ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 19, 2016

ಸಾಮಾಜಿಕ ಸಮಾನತೆಯ ಐಡಿಯಾಲಜಿ ಹಾಗೂ ಸಮವಸ್ತ್ರ ನಿಯಮದ ಸಮಸ್ಯೆ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

rjp_310816_kesari1ಪಶ್ಚಿಮದ ದೇಶಗಳು ಶಾಲಾ ಕಾಲೇಜುಗಳಲ್ಲಿರುವ ಸಮವಸ್ತ್ರದ ನಿಯಮವನ್ನು ಕೇವಲ ಒಂದು ಶಿಸ್ತಿನ ನಿಯಮವನ್ನಾಗಿ ನೋಡುವದಿಲ್ಲ. ಆ ದೇಶಗಳು ಪ್ರೊಟೆಸ್ಟಂಟ್ ಚಳುವಳಿಯ ಕಾಲದಿಂದ ರೂಪಿಸಿಕೊಂಡಿರುವ ಸಾಮಾಜಿಕ ಸಮಾನತೆಯ ಐಡಿಯಾಲಜಿಯನ್ನು ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ಮತ್ತು ಬೆಳೆಯುತ್ತಿರುವ ಮಕ್ಕಳಿಗೆ ಆ ಐಡಿಯಾಲಜಿಯನ್ನು ತಿಳಿಸುವ ಪ್ರಯತ್ನ ಎಂದು ಅರ್ಥೈಸಲಾಗುತ್ತದೆ. ಶಾಲೆ ಎಂಬ ಸಂಸ್ಥೆಯ ಮುಂದೆ ಎಲ್ಲ ಮಕ್ಕಳೂ ಸಮಾನರು ಹಾಗೂ ಅಲ್ಲಿ ಬಡವ ಮತ್ತು ಬಲ್ಲಿದ ಎಂಬ ಭೇದವಿಲ್ಲ ಎಂಬ ಉನ್ನತವಾದ ಆಶಯವನ್ನು ಈ ಸಮವಸ್ತ್ರದ ನಿಯಮವು ಹೊಂದಿದೆ. ಹೀಗಾಗಿ ಅಲ್ಲಿ ಸಮವಸ್ತ್ರವನ್ನು ಹಾಕಿಕೊಳ್ಳಲು ಒಪ್ಪದಿರುವವರನ್ನು ಸಾಮಾಜಿಕ ಸಮಾನತೆಯ ವಿರೋಧಿ ಎಂದೇ ಪರಿಗಣಿಸಲಾಗುತ್ತದೆ.

ಈ ಸಮವಸ್ತ್ರದ ನಿಯಮಗಳ ಹಿಂದಿರುವ ಸಾಮಾಜಿಕ ಸಮಾನತೆಯ ಐಡಿಯಾಲಜಿಯು ಕ್ರಿಶ್ಚಿಯನ್ ಥಿಯಾಲಜಿಯ ಸೆಕ್ಯೂಲರೀಕೃತ ರೂಪವಾಗಿದೆ. “ಗಾಡ್ ನ ದೃಷ್ಟಿಯಲ್ಲಿ ಮನುಷ್ಯರೆಲ್ಲರೂ ಸಮಾನರು” ಎಂಬ ಕ್ರಿಶ್ಚಿಯನ್ ಥಿಯಾಲಜಿಯ ಕಲ್ಪನೆಯು ಪ್ರೊಟೆಸ್ಟಂಟ್ ಚಳುವಳಿಯ ಸಮಯದಲ್ಲಿ ಸೆಕ್ಯೂಲರ್ ರೂಪವನ್ನು ಪಡೆದುಕೊಂಡು “ಮನುಷ್ಯರೆಲ್ಲರೂ ಸಮಾನರು” ಎಂಬ ಐಡಿಯಾಲಜಿಯಾಗಿ ಬೆಳೆಯಿತು. “ಕಾನೂನಿನ ದೃಷ್ಟಿಯಲ್ಲಿ ಮನುಷ್ಯರೆಲ್ಲರೂ ಸಮಾನರು” ಎಂಬ ಸೆಕ್ಯುಲರ್ ಐಡಿಯಾಲಜಿಯೇ ಪ್ರಜಾಪ್ರಭುತ್ವ ಮತ್ತು ಸಮಾಜವಾದದಂಥ ಪ್ರಭುತ್ವ ಮಾದರಿಗಳಿಗೆ ಬುನಾದಿಯಾಯಿತು. ಇದೇ ಐಡಿಯಾಲಜಿಯನ್ನು ಚಿಕ್ಕಮಕ್ಕಳಲ್ಲಿ ಬೆಳೆಸಲೆಂದು ಶಾಲೆಗಳಲ್ಲಿ ಸಮವಸ್ತ್ರದ ನೀತಿಯನ್ನು ಅಳವಡಿಸಿಕೊಳ್ಳಲಾಯಿತು.

ನಮ್ಮ ದೇಶದ ಸರಕಾರಿ ಶಾಲೆಗಳು ಮತ್ತು ಬಹುತೇಕ ಖಾಸಗಿ ಶಾಲೆಗಳು ಈ ಸಮವಸ್ತ್ರದ ನಿಯಮವನ್ನು ಪಾಲಿಸುತ್ತವೆ. ನಮ್ಮ ಸಮಾಜದ ಕೆಲವು ಸಮುದಾಯಗಳು ತಮ್ಮದೇ ಆದ ವಸ್ತ್ರಸಂಹಿತೆಯ ಕಲ್ಪನೆಯನ್ನು ಹೊಂದಿರುವದರಿಂದ ಆ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಶಾಲೆಗಳು ತಮ್ಮ ವಸ್ತ್ರಸಂಹಿತೆಯನ್ನು ರೂಪಿಸಿಕೊಳ್ಳುತ್ತವೆ. ಇಸ್ಲಾಮಿಕ್ ಸಂಸ್ಥೆಗಳ ಶಾಲೆಗಳು ಇಸ್ಲಾಮಿನ ಕಾನೂನುಗಳ ಪ್ರಕಾರ ವಸ್ತ್ರಸಂಹಿತೆಯನ್ನು ರೂಪಿಸಿಕೊಳ್ಳುತ್ತವೆ. ಕ್ರಿಶ್ಚಿಯನ್ ಮಿಷಿನರಿಗಳ ಶಾಲೆಗಳು ತಮ್ಮ ರಿಲಿಜನ್ನಿನ ಆಧಾರದಲ್ಲಿಯೇ ವಸ್ತ್ರಸಂಹಿತೆಯನ್ನು ರೂಪಿಸಿಕೊಳ್ಳುತ್ತವೆ. ಮಠ ಮತ್ತು ವೈದಿಕ ಸಂಸ್ಥೆಗಳು ನಡೆಸುವ ಶಾಲೆಗಳೂ ಕೂಡ ಇದಕ್ಕೆ ಹೊರತಲ್ಲ.

ಸಮವಸ್ತ್ರದ ನಿಯಮದ ಪಾಲನೆಯ ಬಗ್ಗೆ ಸ್ಥಳೀಯ ಸಂಸ್ಕೃತಿಗಳ ಜನರಿಗೆ ಹೆಚ್ಚು ಸಮಸ್ಯೆಗಳಿಲ್ಲ. ಏಕೆಂದರೆ ಬಹುತೇಕ ಜನರು ಸಮವಸ್ತ್ರವನ್ನು ಸಮಾನತೆಯ ಐಡಿಯಾಲಜಿಯ ಅನುಷ್ಠಾನವಾಗಿ ನೋಡುವದಿಲ್ಲ. ಆಧುನಿಕ ಶಿಕ್ಷಣವನ್ನು ಪಡೆದು ಪಶ್ಚಿಮದ ಐಡಿಯಾಲಜಿಯನ್ನು ಅರ್ಥೈಸಿಕೊಂಡ ಶಿಕ್ಷಿತ ಪಾಲಕರಷ್ಟೇ ಇದನ್ನು ಅರಿತಿರುತ್ತಾರೆ. ಐಡಿಯಾಲಜಿಯ ಅನುಷ್ಠಾನವಾಗಿ ಆಚರಣೆಗಳನ್ನು ನೋಡುವ ಪ್ರವೃತ್ತಿ ಬಹುತೇಕರಲ್ಲಿ ಇನ್ನೂ ಕಂಡುಬರುವದಿಲ್ಲ. ಬುರ್ಕಾವನ್ನು ಈ ಜನರು ಕೇವಲ ಇಸ್ಲಾಮಿನ ಆಚರಣೆ ಎಂದಷ್ಟೇ ನೋಡುತ್ತಾರೆಯೇ ಹೊರತು ಇಸ್ಲಾಂ ನಂಬಿಕೆಯ ಅನುಷ್ಠಾನ ಎಂದು ನೋಡುವದಿಲ್ಲ. ಪಂಚೆ, ಪೇಟ, ಶಿಖೆಗಳು ಈ ಸಂಸ್ಕೃತಿಯ ಜನರಿಗೆ ಕೇವಲ ಆಚರಣೆಗಳಾಗಿರುವದರಿಂದ ಅವುಗಳನ್ನು ಅವರು ಸುಲಭವಾಗಿ ಅಗತ್ಯಕ್ಕೆ ತಕ್ಕಂತೆ ತ್ಯಜಿಸಬಲ್ಲರು ಹಾಗೂ ಅಗತ್ಯ ಬಿದ್ದರೆ ಪುನಃ ಅನುಸರಿಸಬಲ್ಲರು. ಶಿಖೆಯನ್ನು ತೆಗೆಸಿ ಪಾಶ್ಚಿಮಾತ್ಯರಂತೆ ಕೂದಲು ಬೆಳೆಸಿಕೊಂಡ ಮಾತ್ರಕ್ಕೆ ಒಬ್ಬ ಬ್ರಾಹ್ಮಣನನ್ನು ಜನರು ನಾಸ್ತಿಕ ಅಥವಾ ಅವೈದಿಕನೆಂದು ತಿಳಿಯುವದಿಲ್ಲ. ಆದರೆ ರಿಲಿಜನ್ನಿನಲ್ಲಿ ಬೆಳೆದವರಿಗೆ ಇಂತಹ ಆಚರಣೆಗಳು ಆ ರಿಲಿಜನ್ನಿನ ನಂಬಿಕೆಗಳ ಅನುಷ್ಠಾನವಾಗಿ ಬಂದಿರುತ್ತವೆ. ಆದ್ದರಿಂದ ಸಂಪ್ರದಾಯದ ಜನರಂತೆ, ರಿಲಿಜನ್ನಿನ ಜನರು ಸುಲಭದಲ್ಲಿ ಈ ಆಚರಣೆಗಳನ್ನು ತ್ಯಜಿಸಲಾರರು. ಹಾಗೆ ಒಂದು ವೇಳೆ ಇಂಥ ಆಚರಣೆಗಳನ್ನು ತ್ಯಜಿಸಿದರೆ ಆ ಪ್ರಕ್ರಿಯೆಯನ್ನು ರಿಲಿಜನ್ನಿನ ನಂಬಿಕೆಗಳನ್ನೇ ತ್ಯಜಿಸುವದು ಎಂದೇ ಅರ್ಥೈಸಲಾಗುತ್ತದೆ.

ಸ್ಥಳೀಯ ಸಂಸ್ಕೃತಿಗಳ ಜನರು ಸಮವಸ್ತ್ರದ ನೀತಿಯನ್ನು ಮಕ್ಕಳಿಗೆ ವಿಧಿಸಿರುವ ಶಿಸ್ತಿನ ಆಚರಣೆ ಅಥವಾ ಆ ಶಾಲೆ ತನ್ನ ಮಕ್ಕಳನ್ನು ಗುರುತಿಸಲು ಹಾಕಿಕೊಂಡ ನಿಯಮ ಎಂದಷ್ಟೇ ಪರಿಗಣಿಸುತ್ತಾರೆ. ಆದ್ದರಿಂದ ಈ ಜನರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಸೇರಿಸಲು ಹಿಂಜರಿಯುವದಿಲ್ಲ. ತಮ್ಮ ಹೆಣ್ಣುಮಕ್ಕಳ ತಲೆಗೆ ಸ್ಕಾರ್ಫ್ ಸುತ್ತಿ ಇಸ್ಲಾಮಿಕ್ ಶಾಲೆಗಳಿಗೆ ಕಳಿಸುವದು ಈ ಜನರಿಗೆ ದೊಡ್ಡ ವಿಷಯವೇ ಅಲ್ಲ. ಶಾಲೆಗಳಲ್ಲಿ ಸಮವಸ್ತ್ರವನ್ನು ವಿಧಿಸುವ ಕ್ರಿಯೆಯು ಭಾರತದಲ್ಲಿರುವ ಕ್ರಿಶ್ಚಿಯನ್ ಅಥವಾ ಮುಸ್ಲಿಮರಿಗೂ ಹೆಚ್ಚು ಸಮಸ್ಯೆಯಾಗಿ ಕಾಡಿಲ್ಲ. ಏಕೆಂದರೆ ಪಾಲಕರು ತಮಗಿಷ್ಟವಾದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಮೊದಲ ಹತ್ತು ವರ್ಷಗಳ ಸಾಮಾನ್ಯ ಶಿಕ್ಷಣವನ್ನು ಕೊಡಿಸುವ ವ್ಯವಸ್ಥೆ ನಮ್ಮಲ್ಲಿದೆ. ಆಯಾ ನಂಬಿಕೆಗಳನ್ನನುಸರಿಸುವ ಪಾಲಕರು ಆ ನಂಬಿಕೆಗಳನ್ನೇ ಪುರಸ್ಕರಿಸುವ ಸಂಸ್ಥೆಗಳ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಬಹುದು. ಇಲ್ಲವೇ ತಮ್ಮ ನಂಬಿಕೆಗಳನ್ನು ಒಪ್ಪದ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿದರೂ ಕೂಡ ತತ್ಕಾಲಕ್ಕೆ ಅವರ ನಿಯಮವನ್ನು ಸಹಿಸಿಕೊಳ್ಳಬಹುದು. ಸರಕಾರಿ ಶಾಲೆಗಳು ಸಮವಸ್ತ್ರವನ್ನು ಬೋಧಿಸುತ್ತವಾದರೂ ಮುಸ್ಲಿಂ, ಸಿಕ್ಖ್ ಮುಂತಾದ ಅಲ್ಪಸಂಖ್ಯಾತರಿಗೆ ವಿನಾಯಿತಿಯನ್ನು ನೀಡುತ್ತದೆ. ಸರಕಾರಿ ಉರ್ದು ಶಾಲೆಗಳು ಬೇರೆ ಸರಕಾರಿ ಶಾಲೆಗಳಿಗಿಂತ ಬೇರೆಯದೇ ಸಮವಸ್ತ್ರವನ್ನು ಹೊಂದಿವೆ.

ಆದರೆ ಈ ಸಮವಸ್ತ್ರವನ್ನು ಕಾಲೇಜುಗಳಿಗೆ ಅನ್ವಯಿಸಿದಾಗ ಏಕಾಏಕಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು ತಮಗೆ ಆಸಕ್ತಿಯಿರುವ ವಿಷಯಗಳ ಆಧಾರದ ಮೇಲೆ ಕಾಲೇಜುಗಳನ್ನು ಆಯ್ದುಕೊಂಡಿರುತ್ತಾರೆ. ಮೆಕ್ಯಾನಿಕಲ್ ಕಲಿಯಲು ಬಯಸುವ ಹುಡುಗ ಆ ವಿಷಯದಲ್ಲಿ ನುರಿತ ಪ್ರಾಧ್ಯಾಪಕರಿರುವ ಅಥವಾ ಉತ್ತಮ ಪ್ರಯೋಗಾಲಯದ ಸೌಲಭ್ಯವಿರುವ ಕಾಲೇಜನ್ನು ಆಯ್ದುಕೊಳ್ಳುತ್ತಾನೆಯೇ ಹೊರತು ನಂಬಿಕೆಯ ಆಧಾರದ ಮೇಲೆ ಕಾಲೇಜನ್ನು ಆಯ್ದುಕೊಳ್ಳುವದಿಲ್ಲ. ಒಳ್ಳೆಯ ಎಂಜಿನಿಯರಿಂಗ್ ರಾಂಕ್ ಪಡೆದ, ಹುಡುಗನೊಬ್ಬ ತಾನು ಮುಸ್ಲಿಂ ಎಂಬ ಕಾರಣಕ್ಕೆ ಭಟ್ಕಳದ ಅಂಜುಮನ್ ಕಾಲೇಜನ್ನು ಸೇರಿಕೊಳ್ಳುವದಿಲ್ಲ. ಬದಲಿಗೆ ಆತ ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಸೀಟು ಗಳಿಸಲು ಯತ್ನಿಸುತ್ತಿರುತ್ತಾನೆ. ಹೀಗಾಗಿ ಕಾಲೇಜಿನಲ್ಲಿ ಬೇರೆ ಬೇರೆ ನಂಬಿಕೆಯ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಒಟ್ಟಿಗೇ ಸೇರಿ ಓದಬೇಕಾಗಿರುವದು ಅನಿವಾರ್ಯ. ಹೀಗೆ ಕಲಿಯಲು ಬರುವ ಹುಡುಗರು ತಮ್ಮೆಲ್ಲ ನಂಬಿಕೆಗಳನ್ನು ಹಿಂದಿಟ್ಟು ತಮ್ಮ ಸಹಪಾಠಿಗಳೊಡನೆ ಎಂದೂ ಕರಗದ ಸ್ನೇಹವೊಂದನ್ನು ಸಂಪಾದಿಸಿಕೊಳ್ಳುತ್ತಾರೆ. ಶಿಕ್ಷಣ ಸಂಸ್ಥೆಗಳು ಈ ಸ್ನೇಹಕ್ಕೆ ಯಾವುದೇ ಭಂಗ ತರದಂತೆ ನಿಯಮಗಳನ್ನು ರೂಪಿಸಬೇಕಾದ ಗುರುತರ ಜವಾಬ್ದಾರಿಯನ್ನು ಹೊತ್ತಿರುತ್ತವೆ.

ಇದರ ಜೊತೆಗೆ ಮಕ್ಕಳು ಪ್ರಬುದ್ಧ ವಯಸ್ಸಿಗೆ ಬರುತ್ತಿದ್ದಂತೆ ಪಾಲಕರು ಪರಂಪರಾಗತವಾಗಿ ಬಂದ ತಮ್ಮ ನಂಬಿಕೆಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ಇಸ್ಲಾಮಿನಲ್ಲಿ ಹೆಣ್ಣುಮಕ್ಕಳು ಚಿಕ್ಕವರಿದ್ದಾಗ ಅಷ್ಟೇನೂ ಕಡ್ಡಾಯವಾಗಿರದ ಸ್ಕಾರ್ಫ್ ಅಥವಾ ಬುರ್ಕಾ ಅವರು ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಕಡ್ಡಾಯವಾಗುತ್ತದೆ. ಹುಡುಗರಿಗೆ ಗಡ್ಡ ಬಿಡುವದು, ಟೋಪಿ ಧರಿಸುವದು ಕಡ್ಡಾಯವಾಗುತ್ತದೆ. ಸ್ಥಳೀಯ ಸಂಸ್ಕೃತಿಗಳನ್ನು ಪಾಲಿಸುವ ಪಾಲಕರೂ ಕೂಡ ತಮ್ಮ ಹೆಣ್ಣು ಮಕ್ಕಳಿಗೆ ಬಟ್ಟೆಯ ವಿಷಯದಲ್ಲಿ ಅಲ್ಪ-ಸ್ವಲ್ಪ ವಿಧಿನಿಷೇಧಗಳನ್ನು ಹಾಕುವದು ಕಂಡುಬರುತ್ತದೆ. ಬೆಳೆದ ಮಕ್ಕಳೂ ಕೂಡ ತಮ್ಮ ಹಿರಿಯರ ನಂಬಿಕೆಗಳನ್ನು ಒಪ್ಪಿಕೊಂಡು ಅದರಂತೆಯೇ ವರ್ತಿಸುವದೂ ಕೂಡ ಅಷ್ಟೇ ಸಹಜ. ಹೀಗಾಗಿ ಇಂಜಿನಿಯರಿಂಗ್ ಕಲಿಯುವ ಮುಸ್ಲಿಂ ಹುಡುಗಿ ತನ್ನ ರಿಲಿಜನ್ನಿನ ವಸ್ತ್ರಸಂಹಿತೆಯನ್ನು ಪಾಲಿಸಬೇಕೆಂದು ಬಯಸುವದು ಸಹಜ. ಅಥವಾ ಆ ವಸ್ತ್ರಸಂಹಿತೆ ಆಕೆಗೆ ಇಷ್ಟವಿಲ್ಲದೆ, ಪಾಲಕರ ಒತ್ತಾಯದಿಂದಲೂ ಹಾಕುತ್ತಿರಬಹುದು. ಸ್ಥಳೀಯ ಸಂಸ್ಕೃತಿಗಳ ಹುಡುಗಿಯರು ಯಾವೆಲ್ಲ ಬಟ್ಟೆಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೋ ಅವುಗಳಲ್ಲಿ ಹಲವನ್ನು ತೊಡಲು ಅವರ ಪಾಲಕರು ಒಪ್ಪಿಕೊಳ್ಳಬಹುದು ಮತ್ತು ಕೆಲವನ್ನು ತೊಡಲು ಆಕ್ಷೇಪಿಸಬಹುದು. ಅಥವಾ ಅ ಹುಡುಗಿಯರೇ ಸ್ವತಃ ಇಚ್ಛೆಯಿಂದ ತಮಗಿಷ್ಟವಾದ ವಸ್ತ್ರಸಂಹಿತೆಯನ್ನು ಪಾಲಿಸುವಂತೆ ಯೋಚಿಸಬಹುದು. ಏನೇ ಆದರೂ ಅದು ಅವರ ವೈಯಕ್ತಿಕ ಅಥವಾ ಅವರ ಪಾಲಕರಿಗೆ ಸಂಬಂಧಪಟ್ಟ ವಿಷಯವಾಗಿರುತ್ತದೆ.

ಕಾಲೇಜುಗಳಲ್ಲಿ ಕಲಿಯುವಾಗ ವಿದ್ಯಾರ್ಥಿಗಳು ಹದಿನೆಂಟು ತುಂಬಿದ ಪ್ರೌಢರಾಗಿರುತ್ತಾರೆ. ಹೀಗಾಗಿ ಸಂವಿಧಾನವನ್ನು ಒಪ್ಪಿಕೊಂಡ ಶಿಕ್ಷಣ ಸಂಸ್ಥೆಗಳು ಅವರ ಭಾವನೆಗಳನ್ನು ವೈಯಕ್ತಿಕ ಸ್ವಾತಂತ್ರ್ಯವೆಂದೇ ಪರಿಗಣಿಸಬೇಕಾಗುತ್ತದೆ. ಹದಿನೆಂಟು ದಾಟಿದ ವಿದ್ಯಾರ್ಥಿಗಳ ವಸ್ತ್ರದ ಆಯ್ಕೆಯನ್ನು ಅವರ ಪಾಲಕರು ಅಥವಾ ತೀರ ಹತ್ತಿರದ ಸಂಬಂಧಿಕರು ಒಂದು ಹಂತದ ಮಟ್ಟಿಗೆ ಆಕ್ಷೇಪಿಸಬಹುದು ಅಷ್ಟೇ. ಆದರೆ ಶಿಕ್ಷಣ ಸಂಸ್ಥೆಗಳು ಸಮವಸ್ತ್ರವನ್ನು ಅನುಷ್ಠಾನ ಮಾಡಲು ಹೊರಟಾಗ ಸಮಸ್ಯೆಗಳು ಉದ್ಭವಿಸುತ್ತವೆ. ಈಗ ನಮ್ಮ ಕಾಲೇಜುಗಳಲ್ಲಿ ಇದೇ ಸಮಸ್ಯೆಯಾಗಿದೆ. ಮುಸ್ಲಿಂ ಹುಡುಗಿಯರು ಬುರ್ಕಾ ತ್ಯಜಿಸಲು ಒಪ್ಪದಿದ್ದಾಗ ಪ್ರತಿಭಟನಾತ್ಮಕವಾಗಿ ಸ್ಥಳೀಯ ಸಂಸ್ಕೃತಿಗಳ ಹುಡುಗಿಯರು ಕೇಸರಿ ಶಾಲು ಹೊದ್ದು ಬರಲಾರಂಭಿಸುತ್ತಾರೆ. ಮುಸ್ಲಿಂ ಹುಡುಗರು ಟೋಪಿ ತ್ಯಜಿಸಲು ಒಪ್ಪದಿದ್ದಾಗ ಸ್ಥಳೀಯ ಸಂಸ್ಕೃತಿಗಳ ಹುಡುಗರು ಪೇಟ ಸುತ್ತಿಕೊಂಡು ಬರುತ್ತಾರೆ. ಕೇಸರಿ ಶಾಲು, ಪೇಟಗಳು ಈ ಸ್ಥಳೀಯ ಸಂಸ್ಕೃತಿಗಳ ವಿದ್ಯಾರ್ಥಿಗಳಿಗೆ ಕಡ್ಡಾಯವೇನೂ ಅಲ್ಲ. ಆದರೆ ಅವರು ಪ್ರತಿಭಟನೆಗೆ ಈ ಸಂಸ್ಕೃತಿಗಳ ಜನರು ಬಳಸುವ ವಸ್ತ್ರಗಳನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತಾರೆ ಅಷ್ಟೇ.

ಇದಕ್ಕೆ ಪ್ರಮುಖ ಕಾರಣ ವಿದ್ಯಾರ್ಥಿಗಳು ಸಮವಸ್ತ್ರದಂಥ ನೀತಿಯನ್ನು ಸಮಾನತೆಯ ಪರಿಕಲ್ಪನೆಯ ಅನುಷ್ಠಾನವನ್ನಾಗಿ ನೋಡುವದಿಲ್ಲ. ಆದ್ದರಿಂದ ಸ್ಥಳೀಯ ಸಂಸ್ಕೃತಿಗಳ ವಿದ್ಯಾರ್ಥಿಗಳು “ಮುಸ್ಲಿಮರು ಈ ಸಮಾನತೆಯ ಪರಿಕಲ್ಪನೆಯನ್ನು ಒಪ್ಪಲಿ, ಬಿಡಲಿ, ನಾವು ಮಾತ್ರ ಒಪ್ಪಿ ಸಮವಸ್ತ್ರವನ್ನು ಹಾಕೋಣ” ಎಂದು ಯೋಚಿಸುವದಿಲ್ಲ. ಸಮಾನತೆಯ ಅನುಷ್ಠಾನಕ್ಕಿಂತ, ಇಸ್ಲಾಮಿನ ವಿದ್ಯಾರ್ಥಿಗಳು ಈ ನಿಯಮವನ್ನು ಪಾಲಿಸದಿರುವದನ್ನು ಮತ್ತು ಶಿಕ್ಷಣ ಸಂಸ್ಥೆಗಳು ಇವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವದನ್ನು ಪ್ರತಿಭಟಿಸುವದೇ ಈ ವಿದ್ಯಾರ್ಥಿಗಳಿಗೆ ಹೆಚ್ಚು ಮಹತ್ವವಾಗಿಬಿಡುತ್ತದೆ. ಏಕೆಂದರೆ ಒಂದು ವಾತಾವರಣದಲ್ಲಿ ಇರುವ ವಿಶಿಷ್ಟವಾದ ವಸ್ತ್ರಸಂಹಿತೆಯ ಆಚರಣೆಯನ್ನು ಒಪ್ಪಿಕೊಳ್ಳುವಾಗ ಸಂಪ್ರದಾಯಗಳ ಜನರಿಗೆ ಯಾವ ಸಮಸ್ಯೆಯೂ ಇಲ್ಲ. ಅವರು ಆ ಆಚರಣೆಗಳನ್ನು ಐಡಿಯಾಲಜಿಯ ಅನುಷ್ಠಾನದೊಂದಿಗೆ ಸಮೀಕರಿಸುವದಿಲ್ಲವಾದ್ದರಿಂದ ಅವರಿಗೆ ಈ ಸಮಸ್ಯೆ ಇಲ್ಲ. ಆದರೆ ಅವರು ಇದೇ ವರ್ತನೆಯನ್ನು ಇಸ್ಲಾಂ ಮತ್ತಿತರ ರಿಲಿಜನ್ನಿನ ಜನರಿಂದಲೂ ಅಪೇಕ್ಷಿಸುತ್ತಾರೆ. ಅ ಆಚರಣೆಯನ್ನು ಮುಸ್ಲಿಂ ವಿದ್ಯಾರ್ಥಿಗಳು ಪಾಲಿಸದಿದ್ದಾಗ ಅವರ ಮೂಲಭೂತವಾದವನ್ನು ಸ್ಥಳೀಯ ಸಂಸ್ಕೃತಿಯ ವಿದ್ಯಾರ್ಥಿಗಳು ವಿರೋಧಿಸುತ್ತಾರೆ, ಶಿಕ್ಷಣ ಸಂಸ್ಥೆಗಳು ಅಂತಹ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಬಿಟ್ಟರೆ ಸ್ಥಳೀಯ ಸಂಸ್ಕೃತಿಯ ವಿದ್ಯಾರ್ಥಿಗಳಿಗೆ ಅದು ಸಹಜವಾಗಿಯೇ ಅದು ಅಲ್ಪಸಂಖ್ಯಾತರ ತುಷ್ಟೀಕರಣವಾಗಿ ಕಂಡು ಬರುತ್ತದೆ. ಹೀಗಾಗಿ ಇವೆರಡನ್ನೂ ಪ್ರತಿಭಟಿಸುವದು ಅವರಿಗೆ ಅನಿವಾರ್ಯವಾಗುತ್ತದೆ. ಹೀಗೆ ತರಗತಿಯೊಂದರ ವಿದ್ಯಾರ್ಥಿಗಳಲ್ಲಿಯೇ ಒಡಕು ಮೂಡಿ ಸಮಸ್ಯೆಗಳು ಸೃಷ್ಟಿಯಾಗುತ್ತ ಹೋಗುತ್ತವೆ. ಸಮಾನತೆಯನ್ನು ಸಾಧಿಸಬೇಕಾಗಿದ್ದ ಪ್ರಯೋಗವೊಂದು, ವೈಯಕ್ತಿಕ ನಂಬಿಕೆಗಳನ್ನೆಲ್ಲ ಬದಿಗಿಟ್ಟು ಸಹಜವಾಗಿಯೇ ಬೆಳೆದಿದ್ದ ಗೆಳೆತನವನ್ನು ಒಡೆಯುತ್ತ ಬರುತ್ತದೆ. ಹೆಚ್ಚಿನ ಅಸಮಾನತೆಯನ್ನು ಮತ್ತು ಮೂಲಭೂತವಾದವನ್ನು ಸೃಷ್ಟಿಸುತ್ತದೆ.

ಪಾಶ್ಚಿಮಾತ್ಯ ಬುದ್ಧಿಜೀವಿಗಳು ಮತ್ತು ಭಾರತದ ಬಲಪಂಥೀಯರು ಈ ಸಮಸ್ಯೆಗೆ ಇಸ್ಲಾಮಿನ ಮೂಲ ರಚನೆಯೇ ಕಾರಣ ಎಂದು ಅಭಿಪ್ರಾಯ ಪಡುತ್ತಾರೆ. ಕ್ರಿಶ್ಚಿಯನ್ ರಿಲಿಜನ್ನು ಪ್ರೊಟೆಸ್ಟಂಟ್ ಸುಧಾರಣೆಗಳ ನಂತರ ಮೂಲಭೂತವಾದದಿಂದ ಹೊರಬಂದು ಪ್ರೈವೇಟ್ ಮತ್ತು ಪಬ್ಲಿಕ್ ವಲಯಗಳನ್ನು ಗುರುತಿಸಿಕೊಂಡಂತೆ ಇಸ್ಲಾಮಿನಲ್ಲಿ ಕೂಡ ಸುಧಾರಣೆಗಳಾಗಾಬೇಕು ಎಂದು ಕೆಲವು ಪ್ರಗತಿಪರ ಮುಸ್ಲಿಮರು ಅಭಿಪ್ರಾಯ ಪಡುತ್ತಾರೆ. ಪ್ರೊಟೆಸ್ಟಂಟ್ ಚಳುವಳಿಯು ಹಾಕಿಕೊಟ್ಟ ಸಮಾನತೆ, ಸಾರ್ವಜನಿಕ ಮತ್ತು ವೈಯಕ್ತಿಕ ವಲಯಗಳ ವಿಂಗಡೆನೆಗೆ ಇಸ್ಲಾಂ ಹೊಂದಿಕೊಳ್ಳುತ್ತಿಲ್ಲವೆನ್ನುವದು ಅವರ ಆರೋಪ. ಇಂದು ಸಮಾಜವಿಜ್ಞಾನದಲ್ಲಿ ಕಲಿಸಲಾಗುವ, ಪ್ರೊಟೆಸ್ಟಂಟ್ ಚಳುವಳಿಯಿಂದ ಬಂದಿರುವ ಸಮಾನತೆಯ ಐಡಿಯಾಲಜಿಗೆ ಇಸ್ಲಾಮನ್ನು ಹೊಂದಿಸಿದರೆ ಸಮಾಜದಲ್ಲಿ ಹರಡುತ್ತಿರುವ ಅಶಾಂತಿಯನ್ನು ಕಡಿಮೆ ಮಾಡಬಹುದು ಎಂಬುದು ಅವರ ಭಾವನೆ. ಆದರೆ ಇಂತಹ ಎಲ್ಲ ಸುಧಾರಣೆಗಳನ್ನು ಮುಸ್ಲಿಮರು ಇಸ್ಲಾಮಿನ ನಂಬಿಕೆಗಳ ಸಡಲಿಕೆ ಎಂದೇ ಭಾವಿಸುವದರಿಂದ ಅವರು ಒಪ್ಪಿಕೊಳ್ಳುವದಿಲ್ಲ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಭಾರತದಲ್ಲಿದ್ದ ಈ ಹಿಂದಿನ ತಲೆಮಾರಿನ ಮುಸ್ಲಿಮರು ಸ್ಥಳೀಯ ಸಂಸ್ಕೃತಿಗಳ ಜನರಂತೆ ಇಸ್ಲಾಂ ಆಚರಣೆಗಳನ್ನು ಅವರ ನಂಬಿಕೆಗಳ ಅನುಷ್ಠಾನವೆಂದು ಭಾವಿಸುತ್ತಿರಲಿಲ್ಲ. ಅವರು ತಮ್ಮನ್ನು ತಾವು ಒಂದು ಜಾತಿ ಎಂದು ತಿಳಿದುಕೊಂಡಿದ್ದರು. ಅಲ್ಲದೇ ಆ ಮುಸ್ಲಿಮರಲ್ಲಿಯೇ ಕೆಲವು ಉಪಜಾತಿಗಳನ್ನು ಅವರು ಸೃಷ್ಟಿಸಿಕೊಂಡಿದ್ದರು. ಅವರು ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಬುರ್ಕಾ ತೊಡುವ, ಗಡ್ಡ ಬಿಡುವ ಹಾಗೂ ಟೋಪಿ ಹಾಕುವ  ಆಚರಣೆಗಳನ್ನು ಕುರಾನಿನ ನಂಬಿಕೆಯ ಅನುಷ್ಠಾನವೆಂದು ತಿಳಿಯುತ್ತಿರಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಬ್ರಿಟಿಷರ ಕಾಲದಲ್ಲಿ ನಡೆದ ಜನಗಣತಿಯಲ್ಲಿ ಮುಸ್ಲಿಮರು ತಮ್ಮನ್ನು ತಾವು ಹಿಂದೂ ಮಹಮ್ಮಡನ್ ಎಂದು ಗುರುತಿಸಿಕೊಂಡಿದ್ದರು. ಹೀಗಾಗಿ ಈ ಹಿಂದಿನ ಕಾಶ್ಮೀರಿ ಮುಸ್ಲಿಂ ಹುಡುಗಿಯರು ಸ್ವಚ್ಛಂದವಾಗಿ ಕೆಂಪುಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು. ಹಿಂದುಸ್ತಾನಿ ಸಂಗೀತವನ್ನು ಕಲಿಯುತ್ತಿದ್ದರು. ಕಥಕ್ ನೃತ್ಯಶೈಲಿಯನ್ನು ಪ್ರದರ್ಶಿಸುತ್ತಿದ್ದರು. ಕಲೋಪಾಸನೆಯನ್ನು ಕಲಾದೇವತೆಯಾದ ಸರಸ್ವತಿಯ ಪೂಜೆ ಎಂದು ಭಾವಿಸುತ್ತಿದ್ದರು. ಈಗಲೂ ನೀವು ಉಸ್ತಾದ್ ಜಾಕೀರ್ ಹುಸೇನ್ ಬಳಿ “ತಬಲಾದಲ್ಲಿ ನುಡಿಸಲ್ಪಡುವ ಶಬ್ದಗಳು ಎಲ್ಲಿಂದ ಬಂದವು?” ಎಂದು ಕೇಳಿದರೆ ಅವರು “ಶಿವನು ಡಮರನ್ನು ನುಡಿಸಿದಾಗ ಅದರಿಂದ ಹೊರಟ ನಾದದಿಂದ ಈ ಶಬ್ದಗಳು ಬಂದವು ಹಾಗೂ ಮೊದಲು ಬಾರಿಗೆ ಗಣೇಶನು ಢೋಲಕದಲ್ಲಿ ಅವುಗಳನ್ನು ಬಂಧಿಸಿಟ್ಟನು. ಅವುಗಳನ್ನೇ ನಾವಿಂದು ನುಡಿಸುತ್ತಿದ್ದೇವೆ.” ಎಂದು ಉತ್ತರಿಸುತ್ತಾರೆ.

ನಮ್ಮ ದೇಶದ ಬುದ್ಧಿಜೀವಿಗಳು ಮತ್ತು ಸಮಾಜವಿಜ್ಞಾನಿಗಳು ಜಾತಿ-ಉಪಜಾತಿಗಳಿಂದ ಕೂಡಿರುವ ಭಾರತೀಯ ಮುಸ್ಲಿಂ ಸಮುದಾಯಗಳನ್ನು ಸ್ಥಳೀಯ ಸಂಸ್ಕೃತಿಗಳು ಎಂದು ವ್ಯಾಖ್ಯಾನಿಸುವ ಬದಲು ಇಸ್ಲಾಮಿನ ಮೂಲ ಜೀವನಪದ್ಧತಿಯಿಂದ ದಾರಿ ತಪ್ಪಿರುವ ಸಮುದಾಯಗಳು ಎಂದು ವ್ಯಾಖ್ಯಾನಿಸಿದರು. ಅವರು ಪಾಲಿಸುವ ದರ್ಗಾ ಮತ್ತು ಸಮಾಧಿಯ ಪೂಜೆಗಳನ್ನು ಮೂಢನಂಬಿಕೆಗಳು ಎಂದು ವ್ಯಾಖ್ಯಾನಿಸಿದರು. ಹೀಗಾಗಿ ಸಮಾಜ ಸುಧಾರಕರೆಂದು ಬಿಂಬಿಸಿ, ವಹಾಬೀ ಐಡಿಯಾಲಜಿ ನಮ್ಮ ದೇಶಕ್ಕೆ ಬಂದಾಗ, ಬುದ್ಧಿಜೀವಿಗಳು ಅದನ್ನು ಇಸ್ಲಾಂ ಮೂಲಭೂತವಾದವೆಂದು ವಿರೋಧಿಸಲಿಲ್ಲ. ವಹಾಬೀ ಐಡಿಯಾಲಜಿಯಲ್ಲಿ ನಮ್ಮ ಮುಸ್ಲಿಮರಿಗೆ ಇಸ್ಲಾಂ ರಿಲಿಜನ್ನಿನ ಪರಿಚಯ ನೀಡಿ ಕುರಾನಿನ ಅನುಷ್ಠಾನವಾಗಿ ಆಚರಣೆಗಳನ್ನು ರೂಪಿಸಿಕೊಳ್ಳುವಂತೆ ಮದರಸಾಗಳಲ್ಲಿ ಕಲಿಸಲಾಯಿತು. ಕುರಾನ್-ಬಾಹಿರ ಆಚರಣೆಗಳನ್ನು ನಿಷೇಧಿಸಲಾಯಿತು. ಭಾರತದ ಸಂವಿಧಾನದ ಸೆಕ್ಯುಲರ್ ನೀತಿಯ ಅಲ್ಪಸಂಖ್ಯಾತರ ತುಷ್ಟೀಕರಣವಾಗಿ ಬದಲಾದಾಗ, ಅದಕ್ಕೆ ವಿರೋಧವಾಗಿ ಹಿಂದೂ ರಾಷ್ಟ್ರೀಯತೆಯ ಐಡಿಯಾಲಜಿ ಬೆಳೆಯಿತು. ಈ ಐಡಿಯಾಲಜಿಯು ಇಸ್ಲಾಮನ್ನು ಮತ್ತು ಮುಸ್ಲಿಂ ತುಷ್ಟೀಕರಣ ನೀತಿಯನ್ನು ಭಾರತೀಯ ಸಂಸ್ಕೃತಿಗೆ ಧಕ್ಕೆ ಎಂದು ಭಾವಿಸಿತು. ಇಸ್ಲಾಮಿನ ವಹಾಬೀ ಪ್ರಚಾರಕ್ಕೆ ಇದು ಇನ್ನಷ್ಟು ಬಲವನ್ನು ತಂದಿತು. ಮದರಸಾ ಮತ್ತು ವಹಾಬೀ ಪ್ರಚಾರವು ಇಷ್ಟೆಲ್ಲ ಮೂಲಭೂತವಾದವನ್ನು ಮುಸ್ಲಿಮರ ತಲೆಯಲ್ಲಿ ತುಂಬುತ್ತಿದ್ದರೂ ನಮ್ಮ ಬುದ್ಧಿಜೀವಿಗಳು ತುಟಿ ಪಿಟಕ್ ಎನ್ನಲಿಲ್ಲ. ಅವರು ಕೇವಲ ಹಿಂದೂ ರಾಷ್ಟ್ರೀಯತೆಯ ಐಡಿಯಾಲಜಿಯನ್ನಷ್ಟೇ ವಿರೋಧಿಸುತ್ತ ಬಂದರು.

ಭಾರತದ ಎಡಪಂಥೀಯ ಬುದ್ಧಿಜೀವಿಗಳ ಪಾಲಿಗೆ ಸಮವಸ್ತ್ರದ ಸಮಸ್ಯೆ ಬಿಸಿ ತುಪ್ಪದಂತಿರುವದರಿಂದ ಅವರು ಜಾಣ ಮೌನಕ್ಕೆ ಶರಣಾಗಿದ್ದಾರೆ. ರಿಲಿಜನ್ನಿನ ನಂಬಿಕೆಗಳನ್ನು ಬದಿಗಿಟ್ಟು ಸಮಾನತೆಯ ಐಡಿಯಾಲಜಿಯ ಅನುಷ್ಠಾನವಾದ ಸಮವಸ್ತ್ರವನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸಬೇಕೆಂಬುದೇ ಅವರ ಆಶಯವಾಗಿದ್ದರೂ ಅಲ್ಪಸಂಖ್ಯಾತರ ನಂಬಿಕೆಗಳನ್ನು ರಕ್ಷಿಸುವ ಸೆಕ್ಯುಲರ್ ನೀತಿಯನ್ನೂ ಅವರು ಒಪ್ಪುವದರಿಂದ ಯಾವ ನೀತಿಯನ್ನನುಸರಿಸಬೇಕೆಂಬ ಗೊಂದಲ ಅವರಲ್ಲಿದೆ. ಹೀಗಾಗಿ ಸದ್ಯಕ್ಕೆ ಅವರು ಕೇಸರಿ ಶಾಲು ಹೊದ್ದು ಬರುವ ವಿದ್ಯಾರ್ಥಿಗಳ ಪ್ರತಿಭಟನೆಯನ್ನಷ್ಟೇ ವಿರೋಧಿಸುತ್ತಿದ್ದಾರೆ. ಈ ರೀತಿಯ ಪ್ರತಿಭಟನೆಗಳು ಸಮಾಜದಲ್ಲಿ ಕಂದಕವನ್ನು ಹೆಚ್ಚಿಸುತ್ತದೆ ಎಂದು ವಾದಿಸುತ್ತಿದ್ದಾರೆ. ಸಮವಸ್ತ್ರದ ಪಾಲನೆಯಲ್ಲಿ ಹಿಂದೇಟು ಹಾಕುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳ ಕುರಿತು ಯಾವ ನಿಲುವು ತಾಳಬೇಕೆಂಬ ಗೊಂದಲದಲ್ಲಿರುವ ಈ ಬುದ್ಧಿಜೀವಿಗಳನ್ನು ಸದ್ಯಕ್ಕೆ ಕಡೆಗಣಿಸೋಣ.

ಈ ಸಮಸ್ಯೆ ಬಹುಸಂಖ್ಯಾತ ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿಯೂ ಇದೆ. ಅಲ್ಲಿನ ಕಾಲೇಜುಗಳಲ್ಲಿ ಸಮವಸ್ತ್ರವನ್ನು ಅನುಷ್ಠಾನ ಮಾಡಲು ಹೋದಾಗ ಅಲ್ಲೂ ಕೂಡ ಇದೇ ಸಮಸ್ಯೆ ಉದ್ಭವಿಸಿದೆ. ಈಗಂತೂ ವಿಶ್ವಾದ್ಯಂತ ಯಾವ ವಿದ್ಯಾರ್ಥಿಯೂ ಎಲ್ಲಿ ಬೇಕಾದರೂ ಕಲಿಯುವ ಸೌಲಭ್ಯವಿರುವದರಿಂದ, ಇಂದು ಕಾಲೇಜುಗಳು ಬಹುಸಂಸ್ಕೃತಿಗಳ ಆಗರವಾಗುತ್ತಿದೆ. ಹೀಗಾಗಿ ಪ್ರೊಟೆಸ್ಟಂಟ್ ಚಳುವಳಿಯಿಂದ ಬಂದಿರುವ ಸಮಾನತೆಯ ಪರಿಕಲ್ಪನೆಗೆ ಸರಿಹೊಂದದ ಸಂಸ್ಕೃತಿಗಳ ಆಚರಣೆಗಳನ್ನೆಲ್ಲ ನಿಷೇಧಿಸುವದರಲ್ಲಿ ಅರ್ಥವಿಲ್ಲ. ಏಕೆಂದರೆ ಸಮವಸ್ತ್ರಕ್ಕೆ ಸರಿಹೊಂದುವದಿಲ್ಲವೆಂದು ಸಿಕ್ಖರ ಪಗಡಿಯನ್ನು ನಿರ್ಬಂಧಿಸಬಹುದೇ? ಗೌಡರು ಅಥವಾ ಕೊಡವರು ತೊಡುವ ಪೇಟವನ್ನು ನಿರ್ಬಂಧಿಸಬಹುದೇ? ಮುಸ್ಲಿಮರು ಹಾಕುವ ಟೋಪಿಯನ್ನು ನಿರ್ಬಂಧಿಸಬಹುದೇ? ಬ್ರಾಹ್ಮಣರ ಶಿಖೆಯನ್ನು ನಿರ್ಬಂಧಿಸಬಹುದೇ? ಸಂಪ್ರದಾಯಗಳನ್ನು ವಿರೋಧಿಸುತ್ತ ಹೋದಂತೆಲ್ಲ ಅಲ್ಲಿನ ಜನರಿಂದ ಹೆಚ್ಚಿನ ಪ್ರತಿಭಟನೆಗಳು ಕಂಡುಬಂದಿವೆ. ಈ ಹಿಂದೆ ಕಾನ್ವೆಂಟ್ ಶಾಲೆಯೊಂದರಲ್ಲಿ ಹುಡುಗಿಯರಿಗೆ ಮತ್ತು ಶಿಕ್ಷಕಿಯರಿಗೆ ಹಣೆಯ ಮೇಲೆ ಬಿಂದಿಯನ್ನಿಡುವದನ್ನು ನಿಷೇಧಿಸಲಾಯಿತು. ಬಿಂದಿಯನ್ನು ಹಿಂದೂ ರಿಲಿಜನ್ನಿನ ಐಡೆಂಟಿಟಿಯೆಂದು ಭಾವಿಸಿದ್ದರಿಂದ, ಬಿಂದಿಯಿಡುವದು ಕಾನ್ವೆಂಟ್ ಶಾಲೆಯ ಐಡಿಯಾಲಜಿಗೆ ಅದು ವಿರುದ್ಧವಾಗಿತ್ತು. ಮದುವೆಯಾದ ಅಥವಾ ಕನ್ಯೆಯಾಗಿರುವ ಹೆಣ್ಣು ಖಾಲಿ ಹಣೆಯಲ್ಲಿರುವಂತಿಲ್ಲ ಎಂಬುದು ಸಂಪ್ರದಾಯದ ಹೆಣ್ಣುಮಕ್ಕಳ ನಂಬಿಕೆ. ಹೀಗಾಗಿ ಈ ನಿಯಮಕ್ಕೆ ಸಾಕಷ್ಟು ವಿರೋಧಗಳು ಕಂಡುಬಂದವು. ಆಗ ಕಲಿಸುವ ಶಿಕ್ಷಕಿಯರ ಅಗತ್ಯತೆ ಮತ್ತು ವಿದ್ಯಾರ್ಥಿಗಳ ದೇಣಿಗೆಗಳ ಅಗತ್ಯತೆಯನ್ನು ಮನಗಂಡು ಸ್ಥಳೀಯ ಸಂಸ್ಕೃತಿಗಳ ಆಚರಣೆಗಳನ್ನು ಸಹಿಸಿಕೊಳ್ಳುವ ಪ್ರವೃತ್ತಿಯನ್ನು ಕಾನ್ವೆಂಟ್ ಶಾಲೆಗಳು ರೂಢಿಸಿಕೊಂಡವು.

ಈ ಎಲ್ಲ ಪ್ರಕರಣಗಳಿಂದ ನಾವು ತಿಳಿದುಕೊಳ್ಳಬೇಕಿರುವದೇನು? ಪ್ರೊಟೆಸ್ಟಂಟ್ ಚಳುವಳಿಯಲ್ಲಿ ಕ್ರಿಶ್ಚಿಯನ್ ಥಿಯಾಲಜಿಯ ಸೆಕ್ಯುಲರೀಕರಣಗೊಂಡು ಹುಟ್ಟಿರುವ ಸಮಾನತೆಯ ಐಡಿಯಾಲಜಿಯೇ ನಮ್ಮ ಸಮಾಜಕ್ಕೆ ಅಥವಾ ಬದಲಾದ ಇಂದಿನ ಪಶ್ಚಿಮ ಸಮಾಜಗಳಿಗೆ ಅಪ್ರಸ್ತುತವಾಗಿರಬಹುದೇ ಎಂಬ ಚರ್ಚೆಯನ್ನು ಇಂದು ನಾವು ಮಾಡಬೇಕಿದೆ. ಈ ಪ್ರೊಟೆಸ್ಟಂಟರ ಸಮಾನತೆಯ ಪರಿಕಲ್ಪನೆ ಇಟ್ಟುಕೊಂಡು ಇಂದು ನಾವು ಮಾಡುತ್ತಿರುವ ಚರ್ಚೆಗಳು ಕ್ರಿಶ್ಚಿಯನ್ ಚರ್ಚೆಗಳೇ ಹೊರತು ವೈಚಾರಿಕ ಚರ್ಚೆಗಳಲ್ಲ. ಕ್ರಿಶ್ಚಿಯನ್ ಪರಿಕಲ್ಪನೆಗಳನ್ನೇ ಸೆಕ್ಯುಲರೀಕರಿಸಿಕೊಂಡು ಇವುಗಳ ಆಧಾರದಲ್ಲಿ ಚರ್ಚಿಸುವದನ್ನೇ ವೈಚಾರಿಕತೆ ಎಂದು ನಾವು ಭಾವಿಸಿದ್ದೇವೆ. ಈ ಐಡಿಯಾಲಜಿಯು ಪಶ್ಚಿಮದಿಂದ ಬಂದಿದ್ದು ಎಂಬ ಕಾರಣಕ್ಕಷ್ಟೇ ಅದನ್ನು ಪ್ರಶ್ನಿಸುತ್ತಿಲ್ಲ. ಏಕೆಂದರೆ ಪಶ್ಚಿಮದ ದೇಶಗಳು ನೀಡಿರುವ ಭಾಷೆ, ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ನಾವಿಂದು ನಮ್ಮಲ್ಲಿಯೂ ಅನ್ವಯಿಸಿಕೊಂಡಿದ್ದೇವೆ. ಆದರೆ ಈ ಪ್ರೊಟೆಸ್ಟಂಟಿನ ಸಾಮಾಜಿಕ ಸಮಾನತೆಯನ್ನು ವಿರೋಧಿಸಲು ಮುಖ್ಯ ಕಾರಣ ಆ ಐಡಿಯಾಲಜಿ ಇಲ್ಲಿ ಸಫಲತೆಯನ್ನು ಕಾಣುತ್ತಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಂತಹ ಸಮಾನತೆಯ ಅನುಷ್ಠಾನದ ಪ್ರಯತ್ನಗಳು ನಮ್ಮ ಸಮಾಜದಲ್ಲಿ ಮೂಲಭೂತವಾದವನ್ನು ಹೆಚ್ಚಿಸುತ್ತಿವೆ. ಆದ್ದರಿಂದ ಸಾಮಾಜಿಕ ಸಮಾನತೆಯ ಬದಲಿಗೆ ನಮ್ಮ ಸಮಾಜಕ್ಕೆ ಸರಿಯಾಗಿ ಅನ್ವಯವಾಗುವಂತಹ ಇನ್ನೊಂದು ಪರ್ಯಾಯ ಪರಿಕಲ್ಪನೆಯು ನಮಗೆ ಇಂದು ಅಗತ್ಯವಾಗಿದೆ.

ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಮೊದಲು ಇದು ನಮ್ಮ ದೇಶದಲ್ಲಿ ಹಿಂದೆಂದೂ ಇರದಿದ್ದ ಆದರೆ ನಮ್ಮದೇ ನೀತಿಗಳಿಂದ ಹೊಸದಾಗಿ ಸೃಷ್ಟಿಸಿಕೊಂಡಿರುವ ಸಮಸ್ಯೆ ಎಂಬುದನ್ನು ನಾವು ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ. ಸಾವಿರ ವರ್ಷಗಳಿಂದ ಸ್ಥಳೀಯ ಜನರು ಹಾಗೂ ಮುಸ್ಲಿಮರು ಅನ್ಯೋನ್ಯವಾಗಿ ಜೀವಿಸಲು ಪರಸ್ಪರ ಮಾಡಿಕೊಂಡಿದ್ದ ಹೊಂದಾಣಿಕೆಗಳು ಇಂದು ನಾಶವಾಗುತ್ತಿವೆ. ಅಲ್ಲದೇ ನಮ್ಮ ಸಮಾಜದಲ್ಲಿಯೂ ಕೂಡ ನಾವು ಸಾವಿರಾರು ವರ್ಷಗಳಿಂದ ಸಮಾನತೆಯನ್ನು ಒಂದು ಆದರ್ಶವಾಗಿಯೇ ಕಾಣುತ್ತ ಬಂದಿದ್ದೇವೆ. ಜಾತಿ ಮತಗಳ ಆಧಾರದಲ್ಲಿ ಭೇದವೆಣಿಸದಿರುವ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಆದರ್ಶಗಳನ್ನು ಪಾಲಿಸಬೇಕೆಂದು ಎಲ್ಲ ಪರಂಪರೆಗಳ ಆದರ್ಶ ಪುರುಷರು ಹೇಳುತ್ತ ಬಂದಿದ್ದಾರೆ. ಗುರುಕುಲದಲ್ಲಿ ರಾಜನ ಮಕ್ಕಳೂ, ಸಾಮಾನ್ಯ ಪ್ರಜೆಯ ಮಕ್ಕಳೂ ಒಂದೇ ರೀತಿಯ ಜೀವನ ನಡೆಸುತ್ತಿದ್ದರು ಎಂಬ ಕತೆಗಳನ್ನೆಲ್ಲ ಓದುತ್ತೇವೆ.

ಅಂದರೆ ನಮ್ಮ ದೇಶದಲ್ಲಿ ಸಮಾನತೆಯ ಕುರಿತು ನಮ್ಮದೇ ಆದ ಸ್ವಂತ ಕಲ್ಪನೆಯೊಂದಿದೆ ಹಾಗೊ ಅದು ಈಗಿನ ಪ್ರೊಟೆಸ್ಟಂಟರ ಐಡಿಯಾಲಜಿಗಿಂತ ಭಿನ್ನವಾಗಿದೆ ಎಂದು ಹೇಳಬಹುದು. ನಮ್ಮ ಪೂರ್ವಜರು ಕಲಿಸುವ “ಎಲ್ಲರನ್ನೂ ಸಮಾನವಾಗಿ ಕಾಣಬೇಕು” ಎಂಬ ಸಮಾನತೆಯ ಪರಿಕಲ್ಪನೆಯು ಈ ಪ್ರೊಟೆಸ್ಟಂಟ್ ಐಡಿಯಾಲಜಿಯ “ಎಲ್ಲರೂ ಸಮಾನರು” ಎನ್ನುವ ಪರಿಕಲ್ಪನೆಗಿಂತ ವಿಭಿನ್ನವಾಗಿದೆ. ಇಂದು ನಮ್ಮ ಬುದ್ಧಿಜೀವಿಗಳು ಬುದ್ಧ ಬಸವಾದಿಯಾಗಿ ಯಾರನ್ನೆಲ್ಲ ಸಾಮಾಜಿಕ ಸಮಾನತೆಯ ಹರಿಕಾರರು ಎಂದು ಕರೆಯುತ್ತಾರೋ ಅವರ ಸಮಾನತೆಯ ಪರಿಕಲ್ಪನೆಗೆ ನಾವು ಪ್ರೊಟೆಸ್ಟಂಟರ ಅರ್ಥವನ್ನು ಇಟ್ಟುಕೊಂಡರೆ ಅಂತಹ ಸಾಧಕರ ಎಲ್ಲ ವಿಚಾರಗಳನ್ನು ಸಮಂಜಸವಾಗಿ ಅರ್ಥೈಸಲು ಸಾಧ್ಯವಿಲ್ಲ. ಉದಾಹರಣೆಗೆ ಬಸವಣ್ಣನವರ “ಜಾತಿವಿಡಿದು ಸೂತಕವನರಸುವೆ….ಜಾತಿಯಲ್ಲಿ ಅಧಿಕನೆಂಬೆ”, “ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ.” ಎಂಬ ವಚನಗಳನ್ನು ನಾವು ಪರಂಪರಾಗತವಾಗಿ ಷಟ್ಸ್ಥಲದ ಹಿನ್ನೆಲೆಯಲ್ಲಿ “ಲಿಂಗದೀಕ್ಷೆಗೆ ಒಳಗಾಗಿ ಶರಣನಾಗುವವನು ಎಲ್ಲರನ್ನೂ ಸಮಾನವಾಗಿ ಕಾಣುತ್ತಾನೆ ಮತ್ತು ಜಾತಿ-ಕುಲವೆಂದು ಭೇದ ಮಾಡುವದಿಲ್ಲ”, “ಭಿಕ್ಷಾನ್ನಕ್ಕೆ ಬಂದ ಶರಣರ ಜಾತಿಯನ್ನು ನೋಡದೇ ಭಕ್ತರು ಭಿಕ್ಷಾನ್ನ ನೀಡಬೇಕು.” ಎಂದು ಅರ್ಥೈಸುತ್ತ ಬಂದಿದ್ದೇವೆ. ಆದರೆ ಈ ವಾಕ್ಯಕ್ಕೆ ಪ್ರೊಟೆಸ್ಟಂಟರ ಸಮಾನತೆ ಇಟ್ಟು “ಜಾತಿಗಳು ಅಸಮಾನತೆಯ ಪ್ರತೀಕವಾದ್ದರಿಂದ ಈ ಜಾತಿಪದ್ಧತಿಯನ್ನು ನಾಶ ಮಾಡಬೇಕು” ಎಂದು ಈಗಿನ ಬುದ್ಧಿಜೀವಿಗಳಂತೆ ಅರ್ಥೈಸಿದರೆ ಬಸವಣ್ಣನವರ ಹಲವಾರು ವಚನಗಳು ಅರ್ಥವಿಲ್ಲದೇ ಹೋಗುತ್ತವೆ. “ಶಿವಪಥವಲ್ಲದವರೊಡನಾಡದಂತೆ, ಅನ್ಯಜಾತಿಯ ಸಂಗ ಮಾಡದಂತೆ, ಎನ್ನ ಪ್ರತಿಪಾಲಿಸು”, “ಎಂತಹವನಾದಡೇನು, ಲಿಂಗವ ಮುಟ್ಟದವನೆ ಕೀಳುಜಾತಿ”, “ಶಿವೋಪದೇಶವಿಲ್ಲದವರಲ್ಲಿಯದು ಶೂದ್ರಾನ್ನ”, “ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು ಆತನೇ ಹೊಲೆಯ” ಹೀಗೆ ಇನ್ನೂ ಹಲವಾರು ವಚನಗಳು ಪ್ರೊಟೆಸ್ಟಂಟರ “ಎಲ್ಲರೂ ಸಮಾನರು” ಎಂಬ ಕಲ್ಪನೆಯೊಂದಿಗೆ ಸರಿ ಹೊಂದದೇ ಹೋಗುತ್ತವೆ. ಬಸವಣ್ಣನವರ ವಚನಗಳಿಗೆ ಸಮರ್ಪಕವಾದ ವಿವರಣೆಯೊಂದು ಸಿಗಬೇಕಾದರೆ ಷಟ್ಸ್ಥಲದ ಹಿನ್ನೆಲೆಯಲ್ಲಿಯೇ ಅವುಗಳನ್ನು ಅರ್ಥೈಸಬೇಕಾಗುತ್ತದೆ. ಇದೇ ಮಾತು ಬುದ್ಧನ ಕೃತಿಗಳನ್ನು ಅವಲೋಕಿಸಿದಾಗಲೂ ಸಿದ್ಧವಾಗುತ್ತದೆ.

ಈ ಚಿಕ್ಕ ವಿಶ್ಲೇಷಣೆಯಿಂದ ತಿಳಿಯುವದೇನು? ಚರಿತ್ರೆಯಲ್ಲಿ ಆಗಿ ಹೋದ ಅನೇಕ ಆಧ್ಯಾತ್ಮಿಕ ಸಾಧಕರು ಸಮಾನತೆಯನ್ನು ಒಂದು ಆದರ್ಶವಾಗಿ ಬೋಧಿಸುವಾಗ ಅವರು ಆ ಸಮಾನತೆಯ ಕುರಿತು ಬೇರೆಯದೇ ಕಲ್ಪನೆಯನ್ನು ಹೊಂದಿದ್ದರು ಹಾಗೂ ಅದು ಇಂದಿನ ಪ್ರೊಟೆಸ್ಟೆಂಟರ ಸಾಮಾಜಿಕ ಸಮಾನತೆಗಿಂತ ಸಂಪೂರ್ಣ ಭಿನ್ನವಾದ ಪರಿಕಲ್ಪನೆಯಾಗಿತ್ತು ಎನ್ನುವದು ನಮಗಿಲ್ಲಿ ಅರ್ಥವಾಗುತ್ತದೆ. ಸಾವಿರಾರು ವರ್ಷಗಳಿಂದ ಸ್ಥಳೀಯ ಸಂಸ್ಕೃತಿಯ ಜನರಲ್ಲಿ ಮತ್ತು ಮುಸ್ಲಿಮರಲ್ಲಿ ಹೊಂದಾಣಿಕೆಯನ್ನು ಮೂಡಿಸಿ ಶಾಂತಿಯುತ ಸಮಾಜವನ್ನು ನಿರ್ಮಿಸುವಲ್ಲಿ ಸಮಾನತೆಯ ಕುರಿತು ನಮ್ಮಲ್ಲಿರುವ ಪರಂಪರಾಗತ ಪರಿಕಲ್ಪನೆಯು ಬಹುಶಃ ಮಹತ್ವದ ಪಾತ್ರವನ್ನು ವಹಿಸಿರಬಹುದು. ಹೀಗಾಗಿ ಒಬ್ಬನು ಜಾತಿ-ಕುಲಗಳ ಭೇದ ತೋರದೇ ಎಲ್ಲರನ್ನೂ ಸಮಾನವಾಗಿ ಕಾಣುವ ಅಭ್ಯಾಸ ಮಾಡುತ್ತ ಅದನ್ನು ಸಿದ್ಧಿಸಿಕೊಳ್ಳುವ ಪರಂಪರಾಗತ ಕ್ರಿಯೆಯನ್ನು ತಿಳಿದುಕೊಂಡು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆ ಕ್ರಿಯೆಯನ್ನು ಅಳವಡಿಸಿ, ಇಂದಿನ ಮಕ್ಕಳಲ್ಲಿ ಅದನ್ನು ರೂಢಿಸುವದು ಇಂದಿನ ಅಗತ್ಯ. ಈಗಿನ ಪ್ರೊಟೆಸ್ಟಂಟರ ಸಮಾನತೆಯ ಅನುಷ್ಠಾನದಿಂದ ನಮ್ಮಲ್ಲಿ ಹೊಸದಾಗಿ ಹುಟ್ಟುತ್ತಿರುವ ಸಮಸ್ಯೆಗಳಿಗೆ ನಮ್ಮ ಪರಂಪರಾಗತ ಸಮಾನತೆಯ ಪರಿಕಲ್ಪನೆಯು ಖಂಡಿತ ಅತ್ಯುತ್ತಮ ಪರಿಹಾರವನ್ನು ನೀಡಬಹುದು. “ಎಲ್ಲರೂ ಸಮಾನರು” ಎಂಬ ಐಡಿಯಾಲಜಿಯು ವಿಶ್ವದಲ್ಲಿ ವಿಫಲತೆಯನ್ನು ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಭಾರತವು ಪುರಾತನ ಕಾಲದಿಂದ ರೂಢಿಸಿಕೊಂಡು ಬಂದ “ಎಲ್ಲರನ್ನೂ ಸಮಾನವಾಗಿ ಕಾಣುವ ಸಿದ್ಧಿ” ಯ ಕ್ರಿಯೆಯು ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಉತ್ತಮ ಪರ್ಯಾಯ ಪರಿಕಲ್ಪನೆಯಾಗಬಹುದು. ಆಗ ಅದು ವಿಶ್ವಶಾಂತಿಯ ಸ್ಥಾಪನೆಗೆ ವಿಶ್ವಗುರುವಾದ ಭಾರತವು ಕೊಡುವ ಅತ್ಯಂತ ಅಮೂಲ್ಯ ಕೊಡುಗೆಯಾಗಿರುತ್ತದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments