ಶಿಕ್ಷಣ: ಗುರಿ ಭೀಮ, ಸಾಧಕ ಕುಚೇಲ!
– ಕಲ್ಗುಂಡಿ ನವೀನ್
ಇಂದು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಚರ್ಚೆಗಳು, ಪ್ರಯೋಗಗಳು ಇನ್ಯಾವುದೇ ಕ್ಷೇತ್ರದಲ್ಲಿ ನಡೆಯುತ್ತಿಲ್ಲ. ತೀರಾ ವಿರಳವಾಗಿದ್ದ ಓಪನ್ ಮಾದರಿ ಶಾಲೆಗಳು ಇಂದು ವಿಪುಲವಾಗಿವೆ. ಸರ್ಕಾರಿ ಶಾಲೆಗಳೂ ಅದರ ಕೆಲವು ಆಂಶಗಳನ್ನು “ಕಾಪಿ” ಮಾಡುತ್ತಿವೆ. ಇನ್ನು ಮಾಂಟೆಸ್ಸೊರಿ ಎಂಬ ಪದ್ಧತಿ (ಮಾರಿಯಾ ಮಾಂಟೆಸ್ಸೊರಿ ಎಂಬಾಕೆ ಚಾಲ್ತಿಗೆ ತಂದ ಶಿಕ್ಷಣ ಪದ್ಧತಿ) ಹೆಚ್ಚುಕಡಿಮೆ ಮನೆ ಮಾತಾಗಿದೆ. ಇದಲ್ಲದೆ, ಖಾಸಗಿ ನೆಲೆಯಲ್ಲಿ ಅನೇಕರು ತಾವೇ ಕಂಡರಿಸಿದ ಪದ್ಥತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಶಾಲೆ ಹೀಗೂ ಇರಬಲ್ಲುದೇ ಎಂದು ತಜ್ಞರೂ ಹುಬ್ಬೇರಿಸುವಂತೆ ಮಾಡಿದ್ದಾರೆ. “ಒಂದು ಇಡೀ ವರ್ಷ ನೀನು ಏನು ಬೇಕೋ ಮಾಡಿಕೋ, ನಿನಗಿಷ್ಟವಾದದ್ದನ್ನು ಕಲಿತುಕೋ” ಎಂದು ಶಾಲೆಯಲ್ಲಿ ಹೇಳುತ್ತಾರೆ ಎಂದರೆ ನಂಬುತ್ತೀರಾ? ಅದು ಆರೋಹಿ ಎಂಬ ಶಾಲೆ. ಶಿಕ್ಷಣದಲ್ಲಿ ಆಸಕ್ತಿ ಇರುವ ಎಲ್ಲರೂ ಒಮ್ಮೆ ಹೋಗಿ ನೋಡಿಯಾದರೂ ಬರಬೇಕಾದ ಶಾಲೆಯಿದು ( http://www.aarohilife.org ). ಪೂರ್ಣಪ್ರಮತಿ ಎಂಬ ವಿಶಿಷ್ಟ ಶಾಲೆಯಲ್ಲಿ ಪ್ರತಿ ವರ್ಷ ಶಿಕ್ಷಣ ಪದ್ಧತಿಗಳು ಹಾಗೂ ಕಲಿಕೆ ಹೇಗೆ ನಡೆಯುತ್ತದೆ ಎಂದು ವಿಶ್ಲೇಷಿಸಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಲೆಂದೇ ಪೂರ್ಣಪ್ರಮತಿ ವ್ಯಾಖ್ಯಾ ಎಂಬ ಹೆಸರಿನಲ್ಲಿ ವಿಚಾರ ಸಂಕಿರಣಗಳನ್ನು ನಡೆಸುತ್ತಾರೆ. ಅನೇಕ ದೃಷ್ಟಿಕೋನಗಳಿಂದ ಹಾಗೂ ಪ್ರಯೋಗಗಳಿಂದಾಗಿ ಗಮನಿಸುತ್ತಿರಬೇಕಾದ ಶಾಲೆ, ಪೂರ್ಣಪ್ರಮತಿ (http://purnapramati.in/) ಹ್ಞಾ ಹಾಗೆ “ನೀವು ನೋಡಲೆಂದು ಬರಲೇಬೇಡಿ. ಮಕ್ಕಳು ತಮಗಿಷ್ಟವಾದದ್ದನ್ನು ಮಾಡುತ್ತಿರುತ್ತಾರೆ. ನಿಮ್ಮ ಭೇಟಿ ಅವರನ್ನು ಡಿಸ್ಟರ್ಬ್ ಮಾಡುತ್ತದೆ” ಎನ್ನುವ ಮಣಿವೆಣ್ಣನ್ ಅವರ ಶಾಲೆಯೂ ಇದೆ! ಅಷ್ಟೇ ಅಲ್ಲ ಅಲ್ಲಿನ ಪದ್ಧತಿಗಳು ನಿರಂತರ ಚರ್ಚೆ, ಮಂಥನದ ಆಧಾರದಿಂದ ಬದಲಾಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆ ನೀಡಿರುವ ಸ್ವಾತಂತ್ರ್ಯವನ್ನು ಚೆನ್ನಾಗಿಯೇ ಬಳಸಿಕೊಂಡು ಮೆಚ್ಚಿ ತಲೆದೂಗುವಂತಹ ಪ್ರಯತ್ನಗಳು ಖಾಸಗಿ ನೆಲೆಯಲ್ಲಿ ನಡೆದಿದೆ. ಇದರ ನಡುವೆ ನಮ್ಮ ಶಿಷ್ಟ ಪದ್ಧತಿಯನ್ನೇ ಮುಂದುವರೆಸುತ್ತಿರುವ, ಆದರೆ ಆದರ್ಶ ಪ್ರಾಯವಾದ ಖಾಸಗಿ ಶಾಲೆಗಳಿವೆ. ಇಲ್ಲಿಯೂ “ಅಂಕವಲ್ಲ, ಗುಣ ಮುಖ್ಯ” ಎಂದು ಯೋಚಿಸುತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವ ಶಾಲೆಗಳಿವೆ. ಇದರ ಜೊತೆ ತನ್ನಷ್ಟಕ್ಕೆ ತಾನು ಬೇರೆ ಯಾವ ಗೊಡವೆಗೂ ಹೋಗದೆ ಮುಂದುವರೆಯುತ್ತಿರುವ ಸಿ ಬಿ ಎಸ್ ಇ ಇತ್ಯಾದಿ ಕೇಂದ್ರದ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಖಾಸಗಿ ಶಾಲೆಗಳಿವೆ. ಈ ಎಲ್ಲಕ್ಕಿಂತ ದೊಡ್ಡ, ಕೊರತೆ ಎಂಬ ಪದದ ಅರ್ಥವೇ ತಿಳಿಯದ ರಾಜವೈಭೋಗದ ಅಂತಾರಾಷ್ಟ್ರೀಯ ಶಾಲೆಗಳನ್ನು ಸದ್ಯದ ಚರ್ಚೆಯಿಂದ ದೂರ ಇಡೋಣ. ಮತ್ತಷ್ಟು ಓದು 
ಭಾರತದಲ್ಲೊಂದು ಸುಂಕದ ಬೇಲಿ
– ನವೀನ್ ನಾಯಕ್ ಕೊಪ್ಪ
ಸಾಮಾನ್ಯವಾಗಿ ಉಪ್ಪಿನ ಕುರಿತು ನಡೆದಿರುವ ಹೋರಾಟ ಎಂದರೆ ನಮಗೆ ನೆನಪಾಗುವುದು ಗಾಂಧಿಯವರ ನೇತೃತ್ವದಲ್ಲಿ ನಡೆದ ದಂಡಿ ಸತ್ಯಾಗ್ರಹ ಮಾತ್ರ. ಈ ಸತ್ಯಾಗ್ರಹವು ಸಬರಮತಿ ಆಶ್ರಮದಿಂದ ದಂಡಿಯವರೆಗೆ ಅಂದರೆ ಸರಿಸುಮಾರು ೨೪೦ ಮೈಲಿಗಳನ್ನು ಇಪ್ಪತೈದು ದಿನಗಳಲ್ಲಿ ಕಾಲ್ನಡಿಗೆ ಮುಖಾಂತರ ನಡೆಸಲಾಗಿತ್ತು. ‘ಉಪ್ಪಿನ ಮೇಲಿನ ಕರ’ ಎಂದು ಕೇಳಿದೊಡನೆ ನಮಗೆ ನೆನಪಾಗುವುದು ಇಷ್ಟೇ.
ಆದರೆ ‘ಭಾರತದಲ್ಲೊಂದು ಸುಂಕದ ಬೇಲಿ’ ಕೃತಿ ಓದುತ್ತಾ ಹೋದಂತೆ ಈ ಉಪ್ಪಿನ ಮೇಲೆ ಹೇರಿದ್ದ ತೆರಿಗೆಯ ಕಾರಣದಿಂದ ಬ್ರಿಟಿಷರು ನಡೆಸುತಿದ್ದ ಬರ್ಬರತೆ ಪ್ರಕಟವಾಗುತ್ತಾ ಹೋಗುತ್ತದೆ. ಉಪ್ಪಿನ ತೆರಿಗೆಗಾಗಿ ನಡೆಯುತಿದ್ದ ಸುಲಿಗೆಯನ್ನು ತಿಳಿಸುವಂತಹ ಪುಸ್ತಕ ಇದೊಂದೇ ಏನೋ . ರಾಯ್ ಮ್ಯಾಕ್ಸ್ ಹ್ಯಾಮ್ (ಮೂಲ ಲೇಖಕರು) 1992 ರಲ್ಲಿ ಮೊದಲ ಬಾರಿಗೆ ಪ್ರವಾಸಕ್ಕೆಂದು ಬಂದವರು ಇಲ್ಲಿಯ ಸಂಸ್ಕೃತಿಯನ್ನು ಕಂಡು ಮಾರುಹೋದರು. ಭಾರತದ ಬಗ್ಗೆ ಕುತೂಹಲ ಹೆಚ್ಚಿ ಇನ್ನಷ್ಟು ತಿಳಿಯಲು ಇಲ್ಲಿನ ಇತಿಹಾಸವನ್ನು ಅರಿಯುವ ಪ್ರಯತ್ನದೊಂದಿಗೆ, ಹಲವು ಗ್ರಂಥಾಲಯಗಳಿಗೆ ಭೇಟಿ ನೀಡಿ ಭಾರತದ ಕುರಿತಿದ್ದ ಪುಸ್ತಕಗಳನ್ನೆಲ್ಲಾ ರಾಶಿ ಹಾಕಿ ಅವನ್ನು ಓದತೊಡಗಿದಾಗ ಅವರ ಗಮನ ಸೆಳೆದದ್ದು ೧೮೯೩ ರಲ್ಲಿ ಪ್ರಕಟಗೊಂಡಿದ್ದ, ಭಾರತದಲ್ಲಿ ಮೇಜರ್ ಜನರಲ್ ಆಗಿ ಕಾರ್ಯ ನಿರ್ವಹಿಸುತಿದ್ದ ಸರ್ ಡಬ್ಲ್ಯು ಯು ಹೆಚ್ ಸ್ಲೀಮನ್ ರವರ Rambles and recollections of an Indian official ಎಂಬ ಕೃತಿಯಲ್ಲಿನ ಒಂದು ಸಣ್ಣ ಟಿಪ್ಪಣಿ. ಆ ಟಿಪ್ಪಣಿ ಹೀಗಿತ್ತು.. ” ಉಪ್ಪಿನ ಮೇಲಿನ ಸುಂಕದ ಸಂಗ್ರಹಣೆಗಾಗಿ ಎರಡು ಸಾವಿರದ ಮುನ್ನೂರು ಮೈಲು, ಅಂದರೆ ಸಿಂಧು ನದಿಯಿಂದ ಮದ್ರಾಸಿನ ಮಹಾನದಿಯವರೆಗೆ ಬೇಲಿ ನಿರ್ಮಿಸಲಾಗಿತ್ತಲ್ಲದೇ ಕಾವಲಿಗಾಗಿ ಹನ್ನೆರಡು ಸಾವಿರ ಜನ ನಿಯುಕ್ತರಾಗಿದ್ದರು!! ಈ ಬೇಲಿ ಬೃಹತ್ ಮರಗಳಿಂದ, ಮುಳ್ಳು ಪೊದೆ, ಬಳ್ಳಿ ಗಳಿಂದ ಈ ಬೃಹತ್ ಬೇಲಿ ನಿರ್ಮಾಣವಾಗಿತ್ತು!!” ಈ ಟಿಪ್ಪಣಿಯ ಬೆನ್ನು ಹಿಡಿದು ಹೊರಟ ಹ್ಯಾಮ್ ಗೆ ಕಂಡದ್ದು ಬ್ರಿಟಿಶರ ಅಮಾನವೀಯತೆ. ಮತ್ತಷ್ಟು ಓದು 





