ವಿಷಯದ ವಿವರಗಳಿಗೆ ದಾಟಿರಿ

Archive for

13
ನವೆಂ

ಅಸಹಿಷ್ಣುತೆ: ಕನ್ನಡ ಜನ-ಮನದ ದೃಷ್ಟಿ

imagesಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ,

  ಈಗೀಗ ಮಾಧ್ಯಮ ಚರ್ಚೆಗಳಲ್ಲಿ ನಮ್ಮ ಕಿವಿಗೆ ಮತ್ತೆ ಮತ್ತೆ ಬೀಳುತ್ತಿರುವ ಪದ ‘ಅಸಹಿಷ್ಣುತೆ’. ವಸಾಹತುಶಾಹಿಗಳ ಕಾಲದಿಂದ ಈ ಪದ ನಮ್ಮಲ್ಲಿ ಬಳಕೆಯಾಗುತ್ತಿದೆ. ಇಂಗ್ಲಿಷಿನ ‘ಇಂಟಾಲರನ್ಸ್’ ಎಂಬ ಪದಕ್ಕೆ ಇದನ್ನು ಸಂವಾದಿಯಾಗಿ ಬಳಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಇಂಗ್ಲಿಷ್ ಪದದ ಅನುವಾದವಷ್ಟೇ ಅಲ್ಲ, ಯೂರೋಪಿನ, ಕ್ರಿಶ್ಚಿಯಾನಿಟಿಯ ಅಸಹಿಷ್ಣುತೆಯ ಪರಿಕಲ್ಪನೆಯ ಅನುವಾದವೂ ಹೌದು. ಇಂಟಾಲರನ್ಸ್ಗೆ ನಿಜವಾದ ಅರ್ಥ ‘ಅನ್ಯ ಧರ್ಮ, ಇತರರ ಅಭಿಪ್ರಾಯ ಮೊದಲಾದವುಗಳನ್ನು ಸೈರಿಸದಿರುವಿಕೆ’. ಕನ್ನಡ ಜನ-ಮಾನಸಕ್ಕೆ, ಇನ್ನೂ ವಿಸ್ತರಿಸಿ ಹೇಳುವುದಾದರೆ ಭಾರತೀಯ ಪಾರಂಪರಿಕ ಮನೋಧರ್ಮಕ್ಕೆ ಈ ಪರಿಕಲ್ಪನೆ ವಸಾಹತುವಿನಂತೆಯೇ ಹೊಸದು. ಯಾಕೆಂದರೆ ನಮ್ಮ ಪರಂಪರೆಯಲ್ಲಿ ಇರುವುದು ‘ಇಂಡಿಫರನ್ಸ್’ ಅಂದರೆ ತಮ್ಮ ಅಭಿಪ್ರಾಯ, ಮತ-ಸಂಪ್ರದಾಯಗಳಿಂದ ಬೇರೆಯಾದ ವಿಷಯದಲ್ಲಿ ತಾಟಸ್ಥ್ಯ. ಕನ್ನಡ ಜನ ಮನದ ದಾಖಲೆಗಳನ್ನು ಗಮನಿಸಿದಾಗ ಈ ಸಂಗತಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಎರಡು ಪದಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ. ಅಸಹಿಷ್ಣುತೆ ಎಂಬುದರ ಮೂಲ ಚೂಲವನ್ನು ತಿಳಿಯದೇ ಎಲ್ಲರೂ ಇದನ್ನು ಬಳಸತೊಡಗಿದ್ದಾರೆ. ಜನರ ನಿಜವಾದ ದೃಷ್ಟಿ ಧೋರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ಗೊಂದಲಕ್ಕೆ ಕಾರಣವಾಗುತ್ತದೆ. ಈಗ ಆಗಿರುವುದೂ ಇದೇ.

  ಸಣ್ಣ ನಿದರ್ಶನ ನೋಡುವುದಾದರೆ ರಿಲಿಜನ್ ಎಂಬುದನ್ನು ಧರ್ಮ ಎಂದೂ ಮಾರಲ್ ಎಂಬುದನ್ನು ನೈತಿಕ ಎಂದೂ ಗಾಡ್ ಎಂಬುದನ್ನು ದೇವರು ಅನುವಾದಿಸಿದಂತೆಯೇ ಇಂಟಾಲರನ್ಸ್ ಎಂಬುದು ಅಸಹಿಷ್ಣುತೆಯಾಗಿ ನಮ್ಮಲ್ಲಿ ಚಾಲ್ತಿಗೆ ಬಂದಿದೆ. ನಿಜವಾಗಿ ಇವುಗಳ ಮೂಲಾರ್ಥವನ್ನು ಗಮನಿಸಿದರೆ ಇವೆಲ್ಲ ಪರಿಕಲ್ಪನಾತ್ಮಕವಾಗಿ ಬೇರೆಯೇ ಆಗಿವೆ ಎಂದು ತಿಳಿದು ಬರುತ್ತದೆ. ವಸಾಹತುಶಾಹಿ ಕಾಲದಲ್ಲಿ ಯೂರೋಪಿನ ವಿದ್ವಾಂಸರು, ಆಡಳಿತಗಾರರು ತಮ್ಮ ಆಡಳಿತಾನುಕೂಲಕ್ಕೆ ಸ್ಥಳೀಯ ಜನರ ಆಚಾರ ವಿಚಾರವನ್ನು ತಿಳಿಯಲು ಭಾಷೆ, ಆಚಾರ-ವಿಚಾರಗಳು ಹಾಗೂ ಜನಪದ ಸಾಮಗ್ರಿ ಸಂಗ್ರಹಣೆಗೆ ಮುಂದಾದಾಗ ತಮ್ಮ ಕ್ರಿಶ್ಚಿಯನ್ ಅನುಭವಕ್ಕೆ ಸರಿಹೊಂದುವಂತೆ ಕಂಡ ಸಂಗತಿಗಳನ್ನು ತಮ್ಮ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿದರು. ಆ ಪದಗಳನ್ನು ನಮ್ಮ ಭಾಷೆಗೆ ಮತ್ತೆ ತರುವಾಗ ಇವೆಲ್ಲ ತಮ್ಮೊಳಗೆ ಏನೇನನ್ನೋ ಅಡಗಿಸಿಟ್ಟುಕೊಂಡು ಏನೇನೋ ರೂಪಗಳನ್ನು ಪಡೆದು ಚಾಲ್ತಿಗೆ ಬಂದವು. ನಮಗೆ ಅಪರಿಚಿತವಾದ ಸಂಗತಿಯೊಂದನ್ನು ಮೊದಲ ಬಾರಿ ಕಂಡಾಗ ನಾವು ನಮಗೆ ಪರಿಚಿತ ಸಂಗತಿಯ ಹಿನ್ನೆಲೆಯಲ್ಲಿಯೇ ಅರಿತುಕೊಳ್ಳಲು ಮುಂದಾಗುತ್ತೇವೆ. ನಮ್ಮ ದೇಶದಲ್ಲಿ ಅಸಂಖ್ಯ ರೀತಿ, ಸಂಪ್ರದಾಯಗಳಿವೆ. ಬ್ರಾಹ್ಮಣ ಸಂಪ್ರದಾಯದ ಶವ ಸಂಸ್ಕಾರ ರೀತಿ ಪರಿಚಯವಿರುವಾತ ಸೋಲಿಗ ಅಥವಾ ಕಾಡುಗೊಲ್ಲರ ಅಥವಾ ಶೈವರ ಶವ ಸಂಸ್ಕಾರ ರೀತಿಯನ್ನು ಮೊದಲ ಬಾರಿ ಕಂಡಾಗ ಇದೇನು ಹೀಗೆ ಮಾಡುತ್ತಾರಲ್ಲಾ ಎಂದುಕೊಳ್ಳಬಹುದು. ಆತನಿಗೆ ಅದು ವಿಚಿತ್ರವಾಗಿ ಕಾಣಬಹುದು, ಇವರು ಸರಿಯಾದ ಕ್ರಮ ಅನುಸರಿಸುತ್ತಿಲ್ಲ ಅನಿಸಬಹುದು. ಆತ ಅದನ್ನು ತನ್ನದೇ ಶಬ್ದಗಳಲ್ಲಿ ಅರ್ಥಮಾಡಿಕೊಳ್ಳುತ್ತಾನೆ. ಎಲ್ಲ ಅಪರಿಚಿತ ರೀತಿ, ನೀತಿ, ಸಂಪ್ರದಾಯಗಳ ವಿಷಯದಲ್ಲೂ ಇದೇ ಮಾತು ಅನ್ವಯ. ಅರ್ಥವಾದರಷ್ಟೇ ಸಾಲದು. ತನ್ನ ಅಭಿಪ್ರಾಯದಲ್ಲಿ ಕಾಣಿಸುತ್ತಿರುವ ಗೊಂದಲದ ಕಾರಣವನ್ನು ಆತ ಪ್ರಾಮಾಣಿಕವಾಗಿ ಬೇರ್ಪಡಿಸಿ ನೋಡಲೂ ಸಿದ್ಧನಿರಬೇಕು ಹಾಗೂ ಇದೂ ‘ಒಂದು ರೀತಿ’ ಎಂದು ಭಾವಿಸಬೇಕು. ಭಿನ್ನ ಅಭಿಪ್ರಾಯ, ದೃಷ್ಟಿ ಇತ್ಯಾದಿಗಳ ವಿಷಯದಲ್ಲೂ ಇದೇ ಮಾತು ಅನ್ವಯ. ಅಸಹಿಷ್ಣುತೆಯ ಮಾತನ್ನು ಈ ದೃಷ್ಟಿಯಿಂದ ನೋಡಬಹುದು. ಮತ್ತಷ್ಟು ಓದು »

13
ನವೆಂ

ಕನ್ನಡ ಭಾಷೆಯ ಆತಂಕಗಳು

– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಕನ್ನಡ ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ದೇಶದ ಬಹುದೊಡ್ಡ ರಾಜ್ಯದ ನಾಡ ಭಾಷೆಯಾಗಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುವ ಅಪಾಯವಿರುತ್ತದೆ. ಇದಕ್ಕೆ ಲಿಪಿಯಿಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಉದಾಹರಣೆಯಾಗಿ ಹೇಳಬಹುದು. ಭಾಷೆಯೊಂದು ಗಟ್ಟಿಯಾಗಿ ತಳವೂರಿ ಬೆಳೆಯಲು ಆ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಈ ನಾಡಿನಲ್ಲಿ ಸಮೃದ್ಧವಾಗಿ ಬಳಸಿಕೊಳ್ಳಲಾಗಿದೆ. ಅದಕ್ಕೆಂದೇ ಕನ್ನಡ ಭಾಷೆಯಲ್ಲಿ ಸಾಹಿತ್ಯ ಮತ್ತಿತರ ಸೃಜನಶೀಲತೆಯ ಫಸಲು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅಮೋಘವರ್ಷ ನೃಪತುಂಗನ ಕಾಲದಿಂದ ಕುವೆಂಪು, ಕಾರಂತ, ಬೇಂದ್ರೆ ಮತ್ತು ನವ್ಯದ ಅಡಿಗರು, ಅನಂತಮೂರ್ತಿ, ಲಂಕೇಶ್, ಭೈರಪ್ಪನವರವರೆಗೆ ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕೃತಿಗಳು ರಚನೆಯಾದವು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅನೇಕ ಅಗ್ನಿದಿವ್ಯಗಳನ್ನು ಹಾದು ತನ್ನತನ ಮತ್ತು ಸಮೃದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಕಳೆದ ಮೂರು ದಶಕಗಳಿಂದ ಕನ್ನಡಕ್ಕೆ ಎದುರಾದ ಸಮಸ್ಯೆಗಳು ಈ ನೆಲದ ಭಾಷೆಯನ್ನು ಜರ್ಜರಿತಗೊಳಿಸಿವೆ. ಪರಭಾಷೆಗಳ ಪೈಪೋಟಿ, ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲಿಷ್ ಭಾಷೆ, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತಿದೆ.

ಮತ್ತಷ್ಟು ಓದು »

11
ನವೆಂ

ವಿಜ್ಞಾನ ಮತ್ತು ಕುಜ್ಞಾನ

– ಡಾ| ಜಿ. ಭಾಸ್ಕರ ಮಯ್ಯ

ವಿಜ್ಞಾನವಿಜ್ಞಾನ ಮತ್ತು ಅಜ್ಞಾನ ಎಂಬ ಎರಡು ಪದಪುಂಜಗಳನ್ನು ನಾನು ಒಂದು ವಿಶೇಷ ಅರ್ಥದಲ್ಲಿ ಬಳಸುತ್ತಿದ್ದೇನೆ. ಇದು ಕಳೆದ ವರ್ಷ (1914) ಜನವರಿ 3ರಿಂದ 7ರ ತನಕ ಮುಂಬೈಯಲ್ಲಿ ನಡೆದ ‘ಇಂಡಿಯನ್ ಸೈನ್ಸ್ ಕಾಂಗ್ರೆಸ್ ಎಸೋಸಿಯೇಶನ್’ನ 102ನೆಯ ಅಧಿವೇಶನದಲ್ಲಿ ನಡೆದ ಚಿತ್ರ ವಿಚಿತ್ರ-ಚಮತ್ಕಾರಗಳ ಹಿನ್ನೆಲೆಯಲ್ಲಿ ನಾನು ವಿಜ್ಞಾನ ಮತ್ತು ಕುಜ್ಞಾನ ಎಂಬ ಪದಪುಂಜಗಳನ್ನು ಪ್ರಯೋಗಿಸುತ್ತಿದ್ದೇನೆ. ಕುಜ್ಞಾನವೆಂದರೆ ಅಜ್ಞಾನವಲ್ಲ; ಬದಲಿಗೆ ವಿಜ್ಞಾನದ ಮುಖವಾಡವನ್ನು ಧರಿಸಿರುವ, ರಾಜಕೀಯ ದುಷ್ಪ್ರೇರಣೆಯಿಂದ ಚಾಲ್ತಿಗೆ ಬಂದ, ಸಮಾಜದ ಪ್ರಗತಿಗೆ ಕಂಟಕವಾದ ಕೆಟ್ಟ ಜ್ಞಾನ.

ಪ್ರತಿ ವರ್ಷವೂ ಭಾರತೀಯ ವಿಜ್ಞಾನ ಸಮ್ಮೇಳನವು ನಡೆಯುತ್ತಿರುತ್ತದೆ. ಆದರೆ, ಹಿಂದೆಂದೂ ಇಲ್ಲದ ಮಹಾಪ್ರಚಾರ ಈ ಸಮ್ಮೇಳನದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದುದು ಮೀಡಿಯಾದ ವರ್ಗ ಚಾರಿತ್ರ್ಯದ ಒಂದು ಸಹಜ ಪ್ರಕ್ರಿಯೆ. ಈ ಸಮ್ಮೇಳನದ ಫಲಶೃತಿಯೆಂದರೆ ಇಡೀ ಜಗತ್ತಿನೆದುರು ಭಾರತ ಬೆತ್ತಲಾದುದು; ಹಾಸ್ಯಾಸ್ಪದವಾದುದು. ಇದಕ್ಕೆ ಕಾರಣ ವಿಜ್ಞಾನದ ಸಮ್ಮೇಳನದಲ್ಲಿ ವಿಜ್ಞಾನವನ್ನು ಕಿತ್ತೆಸೆದು ಅದರ ಸ್ಥಾನದಲ್ಲಿ ‘ಕುಜ್ಞಾನ’ಕ್ಕೆ ಪಟ್ಟಾಭಿಷೇಕ ಮಾಡಿದುದೇ ಆಗಿದೆ.

ಭಾಜಪವು ಸಮ್ಮೇಳನಕ್ಕೆ ಬಹಳ ಮುಂಚೆಯೇ “ವಿಜ್ಞಾನಿ (!) ಆನಂದ ಬೋಡಸ್” ಅವರು ಪ್ರಾಚೀನ ಭಾರತದ ವೈಮಾನಿಕ ಶಾಸ್ತ್ರದ ಬಗ್ಗೆ ಮಾತನಾಡಲಿರುವರೆಂದು ಪ್ರಚಾರ ಕೊಟ್ಟಿತ್ತು. ಸಹಜವಾಗಿಯೇ ವಿಶ್ವದ ದೃಷ್ಟಿ ಈ ಕಡೆಗೆ ಕೇಂದ್ರಿತವಾಗಿತ್ತು. ಆಶ್ಚರ್ಯವೆಂದರೆ, ಕ್ಯಾಲಿಫೋರ್ನಿಯಾದಲ್ಲಿ ನಾಸಾದ ಏಮ್ಸ್ ರಿಸರ್ಚ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಡಾ| ರಾಮ್‍ಪ್ರಸಾದ್ ಗಾಂಧೀರ್‍ಮನ್ ಅವರು ‘ಬೋಡಸ್’ರವರ ವ್ಯಾಖ್ಯಾನದ ವಿರುದ್ಧ ಒಂದು ಪಿಟಿಶನ್ ಸಲ್ಲಿಸಿದ್ದರು.ಅದಕ್ಕೆ 220 ವಿಜ್ಞಾನಿಗಳು ಹಾಗೂ ಪ್ರೊಫೆಸರುಗಳು ಸಹಿ ಮಾಡಿದ್ದರು.ಭಾರತದಲ್ಲಿ ವಿಜ್ಞಾನ ಮತ್ತು ಪುರಾಣದ ‘ಕಿಚಿಡಿ’ ತಯಾರಾಗುತ್ತಿದೆ; ಇಂಥ ಕೆಟ್ಟ ಅಪವ್ಯಾಖ್ಯಾನಗಳನ್ನು ತಡೆಗಟ್ಟಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ತನ್ನ ಭಾಷಣದಲ್ಲಿ ಗಾಂಧೀರಮನ್ ಮೋದಿ ಭಾಷಣವನ್ನು ಉಲ್ಲೇಖಿಸಿದ್ದರು. ಉದಾ: ‘ಗಣೇಶನ ಆನೆ ತಲೆ ಪ್ರಾಚೀನ ಭಾರತದ ಪ್ಲಾಸ್ಟಿಕ್ ಸರ್ಜರಿ’. 102ನೇ ವಿಜ್ಞಾನದ ಸಮ್ಮೇಳನ ಘನಘೋರವಾಗಿ ಆರಂಭವಾಯಿತು.
ಮತ್ತಷ್ಟು ಓದು »

10
ನವೆಂ

ಅಪ್ಪನ ಪತ್ರ : ಡೆಫೊಡಿಲ್ಸ್‍ಅನ್ನು ಕೈಯಲ್ಲಿ ಹಿಡಿ, ಕನಕಾಂಬರ ತಲೆಯಲ್ಲಿ ಮುಡಿ!

– ರೋಹಿತ್ ಚಕ್ರತೀರ್ಥ

ಪ್ರಿಯ ಅಶ್ವಿನ್,

ಪತ್ರನೂರಾರು ಕಿಲೋಮೀಟರ್ ದೂರದಲ್ಲಿರುವ ನಿನ್ನನ್ನು ಒಮ್ಮೆ ಎದುರೆದುರೇ ಕಂಡಂತೆ ಆಗುವ ಅನುಭವ ಇವತ್ತು ಆಯಿತು. ಹಾಗಾಗಿ, ಆ ಉಮೇದನ್ನು ತಡೆಹಿಡಿಯಲಾರದೆ ಪೆನ್ನು ಕೈಗೆತ್ತಿಕೊಂಡು ನಿನಗೀ ಪತ್ರ ಬರೆಯುತ್ತಿದ್ದೇನೆ. ಹಾಗೆಯೇ  ನನ್ನೊಳಗೆ ಈ ಕ್ಷಣದಲ್ಲಿ ಹುಟ್ಟಿರುವ ತಳಮಳ, ಕಾತರಗಳಿಗೆ ಮಾತಿನ ರೂಪ ಕೊಡುವ ಪ್ರಯತ್ನ ಇದು ಅಂತಲೂ ಹೇಳಬಹುದು.

ಅಂದಹಾಗೆ, ಇಂದು ಒಂದು ಪ್ರತಿಷ್ಟಿತ ಕಾಲೇಜಿಗೆ ಒಂದು ಸ್ಪರ್ಧೆಯ ನಿರ್ಣಾಯಕನಾಗಿ ಹೋಗಬೇಕಾಗಿ ಬಂತು. ಕಾಲೇಜಿನ ಪ್ರಿನ್ಸಿಪಾಲ್ ನನ್ನ ಪರಿಚಯದವರೇ ಆದ್ದರಿಂದ, ಈ ಒಂದು ಕೆಲಸಕ್ಕೆ ಬಿಡುವು ಮಾಡಿಕೊಂಡು ಬರಲೇಬೇಕು ಅಂತ ಒತ್ತಾಯಿಸಿದ್ದರು. ಈ ಫೈಲು-ಮೀಟಿಂಗು-ಸಂದರ್ಶನಗಳ ತಲೆನೋವಿನಿಂದ ಒಂದಿಷ್ಟಾದರೂ ಮುಕ್ತಿ ಸಿಗುತ್ತಲ್ಲ ಎಂದು ಕಾಲೇಜಿಗೆ ಹೋಗಲು ತಕ್ಷಣ ಒಪ್ಪಿಗೆ ಕೊಟ್ಟಿದ್ದೆ. ಅಲ್ಲದೆ, ನಿನ್ನ ಪ್ರಾಯದ ಹುಡುಗರ ಜೊತೆ ಕಾಲ ಕಳೆಯುವುದೆಂದರೆ ಖುಷಿಯ ಸಂಗತಿಯೇ ತಾನೆ! ಅದೊಂದು ಚರ್ಚಾಸ್ಪರ್ಧೆ. ಟಿವಿಯಲ್ಲಿ ನಿತ್ಯ ನೋಡುವ ಹಲವಾರು ಸಮಸ್ಯೆಗಳಲ್ಲೇ ಕೆಲವನ್ನು ಆಯ್ದು ಚರ್ಚೆಗೆ ಕೊಟ್ಟಿದ್ದರು. ಹುಡುಗರೂ ಯಥಾನುಶಕ್ತಿ ಆ ವಿಷಯಗಳ ಮೇಲೆ ಓದಿಕೊಂಡು ಬಂದು ಚರ್ಚಿಸಲು ಯತ್ನಿಸುತ್ತಿದ್ದರು. ಅವರೇನು ಚರ್ಚಿಸಿದರು ಅನ್ನುವುದೆಲ್ಲ ನಗಣ್ಯ. ನನಗೆ ಅಲ್ಲಿ ತುಂಬ ಮುಖ್ಯ ಎಂದು ಕಂಡ ಕೆಲವು ಸಂಗತಿಗಳನ್ನಷ್ಟೇ, ಅವು ನಿನಗೂ ಅನ್ವಯಿಸುತ್ತವಾದ್ದರಿಂದ, ಎತ್ತಿಕೊಳ್ಳುತ್ತೇನೆ.

ಮತ್ತಷ್ಟು ಓದು »

10
ನವೆಂ

ಆಡುಜೀವನ

– ಪ್ರಶಾಂತ್ ಭಟ್

ಆಡುಜೀವನಸ್ವಾತಂತ್ರ್ಯದ ಮಹತ್ವದ ಅರಿವಾಗುವುದು ಅದು ಇಲ್ಲವಾದಾಗಲೇ ಎಂಬ ಮಾತಿದೆ. ನಮ್ಮ ತಲೆಮಾರಿಗೆ ಈ ಮಾತಿನ ಅರ್ಥ ಆಗಿರುವ ಸಂಭವಗಳು ಕಡಿಮೆ. ಇತ್ತೀಚೆಗೆ ಓದಿದ ’ಬೆನ್ಯಾಮೀನ್’ ರ ’ಆಡುಜೀವನ’ (ಅನುವಾದ ಡಾ.ಅಶೋಕ್ ಕುಮಾರ್ ) ಇದರ ಅರ್ಥವ ತಕ್ಕಮಟ್ಟಿಗೆ ಮಾಡಿಸಿತು.ನಮಗೆಲ್ಲ ಒಂದು ಕಲ್ಪನೆಯಿದೆ. ಇಲ್ಲಿಂದ ಅರಬ್ ದೇಶಗಳಿಗೆ ಹೋದವರೆಲ್ಲ ಕೈ ತುಂಬಾ ದುಡಿದು ಝಣ ಝಣ ಎಣಿಸಿಕೊಂಡು ಬರುತ್ತಾರೆ ಎಂದು.ಈ ಕಾದಂಬರಿಯು ಅದೇ ಆಸೆ ಹೊತ್ತು ವಿದೇಶಕ್ಕೆ ತೆರಳುವ ಒಬ್ಬನ ಅನುಭವದ ಕತೆ. ಲೇಖಕರಿಗೆ ಇನ್ನೊಬ್ಬರ ಅನುಭವವಾಗಿ ದಕ್ಕಿದ ಈ ಕತೆ ಪ್ರಥಮ ಪುರುಷ ನಿರೂಪಣೆಯಲ್ಲಿ ನಮ್ಮದೇ ಕತೆಯಾಗಿ ಎದೆ ಹಿಂಡಿಸಿಕೊಳ್ಳುತ್ತದೆ.

ಮನೆಯ ಕಷ್ಟಗಳಿಗೆ ಒಂದೇ ಉತ್ತರವೆಂಬಂತೆ ನಜೀರ್ ವಿದೇಶಕ್ಕೆ ಹೋಗಲು ಅಣಿಯಾಗುತ್ತಾನೆ.ಪತ್ನಿಯ ಬಿಟ್ಟು ಯಾವುದೋ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಕೆಲಸ ಹುಡುಕಿ ಹೊರಡುವ ಆತನಿಗೆ ಅಲ್ಲಿ ಎದುರಾಗುವುದು ಕಷ್ಟ ಪರಂಪರೆ.ಏರ್ ಪೋರ್ಟ್ ನಲ್ಲಿ ಕಾದೂ ಕಾದೂ ಸುಸ್ತಾಗುವ ಅವನಿಗೆ, ಕೊನೆಗೊಮ್ಮೆ ಆಶಾಕಿರಣದಂತೆ ಬಂದ ಅರಬಾಬ್ ಅವನನ್ನು ಎಲ್ಲಿಗೋ ಕರೆದೊಯ್ಯುತ್ತಾನೆ. ಅಲ್ಲಿ ತಲುಪುವವರೆಗೂ ತನ್ನ ಕೆಲಸದ ಅರಿವಿರದ ನಜೀರ್ ಗೆ ಅಲ್ಲಿನ ಪರಿಸ್ಥಿತಿ ಕಂಡು ಅಯೋಮಯವಾಗುತ್ತದೆ. ಆಡುಗಳನ್ನು ನೋಡಿಕೊಳ್ಳುವ, ಅವುಗಳ ಚಾಕರಿ ಮಾಡುವ,ಅವಕ್ಕೆ ಹುಲ್ಲು ಹಾಕಿ ನೀರು ಕುಡಿಸುವ, ಅವುಗಳನ್ನು ಕಾಲಾಡಿಸಲು ಕರಕೊಂಡು ಹೋಗುವ ಕೆಲಸ.ಮಲಗಲು ನೆಲವೇ ಗತಿ.ಸ್ನಾನ ಕನಸಿನ ಮಾತು.ತಿನ್ನಲು ಖಾಮೂಸ್ ಎಂಬ ತಿನಿಸು ಮಾತ್ರ. ಬಹಿರ್ದೆಶೆಗೆ ಹೋದರೆ ಸ್ವಚ್ಚಗೊಳಿಸಲೂ ನೀರಿಲ್ಲ. ಅಲ್ಲಿ ಬಂದಿಳಿದವನಿಗೆ ನಿರ್ಭಾವುಕನಾದ ಭೀಕರ ಜೀವಿಯೊಬ್ಬ ಕಾಣ ಸಿಗುತ್ತಾನೆ. ತನ್ನಂತೆ ಅಲ್ಲಿಗೆ ಕೆಲಸ ಹುಡುಕಿಕೊಂಡು ಬಂದವನು ಅವನು ಎಂಬ ಸತ್ಯ ಗೊತ್ತಾದ ನಜೀರ್ ಗೆ ಅವನ ಅಸಹ್ಯ ವೇಷ ಕಂಡು ತನ್ನ ಭವಿಷ್ಯವೂ ಹೀಗೇ ಎಂಬ ಕಟು ಸತ್ಯ ಅರಿವಾಗುತ್ತದೆ.
ಮತ್ತಷ್ಟು ಓದು »

9
ನವೆಂ

ಕೇಂದ್ರದ ನೆರಳಿನಲ್ಲಿ ವಿಕೇಂದ್ರೀಕರಣದ ಸ್ವರೂಪ

images (2)ಸಂತೋಷ. ಈ. ಕುವೆಂಪು ವಿಶ್ವವಿದ್ಯಾನಿಲಯ

  ಭಾರತವು ಹಳ್ಳಿಗಳಿಂದ ಕೂಡಿದ ದೇಶ. ಸ್ವಯಂ ಆಡಳಿತವೇ ಅದರ ಜೀವಾಳ. ಗ್ರಾಮದ ಜನರ ಸಮುದಾಯಿಕ  ಭಾವನೆ ಸ್ವಯಂ ಆಡಳಿತದ ಪ್ರಧಾನವಾದ ಬಲವಾಗಿತ್ತು. ಗ್ರಾಮದ ಜನರ ನಡುವಿನ ಪರಸ್ಪರಾವಲಂಬನೆ ಮತ್ತು ತಮ್ಮ ದೈನಂದಿನ ಅವಶ್ಯಕತೆಗಳಲ್ಲಿ ಸ್ವಾವಲಂಬಿಗಳಾಗಿರುವುದು, ಗ್ರಾಮದ ಸ್ವಯಂ ಆಡಳಿತ ವ್ಯವಸ್ಥೆಯು ಸಾವಿರಾರು ಕಾಲ ಅಖಂಡವಾಗಿ ಮತ್ತು ಸ್ವಸಂಪೂರ್ಣವಾಗಿ ಉಳಿದುಕೊಂಡು ಬರಲು ಸಹಾಯವಾಗಿತ್ತು. ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಅನೇಕ ರಾಜಕೀಯ ಬದಲಾವಣೆಗಳು ಸಂಭವಿಸಿದ್ದರೂ ಗ್ರಾಮಗಳ ಸ್ವಯಮಾಡಳಿತ ವ್ಯವಸ್ಥೆ ಪ್ರಕ್ಷುಬ್ಧಗೊಳ್ಳದಷ್ಟು ಸ್ವತಂತ್ರವಾಗಿದ್ದವು. ಆದರೆ ಭಾರತದಲ್ಲಿ ಬ್ರಿಟಿಷ್ ಆಡಳಿತದ ಆಗಮನದಿಂದ ಗ್ರಾಮದ ಸ್ವಯಮಾಡಳಿತ ಪದ್ಧತಿ ಕ್ಷೀಣಿಸುತ್ತ ಬಂದಿತು. ಏಕೆಂದರೆ ಭಾರತದಲ್ಲಿ ತಮ್ಮ ಆಡಳಿತದ ಪ್ರಾರಂಭಿಸಿದ ಬ್ರಿಟಿಷರಿಗೆ ಗ್ರಾಮಗಳನ್ನು ತಮ್ಮ ವ್ಯವಸ್ಥೆಗೆ ಒಳಪಡಿಸಿಕೊಳ್ಳದೆ ಇಡೀ ದೇಶವನ್ನು ಪರಿಣಾಮಕಾರಿಯಾಗಿ ಆಳಲು ಸಾಧ್ಯವಿಲ್ಲ ಎಂದು ತಿಳಿದಿತ್ತು. ಅದರ ಸಲುವಾಗಿ ‘ಗ್ರಾಮಗಳ ಕೈಯಲ್ಲಿದ್ದ ಹಿಂದಿನ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡು ಅದನ್ನು ಬ್ರಿಟಿಷ್ ಅಧಿಕಾರಿಯ ಅಧೀನಕ್ಕೆ ಬರುವಂತೆ ಕಾನೂನುಗಳನ್ನು ಜಾರಿಗೆ ತಂದರು’. ಆದರೆ ಬ್ರಿಟಿಷರ ಆಡಳಿತದಲ್ಲಿ ಗ್ರಾಮ ಸಮುದಾಯ ಪಾಲ್ಗೊಳ್ಳಲೇ ಇಲ್ಲ. ಅವರ ನೀರಿಕ್ಷೆ ಮಟ್ಟಕ್ಕೆ ಗ್ರಾಮೀಣ ಜನರು ಸಹಕಾರ ತೋರಲಿಲ್ಲ. ಗ್ರಾಮಗಳು ಈ ರೀತಿ ಪ್ರತಿಭಟಿಸಿದ್ದರಿಂದ ಕಾಲಕ್ರಮೇಣ ಬ್ರಿಟಿಷರು ಗ್ರಾಮಗಳ ಮೇಲಿನ ತಮ್ಮ ಅಧಿಕಾರವನ್ನು ಮೊಟುಕುಗೊಳಿಸುತ್ತ ಬಂದರು. ಆದರೆ ಬ್ರಿಟಿಷರ ಆಡಳಿತ ಗ್ರಾಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದಂತು ನಿಜ.

  ಸ್ವಾತಂತ್ರದ ನಂತರ, ಭಾರತದ ರಾಷ್ಟ್ರೀಯ ಆಂದೋಲನದಲ್ಲಿ ಗ್ರಾಮ ಪಂಚಾಯತಿಯು ಕೇಂದ್ರಬಿಂದುವಾಗಿದ್ದರಿಂದ  ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಇರುವಂತೆ ಗ್ರಾಮೀಣ ಮಟ್ಟದಲ್ಲೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯು ಕಾರ್ಯಪ್ರವೃತ್ತವಾಗಬೇಕು ಎನ್ನುವುದು ಬಹುತೇಕರ ಉದ್ದೇಶವಾಗಿತ್ತು. ಆದರೆ ಸಂವಿಧಾನ ರಚನಕಾರರಿಗೆ ಭಾರತಕ್ಕೆ ಸಶಕ್ತ ಕೇಂದ್ರವಿದ್ದು, ಅದರ ಸುತ್ತ ಇಡೀ ವ್ಯವಸ್ಥೆ ರೂಪುಗೊಳ್ಳಬೇಕೆಂದು ಬಯಸಿದ್ದರು. ಅದರಲ್ಲಿ ಯಶಸ್ವಿ ಕೂಡ ಅದರು. ಮತ್ತಷ್ಟು ಓದು »

9
ನವೆಂ

ಅವಾರ್ಡು ವಾಪಸಿಯೂ ,ಜನಸಾಮಾನ್ಯನೊಬ್ಬನ ಬಡಬಡಿಕೆಯೂ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಪ್ರಶಸ್ತಿನೀವು ದೆಹಲಿಯಲ್ಲಿ ಕಾಣಿಸಿಕೊ೦ಡ ಮ೦ಕಿ ಮ್ಯಾನ್ ಬಗ್ಗೆ ಕೇಳಿರಬಹುದು.2001 ವರ್ಷವದು.ಮೈತು೦ಬ ಕಪ್ಪು ರೋಮಗಳಿ೦ದ ತು೦ಬಿದ್ದ ಈ ವಾನರ ಮಾನವ ರಾತ್ರಿ ವೇಳೆಯಲ್ಲಿ ಒ೦ಟಿಯಾಗಿ ದೆಹಲಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಜನರ ಮೇಲೆ ದಾಳಿಯಿಡುತ್ತಿದ್ದನ೦ತೆ.ಮೊದಮೊದಲು ಈ ಸುದ್ದಿ ಅಷ್ಟಾಗಿ ಸದ್ದು ಮಾಡಿರಲಿಲ್ಲ.ಆದರೆ ಕೆಲವೇ ದಿನಗಳಲ್ಲಿ ಈ ವಿಷಯ ಕಾಳ್ಗಿಚ್ಚಿನ೦ತೆ ದೆಹಲಿಯ ತು೦ಬೆಲ್ಲ ವ್ಯಾಪಿಸಿತು.ಕೆಲವರು ತಮ್ಮ ಮೇಲೆಯೂ ಈ ಕೋತಿ ದಾಳಿ ಮಾಡಿದೆ ಎ೦ದರು.ಕೆಲವರು ಅದರ ಚಹರೆಗಳ ಬಗ್ಗೆ ವಿವರಿಸಿದರು.ಆದರೆ ಯಾರೊಬ್ಬರಿಗೂ ಸಹ ಕೋತಿಮಾನವನ ರೂಪದ ವರ್ಣನೆಯನ್ನು ಸ್ಪಷ್ಟವಾಗಿ ವಿವರಿಸುವುದು ಸಾಧ್ಯವಾಗಿರಲಿಲ್ಲ.ಒಬ್ಬರು ಅದರ ಎತ್ತರ ನಾಲ್ಕು ಅಡಿ ಎ೦ದರೇ,ಮತ್ತೊಬ್ಬರು ಅದು ಎ೦ಟು ಅಡಿ ಉದ್ದವಿದೆ.ಎ೦ದರು ಒ೦ದಿಬ್ಬರು ಅದು ಭಯ೦ಕರ ಕೆ೦ಪು ಕಣ್ಣುಗಳ ಪ್ರಾಣಿ ಎ೦ದರು.ಉಳಿದವರು ಅದು ಹೆಲ್ಮೆಟ್ ಧರಿಸುತ್ತದೆ ಎ೦ದರು.ಒಟ್ಟಾರೆಯಾಗಿ ಯಾರಿಗೂ ಸಹ ಅದರ ರೂಪದ ಬಗ್ಗೆ ಸ್ಪಷ್ಟತೆಯನ್ನು ನಿಖರವಾಗಿ ನೀಡುವುದು ಸಾಧ್ಯವಾಗಲಿಲ್ಲ.ಪೋಲಿಸರು ಅದೆಷ್ಟೇ ಕಷ್ಟಪಟ್ಟರೂ ಇ೦ಥದ್ದೊ೦ದು,’ಮ೦ಗ ಮಾನವ’ನನ್ನು ಗುರುತಿಸುವುದಾಗಲಿ ,ಬ೦ಧಿಸುವುದಾಗಲಿ ಸಾಧ್ಯವಾಗಲಿಲ್ಲ.ಕೊನೆಗೊಮ್ಮೆ ಕೋತಿ ಮಾನವನ ಕತೆಯೇ ’ಸಮೂಹ ಸನ್ನಿ’ಎನ್ನುವುದು ಪೋಲಿಸರಿಗೆ ಮನವರಿಕೆಯಾಯಿತು.ಮೊದಲೆಲ್ಲ ಭಯ ಬಿದ್ದು ರಾತ್ರಿಗಳಲ್ಲಿನ ಓಡಾಟವನ್ನೇ ಕಡಿಮೆ ಮಾಡಿಕೊ೦ಡಿದ್ದ ದೆಹಲಿಯ ನಾಗರೀಕರು ಕೆಲವೇ ದಿನಗಳಲ್ಲಿ ’ಇದೆಲ್ಲವೂ ಸಮಾಜದಲ್ಲಿ ಅನವಶ್ಯಕ ಭ್ರಮೆಯನ್ನು ಸೃಷ್ಟಿಸಿ ತಮ್ಮ ಬೇಳೆ ಬೆಯಿಸಿಕೊಳ್ಳಲು ಕಿಡಿಗೇಡಿಗಳು ಮಾಡಿದ ಕೆಲಸ’ಎ೦ಬುದನ್ನು ಅರಿತುಕೊ೦ಡರು.ಜನಜೀವನ ದೆಹಲಿಯಲ್ಲಿ ಮು೦ಚಿನ೦ತೆಯೇ ಸಾಮಾನ್ಯವಾಯಿತು.ಈ ಕತೆ ಈಗೇಕೆ ನೆನಪಾಯಿತೆ೦ದರೇ ,ಇ೦ಥದ್ದೊ೦ದು ವಿಲಕ್ಷಣ ಕಾಲ್ಪನಿಕ ಜೀವಿ ಈಗಲೂ ದೇಶದಲ್ಲೆಲ್ಲ ಅಲೆದಾಡಿಕೊ೦ಡಿದೆ.ಜನಸಾಮಾನ್ಯರ ಕಣ್ಣಿಗೆ ಅದು ಗೋಚರಿಸದಿದ್ದರೂ ಕೆಲವು ಬುದ್ಧಿವ೦ತರು ಅದನ್ನು ನೋಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.ಅ೦ದ ಹಾಗೆ ಆ ಕಾಣದ ಕಾಲ್ಪನಿಕ ಸೃಷ್ಟಿಯ ಹೆಸರು ’ಅಸಹಿಷ್ಣುತೆ’

ಮತ್ತಷ್ಟು ಓದು »

6
ನವೆಂ

ಸುದ್ಧಿಮಾಧ್ಯಮ: ದೇಶ ಬೆನ್ನಿಗೆ ಕಟ್ಟಿಕೊಂಡ ಕೆಂಡ

– ಪ್ರೇಮಶೇಖರ

ಪೇಯ್ಡ್ ಮೀಡಿಯಾ26/11ರ ಮುಂಬೈ ಧಾಳಿಗಳ ರೂವಾರಿಯೊಬ್ಬ ಕರಾಚಿಯಿಂದ ಹೊರಡುತ್ತಿದ್ದ ಅಜ್ಮಲ್ ಕಸಾಬ್ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ನೀಡಿದನೆನ್ನಲಾದ ‘ಉಪದೇಶ’ ಹೀಗಿತ್ತು: “ತಾಜ್ ಹೋಟೆಲ್ ಆಕ್ರಮಿಸಿಕೊಂಡ ನಂತರ ಯಾವುದಾದರೊಂದು ಕೋಣೆ ಸೇರಿ ಅಲ್ಲಿರುವ ಟೀವಿ ಚಾಲೂ ಮಾಡಿ ಭಾರತೀಯ ನ್ಯೂಸ್ ಚಾನಲ್ ಒಂದನ್ನು ನೋಡಿ.  ಭಾರತೀಯ ಭದ್ರತಾ ಪಡೆಗಳು ನಿಮ್ಮ ವಿರುದ್ಧ ಕೈಗೊಳ್ಳುತ್ತಿರುವ ತಂತ್ರಗಳ ಇಡೀ ವಿವರ ಅದರಲ್ಲಿ ನಿಮಗೆ ದೊರೆಯತೊಡಗುತ್ತದೆ.  ಅದಕ್ಕನುಗುಣವಾಗಿ ನಿಮ್ಮ ಪ್ರತಿತಂತ್ರಗಳನ್ನು ನೀವು ರೂಪಿಸಿಕೊಳ್ಳಬಹುದು.”  ನಮ್ಮ ಮಾಧ್ಯಮಗಳು ಅತ್ಯುತ್ಸಾಹದಿಂದ ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ದೀರ್ಘವಾಗಲು ಕಾರಣವಾಯಿತು ಎಂಬ ಕಟುವಾಸ್ತವದ ಹಿನ್ನೆಲೆಯಲ್ಲಿ ಆ ಪಾಕ್ ಭಯೋತ್ಪಾದಕ ನಮ್ಮ ಮಾಧ್ಯಮಗಳ ನಾಡಿಮಿಡಿತವನ್ನು ಅದೆಷ್ಟು ಚೆನ್ನಾಗಿ ಅರಿತಿದ್ದ ಎಂಬ ಕಹಿಸತ್ಯ ಎದೆಗೆ ನಾಟುತ್ತದೆ.  ಈ ಪೀಠಿಕೆಯೊಂದಿಗೆ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ಮಾಧ್ಯಮಗಳು ಅನುಸರಿಸುವ ಕುನೀತಿಯ ಪರಿಚಯ ಮಾಧ್ಯಮಗಳ ಬಗೆಗಿನ ಲೇಖನದ ಮೂರನೆಯ ಹಾಗೂ ಅಂತಿಮ ಕಂತಿನ ವಸ್ತುವಿಷಯ.  ನನ್ನ ಅವಲೋಕನವನ್ನು ಕಾಲು ಶತಮಾನದಷ್ಟು ದೀರ್ಘವಾದ ಕಾಶ್ಮೀರದಲ್ಲಿನ ಭಯೋತ್ಪಾದನೆಯೊಂದಿಗೆ ಪ್ರಾರಂಭಿಸುತ್ತೇನೆ.

ಮತ್ತಷ್ಟು ಓದು »

4
ನವೆಂ

ವಸಾಹತುಪ್ರಜ್ಞೆಯಲ್ಲಿ ಪುಣ್ಯಯೋನಿ-ಪಾಪಯೋನಿ

– ವಿನಾಯಕ್ ಹಂಪಿಹೊಳಿ

ಭಗವದ್ಗೀತೆಇತ್ತೀಚೆಗೆ ಕೆ. ಎಸ್. ಭಗವಾನ್ ಎಂಬ ಬುದ್ಧಿಜೀವಿಯೋರ್ವರಿಂದಾಗಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಭಾರೀ ವಿವಾದಕ್ಕೊಳಗಾದವು. ಆ ಶ್ಲೋಕಗಳಲ್ಲಿ ಕೆಲವೇ ವರ್ಗದ ಜನರನ್ನು ಪುಣ್ಯಯೋನಿಗಳೆಂತಲೂ ಉಳಿದ ಬಹುಸಂಖ್ಯಾತರನ್ನು ಪಾಪಯೋನಿಗಳೆಂತಲೂ ಕೃಷ್ಣ ಕರೆದದ್ದು ಈ ಹಿಂದೂ ರಿಲಿಜನ್ನಿನಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಚಿತ್ರಿಸಲಾಯಿತು. ಆ ಎರಡು ಶ್ಲೋಕಗಳನ್ನು ಗದ್ದೆಯಲ್ಲಿನ ಕಳೆಗೆ ಹೋಲಿಸಿ, ಇವುಗಳನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯಪಟ್ಟರು. ಆ ಎರಡು ಶ್ಲೋಕಗಳು “ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ” ಎಂಬ ಉಪನಿಷದ್ವಾಕ್ಯಕ್ಕೆ ವಿರುದ್ಧವಾದ ಆಶಯವನ್ನು ಹೊಂದಿದೆ ಎಂಬುದಾಗಿ ಸಾರಿದರು. ಈ ಹಿಂದೂ ಎಂಬ ಧರ್ಮದಲ್ಲಿ ಎರಡು ಭಾಗಗಳಿವೆ, ಅವು ಸಾಮಾಜಿಕ ಮತ್ತು ಅಧ್ಯಾತ್ಮಿಕ, ಎರಡೂ ಕ್ಷೇತ್ರಗಳಲ್ಲಿ ಅನೇಕ ಕೃತಿಗಳಿವೆ, ಅದರಲ್ಲಿ ಅಧ್ಯಾತ್ಮಿಕ ಕೃತಿಗಳ ಕುರಿತು ಅವರಿಗೆ ಸಮ್ಮತಿಯಿದೆ, ಆದರೆ ಸಾಮಾಜಿಕ ಕೃತಿಗಳ ಕುರಿತು ಅವರಿಗೆ ಭಾರೀ ಆಕ್ಷೇಪವಿದೆ ಎಂಬ ಅವರ ಹೇಳಿಕೆಯನ್ನು ಅವರ ವಾದದ ಸಾರಾಂಶ ಎನ್ನಬಹುದು.

ನಮ್ಮ ಸಂಪ್ರದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಮತ್ತು ಜೀವನದಲ್ಲಿ ಕಾಣುವ ಪರಿಣಾಮಗಳಿಗೆ ಪ್ರತ್ಯಕ್ಷವಾಗಿ ಕಾಣದ ಕಾರಣಗಳನ್ನು ಪೂರ್ವಜನ್ಮಕ್ಕೆ ಹೊಂದಿಸಿ ಅರಿಯುವದು ನಮ್ಮಲ್ಲಿ ಮೊದಲಿನಿಂದ ಇರುವ ಪರಂಪರೆ. ತನ್ಮೂಲಕ ಒಬ್ಬ ಜೀವನದಲ್ಲಿ ಪಡೆದಿರುವ ಪ್ರತಿಯೊಂದಕ್ಕೂ ಒಂದು ಕಾರಣವನ್ನು ಹುಡುಕಿಕೊಳ್ಳುವದು ಸಹಜವಾದ ಪ್ರಕ್ರಿಯೆ. ಆತ್ಮಕ್ಕೆ ಲಿಂಗವಿರುವದಿಲ್ಲ, ಲಿಂಗವೆಂಬುದು ಕೇವಲ ದೇಹದ ಒಂದು ಗುಣ ಎಂಬುದು ನಮ್ಮ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿರುವ ವಿಚಾರ. ಹೀಗಾಗಿ ಆತ್ಮ-ಪುನರ್ಜನ್ಮ-ದೇಹಗಳ ಕುರಿತು ಇರುವ ಈ ಆಧ್ಯಾತ್ಮಿಕ ವಿಚಾರಗಳಲ್ಲಿ ಒಂದು ಆತ್ಮ ಒಮ್ಮೆ ಗಂಡಾಗಿ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಮತ್ತೊಂದು ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುವ ಕಲ್ಪನೆಗಳು ಕಥೆಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಜನ್ಮದಿಂದ ಜನ್ಮಕ್ಕೆ ಅಲೆಯುವ ಒಂದು ಆತ್ಮ ಗಂಡು ದೇಹ ಪಡೆಯುವದಕ್ಕೋ, ಇಲ್ಲವೇ ಹೆಣ್ಣು ದೇಹ ಪಡೆಯುವದಕ್ಕೋ ಒಂದು ಕಾರಣ ಬೇಕಾಗುತ್ತದೆ.

ಮತ್ತಷ್ಟು ಓದು »

3
ನವೆಂ

ದಲಿತ ಸಮಸ್ಯೆಗಳಿಗೆ ‘ಮತಾಂತರ’ ಪರಿಹಾರವೇ?

12208103_1670761999803921_1900851134_nರಘು, ಎಸ್. ಕುವೆಂಪು ವಿಶ್ವವಿದ್ಯಾನಿಲಯ

  ಪ್ರಸ್ತುತ ಕಾಲಘಟ್ಟದಲ್ಲಿ ದಲಿತರಿಗೆ ಸಂಬಂಧಿಸಿದ ಚರ್ಚೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ದಲಿತ ಸಮಸ್ಯೆಯ ಕುರಿತ ಇಂಥ ಚರ್ಚೆಯನ್ನು ಪರಿಶೀಲಿಸಿದರೆ ದಲಿತರ ಸಮಸ್ಯೆಗಳಿಗೆ ‘ಹಿಂದೂಯಿಸಂ’ ಮೂಲ ಕಾರಣವಾಗಿದ್ದು, ‘ಮತಾಂತರ’ವೇ ಅದರ ನಿವಾರಣೆಗೆ ಇರುವ ಅಂತಿಮ ಪರಿಹಾರ ಎಂಬ ವಾದವನ್ನು ಮುಂದಿಡುವುದು ಕಂಡುಬರುತ್ತದೆ. ಒಂದೊಮ್ಮೆ ‘ದಲಿತ ಸಮಸ್ಯೆ’ಯ ಮೂಲ ‘ಹಿಂದೂಯಿಸಂ’ ಆಗಿದ್ದ ಪಕ್ಷದಲ್ಲಿ ಮತಾಂತರಗೊಂಡ ದಲಿತರಲ್ಲಿ ಈ ಹಿಂದೆ ಇದ್ದ ‘ಸಮಸ್ಯೆ’ಗಳನ್ನು ಗುರುತಿಸಲು ಸಾಧ್ಯವಾಗಬಾರದು. ಆದರೆ ಮತಾಂತರಗೊಂಡ ದಲಿತರ ಕುರಿತ ಪ್ರಚಲಿತವಾದಗಳು ಇದಕ್ಕೆ ತದ್ವಿರುದ್ಧವಾಗಿವೆ. ಇದು ಮತಾಂತರದ ಕುರಿತ ಚರ್ಚೆಯನ್ನೇ ಮರುಪರಿಶೀಲಿಸುವ ಅನಿವಾರ್ಯತೆಯನ್ನು ಸೃಷ್ಠಿಸುತ್ತದೆ.

ದಲಿತ ಸಮಸ್ಯೆಯ ಕುರಿತ ಚಿತ್ರಣಗಳಲ್ಲಿ ವಸಾಹತು ಕಾಲಘಟ್ಟದ ಜನಾಂಗೀಯ, ಮಾನವಶಾಸ್ತ್ರೀಯ ಅಧ್ಯಯನಗಳಿಂದ ಹಿಡಿದು ಇಂದಿನ ಚಿಂತನೆಗಳವರೆಗೂ ಒಂದು ನಿರಂತರತೆಯನ್ನು ಗುರುತಿಸಬಹುದು. ಅವುಗಳು ವೈಜ್ಞಾನಿಕ ಸತ್ಯದ ಸ್ಥಾನಮಾನವನ್ನು ಪಡೆದುಕೊಂಡಿವೆ. ಆ ನಿರಂತರತೆಯ ಎಳೆಯು ಈ ರೀತಿಯಾಗಿದೆ: ‘ಹಿಂದೂಯಿಸಂ’ನಲ್ಲಿ ಕೆಳಮಟ್ಟದ ಸ್ಥಾನದಲ್ಲಿರುವ ದಲಿತರು ಸಾವಿರಾರು ವರ್ಷಗಳಿಂದಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಶ್ರೇಣಿಕರಣಗೊಂಡಿರುವ ಜಾತಿವ್ಯವಸ್ಥೆಯು ‘ಹಿಂದೂಯಿಸಂ’ನ ಭಾಗವಾಗಿದೆ. ಈ ಶ್ರೇಣಿಕರಣದಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಬ್ರಾಹ್ಮಣರು ‘ಹಿಂದೂಯಿಸಂ’ನ ಪ್ರೀಸ್ಟ್ಗಳಾಗಿದ್ದಾರೆ. ಆ ವರ್ಗದವರು ದಲಿತರನ್ನು ಸದಾ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಇಂಥ ಶೋಷಣೆಗೆ ‘ಹಿಂದೂಯಿಸಂ’ ತಾತ್ವಿಕ ನೆಲೆಗಟ್ಟನ್ನು ಒದಗಿಸುತ್ತಾ ಬಂದಿದೆ. ದಲಿತರ ಮೇಲಿನ ಈ ರೀತಿಯ ಶೋಷಣೆಯು ‘ಹಿಂದೂಯಿಸಂ’ಗೆ ಮಾತ್ರ ಸೀಮಿತವಾಗಿದ್ದು, ದಲಿತರ ಸಮಸ್ಯೆಗಳಿಗೆ ಅದರ ಒಳಗೆ ಯಾವುದೇ ಪರಿಹಾರಗಳಿಲ್ಲ. ಮತ್ತಷ್ಟು ಓದು »