ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 22, 2013

1

ಅದೆಷ್ಟು ಸುಂದರ ಹಾಸ್ಟೆಲ್ ಜೀವನ

‍ನಿಲುಮೆ ಮೂಲಕ

– ತುಳಜಪ್ಪ ಬುಧೇರ

ಹಾಸ್ಟೆಲ್ ಜೀವನಹಾಸ್ಟೆಲ್ ಹುಡಗ್ರೆಲ್ಲಾ ಕೆಟ್ಟವರು, ಟಪೋರಿಗಳು ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುತ್ತಿರುತ್ತಾರೆ. ಅವರಲ್ಲಿ ಜೀವನ ಸುಧಾರಿಸಿಕೊಳ್ಳಬೇಕೆಂಬುದರ ಬಗ್ಗೆ ಸಿರಿಯಸ್‍ನೆಸ್ಸೇ ಇರಲ್ಲಾ, ಅನ್ನೋ ಮಾತುಗಳು ಆಗಾಗ ಕೇಳುತ್ತಿರುತ್ತೇವೆ. ತಂದೆ ತಾಯಂದಿರಂತೂ ತಮ್ಮ ಮಕ್ಕಳಿಗೆ ಹಾಸ್ಟೆಲ್ ಹುಡುಗರ ಸಹವಾಸ ಮಾಡಬೇಡ ಎಂಬ ಸ್ಟ್ರಿಕ್ಟ್ ಆದೇಶ ಮಾಡಿರುವುದನ್ನು ನೋಡಿರುತ್ತೇವೆ. ಇದೇ ಪಾಠವನ್ನು ಚಿಕ್ಕವನಿದ್ದಾಗ ನನ್ನ ಗೆಳೆಯ ಮಾಡಿದ್ದ. ಅವನಿಗೆ ಯಾರು ಹೇಳಿದ್ದರೋ ಅವನೇ ಬಲ್ಲ.

ಪಕ್ಕದೂರಾದ ಮನ್ನಳ್ಳಿಯಲ್ಲಿ ಹೈಸ್ಕೂಲ್ ಇದ್ದಿದ್ದರಿಂದ ಪ್ರೌಢ ಶಿಕ್ಷಣ ಯಾವುದೇ ಚಿಂತೆಯಿಲ್ಲದೇ ಆರಾಮಾಗಿ ಮುಗಿಯಿತು. ಮುಂದೆ ಕಾಲೇಜ್‍ಗೆ ಸೇರಲೇಬೇಕಲ್ಲವೆ, ಬೀದರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆದಾಯಿತು. ದಿನಾಲು ಹೋಗಿ ಬರಬೇಕೆಂದರೆ ನಮ್ಮೂರಿಗೆ ಸರಿಯಾಗಿ ಬಸ್ಸುಗಳೇ ಇಲ್ಲ. ಇದ್ದರೂ ಅಮಾಸೆಗೋ ಹುಣ್ಣಿಮೆಗೋ ಎಂಬಂತೆ ಅಪರೂಪ. ಸಮಯದ ಪಾಲನೆಯಂತು ಅವರಪ್ಪನಾಣೆಗೂ ಇಲ್ಲವೇ ಇಲ್ಲ. ಹೀಗಾಗಿ ಕಾಲೇಗೆ ಹೋಗಿ ಬರೋದೆ ಒಂದ್ ದೊಡ್ಡ ಸಮಸ್ಯೆಯಾಯಿತು. ಆಗ ಅಪ್ಪನ ತಲೆಯಲ್ಲಿ ಬಂದ ಐಡಿಯಾನೆ ಹಾಸ್ಟೆಲ್. ಈ ಶಬ್ದ ಕಿವಿಗೆ ಬಿದ್ದೊಡನೆ ಕಾಲಿನಿಂದ ತಲೆಯವರೆಗೂ ಜುಮ್ ಎಂದು ರಕ್ತ ಸಂಚಾರವೇ ನಿಂತಂತಾಗಿ ನಿಸ್ತೇಜನಾಗಿ ನಿಂತಲ್ಲೇ ಕುಸಿದು ಬಿಟ್ಟೆ. ಆದರೆ ಅನ್ಯ ಮಾರ್ಗವೇ ಇರಲಿಲ್ಲ. ಅಲ್ಲಿಗೆ ಹೋಗಲೇಬೇಕಾಯಿತು.

