ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 8, 2016

3

ಸಂಸ್ಕೃತ ಮತ್ತು ಕನ್ನಡಗಳ ಅಂತರ್ಜಾಲ ಸ್ಥಿತಿಗತಿ

‍ನಿಲುಮೆ ಮೂಲಕ

– ನವೀನ್ ಗಂಗೋತ್ರಿ

ಸಂಸ್ಕೃತಸಂಸ್ಕೃತದ ಕುರಿತಾಗಿ ಭಾರೀ ಅನುಕಂಪದಿಂದ ಮಾತಾಡುವ ಬಲುದೂರದ ಮಿತ್ರವಲಯವೊಂದಿದೆ ನನ್ನ ಬಳಿ. ಸಂಸ್ಕೃತವನ್ನೋದಿಕೊಂಡ ನಾನು, ನನ್ನಂಥವರು, ನಮ್ಮ ಸಂಸ್ಕೃತ ಸಂಸ್ಥೆಗಳು, ಸಂಸ್ಕೃತ ಪ್ರಪಂಚ ಮತ್ತು ಸಂಸ್ಕೃತಭಾಷೆಯ ಕುರಿತಾದ ಆಳವಾದ ಅನುಕಂಪ ಮತ್ತು ಕರುಣವೊಂದು ಅವರ ದನಿಯಲ್ಲಿರುತ್ತದೆ. ಆದರೆ ನನಗೆಂದಿಗೂ ಈ ಅನುಕಂಪ ಸಮರ್ಪಕವೆಂದೆನಿಸಿಲ್ಲ. ಬಹುಶಃ ಎಪತ್ತು ಎಂಭತ್ತು ತೊಂಭತ್ತರ ದಶಕದ ಸಂಸ್ಕೃತದ ಸ್ಥಿತಿಯ ಕುರಿತಾದ ಅವರ ಗ್ರಹಿಕೆ ಇನ್ನೂ ಅಪ್ಡೇಟಾಗಿಲ್ಲವೆಂದು ಸುಮ್ಮನಾಗುತ್ತೇನೆ. ವಾಸ್ತವದಲ್ಲಿ ಸಂಸ್ಕೃತದ ಪ್ರಪಂಚ ಚಟುವಟಿಕೆಯಿಂದ ಕೂಡಿದೆಯಲ್ಲದೆ ಅದು ಪ್ರಪಂಚದ ಬಹುಪಾಲನ್ನು ತಲುಪುವ ದಿಕ್ಕಿನಲ್ಲಿ ಸಮರ್ಥ ಹೆಜ್ಜೆಯನ್ನಿಟ್ಟಿದೆ. ಸಂಸ್ಕೃತಕ್ಕಾಗಿ ಉಳಿದೆಲ್ಲವನ್ನೂ ತೊರೆದ ನಿಷ್ಠ ಕಾರ್ಯಕರ್ತರಿದ್ದಾರೆ, ವಿದ್ವಾಂಸರಿದ್ದಾರೆ, ಸಂಸ್ಥೆಗಳಿವೆ ಮತ್ತು ವಿವಿ ಗಳಿವೆ. ನಿಜವೆಂದರೆ ಸಂಸ್ಕೃತದ ಕಾರ್ಯ ಭಾರತದಲ್ಲಿ ಮಾತ್ರವಲ್ಲ, ಯೂರೋಪ್ ನಿಂದ ಕೂಡ ನಡೆಯುತ್ತಿದೆ. ಅದರ ಪರಿಣಾಮವೇ ಸಂಸ್ಕೃತದ ಲಭ್ಯತೆ ಎಲ್ಲಾ ಅರ್ಥದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಿಮ್ಮಲ್ಲಿ ಅಂತರ್ಜಾಲದ ವ್ಯವಸ್ಥೆ ಇದೆಯೆಂದರೆ ಸಂಸ್ಕೃತ ವಿಶ್ವದ ಕ್ಲಾಸಿಕ್ ಕೃತಿಗಳೆಲ್ಲವೂ ನಿಮ್ಮಲ್ಲಿವೆ ಎಂದೇ ಅರ್ಥ. ಈ ಮಾತುಗಳಲ್ಲಿ ನಿಮಗೆ ನಂಬಿಕೆಯಿಲ್ಲವೆಂದಾದರೆ ಸುಮ್ಮನೇ ಒಮ್ಮೆ ಗೂಗಲಿನಲ್ಲಿ ಸಂಸ್ಕೃತದ ಕೃತಿಯೊಂದಕ್ಕಾಗಿ ಹುಡುಕಾಡಿ ನೋಡಿ.

ಸಂಸ್ಕೃತದ ಕೃತಿಗಳಿಗಾಗಿ ಹುಡುಕಿದಂತೆಯೇ ಕನ್ನಡದ ಕ್ಲಾಸಿಕ್ ಕೃತಿಗಳಿಗಾಗಿ ಹುಡುಕಿ ನೋಡಿದರೆ ನಿಮಗೆ ನಿಜಕ್ಕೂ ಖೇದವಾಗುತ್ತದೆ. ನಾವು ಆರೇಳು ಕೋಟಿ ಜನ ಕರ್ನಾಟಕದಲ್ಲಿ ಕುಳಿತು, ಬೆಂಗಳೂರಿನಂಥ ಸಿಲಿಕಾನ್ ಕಣಿವೆಯನ್ನು ನಮ್ಮ ರಾಜಧಾನಿಯನ್ನಾಗಿ ಇಟ್ಟುಕೊಂಡು, ಮಹಾ ಮಹಾ ವಿಶ್ವ ವಿದ್ಯಾಲಯಗಳನ್ನು ಕಟ್ಟಿಕೊಂಡು, ಕನ್ನಡಕ್ಕಾಗಿ ಕೈಯೆತ್ತುವ ಸಂಘ ಸಂಸ್ಥೆಗಳನ್ನೆಲ್ಲಾ ಇಟ್ಟುಕೊಂಡು ನಮ್ಮ ಮಹತ್ತರ ಕೃತಿಗಳನ್ನು ಇನ್ನೂ ಅಂತರ್ಜಾಲಕ್ಕೆ ಬಿಡುಗಡೆ ಮಾಡದೇ ಗೆಣಸು ಹೆರೆಯುತ್ತ ಕೂತಿದ್ದೇವೆ. ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿ (ಕೆಲಸ ಅರ್ಧವಾಗಿದೆ), ಕುವೆಂಪುರವರ ರಾಮಾಯಣ ದರ್ಶನಮ್ (ಕಣಜದಲ್ಲಿದೆ), ಇವನ್ನು ಹೊರತುಪಡಿಸಿದರೆ ಕನ್ನಡದ ಕ್ಲಾಸಿಕ್ ಅಂತರ್ಜಾಲದಲ್ಲಿ ಲಭ್ಯಯವಿಲ್ಲ. ಕಾರಂತರು, ತೇಜಸ್ವಿಯವರು, ಮತ್ತು ಕೆಲವು ಕಾದಂಬರಿಕಾರ್ತಿಯರ ಕೃತಿಗಳು ಪಿಡಿಎಫ್ ಆಗಿ ಲಭ್ಯವಿದ್ದರೂ ಓಸಿಆರ್ ತಂತ್ರಜ್ಞಾನ ಇಲ್ಲದ್ದರಿಂದ ರೆಫರೆನ್ಸ್ ಗೆ ಅಷ್ಟೇನೂ ಉಪಯೋಗವಿಲ್ಲ. ಬಹುಶಃ ನಮಗೆ ಹೋರಾಟಗಳೇ ಮುಗಿಯೋದಿಲ್ಲ, ದಿನಾ ಬೆಳಗಾದರೆ ಪಂಥಗಳ ಹೆಸರಿನಲ್ಲಿ ಟೌನ್ ಹಾಲ್ ಮುಂದೆ ಜಮಾಯಿಸೋದಷ್ಟೇ ಕನ್ನಡದ ಕೆಲಸ ಅಂದುಕೊಂಡು ಬಿಟ್ಟಿದ್ದೇವೆ. ಕೆಲವರಂತೂ ಮಾತೆತ್ತಿದರೆ ಸಂಸ್ಕೃತದ ವಿರುದ್ಧ ಹರಿಹಾಯುತ್ತಾರೆ. ಸಂಸ್ಕೃತ ಸತ್ತೋಗಿದೆ ಅನ್ನುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಸಂಸ್ಕೃತವು ಕನ್ನಡಕ್ಕಿಂತ ವ್ಯಾಪಕವಾದ ಬದುಕನ್ನು ಬದುಕುವತ್ತ ಮುನ್ನುಗ್ಗುತ್ತಿದೆ. ನೆನಪಿಡಿ, ಸಂಸ್ಕೃತದಲ್ಲಿ ಓಸಿಆರ್ ಈಗಾಗಲೇ ಇದೆ. ಆರ್ಕೈವ್ ನಿಂದ ಅಥವ ಗೂಗಲ್ ಪುಸ್ತಕದಿಂದ ತೆರೆದುಕೊಂಡ ಸಂಸ್ಕೃತಪುಸ್ತಕದಲ್ಲಿ ಯಾವುದೇ ಶಬ್ದವನ್ನು ಆರಾಮವಾಗಿ ಹುಡುಕಬಹುದು. ಇದನ್ನೆಲ್ಲ ಭಾರತೀಯರೇ ಮಾಡಿದ್ದೆಂದು ನಾನು ಹೇಳುತ್ತಿಲ್ಲ, ಆದರೆ ಸಂಸ್ಕೃತ ನಿಷ್ಠೆಯ ಜನರಿಂದ ವಿಶ್ವದಾದ್ಯಂತ ಇದೆಲ್ಲ ಕೆಲಸ ನಡೆಯುತ್ತಿದೆ.  ಕನ್ನಡದಂಥಾ ಕನ್ನಡಕ್ಕೇನಾಗಿದೆ?

ಕನ್ನಡದಲ್ಲಿ ಹೊಸ ಬರಹಗಾರರು, ಅವರ ಬರಹಗಳು ಮತ್ತು ಕನ್ನಡದ ಸಾಹಿತ್ಯದ ಕಟ್ಟೋಣದ ಕಾರ್ಯಗಳಿಗೇನೂ ಕೊರತೆಯಿಲ್ಲ. ಬ್ಲಾಗ್ ಗಳು ಮತ್ತು ಫೇಸ್ಬುಕ್ ಬಂದಮೇಲಂತೂ ಕನ್ನಡಲ್ಲಿ ಸಾಹಿತ್ಯದ ಮಹಾಪೂರವೇ ಹರಿಯುತ್ತಿದೆ. ಇದೆಲ್ಲ ಚಂದದ ಸಂಗತಿಗಳು. ಆದರೆ ನಮ್ಮ ಮೇರು ಬರಹಗಾರರ ಜ್ಞಾನಪೀಠ ಪುರಸ್ಕೃತ ಕೃತಿಯನ್ನೋ ಸಮಗ್ರ ಸಾಹಿತ್ಯವನ್ನೋ ಜನಕ್ಕೆ ಮುಕ್ತವಾಗಿ ಅರ್ಪಿಸುವಲ್ಲಿ ತೀರಾ ಹಿಂದಕ್ಕಿದೆ ಕನ್ನಡ ಲೋಕ. ಬೇಂದ್ರೆಯವರ ನಾಕುತಂತಿ ತುಂಬಾ ಸಣ್ಣ (ಗಾತ್ರದಲ್ಲಿ) ಕವನ ಸಂಕಲನ, ಹಾಗಿದ್ದೂ ಕನ್ನಡದ ಉನ್ನತ ಕೃತಿ. ವಿಷಾದವೆಂದರೆ ಅದು ಪೂರ್ತಿಯಾಗಿ ಅಂತರ್ಜಾಲದಲ್ಲಿ ಉಪಲಬ್ಧವಿಲ್ಲ. ಇದು ನಾಕುತಂತಿಯೊಂದರ ಪರಿಸ್ಥಿತಿಯಲ್ಲ, ನಮ್ಮೆಲ್ಲ ಉನ್ನತ ಕೃತಿಗಳ ಕಥೆಯೂ ಅದೇ. ಯಾಕೆ ನಮ್ಮ ಜ್ಞಾನಪೀಠ ಪುರಸ್ಕೃತರ ಕೃತಿಗಳನ್ನಾದರೂ ಅಂತರ್ಜಾಲಕ್ಕೆ ಮುಕ್ತವಾಗಿ ತೆರೆದಿಡಲಾರದಷ್ಟು ಬಡವರೇ ನಾವು? ನಮಗೆ ಅವುಗಳ ಮಾರಾಟವೇ ಆಗಬೇಕೆ? ಅಂತರ್ಜಾಲಕ್ಕೆ ತೆರೆದಿಟ್ಟರೆ ಆ ಕೃತಿಗಳ ಮಾರಾಟ ನಿಲ್ಲುತ್ತದೆಯೆನ್ನುವುದು ಶುದ್ಧ ಕುಂಟು ನೆಪ. ಗ್ರಂಥದ ಗಂಭೀರ ಓದು ಬೇಕಾದವನಿಗೆ ಇವತ್ತಲ್ಲ ನಾಳೆಗೂ ಪುಸ್ತಕವೇ ಶರಣು, ಗೂಗಲ್ಲಲ್ಲ. ಹಾಗಿದ್ದಾಗ ಪುಸ್ತಕಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅಂತರ್ಜಾಲದಲ್ಲಿರುವ ಪುಸ್ತಕದ ಸಮಯೋಚಿತ ಉಪಯೋಗ ಹೆಚ್ಚು. ಇವತ್ತಿನ ಅನಿವಾರ್ಯತೆ ಅದು. ಯೇನ ಕೇನ ಪ್ರಕಾರೇಣ ನಾವೀ ಡಿಜಿ ಲೋಕದಲ್ಲಿ ಪ್ರಸ್ತುತವಿರಲೇ ಬೇಕಾದ ತುರ್ತಿದೆ. ಪುಸ್ತಕವನ್ನು ಮುದ್ರಿಸಿಯೇ ಓದುವೆವೆಂಬ ಹಟ ಬಿಡಬೇಕಾದ ಕಾಲ ಇದು.

ಮರಳಿ ಸಂಸ್ಕೃತದ ಲೋಕದ ಬಗ್ಗೆ ಹೇಳುವುದಾದರೆ- ಸಂಸ್ಕೃತ ವ್ಯಾಕರಣದ ಎಲ್ಲಾ ಸೂತ್ರ ಮತ್ತದರ ವಿವರಣೆಗಳು, ಉದಾಹರಣೆಗಳು, ಸಂಧಿ ಸಂಯೋಜಕ ಮತ್ತು ಸಂಧಿ ವಿಭಾಜಕ ವೆಬ್ ಸೈಟ್ ಗಳು, ಪದಾರ್ಥ ಹೇಳುವ ಕೋಶಗಳು (ಪ್ರಾಚೀನ ಮತ್ತು ನವೀನ ಎರಡೂ), ಪದವೊಂದು ರಚನೆಯಾದ ರೀತಿ ಪ್ರಕ್ರಿಯಾ ಸಮೇತ,  ವ್ಯಾಕರಣ ಪರಂಪರೆಯ ಪೂರ್ಣ ಮಹಾಭಾಷ್ಯ, (ಇದರ ಪೂರ್ಣ ಆವೃತ್ತಿಯ ಒಟ್ಟೂ ಒಂಭತ್ತು ಪುಸ್ತಕಗಳಿಗೆ ಐದು ಸಾವಿರ ರೂಗಳಾಗುತ್ತವೆ. ಹಾಗಿದ್ದೂ ಅದು ಅಂತರ್ಜಾಲದಲ್ಲಿ ಲಭ್ಯವಿದೆ), ಕಾವ್ಯಗಳು, ನಾಟಕಗಳು, ಶಾಸ್ತ್ರಗ್ರಂಥಗಳು, ಆಧುನಿಕ ಸಾಹಿತ್ಯದ ಕೆಲವು ಭಾಗ- ಗಳು ಕೈಬೆರಳ ತುದಿಯಲ್ಲಿವೆ. ಇವನ್ನೆಲ್ಲ ಸುಮ್ಮನೆ ಗೂಗಲ್ಲಲ್ಲಿ ಮುದ್ರಿಸಿ ಹುಡುಕಲಿಕ್ಕೆ ಹಚ್ಚಿದರೆ ನೂರಾರು ಲಿಂಕ್ಸ್ ತೆರೆದುಕೊಳ್ಳುತ್ತವೆ. ಎಲ್ಲಕಡೆ ಪಿಡಿಎಫ್ ನಲ್ಲಿ ಓಸಿಆರ್ ಲಭ್ಯವಿದೆ. ಕೆಲವಾರು ಗ್ರಂಥಗಳ ಮೊಬೈಲ್ ಆಪ್ ಸಿದ್ಧವಾಗಿದೆ. ಸಂಸ್ಕೃತ ನಿಯತಕಾಲಿಕೆಗಳು, ಮ್ಯಾಗಝೀನ್ ಮತ್ತು ಬ್ಲಾಗ್ ಗಳು ಮುಕ್ತವಾಗಿ ಲಭ್ಯವಿವೆ. ಸಂಸ್ಕೃತ ವಿಕಿಪೀಡಿಯದ ಕೆಲಸ ನಡೆದಿದೆ, ಹಲವಷ್ಟು ಈಗಾಗಲೇ ಲಭ್ಯವಿದೆ.  ಇದಿಷ್ಟೇ ಅಲ್ಲ, ಬೌದ್ಧ ಮತ್ತು ಜೈನ ಗ್ರಂಥಗಳೆಲ್ಲ ದಿನವೂ ಅಪ್ಡೇಟಾಗುತ್ತಿವೆ. ನಾನು ಭಾಗವಹಿಸುವ ಗೂಗಲ್ ಸಮುದಾಯವೊಂದರಲ್ಲಿ ವಾರಕ್ಕೆರಡಾದರೂ ಹೊಸದೊಂದು ಜಾಲಪುಸ್ತಕದ ಲಿಂಕ್ ಬಂದಿರುತ್ತದೆ. ಅಂದರೆ ಆ ವೇಗದಲ್ಲಿ ಕೆಲಸ ನಡೆಯುತ್ತಿದೆ. ಮೊನ್ನೆ ಮೊನ್ನೆ ಶುರುವಾದ ಸಂಸ್ಕೃತ ಸಂವರ್ಧನ ಪ್ರತಿಷ್ಠಾನದಡಿಯಲ್ಲಿ ಈ ಕೆಲಸ ಇನ್ನಷ್ಟು  ಭರದಿಂದ ಸಾಗಿದೆ. ನನಗೆ ಪೂರ್ಣ ವಿಶ್ವಾಸವಿದೆ, ಇನ್ನು ಕೆಲವೇ ಕಾಲದಲ್ಲಿ ಪೂರ್ಣ ಸಂಸ್ಕೃತ ಲೋಕ ಅಂತರ್ಜಾಲದಲ್ಲಿರುತ್ತದೆ.  ನೆನಪಿಸುತ್ತೇನೆ, ಇಷ್ಟೆಲ್ಲ ಆಗುವಾಗ ಕನ್ನಡದ ವೈಯಾಕರಣ ಕೇಶಿರಾಜರ ಶಬ್ದಮಣಿದರ್ಪಣ ಸಮಗ್ರವಾಗಿ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಮುದ್ದಣ ಮನೋರಮೆಯರು ಅರ್ಧಂಬರ್ಧ ಸಿಗುತ್ತಾರೆ. (ಹಾಗಿದ್ದೂ ಸಂಸ್ಕೃತದ ದೂಷಣೆಗೆ ಸಭ್ಯೆ ಮನೋರಮೆಯನ್ನು ಬಳಸಿಕೊಳ್ಳುವುದನ್ನಿಲ್ಲಿ ಸ್ಮರಿಸಬಹುದು) ಏನಾಗಿದೆ ಕನ್ನಡಕ್ಕೆ? ಕನ್ನಡ ವಿಶ್ವವಿದ್ಯಾಲಯಗಳಿಗೆ ಮತ್ತು ಸಾಹಿತ್ಯಧುರಂಧರರಿಗೆ?

ಸಂಸ್ಕೃತವನ್ನು ಅಲ್ಲಿಟ್ಟರು, ಇಲ್ಲಿಟ್ಟರು, ಪೆಟ್ಟಿಗೆಯೊಳಗೆ ಮತ್ತು ಹೊಟ್ಟೆಯೊಳಗಿಟ್ಟರು, ಸೀಸ ಸುರಿದರು ಎಂದೆಲ್ಲ ಇವತ್ತಿಗೂ ಕನ್ನಡ ಲೋಕದ ಒಂದು ಭಾಗ ಬೊಬ್ಬಿರಿಯುತ್ತಲೇ ಇದೆ. ಜಗತ್ತು ಮಾತ್ರ ಇವರನ್ನು ಹಿಂದಕ್ಕೆ ಬಿಟ್ಟು ಸಂಸ್ಕೃತವನ್ನು ತಬ್ಬಿಕೊಳ್ಳುತ್ತಿದೆ. ಅದಕ್ಕೆ ಸಂಸ್ಕೃತ ಜಗತ್ ಕೂಡ ಸಹಜವಾಗೇ ಸ್ಪಂದಿಸುತ್ತಿದೆ. ಸೀಸದ ಪ್ಯಾಕ್ಟರಿ ಮಾಲೀಕರದ್ದೇನೂ ಈ ಬಗ್ಗೆ ತಕರಾರು ಬಂದಿಲ್ಲ.

ಇನ್ನು ಸರಕಾರ ನಡೆಸುವ ಸಾಹಿತ್ಯ ಜಾತ್ರೆಗಳ ಅವ್ಯವಸ್ಥೆ ಮತ್ತು ಗಲಾಟೆಯನ್ನಂತೂ ಪ್ರತಿವರ್ಷ ನೋಡುತ್ತೇವೆ. ಸಂಸ್ಕೃತದ ಹೆಸರಲ್ಲಿ ಮಹಾಮೇಲವೊಂದು ಕೆಲ ವರ್ಷಗಳ ಹಿಂದೆ ಬೆಂಗಳೂರಲ್ಲಿ ನಡೆದಿತ್ತು, ನಾಲ್ಕು ದಿನಗಳ ಕಾಲ. ಅದರ ವ್ಯವಸ್ಥಿತ ನಿರ್ವಹಣೆ ಹೇಗಿತ್ತೆಂಬುದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಕೊನೆಯದಾಗಿ, ಕನ್ನಡದ ಮನಸುಗಳು ಜಾತಿ ಪ್ರಜ್ಞೆಯಿಂದ ಹೊರಬರಲೆಂಬ ಪ್ರಾರ್ಥನೆಯೊಂದಿಗೆ ಕನ್ನಡದ ಮೇರು ಕೃತಿಗಳ ಅಂತರ್ಜಾಲ ಲಭ್ಯತೆಗಾಗಿ ಕಾಯುತ್ತೇನೆ.

3 ಟಿಪ್ಪಣಿಗಳು Post a comment
  1. shripad
    ಫೆಬ್ರ 8 2016

    ಕನ್ನಡದಲ್ಲಿ ಓಸಿಆರ್ ತಯಾರಿಸಲು ಸಣ್ಣ ಪ್ರಯತ್ನಪಟ್ಟವರಲ್ಲಿ ನಾನೂ ಒಬ್ಬ. ಕನ್ನಡ ಭಾಷಾಭಿವೃದ್ಧಿ ಯೋಜನೆಯಲ್ಲಿ ಇದನ್ನು ವಿವಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಆಯಿತು. ಆಮೇಲೆ…ಸರ್ಕಾರ ತಾಂತ್ರಿಕ ವಿವಿ ಇರುವಾಗ ನೀವು ಮಾಮೂಲಿ ವಿವಿಗಳಿಗೆ ಈ ಯೋಜನೆ ನೀಡಲಾಗದು ಎಂದು ಷರಾ ಬರೆಯಿತು! ನಾವೂ ಮಾಡಲಾಗಲಿಲ್ಲ, ಅವರು ಪ್ರಸ್ತಾಪವನ್ನೂ ಮಾಡಲಿಲ್ಲ! ಅಲ್ಲಿಗೆ ಜೈ!
    ಗಣಕ ಪರಿಷತ್ತೂ ಇಂಥದ್ದೇ ಸಂಕಟ ಅನುಭವಿಸಿದೆ. ಇನ್ನು ಕನ್ನಡ ವಿವಿ ನಿಜವಾಗಿ ಇಂಥ ಕೆಲಸವನ್ನೇ ಪ್ರಧಾನವಾಗಿ ಮಾಡಬೇಕಿತ್ತು. ಆ ಬಗ್ಗೆ ಹೇಳದಿರುವುದೇ ವಾಸಿ. ಸದ್ಯ ಕೃತಿಚೌರ್ಯ ಪತ್ತೆ ಕನ್ನಡ ಸಾಫ್ಟ್ ವೇರ್ ಅಭಿವೃದ್ಧಿಗೆ ಯುಜಿಸಿಗೆ ಪ್ರಸ್ತಾಪ ಸಲ್ಲಿಸಿದ್ದೇನೆ. ಕನ್ನಡದ ಓಸಿಆರ್ ಇಲ್ಲದೇ, ಮೆಟ ಡಾಟ ಇಲ್ಲದೇ …ಭಗವಂತಾ…ನನ್ನ ಪಾಡು ಯಾರಿಗೂ ಬೇಡ!
    ಹೇನೇ ಹಾಗಲಿ ಖನ್ನಡಕ್ಕೆ ಜೈ!!!! ಓರಾಟ, ಓರಾಟ…ಹೆಲ್ಲೀವರೆಗೂ ಓರಾಟ?

    ಉತ್ತರ
    • Avinash
      ಸೆಪ್ಟೆಂ 26 2016

      Hello Sripad. We few tech guys planning to build a OCR for Kannada. Need few suggetions on this. Please inbox me. avimuniyal@outlook.com

      ಉತ್ತರ
  2. Jayaprakasha Narayana B S
    ಫೆಬ್ರ 8 2016

    Really a good article. Congratlations.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments