ಸಾಸಿವೆ ತಂದ ಜೀವನ್ಮುಖಿ
-ಜಿ.ವಿ.ಜಯಶ್ರೀ,ಪರ್ತಕರ್ತೆ
“Where there’s a will, there’s a way” ಭಾರತಿ ಬಿ.ವಿ. ಅವರ ‘ಸಾಸಿವೆ ತಂದವಳು’ ಕೃತಿಯನ್ನು ಓದಿದಾಗ ಮೇಲಿನ ಸೂಕ್ತಿಗಳಿಗೊಂದು ಅರ್ಥ ಸಿಗುತ್ತದೆ. ಕ್ಯಾನ್ಸರ್ ಲೋಕದಲ್ಲಿ ಬಂಧಿ ಆದಾಗ ಎದುರಿಸಿದ ಕಷ್ಟ ಕೋಟಲೆಗಳನ್ನು ಸರಳವಾಗಿ ಬರೆದು, ಹದವಾದ ಹಾಸ್ಯದ ಸವಿ ನೀಡಿರುವ ಭಾರತಿಯ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ ಸಾಗುತ್ತದೆ. ಒಂದು ಸರಳ ಕಾಯಿಲೆಯನ್ನು ದೊಡ್ಡ ಕಾಯಿಲೆಯೆಂದು ಭ್ರಮಿಸುವ ಪೈಕಿಗಳಲ್ಲಿ ಭಾರತಿ ಸಹ ಸೇರಿದ್ದಾರೆ ಎಂದು ತಮ್ಮ ಬಗ್ಗೆ ಹಾಸ್ಯ ಬೆರಸಿ ಹೇಳುತ್ತಾರೆ. ಪೂರಕ ಉದಾಹರಣೆ ಗಳನ್ನು ನೀಡುತ್ತಾ ತಮಗೆ ಬಂದ ಗಂಟಲು ನೋವು ಕ್ಯಾನ್ಸರ್ ಆಗಿ ಮಾರ್ಪಟ್ಟಿರಬಹುದು ಎನ್ನುವ ಆತಂಕ, ತಲೆಸುತ್ತು ಟ್ಯೂಮರ್ ನಿಂದ ಬರುತ್ತಿದೆ ಎನ್ನುವ ಭ್ರಮೆಯಲ್ಲಿ ಮುಳುಗೇಳುವ ಲೇಖಕಿ ಓದಿಕೊಂಡ ಆಧುನಿಕ ಮನದ ಹೆಣ್ಣು ಮಕ್ಕಳ ಪ್ರತೀಕವಾಗಿದ್ದಾರೆ. ತುಂಬಾ ಅತಿ ಅನ್ನಿಸುವ ಭಯಾತಂಕಗಳು ಯಾವುದೇ ಬಗೆಯಲ್ಲೂ ತೊಂದರೆ ಎಸೆಗದ ಸಮಸ್ಯೆಗಳ ಬಗ್ಗೆ ಹೆದರಿಕೆ ಹೊಂದಿದ್ದವಳಿಗೆ ಸ್ತನ ಕ್ಯಾನ್ಸರ್ ತನ್ನ ದೇಹದ ಭಾಗವಾಗಿದೆ ಎಂದು ತಿಳಿದಾಗ ಎಂತಹ ಮನಸ್ಥಿತಿ ಉಂಟಾಗಿರ ಬಹುದು?
ಹುಟ್ಟಿದವನು ಸಾಯಲೇ ಬೇಕು ಎನ್ನುವುದು ಓದುವುದಕ್ಕೆ ಚಂದ. ಲೇಖಕಿ ಸ್ಥಿತಿಯೂ ಅಂತಹುದ್ದೇ ಆದಾಗ ತನ್ನನ್ನು ತಾನು ಕೌನ್ಸಿಲಿಂಗ್ ಮಾಡಿ ಕೊಂಡ ಬಗೆ ಮತ್ತು ಸಮಸ್ಯೆಯನ್ನು ಸರಳವಾಗಿ ತೆಗೆದು ಕೊಳ್ಳುವ ಮನಸ್ತತ್ವ ಬೆಳೆಸಿಕೊಂಡ ಪರಿ ನಿಜಕ್ಕೂ ಮಾದರಿ. ಈ ಪುಸ್ತಕ ಫ್ಯಾಂಟಸಿಗಳನ್ನು ಹೊಂದಿದೆ ಎಂಬ ಭಾವನೆ ಓದುಗನಲ್ಲಿ ಇದ್ದರೆ, ಅದನ್ನು ಆರಂಭಿಕ ಪುಟಗಳೇ ದೂರ ಮಾಡಿ ಬಿಡುತ್ತದೆ.ತನಗೆ ಸ್ತನ ಕ್ಯಾನ್ಸರ್ ಇರಬಹುದಾದ ಸಾಧ್ಯತೆಗಳ ಬಗ್ಗೆ ಹೆದರಿರುವಾಗ ಆಕೆಯನ್ನು ಪ್ರಾರಂಭದಲ್ಲೇ ಪರೀಕ್ಷಿಸಿದ ದಾದಿ ಮತ್ತು ವೈದ್ಯರ ವರ್ತನೆ ಈಗ ಸಾಮಾನ್ಯ . ನಂತರ ಅರ್ಬುದ ರೋಗ ಇದೆ ಎನ್ನುವುದು ತಿಳಿದ ಬಳಿಕ ಮುಂದಿನ ಪಯಣದ ಬಗ್ಗೆ ಬರೆಯುತ್ತಾ ಕೀಮೋ ಥೆರಪಿಯ ವರ್ಣನೆ ಮಾಡುತ್ತಾರೆ. ಅದರಲ್ಲಿ ನೀಡುವ ಔಷಧಿಯು ಆಕೆಯನ್ನು ಅಕ್ಷರಶಃ ಬಕಾಸುರಿಯನ್ನಾಗಿ ಮಾಡುವ ಬಗೆ, ಈ ಸಮಸ್ಯೆಯು ಆಕೆ ಸ್ವಾತಂತ್ರ ಮತ್ತು ದೇಹದ ಚೈತನ್ಯ ಕಸಿದ ರೀತಿ ಹೇಳುತ್ತಾ, ವೈದ್ಯರು ತನಗೆ ತಿಳಿಸಿದ ಆಹಾರ ಹಾಗೂ ಜೀವನ ಶೈಲಿಯ ಬಗ್ಗೆ ಹೇಳುವ ರೀತಿ ಕಿರಿಕಿರಿ ಉಂಟು ಮಾಡುವುದಿಲ್ಲ.
ಕನ್ನಡದ ನಾಡಿಮಿಡಿತ ಅರಿತ ಕಥೆಗಾರ: ‘ನಾಡಿ’
– ರಾಘವೇಂದ್ರ ಅಡಿಗ ಎಚ್ಚೆನ್
*ಮಡಿಕೇರಿಯಲ್ಲಿ ಬರುವ ಜನವರಿ 7 ರಿಂದ 9 2014ರ ವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜರವರು ಆಯ್ಕೆಗೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಇವರು ಸೃಷ್ಟಿಸಿರುವ ಅನೇಕ ಕಥೆ-ಕಾದಂಬರಿಗಳು ಜನಮಾನಸವನ್ನು ಸೂರೆಗೂಂಡಿವೆ. ಅದರಲ್ಲಿ ಕೆಲವಷ್ಟು ಚಲನಚಿತ್ರಗಳಾಗಿಯೂ ಹೆಸರು ಮಾಡಿವೆ. ಇಂತಹಾ ಅಪೂರ್ವ ಸಾಹಿತಿಯೊಬ್ಬರಿಗೆ ಕನ್ನಡ ಸಮ್ಮೇಳನದ
ಅಧ್ಯಕ್ಷಗಿರಿ ಪ್ರಾಪ್ತವಾದ ಹಿನ್ನೆಲೆಯಲ್ಲಿ ಅವರ ಬದುಕು-ಬರಹದ ಕುರಿತ ಕಿರುನೋಟವೊಂದು ಇಲ್ಲಿದೆ.*
ಈ ಬಾರಿ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ನಡೆಯಲಿರುವ ಎಂಭತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸಾಹಿತಿ ನಾ ಡಿಸೋಜಾರವರಿಗೆ ಈ ಮೂಲಕ ನನ್ನ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.
ಕನ್ನಡ ಭಾಷೆ, ಸಾಹಿತ್ಯ ಉಳಿಯಬೇಕು. ಸರ್ಕಾರ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸಬೇಕು,ಇದೇ ಮುಂತಾದ ಹೇಳಿಕೆಗಳನ್ನು ನೀಡುತ್ತಾ ತಾವು ಹಿಂದಿನಿಂದ ಆಂಗ್ಲ ಸಾಹಿತ್ಯ, ಭಾಷೆಗೆ ಕುಮ್ಮಕ್ಕು ನೀಡುತ್ತಿರುವ, ಜತೆಗೆ ಆಡಳಿತಾರೂಢ ಸರ್ಕಾರಗಳಿಂದ ತಮಗೆ ಬೇಕಾದ ಅನುಕೂಲಗಳನ್ನು ಪಡೆದುಕೊಳ್ಳುವ ಸಲುವಾಗಿ ತಮ್ಮನ್ನು ತಾವು ಸಾಹಿತಿಗಳೆಂದು ಬಿಂಬಿಸಿಕೊಳ್ಳುವ ಒಂದು ವರ್ಗವೇ ನಮ್ಮ ನಡುವಿರುವ ಈ ದಿನಗಳಲ್ಲಿ ತಾವು ಬದುಕಿ ಬಾಳಿದ ಮಲೆನಾಡಿನ ಐಸಿರಿಯ ನಡುವಿನ ಪುಟ್ಟ ಊರು ಸಾಗರದ ಸುತ್ತ ಮುತ್ತ ನಡೆವ ಬೆಳವಣಿಗೆಗಳಿಂದ ಸ್ಪೂರ್ತಿಗೊಂಡು ಅತಿ ಸಾಮಾನ್ಯ ವಸ್ತುವನ್ನಿಟ್ಟುಕೊಂಡು ಓದುಗರಮನಸ್ಸಿಗೆ ತಟ್ಟುವಂತೆ ಕಥೆ ಹೆಣೆಯಬಲ್ಲ ಜಾಣ ಕಥೆಗಾರರಾದ ನಾ.ಡಿಸೋಜಾರಂಥವರು ಯಾವುದೇ ಪ್ರಚಾರವನ್ನು ಬಯಸದೆ ತಮ್ಮ ಪಾಡಿಗೆ ತಾವು ಕನ್ನಡದ ಕೆಲಸದಲ್ಲಿ ತೊಡಗಿರುವಂತಹವರೂ ನಮ್ಮೊಡನಿರುವುದು ನಮಗೆಲ್ಲರಿಗೂ ನಿಜಕ್ಕೂ ಖುಷಿಯ ಸಂಗತಿ. ಇಂತಹಾ ಅಪ್ಪಟ ಕನ್ನಡ ಪ್ರೇಮಿಯೊಬ್ಬರಿಗೆ ಈ ಬಾರಿ ಕನ್ನಡಮ್ಮನ ತೇರನ್ನೆಳೆಯುವ ಅವಕಾಶ ದೊರೆತಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ನಾ. ಡಿಸೋಜಾರವರ ಬದುಕು-ಬರಹಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.