ಎರಡು ದಿನ ಅಂಜುತ್ತಾ ಅಳುಕುತ್ತಲೆ ಕಾಲ ಕಳೆದ ನನಗೆ ಮೊದಲ ಅಚ್ಚರಿ ಎಂಬಂತೆ  ಒಂದು ದಿನ ಸಾಂಯಂಕಾಲ ಪುಸ್ತಕ ಹಿಡಿದು ಮೇಸ್ಟ್ರು ಹೇಳಿದ್ದೆಲ್ಲಾ ರಿವಿಶ್ಯನ್ ಮಾಡ್ತಾ ಇದ್ದೆ ಇಬ್ರು ಅಪರಿಚಿತ ಹುಡುಗರು ನಾನಿದ್ದ ಕೋಣೆಗೆ ನುಗ್ಗಿ “ಒಬ್ ಮುತ್ಯಾ(ತಾತ) ಭಾಳ್ ಕಷ್ಟದಾಗ್ ಹನಾ ಅವ್ನಿಗ್ ಹೆಲ್ಪ್ ಮಾಡ್ಬೇಕ್ ಎಸ್ಟಾರ್ ರೊಕ್ಕ ಕೊಡು” ಅಂದಾಗ ಏನು ತೋಚದೆ ಗೋಡೆಗೆ ಜೋತು ಹಾಕಿದ ಅಂಗಿಯ ಕಿಸೆಯಲ್ಲಿದ್ದ ಇಪ್ಪತ್ತು ರುಪಾಯಿ ತೆಗೆದುಕೊಟ್ಟೆ. ಏನೆಂದು ಕೇಳುವಷ್ಟರಲ್ಲಿ ಹೊರಟು ಹೋದರು. ಕುತೂಹಲ ತಾಳದೆ ಕೋಣೆಯಿಂದ ಹೊರಬಂದೆ ಮೇನ್ ಗೇಟ್‍ಗೆ ಬೆನ್ನು ತಾಕಿಸಿ ವಯಸ್ಸಾದ ಮುದುಕ ಕುಳಿತಿದ್ದಾನೆ. ಮುಖವೆಲ್ಲಾ ಬಾಡಿದೆ ನೋಡಿದ ತಕ್ಷಣವೇ ಎರಡು ದಿನಗಳಿಂದ ಊಟ ಮಾಡಿಲ್ಲವೆಂದು ಸುಲಭವಾಗಿ ಅಂದಾಜಾಗುತ್ತಿತ್ತು. ಇದನ್ನೇ ಗಮನಿಸುತ್ತಿರಬೇಕಾದರೆ ಆ ಹುಡುಗರು ಬಂದು ಅವನ ಕೈಯಲ್ಲಿ ಜಮಾಯಿಸಿದ ದುಡ್ಡೆಲ್ಲಾ ಇಟ್ಟರು ಒಂದು ರೂಮಿಗೊಯ್ದು ಊಟ ಮಾಡಿಸಬೇಕೆಂದು ತಟ್ಟೆ ಕೈಗಿತ್ತಾಗ “ನೌಜವಾನ್ ಮಗ ದವಾಖಾನ್ಯಾಗ್ ಹನ ಇದು ಗಂಟಲ್ನಾಗ್ ಹ್ಯಾಂಗ ಇಳಿತದ್ ಮಗಾ” ಎಂದಾಗ ನಮ್ಮೆಲ್ಲರ ಕಣ್ಣಲ್ಲಿ ಸಳ್ ಅಂತ ನೀರು ಜಾರಿತು. ದೇವ್ರು ನಿಮಗ್ ಒಳ್ಳೆದ್ ಮಾಡ್ಲಿ ಅಂತ ಹೊರನಡೆದ.

ಅಲ್ಲೇ ನಿಂತಿದ್ದ ಒಬ್ಬ ಹುಡುಗ ಅವನ ಕುರಿತು ತಾನಾಗಿಯೇ ಹೇಳಲು ಆರಂಭಿಸಿದ.. ತುಂಬಾ ಬಡತನ. ಕೆಲಸ ಮಾಡದೆ ಮನೆಯಲ್ಲಿ ಒಲೆ ಉರಿಯುವುದಿಲ್ಲ. ಅಷ್ಟಿದ್ದರೂ ತುಂಬಾ ಸಂತೋಷದಿಂದ ಇದ್ದ ಕುಟುಂಬಕ್ಕೆ ಗ್ರಹಣ ಹಿಡಿದಂತಾಯಿತು. ಇದ್ದ ಒಬ್ಬ ಮಗ ಆಸ್ಟತ್ರೆ ಸೇರಿದ್ದಾನೆ. ಬಹಳ ದಿನಗಳಿಂದ ಹೊಟ್ಟೆ ನೋವು ಎನ್ನುತ್ತಿದ್ದವನಿಗೆ ಅಲ್ಲಿನ ಆರ್‍ಎಂಪಿ ಡಾಕ್ಟರುಗಳಿಂದಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಒಂದು ದಿನ ಎಕಾಎಕಿ ವಿಪರೀತ ಹೊಟ್ಟೆನೋವಿನಿಂದ ಹೊರಳಾಡುತ್ತಿದ್ದಾಗ ಎಂದಿನಂತೆ ಅಲ್ಲಿನ ಡಾಕ್ಟ್ರುಗಳಿಗೆ ತೋರಿಸಿದಾಗ ಅವರು ನಮ್ಮಿಂದಾಗದು ಎಂದು ಕೈ ಚಲ್ಲಿದರು. ಆಗ ಬೇರೆ ದಾರಿ ತೋಚದೆ ಬೀದರ್‍ನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಐವತ್ತು ಸಾವಿರ ಖರ್ಚಾಗುತ್ತೆ ಎಂಬ ಡಾಕ್ಟರ್‍ನ ಮಾತುಗಳನ್ನು ಕೇಳಿ ದಂಗಾಗಿ ರೋಡ್ ಮೇಲೆ ನಿಂತಿದ್ದಾಗ, ನಮ್ಮ ಯಾರೋ ಹುಡುಗನ ಕಣ್ಣಿಗೆ ಬಿದ್ದು ಇಲ್ಲಿಗೆ ಬಂದಿದ್ದಾರೆ ಎಂದು ಮಾತು ಮುಗಿಸುತ್ತಿದ್ದಂತೆ ನನ್ನ ತಲೆಯಲ್ಲಿ ತುಂಬಿದ್ದ ಹಾಸ್ಟೆಲ್ ಕುರಿತಾದ ಇಲ್ಲಸಲ್ಲದ ತಪ್ಪು ಕಲ್ಪನೆಗಳೆಲ್ಲಾ ಸರ್ರಂತ ಇಳಿದು ಹೋದವು. ಎಲ್ಲರ ಜೊತೆ ಬೆರೆಯಲು ಆರಂಭಿಸಿದೆ. ಪರಿಣಾಮ ಅಲ್ಲಿನ ಎಲ್ಲಾ ಕೋಣೆಯ ಹುಡುಗರೆಲ್ಲಾ ಗೆಳೆಯರಾದರು. ನಮ್ಮಲ್ಲಿ ಯಾರೇ ಆಗಲಿ ತೊಂದರೆಯಲ್ಲಿದ್ದರೆ ಅದು ಎಲ್ಲರ ಸಮಸ್ಯೆಯೆಂಬಂತೆ ವರ್ತಿಸುತ್ತಿದ್ದದ್ದು ನೋಡಿ ವಿಚಿತ್ರ ಖುಷಿಯೊಂದು ಮನಸ್ಸಲ್ಲಿ ಉಯ್ಯಾಲೆ ಆಡಿದಂತಾಗುತ್ತಿತ್ತು.

ಸೂರ್ಯ ಉದಯವಾಗುವುದೇ ತಡ ಎಲ್ಲಿಂದಲೋ ಜೋರಾಗಿ ಸುಂದರ ಕಂಠದ ಡಾ.ರಾಜ್‍ಕುಮಾರರ ಹಾಡೊಂದು ಕಿವಿಗೆ ಇಂಪು ಕೊಡುತ್ತದೆ. ಈ ಹಾಡಿನಿಂದ ಎಚ್ಚರಗೊಂಡು ಅದೇ ಹಾಡನ್ನು ನನಗರಿವಿಲ್ಲದೆ ಗುನುಗುತ್ತಾ ಸೂರ್ಯನಿಗೆ ಮೈ ಕಾಸಲು ಹೊರಗಡೆ ಬಂದಾಗ ಆಟವಾಡುತ್ತಿದ್ದವರನ್ನು ನೋಡಿ ನಾನು ಅದರಲ್ಲಿ ಸೇರಿಕೊಳ್ಳುತೇನೆ.

ಕೋಣೆಗೊಂದು ಲವ್ ಸ್ಟೋರಿಗಳು ಸಿಗುವ ಇಲ್ಲಿ ಒಂದೊಂದು ಗೋಡೆ ಒಂದೊಂದು ಸುಂದರ ಕಥೆಗಳನ್ನು ಹೇಳುತ್ತದೆ. ಓದುವುದಕ್ಕೆ, ಮಲಗುವುದಕ್ಕೆ ಫಿಕ್ಸ್ ಟೈಮ್ ಅಂತ ಹೇಳೋಕ್ಕಾಗಲ್ಲ ಯಾವಾಗ ಮೂಡ್ ಬರುತ್ತೋ ಆಗ ಪುಸ್ತಕ ಹಿಡಿಯೋದು, ಎಲ್ಲಾ ಗೆಳೆಯರು ಸೇರಿ ಒಂದೇ ತಾಟಿನಲ್ಲಿ ಊಟ ಮಾಡೊದು, ವಾರಕ್ಕೊಂದು ಸಾರಿ ಸಿಟಿಯೆಲ್ಲಾ ಸುತ್ತಾಡೋದು ಎಕ್ಸಾಂ ಹತ್ತಿರ ಬಂದರಂತು ಎಲ್ಲಾ ಸೈಲೆಂಟ್, ಎಲ್ಲ ರೂಮಿನವರು ತತ್ವಜ್ಞಾನಿಗಳಾಗುತ್ತಾರೆ.

ಯಾರ ಸ್ವಾತಂತ್ರ್ಯಕ್ಕು ಲಗಾಮಿಲ್ಲ. ಅವರವರ ಇಚ್ಚೆಯಂತೆ ಇರುತ್ತಾರೆ. ಹಾಗಂತ ಯಾವಾಗಲು ಟೈಂಪಾಸ್ ಮಾಡ್ತಾನೆ ಇರ್ತಾರೆ ಅಂತಲ್ಲ. ಆಡುತ್ತಾ, ಹಾಡುತ್ತಾ, ಓದುತ್ತಾ ಒಟ್ಟಿನಲ್ಲಿ ಮಜಾ ಮಾಡ್ತಾ ಆನಂದಮಯ ಸ್ವತಂತ್ರ್ಯ, ಸ್ವಾರಸ್ಯ ಜೀವನದ

ಹಾಸ್ಟೆಲ್ ಮಜಾ ಅನುಭವಿಸಿದವನೇ ಬಲ್ಲ…..

1 ಟಿಪ್ಪಣಿ Post a comment
  1. Gopal Bavidoddi's avatar
    Gopal Bavidoddi
    ಡಿಸೆ 24 2013

    naanu hastelnalli idde nijavaglu tumba santoshadinda irutta idvi. odi hastel nenapu bantu

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments