ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 11, 2016

1

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೩ )

‍ನಿಲುಮೆ ಮೂಲಕ

– ಡಾ. ಮಾಧವ ಪೆರಾಜೆ

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )

ಎರಡು ಭಿನ್ನ ಶಾಸನಗಳು:

tirumalaಆದರೆ ಈ ಮಾತಿಗೆ ಅಪವಾದಗಳಾಗಿ ಭಿನ್ನ ರಾಗವನ್ನು ಹಾಡುವ ಶಾಸಗಳೂ ಇಲ್ಲದಿಲ್ಲ. ಸದ್ಯಕ್ಕೆ ಅಂತಹ ಎರಡು ಶಾಸನಗಳು ನನ್ನ ಗಮನಕ್ಕೆ ಬಂದಿದೆ. ಮೊದಲನೆಯದು ಸಿರಗುಪ್ಪದ ಶಾಸನ, ಎರಡನೆಯದು ಹರಪನಹಳ್ಳಿಯ ಶಾಸನ. ಸಿರಗುಪ್ಪದ ಶಾಸನವು ಶಂಭುಲಿಂಗೇಶ್ವರ ದೇವಾಲಯದಲ್ಲಿರುವುದಾಗಿ ಅದರ ಕಾಲವು ಕ್ರಿ.ಶ. 1199 ಎಂದು ತಿಳಿದು ಬರುತ್ತದೆ. ಈ ಶಾಸನದ ಕೊನೆಯಲ್ಲಿ ……

……. ಬಾಹ್ಮಣರಿಗಲ್ಲದೆ ಗೊರವುಗಳಿಗೆ ಸಲ್ಲದು ಬ್ರಾಹ್ಮಣ ಪೂಜೆ ಎಂದು ಸಾರುತ್ತದೆ. ಸೌತ್ ಇಂಡಿಯನ್ ಇನ್‍ಸ್ಕ್ರಿಪ್ಷನ್‍ಸ್ ಸಂ.9.ಶಾ.ಸಂ.159) ಹಾಗೆಯೇ ಹರಪನಹಳ್ಳೀಯ ಕಲ್ಲೇಶ್ವರ ದೇವಾಲಯದ ಬಳಿ ಬಿದ್ದಿರುವ ಶಾಸನವೊಂದಿದೆ. ಅದರ ಕಾಲವು 1173 ಆಗಿದೆ. ಆ ಶಾಸನದ ಕೊನೆಯ ಭಾಗದಲ್ಲಿ……….
‘ಇವರ ದೇವಸ್ಥಾನಮುಂ ಬ್ರಾಹ್ಮಣರು ಪೂಜಿಸುವರು’

ಈ ಎರಡು ಶಾಸನಗಳು ದೇವಾಲಯಗಳಲ್ಲಿ ಬ್ರಾಹ್ಮಣರೇ ಪೂಜೆ ಮಾಡಬೇಕೆನ್ನುವುದನ್ನು ಸಾರುತ್ತವೆ. ನಮ್ಮ ತಿಳುವಳಿಕೆಗಳು ಇಂತಹ ವಿಷಯಗಳಿಂದಲೇ ನಿಯಂತ್ರಣವಾಗಿರುತ್ತವೆ. ಅಂದರೆ ದೇವಾಲಯಗಳಿಗೂ, ಬ್ರಾಹ್ಮಣರಿಗೂ ನೇರಸಂಬಂಧವಿದೆ ಎನ್ನುವುದರಿಂದಲೇ ಬಹುಮಟ್ಟಿಗೆ ದೇವಾಲಯದಲ್ಲಿ ಬ್ರಾಹ್ಮಣರು ಪೂಜಾರಿಗಳಾಗಿರುತ್ತಾರೆ; ಹಾಗೂ ಅವರಿಂದಾಗಿಯೇ ದೇವಾಲಯಗಳಿಗೆ, ಮಧ್ಯಮ ಜಾತಿಗಳಿಗೆ(ಶೂದ್ರರಿಗೆ), ಕೆಳಜಾತಿಯವರಿಗೆ ಹಾಗೂ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗುತ್ತದೆ ಎನ್ನುವ ವಿಷಯವನ್ನು ಪ್ರತಿಪಾದಿಸಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ಸುಮಾರು ಒಂದು ಸಾವಿರದಷ್ಟು ಶಾಸನಗಳನ್ನು ಓದಿದ್ದೇನೆ. ಆದರೆ ಮೇಲಿನ ಎರಡು ಶಾಸನಗಳ ಹಾಗೆ ಬ್ರಾಹ್ಮಣರೇ ಪೂಜೆ ಮಾಡಬೇಕು ಎಂದು ವಿಧಿಸುವ ಶಾಸನಗಳು ನನ್ನ ಗಮನಕ್ಕೆ ಬಂದಿಲ್ಲ. ಹಾಗೆಯೇ ಯಾವ ಜಾತಿಯವರೂ ದೇವಾಲಯಕ್ಕೆ ಬರಬಹುದು ಅಥವ ಬರಬಾರದು ಎಂದು ಹೇಳುವ ಯಾವ ಶಾಸನವೂ ನನ್ನ ಗಮನಕ್ಕೆ ಬಂದಿಲ್ಲ. ಆದರೆ ಕೆಲವು ಶಾಸನಗಳಲ್ಲಿ ನೀತಿ ನಿಯಮಗಳನ್ನು ಮೀರಿದವರಿಗೆ ಶಿಕ್ಷೆಯನ್ನು ಹೇಳಲಾಗಿದೆ. ಹಗರಿಬೊಮ್ಮನಹಳ್ಳಿಯ ಬಸದಿಯ ಮುಂದಿನ ಮಂಟಪದ ಪೂರ್ವಕ್ಕೆ ಇರುವ ಶಾಸನವೊಂದರಲ್ಲಿ (ಕ್ರಿ.ಶ. 992) ಕೆಲವು ತಪ್ಪುಗಳಿಗೆ ಹೀಗೆ ಶಿಕ್ಷೆಯನ್ನು ಹೇಳಲಾಗಿದೆ:-

……….. ಪೂರ್ವ ಮರ್ಯಾದೆಯೊಳಪ್ರತಿಪಾಳಿಪುದು| ಮೂರು ಬರುವುವಿಲ್ಲ. ಮೂರ್ಮನೆವಾರ್ತೆಗರ ಮನೆ ಪೊಕ್ಕಡೆ ಪನ್ನೆರಡು ಗದ್ಯಾಣ ದಂಡ| ಹರದರಕ್ಕನಂಗದೊಳ್ಪಾರದಂಗೆಯ ಪಚ್ಚಮಂಕೊಂಡುಪಾದರಿಗೆಯ ಮೂಗನರಿದು ಪಾದರಿಗನಂ ಕೊಲ್ವರುತೊಯ್ದಂಗೆಂದು ಪಣಂ ಆಣೆಯಂ ಮಿಕ್ಕಂಗೆ ಪನ್ನೆರಡು ಪಣಂ ಮೀಟಿದಂಗೆ ಪನ್ನೆರಡು ಗದ್ಯಾಣದಣ್ದಂ ಪರದ ನಾಬ್ರ್ಬನ್ದಡವಂಗಡಿಯ ಪಾಜಿಕದಿಂದಿಳಿಯನನ್ಯಾಯದೊಳ್ಪರಧನರ ತೊಯ್ದೊಡೆ ಸಾವು ಸಾಲ್ವರ್| ನಕರಕ್ಕಂ ಮಹಾಜನಂಕ್ಕಂಗಾವುಡಗಳ್ಗಂ| ಪಂಚಮಹಾಸ್ಥಾನಕ್ಕಂ ಬಿಟ್ಟಿಯಲ್ಲ| ಬಟ್ಟಲ ತಂಬುಲಂ ಬಡೆವನ್ತೀ ಮರ್ಯಾದೆ……… ( ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂ.1. ಹಗರಿಬೊಮ್ಮನ ಹಳ್ಳಿ ಶಾ.ಸಂ.17.)

ಹೀಗೆ ಬೇರೆಬೇರೆ ತಪ್ಪುಗಳಿಗೆ ದಂಡನೆಗಳನ್ನೂ, ಶಿಕ್ಷೆಯನ್ನೂ ವಿಧಿಸಲಾಗಿದೆ. ಆದರೆ ದೇವಾಲಯ ಪ್ರವೇಶ ಮಾಡಿದರೆ ಶಿಕ್ಷೆಯನ್ನು ಯಾವ ಶಾಸನದಲ್ಲಿಯೂ ಹೇಳಲಾಗಿಲ್ಲ. ಹಾಗಾದರೆ ದೇವಾಲಯ ಪ್ರವೇಶವನ್ನು ಮುಕ್ತವಾಗಿರಿಸಲಾಗಿತ್ತು ಎಂದು ಇದರಿಂದ ತಿಳಿದು ಬರುವುದಿಲ್ಲವೇ?

ಕುಮಾರರಾಮನ ಸಾಂಗತ್ಯ: ಮತ್ತೊಂದು ವಿಶಿಷ್ಟ ಉದಾಹರಣೆ:

ಕುಮಾರರಾಮನು ಕರ್ನಾಟಕದ ಪ್ರಸಿದ್ಧ ವೀರನಾಗಿದ್ದಾನೆ. ಈತನ ಕಾಲವು ಕ್ರಿ.ಶ. 1213 – 1327 ಎಂದು ತಿಳಿದುಬಂದಿದೆ. ಆತನ ಕುರಿತ ಒಂದು ಕಾವ್ಯವೇ ಹೊಸ ಕುಮಾರರಾಮನ ಸಾಂಗತ್ಯವಾಗಿದೆ. ಅದರಲ್ಲಿ ರಾಮನು ಕುಮ್ಮಟ ದುರ್ಗವನ್ನು ನಿರ್ಮಾಣ ಮಾಡುವ ಸಂದರ್ಭವೊಂದರ ವಿವರಗಳು ಬರುತ್ತವೆ: ರಾಮನು ಬೇಟೆಯಾಡುತ್ತಾ ಕುಮ್ಮಟ ದುರ್ಗದ ಮೇಲಕ್ಕೆ ಬರುತ್ತಾನೆ. ಆಗ ಜೈನರು  ಅಲ್ಲಿದ್ದರು. ರಾಮನನ್ನು ಕಂಡು ಸತ್ಕರಿಸಿದ ಅವರು ಊಟ ಮಾಡುವಂತೆಯೂ ಕೇಳಿಕೊಳ್ಳುತ್ತಾರೆ. ಸಂತೋಷಗೊಂಡ ರಾಮನು ಭೋಜನವನ್ನು ಮಾಡುತ್ತಾನೆ.  ಆದರೆ ಹೋಗುವ ಮುನ್ನ ತನ್ನ ಕಠಾರಿಯನ್ನು ಮರೆತದ್ದರಿಂದ ಅದನ್ನು ತರುವುದಕ್ಕೆಂದು ರಾಮನ ಬಂಟನೊಬ್ಬ, ಮತ್ತೆ ರಾಮನು ಊಟ ಮಾಡಿದ ಜಾಗಕ್ಕೆ ಬಂದನು. ಆಗ ರಾಮನು ಊಟ ಮಾಡಿದ ಜಾಗದಲ್ಲಿ ಜೈನರು ಸೆಗಣಿ ಸಾರಿಸುತ್ತಿದ್ದರು. ಇದನ್ನು ಕೇಳಿದ ರಾಮನು ಆ ಜೈನರನ್ನೆಲ್ಲ ಹೊಡೆದಟ್ಟಿದನಲ್ಲದೇ ಬಸದಿಗಳಲ್ಲಿ ಕುರಿಕೋಣಗಳನ್ನು ಕಡಿಯುತ್ತಾನೆ. ಆಮೇಲೆ ರಾಮನು ಕುಮ್ಮಟದುರ್ಗವನ್ನು ವಶಪಡಿಸಿಕೊಳ್ಳುತ್ತಾನೆ.

ಕಂಡಾಗ ಬಂದು ತನ್ನೊಡೆಯನಿಗೆ ಹೇಳಲು
ತೊಂಡ ಜೈನರು ನೋಡೆನಲು
ಉಂಡ ರಾಮನು ಎತ್ತಿ ಸಾರಣೆ ಮಾಡಿಯೆ
ಭಂಡರ ನೋಡಿಯೆಂದೆನಲು ||29
ಕೇಳಿದ ಕೋಪವ ತಾಳೀದ ರಾಮಯ್ಯ
ಭಾಳಾಕ್ಷ ಕೊಟ್ಟನೆಂದೆನುತ
ಕೇಳಿ ಕುಮ್ಮಟದೊಳಗಿದ್ದ ಬಸ್ತಿಗಳಿಗೆ
ಸೀಳಿಸಿ ಕುರಿಕೋಣಗಳನು||30||
ತಡೆಯದೆ ಕುರಿಕೋಣ ಕಡಿದು ಬಲಿಯನಿಕ್ಕಿ
ಸುಡಿಸಿದ ಕುರಿಕೋಳಿಗಳನು||
ತಡೆಯದೆ ಜೈನ ಖೂಳರಿವರೆಂದು
ಬಿಡದಾಗ ಹೊರಡೆ ಕುಮ್ಮಟವ||31||
ಬಿಟ್ಟರು ಕುಮ್ಮಟವನು ಕೊಪ್ಪಳಕಾಗ
ನೆಟ್ಟನೆ ಕಟ್ಟಿ ಪಟ್ಟಣವ
ಕೋಟೆ ಕುಮ್ಮಟದಲ್ಲಿ ಚೆನ್ನಿಗ ರಾಮಯ್ಯ
ದಿಟಾಮಾಟಿಗರ ಕರೆಸಿ ||40||  (ಹೊಸಕೊಮಾರನ ರಾಮನ ಸಾಂಗತ್ಯ, ಪು 122)

ಕುಮಾರರಾಮನು ಬೇಡರವನಾಗಿದ್ದನು. ಬೇಡರನ್ನು ಕೆಳಜಾತಿಯವರೆಂದು ಆಗಲೂ ತಿಳಿಯುತ್ತಿದ್ದರೆಂದು ಇದರಿಂದ ತಿಳಿಯುತ್ತದೆ. ಹಾಗೆಯೇ ಸರ್ವರನ್ನು ಸಮಾನರೆಂದು ಭಾವಿಸುವ ಜೈನರು ಕುಮಾರರಾಮನನ್ನು ಜಾತಿಯ ಕಾರಣಕ್ಕಾಗಿ ಹೀಗಳೆಯುವುದು ಇದರಿಂದ ತಿಳಿಯುತ್ತಲ್ಲದೇ  ಕೆಳಜಾತಿಯವನಾದ ಕುಮಾರರಾಮನು ಬಸದಿಗಳನ್ನು ನಾಶ ಮಾಡಿರುವುದೂ ಇದರಿಂದ ತಿಳಿದು ಬರುತ್ತದೆ. ಇಂದಿಗೂ ಕುಮ್ಮಟದುರ್ಗದಲ್ಲಿ ಜೈನ ಬಸದಿಗಳಿರುವ  ಕುರುಹು ಕಂಡುಬರುತ್ತದೆ.

ದೇವಾಲಯದ ಪೂಜಾರಿಕೆ ಬ್ರಾಹ್ಮಣರದ್ದೇ ?

ಕೆಲವು ಕಡೆಗಳಲ್ಲಿ ದೇವಾಲಯಗಳಿಗೆ ಪೂಜಾರಿಗಳಾಗಿ ಬ್ರಾಹ್ಮಣರು ಮಾತ್ರ ಇರುತ್ತಾರೆ ಎನ್ನುವ ತಪ್ಪು ಕಲ್ಪನೆ ಇದೆ. ಅದನ್ನು ಹೋಗಲಾಡಿಸುವ ಸಲುವಾಗಿ ಕೆಲವೊಂದು ನಿದರ್ಶನಗಳನ್ನು ಈಗ ನೀಡುತ್ತೇನೆ:
ಬಂಗಾರಪೇಟೆ ತಾಲ್ಲೂಕಿನ ರಾಮಸಾಗರದ ದುರ್ಗಮ್ಮ ಗುಡಿಯ ಪೂಜಾರಿ ಶೂದ್ರನಾಗಿದ್ದಾನೆ. ಶೆಟ್ಟಿಕೆರೆಯ ಕೆಂಪಮ್ಮ ದೇವಿಯ ಪೂಜಾರರು ಬೆಸ್ತರು, ಚಿತ್ರದುರ್ಗದ ನಾಯಕನಟ್ಟಿ ತಿಪ್ಪೇಸ್ವಾಮಿಗೆ ಬೇಡರು ಪೂಜಾರಿಗಳು, ಗೊಂಡನಹಳ್ಳಿ(ಚಿತ್ರದುರ್ಗ ಜಿಲ್ಲೆ) ಮುತ್ತಮ್ಮನಿಗೆ ಗೊಲ್ಲರು ಪೂಜಾರಿ, ಮಧುಗಿರಿಯ ದಂಡಿನ ಮಾರಮ್ಮನಿಗೆ ಬೇರೆ ಬೇರೆ ಜಾತಿಯವರು ಸೇವೆ ಮಾಡುತ್ತಾರೆ, ಕೋಲಾರ ತಾಲ್ಲೂಕಿನ ಮಾರೆಮ್ಮನ ಪೂಜಾರಿಯು  ಒಕ್ಕಲಿಗರು, ಚಿತ್ರದುರ್ಗದ ಬೀರಾವರದ ಮಾರೆಮ್ಮನ ಪೂಜಾರಿಗಳು ಬೇಡರು, ವಿಜಾಪುರದ ರಾಜನಾಳದ ಮರಗಮ್ಮನ ಪೂಜಾರಿಗಳು ಕುರುಬರು, ಬಸೂರಿನ ಮಾರಮ್ಮನ ಅರ್ಚಕರು ನಾಥಪಂಥದ ಬಳೆಗಾರರು, ಮಂಡ್ಯ ಜಿಲ್ಲೆಯ ನಗುವನ ಹಳ್ಳಿಯ ಮಾರಿಯಮ್ಮನ ಪೂಜಾರಿಗಳು ಒಕ್ಕಲಿಗರು, ಅರಸೀಕೆರೆಯ ದುರುಗಮ್ಮನ ಪೂಜಾರಿ ಮಾದಾರರು, ಬೈಲಹೊಂಗಲದ ಸಾಣಿಕೇಶ್ವರ ದ್ಯಾಮವ್ವನಿಗೆ ಬಡಿಗೇರರು ಪೂಜಾರಿಗಳು, ಹಿಕ್ಕಿಮಗೇರಿಯ ಮಾರೆಮ್ಮನಿಗೆ ಕೊರಚರು ಪೂಜಾರಿಗಳು- ಹೀಗೆ ಕರ್ನಾಟಕದ ಬೇರೆ ಬೇರೆ ಕಡೆ ಬೇರೆ ಜಾತಿಯವರು ದೇವಾಲಯಗಳನ್ನು ಕಟ್ಟಿಕೊಂಡಿದ್ದಾರೆ. ಹಾಗೆಯೇ ಉತ್ತರ ಕರ್ನಾಟಕದಲ್ಲಿರುವ ಹನುಮಂತನ ಗುಡಿಗಳಲ್ಲಿ ಬ್ರಾಹ್ಮಣೇತರರೇ ಪೂಜಾರಿಗಳಾಗಿದಾರೆ. ಕೆಲವೊಮ್ಮೆ ಬೇರೆ ಬೇರೆ ಜಾತಿಯವರಿಂದ ಮೂರು ಸಲ ಒಂದೇ ಮೂರ್ತಿಗೆ ಪೂಜೆ ಮಾಡುವುದಿದೆ. ಅಷ್ಟೇಕೆ ಜಗತ್ಪ್ರಸಿದ್ಧವಾದ ತಿರುಪತಿ ದೇವಾಲಯದಲ್ಲಿ ಮೊದಲ ಪೂಜೆ ನಡೆಯುವುದು ಅಲ್ಲಿಯ ಬುಡಕಟ್ಟು ಸಮುದಾಯದವರಿಂದಲೇ ಎಂದು ತಿಳಿದುಬರುತ್ತದೆ. ಇದಕ್ಕೆ ಸಂಬಂಧಿಸಿದ ಕುತೂಹಲಕರವಾದ ವಿವರಣೆಯೊದನ್ನು  ಕಟ್ಟಾವೈದಿಕ ವಿದ್ವಾಂಸರೊಬ್ಬರು ತಮ್ಮ ಕೊನೆಯ ಬ್ರಾಹ್ಮಣ ಕೃತಿಯಲ್ಲಿ ನೀಡಿದ್ದಾರೆ. ಈ ಗ್ರಂಥವನ್ನು ಬರೆದವರು ರಾಣಿಶಿವಶಂಕರಶರ್ಮ ಎನ್ನುವವರು. ತೆಲುಗಿನಿಂದ ಇದು ದಿ ಲಾಸ್ಟ್ ಬಾಹ್ಮಿನ್ ಎಂದು ಇಂಗ್ಲೀಷಿಗೆ ಅನುವಾದವಾಗಿದೆ. ಅಕ್ಷರ ಪ್ರಕಾಶನ ಸಾಗರ, ಹೆಗ್ಗೋಡು, ಇವರು ಇದನ್ನು ಕೊನೆಯ ಬ್ರಾಹ್ಮಣ ಎಂದು ಅನುವಾದಿಸಿದ್ದಾರೆ. ಅನುವಾದಕರು ಡಿ.ವೆಂಕಟರಾವ್ ಅವರು. ಅದರಲ್ಲಿ ಒಂದು ಕಡೆ ಹೀಗಿದೆ:

“ ಸನಾತನ ಧರ್ಮದಲ್ಲಿ ಗುಡಿ ಅಥವ ದೇವಾಲಯ ಇಲ್ಲ. ದೇವಾಲಯಗಳೆಂದರೆ ಸನಾತನ ಧರ್ಮಕ್ಕೆ ಸೇರಿದ ಬ್ರಾಹ್ಮಣರ ಸೃಷ್ಟಿಯಲ್ಲ. ಅದು ಕ್ಷತ್ರಿಯರ ಸೃಷ್ಟಿ. ದೇವಾಲಯಗಳ ನಿರ್ಮಾಣದಲ್ಲಾಗಲೀ ಅದು ಸನಾತನ ಧರ್ಮಕ್ಕೆ ಸಂಬಂಧವಿಲ್ಲ. ಬೌದ್ಧ ಧರ್ಮಾವಲಂಭಿಗಳಾದ ಮೊದಲ ರಾಜರುಗಳಿಗೆ ಬೌದ್ಧವಿಹಾರಗಳು ಸಂಪತ್ತಿ ಖಜಾನೆಗಳಾಗಿ ಸಹಕರಿಸಿದ್ದವು…….

ನಮ್ಮ ತಂದೆ ತಾಯಿಗಳಿಬ್ಬರೂ ಎಂದೂ ಗುಡಿಗೆ ಹೋಗಲಿಲ್ಲ. ನಮ್ಮ ತಂದೆಯವರು ನನಗೆ ಎಂದೂ ಗುಡಿಗೆ ಹೋಗೆಂದು ಹೇಳಲಿಲ್ಲ. ಕುಟುಂಬದ ಸದಸ್ಯರೆಲ್ಲಾ ಸೇರಿ ನಾವೆಂದೂ ಗುಡಿಗೆ ಹೋಗಲಿಲ್ಲ. ಏಕೆಂದರೆ ಅದು ಸನಾತನ ಸಂಪ್ರದಾಯದಲ್ಲಿ ಇಲ್ಲ. ಬ್ರಾಹ್ಮಣರ ಜೀವನದಲ್ಲಿ ಗುಡಿಯ ಪಾತ್ರ ಬಹಳ ಸೀಮಿತವಾದದ್ದು. ನಾವು ವೈದಿಕ ಶಾಖೆಗೆ ಸೇರಿದವರು. ನಾವು ಗುಡಿಗಳಲ್ಲಿ ಅರ್ಚಕರಾಗುವುದಿಲ್ಲ. ನಾವು ಜಪ-ತಪ-ಪೂಜೆ ಪುನಸ್ಕಾರಗಳನ್ನು ಮನೆಯಲ್ಲಿಯೇ ಮಾಡುತ್ತೇವೆ; ಗುಡಿಗಳಿಗೆ ಹೋಗುವುದಿಲ್ಲ. ಗುಡಿಗೆ ಹೋಗುವುದು, ಭಜನೆ ಮಾಡುವುದು ಮುಂತಾದವುಗಳಿಂದ ಕೂಡಿದ ಭಕ್ತಿ ಮಾರ್ಗವೆಂಬುದು ಅವೈದಿಕ. ಅದನ್ನು ಅಧಮ ಪದ್ಧತಿಯೆಂದು, ಸಾಮಾನ್ಯವಾದ್ದೆಂದು ಭಾವಿಸುತ್ತಾರೆ…….

ಬ್ರಾಹ್ಮಣರ ಆಧ್ಯಾತ್ಮಿಕ ಜೀವನವೆಲ್ಲ ಮನೆಯೊಂದಿಗೆ ಬೆಸೆದಿರುತ್ತದೆ(ಗೃಹ್ಯ, ಗಾರ್ಹಸ್ಥ್ಯ). ಗುಡಿಯೊಂದಿಗೆ ಅಲ್ಲ. ನಿಜಕ್ಕೂ ಉಪನಯನದಂತಹ ಪ್ರತ್ಯೇಕ ಸಂದರ್ಭದಲ್ಲೂ ಗುಡಿಗೆ ಹೋಗುವ ಪದ್ಧತಿ ಇಲ್ಲ……. ಬ್ರಾಹ್ಮಣರೆಲ್ಲರಿಗೂ ಸೇರಿ ಒಂದೇ ಒಂದು ಪ್ರಾರ್ಥನಾ ಸ್ಥಳವಿರುವುದು ಅಸಾಧ್ಯ. ಆದ್ದರಿಂದಲೇ ಗುಡಿ ಎಂಬುದು ಯಾವತ್ತೂ ಬ್ರಾಹ್ಮಣರ ಜೀವನದಲ್ಲಿ ಪ್ರಧಾನವಾಗಲಿಲ್ಲ. ಒಬ್ಬ ಸನಾತನ ಬ್ರಾಹ್ಮಣನು ಮನೆಯಲ್ಲಿ ಕುಳಿತು ನಿತ್ಯ ನೈಮಿತ್ತಿಕ ವೈದಿಕ ಅನುಷ್ಠಾನಗಳನ್ನು ಆಚರಿಸುತ್ತಾನೆ. ಆದ್ದರಿಂದ ಸನಾತನ ಬ್ರಾಹ್ಮಣನಿಗೆ ಅರ್ಚಕನೆಂಬುವನು ಆಧ್ಯಾತ್ಮಿಕ ಗುರುವಲ್ಲ. (ಕೊನೆಯ ಬ್ರಾಹ್ಮಣ ಪು. 31)

ಈಗ ನಮ್ಮ ಚರ್ಚೆಗಳು ಒಂದು ನಿರ್ದಿಷ್ಟ ಗುರಿಯೆಡೆಗೆ ಬರುತ್ತಿವೆ ಎಂದೆನಿಸುತ್ತಿದೆ. ಚರ್ಚೆಯ ಆರಂಭದಲ್ಲಿಯೇ ನಾನು ಇದಕ್ಕೆ ಒಂದು ಸೂಚನೆಯನ್ನು ನೀಡಿದೆ. ನಾವು ಸಾಮಾನ್ಯ ಜ್ಞಾನದಿಂದ ನಿಜವೆಂದು ತಿಳಿದಿರುವುದು ಅಧ್ಯಯನದಿಂದ ಬೇರೆಯೇ ಆಗುವ ಸಾಧ್ಯತೆಗಳಿವೆ ಎಂದು ಮೊದಲಿಗೇ ಹೇಳಿದೆ. ಅಲ್ಲಿಯೇ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎನ್ನುವ ಕನಕದಾಸರ ಹಾಡು ಪಾರಂಪರಿಕವಾಗಿ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿರುವುದೆಂದು  ಹೇಳಿದ್ದಲ್ಲ- ಅದು ಸಿನಿಮಾದವರ ಪ್ರಭಾವ ಎಂದೂ ಸಾರಿದ್ದೆ. ಅನಂತರ ಉಡುಪಿಯ ಮೂರ್ತಿ ಕನಕದಾಸರತ್ತ ತಿರುಗಿತ್ತೆಂದು ಹೇಳುವ ಐತಿಹ್ಯವು ಕ್ರಿ.ಶ.1436 ರಲ್ಲಿ ಮರುಸ್ಥಾಪನೆಯಾದ ಮೂರ್ತಿಯ ಸುತ್ತ ಇರುವ ಐತಿಹ್ಯವೆಂದಿದ್ದೆ. ಮುಂದುವರೆದು ಪ್ರಾಚೀನ ದೇವಾಲಯಗಳಲ್ಲಿ ಗರ್ಭಗುಡಿಯೇ ಮುಖ್ಯವಾದುದು; ಹಾಗಾದುದರಿಂದ ಅಲ್ಲಿ ಸಾರ್ವಜನಿಕರು ಯಾರಾರು ಪ್ರವೇಶ ಮಾಡಬಹುದು- ಮಾಡಬಾರದು ಎನ್ನುವ ಪ್ರಶ್ನೆ ಬರುವುದಿಲ್ಲ ಎಂದಿದ್ದೆ. ಅದಕ್ಕೆ ಮುಖ್ಯ ಕಾರಣವೆಂದರೆ ಪೂಜಾರಿಯೊಬ್ಬನಿಗಷ್ಟೇ  ಹೋಗಬಹುದಾದಷ್ಟು ಸಣ್ಣ ದೇವಾಲಯಗಳವು. ಆ ವಾದ ಸರಣಿಯನ್ನು ಮುಂದುವರಿಸಿ ರಂಗಭೋಗವು ಜನಪ್ರಿಯವಾದುದರಿಂದ ಗರ್ಭಗುಡಿಯು ಸಾರ್ವಜನಿಕರಿಂದ ದೂರವಾಗತೊಡಗಿತು, ಏಕೆಂದರೆ ದೇವಾಲಯದ ವ್ಯಾಪ್ತಿ ಹೆಚ್ಚಾಗುತ್ತಾ ಹೋಯಿತು ಎಂದು ಪ್ರತಿಪಾದಿಸಿದೆ. ರಂಗಭೋಗ ಜನಪ್ರಿಯವಾಗಿ ನವರಂಗ ಬೆಳೆದಾಗಲೂ ಕೆಳಜಾತಿಯವರಿಗೆ, ಶೂದ್ರರಿಗೆ ಪ್ರವೇಶವನ್ನು ನಿರಾಕರಿಸಿರಲಿಲ್ಲ; ಏಕೆಂದರೆ ನವರಂಗದವರೆಗೆ ಅವರಿಗೆ ಪ್ರವೇಶವಿತ್ತೆಂದೂ ಅಲ್ಲಿ ನಾನು ಪ್ರತಿಪಾದಿಸಿದೆ. ಅದಕ್ಕೆ ಮದ್ದಳೆಯ ಮಾದಿಗ ಮತ್ತು ಕಂಬದ ಸೂಳೆಯರ ನಿದರ್ಶನವನ್ನು ಪೂರಕವಾಗಿ ಒದಗಿಸಿದ್ದೆ. ಆದರೆ ಬಳ್ಳಾರಿ ಜಿಲ್ಲೆಯ ಶಾಸನಗಳಲ್ಲಿ  ದೇವಾಲಯಗಳಲ್ಲಿ ಪೂಜಾರಿಗಳಾಗಿ ಬ್ರಾಹ್ಮಣರೇ ಇರಬೇಕೆಂದು ಶಾಸನ ಬರೆಯುವುದರ ಬಗೆಗೂ ಗಮನ ಸೆಳೆದಿದ್ದೆ. ಆಮೇಲೆ ಕರ್ನಾಟಕದ ಬೇರೆ ಬೇರೆ ಕಡೆ ಯಾವ ಯಾವ ಜಾತಿಯವರು ದೇವರ- ದೇವತೆಗಳ ಪೂಜಾರಿಗಳಾಗಿದಾರೆ ಎನ್ನುವುದಕ್ಕೆ ನಿದರ್ಶನವನ್ನು ನೀಡಿದ್ದೆ. ಈಗ ಕೊನೆಯದಾಗಿ ದೇವಾಲಯಗಳಿಗೂ, ಅದರ ಪೂಜಾ ವಿಧಿಗಳಿಗೂ ಶುದ್ಧ ವೈದಿಕ ಬ್ರಾಹ್ಮಣರೆನಿಸಿಕೊಂಡವರಿಗೆ ಸಂಬಂಧವಿಲ್ಲವೆಂದ ಕಟ್ಟಾ ವೈದಿಕ ಬ್ರಾಹ್ಮಣರೊಬ್ಬರ ಪ್ರತಿಪಾದನೆಯನ್ನು ಉಲ್ಲೇಖಿಸಿದೆ. ಈಗ ಮುಂದಿನ ಪ್ರಶ್ನೆ ಸ್ಪಷ್ಟವಾಗಿಯೇ ಇದೆ. ಹಾಗಾದರೆ ದೇವಾಲಯಗಳನ್ನು ನಿರ್ಮಿಸಿದವರು ಯಾರು?

ದೇವಾಲಯಗಳ ನಿರ್ಮಾಣ: ಮತ್ತೊಂದು ಸುತ್ತಿನ ಚರ್ಚೆ:
ಈಗಿನ ಚರ್ಚೆಗಳಿಂದ ಒಂದು ಖಚಿತವಾದ ಉತ್ತರಕ್ಕೆ ನಾವು ಬರಬಹುದು. ಅಂದರೆ ದೇವಾಲಯಗಳು ಕ್ಷತ್ರಿಯರ, ಧನವಂತರ, ಬ್ರಾಹ್ಮಣೇತರರ ಸೃಷ್ಟಿಯೇ ಆಗಿವೆ. ಐತಿಹಾಸಿಕವಾಗಿ ಇದಕ್ಕೆ ಈಗಾಗಲೇ ವಿವರಗಳನ್ನು ನೀಡಲಾಗಿದೆ. ಕರಾವಳಿ ಕರ್ನಾಟಕದ ಇನ್ನೊಂದು ನಿದರ್ಶನದ ಮೂಲಕ ಹೇಳುವುದಾದರೆ, ತುಳುವರಿಗೆ ಭೂತಾರಾಧನೆ ಮುಖ್ಯವಾದುದು. ಪ್ರತಿಯೊಂದು ಮನೆಯಲ್ಲಿಯೂ ಇದು ನಡೆದೇ ನಡೆಯುತ್ತದೆ. ಮೊನ್ನೆ ಮೊನ್ನೆಯವರೆಗೂ ಬ್ರಾಹ್ಮಣರಿಗೂ ಅದಕ್ಕೂ ಸಂಬಂಧ ಇರಲಿಲ್ಲ. ಈಗಲೂ ಅಷ್ಟಕ್ಕಷ್ಟೇ ಸಂಬಂಧ ಇದೆ. ಕರ್ನಾಟಕದ ಇತರ  ಭಾಗಗಳಲ್ಲಿ ಗ್ರಾಮದೇವತೆಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಬ್ರಾಹ್ಮಣರ ಪಾಲ್ಗೊಳ್ಳುವಿಕೆ ಇಲ್ಲವೆಂದಷ್ಟೂ ಕಡಿಮೆ. ಇದನ್ನು ಗ್ರಾಮದೇವತೆಗಳ ಕುರಿತು ಅಧ್ಯಯನ ಮಾಡಿದವರೆಲ್ಲರೂ ಹೇಳಿದ್ದಾರೆ. ಪ್ರೊ. ಎಸ್.ಎಸ್. ಹಿರೇಮಠರ ‘ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ- ಜಾತ್ರೆಗಳು’ ಪುಸ್ತಕದಲ್ಲಿ ಅದನ್ನು ವ್ಯವಸ್ಥಿತವಾಗಿ ಪ್ರತಿಪಾದಿಸಿದ್ದಾರೆ. ಹಾಗಾದರೆ ದೇವಾಲಯಗಳು ಕರ್ನಾಟಕಕ್ಕೆ ಮಧ್ಯಮ ಜಾತಿಗಳು ಮತ್ತು ದಲಿತರ ಕೊಡುಗೆ ಎಂದು ಸ್ಪಷ್ಟವಾಯಿತು.

ಹಾಗಾದರೆ ದೇವಾಲಯ ಪ್ರವೇಶದ ಸಮಸ್ಯೆ ಆರಂಭ ಎಲ್ಲಿ?
ಯಾರು ದೇವಾಲಯಗಳ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದರೋ ಅವರೇ ಈ ಸಮಸ್ಯೆಯ ನಿರ್ಮಾತೃಗಳೂ ಎಂದು ಈಗ ಹೇಳದೇ ಬೇರೆ ದಾರಿಯೇ ಇಲ್ಲ. ಇದರಿಂದ ಎಷ್ಟೇ ಆತಂಕ-ತಳಮಳವಾದರೂ ಅದರ ಹೊರತು ಬೇರೆ ಉತ್ತರವನ್ನೇ ನೀಡಲಾಗುವುದಿಲ್ಲ. ಈಗಾಗಲೇ ನಾನು ಐತಿಹಾಸಿಕ, ಪಾರಂಪರಿಕವಾದ ವಿವರಣೆಗಳನ್ನು ನೀಡಿರುವೆನಾದರೂ ನನ್ನ ವೈಯಕ್ತಿಕ ಅನುಭವವನ್ನು ಸೇರಿಸುವುದಕ್ಕೂ ಇದು ಸಕಾಲವಾಗುತ್ತದೆ.

ನನ್ನ ಹುಟ್ಟೂರಾದ ಪೆರಾಜೆ ಎನ್ನುವುದು ಒಂದು ಸಣ್ಣ ಹಳ್ಳಿ. ಅಲ್ಲಿ ಶಾಸ್ತಾವೇಶ್ವರ ಎನ್ನುವ ಸುಂದರವಾದ ದೇವಾಲಯವಿದೆ. ಅದು ಬಹಳ ಪ್ರಾಚೀನವಾದ ದೇವಾಲಯವೇನಲ್ಲ. ನಾನು ಸಣ್ಣವನಿರುವಾಗ ಅಂದರೆ ಈಗ ಸುಮಾರು 45 ವರ್ಷಗಳ ಹಿಂದೆ ಅದು ಸಣ್ಣ ದೇವಾಲಯವಾಗಿತ್ತು. ದೇವಾಲಯದ ಸುತ್ತ ವಿಶಾಲವಾದ ಜಾಗವಿತ್ತು. ನಮ್ಮ ಹಿರಿಯರು ಹೇಳುವ ಹಾಗೆ ಅಲ್ಲಿಯ ಬಹುಸಂಖ್ಯಾತರಾದ ಗೌಡರಿಗೂ ಕೂಡ ಆಗ ದೇವಾಲಯದ ಒಂದು ನಿರ್ದಿಷ್ಟ ಭಾಗಕ್ಕೆ ಮಾತ್ರ ಹೋಗುವ ಸಾಧ್ಯತೆ ಇತ್ತು. ದೇವಾಲಯದ ಸುತ್ತ ಎತ್ತರದ ಮಣ್ಣಿನ ಕಟ್ಟೆ ಇದ್ದುರಿಂದ ದಲಿತರೆಲ್ಲರೂ ಅಲ್ಲೇ ಕುಳಿತು ಜಾತ್ರೆ ನೋಡುತ್ತಿದ್ದರು. ಆಗ ದೇವಾಲಯದ  ಸುತ್ತ ವಿಶಾಲವಾದ ಜಾಗ ಇದ್ದುದರಿಂದ ದೇವಾಲಯ ಸಂಕೀರ್ಣ ಸಣ್ಣದಾದುದರಿಂದ ದೇವಾಲಯದ ಸಮೀಪ ಇದ್ದಂತೆಯೇ ದಲಿತರಿಗೆ ಭಾಸವಾಗುತ್ತಿತ್ತು. ದಲಿತರು ಮಾತ್ರವಲ್ಲ ಬೇರೆ ಜಾತಿಯವರೂ ಇಲ್ಲಿಂದಲೇ ದೇವರನ್ನು, ಜಾತ್ರೆಯನ್ನೂ ನೋಡುತ್ತಿದ್ದರು. ಬರುಬರುತ್ತ ದೇವಾಲಯದ ಸಂಕೀರ್ಣ ವಿಸ್ತಾರವಾಗತೊಡಗಿತು. ಹಾಗೆಯೇ ದೇವಾಲಯದ ಸುತ್ತ ಮುಳ್ಳುಬೇಲಿಯೂ ಬಂತು. ಊರಿನಲ್ಲಿ ಗೌಡರು ಸ್ಥಿತಿವಂತರೂ, ಪ್ರಬಲರೂ ಆದುದರಿಂದ ದೇವಾಲಯದ ಒಂದು ನಿರ್ದಿಷ್ಟ ಭಾಗಕ್ಕೆ ಮಾತ್ರ ಹೋಗುತ್ತಿದ್ದ ಅವರು ದೇವಾಲಯದ ತುಂಬ ಹತ್ತಿರಕ್ಕೆ ಹೋಗತೊಡಗಿದರು. ಇತ್ತ ದಲಿತರಿಗೆ ದೇವಾಲಯದ ಸಂಕೀರ್ಣಕ್ಕೆ ಮಾತ್ರವಲ್ಲ, ದೇವಾಲಯವನ್ನೇ ನೋಡುವ ಸ್ಥಿತಿ ಇರಲಿಲ್ಲ. ಆಗ ದೇವಾಲಯ ಪ್ರವೇಶದ ಸಮಸ್ಯೆ ಉಂಟಾಯಿತು. ತೀರಾ ಅಲ್ಪ ಸಂಖ್ಯಾತರಾಗಿದ್ದ ಬ್ರಾಹ್ಮಣರು ಆಗಲೂ ದಲಿತರ ದೇವಾಲಯ ಪ್ರವೇಶಕ್ಕೆ ಅಡ್ಡಿ ಮಾಡಲಿಲ್ಲ. ಭಕ್ತಿಯಿಂದ ಬಂದವರನ್ನು ಇಲ್ಲ ಎಂದು ನಾನು ಹೇಳುವುದಿಲ್ಲ ಎಂದರೂ ತಕರಾರು ತೆಗೆದವರು ಮಧ್ಯಮ ಜಾತಿಯವರೇ. ಅವರು ಹಾಗೆ ಹೇಳುವುದಕ್ಕೆ ಒಂದು ಸಕಾರಣವೂ ಇಲ್ಲದಿಲ್ಲ. ಏಕೆಂದರೆ ನಮ್ಮೂರಿನ ದೇವಾಲಯದ ಬೆಳವಣಿಗೆಯಲ್ಲಿ ಒಕ್ಕಲಿಗರ ಗೌಡರು ತುಂಬ ಶ್ರಮಿಸಿದ್ದಾರೆ. ದೇವಾಲಯವನ್ನು ಅಭಿವೃದ್ಧಿ ಮಾಡಿದ್ದಾರೆ. ಯಾರು ದೇವಾಲಯವನ್ನು ಬೆಳೆಸುತ್ತಾರೋ, ಅವರು ಸಹಜವಾಗಿಯೇ ದೇವಾಲಯದ ಬಗೆಗೆ ಹಕ್ಕುದಾರಿಕೆಯನ್ನು ತೋರಿಸುತ್ತಾರೆ. ಇಲ್ಲಿ ನೀತಿ-ಅನೀತಿಯ ಪ್ರಶ್ನೆಯಿಂದಾಚೆಗೆ ಹೇಳುವುದಿದ್ದರೆ,  ದೇವಾಲಯವನ್ನು ಯಾರು ಪೋಷಿಸುತ್ತಾರೋ ಅವರೇ ನಿಯಮಗಳನ್ನೂ ರೂಪಿಸುತ್ತಾರೆ. ನಮ್ಮಲ್ಲಿ ದೇವಾಲಯಗಳೂ ಮಧ್ಯಮ ಜಾತಿಯವರು(ಶೂದ್ರರು), ದಲಿತರು ಪೋಷಿಸಿರುವುದರಿಂದ ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಅವರಲ್ಲದೇ ಇನ್ನಾರು ರೂಪಿಸುವುದಕ್ಕೆ ತಾನೇ ಸಾಧ್ಯ?
ಹಾಗೆಂದು ದೇವಾಲಯ ಸಂಸ್ಕೃತಿಯಲ್ಲಿ ಬ್ರಾಹ್ಮಣರ ಪಾತ್ರ ಕೊಂಚವೂ ಇಲ್ಲವೆಂದು ನಾನು ಹೇಳುವುದಿಲ್ಲ. ರಾಜರ ಕಾಲದಲ್ಲಿ ಜೀವನೋಪಯಕ್ಕಾಗಿ ಬ್ರಾಹ್ಮಣರು ದೇವಾಲಯದ ಪೂಜಾರಿಗಳಾಗಿರುವುದುಂಟು. ಹಾಗೆಯೇ ಈಗಲೂ ಅದನ್ನೊಂದು ವೃತ್ತಿಯಾಗಿ ಅವರು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಬ್ರಾಹ್ಮಣರಿಗೆ ದೇವಾಲಯದ ಪೂಜೆಗಿಂತಲೂ ವೈದಿಕ ಕ್ರಿಯೆಗಳಾದ ಸಂಧ್ಯಾವಂದನೆ, ಯಾಗ ಹಾಗೂ ಮಂತ್ರಪಠಣ ಮೊದಲಾದವುಗಳೇ ಮುಖ್ಯವಾದುವು. ಆದರೆ ಮಧ್ಯಮ ಜಾತಿಗಳಿಗೆ ಇಂದಿಗೂ ದೇವಾಲಯಗಳೇ ಮುಖ್ಯವಾದವು. ಈ ದೃಷ್ಟಿಯಿಂದ ಕುದ್ರೋಳಿ ದೇವಾಲಯದಲ್ಲಿ ಸನ್ಮಾನ್ಯ ಜನಾರ್ದನ ಪೂಜಾರಿಯವರು ಕೈಗೊಂಡ ಕಾರ್ಯ ಮಹತ್ತರವಾದುದು. ಬಿಲ್ಲವ ಸಮಾಜದವರು ಸ್ಥಾಪಿಸಿದ ಆ ದೇವಾಲಯದಲ್ಲಿ ಅವರು ಏನನ್ನೂ ಮಾಡುತ್ತರೋ ಅದೇ ನಿಯಮ. ದಲಿತ ವಿಧವೆಯೊಬ್ಬರಿಂದ ಪೂಜೆ ಪೂಜೆ ಮಾಡಿಸಿರುವುದು ಅವರಿಗೆ ಒಪ್ಪಿತವಾದ ನಿಯಮ.  ಅದನ್ನು ಪ್ರಶ್ನಿಸುವ ಅಧಿಕಾರ ಬೇರೆಯವರಿಗಿಲ್ಲ. ಏಕೆಂದರೆ ದೇವಾಲಯಗಳು ಈವರೆಗೆ ನಡೆದು ಬಂದಿರುವುದೇ ಹಾಗೆ.

ಇಷ್ಟಾಗಿಯೂ ದೇವಾಲಯಕ್ಕೆ ಪ್ರವೇಶಿಸಬೇಕೆನ್ನುವುದು ಅಧಿಕಾರದ ಪ್ರಶ್ನೆಯೋ ಅಥವ ನಂಬಿಕೆಯ ಪ್ರಶ್ನೆಯೋ? ಎನ್ನುವುದು ಬೇರೆಯದೇ ಆದ ಇನ್ನೊಂದು ಜಿಜ್ಞಾಸೆಯಾಗಿದೆ. ಕನಕದಾಸರನ್ನು ತಡೆಯಲಾಯಿತು ಎನ್ನುವವರು ಈ ದೃಷ್ಟಿಯಿಂದ ಅದನ್ನು ನೋಡುವುದೇ ಇಲ್ಲ. ಅಷ್ಟಾಗಿಯೂ ಆ ಐತಿಹ್ಯ ಸೂಚಿಸುವುದಾದರೂ ಏನು? ಆಗಲೇ ಹೇಳಿದಂತೆ ಭಕ್ತಿಯಿಂದ ಬಂದವರಿಗೆ ದೇವಾಲಯದ ಬಾಗಿಲು ತೆರೆದೇ ಇರುತ್ತದೆ ಎನ್ನುವುದನ್ನು ತಾನೇ? ಇದು ಪ್ರವೇಶಿಸುವವನಿಗೂ, ಪೂಜಾರಿಗೂ ದೇವರಿಗೂ ಏಕಕಾಲಕ್ಕೆ ಅನ್ವಯವಾಗುವ ನಿಯಮ. ಏಕೆಂದರೆ ದಾಸರೇ ಹೇಳುವ ಹಾಗೆ – ಹೂವ ತರುವರ ಮನೆಗೆ ಹುಲ್ಲು ತರುವ| ಅವ್ವ ಲಕುಮೀರಮಣ ಇವರಿಗಿಲ್ಲ ಗರುವ| ! ಇಲ್ಲಿ ಇನ್ನೂ ಒಂದು ಸಮಸ್ಯೆ ಇದೆ – ನಾವು ದೊಡ್ಡ ದೊಡ್ಡ ದೇವಾಲಯಕ್ಕೆ ಮಾತ್ರ ಪ್ರವೇಶಿಸಬೇಕೆನ್ನುವುದು ಏಕೆ? ಊರಿನ ಸಣ್ಣ ಸಣ್ಣ ಮಾರಮ್ಮನೋ ಎಲ್ಲಮ್ಮನೋ ಬಾ ಮಗನೇ ಎಂದು ಕರೆದಾಗಲೂ ಹೋಗುವುದಿಲ್ಲವೇಕೆ? ಏಕೆಂದರೆ ಶಿಲ್ಪಶಾಸ್ತ್ರಗ್ರಂಥಗಳಲ್ಲಿ ಈ ಮಾತು ಇದೆ-

“ಕಲ್ಪಗಳಿಗೆ ಒಲಿದವರು ದೇವರನ್ನು ಅಗ್ನಿಯಲ್ಲಿ ಕಾಣುತ್ತಾರೆ. ಆದರೆ ವಿವೇಕಿಗಳಾದವರು ದೇವರನ್ನು ತಮ್ಮ ಹೃದಯದಲ್ಲೇ ಕಂಡುಕೊಳ್ಳುತ್ತಾರೆ. ಮಂದಬುದ್ಧಿಯವರಿಗೆ ದೇವರು ಪ್ರತಿಮೆಯಲ್ಲಿದ್ದಾನೆ. ಉಳಿದವರಿಗೆ ಎಲ್ಲೆಲ್ಲೂ ಇದ್ದಾನೆ.” ದೇವಾಲಯಗಳನ್ನು, ಮೂರ್ತಿಗಳನ್ನು ಎಷ್ಟು ಪ್ರಮಾಣ ಹೇಗೆ ಕಟ್ಟಬೇಕೆನ್ನುವ ಶಾಸ್ತ್ರಗಾರರೇ ಈ ಮಾತನ್ನು ಹೇಳಿರುವುದು. ದೇವಾಲಯಗಳನ್ನು ಹೀಗೆ ಹೀಗೆ ಕಟ್ಟಿ ಎನ್ನುವವರೆ ಅದು ಅವಿವೇಕಿಗಳ ಕೆಲಸ ಎಂದಮೇಲೆ ಈ ದೇವಾಲಯ ಪ್ರವೇಶ ಎನ್ನುವುದನ್ನು ಏನೆನ್ನಬೇಕು?

ಹಾಗಾದರೆ ಈಗಿನ ಸಮಸ್ಯೆಯ ಮೂಲ ಎಲ್ಲಿ?
ದೇವಾಲಯ ಪ್ರವೇಶ  ಎನ್ನುವುದು ಈಗ ಒಂದು ರಾಜಕೀಯ ಸಂಗತಿಯಲ್ಲದೇ ಬೇರೇನೂ ಅಲ್ಲ. ಮಹಾತ್ಮಗಾಂಧೀಜಿ, ನಾರಾಯಣಗುರು ಮೊದಲಾದ ಹಿರಿಯರಿಗೆ, ಧೀಮಂತರಿಗಿದ್ದ ಕಾಳಜಿ ಕೂಡ ಇದರ ಹಿನ್ನೆಲೆಯಲ್ಲಿ ಈಗ ಇಲ್ಲ. ದೇವಾಲಯಕ್ಕೆ ಪ್ರವೇಶ ಮಾಡಬೇಕೆನ್ನುವವರೂ ಈಗ ಅದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಯೇ ಸ್ವೀಕರಿಸಿದ್ದಾರೆ. ಇಲ್ಲದೆ ಹೋದರೆ ಅದು ಗಂಭೀರವಾದ ಪ್ರಶ್ನೆಯಾಗಬೇಕಾಗಿಲ್ಲ. ಏಕೆಂದರೆ ಈವರೆಗೆ ಸುದೀರ್ಘವಾಗಿ ಚರ್ಚಿಸಿರುವ ಹಾಗೆ ದೇವಾಲಯದ ಕಲ್ಪನೆ ನಮ್ಮಲ್ಲಿ ಸರಳವಾದುದು. ಯಾರು ಬೇಕಾದರೂ ದೇವಾಲಯವನ್ನು ಸ್ಥಾಪನೆಮಾಡಬಹುದು. ಶ್ರೀನಾರಾಯಣ ಗುರುಗಳು ನದಿಯಲ್ಲಿದ್ದ ಒಂದು ಕಲ್ಲನ್ನೇ ಎತ್ತಿ ತಂದು ಅದನ್ನು ದೇವರೆಂದು ಪೂಜಿಸಿ ಎಂದು ದಾರಿ ತೋರಿಸಿದರು. ದೇವಾಲಯದ ಕಲ್ಪನೆ ಅಷ್ಟು ಸರಳವಾದುದು. ಹಾಗಾದುದರಿಂದ ದೇವಾಲಯಕ್ಕೆ ಪ್ರವೇಶ ಮಾಡುವುದಕ್ಕಿಂತ ಸರಳವಾಗಿ ನಮ್ಮದೇ ಆದ ದೇವಾಲಯವನ್ನು ಕಟ್ಟಿಕೊಳ್ಳುವುದರತ್ತಲೂ ಯೋಚನೆ ಮಾಡಬಹುದು. ಅದನ್ನು ಯಾರೂ ನಿರಾಕರಿಸುವುದೂ ಇಲ್ಲ; ತಾತ್ಸಾರ ಮಾಡುವುದೂ ಇಲ್ಲ. ಅಲ್ಲಿ ಆಗಲೇ ಹೇಳಿರುವಂತೆ ಬೇಕಾಗಿರುವುದು ಭಕ್ತಿಯೇ ಹೊರತು ಹಕ್ಕೊತ್ತಾಯವಲ್ಲ. ಹಾಗೆಯೇ ಅನ್ಯರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸುವಲ್ಲಿಯೂ ಈಗ ಹೇಳಿರುವ ಅಂಶಗಳನ್ನೇ ಗಮನಿಸಬಹುದು. ದೇವಾಲಯವು ವೈದಿಕರ ಸಂಸ್ಕೃತಿಯೇ ಅಲ್ಲವೆಂದ ಮೇಲೆ (ಹಾಗೆಂದವರು ರಾಣೀಸತೀಶ ಶರ್ಮ ಎನ್ನುವ ಕಟ್ಟಾ ವೈದಿಕರು) ಬ್ರಾಹ್ಮಣರು ಇತರರನ್ನು ತಡೆಯುವುದಾದರೂ ಹೇಗೆ? ಏಕೆಂದರೆ ಹಕ್ಕು ತಾನೇ? ಇನ್ನೂ ಒಂದು ವಿಷಯ; ಒಂದು ಕಾಲದಲ್ಲಿ ದೇವಾಲಯದ ಒಂದು ನಿರ್ದಿಷ್ಟ ಜಾಗಕ್ಕೆ ಮಾತ್ರ ಪ್ರವೇಶಿಸುತ್ತಿದ್ದ ಮಧ್ಯಮ ಜಾತಿಯವರು ಇದ್ದಕಿದ್ದಂತೆ ಪವಿತ್ರರಾದದ್ದು ಹೇಗೆ? ಇದಕ್ಕೆಲ್ಲ ಒಂದೇ ಒಂದು ಉತ್ತರ ಸಾಧ್ಯವಿದೆ. ನಮ್ಮ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದೇ ಈ ಎಲ್ಲಾ ಸಮಸ್ಯೆಗಳಿಗೂ ಕಾರಣವಾಗಿದೆ.

ನಮೋಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ
ತ್ರೈಲೋಕ್ಯ ನಗರಾರಂಭ ಮೂಲ ಸ್ಥಂಭಾಯ ಶಂಭವೇ ||

-ಡಾ. ಮಾಧವ ಪೆರಾಜೆ

ಪರಾಮರ್ಶನ ಗ್ರಂಥಗಳು
1.ಎಪಿಗ್ರಫಿಯಾ ಇಂಡಿಕಾ, ಸಂ.15.ಶಾ.ಸಂ. 6.
2.ಎಪಿಗ್ರಫಿಯಾ ಕನಾಟಕ, ಸಂ.8.ಶಿಕಾರಿಪುರ,ಶಾ.ಸಂ. 98
3.ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ, (ಹಗರಿಬೊಮ್ಮನ ಹಳ್ಳಿ) ಶಾ.ಸಂ.17.
4.ಕಲಬುರ್ಗಿ ಮತ್ತು ವೀರಣ್ಣ ರಾಜೂರ(ಸಂ.), ಹೊಸ ಕೊಮಾರರಾಮನಸಾಂಗತ್ಯ (2000). ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.
5.ಗಿರಿಜಾ ಶಂಕರ್, ಭಕ್ತಿ ವಿಜಯ (1996). ಸಂಕೇಶ್ವರ ಪ್ರಿಂಟರ್ಸ್,ಗದಗ.
6.ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (1978).ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ ಮೈಸೂರು.
7.ಪರಶಿವಮೂರ್ತಿ, ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ(2002). ಪ್ರಸಾರಾಂಗ,ಕನ್ನಡ ವಿಶ್ವವಿದ್ಯಾಲಯ, ಹಂಪಿ.
8.ಪ್ರಶಾಂತ ಎಂ.ಜೆ.,ಕನಕದಾಸರ ಹಾಡುಗಳು(19980).ಪಿ.ಸಿ.ಶಾಬಾದಿವ್ಮಠ ಬುಕ್ ಡಿಪೋ, ಗದಗ.
9.ವೆಂಕಟರಾವ್,(ಅನು),ಕೊನೆಯ ಬ್ರಾಹ್ಮಣ(2006).ಅಕ್ಷರ ಪ್ರಕಾಶನ, ಸಾಗರ. ಹೆಗ್ಗೋಡು ಕರ್ನಾಟಕ.
10.ರಾಮಚಂದ್ರರಾವ್,bಸಾ.ಕೃ.ಭಾರತದ ದೇವಾಲಯ ನೆಲೆ_ಹಿನ್ನೆಲೆ(2005). ಸುರಮಾ ಪ್ರಕಾಶನ, ಪ್ರೊ.ಸಾ.ಕೃ.ರಾಮಚಂದ್ರರಾವ್ ಸ್ಮಾರಕ ನಿಧಿ,ಬೆಂಗಳೂರು.
11.ಹಿರೇಮಠ,ಎಸ್.ಎಸ್.ಕರ್ನಾಟಕ ದಲಿತ ಪರಂಪರೆ: ಜಾತ್ರೆಗಳು.(1996). ಸಮತಾ ಪ್ರಕಾಶನ ಹೊಸಪೇಟೆ.
(ದಿ.10.10.2014ರಂದು ವಾಣಿ ಸಕ್ಕರೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯೂರು, ಚಿತ್ರದುರ್ಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನ ಕೇಂದ್ರ ಮಂಗಳಗಂಗೋತ್ರಿ ಇವರು ನಡೆಸಿದ ವಿಶೇಷ ಉಪನ್ಯಾಸದ ಬರಹ ರೂಪ.)

1 ಟಿಪ್ಪಣಿ Post a comment
  1. shripad
    ಆಕ್ಟೋ 12 2016

    ದೇವಾಲಯ ಪ್ರವೇಶ ಕುರಿತು ಇದುವರೆಗೆ ನಾನು ಓದಿದ ಅತ್ಯಂತ ಅರ್ಥಪೂರ್ಣವೂ ಅದ್ಭುತವೂ ಆದ ಲೇಖನ. ದೇವಾಲಯದ ಒಳ ಹೊಕ್ಕರೆ ತಾವು ಜ್ನಾನಿಗಳಾಗುತ್ತೇವೆ, ಸಮಾನತೆ ದೊರೆತುಬಿಡುತ್ತದೆ ಎನ್ನುವ ಭ್ರಮೆಯುಳ್ಳವರಿಗೆ ಸ್ವಲ್ಪವೂ ನಮ್ಮ ಸಂಪ್ರದಾಯ-ಆಚರಣೆಗಳ ಅಥವಾ ಅಧ್ಯಾತ್ಮದ ಗಂಧ ಗಾಳಿಯೂ ಇಲ್ಲ ಅನ್ನುವುದು ಸ್ಪಷ್ಟ. ಯೂರೋಪ್ ಕೇಂದ್ರಿತ ಡಬ್ಬಾ ಚಿಂತನೆಗಳನ್ನು ಅನುವಾದಿಸಿಕೊಂಡು ಮಾತನಾಡುವ ಇಂಥ ತಗಡುಗಳು ತಮ್ಮ ಸಮರ್ಥನೆಯನ್ನು ಇಷ್ಟು ಸಮರ್ಥವಾಗಿ ಮೊದಲು ಮಂಡಿಸಲು ಕಲಿಯಲಿ. ಆಮೇಲೆ ಚರ್ಚೆಗೆ ಬರಲಿ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments