2015 ರ ಆಳ್ವಾಸ್ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಸಂದರ್ಶನ
ಸಂದರ್ಶನ : ಪ್ರಕಾಶ್.ಡಿ.ರಾಂಪೂರು,ರಮೇಶ್ ಕೆ.ಆರ್,ವೀರೇಶ್
ಚಿತ್ರ : ಶ್ರೀಧರ್ ಬಳ್ಳಾರಿ
ಕನ್ನಡ ಚಿತ್ರ ರಂಗದಲ್ಲಿ ಸುಮಾರು 39 ವರ್ಷಗಳ ಕಾಲ ಸಿನೆಮಾ ರಂಗದಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ತನ್ನದೇ ಆದ ಛಾಪನ್ನು ಮೂಡಿಸಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ತಮ್ಮ ಹೆಸರನ್ನು ಗುರುತಿಸಿಕೊಂಡಿರುವ ಪ್ರಸ್ತುತ ಕನ್ನಡ ಚಲನಚಿತ್ರೋದ್ಯಮದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಸಿಂಗ್ ಬಾಬು 2015 ರ ಆಳ್ವಾಸ್ ನುಡಿಸಿರಿಯ “ಆಳ್ವಾಸ್ ಪ್ರಶಸ್ತಿ” ಸ್ವೀಕರಿಸುವ ಮುನ್ನ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿದ ಸಂದರ್ಶನ..
ಪ್ರ: ಕನ್ನಡ ಚಿತ್ರ ರಂಗಕ್ಕೆ ಬಂದು ಮೊದಲ ಬಾರಿಗೆ ನಾಗರಹೊಳೆ ಅನ್ನೋ ಚಿತ್ರವನ್ನು ಮಾಡಿದಿರಿ. ನಿಮ್ಮ ಈ ಮೊದಲ ಚಿತ್ರ ಹಿಟ್ ಆಯಿತು ಇದರ ಬಗ್ಗೆ ನಿಮ್ಮ ಮಾತು?
ನಮ್ಮ ತಂದೆಯವರ ಕಾಲದಿಂದಲೂ ನಾನು ಸಿನೆಮಾ ಕ್ಷೇತ್ರದಲ್ಲಿದ್ದು, ಅವರನ್ನು ನೋಡಿ ಕಲಿತ ವಿಷಯಗಳನ್ನು ಸೇರಿಸಿ ಜನರಿಗೆ ಹೊಸ ರೀತಿಯ ಸಿನೆಮಾಗಳನ್ನು ಕೊಡಬೇಕು ಅಂತಾ ಅಂದುಕೊಂಡಿದ್ದೆ. ಆ ಸಂಧರ್ಭದಲ್ಲಿ ನನ್ನ ತಲೆಗೆ ಬಂದಿದ್ದು ನಾಗರಹೊಳೆ ಅನ್ನೋ ಚಿತ್ರ. ಅಲ್ಲಿಯವರೆಗೆ ಮಕ್ಕಳ ಪ್ರಧಾನ ಚಿತ್ರಗಳೇ ಇರಲಿಲ್ಲ. ಅದನ್ನು ನಾನು ಉಪಯೋಗ ಮಾಡಿಕೊಂಡೆ. ಸಿನೆಮಾ ಕೂಡ ಅದ್ಬುತ ಯಶಸ್ಸು ಖಂಡಿತು.
ಮತ್ತಷ್ಟು ಓದು
ತುಘಲಕ್ ದರ್ಬಾರಿನ ಕುರಿತು ಓದಿದ್ದೆವು ಈಗ ನೋಡುತಿದ್ದೇವೆ
– ರಾಕೇಶ್ ಶೆಟ್ಟಿ
೨೦೧೩ರಲ್ಲಿ ಕೇಂದ್ರದಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತಿದ್ದ ಯುಪಿಎ ಸರ್ಕಾರ,ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಶುರು ಮಾಡುತ್ತೇವೆ ಎಂಬ ಪುಡಿ ಓಟ್ ಬ್ಯಾಕ್ ರಾಜಕೀಯ ಶುರು ಮಾಡಿತ್ತು.ಅದಕ್ಕೆ ಪ್ರಬಲವಾದ ವಿರೋಧದ ಅಲೆಯೆದ್ದಿತ್ತು.ಆ ಸಮಯದಲ್ಲಿ “ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?” ಎಂದು ಲೇಖನವೊಂದನ್ನು ಬರೆದಿದ್ದೆ. ೨೦೧೪ರ ಚುನಾವಣೆಯ ನಂತರ ಯುಪಿಎ ಸರ್ಕಾರದಂತೇ,ಅವರ ಸಮಾಜ ವಿಭಜನೆಯ ಯೋಜನೆಗಳೂ ಕಸದ ಬುಟ್ಟಿ ಸೇರಿದ್ದು ಇತಿಹಾಸ.
ಆಗ ಟಿಪ್ಪುವಿನ ಮೂಲಕ ಕರ್ನಾಟಕದಲ್ಲಿ ಅಶಾಂತಿಯೆಬ್ಬಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಿರಲಿಲ್ಲ.ಆದರೆ ಇತ್ತೀಚೆಗೆ ಸರ್ಕಾರವೇ ಮುಂದೆ ನಿಂತು ಟಿಪ್ಪುಸುಲ್ತಾನನ ಜಯಂತಿ ಆಚರಣೆಗೆ ಮುಂದಾಗುವ ಮೂಲಕ ಸಮಾಜದ ಶಾಂತಿಗೆ ಧಕ್ಕೆ ತಂದಿತು. ಆಳುವ ಸರ್ಕಾರವೇ ಮುಂದೆ ನಿಂತು ಗಲಭೆ ಎಬ್ಬಿಸಿದ್ದು ಬಹುಷಃ ಕರ್ನಾಟಕದ ಇತಿಹಾಸದಲ್ಲಿಯೇ ಮೊದಲಿರಬೇಕು.ಈ ಹಿಂದೆ ನಾವೆಲ್ಲ ತುಘಲಕ್ ದರ್ಬಾರಿನ ಬಗ್ಗೆ ಓದಿದ್ದೆವು,ಈಗ ಕಣ್ಣಾರೆ ನೋಡುವಂತಾಗಿದೆಯಷ್ಟೇ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಬಹಳಷ್ಟು ನಿರೀಕ್ಷೆಗಳಿದ್ದವು.ಆ ನಿರೀಕ್ಷೆಗಳಿಗೆಲ್ಲ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಸಾಕ್ಷಿಯಾಗಿದ್ದವು.ಈ ಬಾರಿ ಮುಖ್ಯಮಂತ್ರಿಯಾಗುವ ಮೊದಲೇ ತಮ್ಮ ಸುತ್ತ ಪರಾವಲಂಬಿ ಸೆಕ್ಯುಲರ್ ಬುದ್ಧಿಜೀವಿಗಳ ಸಮೂಹವೊಂದನ್ನು ಕಟ್ಟಿಕೊಂಡೇ ಪಟ್ಟಕ್ಕೇರಿದರು.ಪಟ್ಟಕ್ಕೇರಿದ ದಿನವೇ ಅನ್ನಭಾಗ್ಯದ ಘೋಷಣೆ ಮಾಡಿದರು.ಆ ಯೋಜನೆಯಿಂದ ಬಡವರಿಗೇನೋ ಅನ್ನ ಸಿಕ್ಕುತ್ತಿರುವುದು ನಿಜವೇ.ಆದರೆ,ಗ್ರಾಮೀಣ ಪ್ರದೇಶದಲ್ಲಿ ಅದರಿಂದ ಆಗಿರುವ ಅನಾಹುತಗಳೇ ಹೆಚ್ಚು.ಸುಲಭವಾಗಿ ಸಿಗುವಾಗ ಕಷ್ಟವೇಕೆ ಪಡಬೇಕು ಎಂಬುದು ಜನರ ಸ್ವಾಭಾವಿಕ ನಿಲುವಾಗಿರುತ್ತದೆ. ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕಾಗಿದ್ದ ಸರ್ಕಾರ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಕೈಯೊಡ್ಡುವಂತೆ ಮಾಡುತ್ತಿದೆ.
ಮತ್ತಷ್ಟು ಓದು
ಹೆಚ್ಚುತ್ತಿರುವುದು ಅಸಹಿಷ್ಣುತೆಯೋ ಅಥವಾ ಅಭದ್ರತೆಯೋ…?
-ಡಾ. ಪ್ರವೀಣ್ ಟಿ. ಎಲ್. ಕುವೆಂಪು ವಿಶ್ವವಿದ್ಯಾನಿಲಯ
ಕಳೆದ ಕೆಲವು ದಿನಗಳಿಂದಲೂ ನಮ್ಮ ಸುತ್ತ ಒಂದು ಗಂಭೀರ ಚರ್ಚೆ/ ವಿವಾದ/ಹೋರಾಟ ನಡೆಯುತ್ತಿದೆ. ಅದೆಂದರೆ “ಅಸಹಿಷ್ಣುತೆಯು ಹೆಚ್ಚುತ್ತಿರುವ ಕಾರಣಕ್ಕೆ ಪ್ರಶಸ್ತಿ ವಾಪಸು ಮಾಡುತ್ತಿರುವುದು ಮತ್ತು ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿರುವುದು”. ಆದರೆ ಹೀಗೆ ಹೇಳುತ್ತಿರುವವರೆಲ್ಲರೂ ಪ್ರಗತಿಪರ, ಎಡಪಂಥೀಯ ಚಿಂತನೆಯ ಪಾಲುದಾರರೇ ಆಗಿರುವುದು ಆಶ್ಚರ್ಯ. ಯಾವುದೇ ಒಂದು ವಾದವನ್ನು ಮಂಡಿಸಬೇಕಾದರೆ ತಾರ್ಕಿಕತೆ ಮತ್ತು ವಾದವನ್ನು ಬಲಪಡಿಸುವ ಫ್ಯಾಕ್ಟ್ ಗಳು ಮುಖ್ಯವಾಗುತ್ತದೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳುತ್ತಿರುವ ಸಾಹಿತಿಗಳಾಗಲೀ, ರಾಜಕಾರಣಿಗಳಾಗಲೀ, ಸಿನಿಮಾ ಸ್ಟಾರ್ ಗಳಾಗಲೀ ಅದನ್ನು ಸಾಭೀತು ಪಡಿಸುವ ಗೋಜಿಗೆ ಹೋಗದಿರುವುದು ಅವರ ವಾದದ ಟೊಳ್ಳುತನಕ್ಕೆ ಹಿಡಿದ ಕನ್ನಡಿ. ಆದರೆ ತಮ್ಮ ಟೊಳ್ಳುತನದ ಪ್ರದರ್ಶನಕ್ಕೆ ಈ ಮಟ್ಟದ ಪೈಪೋಟಿಗೆ ಬಿದ್ದಿರುವುದು ಮಾತ್ರ ವಿಪರ್ಯಾಸ. ಅದೇನೆ ಇರಲಿ ಈ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಬೇಕಿರುವುದು ನಮ್ಮ ಕರ್ತವ್ಯ. ಮತ್ತಷ್ಟು ಓದು
ಹೊಸತನದ ಹುಡುಕಾಟ ಇಂದಿನ ಅಗತ್ಯತೆ: ಡಾ.ಎಂ.ಮೋಹನ್ ಆಳ್ವ
– ಶ್ರೀಗೌರಿ ಎಸ್.ಜೋಶಿ,ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜು,ಮೂಡುಬಿದಿರೆ
ನೇರಸಂದರ್ಶನದಲ್ಲಿ ಮಹತ್ವದ ವಿಚಾರಗಳನ್ನು ತೆರೆದಿಟ್ಟ `ಮೂಡುಬಿದಿರೆಯ ಕನಸುಗಾರ’
`ಕನ್ನಡಭಾಷೆಯನ್ನು ಬೆಳೆಸುವ, ಕನ್ನಡ ಕಟ್ಟುವ ಕಾರ್ಯಗಳನ್ನು ಕೇವಲ ಸರಕಾರ, ಅಕಾಡೆಮಿಗಳೇ ಏಕೆ ಮಾಡಬೇಕು?ಕನ್ನಡ ಮನಸ್ಸುಗಳನ್ನು ಕಟ್ಟುವ ಕೈಂಕರ್ಯ ಒಬ್ಬ ಶ್ರೀಸಾಮಾನ್ಯನಿಂದ ಏಕೆ ಆಗಬಾರದು?’ ಎಂಬ ಆಶಯದೊಂದಿಗೆ ಆರಂಭವಾದ ಕನ್ನಡದ ಹಬ್ಬ `ಆಳ್ವಾಸ್ ನುಡಿಸಿರಿ’. ಈ ಕನ್ನಡ ಉತ್ಸವದ ರೂವಾರಿ `ಸಂಸ್ಕೃತಿಯ ಹರಿಕಾರ’ ಎಂದೇ ಖ್ಯಾತರಾದ ಡಾ.ಎಂ. ಮೋಹನ್ ಆಳ್ವರು. ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ಹೊಸತನಗಳಿಗೆ ಸ್ಪಂದಿಸುವುದು ಅಗತ್ಯವೆಂದು ಹೇಳುವ ಡಾ.ಆಳ್ವರು `ಕರ್ನಾಟಕ:ಹೊಸತನದ ಹುಡುಕಾಟ’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ಈ ಸಲದ ನುಡಿಸಿರಿಯನ್ನು ಆಯೋಜಿಸಿದ್ದಾರೆ. ಹೊಸತನ ಎಂದರೇನು, ಹೊಸತನದಡಿಯಲ್ಲಿ ನುಡಿಸಿರಿಯ ಆಯಾಮಗಳೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದು ಹೀಗೆ…
ಪ್ರ: `ಆಳ್ವಾಸ್ ನುಡಿಸಿರಿ’ ಪ್ರತಿಸಲವೂ `ಕನ್ನಡ ಮನಸ್ಸು’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ನಡೆಯುತ್ತಿತ್ತು.ಆದರೆ ಈ ಸಲದ ಕೇಂದ್ರ ವಿಷಯವನ್ನು `ಕರ್ನಾಟಕ: ಹೊಸತನದ ಹುಡುಕಾಟ’ ಎಂದು ಬದಲಾಯಿಸಿದ್ದೀರಿ. ಈ ಬದಲಾವಣೆಯ ಹಿನ್ನೆಲೆಯೇನು?
12 ವರ್ಷಗಳಿಂದ ಕನ್ನಡ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಬೇರೆ ಬೇರೆ ಪರಿಕಲ್ಪನೆ ಕೊಟ್ಟಿದ್ದೇವೆ. ಆಳ್ವಾಸ್ ವಿಶ್ವನುಡಿಸಿರಿ-ವಿರಾಸತ್ ಸಂದರ್ಭದಲ್ಲಿ ಮುಖ್ಯ ವಿಷಯ `ಕನ್ನಡ ಮನಸ್ಸು: ಅಂದು, ಇಂದು, ಮುಂದು’ ಎಂದಿತ್ತು.ಈ ಸಲದ ಕೇಂದ್ರ ವಿಷಯವನ್ನು `ಕರ್ನಾಟಕ: ಹೊಸತನದ ಹುಡುಕಾಟ’ ಎಂದು ಬದಲಾಯಿಸಲಾಗಿದೆ. ಏಕೆಂದರೆ ನಮ್ಮ ಬದುಕು, ಸಂಸ್ಕೃತಿ ನಿಂತ ನೀರಾಗಬಾರದು. ನಾವು ಯಾವತ್ತೂ ಹೊಸತನದ ಹುಡುಕಾಟದಲ್ಲಿರಬೇಕು. ಇಲ್ಲದಿದ್ದರೆ ನಾವು ಸವಕಲು ನಾಣ್ಯಗಳಾಗುತ್ತೇವೆ. ಹೊಸತನದೊಟ್ಟಿಗೆ ಹೋದಾಗ ಮಾತ್ರ ನಾವು ಚಲಾವಣೆಯಲ್ಲಿರುವ ನಾಣ್ಯಗಳಾಗುತ್ತೇವೆ. ಹೊಸತನದ ಹುಡುಕಾಟ ಇಂದಿನ ಅಗತ್ಯತೆ. ಕಾಲಕ್ಕೆ ಸರಿಯಾಗಿ ನಾವು ಸ್ಪಂದಿಸಬೇಕು ಹಾಗೂ ಅತ್ಯಂತ ಅವಶ್ಯಕವೂ ಹೌದು. ಈ ದೃಷ್ಟಿಯಲ್ಲಿ ನಾವು ನುಡಿಸಿರಿಯ ಕೇಂದ್ರ ವಿಷಯವನ್ನು `ಕರ್ನಾಟಕ:ಹೊಸತನದ ಹುಡುಕಾಟ’ ಎಂದು ಬದಲಾಯಿಸಿದ್ದೇವೆ.
ಮತ್ತಷ್ಟು ಓದು
ಪ್ರಶಸ್ತಿ ವಾಪಸಾತಿ : ಚಿಂತನೆಗಳು ವೈಚಾರಿಕವಾಗಿರಲಿ
– ಡಾ. ಟಿ. ಗೋವಿಂದರಾಜು
ಪ್ರಶಸ್ತಿ ವಾಪಸಿಗರ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳದ ಕೆಲ ಸಂಕುಚಿತ ಮನಸ್ಸುಗಳು ಇನ್ನೂ ಕಟಕಿಯಾಡುತ್ತಿರುವುದು ವಿಷಾಧನೀಯ. ಯಾರೋ ಒದರಿದ್ದನ್ನೇ ಪರಮ ಪ್ರಸಾದದಂತೆ ಸ್ವೀಕರಿಸಿ, ಆ ನಕಲು ಮಾತುಗಳನ್ನೇ ಮರು ಪ್ರಸಾರ ಕೇಂದ್ರಗಳಂತೆ ತಾವೂ ಉಗ್ಗಡಿಸುತ್ತಿರುವುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುತ್ತೆ. “ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿ” ಗೌರವಿಸಲಾಗುತ್ತದೆ..ಎನ್ನುವ ರಾಮಶೇಷ ಅವರೇ ಕೊನೆಗೆ, “ ಇಂತಹ ಪ್ರಶಸ್ತಿಗಳನ್ನು ಯಾವುದಕ್ಕೋ ನೆಪ ಮಾಡಿ ಹಿಂದಿರುಗಿಸುತ್ತಿರುವುದು ಅಕ್ಷಮ್ಯ.. ಇವರು ಕಷ್ಟಪಟ್ಟು ಶ್ರಮ ಹಾಕಿ ಈ ಪ್ರಶಸ್ತಿಗಳನ್ನು ಪಡೆದವರಲ್ಲ ಅಂತ ಅನ್ನಿಸುತ್ತದೆ..” ಎಂದೂ ತಮ್ಮ ಪತ್ರದಲ್ಲಿ ಬರೆದಿದ್ದಾರೆ (ಪ್ರವಾ; ವಾವಾ,23.11.15). ಅವರ ಮಾತಿನಲ್ಲೇ ವಿರೋಧಾಭಾಸ, ಅಸಹಿಷ್ಣುತೆ ತುಳುಕಾಡಿದೆ. ‘ಅವಧಿ’,‘ನಿಲುಮೆ’, ‘ಫೇಸ್ ಬುಕ್’ ಮತ್ತಿತರ ಜಾಲ ತಾಣಗಳಲ್ಲೂ ಹಾಗೆ ಕುಚೋದ್ಯ ಮಾಡುವವರಿದ್ದಾರೆ. ಅಷ್ಟಕ್ಕೂ, ಈ ರೀತಿ ಮಾತಾಡಿದವರಲ್ಲಿ ರಾಮಶೇಷ ಅವರು ನೂರೊಂದನೆಯವರಿದ್ದಂತಿದೆ.ಮಾಧ್ಯಮದ ಮುಂದೆ ತಮ್ಮದೂ ಒಂದು ಇರಲಿ ಎಂದು ಗುರಿ ತಪ್ಪಿದ ಕಲ್ಲು ಒಗೆವ ಬದಲು, ತಮ್ಮ ಮನಸ್ಸನ್ನೇ ಕೇಳಿಕೊಂಡಿದ್ದರೆ ಆಗ, ಅವರ ಪ್ರತಿಕ್ರಿಯೆ ಬೇರೆಯಾಗಿರುತ್ತಿತ್ತು. ಕೆಲವರು ಪ್ರಶಸ್ತಿ ವಾಪಸಿ ಮಾಡಿದರೆ, ಹಲವರು ತಮ್ಮ ಬುಡಕ್ಕೇ ಬೆಂಕಿ ಬಿದ್ದಂತೆ ಬೆದರಿ, ಅಬ್ಬರಿಸುತ್ತಿರುವುದರಲ್ಲಿ, ಅವರೆಲ್ಲಾ ತಮ್ಮದೇ ರಾಜಕೀಯ ಹಿತಾಸಕ್ತಿಗೆ ಹಪಹಪಿಸುತ್ತಿರುವವರೆಂಬುದು ಗೋಚರವಾಗುತ್ತದೆ.
ಪ್ರಶಸ್ತಿ ವಾಪಾಸು ಮಾಡುತ್ತಿರುವವರೆಲ್ಲಾ ಕೇಂದ್ರ ಸರ್ಕಾರ ಅರ್ಥಾತ್ ಈಗಿನ ಪ್ರಧಾನಿಯವರನ್ನು ವಿರೋಧಿಸುತ್ತಿರುವವರು ಎಂಬ ಹೇಳಿಕೆಗಳೂ ವಿವೇಚನೆ ಇಲ್ಲದವು. ಏಕೆಂದರೆ, ಹೆಚ್ಚಿನವರಿಗೆ ದೊರೆತಿರುವುದು ರಾಜ್ಯ ಮಟ್ಟದ ಪುರಸ್ಕಾರಗಳು. ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಲವು ಸಾಹಿತಿಗಳೂ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಕರ್ನಾಟಕದಲ್ಲಿ ಅಸಹಿಷ್ಣುತೆ ಬಗೆಗೆ ಅಷ್ಟೇ ಅಲ್ಲ, ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗಾಗಿ ಒತ್ತಾಯಿಸಿಯೂ ಇಲ್ಲಿನವರು ಹೋರಾಟ ಮಾಡುತ್ತಿದ್ದಾರೆ. ಇದನ್ನೆಲ್ಲಾ ತನ್ನ ವಿರುದ್ಧ ಎಂದೇ ಕೇಂದ್ರ ಸರ್ಕಾರವಾಗಲೀ, ಅದರ ಹಿತಾಸಕ್ತರಾಗಲೀ ನಂಬುವುದು ಸಿನಿಕತನವಾಗುತ್ತದೆ. ಅಲ್ಲದೆ, ವಾಪಾಸು ಮಾಡುವವರು ಒಂದು ಪಕ್ಷದ ಪರವಾದವರು ಎನ್ನುವುದಾದರೆ, ವಿಚಾರವಂತರ ನಿಲುವನ್ನು ಖಂಡಿಸುತ್ತಿರುವವರೂ ತಮ್ಮದೇ ಬೇರೊಂದು ಪಕ್ಷದ ರಕ್ಷಣೆಗೆ ಟೊಂಕ ಕಟ್ಟಿದವರು ಎಂಬ ನಿಲುವಿಗೆ ಬರಬೇಕಾಗುತ್ತದೆ.
“ನುಡಿಸಿರಿ” ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಮನಸ್ಥಿತಿ
– ಗುರುಪ್ರಸಾದ್ ಆಚಾರ್ಯ
” ಆಳ್ವಾಸ್ ನುಡಿಸಿರಿ ” ಮತ್ತು ” ಆಳ್ವಾಸ್ ವಿರಾಸತ್ ” ಈ ಎರಡು ಸಾಂಸ್ಕೃತಿಕ ಹಬ್ಬಗಳ ಹೆಸರು ಕೇಳದ ಜನರು ತೀರಾ ವಿರಳ ಅಂತನೇ ಹೇಳಬೇಕು, ಆ ಮಟ್ಟಿಗೆ ಅದು ಜನರ ಗಮನ ಸೆಳೆದಿದೆ. ಬರಿಯ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟಕ್ಕೂ ತನ್ನ ಖ್ಯಾತಿಯನ್ನ ವಿಸ್ತರಿಸಿ ಅದರಾಚೆಗೂ ತನ್ನ ಛಾಪು ಮೂಡಿಸಿದೆಯೆಂದರೆ ಅದರ ಸ್ವರೂಪ, ವೈಶಿಷ್ಟ್ಯತೆ ಹೇಗಿದ್ದರಬೇಡ. ಇವೆರಡರ ಕಲ್ಪನೆಯೇ ವಿಶಿಷ್ಟವಾದದ್ದು ” ನುಡಿಸಿರಿ ” ಅನ್ನೋದು ನಮ್ಮ ನಾಡಿನ ನುಡಿಗಾಗಿ ಮೀಸಲಿಟ್ಟ ಕಾರ್ಯಕ್ರಮವಾದರೆ ” ವಿರಾಸತ್ ” ನಮ್ಮ ಸಾಂಸ್ಕೃತಿಕ ವೈಭವಕ್ಕೆ ಹಿಡಿದ ಕೈಗನ್ನಡಿ. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಭಾಷೆ ಇವೆರಡರ ಕಬಂಧ ಬಾಹುಗಳ ಬಂಧನದಲ್ಲಿರೋ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಈ ಎರಡೂ ಕಾರ್ಯಕ್ರಮಗಳೇ ಆಶಾಕಿರಣ. ಅಷ್ಟಾಗಿದ್ದೂ ಈ ನುಡಿಸಿರಿಯ ಬಗ್ಗೆ ಅಪಸ್ವರ ಏಳುತ್ತಿದೆ ಅಂದರೆ ಅದನ್ನ ದುರಂತವೆನ್ನದೆ ಇನ್ನೇನನ್ನಲಿ…??
ಬಹುಶಃ ಕಳೆದ ಬಾರಿಯೇ ಇದ್ದಿರಬೇಕು…. ತೀರಾ ಹಿಂದುಳಿದ ವರ್ಗದ ಸಾಂಸ್ಕೃತಿಕ ಕಲಾಪ್ರಕಾರವೊಂದನ್ನ ಅಳವಡಿಸಿಕೊಂಡಿದ್ದಕ್ಕೆ ಅಪಸ್ವರವೊಂದು ಕೇಳಿ ಬಂದಿತ್ತು. ಕಾರಣ ಆ ಕಲಾವಿದರು ತಮ್ಮ ಮೈ ಮತ್ತು ಮುಖಕ್ಕೆ ಪೂರ್ತಿ ಕಪ್ಪು ಬಣ್ಣ ಬಳಿದುಕೊಂಡಿದ್ದರು.ಭಾರತದಲ್ಲಿ ಕಲಾ ಪ್ರಕಾರಗಳು ಲೆಕ್ಕವಿಲ್ಲದಷ್ಟಿದೆ ಅನ್ನೋದು ನಮಗೆಲ್ಲಾ ಗೊತ್ತಿದ್ದ ವಿಷಯವೇ.ಪ್ರತಿಯೊಂದು ಜನಾಂಗಕ್ಕೂ ಅದರದೇ ಆದ ಸಾಂಸ್ಕೃತಿಕ ಆಚರಣೆಗಳಿರುತ್ತದೆ.ಆ ಜನಾಂಗಕ್ಕೆ ಆ ಕಲಾ ಪ್ರಕಾರದ ಕುರಿತು ಅಭಿಮಾನವಿದ್ದೇ ಇರುತ್ತದೆ, ಇಂಥಾದ್ದರಲ್ಲಿ ಆ ಕಲಾ ಪ್ರಕಾರ ಉಳಿಯಲಿ ಅನ್ನುವ ನಿಟ್ಟಿನಲ್ಲಿ ಅಂತಾ ಕಲಾವಿದರನ್ನ ಕರೆದು ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟು ಆ ಕಲೆಯನ್ನೂ ಉಳಿಸುವ ಪ್ರಯತ್ನ ಪಟ್ಟ ಮೋಹನ್ ಆಳ್ವಾರವರು ಟೀಕೆಗೊಳಪಡುತ್ತಾರೆ.ಅದು ಆ ಜನಾಂಗದ ನಿಂದನೆ ಎಂಬಂತೆ ಲೇಖನ ಬರೆಯುತ್ತಾರೆ.ವಾಸ್ತವದಲ್ಲಿ ” ಜನಾಂಗೀಯ ನಿಂದನೆ ” ಅನ್ನೋ ಆರೋಪ ಹೊರಿಸಿದವರ್ಯಾರು ಆ ಕಲಾವಿದರನ್ನ ಮಾತಾಡಿಸಿ ಅವರ ಮನದ ಮಾತನ್ನ ತಮ್ಮ ಬರಹದ ಮೂಲಕ ಹೇಳಿದ್ದಲ್ಲ. ತಮಗೆ ತಾವೇ ಅದು ಜನಾಂಗೀಯ ಅವಹೇಳನ ಅನ್ನುವ ನಿರ್ಧಾರ ತೆಗೆದುಕೊಂಡು ಡಂಗುರ ಸಾರಿಬಿಟ್ಟಿದ್ದರು. ಆದರೆ ಅದೇ ಕಲಾ ಪ್ರಕಾರವನ್ನ ಖುದ್ದು ರಾಜ್ಯಸರ್ಕಾರವೇ ಒಮ್ಮೆ ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲೋ ಅಥವಾ ದಸರಾ ಉತ್ಸವದಲ್ಲೂ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿತ್ತು. ಆವಾಗ ಏನೂ ಮಾತನಾಡದವರು ಆಳ್ವಾಸ್ ನುಡಿಸಿರಿಯಲ್ಲಿ ಇದನ್ನ ಕಂಡೊಂಡನೆ ಕೆಂಡ ತುಳಿದವರಂತೆ ಆಡತೊಡಗಿದ್ದಾದರೂ ಯಾಕೆ…? ಕಲಾವಿದರಿಗೆ ಮುನಿಸಿಲ್ಲ, ಕಲೆಯನ್ನ ಪೋಷಿಸೋರಿಗೂ ಕೀಳಾಗಿ ಕಾಣಿಸುವ ಯೋಚನೆ ಇಲ್ಲದಿರುವಾಗ ಮೂರನೆ ವ್ಯಕ್ತಿಗಳಿಂದ ಅಪಸ್ವರ ಬರುತ್ತಿರುವುದು ಯಾಕೆ…?
ಅಸಹಿಷ್ಣುತೆ ಎಂಬ ಅರ್ಥವಾಗದ ಸುಳಿಯಲ್ಲಿ..
– ಚೈತ್ರ, ಕುವೆಂಪು ವಿಶ್ವವಿದ್ಯಾನಿಲಯ.
ಇತ್ತೀಚೆಗೆ ಅಸಹಿಷ್ಣುತೆ ಎಂಬ ಶಬ್ಧ ಎಲ್ಲೆಡೆಯಲ್ಲಿಯೂ ಪ್ರಭಾವಿಯಾಗಿ ಚರ್ಚೆಗೊಳಗಾಗುತ್ತಿದೆ. ಈ ವಿಚಾರದ ಕುರಿತಾಗಿ ವಿವಿಧ ವಲಯಗಳಲ್ಲಿನ ಪ್ರಭಾವಿ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ನೀಡುತ್ತಿದ್ದಾರೆ. ಇವುಗಳನ್ನೆಲ್ಲ ಗಮನಿಸಿದರೆ 12ನೆ ಶತಮಾನದ ನಂತರ ಮತ್ತೊಂದು ಬೃಹತ್ ಚಳುವಳಿಯಾಗುತ್ತಿದೆ ಎಂದೇನಾದರೂ ಭಾವಿಸಿದರೆ ಅದು ಮಾಯೆ. ಪ್ರಸ್ತುತದಲ್ಲಿ ಕೆಲವು ಪಂಥಕ್ಕೆ ಮತ್ತು ಪಕ್ಷಕ್ಕೆ ಸೇರಿದ ಕೆಲವು ಸಾಹಿತಿಗಳು ಮತ್ತು ಪ್ರಶಸ್ತಿ ವಿಜೇತರು ತಮ್ಮ ಅಸಮಧಾನದಿಂದ ಕೆಲವು ಗಂಭೀರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತಿದೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಕಾರಣದಿಂದ ವಿಭಿನ್ನ ಚಟುವಟಿಕೆಗಳು ವಿಭಿನ್ನ (ಒಂದೇ ಎಂದರೂ ತಪ್ಪಾಗಲಾರದು) ಗುಂಪುಗಳಿಂದ ಬಿರುಸಾಗಿ ನಡೆಯುತ್ತಿವೆ. ಅಂದರೆ, ಕಂಡಕಂಡಲ್ಲಿ ತಮ್ಮ ಹೇಳಿಕೆಗಳನ್ನು ನೀಡುವುದು, ರಾಷ್ಟ್ರಪತಿಯವರನ್ನು ಭೇಟಿ ಮಾಡುವುದು ಹಾಗೂ ತಮಗೆ ಸಿಕ್ಕಿರುವ/ದಕ್ಕಿಸಿಕೊಂಡ ಪ್ರಶಸ್ತಿಗಳನ್ನು ಮರಳಿ ವಾಪಸ್ ಕಳುಹಿಸುತ್ತಿರುವುದು ಪ್ರಧಾನವಾಗಿ ಕಂಡುಬರುತ್ತಿರುವ ಕ್ರಿಯೆಗಳಾಗಿವೆ. ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಧೂಳೆಬ್ಬಿಸುತ್ತಿರುವವರು ತಾವು ತೊಡಗಿಸಿಕೊಂಡಿರುವ ಚಟುವಟಿಕೆಗಳಿಗೂ ಹಾಗೂ ಅವುಗಳಿಗೆ ನೀಡುತ್ತಿರುವ ಕಾರಣ ಸಮರ್ಥನೆಗಳಿಗೂ ಏನಾದರೂ ಸಂಬಂಧವಿದೆಯೇ? ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೆ? ಎಂದು ನೋಡಿದರೆ, ಖಂಡಿತ ಇಲ್ಲ. ಏಕೆಂದರೆ ಸಹಿಷ್ಣುತೆ ಎಂದರೇನು? ಎಂಬುದೇ ಸರಿಯಾಗಿ ತಿಳಿದಿಲ್ಲದಿರುವುದು ವಾಸ್ತವವಾಗಿದೆ.
ಇಲ್ಲಿ ಪ್ರಮುಖವಾಗಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳನ್ನು ಬದಿಗಿಟ್ಟು ನೋಡೋಣ. ಏಕೆಂದರೆ ಎಷ್ಟೇ ನಿಷ್ಪಕ್ಷಪಾತವಾಗಿ ಆಲೋಚಿದರೂ ಕಡೆಗೆ ಯಾವುದಾದರೂ ಒಂದು ಪಕ್ಷಕ್ಕೆ ಗಂಟುಹಾಕುವ ಮೂಲಕ ಟೀಕೆ ಟಿಪ್ಪಣಿ ಪ್ರಾರಂಭವಾಗುತ್ತವೆ. ಇತ್ತೀಚೆಗೆ ನಡೆಯುತ್ತಿರುವ ಅಸಹಿಷ್ಣುತೆ ಮತ್ತು ಪ್ರಶಸ್ತಿ ಹಿಂದಿರುಗಿಸುವಿಕೆ ಎರಡು ಬೇರೆ ಬೇರೆಯದೆ ಆದ ಸಂಗತಿಗಳಾಗಿವೆ. ಆದರೆ ಅವೆರಡನ್ನೂ ಒಂದಕ್ಕೊಂದು ಸಂಬಂಧ ಕಲ್ಪಿಸುವ ಮೂಲಕ ತಮ್ಮ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಮೊದಲಿಗೆ ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ಔಚಿತ್ಯವನ್ನು ನೋಡಬೇಕಾಗುತ್ತದೆ. ದಿ.ಡಾ.ಕಲ್ಬುರ್ಗಿಯವರ ಹತ್ಯೆಯಿಂದ ಪ್ರಾರಂಭವಾದ ಪ್ರಶಸ್ತಿ ಹಿಂದಿರುಗಿಸುವಿಕೆಯ ಕಾರ್ಯವು ಇಂದು ರಾಷ್ಟ್ರಮಟ್ಟದಲ್ಲಿ ಸರೋದ್ ವಾದಕರಿಂದ ಹಿಡಿದು ಸಾಮಾನ್ಯ ಪ್ರಶಸ್ತಿಗಳನ್ನು ಪಡೆದವರವರೆಗೂ ಹಬ್ಬಿದೆ. ಹಿಂದಿರುಗಿಸುತ್ತಿರುವರೆಲ್ಲರಿಗೂ ಅವರವರದೇ ಆದ ಕಾರಣಗಳಿವೆ. ಆದರೂ ಅವೆಲ್ಲವಕ್ಕೂ ಅಸಹಿಷ್ಣುತೆಯ ಬಣ್ಣವನ್ನು ಹಚ್ಚಲಾಗುತ್ತಿದೆ. ಮತ್ತಷ್ಟು ಓದು
ವಾಲ್ಮೀಕಿ ಯಾರು?
– ಡಾ| ಜಿ. ಭಾಸ್ಕರ ಮಯ್ಯ
ಇಂದು ಕನ್ನಡ ಸಾಹಿತ್ಯದ ಅದಮ್ಯ ಚೇತನಗಳಾದ ಮಹಾಕವಿಗಳನ್ನು ಜಾತಿಯ ಗೂಟಕ್ಕೆ ಕಟ್ಟಿ ಬಲಿ ಕೊಡುತ್ತಿರುವ ಪದ್ಧತಿ ಈಗ ಸರಿಸುಮಾರು ನಾಲ್ಕು-ಐದು ದಶಕಗಳಿಂದ ನಡೆಯುತ್ತಿದೆ. ಇದರ ಐತಿಹಾಸಿಕ ದುರಂತವೆಂದರೆ ನವೋದಯದ ನಂತರ ಎಡವುತ್ತಾ ಬಂದ ಅರೆಬರೆ ಪ್ರಕಾರವಾದ ನವ್ಯ ಸಾಹಿತ್ಯ. ಅದು ಬೆಳೆಯುವ ಮುಂಚೆಯೇ ಕಮರಿ ಹೋಯ್ತು. ಅಡಿಗ, ಲಂಕೇಶ್ ಅದಕ್ಕೊಂದು ಅಪವಾದ. ನವೋದಯದ ಪತನಶೀಲ ಕಾಲದ ಕೆಲವು ಜಾತೀಯ ವಿಷಬೀಜಗಳು ಬಂಡಾಯದ ಕಾಲದಲ್ಲಿ ಅಲ್ಲಲ್ಲಿ ಮೊಳಕೆಯೊಡೆದವು. ಈ ಬಂಡಾಯದ ರೂವಾರಿಗಳಲ್ಲಿ ಅನೇಕ ಪ್ರಮುಖರು ಅಲ್ಪವಿದ್ಯಾ ಅಪ್ರಬುದ್ಧ ಹುಸಿ ಕ್ರಾಂತಿಕಾರರು. ಇವರು ನವೋದಯದ ಪತನಶೀಲ ಮತ್ತು ನವ್ಯದ ಗೊಬ್ಬರದಿಂದಲೇ ಬೆಳೆದವರು. ಭಾರತದಾದ್ಯಂತ ಹಿಂದಿ, ಬಂಗಾಳಿ ಮೊದಲಾದ ಭಾಷೆಗಳಲ್ಲಿ ಸರಿಸುಮಾರು ಪ್ರಗತಿಶೀಲ ಜನವಾದಿ ಸಾಹಿತ್ಯಪ್ರಕಾರವು ಆರೋಗ್ಯಕರವಾಗಿ ಬೆಳೆದು ಬಂದರೆ ಕರ್ನಾಟಕದಲ್ಲಿ ಮುಖ್ಯವಾಗಿ ರೂಲಿಂಗ್ ಐಡಿಯಾಗಳನ್ನು ಬಿಂಬಿಸುವ ಹುಸಿ ಬಂಡಾಯಗಾರರೇ ‘ರೂಲಿಂಗ್’ ಆದರು. ರೂಲಿಂಗ್ ಕ್ಲಾಸಿನ ಉತ್ಪನ್ನವಾದ ಈ ‘ರೂಲಿಂಗ್’ ಐಡಿಯಾದವರು ಇಂದು ಕೂಡಾ ರೂಲಿಂಗ್ ಪಕ್ಷದ ಬಹುದೊಡ್ಡ ಪರಾಕುದಾರರು.
ಇದರ ಪರಿಣಾಮವಾಗಿ ಇಂದು ಕನಕದಾಸರು ಕುರುಬನಾಗಿದ್ದಾರೆ.ಬಸವಣ್ಣ ಲಿಂಗಾಯತನಾಗಿದ್ದಾರೆ.ಕುವೆಂಪು ಗೌಡರಾಗಿದ್ದಾರೆ.ಅಂತೆಯೇ ಹಲವಾರು ಶ್ರೇಷ್ಠಲೇಖಕರು ಬ್ರಾಹ್ಮಣ-ಶೂದ್ರ ಇತ್ಯಾದಿ ವಿಧ ವಿಧ ಜೈಲುಗಳಲ್ಲಿ ಬಂಧಿತರಾಗಿದ್ದಾರೆ. ಹಿಂದೆಂದೂ ಇಲ್ಲದ ಜಾತಿವಾದ ಇಂದು ಸಾಹಿತ್ಯ ಮತ್ತು ಸಂಸ್ಕೃತಿಯ ವಲಯದಲ್ಲಿ ವ್ಯಾಪಿಸಿದೆ. ಈ ದುರಂತಕ್ಕೆ ಇತ್ತೀಚೆಗಿನ ಸೇರ್ಪಡೆ ವಾಲ್ಮೀಕಿ.
ವಾಲ್ಮೀಕಿ ಜನಾಂಗದ ವ್ಯಕ್ತಿಯೊಬ್ಬರು ಸರ್ಕಾರದಲ್ಲಿ ಪ್ರಭಾವಶಾಲಿಯಾಗಿದ್ದ ಕಾಲದಲ್ಲಿ ಆದಿಕವಿ ವಾಲ್ಮೀಕಿಗೆ ಹಠಾತ್ ಲಾಟರಿ ಹಾರಿತು.ವಾಲ್ಮೀಕಿ ಜಯಂತಿ ಆಚರಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತು.ಆ ದಿನ ಕರ್ನಾಟಕದಲ್ಲಿ ರಜಾದಿನವೆಂದು ಘೋಷಿಸಲಾಯಿತು. ಹೀಗೆ ಭಾರತದ ರಾಷ್ಟ್ರೀಯ ಮಹಾಕವಿಯೊಬ್ಬನಿಗೆ ಕರ್ನಾಟಕದಲ್ಲಿ ಈ ಪರಿ ಮರಣೋತ್ತರ ಗೌರವ ಸಂದಿತು. ಕರ್ನಾಟಕದಾದ್ಯಂತ ಸಭೆಸಮಾರಂಭಗಳು, ವಾಲ್ಮೀಕಿ ಭವನ ನಿರ್ಮಾಣದ ಯೋಜನೆ – ಇತ್ಯಾದಿಗಳು ವಿಜ್ರಂಭಿಸಿದವು.
ಒಬ್ಬಳೇ ಒಬ್ಬಳು ಓಬವ್ವ…
– ಗಿರಿಪ್ರಸಾದ್
ಅರಮನೆಯ ಒಡ್ಡೋಲಗದಲ್ಲಿ ಸಿಂಹಾಸನದಲ್ಲಿ ಕುಳಿತು, ಮದಕರಿನಾಯಕ ಸಭೆಯನ್ನುದ್ದೇಶಿಸಿ ನುಡಿದಿದ್ದ.”ನಲಿವೂ ಇದೆ, ನೋವೂ ಇದೆ ನಿನ್ನೆಯ ಘಟನಾವಳಿಗಳ ಸುತ್ತ. ಹೈದರಾಲಿಯನ್ನು ಮಣಿಸಿದ್ದಕ್ಕೆ ನಲಿವು, ಕೋಟೆಯ ನಿಜದತಾಯಿ ಓಬವ್ವಳನ್ನು ಕಳೆದುಕೊಂಡಿದ್ದಕ್ಕೆ ಅಗಾಧ ನೋವು. ಕಾಲನಾಯಕಾ….”..
ಕಾಲನಾಯಕ ತಲೆತಗ್ಗಿಸಿ ನಿಂತಿದ್ದ. ಅನ್ಯಮನಸ್ಕನಾಗಿದ್ದ, ಅಂಜಲೀಬದ್ಧನಾಗಿದ್ದ. ಯಾವುದೇ ಗುಣಗಾನ ಅವನಿಗೆ ಬೇಕಿರಲಿಲ್ಲ. ನಾಯಕ ಮುಂದುವರೆಸಿದ “ಕಾಲನಾಯಕಾ, ಧನ್ಯ ನೀನು ನಾಯಕಾ. ಧನ್ಯ ಈ ಹೆಬ್ಬುಲಿಯನ್ನು ನಮ್ಮ ಕೋಟೆ ಪಡೆದಿದ್ದಕ್ಕೆ. ನಮ್ಮ ಕನ್ನಡ ನಾಡು ಹಡೆದಿದ್ದಕ್ಕೆ”. ಕಾಲನಾಯಕನಿಗೆ ತಡೆಯಲಾಗಲಿಲ್ಲ, ಕಣ್ಣೀರ ಕಟ್ಟೆಯೊಡೆದಿತು, ಗದ್ಗದಿಸಿದ “ಎಲ್ಲಿಯಿನ್ನು ನನ್ನ ಓಬವ್ವ…ನೀರು ತರಲೆಂದು ಹೋದವಳು ಚರಿತ್ರೆಯಲ್ಲಿ ನೀರಾಗಿ ಹೋದಳು”. ಮೌನಿಯಾದ. ಮದಕರಿನಾಯಕನಿಗೆ ಚುರುಕ್ಕೆಂದಿತು, ನುಡಿದ “ನೀರಾಗಲಿಲ್ಲ ಓಬವ್ವ, ಕಲ್ಲಾದಳು. ಮುಂದೆ ಶತಮಾನಗಳನೇಕ ಕನ್ನಡಿಗರು ಸವರುವ ಕಲ್ಲಾದಳು”. ಸಭಿಕರು ಓಬವ್ವಳನ್ನು ನೆನೆದು ಮಾತನಾಡಲಾರಂಭಿಸಿದರು.ಕಾಲನಾಯಕ ಕಿವಿಯಾಗಲಿಲ್ಲ. ಅವನ ಮನಸ್ಸು ತುಂಬಿಕೊಂಡಿದ್ದು ಓಬವ್ವ…ಓಬವ್ವ…ಓಬವ್ವ…
ತನ್ನಲ್ಲಿಯೇ ಮಾತಾಗಿದ್ದ ಕಾಲನಾಯಕ. “ಓಬವ್ವಳ ಸಾವು, ಗೆಲುವಿನ ಹರ್ಷವನ್ನು ನುಂಗಿದೆ. ಇಲ್ಲಿ ಕೋಟೆ ಉಳಿದಿದೆ, ಅಲ್ಲಿ ಬದುಕು ಒಡೆದಿದೆ. ನನ್ನ ಕಹಳೆಯ ಕೂಗಿಗಿಂತ ಓಬವ್ವ, ಆಕೆಯ ಒನಕೆ ಇಂದು ಕೋಟೆಯನ್ನುಳಿಸಿದೆ.”. ತನ್ನ ಗುಡಿಸಲಿಗೆ ಮರಳಿದ ಕಾಲನಾಯಕನಿಗೆ ನಿದ್ದೆಯಿರಲಿಲ್ಲ. ಓಬವ್ವಳ ಚಿತ್ರವೇ, ಆಕೆಯ ಶೌರ್ಯವೇ ಮನದಲ್ಲಿ ಸುಳಿದಿತ್ತು.
ಅಕ್ಷರದ ಜಾಗದಲ್ಲಿ ಅಸಹನೆ ಬಿತ್ತುವುದು ನಿಜವಾದ ಕೇಡುಗಾಲ ಮಹಾದೇವ ಅವರೇ
– ರಾಕೇಶ್ ಶೆಟ್ಟಿ
ಹಿರಿಯರಾದ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು,
ನೀವು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸಿ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಓದಿದೆ.ಇಷ್ಟು ದಿವಸ ಪ್ರಶಸ್ತಿಗಳನ್ನು ಹಿಂತಿರುಗಿಸಿದವರು ಬರೆದಂತೆಯೇ ಯಾವುದೇ “ನಿರ್ದಿಷ್ಟ ಕಾರಣ”ಗಳಿಲ್ಲದೇ ವಿರೋಧಿಸಲೇಬೇಕು ಎಂಬ ಹಟಕ್ಕೆ ಬಿದ್ದ ಪತ್ರಗಳ ಸಾಲಿಗೇ ನಿಮ್ಮ ಪತ್ರವೂ ಸೇರುತ್ತದೆ.ಪತ್ರದ ಸಾರಾಂಶ,ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಭಾರತದಲ್ಲಿ ಭೂಮಿ ಬಾಯಿ ತೆರೆದು ಕುಳಿತಿದೆ ಎಂಬಂತಿದೆ.ಅದೇನೋ ಇದ್ದಕ್ಕಿದ್ದಂತೆ ದೇಶದಲ್ಲಿ ಅಸಹಿಷ್ಣುತೆಯ ವಾತವರಣ ಮೂಡಿದೆ ಎನ್ನುತ್ತೀರಿ.ಆದರೆ,ಅದನ್ನು ಸ್ಪಷ್ಟವಾಗಿ ವಿವರಿಸಿಲ್ಲ.ನಿಜವಾಗಿಯೂ ಅಂತದ್ದೊಂದು ವಾತವರಣ ಇದ್ದಿದ್ದೇ ಆದರೆ ನಿಮಗೇಕೆ ವಿವರಿಸಲಾಗಿಲ್ಲ?
ದಾದ್ರಿ ಘಟನೆ,ಕಲ್ಬುರ್ಗಿ ಹತ್ಯೆಯಂತ ಘಟನೆಗಳು ಆಯಾ ರಾಜ್ಯದ ಕಾನೂನು ಸುವ್ಯವಸ್ಥೆಯ ಹೊತ್ತವರ ಹೊಣೆಯೆಂದು ಕೇಂದ್ರ ಸರ್ಕಾರ ಹೇಳುವುದರಲ್ಲಿ ತಪ್ಪೇನಿದೆ? ಒಂದು ವೇಳೆ ರಾಜ್ಯ ಸರ್ಕಾರಗಳೇ ತಮ್ಮಿಂದ ಕಾನೂನು-ಸುವ್ಯವಸ್ಥೆ ನಿರ್ವಹಿಸಲಾಗುತ್ತಿಲ್ಲ ಎಂದು ಹೇಳಿಕೊಂಡ ಮೇಲೂ ಕೇಂದ್ರ ಕೈ ತೊಳೆದುಕೊಂಡಿದ್ದರೇ,ನೀವು ಹೇಳಿದಂತೆ “ದುರಂತ”ವಾಗುತಿತ್ತು.ಆದರೇ,ಸಂವಿಧಾನ ಬದ್ಧವಾಗಿ ಹೇಗೆ ನಡೆದುಕೊಳ್ಳಬೇಕಿತ್ತೋ ಅದೇ ರೀತಿಯೇ ಕೇಂದ್ರ ನಡೆದುಕೊಂಡಿದೆಯಲ್ಲವೇ ಮಹಾದೇವರೇ? ಹಾಗಿದ್ದ ಮೇಲೆ ನಿಮ್ಮ ಆಕ್ಷೇಪಕ್ಕೇನಾದರೂ ತರ್ಕವುಂಟೇ?ನಿಮ್ಮ ಪ್ರಕಾರ ಕೇಂದ್ರವೇನು ಮಾಡಬೇಕಿತ್ತು? ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನೇರಿ ಕಾನೂನು-ಸುವ್ಯವಸ್ಥೆಯನ್ನು ಪಾಲಿಸಬೇಕಿತ್ತೇ? ಸಂವಿಧಾನವೇ ಧರ್ಮಗ್ರಂಥವೆನ್ನುವ ಪ್ರಗತಿಪರರಿಗೆ ಪ್ರಸ್ತುತ ಕೇಂದ್ರ ಸರ್ಕಾರವೂ ಅದೇ ಸಂವಿಧಾನದ ಅನುಸಾರವೇ ಕಾರ್ಯ ನಿರ್ವಹಿಸುತ್ತಿದೆಯೆಂಬುದು ಮರೆತು ಹೋಗಿದೆಯೇ?
ಪ್ರಶಸ್ತಿ ಹಿಂತಿರುಗಿಸುವಿಕೆಗೆ ನೀವು ನೀಡಿರುವ ಬಹುಮುಖ್ಯವಾದ ಕಾರಣವೆಂದರೆ,ಪ್ರಶಸ್ತಿ ಹಿಂತಿರುಗಿಸುತ್ತಿರುವವರ ನಡೆಯನ್ನು ಕೆಲ ಲೇಖಕ-ಕಲಾವಿದರು ವಿರೋಧಿಸಿದ್ದು.ಆಳುವ ಸರ್ಕಾರದ ಪರ ಅವರು ನಿಂತದ್ದು ತಮಗೇ ಕೇಡಿನ ಲಕ್ಷಣದಂತೆ ಕಾಣಿಸಿತು ಎಂದಿದ್ದೀರಿ.ಅಂದರೇ,ನಿಮ್ಮ ಪ್ರಕಾರ ಯಾವುದೇ ಲೇಖಕರು-ಕಲಾವಿದರು ಅವರ ಐಡಿಯಾಲಜಿಗೆ ಹೊಂದಿಕೊಳ್ಳುವ ಪಕ್ಷ ಅಧಿಕಾರಕ್ಕೇರಿ ಸರ್ಕಾರ ರಚಿಸಿದ ಮೇಲೆ ಅದನ್ನು ಬೆಂಬಲಿಸುವುದು ಪ್ರಜಾಪ್ರಭುತ್ವದಲ್ಲಿ ಕೇಡಿನ ಲಕ್ಷಣವೆಂದಾಗುತ್ತದೆಯಲ್ಲವೇ?
ಇದೇ ಲಾಜಿಕ್ ನಮ್ಮ ರಾಜ್ಯದಲ್ಲಿಯೂ ಅನ್ವಯವಾದರೇ,ಈ ರಾಜ್ಯದ ಪ್ರಗತಿಪರರು-ಬುದ್ಧಿಜೀವಿಗಳು ನಿಂತಿರುವುದು ಸರ್ಕಾರದ ಪರವಾಗಿಯೋ? ಅಥವ ವಿರುದ್ಧವಾಗಿಯೋ?