ವಿಷಯದ ವಿವರಗಳಿಗೆ ದಾಟಿರಿ

ಜನವರಿ 31, 2016

3

ಬುದ್ಧಿಜೀವಿಗಳೆಂಬ ಆಸ್ಥಾನ ವಿದೂಷಕರನ್ನು ಕಡೆಗಣಿಸಬೇಡಿ!

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಕೋತಿ ಮತ್ತು ಬಾಳೆಹಣ್ಣುಜನವರಿ 28ನೇ ತಾರೀಕು ಮೈಸೂರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಒಂದು ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇತ್ತೀಚೆಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮ ಅದು. ವಡ್ಡೇರ ಎಂಬ ಹಿಂದುಳಿದ ಜಾತಿಯ ತಂದೆಗೆ ಹುಟ್ಟಿದ ರೋಹಿತ್, ಹತ್ತು ವರ್ಷಗಳ ಹಿಂದೆಯೇ ಕ್ರಿಶ್ಚಿಯನ್ ಆಗಿ ಮತಾಂತರನಾಗಿದ್ದ ಎಂದು ದಾಖಲೆಗಳು ಹೇಳುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ದಲಿತ ಎಂದು ಬಿಂಬಿಸಿ ಕಾರ್ಯಕ್ರಮ ಮಾಡಿದ್ದರ ಔಚಿತ್ಯ ಏನೋ ಗೊತ್ತಿಲ್ಲ. ಆತನ ಸಾವಿಗೆ ಕುಟುಂಬದೊಳಗಿನ ಜಗಳಗಳೇ ಕಾರಣವಾಗಿದ್ದವು ಎಂದು, ಆತನ ಮನೆಯವರನ್ನು ಸಂದರ್ಶಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವಿಸ್ತೃತವಾದ ವರದಿಯನ್ನು ಪ್ರಕಟಿಸಿದೆ. ಆದಾಗ್ಯೂ ಆತ ತನ್ನ ಕೊನೆಯ ಪತ್ರದಲ್ಲಿ ಬರೆಯದೇ ಇರುವ ವಿಷಯಗಳನ್ನು ತಾವಾಗಿ ಕಲ್ಪಿಸಿಕೊಂಡು ಸಾವನ್ನು ಯಾವ್ಯಾವುದೋ ಸಮಸ್ಯೆಗಳಿಗೆಲ್ಲ ತಗುಲಿ ಹಾಕುವುದಕ್ಕೆ ಬುದ್ಧಿಜೀವಿಗಳು ಮತ್ತು ಮಾಧ್ಯಮದ ಮಂದಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಜುಗರ ತರುವುದೇ ಇವರೆಲ್ಲರ ಏಕೈಕ ಅಜೆಂಡಾ ಎಂಬುದು ಮತ್ತೆಮತ್ತೆ ಸಾಬೀತಾಗಿರುವ ಸತ್ಯ. ತಮ್ಮ ಕಾರ್ಯಸಾಧನೆಗಾಗಿ ಇವರು ಅಂತಾರಾಷ್ಟ್ರೀಯ ವೇದಿಕೆಗಳನ್ನು ಕೂಡ ನಿರ್ಲಜ್ಜೆಯಿಂದ ಬಳಸಿಕೊಳ್ಳಬಲ್ಲರು. ಬಿಬಿಸಿ ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ರೋಹಿತ್ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ಭಾರತದ ಮಾನ ಹರಾಜು ಹಾಕಿದ್ದೇ ಇದಕ್ಕೊಂದು ಜ್ವಲಂತ ನಿದರ್ಶನ.

ಇರಲಿ, ಆತನ ಸಾವಿಗೆ ಮಾನವೀಯ ನೆಲೆಯಲ್ಲಿ ದಲಿತ ಒಕ್ಕೂಟ ಕಾರ್ಯಕ್ರಮ ಯೋಜಿಸಿತ್ತು ಎಂದೇ ಹೇಳೋಣ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಬ್ಬರು ಘನ ಅತಿಥಿಗಳು ಆಡಿದ ಮಾತುಗಳಿಗೂ ಕಾರ್ಯಕ್ರಮದ ಆಶಯಕ್ಕೂ ತಾಳಮೇಳವೇ ಇರಲಿಲ್ಲ! ಒಬ್ಬ ಅತಿಥಿ ಕೆ.ಎಸ್. ಭಗವಾನ್, “ತ್ರೇತಾಯುಗದ ರಾಮನಿಗೆ ತನ್ನ ಪುರುಷತ್ವದ ಬಗ್ಗೆಯೇ ಸಂಶಯ ಇತ್ತು. ಹಾಗಾಗಿ ಎರಡು ಸಲ ಸೀತೆಯನ್ನು ಪರೀಕ್ಷೆಗೆ ಗುರಿಪಡಿಸಿದ. ಆ ಕಾಲದಲ್ಲಿ ಮಹಿಳೆಯರಿಗೂ ಆಸ್ತಿಯ ಹಕ್ಕು ಇದ್ದರೆ ಸೀತೆ ರಾಮನ ಜೊತೆ ವನವಾಸಕ್ಕೆ ಹೋಗುತ್ತಿರಲಿಲ್ಲ” ಎಂದರು. ಮುಂದುವರಿದು, “ರಾಮ ತನ್ನ ಪಟ್ಟಾಭಿಷೇಕದ ಕಾಲದಲ್ಲಿ 38 ಕೋಟಿ ರುಪಾಯಿಯ ಚಿನ್ನದ ನಾಣ್ಯಗಳನ್ನು ಪುರೋಹಿತರಿಗೆ ಕೊಟ್ಟ. ಹಾಗಾಗಿ ಪುರೋಹಿತಶಾಹಿಗಳು ರಾಮರಾಜ್ಯ ಬರಲಿ ಎನ್ನುತ್ತಿದ್ದಾರೆ” ಎಂಬ ಆಣಿಮುತ್ತುಗಳನ್ನು ಉದುರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎರಡನೇ ಅತಿಥಿ ಅದೇ ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಮಹೇಶ್ ಚಂದ್ರಗುರುಗಳು ಮೋದಿ, ಸ್ಮೃತಿ ಇರಾನಿ, ನೆಹರೂ ಮತ್ತು ವಿವಿಯ ಉಪಕುಲಪತಿ – ಎಲ್ಲರಿಗೂ ಹೋಲ್‍ಸೇಲ್ ಆಗಿ ಅವಾಚ್ಯಶಬ್ದಗಳಿಂದ ಬಯ್ದು ತನ್ನ ತೀಟೆ ತೀರಿಸಿಕೊಂಡರು. ಸಾಲದ್ದಕ್ಕೆ ಹುಚ್ಚ ವೆಂಕಟ್ ಸ್ಟೈಲ್‍ನಲ್ಲಿ ನನ್ ಎಕ್ಕಡಾ ನನ್ ಮಗಂದ್ ಎಂಬೆಲ್ಲ ಮುತ್ತಿನ ಹಾರದಂಥ ಪದಪುಂಜಗಳಿಂದ ತನ್ನ ಮಾತುಗಳನ್ನು ಕಳೆಗಟ್ಟಿಸಿ ಚಪ್ಪಾಳೆ ಗಿಟ್ಟಿಸಿದರು! ಈ ಇಬ್ಬರು ಪುಣ್ಯಾತ್ಮರು ಹೋದಲ್ಲೆಲ್ಲ ಏನು ಮಾತಾಡುತ್ತಾರೆನ್ನುವುದು ಇಡೀ ಜಗತ್ತಿಗೆ ಗೊತ್ತಿರುವಾಗ ಹುಡುಕಿ ಇಂಥವರನ್ನೇ ಕಾರ್ಯಕ್ರಮಕ್ಕೆ ಕರೆಸಿರುವುದನ್ನು ನೋಡಿದರೆ ದಲಿತ ಒಕ್ಕೂಟದ ಮುಖ್ಯ ಉದ್ಧೇಶ ರೋಹಿತ್‍ನಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿರಲಿಲ್ಲ; ವಿವಾದದ ಬೆಂಕಿ ಹಾಕಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವುದು ಮಾತ್ರವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ಸೂಕ್ಷ್ಮವಾಗಿ ಗಮನಿಸಿ. ಕಳೆದ ಎರಡು ವರ್ಷಗಳಿಂದ ಈ ಬುದ್ಧಿಜೀವಿಗಳ ಪ್ರಲಾಪ, ಪ್ರತಾಪಗಳು ಕರ್ನಾಟಕದಲ್ಲಿ ಮಿತಿಮೀರಿವೆ. ನೀವು ಬುದ್ಧಿಜೀವಿ ಎಂದು ಗುರುತಿಸಿಕೊಂಡರೆ ಸಾಕು; ಏನನ್ನು ಬೇಕಾದರೂ ಹೇಳುವ ಸ್ವಾತಂತ್ರ್ಯವನ್ನು ಅನಾಮತ್ತಾಗಿ ಪಡೆದುಕೊಂಡುಬಿಡುತ್ತೀರಿ. ಶ್ರೀರಾಮನನ್ನು ಮದ್ಯವ್ಯಸನಿ, ಸ್ತ್ರೀಲೋಲ, ಪತ್ನಿಪೀಡಕ ಎಂದು ಜರೆದ; ಭಗವದ್ಗೀತೆಯನ್ನು ಸುಡುತ್ತೇನೆ ಎಂದ ಭಗವಾನ್ ಈ ರಾಜ್ಯದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ವಿಪರ್ಯಾಸವೆಂದರೆ ಸನ್ಮಾನ ಮಾಡುತ್ತ ಅವರ ಕೈಯಲ್ಲಿ ಅಕಾಡೆಮಿ ಅಧ್ಯಕ್ಷರು ವೀಣಾಪಾಣಿ ಸರಸ್ವತಿಯ ವಿಗ್ರಹವನ್ನಿಟ್ಟರು. ಭಗವಾನ್‍ರನ್ನು ಆ ಭಂಗಿಯಲ್ಲಿ ನೋಡಿದಾಗ ಕನ್ನಡಿಗರಿಗೆ “ಮಂಗನ ಕೈಯಲ್ಲಿ ಮಾಣಿಕ್ಯ” ಎಂಬುದು ಅತ್ಯಂತ ಶೀಲವಂತ ಸೌಜನ್ಯಯುತ ಭಾಷೆಯ ಗಾದೆ ಅನ್ನಿಸಿರಲಿಕ್ಕೆ ಸಾಕು. ತನ್ನ ಮೇಲೆ ಹತ್ತಾರು ಕೇಸುಗಳು ಬಿದ್ದರೂ ಆರಾಮಾಗಿ ಓಡಾಡಿಕೊಂಡಿರುವ, ಹೋದಲ್ಲೆಲ್ಲ ರಾಮ ಕೃಷ್ಣರನ್ನು ಬಾಯಿಗೆ ಬಂದಂತೆ ಬಯ್ದುಕೊಂಡು ನಾಲಗೆ ಚಪಲ ತೀರಿಸಿಕೊಳ್ಳುತ್ತಿರುವ ಈ ವ್ಯಕ್ತಿ ಕರ್ನಾಟಕಕ್ಕೆ ಅಂಟಿದ ಮಹಾಶಾಪ ಎಂದು ಬುದ್ಧಿಸ್ತಿಮಿತ ಇರುವ ಪ್ರತಿಯೊಬ್ಬನೂ ಒಪ್ಪುತ್ತಾನೆ. ಭಗವಾನ್ ಇದುವರೆಗೆ ಹೇಳಿರುವ ಯಾವ ಹೇಳಿಕೆಗೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಯಾವ ಕೇಸನ್ನೂ ಇದುವರೆಗೆ ಗಂಭೀರವಾಗಿ ಪರಿಗಣಿಸಿಲ್ಲ. ಕೇಸು ಹಾಕಿದವರಿಗೇ ನೋಟೀಸ್ ಕೊಡುವ ವಿಚಿತ್ರವನ್ನು ನಾವು ಭಗವಾನ್ ಪ್ರಕರಣದಲ್ಲಿ ನೋಡಿದ್ದೇವೆ. ಕಳೆದೊಂದು ವರ್ಷದಿಂದ ಈ ವ್ಯಕ್ತಿಗೆ ಭದ್ರತೆ ಒದಗಿಸಲೆಂದೇ ಲಕ್ಷಾಂತರ ರುಪಾಯಿ ಸರಕಾರಿ ದುಡ್ಡನ್ನು ದುಂದು ಮಾಡಲಾಗಿದೆ. ಬಂಧನವಾಗಿಯೇ ಬಿಡುತ್ತದೆ ಎಂಬ ಭಯದಲ್ಲಿ ನಿರೀಕ್ಷಣಾ ಜಾಮೀನು ಪಡೆಯುವಾಗ ಭಗವಾನ್‍ರಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಂಟು ನಿಬಂಧನೆಗಳನ್ನು ವಿಧಿಸಿತ್ತು. ಈ ವ್ಯಕ್ತಿ ಅವುಗಳಲ್ಲಿ ಒಂದನ್ನೂ ಪಾಲಿಸಿಲ್ಲ! ಬಂಧನವಾದವರಿಗೆ ಪ್ರಶಸ್ತಿ ಕೊಡಲಾಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೊಡುವವರೆಗೂ ಶತಾಯಗತಾಯ ಭಗವಾನ್ ಬಂಧನವಾಗದಂತೆ ಸಿದ್ಧರಾಮಯ್ಯನವರ ಸರಕಾರ ನೋಡಿಕೊಂಡಿತು. ಇದಕ್ಕಿಂತ ನಾಚಿಕೆಗೇಡು ಏನಾದರೂ ಇದೆಯೇ?

ಮೈಸೂರು ವಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹೇಶ್ ಚಂದ್ರಗುರು ಕೂಡ ಈ ಹಿಂದೆ ರಾಮನ ಅವಹೇಳನ ಮಾಡಿದವರೇ. 2014ರ ಡಿಸೆಂಬರ್ 3ರಂದು ವಿವಿಯ ಪ್ರಾಧ್ಯಾಪಕರಿಗೆಂದು ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರದಲ್ಲಿ ಈ ಗುರುಗಳು ರಾಮನ ಬಗ್ಗೆ ತೀರಾ ಸೊಂಟದ ಕೆಳಗಿನ ಭಾಷೆಯಲ್ಲಿ ಅವಹೇಳನ ಮಾಡಿದ್ದರು. (ರಾಮನಿಗೂ ಕಾರ್ಯಕ್ರಮಕ್ಕೂ ಬಾದರಾಯಣ ಸಂಬಂಧ ಕೂಡ ಇರಲಿಲ್ಲ!) ಗುರು ಮಾತಿಗೆ ಅಲ್ಲಿದ್ದವರು ಅಕ್ಷೇಪ ವ್ಯಕ್ತಪಡಿಸಿದರು. ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಸೆಕ್ಷನ್ 295-ಎ ಅಡಿ ಕೇಸು ದಾಖಲಾಯಿತು. ಆದರೆ ಯಥಾಪ್ರಕಾರ ಸಿದ್ಧರಾಮಯ್ಯ ಸರಕಾರ ಬುದ್ಧಿಜೀವಿಗಳ ರಕ್ಷಣೆಗೆ ನಿಂತುಬಿಟ್ಟಿತು. ರಾಮ ಕಾಡಿಗೆ ಹೋಗಿದ್ದು ಪಿತೃವಾಕ್ಯ ಪರಿಪಾಲನೆಗಲ್ಲ; ಶ್ರೀಲಂಕಕ್ಕೆ ಕಬ್ಬಿಣ ತರಲು ಹೋದ ಎಂದು ಹೇಳುವ ಬಂಜಗರೆ ಜಯಪ್ರಕಾಶ್ ನಮ್ಮ ರಾಜ್ಯದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ! ಹೀಗೆ ಇವರೆಲ್ಲ ಸರತಿಯ ಸಾಲಲ್ಲಿ ನಿಂತು ರಾಮನ ತೇಜೋವಧೆ ಮಾಡುತ್ತಿರುವುದು ಕೇವಲ ಬಾಯಿಚಪಲಕ್ಕೆ ಎಂದು ಭಾವಿಸಬೇಡಿ! ಇದರ ಹಿಂದೆ ಒಂದು ದೊಡ್ಡ ಸಂಚೇ ಇದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲ ಕೆಲಸಗಳು ಚುರುಕಾಗಿ ನಡೆಯುತ್ತಿರುವಾಗ, ಆ ಮರ್ಯಾದಾ ಪುರುಷೋತ್ತಮನ ಮರ್ಯಾದೆಯನ್ನು ಆದಷ್ಟು ಕಳೆದು ಜನರಲ್ಲಿ ಅಪನಂಬಿಕೆ ಹುಟ್ಟಿಸಬೇಕೆಂಬ ಒಂದು ಅಜೆಂಡಾ ಇಲ್ಲಿ ಕೆಲಸ ಮಾಡುತ್ತಿದೆ. ಹಿಂದೂಗಳನ್ನು ಒಡೆಯಬೇಕು; ಒಗ್ಗಟ್ಟು ಮುರಿಯಬೇಕು; ಮೇಲ್ವರ್ಗ-ಕೆಳವರ್ಗಗಳ ನಡುವಿನ ಸಂಘರ್ಷವನ್ನು ಸದಾ ಜಾರಿಯಲ್ಲಿಡಬೇಕು ಎಂಬುದು ಕಾಂಗ್ರೆಸ್‍ನ ಗುಪ್ತಪ್ರಣಾಳಿಕೆಯ ಮುಖ್ಯ ಅಂಶ. ರಾಮನ ಹೆಸರು ಹೇಳಿಕೊಂಡು ಅಧಿಕಾರದ ಗದ್ದುಗೆ ಏರಿದ ಬಿಜೆಪಿಯನ್ನು ತಡೆಯಲೆಂತೂ ಆಗಲಿಲ್ಲ; ಕಡೇಪಕ್ಷ ಆ ರಾಮನ ನಂಬಿಕೆಯನ್ನೇ ಬುಡಮೇಲಾಗಿಸಿದರೆ ಅಷ್ಟರಮಟ್ಟಿಗೆ ಬಿಜೆಪಿ ಮತಗಳನ್ನು ದುರ್ಬಲಗೊಳಿಸಿದಂತೆ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನದ್ದು. ರಾಮ ತನ್ನ ಹೆಂಡತಿಗೆ ತೊಂದರೆಕೊಟ್ಟ; ಬೆಂಕಿಗೆ ಹಾಕಿದ; ಪುರೋಹಿತಶಾಹಿಯ ಪರವಾಗಿದ್ದ; ರೈತರನ್ನು ಉಪೇಕ್ಷೆ ಮಾಡಿದ; ಅವನ ರಾಜ್ಯದಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲಿರಲಿಲ್ಲ; ಅವನಿಂದ ಹತನಾದ ಶಂಬೂಕ ಒಬ್ಬ ಶೂದ್ರ – ಬುದ್ಧಿಜೀವಿಗಳ ಈ ಎಲ್ಲ ಆರೋಪಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವರ ಟಾರ್ಗೆಟ್ ಏನು, ಯಾರನ್ನು ಗುರಿಯಾಗಿಸಿಕೊಂಡು ತಮ್ಮ ಅಸ್ತ್ರಗಳನ್ನು ಬಿಡುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಇಂಥ ಹುಚ್ಚರೆಲ್ಲ ಇನ್ನೂ ಎಲ್ಲಾ ಪೊಲೀಸ್ ಕೇಸ್‍ಗಳಿಗೂ ಅತೀತರಾಗಿ ಓಡಾಡಿಕೊಂಡಿರುವುದನ್ನು ನೋಡಿದರೆ ಕಾಂಗ್ರೆಸ್ ತನ್ನ ಅಜೆಂಡಾ ಹರಡಲೆಂದೇ ಇವರನ್ನು ದುಡ್ಡು ಕೊಟ್ಟು ನೇಮಿಸಿಕೊಂಡಿದೆ ಎಂದು ಭಾವಿಸಬೇಕಾಗುತ್ತದೆ.

ಇನ್ನೊಂದು ಅಂಶವನ್ನಿಲ್ಲಿ ಗಮನಿಸಿ. ಹಿಂದೂ ದೇವತೆಗಳನ್ನು ವಾಚಾಮಗೋಚರ ಹೀಯಾಳಿಸುವ ಬುದ್ಧಿಜೀವಿಗಳು ಬೇಕುಬೇಕಾದ ಸ್ಥಾನ, ಸನ್ಮಾನ ಹೊಡೆಯುತ್ತಾರೆ. ಅವರನ್ನು ಪ್ರಶ್ನಿಸಿದವರು ಪೊಲೀಸ್ ಆತಿಥ್ಯ ಪಡೆಯುತ್ತಾರೆ. ಅಂದರೆ ತಮ್ಮ ಧರ್ಮದ ಬಗ್ಗೆ ಏನನ್ನೂ ಮಾತಾಡಲಾಗದ ಸ್ಥಿತಿಗೆ ಹಿಂದೂಗಳನ್ನು ಬಗ್ಗುಬಡಿಯುವ ಒಂದು ತಂತ್ರವನ್ನೂ ರಾಜ್ಯಸರಕಾರ ಅನುಸರಿಸುತ್ತಿದೆ. ಈ ತಂತ್ರದ ವಿರಾಟ ರೂಪವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮನಶ್ಶಾಸ್ತ್ರದಲ್ಲಿ ಬರುವ ಕೋತಿ ಮತ್ತು ಬಾಳೆಹಣ್ಣಿನ ಪ್ರಯೋಗವನ್ನು ಓದಬೇಕು. ಒಂದು ಕೋಣೆಯಲ್ಲಿ ಛಾವಣಿಯಲ್ಲಿ ಒಂದು ಬಾಳೆಹಣ್ಣಿನ ಗೊಂಚಲನ್ನೂ ಪಕ್ಕದಲ್ಲೇ ಏಣಿಯನ್ನೂ ಇಡಲಾಗಿದೆ. ಐದಾರು ಕೋತಿಗಳನ್ನು ಕೋಣೆಯೊಳಗೆ ಬಿಡಲಾಗುತ್ತದೆ. ಛಾವಣಿಯಲ್ಲಿ ಬಾಳೆಹಣ್ಣನ್ನು ಕಂಡ ಮೊದಲ ಕೋತಿ ಏಣಿ ಹತ್ತಿ ಬಾಳೆ ಕೀಳಲು ಯತ್ನಿಸುತ್ತದೆ. ಕೂಡಲೇ ಅದರ ಮೇಲೆ; ಮತ್ತು ಉಳಿದ ಕೋತಿಗಳ ಮೇಲೆ, ಪ್ರಯೋಗ ನಡೆಸುತ್ತಿರುವವನು ಹೆಪ್ಪುಗಟ್ಟುವಂಥ ಥಂಡಿನೀರನ್ನು ಚೆಲ್ಲುತ್ತಾನೆ. ಮರಗಟ್ಟಿ ಗಡಗಗಡ ನಡುಗುವ ಕೋತಿಗಳು ಸ್ವಲ್ಪ ಸಮಯ ಸುಮ್ಮನಿರುತ್ತವೆ. ಆದರೆ ಬಾಳೆಹಣ್ಣಿನ ಆಸೆಯನ್ನು ಹತ್ತಿಕ್ಕಲಾಗದೆ ಎರಡನೇ ಕೋತಿ ಏಣಿ ಹತ್ತಿ ಬರುತ್ತದೆ. ಮತ್ತೆ ಮೊದಲಿನಂತೆ ಅವುಗಳ ಮೇಲೆ ತಣ್ಣೀರ ಅಭಿಷೇಕವಾಗುತ್ತದೆ! ತುಸುಹೊತ್ತು ಕಳೆದು ಮೂರನೇ ಕೋತಿ ಏಣಿ ಹತ್ತಲುಹೋದಾಗ ಉಳಿದೆಲ್ಲ ಕೋತಿಗಳು ಅದನ್ನು ಕೆಳಗೆಳೆದುಹಾಕಿ ರಪರಪನೆ ಬಾರಿಸುತ್ತವೆ! ಹಿಂದೂಗಳನ್ನೂ ಈ ಸ್ಥಿತಿಗೆ ತರಬೇಕು; ಹಾಗಾಗಿ ಅವರು ಪ್ರತಿಸಲ ಈ ಬುದ್ಧಿಜೀವಿಗಳ ಹೇಳಿಕೆಗಳಿಂದ ಪ್ರಚೋದಿತರಾಗಿ ವ್ಯಗ್ರರಾದಾಗಲೂ ಅವರನ್ನು ಪೊಲೀಸ್ ವ್ಯವಸ್ಥೆ ಬಳಸಿ ಹೆಡೆಮುರಿಕಟ್ಟಬೇಕು ಮತ್ತು ಅಂತಿಮವಾಗಿ ತಮ್ಮ ದೇವರುದಿಂಡರ ಬಗ್ಗೆ ಯಾರು ಏನೇ ಆಕ್ಷೇಪಾರ್ಹ ಹೇಳಿಕೆಗಳನ್ನು ಕೊಟ್ಟರೂ ಪ್ರತಿಭಟಿಸದೆ ಕೂರುವ ನಿರ್ವೀರ್ಯಸ್ಥಿತಿಗೆ ಹಿಂದೂಗಳನ್ನು ತರಬೇಕು ಎನ್ನುವ ದೊಡ್ಡಯೋಜನೆಯೊಂದರ ಚಿಕ್ಕಭಾಗವೇ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಬುದ್ಧಿಜೀವಿಗಳ ಹಾರಾಟ.

ಈಗಲ್ಲದೆ ಹೋದರೂ ಹಲವು ವರ್ಷಗಳ ಬಳಿಕ ಕಾಂಗ್ರೆಸ್‍ಗೆ ವರದಾನವಾಗಲಿರುವ ಮತ್ತು ತನಗೆ ಮುಳುವಾಗಲಿರುವ ಈ ಕಾರ್ಯಯೋಜನೆಯ ಬಗ್ಗೆ ರಾಜ್ಯಬಿಜೆಪಿ ಎಚ್ಚೆತ್ತುಕೊಳ್ಳಬೇಕಾಗಿತ್ತು. ಈಗಾಗಲೇ ಹಲವು ಹಿಂದೂಗಳು (ಇವರಲ್ಲಿ ಹೆಚ್ಚಿನವರು ದಲಿತರು, ಹಿಂದುಳಿದ ವರ್ಗದ ಜನರು) ತಮ್ಮದೇ ಧರ್ಮದ ದೈವದೇವರುಗಳನ್ನು ತುಚ್ಛವಾಗಿ ಕಾಣುವ ಮನಸ್ಥಿತಿಗೆ ಬಿದ್ದಿದ್ದಾರೆ; ತಮ್ಮ ಧರ್ಮದ ಗ್ರಂಥಗಳನ್ನು ಹೀಯಾಳಿಸುತ್ತಿದ್ದಾರೆ ಎಂಬುದನ್ನು ಗಮನಿಸಿದರೆ, ಇದು ಹಿಂದೂಗಳನ್ನು ಒಳಗಿನಿಂದ ಅದೆಷ್ಟು ದುರ್ಬಲ ಮಾಡಲಿದೆ ಎಂಬ ಆತಂಕ ಕನಿಷ್ಠ ಬಿಜೆಪಿಗಾದರೂ ಹುಟ್ಟಬೇಕಾಗಿತ್ತು. ಕರ್ನಾಟಕದಲ್ಲಿ ರಣಹದ್ದುಗಳಂತೆ ಮೆರೆಯುತ್ತಿರುವ ಬುದ್ಧಿಜೀವಿಗಳಿಗೆ ತಕ್ಕ ಪಾಠ ಕಲಿಸುವ ಎಲ್ಲ ಅವಕಾಶವಿದ್ದೂ ಮೌನವಾಗಿರುವ ವಿರೋಧಪಕ್ಷಗಳು ಈಗಾಗಲೇ ಪ್ರಯೋಗದ ಕೋತಿಗಳಂತೆ ಬದಲಾಗಿಬಿಟ್ಟಿವೆಯೇ ಎಂಬ ಅನುಮಾನ ನಮ್ಮೆಲ್ಲರದ್ದು! ಇಲ್ಲವಾದರೆ ತನ್ನ ಸ್ವಂತ ಸೊಸೆಯನ್ನೇ ಆಸ್ತಿಯಲ್ಲಿ ಪಾಲು ಕೊಡದೆ ಮನೆಯಿಂದ ಹೊರಹಾಕಿರುವ ವ್ಯಕ್ತಿ, “ಮಹಿಳೆಯರಿಗೆ ಆಸ್ತಿಯಲ್ಲಿ ಪಾಲಿದ್ದರೆ ಸೀತೆ ರಾಮನ ಜೊತೆ ಕಾಡಿಗೆ ಹೋಗುತ್ತಿರಲಿಲ್ಲ” ಎಂಬ ಮಾತು ಹೇಳುವುದನ್ನು ಕೇಳಿಸಿಕೊಳ್ಳುವ ಕರ್ಮ ಕನ್ನಡಿಗರಿಗೆ ಬರುತ್ತಿರಲಿಲ್ಲ.

ಚಿತ್ರಕೃಪೆ:pintrest.com

3 ಟಿಪ್ಪಣಿಗಳು Post a comment
 1. sira somashekar
  ಫೆಬ್ರ 2 2016

  ರೋಹಿತ್ ಚಕ್ರವರ್ತಿ ಎನ್ನುವ ಇನ್ನೊಬ್ಬ ವಿದೂಷಕ

  ಉತ್ತರ
 2. Devu Hanehalli
  ಫೆಬ್ರ 3 2016

  This is a point of no return. (means there are several points of no return.) We are scripting our own epitaph. Future generation will analyse this foolishness very harshly. Truth is dancing before eyes – stark naked truth. we are purposefully avoiding an eye-contact with the truth. It may happen in our own life time – meeting the catastrophe on all fronts. I think man will not survive this time – for good. Scientists have now presumed that aliens are not seen because they are extinct. Man will join that elite club of extinct aliens in near future. If you think I am pessimist just see how these brilliant people think and act. Just see what is happening in Syria and elsewhere.

  ಉತ್ತರ
 3. vkv maruthy
  ಫೆಬ್ರ 4 2016

  Becuase of this ‘narasattanamardathana’character we have been ruled by Ghasnimohamad toLlord Monuntbatten.wait for some time, This country will be another sirya.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments