ಕೊನೆಯಲ್ಲಿ ಹೇಗಾಗುತ್ತದೆ ಎ೦ದು ತೋರಿಸುವುದಕ್ಕೆ ಇದೆಲ್ಲ ಅವಶ್ಯಕ ಎನ್ನುವ ಸಮರ್ಥನೆ ಬೇರೆ.
ಜಾತ್ಯಾತೀತರೆನಿಸಿಕೊಳ್ಳಲು “ಹಿಂದೂ ನಂಬಿಕೆ”ಗಳ ಜೊತೆ ಸರಸವಾಡಲೇಬೇಕೆ?
– ನರೇಂದ್ರ ಕುಮಾರ ಎಸ್.ಎಸ್
“ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – 2013” ಅನ್ನು ಜಾರಿಗೆ ತರಲಾಗುವುದೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಕ್ಕಿದ್ದಂತೆ ಘೋಷಿಸಿದೆ. ಕರ್ನಾಟಕದಲ್ಲಿ ಆಗಬೇಕಾದ ಅನೇಕ ತುರ್ತಾದ ಕೆಲಸಗಳಿವೆ. ಈ ಹಿಂದೆ ಅಧಿಕಾರದಲ್ಲಿದ್ದ ಭಾಜಪದ ಒಳಜಗಳದಿಂದ ಬೇಸೆತ್ತ ಜನರು, ಈ ಎಲ್ಲಾ “ತುರ್ತಾಗಿ ಆಗಬೇಕಾದ ಕೆಲಸ”ಗಳನ್ನೂ ಮಾಡಲಿಕ್ಕೆಂದೇ ಕಾಂಗ್ರೆಸ್ ಕೈಯ್ಯಲ್ಲಿ ಮತ್ತೊಮ್ಮೆ ಅಧಿಕಾರ ಕೊಟ್ಟರು. ಆದರೆ, ಇವೆಲ್ಲವನ್ನೂ ಬದಿಗೊತ್ತಿ, “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – 2013” ಅನ್ನು ಜಾರಿಗೆ ತರುತ್ತಿರುವುದು ಕಾಂಗ್ರೆಸ್ ಪಕ್ಷದವರಿಂದ ಹಿಡಿದು ಎಲ್ಲರನ್ನೂ ದಿಗ್ಭ್ರಮೆಗೊಳಪಡಿಸಿದೆ. ಈ ವಿದೇಯಕದ ಅಗತ್ಯ ಈಗೇನಿತ್ತು, ಎನ್ನುವುದು ಎಲ್ಲ ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಇದರ ಹಿಂದೆ ಏನಾದರೂ “Hidden Agenda” ಇರಬಹುದೆಂದು ಎಲ್ಲರಿಗೂ ಅನಿಸತೊಡಗಿದೆ.
ಸಿದ್ದರಾಮಯ್ಯನವರು “ಜಾತ್ಯಾತೀತ” ಪಕ್ಷಕ್ಕೆ ಸೇರಿದವರು. ಅವರಿಗೆ “ಪ್ರಗತಿಶೀಲ ವಿಚಾರವಂತರ” ಒಡನಾಟವಿದೆ. ಈ ವಿದೇಯಕದ ಹಿಂದೆ ಕೆಲಸ ಮಾಡಿರುವುದೂ ಈ “ಪ್ರಗತಿಶೀಲ”ರ ತಲೆಯೇ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಕರ್ನಾಟಕದಲ್ಲಿ ತುರ್ತಾಗಿ ಆಗಬೇಕಿರುವ ಎಲ್ಲಾ ಕಾರ್ಯಗಳಿಗಿಂತಲೂ ಈ ವಿದೇಯಕವು ಹೇಗೆ ಆದ್ಯತೆವುಳ್ಳದ್ದಾಯಿತು ಎಂಬುದಕ್ಕೆ ಅವರ ಬಳಿ ಉತ್ತರ ಇರಲಾರದು. ತಮ್ಮ “Hidden Agenda” ಅನುಷ್ಠಾನಕ್ಕಾಗಿ ಸಿದ್ದರಾಮಯ್ಯನವರ ಅಧಿಕಾರವನ್ನು ಈ “ಪ್ರಗತಿಶೀಲ”ರು (ದು)ಉಪಯೋಗಿಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತಿದೆ.
ವಿಜ್ನಾನವೂ ಒಂದು ನಂಬಿಕೆಯೇ ಅಲ್ಲವೇ?
– ಬಾಲಚಂದ್ರ ಭಟ್
ಈ ತಲೆಬರಹವನ್ನು ನೋಡಿದ ಬಹಳಷ್ಟು ಜನ ಇದೊಂದು ಮೂರ್ಖತನದ ಮಾತು ಎಂದುಕೊಳ್ಳುವದರಲ್ಲಿ ಸಂಶಯವಿಲ್ಲ. ಇಷ್ಟೆಲ್ಲ ನಾನು ಯಾಕೆ ಬರೆಯಲು ಪ್ರಾರಂಭಿಸಬೇಕಾಯಿತೆಂದರೆ ಇವತ್ತು ರಾಜಕೀಯ, ಸಾಮಜಿಕ ಹಾಗೂ ಇತ್ಯಾದಿ ವಲಯಗಳಲ್ಲಿ ನಂಬಿಕೆ, ಮೂಢನಂಬಿಕೆ ಹಾಗೂ ವಿಜ್ನಾನಗಳು ಬಹುಮಟ್ಟದಲ್ಲಿ ಚರ್ಚೆಯಾಗುತ್ತಿರುವದು. ಹೀಗೆ ಚರ್ಚೆಯಾದಾಗಲೆಲ್ಲ ನಂಬಿಕೆಯ ಬಗ್ಗೆ ಬೇರೆ ಬೇರೆ ಹಿನ್ನೆಲೆಯಲ್ಲಿ ಪರ/ವಿರೋಧ ವ್ಯಾಖ್ಯಾನಗಳನ್ನು ನೀಡಿದರೂ
ವಿಜ್ನಾನಕ್ಕೆ ಅವಿರೊಧ ಅನುಮೋದನೆ ಇರಬೇಕೆಂಬ ಇಂಗಿತ ಚರ್ಚೆಯ ಮೂಲ ತತ್ವವೇ ಆಗಿರುತ್ತದೆ.
ವೈಜ್ನಾನಿಕ ಚಿಂತಕರು ಜಡ್ಜ್ ಸ್ಥಾನದಲ್ಲಿಯೂ, ನಂಬಿಕೆ/ಮೂಢನಂಬಿಕೆಗಳ ಪರ/ವಿರೋಧಿಗಳು ಕಟೆಕಟೆಯಲ್ಲಿ ನಿಂತಿರುವಂತೆ ಅನಿಸುತ್ತದೆ. ಅಂತೆಯೆ ವಿಜ್ನಾನ ಇವತ್ತು ಜಡ್ಜ್ ಸ್ಥಾನವನ್ನು ಆಕ್ರಮಿಸಿದೆಯೆಂದರೆ ಮನುಕುಲದ ಬೌದ್ಧಿಕತೆ ಒಂದೇ ತಳಪಾಯದಡಿ ನಿರ್ಮಾಣವಾಗುತ್ತಿದೆ ಎನ್ನುವದರ ಅರ್ಥವೇನೊ! ಹಾಗೆಂದ ಮಾತ್ರಕ್ಕೆ ಎಲ್ಲರೂ ವಿಜ್ನಾನದ ಅಧ್ಯಯನದ ಬಗ್ಗೆ ಆಸ್ಥೆಯನ್ನು ತೋರಿಸುತ್ತಿದ್ದಾರೆಂದು ಅರ್ಥವಲ್ಲ. ಬದಲಿಗೆ ವಿಜ್ನಾನ ಇವತ್ತು ಜಡ್ಜ್ ಆಗಿರುವ ಕಾರಣ ಜನರು ತಮ್ಮ ತಮ್ಮ ಬದುಕಿನ ದೃಷ್ಟಿಕೋನಗಳನ್ನು ವಿಜ್ನಾನದ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದಾರಷ್ಟೆ.
ಶ್ವೇತಭವನ ತಲುಪಿದ ಜಯದೇವದ ಸಾಧನೆ ನಮ್ಮ ಸರ್ಕಾರಗಳಿಗೇಕೆ ಗೋಚರಿಸುತ್ತಿಲ್ಲ…
– ಗೋಪಾಲ ಕೃಷ್ಣ
‘ಹೀಗೆ ಮೂರು ವರ್ಷಗಳ ಹಿಂದೆ ಕ್ರಿಸ್ ಎಂಬ ಅಮೇರಿಕಾ ಪ್ರಜೆಯೊಬ್ಬರು ಕೆಲ ದಿನಗಳಿಗಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಒಂದು ತಡರಾತ್ರಿಯಲ್ಲಿ ಹೃದಯದ ನೋವು ಕಾಣಿಸಿದ್ದರಿಂದ, ವೈದ್ಯರೊಬ್ಬರ ಸಲಹೆಯ ಮೇರೆಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಿದ್ದಾರೆ. ತಡರಾತ್ರಿಯಾದ್ದರಿಂದ ಆಸ್ಪತ್ರೆಯಲ್ಲಿ ಕೇಳುವವರು ಇರುವರೋ ಇಲ್ಲವೋ ಎಂಬ ಅನುಮಾನದಿಂದಲೇ ದಾಖಲಾದವರಿಗೆ ಜಯದೇವದಲ್ಲಿ ಆಶ್ಚರ್ಯ ಕಾದಿತ್ತು. ಖುದ್ದು ಹೃದಯ ತಜ್ಞರಿಂದಲೇ ಚಿಕಿತ್ಸೆ ಪಡೆದು ದಾಖಲಾದ ಒಂದು ಗಂಟೆಯೊಳಗಾಗಿ ಮನೆಗೆ ಮರಳಿದ್ದಾರೆ. ಅವರು ಚಿಕಿತ್ಸೆಗೆ ಭರಿಸಿದ್ದು 92 ರೂಪಾಯಿ.’
ನಮ್ಮ ಮನೆಯ ಅಥವಾ ನೆರೆಹೊರೆಯವರ ಅನುಭವಗಳನ್ನು ಕೇಳಿ ನೋಡಿ. ತಡರಾತ್ರಿಯಲ್ಲಿ ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗೆ ಹೋದರೆ ಒಂದು ಗಂಟೆಯೊಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವೇ? ಇಸಿಜಿ, ರಕ್ತ ಪರಿಕ್ಷೆ, ತಜ್ಞ ವೈದ್ಯರಿಂದ ತಪಾಸಣೆಗೊಳಪಟ್ಟರೆ ಮೂರರಿಂದ ಐದು ಸಾವಿರಕ್ಕಿಂತ ಕಡಿಮೆಯಂತೂ ಬಿಲ್ ಮಾಡುವುದಿಲ್ಲ. ಇಷ್ಟೆಲ್ಲವನ್ನೂ 92 ರೂಪಾಯಿಗೆ ನೀಡಲು ಹೇಗೆ ಸಾಧ್ಯವಾಯಿತು? ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿಯೂ ಇಂತಹ ಆಸ್ಪತ್ರೆಗಳನ್ನು ಮುನ್ನಡೆಸಬಹುದು ಎಂದ ಮೇಲೆ, ಆರೋಗ್ಯದ ಸಮಸ್ಯೆಗಳು ಉಲ್ಭಣಿಸಲು ಜನಪ್ರತಿನಿಧಿಗಳು/ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯಿಲ್ಲದಿರುವುದೇ ಕಾರಣವಲ್ಲವೇ?