ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 29, 2014

17

ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೨

‍ನಿಲುಮೆ ಮೂಲಕ

– ಷಣ್ಮುಖ ಎ

ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

ಕ್ಷೇತ್ರಾಧ್ಯಯನ ಆಧಾರಿತ ಮಾಹಿತಿಗಳು ಮತ್ತು ವಿಶ್ಲೇಷಣೆ:

The Scheduled Castes and Scheduled Tribes (Prevention of Atrocities) Act, 1989ಈ ಮೇಲಿನ ಪ್ರಶ್ನೆಯನ್ನು ಪರಿಶೀಲಿಸಲು ಒಂದು ಕ್ಷೇತ್ರಾಧಾರಿತ ಸಂಶೋಧನಾ ಪ್ರಾಜೆಕ್ಟ್‍ನ ಮಾಹಿತಿಗಳು ಕೆಲವು ವಿಶೇಷವಾದ ಆಸಕ್ತಿಕರ ಅಂಕಿ-ಅಂಶಗಳನ್ನು ಕೊಡುತ್ತವೆ. ಈ ಕ್ಷೇತ್ರಾಧ್ಯಯನದ ಮಾಹಿತಿಗಳು, ದಾಖಲಾಗುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಅವುಗಳು ಶಿಕ್ಷೆಯಾಗುವ ಪ್ರಕರಣಗಳ ಪ್ರಮಾಣದ ನಡುವಿನ ಅಂತರಕ್ಕೆ ಕಾರಣಗಳ ಬಗ್ಗೆ ಬೇರೆಯದೇ ರೀತಿಯಲ್ಲಿ ಯೋಚಿಸಲು ದಾರಿ ಮಾಡಿಕೊಡುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದ ಆಂತ್ರೋಪಾಲಜಿ ವಿಭಾಗದ ಅಧ್ಯಾಪಕರೊಬ್ಬರು ತಮ್ಮ ಏಳುಜನ ಸಂಶೋದನಾ ಸಹಾಯಕರೊಂದಿಗೆ ಕರ್ನಾಟಕ ಸರ್ಕಾರದ ಪರವಾಗಿ ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಕೇಂದ್ರದ ವತಿಯಿಂದ ಒಂದು ಸಂಶೋಧನಾ ಅಧ್ಯಯನ ಕೈಗೊಂಡಿದ್ದರು. ಇದು ‘ಕರ್ನಾಟಕದಲ್ಲಿನ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಮತ್ತು ದೌರ್ಜನ್ಯಕ್ಕೆ ಬಲಿಯಾದವರಿಗೆ ನೀಡಲಾಗಿರುವ ಪರಿಹಾರಗಳ’ ಬಗ್ಗೆ ಮಾಡಲಾದ ಒಂದು ಮೌಲ್ಯಮಾಪನ ಅಧ್ಯಯನವಾಗಿದೆ. ಇದು ಬಾಗಲಕೋಟೆಯೊಂದನ್ನುಳಿದು ಉಳಿದ ಕರ್ನಾಟಕದ ಎಲ್ಲಾ 26 ಜಿಲ್ಲೆಗಳಿಂದ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಪರಿಹಾರಗಳನ್ನು ಪಡೆದ ಫಲಾನುಭವಿ ದಲಿತರನ್ನು ಮತ್ತು ಅಪರಾಧಿಗಳನ್ನು ಗುರುತಿಸಿ ಅವರುಗಳಲ್ಲಿ ಪ್ರತಿಜಿಲ್ಲೆಯಿಂದ ಶೇ. 10ರಷ್ಟು ಜನರನ್ನು ಸಂದರ್ಶನ ನಡೆಸಿದ್ದಾರೆ.

ಮೊದಲಿಗೆ ಅವರ ಅಧ್ಯಯನದಲ್ಲಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಮೂಲಕಾರಣ (Root Cause) ವಾದ ಅಂಶಗಳಾವುವು ಮತ್ತು ಅವುಗಳಲ್ಲಿ ಯಾವ ಯಾವ ರೀತಿಯ ನಡವಳಿಕೆಗಳು ಬರುತ್ತವೆ ಎಂಬುದನ್ನು ಯಾವ ರೀತಿ ಗುರುತಿಸುತ್ತಾರೆ ಎನ್ನುವುದನ್ನು ನೋಡೋಣ.

ದಲಿತರ ಮೇಲಿನ ದೌರ್ಜನ್ಯಕ್ಕೆ ಮೂಲಕಾರಣಗಳು: ಈ ವರದಿಯಲ್ಲಿ ನಮೂದಿಸಿರುವಂತೆ ಪೋಲೀಸರು ಎಫ್‍ಐಆರ್‍ನಲ್ಲಿ ಉಲ್ಲೇಖಿಸಿರುವ ಕಾರಣಗಳು ಮತ್ತು ಅಧ್ಯಯನದ ಸಂದರ್ರ್ಭದಲ್ಲಿ ಸಂದರ್ಶಿತ ಮಾಹಿತಿದಾರರು ನೀಡಿದ ಕಾರಣಗಳನ್ನು ತುಲನೆ ಮಾಡಿ ಅವುಗಳನ್ನು ವರ್ಗೀಕರಿಸಿದ್ದಾರೆ. ಅವುಗಳೆಂದರೆ: ಸಾಮಾಜಿಕ ತಾರತಮ್ಯ, ಭೂವಿವಾದ, ರಾಜಕೀಯ ವೈಷಮ್ಯ, ಹಿಂದಿನ ವೈರತ್ವ, ಆರ್ಥಿಕ ವ್ಯವಹಾರಗಳು, ಕಾರ್ಮಿಕ ವ್ಯಾಜ್ಯಗಳು, ಮತ್ತು ಇತರೆ. ಅವುಗಳ ಕುರಿತು ಸಂಕ್ಷಿಪ್ರವಾಗಿ ನೋಡುವುದಾದರೆ,

 • ಸಾಮಾಜಿಕ ತಾರತಮ್ಯ (Social Discrimination): ಈ ವರ್ಗೀಕರಣದಡಿಯಲ್ಲಿ ಅಸ್ಪೃಷ್ಯತೆ ಆಚರಣೆಗಳು ಎನ್ನಬಹುದಾಂತಹ ಅಂಶಗಳನ್ನು ಪಟ್ಟಿಮಾಡಲಾಗಿದೆ ಎನ್ನುತ್ತದೆ ವರದಿ. ಮುಖ್ಯವಾಗಿ, ಸಮಾಜದ ಪ್ರತಿಯೊಂದು ಜಾತಿಗಳು ಪರಸ್ಪರ ವ್ಯವಹರಿಸುವಂತಹ ಪ್ರದೇಶಗಳಾದ ಶಾಲೆಗಳು, ಆಸ್ಪತ್ರೆಗಳು, ಗ್ರಾಮ ಅಥವಾ ಪಟ್ಟಣ ಪಂಚಾಯಿತಿಗಳು, ಮತ್ತಿತರೆ ಕಾರ್ಯಕ್ಷೇತ್ರಗಳಲ್ಲಿ ಮೇಲ್ಜಾತಿಗಳ ಸದಸ್ಯರಿಂದ ಅಸ್ಪೃಷ್ಯತೆಯ ಆಚರಣೆಗಳೆಂದು ಕಂಡುಬಂದ ಅಂಶಗಳು. ಅವುಗಳೆಂದರೆ:
 1. ಶಾಲೆಗಳಲ್ಲಿ ಪರಿಶಿಷ್ಟಜಾತಿಯ ಮಕ್ಕಳನ್ನು ಪ್ರತ್ಯೇಕ ಬೆಂಚ್‍ಗಳಲ್ಲಿ ಕುಳಿತುಕೊಳ್ಳುವಂತೆ ಮಾಡಿರುವುದು.
 2. ವಿಶೇಷ ಸಮಾರಂಭಗಳು, ವಿಧಿ ಆಚರಣೆಗಳು ಹಬ್ಬಗಳ ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರನ್ನು ಊಟಕ್ಕೆ ಪ್ರತ್ಯೇಕ ಸಾಲಿನಲ್ಲಿ ಕೂರಿಸುವುದು.
 3. ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯದಂತೆ ಪರಿಶಿಷ್ಟ ಜಾತಿಯ ಸದಸ್ಯರನ್ನು ತಡೆಯುವುದು.
 4. ಗ್ರಾಮೀಣ ಪ್ರದೇಶಗಳ ಕೆಲವು ಹೊಟೇಲುಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರುಗಳಿಗೆ ಪ್ರತ್ಯೇಕ ಲೋಟ ಮತ್ತು ತಟ್ಟೆಗಳಲ್ಲಿ ಉಪಾಹಾರ ಪಾನಿಯಗಳನ್ನು ನೀಡಿರುವುದು.
 5. ಹಲವು ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರನ್ನು ದೇವಾಲಯ ಪ್ರವೇಶಕ್ಕೆ ನಿರಾಕರಿಸುವುದು.
 6. ಸಾರ್ವಜನಿಕ ಕೊಳವೆಗಳಿಂದ ನೀರು ಪಡೆಯುವಾಗ ಉನ್ನತ ಜಾತಿಯ ಸದಸ್ಯರು ಪರಿಶಿಷ್ಟ ಜಾತಿಯ ಸದಸ್ಯರೊಂದಿಗೆ ಜಗಳವಾಡುವುದು ಕಂಡುಬರುತ್ತದೆ. ಮೇಲ್ಜಾತಿಯವರು ಕೆಳಜಾತಿಯವರಿಗೆ ಕೆಲವು ಪ್ರದೇಶಗಳಲ್ಲಿ ನೀರು ಹಿಡಿದುಕೊಳ್ಳಲು ಬಿಡುವುದಿಲ್ಲ.

 • ಭೂವಿವಾದ: ಸಂಶೋಧಕರ ಪ್ರಕಾರ ಈ ಹಲವು ಪ್ರಕರಣಗಳು ಬರುವುದು ದೇವರಾಜ ಅರಸು ಸರ್ಕಾರದ ಭೂಸುಧಾರಣೆ ಕಾಯಿದೆಯಂತೆ ಭೂಮಾಲೀಕರಿಂದ ಭೂಮಿಯನ್ನು ಪರಿಶಿಷ್ಟ ಜಾತಿಯವರಿಗೆ ಮತ್ತು ಇತರೆ ಭೂರಹಿತರಿಗೆ ಹಂಚಿದ್ದು ಮತ್ತು ನಂತರ ಬಂದ ಮತ್ತೊಂದು ಕಾಯಿದೆಯಾದ ಪರಿಶಿಷ್ಟ ಜಾತಿಯವರಿಗೆ ಈ ರೀತಿ ನೀಡಲಾದ ಭೂಮಿಗಳನ್ನು ಮೇಲ್ಜಾತಿಯವರಿಗೆ ಮಾರಾಟ ಮಾಡಬಾರದು ಎನ್ನವುದಕ್ಕೆ ಸಂಬಂದಪಟ್ಟ ಪ್ರಕರಣಗಳಾಗಿವೆ.
 1. ಗೋಮಾಳಗಳನ್ನು ಮೇಲ್ಜಾತಿಯವರು ಒತ್ತುವರಿ ಮಾಡಿಕೊಂಡು ಕೆಳಜಾತಿಯವರ ಜಾನುವಾರುಗಳಿಗೆ ಪ್ರವೇಶ ನಿರಾಕರಿಸುವುದು.
 2. ಸರ್ಕಾರವೇ ಪರಿಶಿಷ್ಟ ಜಾತಿಯವರಿಗೆಂದು ಮಂಜೂರು ಮಾಡಿದ ಗೋಮಾಳವನ್ನು ಪಡೆಯಲು ಮೇಲ್ಜಾತಿಯವರು ತಡೆಯುವುದು.
 3. ಪರಿಶಿಷ್ಟ ಜಾತಿಯವರ ಜಮೀನನ್ನು ಒತ್ತುವರಿ ಮಾಡಿಕೊಳ್ಳುವುದು
 • ರಾಜಕೀಯ ವೈಷಮ್ಯ: ವರದಿಯ ಪ್ರಕಾರ ಸಣ್ಣ ಪುಟ್ಟ ಜಗಳಗಳನ್ನೂ ಕೂಡ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚು ಪ್ರಾಮುಖ್ಯತೆ ನೀಡಿ ರಾಜಕೀಯ ಲಾಭ ಪಡೆಯುವರೆಂದು ಅದರಲ್ಲೂ ಒಂದು ಕಡೆ ಪರಿಶಿಷ್ಟ ಜಾತಿಯ ಸದಸ್ಯರು ಜಗಳದಲ್ಲಿ ತೊಡಗಿದ್ದರೆ ಈ ಸಂಧರ್ಭಗಳಲ್ಲಿ ಮೇಲ್ಜಾತಿಯ ಅನ್ಯ ಪಕ್ಷದವರ ಮೇಲೆ ದೌರ್ಜನ್ಯ ಕಾಯ್ದೆಯಡಿ ಪ್ರಕರಣಗಳು ದಾಖಲಾಗುತ್ತಿವೆ ಎಂದಿದೆ.ಹಿಂದಿನ ವೈರತ್ವ: ಪ್ರಸ್ತುತ ವರದಿಯು ಹಲವು ಪ್ರಕರಣಗಳಲ್ಲಿ ಹಿಂದಿನ ವೈರತ್ವ ಪ್ರಮುಖ ಕಾರಣ ಎನ್ನುತ್ತದೆ.
 • ಆರ್ಥಿಕ ವ್ಯವಹಾರಗಳು: ಈ ವರದಿಯಲ್ಲಿನ ಅಭಿಪ್ರಾಯದ ಪ್ರಕಾರ ಕರ್ನಾಟಕದಲ್ಲಿನ ದೌರ್ಜನ್ಯ ಪ್ರಕರಣಗಳಿಗೆ ಪ್ರಮುಖ ಕಾರಣವೇ ಹಣ. ಸಾಲ ಮರುಪಾವತಿ ಮಾಡದಿರುವುದು, (ಚಿಟ್) ಫಂಡ್‍ಗಳ/ ಹಣವನ್ನು ಅರ್ಹರಿಗೆ ನೀಡುವಲ್ಲಿ ವಿಳಂಬ ಮಾಡುವುದು, ಹಣದ ಅಸಮಾನ ಹಂಚಿಕೆ ಮುಂತಾದವು ಪ್ರಮುಖ ಕಾರಣಗಳು.
 • ಕಾರ್ಮಿಕ ವ್ಯಾಜ್ಯಗಳು: ಪರಿಶಿಷ್ಟ ಜಾತಿಯವರು ಇತರ ಜಾತಿಯವರ ಜಮೀನು ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ನಡೆಯುವ ಪ್ರಕರಣಗಳು:
 1. ನಿಗದಿಪಡಿಸಿದ ಕೂಲಿಯನ್ನು ಕೊಡದಿರುವುದು.ಕೇಳಿದಾಗ ಹಲ್ಲೆ. (ಒಂದು ಪ್ರಕರಣ)
 2. ಒಬ್ಬ ಭೂಮಾಲೀಕನಲ್ಲಿ ಕೆಲಸ ಮಾಡುವುದಾಗಿ ಒಪ್ಪಿಕೊಂಡು ಇನ್ನೊಬ್ಬರಲ್ಲಿ ಕೆಲಸ ಮಾಡಿದಾಗ ಹಲ್ಲೆ (ಒಂದು ಪ್ರಕರಣ)
 3. ಇದೇ ರೀತಿಯಲ್ಲಿ ಪರಿಶಿಷ್ಟ ಜಾತಿಯವರ ಭೂಮಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಕ್ಕೆ ಹಲ್ಲೆ (ಒಂದು ಪ್ರಕರಣ)
 4. ಮಾಡಿದ ಕೆಲಸಕ್ಕೆ ಒಮ್ಮೆ ಹಣ ಪಡೆದು ಅದನ್ನು ಮದ್ಯಪಾನಕ್ಕೆ ಬಳಸಿಕೊಂಡು ಪುನಃ ಮನೆಯ ಖರ್ಚಿಗೆ ಹಣ ಕೇಳಿದಾಗ ಹಲ್ಲೆ (ಒಂದು ಪ್ರಕರಣ)
 • ನೈತಿಕತೆ : ಇಂತಹ ಪ್ರಕರಣಗಳಲ್ಲಿ ಹೆಚ್ಚಿನವು ಹಳ್ಳಿಗಳಲ್ಲಿ ನಡೆಯುವ ಮಹಿಳೆಯ ಮೇಲಿನ ಅತ್ಯಾಚಾರದ ಆರೋಪದ ಪ್ರಕರಣಗಳು.ಇತರೆ ಜಾತಿಯವನಿಂದ ಪರಿಶಿಷ್ಟಜಾತಿಯ ಮಹಿಳೆಯ ಮೇಲಿನ ಅತ್ಯಾಚಾರ, ಪರಿಶಿಷ್ಟಜಾತಿಯ ಹುಡುಗಿಯೊಂದಿಗೆ ದೈಹಿಕ ಸಂಬಂಧ ಹೊಂದಿ ಮದುವೆಯಾಗಲು ನಿರಾಕರಿಸುವುದು, ವಿವಾಹ ಪೂರ್ವ ಸಂಬಂಧಗಳ ಪ್ರಕರಣಗಳು.
 • ಇತರೆ: ಮೇಲೆ ಉಲ್ಲೇಖಿಸಿದ ಕಾರಣಗಳಲ್ಲಿ ಬರುವಂತಹ ಪ್ರಕರಣಗಳು ಒಂದು ಮತ್ತು ಎರಡು ಘಟನೆಗಳು ಮಾತ್ರವೇ ಇದ್ದರೆ ದೌರ್ಜನ್ಯ ಪ್ರಕರಣಗಳಲ್ಲಿ ಅತಿ ಹೆಚ್ಚಾಗಿ ಪುನರಾವರ್ತನೆಯಾಗಿರುವ ಪ್ರಕರಣಗಳಲ್ಲಿರುವ ಕಾರಣವೆಂದರೆ ಚಿಕ್ಕಪುಟ್ಟ ಕಾರಣಗಳು ಅವುಗಳೆಂದರೆ
 1. ಕಾಲುವೆ ನೀರಿನ ಹರಿವುಗೆ ಸಂಬಂಧಿಸಿದ್ದು
 2. ಕೃಷಿ ಜಮೀನುಗಳಲ್ಲಿ ಹಿಂದಿನ ಕಾಲುದಾರಿಗಳನ್ನು ತೆಗೆದುಹಾಕುವುದು.
 3. ದನಕರುಗಳ ಕಳವು
 4. ದೇವಸ್ಥಾನಗಳಲ್ಲಿನ ವಸ್ತುಗಳ ಕಳವು
 5. ನೀರು ಸಾಕಷ್ಟು ಬಿಡದಿರುವುದು.
 6. ಮೋಟಾರಿನ ಧ್ವನಿ ಕಡಿಮೆ ಮಾಡದಿರುವುದು.
 7. ಧೂಮಪಾನ
 8. ದನಗಳು ಜಮೀನಿಗೆ ನುಗ್ಗುವುದು
 9. ಬಾವಿಯಿಂದ ನೀರು ಸೇದುವುದು
 10. ಮನೆಯ ಹತ್ತಿರ ಗೋಡೆ ಕಟ್ಟುವುದು
 11. ಬೆಂಕಿಯನ್ನು ನಂದಿಸದಿರುವುದು

ಈ ಮೇಲಿನ ಅಂಶಗಳು ದಲಿತರ ಮೇಲಿನ ದೌರ್ಜನ್ಯಕ್ಕೆ ಮೂಲಕಾರಣಗಳು ಎಂದು ಹೇಳಿದ ವರದಿ ಈ ರೀತಿಯ ಕಾರಣಗಳು ಎಷ್ಟೆಷ್ಟು ಪ್ರಕರಣಗಳಲ್ಲಿ ದಾಖಲಾಗಿವೆ ಎನ್ನುವ ಅಂಕಿ ಅಂಶಗಳನ್ನು ನೀಡುತ್ತದೆ. ಮುಂದಿನ ಕೋಷ್ಟಕವನ್ನು ನೋಡಿ;

ಕರ್ನಾಟಕ ರಾಜ್ಯದಲ್ಲಿ ದಲಿತರ ವಿರುದ್ಧದ ದೌರ್ಜನ್ಯಕ್ಕೆ ಮೂಲ ಕಾರಣ

1ಈ ಕೋಷ್ಟಕಗಳನ್ನು ನೋಡಿದರೆ ಒಟ್ಟು 371 ಪ್ರಕರಣಗಳಲ್ಲಿ ಅತಿ ಹೆಚ್ಚು ಮೂಲಕಾರಣ ಎಂದರೆ ‘ಇತರೆ ಚಿಕ್ಕಪುಟ್ಟ ಕಾರಣ’ಗಳು. ಅಂದರೆ ಶೇ 29.64 ರಷ್ಟಿದೆ. ಎರಡನೇ ಅತಿ ಮುಖ್ಯ ಕಾರಣವೆಂದು ದಾಖಲಾಗುವುದು ಸಾಮಾಜಿಕ ತಾರತಮ್ಯ. ಆದರೆ ಇದು ಒಟ್ಟು ದಾಖಲಾದ ಪ್ರಕರಣಗಳಲ್ಲಿ ಶೇ 16.71 ಅಂಶವನ್ನು ಮಾತ್ರವೇ ಹೊಂದಿದೆ. ಅಂದರೆ ಅಸ್ಪೃಷ್ಯತೆಯ ಆಚರಣೆಯ ಘಟನೆಗಳು ಎಂದು ದಾಖಲಾಗುವ ಪ್ರಕರಣಗಳ ಪ್ರಮಾಣವನ್ನು ಇದು ಸೂಚಿಸುತ್ತದೆ. ಅದರಲ್ಲೂ ಈ ಕಾರಣಗಳಿಗೆ ಸಂಬಂಧಿಸಿದಂತೆಯೇ ನೀಡಲಾಗಿರುವ ಇನ್ನೊಂದು ಕೋಷ್ಟಕ ಇನ್ನೂ ಹೆಚ್ಚಿನ ಆಸಕ್ತಿಯ ಅಂಶಗಳನ್ನು ಸೂಚಿಸುತ್ತದೆ.

ಈ ಕೋಷ್ಟಕವು (ಕೋಷ್ಟಕ-276, ಪು.335) ಹೇಳುವಂತೆ ಒಟ್ಟು 371 ಪ್ರಕರಣಗಳಲ್ಲಿ 58 ಪ್ರಕರಣಗಳಲ್ಲಿ ನಿಂದನೆ, 207 ಪ್ರಕರಣಗಳಲ್ಲಿ ದೈಹಿಕ ಹಲ್ಲೆ ಮತ್ತು ನಿಂದನೆ; 112 ಪ್ರಕರಣಗಳಲ್ಲಿ ಅತ್ಯಾಚಾರದ ಯತ್ನ, 31 ಪ್ರಕರಣಗಳು ಅತ್ಯಾಚಾರ; 16 ಪ್ರಕರಣಗಳು ಕೊಲೆಯತ್ನ; 36 ಪ್ರಕರಣಗಳು ಕೊಲೆ ಮತ್ತು 11 ಪ್ರಕರಣಗಳು ಆಸ್ತಿ ನಾಶ. ಈ ಅಂಕಿ ಅಂಶಗಳು ಸೂಚಿಸುವಂತೆ ಹಳ್ಳಿಗಳಲ್ಲಿ ನಡೆಯುವ ಜಗಳಗಳಲ್ಲಿ ತೊಡಗಿದಾಗ ನಡೆಯುವ ನಿಂದನೆ ಮತ್ತು ಹಲ್ಲೆ ಪ್ರಕರಣಗಳಲ್ಲಿ ದಲಿತ ಜಾತಿಗಳವರು ಮತ್ತು ಮೇಲ್ಜಾತಿಯ ಸದಸ್ಯರ ನಡುವೆ ಜಗಳಗಳಾಗಿದ್ದ ಪಕ್ಷದಲ್ಲಿ ಅವುಗಳೇ ಅತಿಯಾಗಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳೆಂದು ದಾಖಲಾಗಿರುವುದು ಇಲ್ಲಿ ಕಂಡು ಬರುತ್ತದೆ. ಅಸ್ಪೃಷ್ಯತೆಯ ಆಚರಣೆಯಂತಹ ಪ್ರಕರಣಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಕಾಯಿದೆ ಬಳಕೆಯಾಗಿದ್ದಕ್ಕಿಂತ ಹೆಚ್ಚಾಗಿ ಸಾಮಾನ್ಯ ಜಗಳಗಳ ಸಂದರ್ಭದಲ್ಲಿಯೇ ಈ ಕಾಯಿದೆ ಅತಿಯಾಗಿ ಬಳಕೆಯಾಗಿದೆ ಎನ್ನವುದನ್ನು ಇಲ್ಲಿ ನೋಡಬಹುದು. ಈ ಪ್ರಕರಣಗಳು ಯಾವ ಸ್ಥಿತಿಯಲ್ಲಿವೆ ಎನ್ನುವುದರ ಕೋಷ್ಟಕಕ್ಕೆ ಈ ವರದಿಯಲ್ಲಿ ನೀಡಲಾಗಿರುವ ವಿವರಣೆಯು ಪುಷ್ಟಿಕೊಡುತ್ತದೆ.

ದಾಖಲಿತ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸ್ಥಿತಿ:

2

ಒಟ್ಟು 371 ಪ್ರಕರಣಗಳಲ್ಲಿ ಕನ್ವಿಕ್ಷನ್ ಆದ ಪ್ರಕರಣಗಳ ಸಂಖ್ಯೆ ಕೇವಲ 10. ಅಂದರೆ ಶೇ. 2.67 ಮಾತ್ರ. 43 ಪ್ರಕರಣಗಳನ್ನು ಅಂದರೆ ಶೇ 11.59 ರಷ್ಟು ಹಿಂಪಡೆಯಲಾಗಿದೆ. ರಾಜಿಮಾಡಿಕೊಂಡ ಪ್ರಕರಣಗಳು 53 (ಶೇ13.75). ‘ಬಿ’ ರಿಪೋರ್ಟ್ ಸಲ್ಲಿಸಲಾದ ಪ್ರಕರಣಗಳು 7. ಇವುಗಳಲ್ಲಿ ಕೋರ್ಟುಗಳಲ್ಲಿ ಪೆಂಡಿಂಗ್ ಇರುವ ಪ್ರಕರಣಗಳೇ ಅತಿ ಹೆಚ್ಚು ಅಂದರೆ 258 ಅಂದರೆ ಶೇ. 69.8.

ಈ ವರದಿಯೂ ಸಹ ಸಮ್ಮೇಳನಗಳಲ್ಲಿ ಪ್ರಧಾನ ಮಂತ್ರಿಗಳು ಮತ್ತು ಸಮಾಜಕಲ್ಯಾಣ ಸಚಿವರು ಕಳವಳ ವ್ಯಕ್ತ ಪಡಿಸಿದ ಹಾಗೆಯೇ ಕನ್ವಿಕ್ಷನ್ ಪ್ರಮಾಣ ಮತ್ತು ಪೆಂಡಿಂಗ್ ಪ್ರಕರಣಗಳ ಪ್ರಮಾಣ ಕರ್ನಾಟಕದಲ್ಲಿರುವುದನ್ನು ಉಲ್ಲೇಖಿಸುತ್ತದೆ.

ಆದರೆ ಇಲ್ಲಿ ಆಸಕ್ತಿಯ ವಿಷಯವೆಂದರೆ ಹೀಗೆ ಕೋರ್ಟುಗಳಲ್ಲಿ ಪ್ರಕರಣಗಳು ಪೆಂಡಿಂಗ್ ಇರಲು ಕಾರಣವೇನು ಎಂಬ ಬಗ್ಗೆ ಇದು ಕಂಡುಕೊಂಡಿರುವ ಕಾರಣ. ಈ ವರದಿಯಂತೆ ಅತಿ ಹೆಚ್ಚಿನ ಪ್ರಕರಣಗಳು ಕೋರ್ಟುಗಳಲ್ಲಿ ಪೆಂಡಿಂಗ್ ಇರಲು ಕಾರಣ ಪ್ರಕರಣ ದಾಖಲಾದ ಮೇಲೆ ಪ್ರಕರಣವನ್ನು ಮುಂದುವರಿಸಿ ನ್ಯಾಯಪಡೆಯವ ಬಗ್ಗೆ ದೂರದಾರರು ಆಸಕ್ತಿಯನ್ನಾಗಲೀ, ಜವಾಬ್ದಾರಿಯನ್ನಾಗಲೀ ತೆಗೆದು ಕೊಳ್ಳುವುದಿಲ್ಲ. ಕೆಲವು ಕೇಸುಗಳಂತೆ ಪ್ರಕರಣ ಯಾವ ಸ್ಥಿತಿಯಲ್ಲಿದೆ ಎನ್ನುವ ಕುರಿತು ಯಾವುದೇ ತಿಳುವಳಿಕೆ ಅವರಿಗಿಲ್ಲ. ಆದರೆ ಆರೋಪಿತರು ಮಾತ್ರ ನ್ಯಾಯಲಯಗಳಿಗೆ ಕಟ್ಟಳೆಗಳನ್ನು ಎದುರಿಸಲು ಸಾಕಷ್ಟು ಹಣವನ್ನು ಖರ್ಚುಮಾಡುತ್ತಿದ್ದಾರೆ ಎಂದು ವರದಿ ಉಲ್ಲೇಖಿಸುತ್ತದೆ (ಪು.ಸಂ. 338).

ಅಂದರೆ ಸರ್ಕಾರದ ಅಥವಾ ಮೇಲ್ಜಾತಿಯ ಅಧಿಕಾರಿಗಳ ತಾತ್ಸಾರಕ್ಕಿಂತ ದೂರುದಾರರೇ ಇದರಲ್ಲಿ ಆಸಕ್ತಿವಹಿಸದಿರುವುದು ಮುಖ್ಯ ಕಾರಣವೆಂದು ಇಲ್ಲಿ ವೇದ್ಯವಾಗುತ್ತದೆ. ಹಾಗೆಯೇ ಮತ್ತೊಂದು ಮುಖ್ಯವಾದ ಅಂಶವೆಂದರೆ ಈ ಪ್ರಕರಣಗಳಲ್ಲಿ ಕನ್ವಿಕ್ಷನ್ ರೇಟ್ ಶೇ.3 ಕ್ಕಿಂತ ಕಡಿಮೆ ಇದ್ದರೂ ಈ ಪ್ರಕರಣಗಳನ್ನು ದಾಖಲಿಸಿದ 371 ಜನರಲ್ಲಿ ಸರ್ಕಾರದಿಂದ ಹಣದ ರೂಪದಲ್ಲಿ ಪರಿಹಾರ ಪಡೆದ ಜನರ ಸಂಖ್ಯೆ 336. ಅಂದರೆ, ಶೇ 90 ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಇವರುಗಳಲ್ಲಿ 118 (ಶೇ. 31.80) ಜನರು ಪರಿಹಾರದ ಮೊತ್ತದ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿದರೆ 209 (ಶೇ.56.33) ಜನ ಪರಿಹಾರ ಸಾಕಾಗಲಿಲ್ಲವೆಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ (ನೋಡಿ ವರಧಿಯ ಕೋಷ್ಟಕ-281 ಪು.ಸಂ.344). ಅಂದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರದ ಮೊತ್ತ ಸಾಲಲಿಲ್ಲವೆಂದು ಅತೃಪ್ತಿ ವ್ಯಕ್ತಪಡಿಸುವರೇ ವಿನಃ ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಆರೋಪಿಗಳಿಗೆ ಶಿಕ್ಷೆಯಾಗಲಿಲ್ಲವೆಂದು ಬೇಸರ ಮಾಡಿಕೊಳ್ಳುವುದಿರಲಿ ಪ್ರಕರಣ ಮುಂದುವರಿಸುವುದರ ಬಗ್ಗೆಯೇ ಆಸಕ್ತಿ ತೋರಿಸುವುದು ಕಂಡುಬರುವುದಿಲ್ಲ ಎಂಬುದು ಈ ವರದಿಯ ಅಂಕಿ-ಅಂಶಗಳು ಮತ್ತು ವಿವರಣೆಯಿಂದ ವೇದ್ಯವಾಗುತ್ತದೆ.

ಈ ವರದಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯ್ದೆಯ ಪರಿಣಾಮಗಳ ವಿವರಣೆಯನ್ನು ನೀಡಲಾಗಿದ್ದು, ಈ ವಿವರಣೆಗೆ ವರದಿಯು ಹೆಚ್ಚು ಮಹತ್ವ ನೀಡದಿದ್ದರೂ ಸಹ ಅದನ್ನು ಗಮನಾರ್ಹ ಅಂಶವಾಗಿ ಪರಿಗಣಿಸಬೇಕಿದೆ.

ಈ ಕುರಿತು ವರದಿಯ 345ನೇ ಪುಟದಲ್ಲಿ ವಿವರಿಸುವುದೇನೆಂದರೆ “ಇಂತಹ ಪ್ರಕರಣಗಳಲ್ಲಿ ಪರಿಹಾರವು ಎರಡು ರೀತಿಯ ಪರಿಣಾಮಗಳನ್ನು ಉಂಟುಮಾಡಿದೆ.ಒಂದು ಕಡೆ ಇದು ದೌರ್ಜನ್ಯಕ್ಕೊಳಗಾದವರಿಗೆ ಭಯದಿಂದ ಹೊರಬಂದು ದೌರ್ಜನ್ಯದ ವಿರುದ್ದ ಸರ್ಕಾರಕ್ಕೆ ದೂರು ನೀಡಲು ಶಕ್ತಿ ನೀಡಿದರೆ ಮತ್ತೊಂದೆಡೆ ಇದು ಸಣ್ಣಪುಟ್ಟ ಘಟನೆಗಳಿಗೂ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುವ ಆಮಿಷವನ್ನು ಒಡ್ಡಿದೆ. ಇದರಿಂದ ಸಾಮಾಜಿಕ ಸಂಬಂಧಗಳಲ್ಲಿ ಅಸಹನೆ ಹುಟ್ಟುಹಾಕಿದೆ. ಇದು ಹಳ್ಳಿಗಳಲ್ಲಿ ಜಗಳ ಹುಟ್ಟುಹಾಕುವವರು ಹೆಚ್ಚಾಗಲು ಮತ್ತು ಮಧ್ಯವರ್ತಿಗಳ ಹಾವಳಿಗೂ ಕಾರಣವಾಗಿದೆ.”

ಹೀಗೆ ಮುಂದುವರಿಯುವ ವರದಿಯ ಈ ಅಭಿಪ್ರಾಯಗಳು ದೌರ್ಜನ್ಯ ಕಾಯಿದೆಯಡಿಯಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳು ಹಣಕಾಸಿನ ಪರಿಹಾರ ಪಡೆಯವುದರೊಡನೆ ಪ್ರಕರಣ ಮುಗಿಯಿತೆಂದು ದೂರುದಾರರು ಭಾವಿಸುವುದನ್ನು ಎತ್ತಿ ತೋರಿಸುತ್ತದೆ. ವರದಿಯಲ್ಲಿ ಪೋಲೀಸರ ಅಭಿಪ್ರಾಯಗಳ ವಿಶ್ಲೇಷಣೆಯೂ ಇದನ್ನೇ ಪುಷ್ಟೀಕರಿಸುತ್ತದೆ.

17 ಟಿಪ್ಪಣಿಗಳು Post a comment
 1. Radhika Chitnis
  ಆಕ್ಟೋ 29 2014

  ನನಗಿದು ಅರ್ಥವಾಗಲಿಲ್ಲ:

  “ಪ್ರಕರಣ ದಾಖಲಾದ ಮೇಲೆ ಪ್ರಕರಣವನ್ನು ಮುಂದುವರಿಸಿ ನ್ಯಾಯಪಡೆಯವ ಬಗ್ಗೆ ದೂರದಾರರು ಆಸಕ್ತಿಯನ್ನಾಗಲೀ, ಜವಾಬ್ದಾರಿಯನ್ನಾಗಲೀ ತೆಗೆದು ಕೊಳ್ಳುವುದಿಲ್ಲ” ಎಂದಾದ ಮೇಲೆ, “ಆರೋಪಿತರು ಮಾತ್ರ ನ್ಯಾಯಲಯಗಳಿಗೆ ಕಟ್ಟಳೆಗಳನ್ನು ಎದುರಿಸಲು ಸಾಕಷ್ಟು ಹಣವನ್ನು ಖರ್ಚುಮಾಡುತ್ತಿದ್ದಾರೆ” ಎಂದರೇನು? ಅಂದರೆ, ಪ್ರಕರಣವೇ ಮುಂದುವರೆಯದಿದ್ದ ಮೇಲೆ ಆರೋಪಿತರು ಮಾತ್ರ ನ್ಯಾಯಲಯಗಳಿಗೆ ಏಕೆ ಹೋಗುತ್ತಾರೆ?

  ಉತ್ತರ
  • Nagshetty Shetkar
   ಆಕ್ಟೋ 29 2014

   ಎಂತಹ ಪ್ರಶ್ನೆ ಕೇಳಿದಿರಿ ಸಹೋದರಿ ರಾಧಿಕಾ!! ತರ್ಕ ಬ್ರಹ್ಮ ಬಾಲಗಂಗಾಧರ ಶಾಸ್ತ್ರಿಗಳಲ್ಲಿ ಹತ್ತು ವರ್ಷಗಳ ಕಾಲ ಶಿಷ್ಯತ್ವ ನಡೆಸಿ ತರ್ಕದಲ್ಲಿ ಪಳಗಿ ಪಕ್ಕಾ ಆಗಿರುವ ಷಣ್ಮುಖ ಅವರನ್ನು ಎಷ್ಟು ಸಲೀಸಾಗಿ ಚಿತ್ ಮಾಡಿದಿರಿ! ಭೇಷ್! ಮುಂದುವರೆಸಿ.

   ಉತ್ತರ
   • Radhika Chitnis
    ಆಕ್ಟೋ 29 2014

    ಮಾನ್ಯ ರಂಜಾನ್ ದರ್ಗಾರವರೆ, ತಾವು ಬೇರೆ ಬೇರೆ ಹೆಸರಿನಡಿ ಮತ್ತೆ ಮತ್ತೆ ಅದನ್ನೇ ಬರೆದು, ಚರ್ಚೆಯನ್ನು ದಯವಿಟ್ಟು ಹಾಳು ಮಾಡಬೇಡಿ. ನಿಮ್ಮ ಬಾಲು ದ್ವೇಷವನ್ನು ನಿಮ್ಮ ಫೆಸ್ ಬುಕ್ಕಿಗೆ ಸೀಮಿತ ಗೊಳಿಸಿಕೊಳ್ಳಿ.ಧನ್ಯವಾದಗಳು.

    ಉತ್ತರ
   • ಆಕ್ಟೋ 30 2014

    ರೀ ಶೆಟ್ಕರ್,
    ಸಾಧ್ಯವಾದರೆ ಚರ್ಚೆ ಮಾಡಿ.ಇಲ್ಲವೆ ಸುಮ್ಮನಿರಿ.ಎಲ್ಲಾ ಕಡೆಯೂ ದಾಳಿಕೋರರಂತೆ ಬಂದು ಹಾಳುಗೆಡವಬೇಡಿ.ನೀವು ಇದೇ ಚಾಳಿಯನ್ನು ಮುಂದುವರೆಸಿದರೆ ನಿಮ್ಮ ಕಮೆಂಟುಗಳನ್ನು ಮಾಡರೇಟ್ ಮಾಡಬೇಕಾದೀತು

    ಉತ್ತರ
  • ಷಣ್ಮುಖ
   ಆಕ್ಟೋ 29 2014

   ಪಿರ್ಯಾದುದಾರರು ನ್ಯಾಯಾಲಯದಲ್ಲಿ ಈ ಪ್ರಕರಣಗಳನ್ನು ಮುಂದುವರಿಸಲು ನಿರಾಸಕ್ತಿ ತೋರಿದರೂ ಪ್ರಕರಣಗಳಂತೂ ಮುಂದುವರಿಯುತ್ತಾ, ನಿರಂತರ ಮುಂದೂಡಲಾಗುತ್ತಿರುತ್ತದೆ. ಆರೋಪಿಯು ವಕೀಲರನ್ನಿಟ್ಟುಕೊಂಡು ನ್ಯಾಯಾಲಯಕ್ಕೆ ಅಲೆಯುತ್ತಲೇ ಇರಬೇಕು.

   ಉತ್ತರ
 2. ಸುದರ್ಶನ
  ಆಕ್ಟೋ 30 2014

  ಮಾನವನ ಹಾಗೂ ಸಮಾಜದ ಮೂಲಭೂತ ಅವಶ್ಯಕತೆ ಪ್ರಾಮಾಣಿಕತೆ . ಕಾನೂನನ್ನು ಪ್ರಾಮಾಣಿಕತೆ ಇರುವುದೆಂಬ ಹುಸಿ ಅಥವಾ ಕುರುಡ ನಂಬಿಕೆ ಮೇಲೆ ರಚಿಸುವುದರಿಂದ ಈರೀತಿಯ ಸಾಮಾಜಿಕ ಸುಧಾರಣೆ ಕಾಯಿದೆಗಳು ದುರ್ಬಳಕೆ ಆಗುವುದು ಅನಿರೀಕ್ಷಿತವೂ ಅಲ್ಲ ,ಅಸಂಭವವೂ ಅಲ್ಲ
  sudarshan

  ಉತ್ತರ
 3. Dunkin Jalki
  ಆಕ್ಟೋ 30 2014

  ಒಂದು ವಿಚಿತ್ರ ವಿದ್ಯಮಾನವನ್ನು ನಿನ್ನ ಗಮನಕ್ಕೆ ತರಬೇಕು ಷಣ್ಮುಖ. ಜಾತಿ ಕುರಿತ theoryಗಳಲ್ಲಿ untouchability ಎಂದರೇನು ಎಂಬುದನ್ನು ನಿರ್ಧರಿಸಲು ಕರಾರುವಕ್ಕಾದ ಮಾಪನಗಳು (ವ್ಯಾಖ್ಯಾನಗಳು) ಇಲ್ಲ. ಆದ್ದರಿಂದ ಯಾರು ಯಾವಾಗ ಅಸ್ಪ್ರಶ್ಯತೆಯನ್ನು ಆಚರಿಸಿದ್ದಾರೆ ಎಂದು ಹೇಳುವುದು ಸಾಧ್ಯವಿಲ್ಲ. ಕಾನೂನು ಇದನ್ನು ಪರಿಹರಿಸಿಕೊಂಡ ರೀತಿ ಮಾತ್ರ ಬಹಳ ವಿಚಿತ್ರವಾಗಿದೆ. ಉದಾ. Untouchability (Offenses) Act (1955) ನಂಥ ಒಂದು ಕಾನೂನು, (ಕಾನೂನಿನಡಿ) ನಿಷೇಧಿಸಲಾಗಿರುವ ಯಾವುದೇ ಆಚರಣೆಯನ್ನು ಒಬ್ಬ ‘ಪರಿಶಿಷ್ಟ ಜಾತಿಗೆ ಸೇರದ ವ್ಯಕ್ತಿ’ ಇನ್ನೊಬ್ಬ ‘ಪರಿಶಿಷ್ಟ ಜಾತಿ ವ್ಯಕ್ತಿಯ’ ವಿರುದ್ಧ ನಡೆಸಿದನೆಂದರೆ ಅದನ್ನು ‘ಜಾತಿ ದೌರ್ಜನ್ಯ’ ಎಂದು ಪರಿಗಣಿಸುತ್ತದೆ.

  ಅಂದರೆ, ಜಾತಿ ಸಿದ್ಧಾಂತಗಳ ಅವೈಜ್ಞಾನಿಕತೆ/ಅಸಾಮರ್ಥ್ಯತೆಯು ಸಮಾಜದಲ್ಲಿ ನಡೆಯುವ ೯೦%ಕ್ಕೂ ಹೆಚ್ಚಿನ ದೌರ್ಜನ್ಯಗಳನ್ನು ‘ಜಾತಿ ದೌರ್ಜನ್ಯ’ವನ್ನಾಗಿ ಬದಲಾಯಿಸುತ್ತದೆ. ಆನಂತರ ನಾವು ಈ ‘ಜಾತಿ ದೌರ್ಜನ್ಯ’ಗಳ ಪಟ್ಟಿಯನ್ನೇ ಹಿಡಿದು ಭಾರತದಲ್ಲಿ ಜಾತಿವ್ಯವಸ್ಥೆ ಇದೆ ಎಂದು ಘೋಷಿಸುವುದು.

  ಉತ್ತರ
  • Nagshetty Shetkar
   ಆಕ್ಟೋ 30 2014

   ಜಾತಿ ವ್ಯವಸ್ಥೆ ಇರುವುದರಿಂದಲೇ ಜಾತಿ ದೌರ್ಜನ್ಯಗಳು ನಡೆಯುತ್ತಿರುವುದು. ದಲಿತರ ಮೇಲೆ ಸವರ್ಣೀಯರು ದೌರ್ಜನ್ಯ ನಡೆಸುತ್ತಲೇ ಬಂದಿದ್ದಾರೆ. ಇದನ್ನು ತಡೆಗಟ್ಟಲು Untouchability (Offenses) Act (1955) ಮಾಡಿರುವುದು. ಈ ಕಾನೂನನ್ನು ವಿರೋಧಿಸುವವರು ಜಾತಿವಾದಿಗಳು ಎಂಬುದು ನಿಸ್ಸಂದೇಹ.

   ಉತ್ತರ
   • Dunkin Jalki
    ಆಕ್ಟೋ 30 2014

    ನಾಗಶೆಟ್ಟಿಯವರೇ, ಮೇಲೆ ಹೇಳಿದ ವಿಚಾರವನ್ನು ಮತ್ತೊಮ್ಮೆ ವಿವರಿಸುತ್ತೇನೆ. ನಿಂದನೆ ಬಿಟ್ಟು ಚರ್ಚೆಗೆ ಬಂದರೆ ಮಾತನಾಡುವ. ಇಲ್ಲವಾದರೆ ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ.

    ಒಬ್ಬ ಬ್ರಾಹ್ಮಣನು ‘ಪರಿಶಿಷ್ಟ ಜಾತಿಯ’ ವ್ಯಕ್ತಿಯೊಬ್ಬನಿಗೆ ತನ್ನ ಅಂಗಡಿಯಿಂದ ಹಾಲನ್ನು ಮಾರಲು ನಿರಾಕರಿಸುತ್ತಾನೆ ಎಂದುಕೊಳ್ಳಿ. ಇದಕ್ಕೆಆತನ ಮನಸ್ಸಿನಲ್ಲಿದ್ದ ಅಸ್ಪ್ರುಷ್ಯತೆಯ (ಬ್ರಾಹ್ಮನಿಸಂನ) ಭಾವನೆಯೇ ಕಾರಣ ಎಂದು ಹೇಳುವುದು ಹೇಗೆ? ಆತನ ಮನಸ್ಸನ್ನು ಬಗೆದು ನೋಡಲು ಸಾಧ್ಯವಿಲ್ಲ. ಆತ ತನ್ನ ಯಾವುದೋ ವಯಕ್ತಿಕ ದ್ವೇಷದಿಂದ ಹಾಗೆ ಮಾಡಿರಲೂಬಹುದು. ಇದನ್ನು ಪರಿಹರಿಸುವುದು ನಮ್ಮ ಜಾತಿ ಸಿದ್ಧಾಂತಗಳಿಗೆ ಸಾಧ್ಯವಿಲ್ಲದ ಮಾತು.

    ಆದರೆ ಇದನ್ನು ಬಗೆಹರಿಸದಿದ್ದರೆ ಕಾನೂನು ತನ್ನ ಕೆಲಸವನ್ನು ಮಾಡಲಾಗುವುದಿಲ್ಲ. ಆದ್ದರಿಂದ ಕಾನೂನು ಇದಕ್ಕೊಂದು ಪರಿಹಾರ ಕಂಡುಕೊಂಡಿದೆ. ಏನದು ಗೊತ್ತಾ? ಕೆಲವೊಂದು ಆಚರಣೆಗಳನ್ನು ಅದು ‘ಅಸ್ಪ್ರುಷ್ಯತೆ’ ಎಂಬ ಪಟ್ಟಿಯಲ್ಲಿ ಸೇರಿಸಿದೆ. ‘ಪರಿಶಿಷ್ಟ ಜಾತಿ’ಯ ವ್ಯಕ್ತಿಯ ಜೊತೆ ‘ಪರಿಶಿಷ್ಟ ಜಾತಿ’ಗೆ ಸೇರದ ವ್ಯಕ್ತಿ ಇಂತಹ ಆಚರಣೆ ನಡೆಸಿದಾಗಲೆಲ್ಲಾ ಅದನ್ನು ಕಾನೂನು ‘ಜಾತಿ ದೌರ್ಜನ್ಯ’ ಎಂದು ನೋಡುತ್ತದೆ.

    ನಾವು ಜಾತಿಗಳ ವಿರುದ್ಧ ಅಲ್ಲ, ‘ಜಾತಿವ್ಯವಸ್ಥೆಯ’ ವಿರುದ್ಧ, ಬ್ರಾಹ್ಮಣರ ವಿರುದ್ಧ ಅಲ್ಲ ‘ಬ್ರಾಹ್ಮನಿಸಂ’ನ ವಿರುದ್ಧ, ಪುರೋಹಿತರ ವಿರುದ್ಧ ಅಲ್ಲ ‘ಪುರೋಹಿತಶಾಹಿ’ಯ ವಿರುದ್ಧ ಹೋರಾಡುವುದು ಎಂದು ನಿಮ್ಮಂಥ ಚಿಂತಕರು ಹೇಳುವುದು ಬರೀ ಬೊಗಳೆ ಎಂದು ಇದರಿಂದ ತಿಳಿಯುತ್ತದೆ. ಜಾತಿವ್ಯವಸ್ಥೆ/ಬ್ರಾಹ್ಮನಿಸಂ/ಪುರೋಹಿತಶಾಹಿ ಎಂಬ ಒಂದು ಸಾಮಾಜಿಕ ವ್ಯವಸ್ಥೆ ಇರುವುದು ನಿಜವೇ ಆದರೆ, ಒಬ್ಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಕೂಡ ತನ್ನದೇ ಜಾತಿಯ ವ್ಯಕ್ತಿಯ ಜೊತೆ ಅಸ್ಪ್ರುಷ್ಯತೆಯನ್ನು/ಜಾತಿ ದೌರ್ಜನ್ಯವನ್ನು ಮಾಡಲು ಸಾಧ್ಯ ಎಂದಾಗಬೇಕು. ಆದರೆ ಕಾನೂನಿನ ಕಣ್ಣಿನಲ್ಲಿ ಅಸ್ಪ್ರುಷ್ಯತೆಯನ್ನು/ಜಾತಿ ದೌರ್ಜನ್ಯವನ್ನು ಕೇವಲ ಪರಿಶಿಷ್ಟ ಜಾತಿಗೆ ಸೇರದ ಒಬ್ಬ ವ್ಯಕ್ತಿ ಮಾತ್ರ ಮಾಡಲು ಸಾಧ್ಯ.

    ಅದಕ್ಕೆ ಹೇಳಿದ್ದು ನಾನು, ಜಾತಿ ಸಿದ್ಧಾಂತಗಳ ಅವೈಜ್ಞಾನಿಕತೆಯು ಸಮಾಜದಲ್ಲಿ ನಡೆಯುವ ಬಹುಪಾಲು ದೌರ್ಜನ್ಯಗಳನ್ನು ‘ಜಾತಿ ದೌರ್ಜನ್ಯ’ವನ್ನಾಗಿ ಬದಲಾಯಿಸುತ್ತದೆ. ಆ ಮೂಲಕ ಪರಿಹಾರ ಮಾಡಬಹುದಾಗಿದ್ದ ಸಮಸ್ಯೆಗಳನ್ನೂ ಪರಿಹಾರವೇ ಇಲ್ಲದ ‘ಜಾತಿ ದೌರ್ಜನ್ಯ’ವನ್ನಾಗಿ ಮಾರ್ಪಡಿಸುತ್ತದೆ.

    ಉತ್ತರ
    • Nagshetty Shetkar
     ಆಕ್ಟೋ 30 2014

     ಸರಿ ಡಂಕಿನ್ ಅವರೇ, ಹಾಗಾದರೆ ನಮ್ಮ ದೇಶದಲ್ಲಿ ನಿಜವಾದ ಅಸ್ಪೃಶ್ಯತೆಯ ಆಚರಣೆ ಇಲ್ಲವೇ ಇಲ್ಲವೇ? ಯಾವುದು ನಿಜವಾದ ಅಸ್ಪೃಶ್ಯತೆ ಹಾಗೂ ಯಾವುದು ಖೊಟ್ಟಿ? ಕೆಲವು ನಿದರ್ಶನಗಳನ್ನು ಕೊಡಿ.

     ಉತ್ತರ
     • Dunkin Jalki
      ಆಕ್ಟೋ 30 2014

      ನಾನು ಹೇಳಿದ್ದಕ್ಕೂ, ನಿಮ್ಮ ಪ್ರಶ್ನೆಗೂ ಏನು ಸಂಬಂಧ? ನಾನು ಹೇಳುತ್ತಿರುವುದು, ನಿಜವಾದ ಅಸ್ಪೃಶ್ಯತೆ ಹಾಗೂ ಯಾವುದು ಖೊಟ್ಟಿ ಎಂಬುದರ ಕುರಿತು ಜಾತಿ ಸಿದ್ಧಾಂತಗಳು ಏನನ್ನೂ ಹೇಳುವುದಿಲ್ಲ ಮತ್ತು ಕಾನೂನು ಈ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳುತ್ತದೆ ಎಂಬುದು. ನೀವು ನಿಮ್ಮ ಪ್ರಶ್ನೆಯನ್ನು ಜಾತಿ ಸಿದ್ಧಾಂತಗಳನ್ನು ಕಟ್ಟುವವರ ಬಳಿ ಕೇಳಿ ನೋಡಿ.

      ಉತ್ತರ
  • ಷಣ್ಮುಖ
   ಆಕ್ಟೋ 30 2014

   ನಿಜ ಡಂಕಿನ್, ಅಸ್ಪೃಶ್ಯತೆಯ ಆಚರಣೆಯ ಕುರಿತು ಯಾವುದೇ ನಿರ್ಧಿಷ್ಟ ವೈಜ್ಞಾನಿಕ ಮಾನದಂಡ/ಥಿಯರಿಯೇ ಇಲ್ಲದಿರುವುದರಿಂದ ಎಲ್ಲಾ ರೀತಯ ಜಗಳಗಳು ಈ ಕಾಯ್ದೆಯ ವ್ಯಾಪ್ತಿಯಲ್ಲಿ ದಾಖಲಾಗುತ್ತಿವೆ. ಒಂದೇ ಅಗತ್ಯವೆಂದರೆ ಆ ಜಗಳಗಳಲ್ಲಿ ತೊಡಗಿರುವವರು ಒಂದು ಪಕ್ಷದವರು ಪರಿಶಿಷ್ಟರಾಗಿರಬೇಕು ಮತ್ತು ಇನ್ನೊಂದು ಪಕ್ಷದವರು ಪರಿಶಿಷ್ಟೇತರರಾಗಿರಬೇಕು. ಈ ಪ್ರಕ್ರಿಯೆಯಲ್ಲಿ ಸಂತ್ರಸ್ಥ ಮತ್ತು ಅಪರಾಧಿಗಳು ಯಾವ ಪಕ್ಷದವರು ಎನ್ನುವ ನಿರ್ಣಯ ವ್ಯಾಜ್ಯ ಹೂಡುವಾಗಲೇ ನಿರ್ಣಯವಾಗಿಬಿಡುವುದು! ಈ ಸ್ವರೂಪದ ನ್ಯಾಯಿಕ ಪ್ರಕ್ರಿಯೆಯಲ್ಲಿ ನಿಜವಾದ ‘ಅಸ್ಪೃಶ್ಯತೆಯ” ಆಚರಣೆಯನ್ನು ಗುರುತಿಸಿ ನಿವಾರಿಸುವ ಸಾಧ್ಯತೆಯೇ ಮುಚ್ಚಿಹೋಗುತ್ತದೆ. ಇದು ಅಸ್ಪೃಶ್ಯತೆಯನ್ನು ವಾಸ್ತವದಲ್ಲಿ ಎದುರಿಸುತ್ತಿರುವವರಿಗೆ ಆಗುತ್ತಿರುವ ಅನ್ಯಾಯ ಎನ್ನುವುದನ್ನು ಗಮನಿಸಲಾಗಲೀ ಯೋಚಿಸಲಾಗಲಿ ಈ ರೀತಿಯ ವಿವರಣಾ ಚೌಕಟ್ಟುಗಳು ಆಸ್ಪದವೇ ಕೊಡುವುದಿಲ್ಲ ಎನ್ನುವುದು ದುರಂತ! ಇದರಿಂದಾಗಿ ಅಸ್ಪೃಶ್ಯತೆಯ ಆಚರಣೆಗಳು ಹಾಗೆಯೇ ಮುಂದುವರಿಯುತ್ತವೆ. ಅವುಗಳನ್ನು ಬೊಟ್ಟುಮಾಡಿತೋರಿಸಿಕೊಂಡು ಉಳಿದವರು ಅದರ ಲಾಬವನ್ನು ಪಡೆಯುತ್ತಲೇ ಇರುತ್ತಾರೆ. ಇದೊಂದು ರೋಗಿಯೊಬ್ಬ ರೋಗದಿಂದ ನರಳುತ್ತಿರುತ್ತಾನೆ! ಆದರೆ ಯಾರೂ ಅವನಿಗೆ ಬಂದಿರುವ ರೋಗವೇನೆಂದು ವೈಜ್ಞಾನಿಕವಾಗಿ ಕಂಡುಹಿಡಿಯಲು ಹೋಗುವುದಿಲ್ಲ! ಬದಲಿಗೆ ಅವನ ರೋಗದ ನರಳಿಕೆಯನ್ನು ತೋರಿಸಿ ಕರಣೆಗಿಟ್ಟಿಸಿಕೊಂಡು ಲಾಬ ಪಡೆಯುವುದು. ಆದರೆ ರೋಗಿ ಮತ್ರ ನರಳುತ್ತಲೇ ಇರುತ್ತಾನೆ ಮತ್ತು ಇವರ ಲಾಬಕ್ಕಾಗಿ ಆತ ನರಳುತ್ತಲೇ ಇರಬೇಕು ಕೂಡ! ಆದರೆ ಈ ರೀತಿ ರೋಗಿಯ ನರಳಿಕೆಗಳನ್ನು ಆರ್ಧ್ರವಾಗಿ ಚಿತ್ರಿಸುವದೇ ‘ಮಾನವೀಯ ಕಾಳಜಿ’ ಮತ್ತು ಇಷ್ಟು ಮಾಡಿದರೇನೆ ಸಾಕು, ಸಮಸ್ಯೆ ಪರಿಹಾರವಾಗಿಬಿಡುತ್ತದೆ ಎನ್ನುವ ನಂಬಿಕೆಯನ್ನು ಇಂತವರು ನಿರಂತರವಾಗಿ ಬಿತ್ತುತ್ತಾ ಬಂದಿದ್ದಾರೆ.

   ಹೀಗಾಗಿ, ಇಂದಿನ ತುರ್ತು ಅಗತ್ಯವೆಂದರೆ ಈಗಿರುವ ‘ಜಾತಿವ್ಯವಸ್ಥೆ’ಗುಮ್ಮವನ್ನೇ ತೋರಿಸಿ ಅವೈಜ್ಞಾನಿಕ ಕರುಣಾಜನಕ ಕಥೆಗಳನ್ನು ಹೇಳಿಕೊಂಡು ಸಿಂಪತಿ ಪಡೆಯುವ ಧೋರಣೆಗಳನ್ನು ಬದಿಗಿಟ್ಟು “ಅಸ್ಪೃಶ್ಯತೆಯ ಆಚರಣೆಗಳ”ನ್ನು ನಿಖರವಾಗಿ ಗುರುತಿಸ ಬಲ್ಲ ಮಾನದಂಡಗಳನ್ನು ಒಳಗೊಂಡಿರುವ ವೈಜ್ಞಾನಿಕ ಸಿದ್ದಾಂತವನ್ನು ಬೆಳೆಸುವುದು. ಆದರೆ ಇಂತಹ ಪ್ರಯತ್ನಗಳಲ್ಲಿ ತೊಡಗಿರುವವರನ್ನೇ ‘ಜಾತಿವಾದಿಗಳು’ ಎನ್ನುವಂತೆ ಬಿಂಬಿಸುವವರ ಬಯವೆಂದರೆ ಒಂದೊಮ್ಮೆ ಈ ರೀತಯ ವೈಜ್ಞಾನಿಕ ಸಿದ್ದಾಂತ ಬೆಳೆದು ಅಸ್ಪೃಶ್ಯತೆಯ ಆಚರಣೆಗಳೇ ನಿವಾರಣೆಯಾಗಿಬಿಟ್ಟರೆ ತಮಗೆ ಲಾಬತಂದು ಕೊಡುತ್ತಿರುವ ಕರುಣಾಜನಕ ಕಥೆಗಳೇ ಇಲ್ಲವಾಗಿಬಿಡುವ ಆತಂಕ! ಇದು ಅರ್ಥವಾಗುವಂತದ್ದೇ. ಇವರ ಆತಂಕಗಳಿಗೆ ಹೆದರಿ ಇಂತಹ ಘಹನವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನೇ ನಿಲ್ಲಿಸಬೇಕೆ?

   ಉತ್ತರ
   • Nagshetty Shetkar
    ಆಕ್ಟೋ 30 2014

    “ನಿಜವಾದ ‘ಅಸ್ಪೃಶ್ಯತೆಯ” ಆಚರಣೆಯನ್ನು ಗುರುತಿಸಿ ನಿವಾರಿಸುವ ಸಾಧ್ಯತೆ”

    ಷಣ್ಮುಖ ಅವರೇ, ನೀವು ನಿಜವಾದ ಅಸ್ಪ್ರುಷ್ಯತೆಯ ಆಚರಣೆ ಅಂತ ಹೇಳಿದ್ದೀರಿ. ಇದರ ಕೆಲವು ನಿದರ್ಶನಗಳನ್ನು ಕೊಡಿ.

    ಉತ್ತರ
    • shripad
     ಆಕ್ಟೋ 30 2014

     ಉದಾಹರಣೆಗೆ ದರ್ಗಾ ಅಲ್ಲದೇ ಬೇರಿಲ್ಲ ಎನ್ನುವ ನಿಮ್ಮ ನಡೆ ನುಡಿ. ದರ್ಗಾ ಬಿಟ್ಟು ಅನ್ಯವನ್ನು ದ್ವೇಷಿಸುವುದು, ತಿರಸ್ಕರಿಸುವುದು, ಹತ್ತಿರಕ್ಕೆ ಬಿಟ್ಟುಕೊಳ್ಳದಿರುವುದು ಇತ್ಯಾದಿ.

     ಉತ್ತರ

Trackbacks & Pingbacks

 1. ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೩ | ನಿಲುಮೆ
 2. ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೩ – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments