ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 5, 2013

10

ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ

‍ನಿಲುಮೆ ಮೂಲಕ

– ಮು.ಅ. ಶ್ರೀರಂಗ,ಬೆಂಗಳೂರು

ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕುನಾವುಗಳೆಲ್ಲರೂ “ಭೂತದ ಬಂಗಲೆ”ಯೊಳಗೆ ಬಂಧಿತರಾಗಿರುವಂತಹ ವ್ಯಕ್ತಿಗಳು. ಸೆಕೆಂಡು ಸೆಕೆಂಡುಗಳು ಜಾರಿದಂತೆ “ವರ್ತಮಾನ’ ಕಳೆದು “ಭೂತದ ಉಗ್ರಾಣಕ್ಕೆ “ಸೇರಿಹೋಗುತ್ತದೆ  ಗೋಪಾಲ ಕೃಷ್ಣ ಅಡಿಗರ ಕವಿತೆಯ ಈ ಸಾಲು –. “ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ದಿಗಳೇ” — ಆಗಾಗ ನೆನಪಿಗೆ ಬರುತ್ತಿರುತ್ತದೆ. ನಮ್ಮೆಲ್ಲರ ನೆನಪಿನ ಪೆಟ್ಟಿಗೆ ತೆರೆದಿಟ್ಟರೆ ಕೆಲವು ಸಿಹಿ ಹಲವು ಕಹಿ ನೆನಪುಗಳು ಹೊರಕ್ಕೆ ಬರಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತವೆ. ನನ್ನ ಆ ಪೆಟ್ಟಿಗೆ ತರೆದು ಒಂದಷ್ಟನ್ನು ನಿಮ್ಮ ಜತೆ ಹಂಚಿಕೊಳ್ಳಬೇಕೆಂಬ ಆಸೆಯ ಫಲವೇ ಈ “ನಿನ್ನೆಗೆ ನನ್ನ ಮಾತು”.

ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು ಹೇಳಿದ “we  are all misplaced in our life”ಎಂಬ ಮಾತು ನನಗೆ ಆಗಾಗ ನೆನಪಿಗೆ ಬರುತ್ತಿರುತ್ತದೆ. ಇದು ಒಂದು ರೀತಿಯಲ್ಲಿ “ಅತೃಪ್ತಿಯ” ಸಂಕೇತವಾಗಿರಲೂಬಹುದು. ಈ ಅನುಮಾನದ ಪಿಶಾಚಿ ನಮ್ಮನ್ನು ಕಾಡದಿದ್ದರೆ ಆರಾಮವಾಗಿರಬಹುದು. ಅದೇ ಸರಿ ಎಂದು ಅನಿಸುತ್ತದೆ. ಆದರೆ ಆ ಅತೃಪ್ತಿ ನಮ್ಮ ಮುಂದಿನ ಸಾಧನೆಗೆ,ದಾರಿ ದೀಪವಾಗಬೇಕೇ ಹೊರತು ಇತರರ ಅಭಿವೃದ್ದಿಯನ್ನು ಕಂಡು ನಮ್ಮನ್ನು ನಾವೇ ಸುಟ್ಟಿಕೊಳ್ಳುವಂತಹ ಕಿಚ್ಚಾಗಬಾರದು.

ನನ್ನ ಬಾಲ್ಯದಿಂದ ಸುಮಾರು ಇಪ್ಪತ್ತು  ವರ್ಷಗಳ ಕಾಲ  ನಾನು ವಾಸವಿದ್ದದ್ದು ಮಾಗಡಿ ಎಂಬ ಪಟ್ಟಣ ಮತ್ತು ಅದರ ಆಸುಪಾಸಿನ ಹಳ್ಳಿಗಳಲ್ಲಿ.  ಮಾಗಡಿ  ಹಿಂದೆ ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿತ್ತು. ಈಗ ರಾಮನಗರ ಜಿಲ್ಲೆಗೆ ಸೇರಿದೆ. ಬೆಂಗಳೂರಿನ  ಹತ್ತಿರದ ತಾಲ್ಲೂಕು ಕೇಂದ್ರಗಳು ಈಗ ಸಾಕಷ್ಟು ಅಭಿವೃದ್ದಿಯಾಗಿ ಮಿನಿ ಬೆಂಗಳೂರು ಅಥವಾ ಬೆಂಗಳೂರಿನ ಉಪನಗರಗಳಾಗುವ ಹಂತದಲ್ಲಿವೆ.  ಆದರೆ,ಅವುಗಳಿಗೆ ಹೋಲಿಸಿದರೆ  ಬೆಂಗಳೂರಿಗೆ ಕೇವಲ ಐವತ್ತು ಕಿ. ಮೀ  ದೂರದಲ್ಲಷ್ಟೇ ಇದ್ದರೂ ಸಹ ಮಾಗಡಿ ಈಗಲೂ ಸ್ವಲ್ಪ ಹಿಂದುಳಿದ  ತಾಲ್ಲೂಕು ಕೇಂದ್ರವಾಗಿ ಕಾಣಿಸುತ್ತದೆ. ಈ ತಾಲ್ಲೂಕಿನಲ್ಲೇ ಒಂದಾನೊಂದು ಕಾಲದಲ್ಲಿ ಬೆಂಗಳೂರಿಗೆ ನೀರನ್ನು ಒದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಕೆರೆ ಇರುವುದು. ಆಗ ಬೆಂಗಳೂರು ಸಿಟಿ ಕಾರ್ಪೋರೇಶನ್ ಆಗಿತ್ತು.(ಬಿ.ಸಿ.ಸಿ). ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಗಿದೆ (ಬಿಬಿಎಂಪಿ).ಈಗ ಆ ಕೆರೆ ಬತ್ತಿ ಹೋಗಿದೆ. ಕೆರೆ ಅಂಗಳದಲ್ಲಿ,ನೀರು ಹರಿಯುತ್ತಿದ್ದ ಜಾಗದಲೆಲ್ಲಾ ಸಣ್ಣ ಪುಟ್ಟ ಗಿಡಗಳು ಬೆಳೆದಿವೆ. ಹೂಳು ತುಂಬಿದೆ. ಜಾಸ್ತಿ ಮಳೆಯಾದ ದಿನಗಳಲ್ಲಿ ಸಣ್ಣಗೆ ನೀರು ಹರಿಯುತ್ತದೆ. ಈ ಕೆರೆಯ ಹೂಳನ್ನೆತ್ತಿ ಸ್ವಚಗೊಳಿಸಿ ಮಳೆಗಾಲದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ನಮ್ಮ ಇದುವರೆಗಿನ ಸರ್ಕಾರಗಳ ಆದ್ಯತೆಯ ಪಟ್ಟಿಯಲ್ಲಿ ಇಲ್ಲ. ಅದರ ಬದಲು ತುಂಬಾ ದೂರದ ಊರುಗಳಿಂದ ನೀರು ತರುವ ಯೋಜನೆ, ನದಿಗಳನ್ನು ಈ ಕಡೆ ಸ್ವಲ್ಪ ಹರಿ ಎಂದು ತಿರುಗಿಸುವ ಯೋಚನೆಗಳ ಕೋಟಿಗಟ್ಟಲೆ ಹಣದ projectಗಳೇ ನಮ್ಮ ರಾಜಕಾರಿಣಿಗಳಿಗೆ ಪ್ರಿಯವಾಗಿದೆ.

ನಮ್ಮ ಹಳ್ಳಿಯಲ್ಲಿ ಪ್ರೌಢಶಾಲೆ ಇರಲಿಲ್ಲ. ಹೀಗಾಗಿ ನಾನು ಪ್ರತಿದಿನ ಐದಾರು ಮೈಲಿ ನಡೆದುಕೊಂಡು  ಹೋಗಿ ಹೋಬಳಿ ಕೇಂದ್ರದಲ್ಲಿದ್ದ  ಪ್ರೌಢಶಾಲೆಯಲ್ಲಿ  ಎಸ್ ಎಸ್ ಎಲ್ ಸಿಯನ್ನು first classನಲ್ಲಿ ಪಾಸು ಮಾಡಿದ  ಮೇಲೆ ಮಾಗಡಿ ಪಟ್ಟಣ್ಣಕ್ಕೆ ಪಿ ಯು ಸಿ ಓದುವ ಸಲುವಾಗಿ ಬಂದಿದ್ದಾಯ್ತು.ವಿಜ್ಞಾನ ಮತ್ತು ಗಣಿತದ subject ಗಳಲ್ಲಿ ಜಾಸ್ತಿ ಅಂಕಗಳನ್ನು ಗಳಿಸಿದ್ದರಿಂದ ತಂದೆ ಮತ್ತು ಜ್ಯೂನಿಯರ್ ಕಾಲೇಜಿನ ಅಧ್ಯಾಪಕರ ಆದೇಶದಂತೆ ವಿಜ್ಞಾನದ ವಿಷಯಗಳನ್ನು (ಪಿಸಿಎಂಬಿ)ತೆಗೆದುಕೊಂಡಿದ್ದಾಯ್ತು. ಬಹುಶಃ ಇಲ್ಲಿಂದ ನನ್ನ ಜೀವನದ ಮೊದಲ misplacement ಪ್ರಾರಂಭ ಆಯಿತೇನೋ? ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆಯ ತನಕ ಓದಿದ್ದ ನನಗೆ ಇಂಗ್ಲಿಷ್ ಮಾಧ್ಯಮದಲ್ಲಿ ವಿಜ್ಞಾನದ  ವಿಷಯಗಳನ್ನು ಓದಿ ಅರ್ಥಮಾಡಿಕೊಳ್ಳುವುದು ಕಷ್ಟವಾಯ್ತು. ಆಗ p u board ನವರೇ ಎರಡು ವರ್ಷಗಳೂ public exam ನಡೆಸುತ್ತಿದ್ದರು. ಸದ್ಯಕ್ಕೆ fail  ಆಗಲಿಲ್ಲ. ಎರಡನೇ ದರ್ಜೆಯಲ್ಲಿ ಪಾಸು ಮಾಡಿದೆ.

ಪಿಯುಸಿ ಆದಮೇಲೆ ಪದವಿಯ ವಿದ್ಯಾಬ್ಯಾಸಕ್ಕೆ ಬೆಂಗಳೂರಿಗೆ ಬರಬೇಕಾಯ್ತು. ಆಗ ಮಾಗಡಿಯಲ್ಲಿ ಪದವಿ ಕಾಲೇಜು ಇರಲಿಲ್ಲ. ಬೆಂಗಳೂರಿನಲ್ಲಿ ನನ್ನನ್ನು ನಮ್ಮ ಜನಾಂಗದ ವಿದ್ಯಾರ್ಥಿನಿಲಯದಲ್ಲಿ ಇರುವುದಕ್ಕೆ ನಮ್ಮ ತಂದೆಯವರು ಏರ್ಪಾಡುಮಾಡಿದರು. ಅಲ್ಲಿ  ಒಂದೊಂದು ರೂಮೂ ಸಾಕಷ್ಟು ದೊಡ್ಡದಾಗಿಯೆಯಿತ್ತು. ಅಂತಹ ಇಪ್ಪತು ರೂಮುಗಳಿದ್ದವು. ಒಂದೊಂದು ರೂಮಿನಲ್ಲಿ ಮೂರು ಮೂರು ಹುಡುಗರಿಗೆ ಅವಕಾಶ. ದಿನಕ್ಕೆ ಎರಡು ಹೊತ್ತು ಊಟ ಅಷ್ಟೇ. ಬೆಳಗ್ಗೆ  ಎಂಟರಿಂದ ಹತ್ತು ಗಂಟೆ ಮತ್ತು ರಾತ್ರಿ ಎಂಟರಿಂದ ಹತ್ತು ಗಂಟೆಯವರೆಗೆ.ಭಾನುವಾರಗಳಂದು  ಮಾತ್ರ ತಿಂಡಿ ಮತ್ತು ಕಾಫಿ.  ತುಂಬಾ ಚಳಿಗಾಲದಲ್ಲಿ  ಮಾತ್ರ  ಒಂದೆರಡು ಬಕೆಟಗಳಷ್ಟು  ಬಿಸಿ  ನೀರು ಕೊಡುತ್ತಿದ್ದರು. ಉಳಿದ ದಿನಗಳಲ್ಲಿ ಎಷ್ಟು ಬೇಕಾದಾರೂ ತಣ್ಣೀರಿನ ಸ್ನಾನ ಮಾಡಬಹುದಾಗಿತ್ತು! ರೂಮಿನಲ್ಲಿ ಓದಲು ಟೇಬಲ್ ಮತ್ತು ಕುರ್ಚಿಗಳಿಲ್ಲ. ಆದರೆ ವಿದ್ಯುತ್  ಉಪಯೋಗಕ್ಕೆ ಯಾವುದೇ ನಿರ್ಬಂಧ ಇಲ್ಲ. ಇಷ್ಟು ಸೌಲಭ್ಯಕ್ಕೆ ಒಂದು ತಿಂಗಳಿಗೆ ಪೂರ್ತಿ ಶುಲ್ಕ ತೊಂಬತ್ತು ರೂಪಾಯಿ; ಅರ್ಧ ಶುಲ್ಕ ನಲವತ್ತೈದು ರೂಪಾಯಿ. ಈ ಅರ್ಧ ಶುಲ್ಕದ ಸೌಲಭ್ಯ ಪಡೆಯಲು ಸ್ವಲ್ಪ ಮೆರಿಟ್ ಮತ್ತು ಸ್ವಲ್ಪ ಹಾಸ್ಟೆಲ್ ಕಮಿಟಿಯವರ ಶಿಫಾರಸ್ಸು ಬೇಕಾಗಿತ್ತು. ಹಾಗೂ ಹೀಗೂ ಅವರನ್ನು ಮನವೊಲಿಸಿ ಅರ್ಧ ಶುಲ್ಕದ ಸೌಲಭ್ಯ ಪಡೆದಿದ್ದಾಯ್ತು. ಇದು ನಮ್ಮ ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ತೀರಾ ಅಗತ್ಯವಾಗಿತ್ತು.

ಹಾಸ್ಟೆಲ್ಲುಗಳಲ್ಲಿ ಹಿರಿಯ ವಿಧ್ಯಾರ್ಥಿಗಳು ಹೊಸಬರಿಗೆ raging ಮಾಡುತ್ತಾರೆಂದು ಪತ್ರಿಕೆಗಳಲ್ಲಿ ಆಗಾಗ ವರದಿಯಾಗುತ್ತಿತ್ತು. ಆದರೆ ನಮಲ್ಲಿ ಹೊಸದಾಗಿ ಬಂದವರಿಗೆ “ತ್ರೀ ಈಡಿಯಟ್ಸ್”ಸಿನಿಮಾದ ರೀತಿಯ ಅನುಭವವೇನೂ ಆಗಲಿಲ್ಲ. ಊಟ ಚೆನ್ನಾಗೇ ಇರುತ್ತಿತ್ತು. ಕನ್ನಡ ಇಂಗ್ಲಿಷ್ ದಿನ ಪತ್ರಿಕೆಗಳು ಬರುತ್ತಿದ್ದವು. ಕೇರಂ ಬೋರ್ಡ್ ಇತ್ತು. ವಾಲಿಬಾಲ್ ಆಟ ಆಡಬಹುದಾಗಿತ್ತು. ಕಬ್ಬಡಿ ಆಟ ಸಹ ಆಡಬಹುದಾಗಿತ್ತು. ಹೀಗಾಗಿ ಮೂರು ವರ್ಷಗಳನ್ನು ಕಳೆದಿದ್ದೆ ತಿಳಿಯಲಿಲ್ಲ ಮೂರು ವರ್ಷಗಳೂ ಅರವತ್ತರಿಂದ ಎಪ್ಪತ್ತು ಪರ್ಸೆಂಟ್ ಅಂಕಗಳೊಂದಿಗೆ ಪಾಸಾದೆ. ಗ್ರಾಮಾಂತರ ಪ್ರದೇಶದಿಂದ, ಕನ್ನಡ ಮಾಧ್ಯಮದಲ್ಲಿ ಓದಿಕೊಂಡು ಬಂದಿದ್ದ ನನಗೆ ಬೆಂಗಳೂರಿನ ಕಾಲೇಜಿನಲ್ಲಿ ಓದಿ ಯಾವ ವರ್ಷವೂ fail  ಆಗದೆ ಅಷ್ಟು ಮಾಡಿದ್ದು ಸಾಕಾಗಿತ್ತು. ಈಗಿನ ಮಕ್ಕಳ ಓದಿನ ಮಟ್ಟದಿಂದ ಅಳೆದರೆ ನನ್ನದು ತೀರಾ ಸಾಮಾನ್ಯವೆನಿಸಬಹುದು. ಇರಲಿ. ನಮ್ಮ ತಂದೆಯವರು ೧೯೫೫–೫೭ರಲ್ಲಿ ಬಿಎಸ್ಸಿಯಲ್ಲಿ ಕೊನೆಯ ವರ್ಷ ಒಂದು subject ನಲ್ಲಿ ಎರಡು ಸಲ ಪ್ರಯತ್ನಪಟ್ಟರೂ ಪಾಸಾಗಿರಲಿಲ್ಲ. ಕೆಲಸಕ್ಕೆ ಸೇರಿ ಸಂಪಾದಿಸಲೇ ಬೇಕಾದ ಅನಿವಾರ್ಯತೆ ಅವರ ಮುಂದಿತ್ತು. ಹೀಗಾಗಿ ಅವರ ಓದು ಅಷ್ಟಕ್ಕೇ ನಿಂತು ಹೋಗಿತ್ತು. ಓದುವುದನ್ನು ಬಿಟ್ಟು ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ  middle school ಉಪಾಧ್ಯಾಯರ  ಕೆಲಸಕ್ಕೆ ಸೇರಿಕೊಂಡಿದ್ದರು.ಎಪ್ಪತ್ತೈದು ರೂಪಾಯಿಗಳಿಗೆ ಸಹಿ ಹಾಕಿಸಿಕೊಂಡು ಅರವತ್ತು ರೂಪಾಯಿಗಳನ್ನು ಕೊಡುತ್ತಿದ್ದರಂತೆ! ಅಲ್ಲಿ ಎರಡು ಮೂರು ವರ್ಷ ಕೆಲಸ ಮಾಡಿ ನಂತರದಲ್ಲಿ ಸರ್ಕಾರಿ ಶಾಲೆಯ ಉಪಾಧ್ಯಾರ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಎಲ್ಲಾ ಕಾರಣಗಳಿಂದ ನಾನು ಬಿಎಸ್ಸಿ ಪಾಸಾಗಿದ್ದು ನಮ್ಮ ತಂದೆಯವರಿಗೆ ಸಂತೋಷವಾಯ್ತು. ನನ್ನ ಮುಂದಿನ ದಾರಿ ಸಹಜವಾಗಿ M.Sc. ಸೆಂಟ್ರಲ್ ಕಾಲೇಜಿಗೆ ಸೇರಿದ್ದಾಯ್ತು. ಆಗ ಬೆಂಗಳೂರು ವಿಶ್ವ ವಿದ್ಯಾಲಯದ ಕೆಲವು ಸ್ನಾತಕೋತ್ತರ ವಿಜ್ಞಾನದ ವಿಭಾಗಗಳು ಸೆಂಟ್ರಲ್ ಕಾಲೇಜಿನಲ್ಲೇ ನಡೆಯುತ್ತಿದ್ದವು. ಅದೇ ಹಾಸ್ಟೆಲ್;ಅದೇ ಬೆಂಗಳೂರು. ಆದರೆ ನನ್ನ ಜೀವನದ ಎರಡೇ misplacement ನನ್ನನ್ನು ಹಿಂಬಾಲಿಸುತ್ತಿತ್ತು!!

(ಈ ಕಥೆ  ಮುಂದುವರಿಯುತ್ತದೆ)

10 ಟಿಪ್ಪಣಿಗಳು Post a comment
  1. Kumar's avatar
    ಡಿಸೆ 5 2013

    ನಿಮ್ಮ ಬರಹ ಓದಿ, ನಾನು ಮೈಸೂರಿನಲ್ಲಿ ಓದಿದ ವಿದ್ಯಾರ್ಥಿ ನಿಲಯದ ದಿನಗಳು ನೆನಪಾಗುತ್ತಿದೆ!
    ನಿಮಗೆ ತುಂಬಾ ಚಳಿಗಾಗಲ್ಲಿ ಒಂದೆರಡು ಬಕೆಟ್ ಬಿಸಿನೀರು ಕೊಡುತ್ತಿದ್ದರು ಎಂದು ಕೇಳಿ ಆಶ್ಚರ್ಯವಾಯಿತು.
    ನಮಗೆ ಎಂಥಾ ಛಳಿಯಲ್ಲೂ ತಣ್ಣೀರು ಸಿಗುತ್ತಿರಲಿಲ್ಲ!! ಸ್ನಾನದ ಮನೆ ಎಂದರೆ, ಅದೊಂದು ಜೇಡರ ಬಲೆ ತುಂಬಿದ ಕತ್ತಲ ಕೋಣೆ! ಇಂದಿನ ಮಕ್ಕಳು ನಮ್ಮ ವಿದ್ಯಾರ್ಥಿ ನಿಲಯದ ಅಡುಗೆ ಮನೆ ನೋಡಿಬಿಟ್ಟರೆ, ಊಟವನ್ನೇ ಬಿಟ್ಟುಬಿಡುವರೇನೋ!
    ಇಷ್ಟಾದರೂ ನಮ್ಮ ವಿದ್ಯಾರ್ಥಿ ನಿಲಯ, ಅಲ್ಲಿನ ಹಿರಿಯರನ್ನು ನೆನೆಸಿಕೊಂಡರೆ, ಪ್ರೀತಿಯ ಭಾವನೆಯೇ ಬರುತ್ತದೆ. ನಮಗೆ ತಿಳಿಯದ ಊರಿನಲ್ಲಿ, ಆಶ್ರಯ ನೀಡಿ, ಊಟ ಹಾಕಿ, ವಿದ್ಯೆ ಕಲಿಯಲು ಅವಕಾಶ ಮಾಡಿಕೊಟ್ಟರಲ್ಲ….ಅವರಿಗೆ ನಾನು ಚಿರ ಋಣಿ.

    ಉತ್ತರ
  2. M.A.Sriranga's avatar
    M.A.Sriranga
    ಡಿಸೆ 5 2013

    ನಿಮ್ಮ ಮಾತು ನಿಜ. ಅಂದು ನಾವುಗಳು ಇದ್ದಂತಹ ಆರ್ಥಿಕ ಪರಿಸ್ಥಿತಿಯಲ್ಲಿ ಆ ವಿಧ್ಯಾರ್ಥಿನಿಲಯಗಳು ನಮಗೆ ಅಷ್ಟು ಸಹಾಯ ಮಾಡದಿದ್ದರೆ ಒಂದು ಪದವಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಬಿಎ,ಬಿಎಸ್ಸಿ ಅಂದರೆ ಮೂಗು ಮುರಿಯುವವರೇ ಜಾಸ್ತಿ. ಕಾಲಾಯ ತಸ್ಮೈನಮಃ

    ಉತ್ತರ
  3. Prakash Bijali's avatar
    ಡಿಸೆ 5 2013

    Really nice, continue the story

    ಉತ್ತರ
  4. H.S.Srikanth's avatar
    H.S.Srikanth
    ಡಿಸೆ 9 2013

    ee storina istu divasa helirale illa. chennagide. munduvaresi.

    ಉತ್ತರ
  5. M.A.Sriranga's avatar
    M.A.Sriranga
    ಡಿಸೆ 9 2013

    ನನ್ನ ಕಥೆ ಬರೆಯುವಂತಹ ದೊಡ್ಡ ಸಾಧನೆ ನಾನೇನು ಮಾಡಿಲ್ಲವಲ್ಲ? ಹಾಗಾಗಿ ಇದು ಬೇಕೆ ಎಂಬ ತೊಳಲಾಟದಿಂದ ಬರೆದಿರಲಿಲ್ಲ.ನೋದೋಣ. ಇದನ್ನು ಆದಷ್ಟೂ ಬೋರಾಗದಂತೆ ಬರೆಯಲು ಪ್ರಯತ್ನಿಸುವೆ.

    ಉತ್ತರ

Trackbacks & Pingbacks

  1. ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು -೨ | ನಿಲುಮೆ
  2. ನಿನ್ನೆಗೆ ನನ್ನ ಮಾತು …. ಭಾಗ 3 | ನಿಲುಮೆ
  3. ನಿನ್ನೆಗೆ ನನ್ನ ಮಾತು – ಭಾಗ ೪ | ನಿಲುಮೆ
  4. ನಿನ್ನೆಗೆ ನನ್ನ ಮಾತು – ಭಾಗ ೫ | ನಿಲುಮೆ
  5. ನಿನ್ನೆಗೆ ನನ್ನ ಮಾತು – ಭಾಗ ೫ – ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments