ಇದು ಆರಂಭ ಅಷ್ಟೇ; ಕಾದು ನೋಡೋಣ
– ಮು ಅ ಶ್ರೀರಂಗ
‘ಹಳ್ಳಿಗಳ ಮನೆಯಲ್ಲಿನ ಹೆಂಗಸರು’ ಆಪದ್ಧನ ಎಂದು ಕೂಡಿಡುವ ಹಣ ಸಾವಿರಾರು ರೂಪಾಯಿಗಳು ಇರಬಹುದು. ಆದರೆ ಲಕ್ಷಾಂತರ ರೂಪಾಯಿಗಳ ತನಕ ಇರುತ್ತದೆ ಎಂಬುದು ಕೇವಲ ಉತ್ಪ್ರೇಕ್ಷೆ. ಇದಕ್ಕೆ ಕಾರಣಗಳು ಹೀಗಿವೆ..
(೧). ಹಿಂದಿದ್ದಂತೆ ಈಗ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬಗಳು ಇಲ್ಲ. ತಾವು ಪಟ್ಟ ಹಳ್ಳಿಯ ಕಷ್ಟಗಳು ತಮ್ಮ ಮಕ್ಕಳಿಗೆ ಬೇಡ ಎಂದು ತಾಯಿತಂದೆಯರೇ ತಮ್ಮ ಮಕ್ಕಳನ್ನು ಓದು, ಕೆಲಸ ಎಂದು ಪಟ್ಟಣಕ್ಕೆ ಕಳಿಸುತ್ತಿದ್ದಾರೆ ಅಥವಾ ಮಕ್ಕಳೇ ಸ್ವತಃ ಹುಟ್ಟಿದೂರನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗಿಯಾಗಿದೆ. ಅವರು ಮತ್ತೆ ಬಂದು ಹಳ್ಳಿಯಲ್ಲಿ ತಮ್ಮಂತೆ ವ್ಯವಸಾಯ ಮಾಡಿಕೊಂಡಿರುವುದಿಲ್ಲ ಎಂದು ತಾಯಿ-ತಂದೆಯರಿಗೂ ಗೊತ್ತು; ಊರು ಬಿಟ್ಟು ಬಂದ ಮಕ್ಕಳು ಒಮ್ಮೆ ಪಟ್ಟಣ ವಾಸದ ರುಚಿ ಹತ್ತಿದ ಮೇಲೆ ಹಳ್ಳಿಗೆ ಹೋಗುವುದು ವರ್ಷಕ್ಕೊಮ್ಮೆ ಊರ ಜಾತ್ರೆಗೋ ಅಥವಾ ತಾಯಿ ತಂದೆಯರು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಬಂದ ಮೇಲೆ ಅಷ್ಟೇ. ಇದು ಈಗಿನ ವಿದ್ಯಮಾನವಲ್ಲ. ಹಿಂದೆ ಕೃಷಿಯಾಧಾರಿತವಾಗಿದ್ದ ಕರಾವಳಿ ಪ್ರದೇಶದಲ್ಲೇ ಈ ವಿದ್ಯಮಾನ ಐವತ್ತು ಅರವತ್ತು ವರ್ಷಗಳಿಂದ ಹೆಚ್ಚಾಗಿ ನಡೆದು ಬಂದಿರುವಂತಹುದು. ಮುಂಬೈ, ಬೆಂಗಳೂರು ಮತ್ತು ಈಗ ಕೊಲ್ಲಿ ರಾಷ್ಟ್ರಗಳಲ್ಲಿ ಹೋಟೆಲ್ ಮತ್ತಿತರ ಉದ್ಯಮಗಳಲ್ಲಿ ಹೆಚ್ಚಿನವರು ಕರಾವಳಿಯ ಕಡೆಯವರೆದೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
(೨). ಈ ಕಾರಣಗಳಿಂದ ವಯಸ್ಸಾದವರು ತಮ್ಮ ಕೈಲಿ ಆಗುವಷ್ಟು ದಿನ ಹಾಗೂ ಹೀಗೂ ವ್ಯವಸಾಯ ಮಾಡಿ ನಂತರ ಜಮೀನು ಮಾರಿ ಹತ್ತಿರದ ತಾಲ್ಲೂಕು/ಜಿಲ್ಲಾ ಕೇಂದ್ರಗಳಿಗೆ ಹೋಗಿದ್ದಾರೆ; ಹೋಗುತ್ತಿದ್ದಾರೆ. ಅಥವಾ ಮಕ್ಕಳೇ ತಂದೆ ತಾಯಿಯಯರ ಮನ ಒಲಿಸಿ, ಆಸ್ತಿ ಮಾರಿಸಿ, ಆ ಹಣವನ್ನು ತಮ್ಮ ಉದ್ಯಮದ ಬೆಳವಣಿಗೆಗೆ ಹಾಕಿಕೊಂಡಿದ್ದಾರೆ. ತಂದೆ ತಾಯಿಯರು ಹಳ್ಳಿ ಬಿಟ್ಟು ಬರಲು ಒಪ್ಪಿದರೆ ತಮ್ಮ ಜತೆ ಕರೆದುಕೊಂಡು ಹೋಗಿದ್ದಾರೆ; ಹೋಗುತ್ತಿದ್ದಾರೆ. ಬರದೇ ಇದ್ದರೆ ಬಿಟ್ಟು ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈಗಿನ ಕಾಲದಲ್ಲಿ ಕಳ್ಳ ಕಾಕರ ಭಯವಿಲ್ಲದೆ ಲಕ್ಷಾಂತರ ರೂಪಾಯಿಗಳನ್ನು ಮಡಿಕೆ, ಕುಡಿಕೆಗಳಲ್ಲಿ, ಬಟ್ಟೆಗಳ ಗಂಟಿನಲ್ಲಿ ಮುಚ್ಚಿಡುವುದು ಮೂರ್ಖತನ ಎಂದು ಅವರಿಗೆ ತಿಳಿಯೆದೆ? ಲೇವಾದೇವಿಗೆ ಹಣಕೊಟ್ಟು ಕಳೆದು ಕೊಳ್ಳುವುದಕ್ಕಿಂತ ಬ್ಯಾಂಕಿನಲ್ಲಿ ಇಡುವುದು ಕ್ಷೇಮ ಜತೆಗೆ ಬಡ್ಡಿಯೂ ಬರುತ್ತದೆ ಎಂದು ಮೂರ್ನಾಲಕ್ಕು ಮುಖ್ಯ ಬ್ಯಾಂಕುಗಳ ತವರೂರಾದ ಕರಾವಳಿಯ ಸೀಮೆಯವರಿಗೆ ತಿಳಿಯದೆ?
(೩). ೫/೧೨/೧೬ರ ಪ್ರಜಾವಾಣಿ ಪತ್ರಿಕೆಯಲ್ಲಿ ‘ಅನುರಣ’ ಎಂಬ ಅಂಕಣ ಬರಹದಲ್ಲಿ ಎ ನಾರಾಯಣ ಅವರು ಬರೆದಿರುವುದನ್ನು ನಿಲುಮೆಯ ಓದುಗರು ಈಗಾಗಲೇ ಓದಿರಬಹುದು. ಅದು ಬಹುಷಃ ಎಲ್ಲರಿಗೂ ತಿಳಿದ ವಿಷಯವೇ. ‘ಒಬ್ಬ ಕೃಷಿಕ ಎಷ್ಟು ಸಂಪಾದಿಸಿ ಪೇರಿಸಿಟ್ಟರೂ ಅದು ಕಪ್ಪು ಹಣ ಆಗುವುದಿಲ್ಲ. ಯಾಕೆಂದರೆ ಕೃಷಿ ಆದಾಯಕ್ಕೆ ತೆರಿಗೆ ಇಲ್ಲ. ಆದರೆ ಒಬ್ಬ ವಕೀಲ, ವೈದ್ಯ, ವ್ಯಾಪಾರಿ, ತನ್ನ ಆದಾಯ ಎಷ್ಟು ಎಂದು ಸರ್ಕಾರಕ್ಕೆ ತಿಳಿಸಿ ಅದಕ್ಕೆ ಸರಿಯಾದ ತೆರಿಗೆ ನೀಡದೆ ಇದ್ದರೆ ಅದು ಕಪ್ಪು ಹಣ ಆಗುತ್ತದೆ……… ‘. ಈಗ ಈ ಮೂವರಲ್ಲಿ ಸ್ವಲ್ಪವಾದರೂ ಹೆದರಿಕೆ ಶುರುವಾಗಿಲ್ಲ ಎಂದು ಬಲವಾಗಿ ಯಾರಾದರೂ ನಂಬಿದ್ದೀರಾ?
(೪). ವ್ಯಾಪಾರಿಗೆ ಸಂಬಂಧಿಸಿದಂತೆ ನನ್ನ ವೈಯಕ್ತಿಕ ಅನುಭವ ನೋಡಿ ಹೀಗಿದೆ. ನಾನು ೧೯೭೩ರಲ್ಲಿ ಪಿ ಯು ಸಿ ಓದುತ್ತಿದ್ದಾಗ ಸರ್ಕಾರಿ ಮಿಡ್ಲ್ ಸ್ಕೂಲ್ ಉಪಾಧ್ಯಾಯರಾಗಿದ್ದ ನಮ್ಮ ತಂದೆಯವರ ಮಾಸಿಕ ಸಂಬಳ ೫೦೦ರೂ. ಅಂದರೆ ವರ್ಷಕ್ಕೆ ೬೦೦೦ರೂ. ಆದರೆ ಕೋಮಟಿಗ ಶೆಟ್ಟರಾಗಿದ್ದ ನನ್ನ ಸ್ನೇಹಿತನ ತಂದೆ ಒಂದು ಮಧ್ಯಮ ವರ್ಗದ ಬಟ್ಟೆ ಅಂಗಡಿ ಇಟ್ಟಿದ್ದರು. ಅವರ ದಿನದ ವರಮಾನವೇ ಸರಾಸರಿ ೫೦೦ ರೂಪಾಯಿಗಳ ಹತ್ತಿರ ಇತ್ತು. ನಾವಿಬ್ಬರೂ ಜಾತಿಯ ದೆಸೆಯಿಂದ ಸಿಗುವ ಫೀ ಮಾಫಿ ಕೋಟಾಗೆ ಸೇರಿದವರಲ್ಲ. ಆದರೆ ಆ ನನ್ನ ಸ್ನೇಹಿತ ತನ್ನ ತಂದೆಯ ವರಮಾನ ೩೦೦೦ರೂ ಎಂದು ಖೋಟಾ ಆದಾಯ ಪ್ರಮಾಣ ಪತ್ರವನ್ನು ತಾಲ್ಲೂಕು ಕಚೇರಿಯಿಂದ ತಂದು ಕಾಲೇಜಿನಲ್ಲಿ ಫೀ ಮಾಫಿ ಪಡೆದ!. ಈಗಲೂ ಇಂತಹ ದಂಧೆಗಳು ನಡೆಯುತ್ತಲೇ ಇರುತ್ತವೆ. At least ಅವರುಗಳು ಈಗ ಖೋಟಾ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕುವ ಮುನ್ನ ಸ್ವಲ್ಪವಾದರೂ ಹಿಂದು ಮುಂದು ನೋಡುವಂತಾಗಿದೆಯಲ್ಲವೇ? ಸರ್ಕಾರದ ಯಾವುದೇ ಯೋಜನೆಯಾಗಲಿ ಒಂದು ತಿಂಗಳೊಳಗೆ ಫಲಿತಾಂಶ ಕೊಡಬೇಕೆನ್ನುವುದು ಕೆಲವರ ಪೂರ್ವಗ್ರಹ ಎನ್ನದೆ ನನಗೆ ಬೇರೆ ದಾರಿಯಿಲ್ಲ. ನಮ್ಮ ಹಿಂದಿನ ಕೆಲವು ಉತ್ತಮ ಯೋಜನೆಗಳು, ಕಾರ್ಯಕ್ರಮವನ್ನೇ ನೋಡೋಣ. ೧೯೬೦-೮೦ರ ದಶಕದಲ್ಲಿ ‘ಗರೀಬಿ ಹಟಾವೋ’ ಘೋಷಣೆಯಾಯ್ತು. ನಂತರ ಭಾರತದ ಜನ ಸಂಖ್ಯೆ ಇದೇ ರೀತಿ ಹೆಚ್ಚಾಗುತ್ತಾ ಹೋದರೆ ಮುಂದೆ ಕಷ್ಟ ಎಂದು ಕುಟುಂಬ ಯೋಜನೆಯ ಮಹತ್ವವನ್ನು ಇಡೀ ದೇಶದ ಹಳ್ಳಿ ಹಳ್ಳಿಗಳಲ್ಲಿ ತಿಳಿಸುವ, ಜನರ ಮನವೊಲಿಸುವ ಕಾರ್ಯಕ್ರಮ ಹಮ್ಮಿಕೊಂಡು ‘ಆರತಿಗೊಂದು ಕೀರುತಿಗೊಂದು’ ಎಂದು ಪ್ರಚಾರಮಾಡಿ ಸರ್ಕಾರ ಕಾರ್ಯಪ್ರವೃತ್ತವಾಯಿತು. ನಂತರ ‘ಗಂಡಾಗಲಿ ಹೆಣ್ಣಾಗಲಿ ಮನೆಗೆ ಮಗುವೊಂದೇ ಇರಲಿ ‘. ಈಗ ಮೂರನೇ ಹಂತ ‘ಅಕ್ಕ ಪಕ್ಕದ ಮನೆಯ ಮಗುವನ್ನೇ ನಿಮ್ಮ ಮಗುವೆಂದು ಪ್ರೀತಿಸಿ’.
ಒಂದು ಅಥವಾ ಎರಡು ಮಕ್ಕಳ ನಂತರ ಕುಟುಂಬ ಯೋಜನೆಯ ಆಪರೇಷನ್ ಮಾಡಿಸಿಕೊಂಡ ಸರ್ಕಾರಿ ನೌಕರರಿಗೆ ಒಂದು ಇಂಕ್ರಿಮೆಂಟ್/ಪ್ರೋತ್ಸಾಹ ಧನ ನೀಡಿದರು; ಈಗಲೂ ನೀಡುತ್ತಿದ್ದಾರೆ. ಇವೆಲ್ಲಾ ಮಾಡದಿದ್ದರೆ ಬಹುಷಃ ಭಾರತದ ಜನಸಂಖ್ಯೆ ಇನ್ನು ಹತ್ತಿಪ್ಪತ್ತು ಕೋಟಿ ಜಾಸ್ತಿ ಆಗುತ್ತಿತ್ತು ಅನಿಸುತ್ತದೆ. ಇಂದು ಸರ್ಕಾರಿ ನೌಕರರು ಮತ್ತು ಸಂಘಟಿತ ವಲಯದ ಖಾಸಗಿ/ಅರೆ ಖಾಸಗಿ ನೌಕರರಿಂದ ಮಾತ್ರ ಸರಿಯಾಗಿ ಆದಾಯ ತೆರಿಗೆ ಸರ್ಕಾರಕ್ಕೆ ಬರುತ್ತಿದೆ; ಅದೂ ಅವರ ವೇತನದಲ್ಲಿ incometax ಅನ್ನು ಆಯಾ ಸಂಸ್ಥೆಯವರೇ ಮುರಿದುಕೊಳ್ಳುತ್ತಿರುವುದರಿಂದ!. ನಮಗೆ ಒಳ್ಳೆ ರಸ್ತೆ ಬೇಕು, ದಿನದ ಇಪ್ಪತ್ತನಾಲ್ಕು ತಾಸು ವಿದ್ಯುತ್ ಬೇಕು, ನೀರು ಬೇಕು…….. ಹೀಗೆ ನಮ್ಮ ‘ಬೇಕು ಬೇಕು’ಗಳ ಪಟ್ಟಿಗೆ ಕೊನೆಯೇ ಇಲ್ಲ. ಆದರೆ ನಮ್ಮ ಹಣಕ್ಕೆ ತೆರಿಗೆ ಬೇಡ ಎಂದರೆ ಹೇಗೆ? ನಾವು ಸರಿಯಾದ ತೆರಿಗೆ ಲೆಕ್ಕ ಕೊಡುವುದಿಲ್ಲ; ಮುಚ್ಚು ಮರೆ ಮಾಡಿ; ರಾಮನ ಲೆಕ್ಕ ಕೃಷ್ಣನ ಲೆಕ್ಕ ಬರೆದು ತೆರಿಗೆ ಕೊಡುತ್ತೇವೆ; ಆದರೆ ನಾವು ಚುನಾವಣೆ ಮೂಲಕ ಆರಿಸಿದ ಸರ್ಕಾರ ನಮಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೊಡಬೇಕು ಎನ್ನುವ ವಾದ ಸರಿಯೇ?
ಕೊನೆಯದಾಗಿ ೫-೧೨-೧೬ರ ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿರುವ ಒಂದೆರೆಡು ಅಂಕಿ ಅಂಶಗಳು ಹೀಗಿವೆ. ಆದಾಯ ಘೋಷಣೆಯಡಿ (ಐಡಿಎಸ್) ಈವರೆಗೆ ಘೋಷಿಸಲಾದ ಒಟ್ಟು ಆಕ್ರಮ ಸಂಪತ್ತು ರೂ 67382 ಕೋಟಿ. ಈ ಯೋಜನೆಯಡಿ ಸಂಪತ್ತು ಘೋಷಿಸಿದವರ ಸಂಖ್ಯೆ 64,275. ಘೋಷಣೆ ಮಾಡಿ ಒಂದಷ್ಟು ತೆರಿಗೆ ಕಟ್ಟಿಬಿಟ್ಟರೆ ಸರ್ಕಾರ ಸುಮ್ಮನಾಗುತ್ತದೆ ತಮ್ಮ ಕಪ್ಪು ಹಣದಲ್ಲಿ ಒಂದಷ್ಟು ಬಿಳಿಯಾಗುತ್ತದೆ ಎಂದು ಕೆಲವರು ಭಾವಿಸಿರಬಹುದು. ಆದಾಯ ತೆರಿಗೆ ಇಲಾಖೆಗೆ ಅನುಮಾನ ಬಂದರೆ ತನಿಖೆ ಪ್ರಾರಂಭಿಸುತ್ತದ. ಆ ಸುದ್ದಿಯೂ ಪ್ರಜಾವಾಣಿಯಲ್ಲೇ ಇದೆ. ಮುಂಬೈನಲ್ಲಿ ಸಣ್ಣ ಉದ್ಯಮ ನಡೆಸುತ್ತಿದ್ದ ಕುಟುಂಬವೊಂದು ಐಡಿಎಸ್ ಅಡಿ 2ಲಕ್ಷ ಕೋಟಿ ಅಕ್ರಮ ಸಂಪತ್ತು ಘೋಷಣೆ ಮಾಡಿತ್ತು. ಆದರೆ ಆದಾಯ ತೆರಿಗೆ ಇಲಾಖೆಗೆ ಅನುಮಾನ ಬಂದು ತನಿಖೆ ಆರಂಭಿಸಿದೆ. ಅದೇ ರೀತಿ ಗುಜರಾತ್ ಮೂಲದ ಉದ್ಯಮಿಯೊಬ್ಬರು ಸಹ ತಮ್ಮ ಬಳಿ 13860 ಕೋಟಿ ಅಕ್ರಮ ಸಂಪತ್ತು ಇರುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಅದಕ್ಕೆ ಸಂಪತ್ತು ತೆರಿಗೆ ಪಾವತಿಸದ ಕಾರಣ ಐ ಟಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ…. ಎರಡೂ ಪ್ರಕರಣಗಳಲ್ಲಿ ಇತರರು ಇವರನ್ನು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಅಲ್ಲದೆ ಇಬ್ಬರೂ ಸುಳ್ಳು ಘೋಷಣೆ ಮಾಡಿಕೊಂಡಿದ್ದು ಏಕೆ ಎಂಬುದನ್ನು ಐ ಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದು ಪ್ರಾರಂಭ ಅಷ್ಟೇ. ಆದ್ದರಿಂದ ಈಗಲೇ jumping into conclusions ಬೇಡ ಅಲ್ಲವೇ?
ತರ್ಕಕ್ಕೆ ಕೊಂಡೊಯ್ದ ಲೇಖನ. ಧನ್ಯವಾದ