ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 26, 2015

1

ಪ್ರಶಸ್ತಿ ವಾಪಸಾತಿ : ಚಿಂತನೆಗಳು ವೈಚಾರಿಕವಾಗಿರಲಿ

‍ನಿಲುಮೆ ಮೂಲಕ

– ಡಾ. ಟಿ. ಗೋವಿಂದರಾಜು

ಪ್ರಶಸ್ತಿಪ್ರಶಸ್ತಿ ವಾಪಸಿಗರ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳದ ಕೆಲ ಸಂಕುಚಿತ ಮನಸ್ಸುಗಳು ಇನ್ನೂ ಕಟಕಿಯಾಡುತ್ತಿರುವುದು ವಿಷಾಧನೀಯ. ಯಾರೋ ಒದರಿದ್ದನ್ನೇ ಪರಮ ಪ್ರಸಾದದಂತೆ ಸ್ವೀಕರಿಸಿ, ಆ ನಕಲು ಮಾತುಗಳನ್ನೇ ಮರು ಪ್ರಸಾರ ಕೇಂದ್ರಗಳಂತೆ ತಾವೂ ಉಗ್ಗಡಿಸುತ್ತಿರುವುದು ಅವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುತ್ತೆ. “ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿ” ಗೌರವಿಸಲಾಗುತ್ತದೆ..ಎನ್ನುವ ರಾಮಶೇಷ ಅವರೇ ಕೊನೆಗೆ, “ ಇಂತಹ ಪ್ರಶಸ್ತಿಗಳನ್ನು ಯಾವುದಕ್ಕೋ ನೆಪ ಮಾಡಿ ಹಿಂದಿರುಗಿಸುತ್ತಿರುವುದು ಅಕ್ಷಮ್ಯ.. ಇವರು ಕಷ್ಟಪಟ್ಟು ಶ್ರಮ ಹಾಕಿ ಈ ಪ್ರಶಸ್ತಿಗಳನ್ನು ಪಡೆದವರಲ್ಲ ಅಂತ ಅನ್ನಿಸುತ್ತದೆ..” ಎಂದೂ ತಮ್ಮ ಪತ್ರದಲ್ಲಿ ಬರೆದಿದ್ದಾರೆ (ಪ್ರವಾ; ವಾವಾ,23.11.15). ಅವರ ಮಾತಿನಲ್ಲೇ ವಿರೋಧಾಭಾಸ, ಅಸಹಿಷ್ಣುತೆ ತುಳುಕಾಡಿದೆ. ‘ಅವಧಿ’,‘ನಿಲುಮೆ’, ‘ಫೇಸ್ ಬುಕ್’ ಮತ್ತಿತರ ಜಾಲ ತಾಣಗಳಲ್ಲೂ ಹಾಗೆ ಕುಚೋದ್ಯ ಮಾಡುವವರಿದ್ದಾರೆ. ಅಷ್ಟಕ್ಕೂ, ಈ ರೀತಿ ಮಾತಾಡಿದವರಲ್ಲಿ ರಾಮಶೇಷ ಅವರು ನೂರೊಂದನೆಯವರಿದ್ದಂತಿದೆ.ಮಾಧ್ಯಮದ ಮುಂದೆ ತಮ್ಮದೂ ಒಂದು ಇರಲಿ ಎಂದು ಗುರಿ ತಪ್ಪಿದ ಕಲ್ಲು ಒಗೆವ ಬದಲು, ತಮ್ಮ ಮನಸ್ಸನ್ನೇ ಕೇಳಿಕೊಂಡಿದ್ದರೆ ಆಗ, ಅವರ ಪ್ರತಿಕ್ರಿಯೆ ಬೇರೆಯಾಗಿರುತ್ತಿತ್ತು. ಕೆಲವರು ಪ್ರಶಸ್ತಿ ವಾಪಸಿ ಮಾಡಿದರೆ, ಹಲವರು ತಮ್ಮ ಬುಡಕ್ಕೇ ಬೆಂಕಿ ಬಿದ್ದಂತೆ ಬೆದರಿ, ಅಬ್ಬರಿಸುತ್ತಿರುವುದರಲ್ಲಿ, ಅವರೆಲ್ಲಾ ತಮ್ಮದೇ ರಾಜಕೀಯ ಹಿತಾಸಕ್ತಿಗೆ ಹಪಹಪಿಸುತ್ತಿರುವವರೆಂಬುದು ಗೋಚರವಾಗುತ್ತದೆ.

ಪ್ರಶಸ್ತಿ ವಾಪಾಸು ಮಾಡುತ್ತಿರುವವರೆಲ್ಲಾ ಕೇಂದ್ರ ಸರ್ಕಾರ ಅರ್ಥಾತ್ ಈಗಿನ ಪ್ರಧಾನಿಯವರನ್ನು ವಿರೋಧಿಸುತ್ತಿರುವವರು ಎಂಬ ಹೇಳಿಕೆಗಳೂ ವಿವೇಚನೆ ಇಲ್ಲದವು. ಏಕೆಂದರೆ, ಹೆಚ್ಚಿನವರಿಗೆ ದೊರೆತಿರುವುದು ರಾಜ್ಯ ಮಟ್ಟದ ಪುರಸ್ಕಾರಗಳು. ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಲವು ಸಾಹಿತಿಗಳೂ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಕರ್ನಾಟಕದಲ್ಲಿ ಅಸಹಿಷ್ಣುತೆ ಬಗೆಗೆ ಅಷ್ಟೇ ಅಲ್ಲ, ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗಾಗಿ ಒತ್ತಾಯಿಸಿಯೂ ಇಲ್ಲಿನವರು ಹೋರಾಟ ಮಾಡುತ್ತಿದ್ದಾರೆ. ಇದನ್ನೆಲ್ಲಾ ತನ್ನ ವಿರುದ್ಧ ಎಂದೇ ಕೇಂದ್ರ ಸರ್ಕಾರವಾಗಲೀ, ಅದರ ಹಿತಾಸಕ್ತರಾಗಲೀ ನಂಬುವುದು ಸಿನಿಕತನವಾಗುತ್ತದೆ. ಅಲ್ಲದೆ, ವಾಪಾಸು ಮಾಡುವವರು ಒಂದು ಪಕ್ಷದ ಪರವಾದವರು ಎನ್ನುವುದಾದರೆ, ವಿಚಾರವಂತರ ನಿಲುವನ್ನು ಖಂಡಿಸುತ್ತಿರುವವರೂ ತಮ್ಮದೇ ಬೇರೊಂದು ಪಕ್ಷದ ರಕ್ಷಣೆಗೆ ಟೊಂಕ ಕಟ್ಟಿದವರು ಎಂಬ ನಿಲುವಿಗೆ ಬರಬೇಕಾಗುತ್ತದೆ.

ಪ್ರಶಸ್ತಿ ವಾಪಾಸು ಮಾಡುತ್ತಿರುವವರೆಲ್ಲಾ ಸುಲಭವಾಗಿ ಪಡೆದಿದ್ದವರು ಎನ್ನುವುದಾದರೆ, ವಾಪಾಸು ಮಾಡದವರು ಅದು ಯಾವ ಬಗೆಯ ಕಷ್ಟಪಟ್ಟು ಅವನ್ನು ದಕ್ಕಿಸಿಕೊಂಡಿದ್ದರು ಎಂದು ಕೇಳಬೇಕಾಗುತ್ತದೆ. ಮತ್ತೊಂದು ಪ್ರಶಸ್ತಿ ಪಡೆವುದು ತನಗೆ ಕಷ್ಟವಾಗುತ್ತೆ ಎಂಬ ಹೆದರಿಕೆಯಿಂದಲೇ ಅವರು ಈಗ ಬಂದಿರುವುದನ್ನು ವಾಪಾಸು ಮಾಡುವ ಧೈರ್ಯ ತೋರುತ್ತಿಲ್ಲವೇ ಎಂದೂ ಪ್ರಶ್ನಿಸಬೇಕಾಗುತ್ತೆ. ಆದರೆ, ಹಾಗೆ ಪ್ರಶ್ನಿಸುವುದು ವಿವೇಕದ ನಡೆಯಾಗುವುದಿಲ್ಲ. ಇಷ್ಟೇಲ್ಲಾ ಹೇಳಿಯೂ ನಾನು ಯಾವುದಾದರೂ ಪ್ರಶಸ್ತಿ ಒಪ್ಪಿಕೊಂಡೆ ಎಂದರೆ, ಆಗ ಸಾಮಾಜಿಕ ಪಿಡುಗುಗಳನ್ನೂ ಒಪ್ಪಿಕೊಂಡಿದ್ದೇನೆ ಎಂದೂ ಅರ್ಥವಲ್ಲ.

ವಾಪಾಸು ನೀಡುವವರು ತಾವು ಸರ್ಕಾರದಿಂದ ಪಡೆದಿದ್ದ ಸವಲತ್ತುಗಳನ್ನೂ ಹಿಂದುರುಗಿಸಲಿ ಎಂಬುದೂ ಇನ್ನೊಂದು ಅವಿವೇಕದ ಮಾತಾಗುತ್ತದೆ. ರಾಜಕಾರಣಿಗಳು ಪಡೆವ ಎಲ್ಲಾ ಸವಲತ್ತುಗಳೂ ಸಾಹಿತಿಗಳಿಗೆ ದೊರೆಯುವುದಿಲ್ಲ. ಪ್ರಶಸ್ತಿ ಪತ್ರದೊಂದಿಗೆ ಸಿಗುವ ಫಲಕವೋ, ಕಾಗದವೋ ಮಾತ್ರ ನಾಲ್ಕು ಕಾಲ ಅವರ ಮನೆಗಳಲ್ಲಿ ಇರುತ್ತದೆ. ಹಣ್ಣು, ಹಾರ, ಅಷ್ಟಿಷ್ಟು ಹಣವೆಲ್ಲಾ ಅಂದಂದಿನ ದಂದುಗಕ್ಕೇ ಆಗಿಹೋಗಿರುತ್ತದೆ. ಆ ಹಣ್ಣು ಹಂಪಲನ್ನೂ ತೂಕ ಹಾಕಿ, ಹಣವನ್ನು ಬಡ್ಡೀ ಸಹಿತ ಹಿಂದಿರುಗಿಸಿ. .ಎನ್ನುವುದಾದರೆ, ಇನ್ನು ಮುಂದೆ ಕೇವಲ ಪ್ಲಾಸ್ಟಿಕ್ ರೂಪದ ಹಣ್ಣುಗಳನ್ನೂ, ಚಿತ್ತಾರ ರೂಪದ ಚೆಕ್ ಅನ್ನೂ ಕೊಡಬೇಕಾಗುತ್ತದೆ. ಮುಂದುವರೆದು, ಪ್ರಶಸ್ತಿ ಪಡೆದವರು, ತಮ್ಮ ವಿಧೇಯರಾಗಿ ವರ್ತಿಸಬೇಕು ಎಂಬ ಷರತ್ತು ವಿಧಿಸಿ, ಒಪ್ಪಿದವರಿಗೆ ಮಾತ್ರ ಪ್ರಶಸ್ತಿ ನೀಡಬೇಕಾಗುತ್ತದೆ. ಆಮೇಲೆ, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದ ರಾಜಕಾರಣಿಗಳು ದಂಡ ಸಹಿತ ಚುನಾವಣಾ ಖರ್ಚನ್ನೂ, ಮತದಾರರಿಗೆ ಪರಿಹಾರವನ್ನೂ ಹಿಂದಿರುಗಿಸಬೇಕಾಗುತ್ತದೆ-ಎಂದು ಸಾರ್ವಜನಿಕರು ಕೇಳುವುದಕ್ಕೂ ಅವಕಾಶ ಒದಗಿದಂತಾಗುತ್ತದೆ.ಕಟಕಿಯಾಡುವ ನುಡಿಯಲ್ಲೇ ಅವಿಚಾರಗಳಿವೆ; ಸ್ವಾರ್ಥ ಹುನ್ನಾರಗಳೂ ಇವೆ. ಇದು ಇತರರಿಗೆ ಅರ್ಥವಾಗದ್ದೇನಲ್ಲ. ಕುಂಬಳಕಾಯಿ ಕಳ್ಳ ಎಂದರೆ ಎಲ್ಲರೂ ಮುಟ್ಟಿ ನೋಡಿಕೊಳ್ಳುವ ಅಳುಕು ಬುದ್ಧಿ ಬಿಟ್ಟು, ವಿಚಾರವಂತರ ಪ್ರತಿಭಟನೆಯಲ್ಲಿನ ಮಾನವ ಹಿತಾಸಕ್ತಿಯನ್ನು ಅರಿತು, ಸಾಮಾಜಿಕ ಕೇಡುಗಳ ನಿಗ್ರಹಕ್ಕೆ ಎಲ್ಲರೂ ಕೈ ಜೋಡಿಸುವುದು ನಿಜವಾದ ಮನುಷ್ಯರು ತೋರಬೇಕಾದ ಬದ್ಧತೆಯಾಗಿದೆ. ಒಂದು ವೇಳೆ ತಾವೂ ಅಭಿಪ್ರಾಯಗಳನ್ನು ವ್ಯಕ್ತ ಮಾಡಬೇಕೆನ್ನುವುದಾದರೆ, ಇನ್ನೊಬ್ಬರ ಮಾತನ್ನೇ ಮತ್ತೆ ಮತ್ತೆ ನಕಲು ಮಾಡುವ ಬದಲು ವಿಷಯ ಕುರಿತ ವಿಭಿನ್ನ ನೆಲೆಗಳನ್ನು ಕುರಿತು ಹೊಸ ಸಂಗತಿಗಳನ್ನು ವ್ಯಕ್ತ ಪಡಿಸಲಿ.

ಉದಾ. ಎಲ್ಲಾ ಪ್ರಶಸ್ತಿಗಳನ್ನೂ ಸಾರಾ ಸಗಟು ಹಿಂದಿರುಗಿಸಬೇಕೇ? ಪ್ರಶಸ್ತಿ ಗೌರವ ಪಡೆದರೂ ತಮ್ಮ ವಿರೋಧಗಳನ್ನು ದಾಖಲಿಸುವುದು,ಪ್ರತಿಭಟಿಸುವುದು ಸಾಕಾದೀತೇ?(ಏಕೆಂದರೆ, ಸರ್ಕಾರ/ಸಂಸ್ಥೆಗಳು ಸಾಹಿತಿಯ ಕೃತಿಗೆ ಅಥವಾ ಅವರ ಸಾಧನೆಗೆ ‘ನೀವು ಮಾಡಿರುವುದು ಸರಿ, ಹೀಗೇ ಮಾಡುತ್ತಿರಿ..’ ಎಂಬ ಭಾವನೆಯಲ್ಲಿ ಪುರಸ್ಕಾರ ನೀಡಿ, ಗೌರವಿಸುತ್ತದೆಯೇ ಹೊರತು, ‘ನಾವು ಹೇಳಿದಂತೆ ಕೇಳದಿದ್ದರೆ, ನಮ್ಮ ತಪ್ಪುಗಳ ವಿರುದ್ಧ ಮಾತಾಡಿದರೆ ಆ ಪುರಸ್ಕಾರ ವಾಪಾಸು ಪಡೆಯುತ್ತೇವೆ’ ಎಂದೇನೂ ಹೇಳುವುದಿಲ್ಲ. ದೇಶ ದ್ರೋಹದ ಕೆಲಸ ಮಾಡಿದ್ದರೆ ಆ ಮಾತು ಬೇರೆ); ಎಲ್ಲೀವರೆಗೂ ಈ ವಾಪಾಸಿ ಪ್ರತಿಭಟನೆ ಮುಂದುವರೆಸುವುದು..? ಇತ್ಯಾದಿ. ಒಂದಂತೂ ನಿಜ: ಯಾರಿಗೆ ತನ್ನಲ್ಲಿ-ತನ್ನ ಚಿಂತನೆಯಲ್ಲಿ ನಂಬಿಕೆ ಇಲ್ಲವೋ, ಜೀವನದಲ್ಲೊಂದು ಸರ್ಕಾರೀ ಸನ್ಮಾನ ಪಡೆದರೆ ಧನ್ಯನಾದೆ..ಎಂದು ಹಪ ಹಪಿಸುತ್ತಾನೋ, ತನ್ನ ಹಿತಾಸಕ್ತಿಯ ವ್ಯಕ್ತಿ ಮುಖ್ಯ ಮಂತ್ರಿಯೋ, ಪ್ರಧಾನಿಯೋ ಆಗಿದ್ದರೆ ತನ್ನ ಇಡೀ ಸಮುದಾಯವೇ ಉದ್ಧಾರವಾಗಿಬಿಡುತ್ತೆ.. ಎಂದು ಭ್ರಮಿಸುತ್ತಾನೆಯೋ ಅವರು ಪುರಸ್ಕಾರ ಹಿಂದಿರುಗಿಸುವ ಮಾತಿರಲಿ, ಒಂದು ಸಾಂಕೇತಿಕ ಪ್ರತಿಭಟನೆಯನ್ನೂ ವ್ಯಕ್ತ ಮಾಡುವ ಧೈರ್ಯ ತೋರಲಾರರು. ಈ ಸೂಕ್ಷ್ಮವನ್ನು ವಿನಾ ಟೀಕೆಯಲ್ಲಿ ತಮ್ಮ ಮಾತು-ಅಕ್ಷರಗಳ ಶಕ್ತಿಗಳನ್ನು ವ್ಯರ್ಥ ಮಾಡುತ್ತಿರುವವರು ಗ್ರಹಿಸುವಂತಾಗಲಿ.

1 ಟಿಪ್ಪಣಿ Post a comment
  1. Goutham
    ನವೆಂ 26 2015

    ಉತ್ತಮ ಲೇಖನ ಬರೆದ ಲೇಖಕರಿಗೆ ಮತ್ತು ಪ್ರಕಟಿಸಿದ ನಿಲುಮೆಗೆ ದನ್ಯವಾದಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments