ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 13, 2016

2

ಅಖಂಡ ದರ್ಶನ..!

‍ನಿಲುಮೆ ಮೂಲಕ

ಮೂಲ ( ತೆಲುಗು ) :- ಟಿ ಶ್ರೀವಲ್ಲೀ ರಾಧಿಕ
ಕನ್ನಡಕ್ಕೆ :- ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

dads-late-pregnancyಶಾಲೆಯಲ್ಲಿ ನಾವು ಮೂವರಿಗೆ ತ್ರಿಮೂರ್ತಿಗಳಂತಾನೆ ಹೆಸರು. ನಾನೇಕೆ ಈಗ ಈ ಕಥೆ ಹೇಳುವುದೆಂದರೆ ನಾನೊಬ್ಬ ಕಥೆಗಾರ. ಜೀವನದಲ್ಲಿ ಏನೇ ಸ್ವಲ್ಪ ವಿಚಿತ್ರವಾಗಿ ಜರುಗಿತೆಂದರೆ ಆ ವಿಷಯವನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳುವುದು ನನ್ನ ಅಭಿಲಾಷೆ. ಹರಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ಈಗಷ್ಟೇ ನಿವೃತ್ತಿ ಹೊಂದಿದ್ದಾನೆ. ಶಿವು ವಿಧ ವಿಧದ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾನೆ. ಅವನಿಗೆ ಸಾಕಷ್ಟು ಸಂಪಾದನೆ ಇದೆ, ಇಂದೋರ್’ನಲ್ಲಿ ಸೆಟ್ಲ್ ಆಗಿದ್ದಾನೆ. ಇವತ್ತು ಅವನ ಫೋನ್’ನಿಂದಾನೆ ಕಥೆ ಶುರುವಾಯ್ತು.

ಮುಂಜಾನೆಯೇ ನನಗೆ ಫೋನ್ ಮಾಡಿ, ‘ನೀನೂ, ಹರೀ ಒಮ್ಮೆ ಇಲ್ಲಿಗೆ ಬರಬೇಕು’ ಅಂದ. ‘ಯಾಕೆ ?’ ಅಂತ ಕೇಳಿದರೆ ‘ಸುಮ್ಮನೆ..!, ಬನ್ನಿ ಹೇಳುವೆ’ ನೆಂದ.

ಫೋನ್ ಇಟ್ಟಾಗಿನಿಂದಾ ನನ್ನ ಯೋಚನೆ ಸಾಗುತ್ತಿದೆ. ಚಿಕ್ಕವರಾದಾಗಿಂದಾ ನಮ್ಮ ಯೋಚನಾಧಾರೆ, ಅಭಿರುಚಿಗಳೆಲ್ಲಾ ಒಂದೇ ತರಹ. ನಡುವೆ ಕೆಲವು ದಿನ.. ಅಲ್ಲಲ್ಲ..! ಕೆಲವು ವರ್ಷಗಳೇ ದೂರ ಇದ್ದರೂ ಒಟ್ಟಾಗಿ ಸೇರಿದ ಮೇಲೆ ಮಾತನಾಡಿದಾಗ ಒಂದು ಭೇದವೂ ಇಲ್ಲದೇ ನಮ್ಮ ಅಭಿಮತಗಳು ಒಂದೇ ತರವಾಗಿ ಇರುವುದುಂಟು.

ನಮ್ಮ ಮೂವರಿಗೆ ಚಿಕ್ಕಂದಿನಿಂದಾ ಯಾವುದೇ ವಿಷಯವನ್ನು ಮೂರ್ಖವಾಗಿ ನಂಬುವವರನ್ನ ನೋಡಿದರೆ ನಗು ಬರುತ್ತಿತ್ತು. ಅಂಥಾ ವಿಷಯಗಳು ಯಾರು ಮಾತಾಡಿದರೂ ನಾವು ಮೂವರೂ ಸೇರಿ ಅವರ ಎದುರು ಪ್ರತಿಭಟಿಸುತಿದ್ದೆವು. ನಮ್ಮ ಅಭಿಪ್ರಾಯ ಒಂದೇ ಆದರೂ ಅದನ್ನು ತಿಳಿಸುವ ಪದ್ಧತಿ ಬೇರೇನೇ ಆಗಿತ್ತು. ನಾನು ಹೇಳುವ ವಿಷಯವನ್ನು ಸ್ವಲ್ಪ ವ್ಯಂಗ್ಯವಾಗಿ ಹೇಳುತ್ತಿದ್ದೆ. ‘ಹರಿ’ ವಿಶದೀಕರಿಸಿ ಹೇಳುವನು. ಸಾಧಕ ಬಾಧಕಗಳೇನಿವೆಯೆಂದು ಸುದೀರ್ಘವಾಗಿ ಚರ್ಚೆ ಮಾಡಿ, ಅಂಥಾ ಕೆಲಸ ಏಕೆ ಮಾಡಬಾರದು ಅಥವಾ ಏಕೆ ಮಾಡಬೇಕು ಎಂದು ಹೇಳುವನು. ಅವನೂ ಒಂದು ವಿಧದಲ್ಲಿ ಬರಹಗಾರನೇ. ವ್ಯಾಸಗಳೂ, ಸಮೀಕ್ಷೆಗಳೂ ಬರೆದವನೇ. ಮತ್ತು ‘ಶಿವು’ ತರ್ಕದೊಂದಿಗೆ ಆ ಕಡೆಯವರನ್ನು ಸೋಲಿಸಿ, ಅವರ ಮಾತು ತಪ್ಪೆಂದು ಒಪ್ಪಿಸುವನು. ಇಲ್ಲಿಯವರೆಗೆ ನಮ್ಮ ನಡೆ ಹೀಗೇ ನಡೆದುಕೊಂಡು ಬಂದಿತ್ತು.

ಈಗ ಮಾತ್ರ ಸಣ್ಣ ಸಮಸ್ಯೆಯಾಗಿದೆ. ಒಂದು ವಾರದ ಹಿಂದೆ ಒಂದು ಕಾಲೇಜ್ ಗೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ಅಲ್ಲಿ ನನ್ನ ಉಪನ್ಯಾಸಕ್ಕೆ ಒಳ್ಳೆಯ ಪ್ರತಿಕ್ರಿಯ ಬಂದಿತ್ತು. ಆದರೆ.. ಒಬ್ಬ ಹುಡುಗಿ ಕಾರ್ಯನಿರ್ವಾಹಕ ತಂಡದಲ್ಲಿರುವಳು ಮಾತ್ರ ನನಗೆ ಆದರವನ್ನು ತೋರಿಸಿದರೂ, ಅವಳ ಮನದಲ್ಲಿ ನನ್ನ ಮೇಲೆ ಎಳ್ಳಷ್ಟೂ ಅಭಿಮಾನವಿಲ್ಲ ಅಂತ ಮಾತ್ರ ನನಗನಿಸಿತು. ಅದು ನನ್ನ ಇಗೋಗೆ ಹರ್ಟ್ ಆಯಿತು. ಉಪನ್ಯಾಸದ ನಂತರ ನನ್ನ ಸುತ್ತಲೂ ಕೂತಿದ್ದ ಅವಳ ಗೆಳತಿಯರೆಲ್ಲರ ಜೊತೆ ಬಂದು ಕೂತಳು.

ನನ್ನ ಬರಹಗಳನ್ನೆಲ್ಲಾ ಆ ಗೆಳತಿಯರೆಲ್ಲ ಒಂದೊಂದಾಗಿ ಮೆಚ್ಚಿಕೊಳ್ಳುತಿದ್ದರು. ಅವರೆದುರು ನಾನು ಚಮತ್ಕಾರವಾಗಿ ಮಾತನಾಡುತ್ತಿದ್ದರೆ ಕಿಲಕಿಲನೆ ನಗುತ್ತಿದ್ದರು. ಆಗ ಒಂದು ಕಥೆಯ ಪ್ರಸ್ತಾಪ ಬಂತು. ಆ ಕಥೆ ನನಗೆ ಒಳ್ಳೆಯ ಯಶಸ್ಸನ್ನು ತಂದುಕೊಟ್ಟಿತ್ತು.. ಅದರಲ್ಲಿ ನಾನು ಬ್ರಹ್ಮದೇವರನ್ನು ಅಪಹಾಸ್ಯ ಮಾಡಿದ್ದೆ. ತಾನು ಸೃಷ್ಟಿಸಿದ ಸರಸ್ವತಿ ಮೇಲೆ ತಾನೇ ಮೋಹಗೊಳ್ಳುವುದು, ಆಕೆಯನ್ನು ತಾನೇ ಮದುವೆಯಾಗುವುದು..! ಮೊದಲಾದವೆಲ್ಲಾ ನನ್ನ ಪರಿಹಾಸಕ್ಕೊಳಗಾಗಿವೆ. ಅವರೆಲ್ಲರೂ ನನ್ನ ಕಥೆಯಲ್ಲಿರುವ ವ್ಯಂಗ್ಯವನ್ನು ಮೆಚ್ಚಿಕೊಳ್ಳುತ್ತಾ ಗಮನವಿಟ್ಟು ಕೇಳಿಸಿಕೊಳ್ಳುತಿದ್ದರು. ನಾನು ಅವರ ಆಸಕ್ತಿಯನ್ನು ಮೆಚ್ಚಿಕೊಂಡೆ.

ನಾನು ಆವೇಶದಿಂದ.. “ನೋಡಿ! ಇವೇ ನಮ್ಮ ಪುರಾಣಗಳು. ಸ್ವಂತ ಮಗಳ ಮೇಲೆ ತಂದೆಗೇ ಮೋಹ!! ಇವರೆಲ್ಲಾ ನಮಗೆ ದೇವರು!!” ಅಂದೆ! ಎಲ್ಲರೂ ಅಂಗೀಕಾರವಾದಂತೆ ತಲೆಯಾಡಿಸಿದರೆ ಅಲ್ಲಿವರೆಗೂ ಸುಮ್ಮನಿದ್ದ ಆ ಹುಡುಗಿ ತಲೆ ಎತ್ತಿ ನನ್ನನ್ನು ನೇರವಾಗಿ ನೋಡುತ್ತಾ “ಬರಹಗಾರರಾಗಿರುವ ನೀವೇ ಹಿಂಗಂದ್ರೇ ಹೇಗೆ? ಅಂದಳು. ನಾನು ಅಯೋಮಯವಾಗಿ ಅವಳನ್ನೇ ನೋಡಿದೆ. ಉಳಿದವರದೂ ಅದೇ ಸ್ಥಿತಿ. “ಬ್ರಹ್ಮದೇವರಿಗೆ ಸರಸ್ವತಿ ಮೇಲೆ ಏಕೆ ಮೋಹವೆನ್ನುವುದು ಮಿಕ್ಕವರಿಗಿಂತಲೂ ನಿಮಗೆ ಚೆನ್ನಾಗಿ ಅರ್ಥವಾಗಿರಬೇಕು. ಆ ಮೋಹದ ಬಗ್ಗೆ ಬರಹಗಾರರಿಗೆ ಅರ್ಥವಾಗದೇ ಇರಲು ಸಾಧ್ಯವೇ?” “ ಬರಹಗಾರನು ತಂದೆಯಂತೆ, ಅವನ ಕಾವ್ಯವನ್ನು ಅವನ ಮಗಳಾಗಿ ಅಲ್ವೇ ನಾವು ಹೇಳುವುದು..?” ನಮ್ಮೆಲ್ಲರ ಕಡೆ ನೋಡಿದಳು. ನಾವೆಲ್ಲಾ ತಲೆ ಯಾಡಿಸಿದಿವಿ. “ನಿಮಗೆ ನಿಮ್ಮ ಕಥೆಗಳೆಂದರೆ ಎಷ್ಟು ಪ್ರೀತಿ ಎನ್ನುವುದು ತಿಳಿಯುತ್ತಿಲ್ವಾ? ನಿಮ್ಮ ಉಪನ್ಯಾಸದಲ್ಲೂ, ನಿಮ್ಮ ಮಾತುಗಳಲ್ಲೂ ಆ ಪ್ರೀತಿ ತುಳುಕುತ್ತಿದೆ. ನಿಮ್ಮ ಮಾತು ಐದು ನಿಮಿಷ ಕೇಳಿದರೆ ಸಾಕು, ಯಾರಿಗಾದರೂ ತಿಳಿಯುತ್ತೆ.. ನಿಮ್ಮ ಬರಹಗಳ ಮೇಲೆ ನಿಮಗಿರುವುದು ಮೋಹವೆ ಹೊರತು ವಾತ್ಸಲ್ಯವಲ್ಲ ಅದು” ಎಂದು ಸ್ಪಷ್ಟವಾಗಿ ಹೇಳಿದಳು. ಹಾಗೆಯೇ ಅಲ್ಲಿ ಸುತ್ತಲು ನೋಡಿ “ಆದರೇನೂ ನಿಮ್ಮನ್ನ ಆರಾಧಿಸುವವರೂ ಇದ್ದಾರಲ್ವಾ?” ಎಂದು ಹೇಳಿ ತುಟಿ ಮೇಲೇ ಸಣ್ಣದೊಂದು ನಗು ತೋರಿದಳು. ಅವಳ ಮಾತು ಕೇಳಿ ನನಗೆ ಕುತ್ತಿಗೆ ಹಿಡಿದಂತಾಯ್ತು. ಈಗಲೂ ಹಾಗೇ ಇದೆ ಅನಿಸುತ್ತಿದೆ.

ಅವತ್ತು ಆ ಹುಡುಗಿ ಹೋದ ಮೇಲೆ ನನ್ನ ಮನದಲ್ಲೇನೋ ಕಳವಳ. ಕೆಲವು ದಿನ ಏಕಾಂತವಾಗಿದ್ದು ನನ್ನ ಯೋಚನೆಗಳನ್ನು ಒಮ್ಮೆ ಪುನರ್ವಿಮರ್ಶೆ ಮಾಡಿಕೊಳ್ಳಬೇಕನಿಸಿತು. ಅದಕ್ಕೇ ಈಗ ಶಿವು ಕರಿಯುತ್ತಲೇ ಏನೋ ಸಂಕೋಚ ಆಗ್ತಿತ್ತು. ‘ಬರಲ್ಲ’ ಎನ್ನಲೂ ಅಂಜಿದೆ. ‘ಹರಿ’ಯನ್ನ ಕೇಳಿ ನೋಡೋಣ ಅಂತ ಅವನಿಗೆ ಪೋನ್ ಮಾಡಿದೆ. ಈ ನಡುವೆ ಅವನಿಗೆ ಸ್ವಲ್ಪ ಆರೋಗ್ಯ ಸರಿಯಿರಲಿಲ್ಲವಂತೆ. ಕೈ ಕಾಲು ಕದಲಿಸಲು ಆಗುತ್ತಿರಲಿಲ್ಲವಂತೆ. ಹಾಗಾಗಿ ಒಳ್ಳೆಯ ವೈದ್ಯರನ್ನು ಭೇಟಿಯಾಗಿದ್ದಾನೆ. ಈಗ ಔಷಧ ಬಳುಸುತ್ತಿದ್ದಾನೆ.. ಗಾಬರಿಯಾಗುವಂತದ್ದೇನಿಲ್ಲ.

ಹರಿ ಬರಲು ಸಿದ್ಧವಾದ ಮೇಲೆ ನಾನೇ ಎಲ್ಲಾ ಏರ್ಪಾಟು ಮಾಡಿದೆ. ಬೆಂಗಳೂರಿನಿಂದ ಉಜ್ಜಯಿನಿ ಸೇರಿಕೊಂಡರೆ ಅಲ್ಲಿಂದ ಹೊರಡಲು ಶಿವುನ ಕಾರು ರೆಡಿ ಇರುತ್ತೆ. ಹರಿ, ನಾನು ಹೊರಟಾಗ ನನಗೆ ಹರಿಯಲ್ಲಿ ಮೊದಲಿದ್ದ ಜೋಷ್ ಕಾಣಲಿಲ್ಲ. ಅಸ್ವಸ್ಥನಾಗಿದ್ದ ಕಾರಣದಿಂದನೋ ಏನೋ! ರೈಲು ಏರಿದ ತಕ್ಷಣ ‘ಹರಿ’ಗೆ ಅದನ್ನೇ ಕೇಳಿದೆ. ಅವನು ಪ್ರಶಾಂತವಾಗಿ ದರಹಾಸ ಮಾಡಿದ. “ಹಾಗೇನಿಲ್ಲ. ಅಧೈರ್ಯವೇನಿಲ್ಲ..” ಒಂದು ಕ್ಷಣ ಸುಮ್ಮನಿದ್ದು ನೋಡಿದರೆ ಹಿಂದೆ ಇಲ್ಲದ ಧೈರ್ಯವೂ, ಪ್ರಶಾಂತತೆಯೂ ನನಗೀಗ ಸಿಗ್ತಿದೆ.

ನಾನು ಅವನ ಕಡೆ ಗಮನ ಕೊಟ್ಟು ನೋಡಿದೆ. ನಿಜ! ಅವನ ಮುಖದಲ್ಲಿ ಈ ಹಿಂದೆ ಇರದಿದ್ದ ತಿಳಿವೊಂದು ಕಾಣುತ್ತಿದೆ. ಪ್ರಯಾಣ ಮುಂದುವರೆದ ಮೇಲೆ ಸ್ವಲ್ಪ ಉಲ್ಲಾಸಿತನಾದಂತೆ ಕಾಣಿಸಿದ. “ಉಜ್ಜಯಿನಿಗೆ ಹೋಗುವುದೆಂದರೆ ಏನೋ ಉತ್ಸಾಹ.. ಕಣೋ! ಸಣ್ಣವರಿದ್ದಾಗ ಕಥೆ ಪುಸ್ತಕದಲ್ಲಿ ಓದಿದ ನೆನಪುಗಳೆಲ್ಲಾ ತಾಜಾ ಆಗುತ್ತಿವೆ.

“ಪುರಾಣಗಳಲ್ಲೂ ಉಜ್ಜಯಿನಿ ಪ್ರಸ್ತಾಪ ತುಂಬಾನೇ ಬರುತ್ತೇನು?” ಕೇಳಿದೆ. ಅವನು ಬಹಳಷ್ಟು ಪುಸ್ತಕ ಓದಿದ್ದಾನೆ. ದೇವರನ್ನು ನಂಬುವವರೂ ಅಷ್ಟೊಂದು ಓದಿರಲ್ಲ. ಅವನು ಎಲ್ಲೆಲ್ಲಿರುವ ಪುರಾಣಗಳೆಲ್ಲಾ ಓದಿ, ಅದರಲ್ಲಿರುವ ವಿಷಯವನ್ನು ತನ್ನ ನಿಬಂಧಗಳಲ್ಲಿ ಖಂಡಿಸುವನು. ನನ್ನ ಮಾತು ಕೇಳಿ ಹರಿ ಸ್ವಲ್ಪ ಹೊತ್ತು ಸುಮ್ಮನಿದ್ದ. “ನಿಜವೇ. ಇರುವುದು ನಿಜವೇ. ಆದರೆ ಓದಿದರೂ ಅದರಲ್ಲಿರುವ ತಪ್ಪು ಕಂಡುಹಿಡಿಯುವುದಕ್ಕೇ ಪ್ರಯತ್ನ ಪಟ್ಟೇನೇ ಹೊರತು ಅದರಲ್ಲಿ ನನಗೇನಾದರೂ ಉಪಯೋಗಕರವಾಗಿ ಇದೆಯಾ ಎನ್ನುವ ಸಂದೇಹವೂ ಹುಟ್ಟಲಿಲ್ಲ. ಸಾವಿರಾರು ಪುಟಗಳು ಓದಿದ್ದರೂ ಅದರಲ್ಲಿರುವ ಒಂದು ಪುಟವನ್ನಾದರೂ ಸರಿಯಾಗಿ ಅರ್ಥಮಾಡಿಕೊಂಡಿದ್ದೀನಾ ಎನ್ನುವ ಸಂದೇಹ ಕಾಡುತ್ತಿದೆ ನನಗೀಗ.” ಅಂತಂದ. ಅವನ ಈ ಮಾತುಗಳನ್ನು ಕೇಳಿ ದಿಗ್ಭ್ರಾಂತನಾದೆ ನಾನು.

“ಏನೂ..?” ನನ್ನ ಮಾತೇನೂ ಅವನ ಕಿವಿಗೆ ಬೀಳಲಿಲ್ಲ, ಏನೋ ಯೋಚನೆ ಮಾಡುತ್ತಿದ್ದ. ‘ಇಲ್ಲ, ಇದೆಲ್ಲಾ ಸುಳ್ಳು.. ಅಸ್ವಸ್ಥತೆ ಇವನನ್ನು ಹೀಗೆಲ್ಲಾ ಚೇಂಜ್ ಮಾಡಿರಬೇಕು” ಅಂತ ಅಂದುಕೊಂಡೆ. “ಏನು ಸಮಸ್ಯೆ ?” ಎಂದು ಕೇಳುವಷ್ಟರಲ್ಲಿ ಅವನೇ ಹೇಳತೊಡಗಿದ. “ನನ್ನ ಅಸ್ವಸ್ಥತೆಯಿಂದ ನಾನು ಹೀಗೆ ಮಾತಾಡ್ತಿದ್ದೇನೆಂದು ತಿಳಿಯಬೇಡವೋ! ಒಂದು ಘಟನೆಗೆ ಪ್ರತಿಸ್ಪಂದನೆಯಾಗಿ ನನ್ನಲ್ಲಿ ಈ ಬದಲಾವಣೆ ಬಂದಿದೆ”. ಅದು ಏನಂತ ಕೇಳುವಷ್ಟರಲ್ಲೇ, “ಹೌದು..! ಪುರಾಣಗಳೆಂದರೆ ನನಗೆಂದಿಗೂ ಪರಿಹಾಸವೇ ಆಗಿತ್ತು. ನನ್ನ ಬರಹಗಳಲ್ಲೆಲ್ಲಾ ವೇದವ್ಯಾಸನನ್ನು, ಅವರ ಕೃತಿಗಳನ್ನು ಅಪಹಾಸ್ಯ ಮಾಡಿದ್ದೇನೆ. ಪ್ರಸಂಗಗಳೆಲ್ಲಾ ವಿಮರ್ಶೆ ಮಾಡಿದ್ದೇನೆ. ಸರಿ, ಅದನ್ನು ಬಿಡು. ಲಕ್ಷ್ಮಿಯ ನಿಲುವು ನಿಂಗೆ ಗೊತ್ತಿದೆಯಲ್ವೇ? ಅವಳು ಎಷ್ಟು ಪುಸ್ತಕ ಓದುವವಳಂತ ಗೊತ್ತೇ? ಮನೆಯ ತುಂಬಾ ನಾನಿಟ್ಟಿದ್ದ ಅಷ್ಟಾದಶ ಪುರಾಣಗಳನ್ನೂ ಉಪಪುರಾಣಗಳನ್ನೂ ಓದಿದ್ದಾಳೆ. ಮದುವೆ ಆದಾಗ ಏನೋ ವ್ರತಗಳು ಮಾಡುತೀನಿ ಅಂತನ್ನುತಿದ್ದಳು. ನನ್ನ ಸ್ವಭಾವ, ಯೋಚನೆಗಳೆಲ್ಲಾ ಅವಳಿಗೆ ವಿಸ್ತಾರವಾಗಿ ಹೇಳಿ, ‘ಅಂಥಾವೆಲ್ಲಾ ನನಗೆ ಹಿಡಿಸಲ್ಲ ಎಂದು ಹೇಳಿದ್ದೆ’. ಮುವ್ವತ್ತು ವರ್ಷದ ಹಿಂದೆ ಒಮ್ಮೆ ಹುಡಗರು ತುಂಬಾ ಇಷ್ಟಪಡ್ತಿದ್ದಾರೆಂದು ಗೌರೀಗಣೇಶನ ಹಬ್ಬ ಮಾಡುತ್ತೇನೆ ಎಂದಳು. ಅವತ್ತೂ ಹಾಗೇ ‘ಗಣೇಶನ ಹುಟ್ಟು, ರೂಪವನ್ನೆಲ್ಲಾ ಪರಿಹಾಸ ಮಾಡಿ ಇಂಥಾ ಪೂಜೆ ಮಾಡುವುದೆಲ್ಲಾ ಮೂಢತನ ಎಂದೆ’. ಆ ಮೇಲೆ ಈ ಮಧ್ಯೇ ಅವರ ಅಕ್ಕ ಯಾವುದೋ ದೊಡ್ಡ ವ್ರತ ಮಾಡಿಕೊಳ್ಳುತ್ತಾರೆಂದು ಲಕ್ಷ್ಮಿನ ತುಂಬಾನೇ ಕರೆದಿದ್ದಾಳೆಂದು, ಇವಳು ನನ್ನ ಅನುಮತಿ ಕೇಳಿದಳು. ಅಂಥಾ ಮಾತುಗಳಿಗೆ, ಮೋಹ ಮಾಟಕ್ಕೆಲ್ಲಾ ಹೋಗುವುದು ಮಾನಸಿಕ ದೌರ್ಬಲ್ಯವೆಂದೆ. ಸುಮ್ಮನಾದಳು ಪಾಪ.

ಅವಳು ಬಾದು ಬಿದ್ದಂತೆ ಕಾಣಸಿಲ್ಲ. ಅವತ್ತೇ ಅಲ್ಲ, ಎಂದೂ ಯಾವುದೇ ವಿಷಯಕ್ಕೂ ಬಾದು ಬಿದ್ದಂತೆ ಕಾಣಸಿಲ್ಲ. ನನ್ನ ಮಾತಿಗೆ ಆಕೆ ಎದುರಾಡುತ್ತಿದ್ದಿಲ್ಲ. ನಾನೆಲ್ಲಿಗೆ ಕರೆದುಕೊಂಡು ಹೋದರೂ ಬರುತ್ತಿದ್ದಳು. ಏನು ಹೇಳಿದರೂ ಮಾಡುವಳು. ಎಂದೂ ಯಾವ ಅಸಮಾಧಾನವನ್ನೂ ತೋರಿಸಿದವಳಲ್ಲ. ಅವಳನ್ನ ನಾನಷ್ಟು ಚೆಂದಾಗಿ ಅನುಕೂಲವಾಗಿ ತಯಾರು ಮಾಡಿಕೊಂಡಿದ್ದು ನನ್ನ ಪ್ರತಿಭೆ ಎಂದು ನನ್ನ ಮನಸ್ಸಿನ ಆಳದಲ್ಲೆಲ್ಲೋ ಹೆಮ್ಮೆ ನನಗಿತ್ತು.

ಮೊನ್ನೆ ನನಗೆ ಆರೋಗ್ಯ ಸರಿ ಇಲ್ಲದಿದ್ದಾಗಲೂ ಅವಳೇ ನನಗೆಷ್ಟೋ ಸೇವೆಯನ್ನು ಮಾಡಿದಳು. ಆಗ ಒಂದಿನ.. ನಾನು ಒಳಗೆ ಮಲಗಿದ್ದೆ. ಹೊರಗಿನ ಕೋಣೆಯಲ್ಲಿ ತಾಯಿ, ಮಗ ಮಾತನಾಡ್ತಿದ್ದರು. ನನಗೆ ನಿದ್ದೆಯಿಂದ ಎಚ್ಚರಿಕೆಯಾದಾಗ.. “ಯಾಕಮ್ಮಾ ನಿನಗಿಷ್ಟ ಇದ್ದರೂ ಇಲ್ಲದಿದ್ದರೂ ಅಪ್ಪ ಹೇಳಿದ ಎಲ್ಲಾ ಮಾತಿಗೂ ತಲೆಯಾಡುಸುತ್ತೀಯ? ಎಲ್ಲಾ ವಿಷಯದಲ್ಲೂ ಅಪ್ಪಗೆ ಅನುಕೂಲ ಮಾಡಬೇಕೆಂದು ಪ್ರಯತ್ನವನ್ನು ಏಕೆ ಮಾಡುತ್ತೀಯ? ನಿನ್ನ ಅನುಕೂಲ ನೋಡಿಕೊಳ್ಳುವುದೇ ಇಲ್ಲವೇಕೆ?” ಅಂತಿದ್ದ. ಅದಕ್ಕೆ ಆಕೆ “ಚೆಂದಾ ಇದೆ, ಮನುಷ್ಯನಿಗೆ ಧರ್ಮ ಪಾಲಿಸುವುದು ಮುಖ್ಯವೇ, ಅನುಕೂಲ ನೋಡಿಕೊಳ್ಳುವುದು ಮುಖ್ಯವೇ?” ಲಕ್ಷ್ಮಿ ಅವನ ಮಾತನ್ನ ಹೊಡೆದಾಕಿದಹಾಗೆ ಉತ್ತರ ಕೊಟ್ಟಳು. “ಧರ್ಮವೇ? ಯಾರಮ್ಮಾ ಹೆಂಗಸರಿಗೆ ಮಾತ್ರ ಧರ್ಮವನ್ನು ಹೇಳುವುದು? ದೇವರೇನಾದರೂ ಇಳಿದು ಬಂದು ಹೀಗೇ ಇರಬೇಕೆನ್ನುವನೇ?” ಬೇಸರದಿಂದ ಮಗನ ಕಂಠ. ಯಾವ ವಿಷಯವನ್ನು ಇಷ್ಟು ಸೀರಿಯಸ್ ಆಗಿ ಚರ್ಚೆ ಮಾಡುತ್ತಿದ್ದಾರೆಂದು ಆಶ್ಚರ್ಯದಿಂದಾ ಎದ್ದು ಬರಬೇಕಂತಿದ್ದೆ. ಅಷ್ಟರಲ್ಲೇ ಲಕ್ಷ್ಮಿ ಕಂಠ, “ ಹೇಳಿದ್ದಾನೋ.. ದೇವರೇ ವೇದವ್ಯಾಸರ ರೂಪದಲ್ಲಿ ಇಳಿದು ಬಂದು ಹೇಳಿದ್ದಾನೆ.”

ಸ್ಪಷ್ಟವಾಗಿ ಕೇಳಿಸಿತು. ಹಾಗೇ ಮಂಚದಲ್ಲಿ ಕುಸಿದುಬಿದ್ದೆ. ನನ್ನ ಜೀವನದಲ್ಲಿ ನನ್ನ ಮಾತುಗಳಿಂದ, ಬರಹಗಳಿಂದ ಎಷ್ಟು ಜನ ನನ್ನ ಅನುಸರಿಸಿದ್ದಾರೋ ನನಗೆ ಗೊತ್ತಿಲ್ಲ. ಕಡೆಗೆ ನನ್ನ ಮಕ್ಕಳೂ ನನ್ನ ಮೇಲೆ ಸಂಪೂರ್ಣ ವಿಶ್ವಾಸ, ಗೌರವ ಇಟ್ಟಿಕೊಂಡಿದ್ದಾರೆಂದು ಹೇಳಲಾರೆ. ಆದರೆ, ಒಬ್ಬಳು..! ಒಬ್ಬ ಲಕ್ಷ್ಮಿ ಮಾತ್ರ ನಿಸ್ಸಂದೇಹವಾಗಿ ಸಂಪೂರ್ಣವಾಗಿ ನನ್ನ ಅಭಿಮತವನ್ನೊಪ್ಪಿದ್ದಾಳೆಂದೂ, ನನ್ನ ಅನುಸರಿಸಿ ಬಂದಾಳೆಂದೂ ತಿಳಿದಿದ್ದೆ. ನಿಜ, ಅನುಸರಿಸಿದ್ದಾಳೆ. ಆದರೇ, ಅದಕ್ಕೂ ಕಾರಣ ನಾನಲ್ಲ. ನನ್ನ ಪ್ರತಿಭೆಯಲ್ಲ.” ಗದ್ಗದಿತವಾಯ್ತು ಅವನ ಕಂಠ.

“ಸಾವೇಟು ನನಗಿದು! ನಾನಿಷ್ಟುವರೆಗೂ ಪರಿಹಾಸ ಮಾಡಿದ ವೇದವ್ಯಾಸನ ಕೈಲಿ ನನಗೆ ಬಿದ್ದ ಸಾವೇಟು!” ಅದೊಂಥರಾ ನಗುತ್ತಾ ವಾಕ್ಯ ಪೂರೈಸಿದ. ಮಾತು ಬರದ ಮೂಕನಾದೆ ನಾನು.

*       *        *

ಉಜ್ಜಯಿನಿ ಸೇರಿದೆವು. ‘ಶಿವು’ ಸ್ಟೇಷನ್ ಗೆ ಬಂದಿದ್ದ. ನೇರವಾಗಿ ಇಂದೋರ್’ಗೆ ಕರೆದುಕೊಂಡು ಹೋಗ್ತಾನೆಂದುಕೊಂಡರೆ… ಯಾವುದೋ ಹೋಟೆಲ್ ಮುಂದೆ ಕಾರನ್ನು ನಿಲ್ಲಿಸಿದ. ಕೋಣೆಯೊಳಗೆ ಹೋದ ತಕ್ಷಣ ‘ಸ್ನಾನ-ಗೀನ ಮುಗಿಸಿ’ ಎಂದ. ಅವನು ನಮ್ಮಂಥಾ ತಾತ್ಸಾರದವನಲ್ಲ. ಕೆಲಸ ಅಂದ ಮೇಲೆ ಕೆಲಸ ನಡೆಯುತ್ತಿರಬೇಕು. ನಾವಿಬ್ಬರು ಬೇಗ ತಯಾರಾದೆವು. ‘ಶಿವು’ ಕಾಫಿ ತರಿಸಿದ. ಕಾಫೀ ಕಪ್ಪು ಕೈಲಿ ಹಿಡಿದು ಕೂತಿದ್ದಾಗ “ಈ ಮಧ್ಯೆ ನಮ್ಮ ಕಂಪೆನೀಲಿ ಒಬ್ಬ ಹುಡುಗ ಸೇರಿದ.” ಅಂತ ಯಾವುದೋ ಕತೆ ಹೇಳಲು ಶುರು ಮಾಡಿದ. ಹರೀ ಮತ್ತು ನಾನು ಅವನ ಕತೆ ಕೇಳತೊಡಗಿದೆವು.

“ಕಂಪನೀ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಲು ಅವನು ಒಂದು ನಾಟಕ ಬರೆದಿದ್ದಾನೆ. ನಮ್ಮವರಿಗೆಲ್ಲಾ ಅದು ತುಂಬಾ ಹಿಡಿಸಿತು. ಆದರೇ ನನಗೆ ಇಷ್ಟವಾಗಲಿಲ್ಲ. ನಾನವನನ್ನು ರೂಮಿಗೆ ಕರೆಸಿ “ಏನು ಕಿರಣ್! ಈ ನಾಟಕ ಮೂಢನಂಬಿಕೆಗಳನ್ನು ಸಮರ್ಥಿಸುವಂತೆ ಇದೆ. ನಮ್ಮಂಥಾ ಓದಿಕೊಂಡವರು ಹೀಗೆ ಬರೆದರೆ ಹೇಗೆ? ಯಾವುದೇ ವಿಷಯವನ್ನು ಹೇಳುವುದಂದರೆ ತಾರ್ಕಿಕವಾಗಿ ಹೇಳಬೇಕು. ಇಂತಹ ನಾಟಕವನ್ನು ಪ್ರದರ್ಶಿಸಲು ನಾನು ಒಪ್ಪುವುದಿಲ್ಲ. ಬೇರೆ ನಾಟಕ ಪ್ರಯತ್ನಿಸು” ಎಂದೆ. ಅವನು ಸುಮ್ಮನಿದ್ದ. ನಾನು ಸ್ವಲ್ಪ ಅನುನಯವಾಗಿ “ಹೆಚ್ಚೇನಿಲ್ಲ. ಕಣ್ಣು ಮುಚ್ಚಿಕೊಂಡು ಪ್ರತಿ ಒಂದು ವಿಷಯವನ್ನೂ ನಂಬುತಿದ್ದ ಮುಖ್ಯ ಪಾತ್ರ, ನಾಟಕದ ಕೊನೆಗೆ ಬಂದು ಅವೆಲ್ಲ ತಪ್ಪೆಂದು ತಿಳುಕೊಂಡ ಹಾಗೆ ಬದಲಾಯಿಸಿದರೆ ಸಾಕು.” ಎಂದೆ. “ತಪ್ಪು ಅಂತ ತಿಳಿದುಕೊಳ್ಳುವ ಹಾಗೆ ಬರೆಯಬೇಕೇ? ಹೇಗೆ ಬರೆಯಬೇಕು ಅದು ?” ಅಂತ ಮರು ಪ್ರಶ್ನಿಸಿದ. “ಬಹಳ ಸುಲಭ. ಅವನು ಯಾವ ವ್ಯಕ್ತಿಯಿಂದಾ ಪ್ರಭಾವಿತನಾದನೋ ಆ ಗುರುಗಳಿಗೇ ಈ ಆಚಾರಗಳಂದ್ರೇ ನಂಬಿಕೆಯಿಲ್ಲವೆಂದೂ.. ಆತನೇ ಅವೆಲ್ಲಾ ಪಾಲಿಸುವವನಲ್ಲವೆಂದೂ ಬರಿಯಬಹದು. ಇಲ್ಲಾಂದ್ರೆ ಶಾಸ್ತ್ರ, ಆಚಾರಗಳಂತ ಮಾತಾಡುವವನಿಗೆ ಜೀವನದಲ್ಲಿ ಒಂದು ದೊಡ್ಡ ಎದುರೇಟು ಬಿದ್ದಿದೆಯೆಂದು, ಇವೆಲ್ಲಾ ನಂಬಿಕೆಗಳು ಇಲ್ಲದವನಿಗೆ ದೊಡ್ಡ ವಿಜಯ ಸಿಕ್ಕಿದೆಯೆಂದೂ ಬರಿಯಬಹದು. ಇಲ್ಲಂದ್ರೇ.. ” ಉತ್ಸಾಹದಿಂದ ಹೇಳುತ್ತಿರುವ ನಾನು ಅವನ ಮುಖದಲ್ಲಿ ಚಿತ್ರವಾದ ಕಿರುನಗೆ ನೋಡಿ ಸುಮ್ಮನಾಗಿಬಿಟ್ಟೆ.

“ಊ..” ಎಂದ ಅವನು ಪರಿಹಾಸಪೂರ್ವಕವಾಗಿ. “ಚೆಂದಾಗಿದೆ. ತರ್ಕ ಎಂದರೆ ಇದೇನೋ ? ನಾನಿನ್ನೇನೋ ಎಂದು ತಿಳಿದುಕೊಂಡಿದ್ದೆ.” ಎಂದ. ಅವನ ಆ ಮಾತು ಅಂದ ರೀತಿ ನೋಡಿ ನನ್ನ ಮೈಯೆಲ್ಲಾ ಕಂಪಿಸಿತು. “ನೀವು ಹೇಳಿದ್ದು ಸರಿಯಾಗಿಯೇ ಇದೆ. ಇಂತಹ ಕಥೆಗಳು ಬರೆಯುವ ಬರಹಗಾರರೆಲ್ಲರೂ ಇಂಥಾ ಮುಕ್ತಾಯಗಳನ್ನೇ ನೀಡುವುದು.. ಬಹಳಾ ಖ್ಯಾತಿ ಗಳಿಸಿದ ಕಾದಂಬರಿಗಳಲ್ಲೂ, ದೊಡ್ಡ ಪುರಸ್ಕಾರ ಪಡೆದ ಕಾದಂಬರಿಗಳಲ್ಲೂ ಇಂಥಾವೇ ಇವೆ. ಸಿನಿಮಾಗಳೂ ಹೀಗೇ ಬಂದಿವೆ. ನಿಜ, ನೀವು ಹೇಳಿದ್ದು ನಿಜವೇ.” ವಿಷಯವನ್ನೆಲ್ಲಾ ಅರ್ಥ ಮಾಡಿಕೊಂಡಾಗ ಅಮಾಯಕನಾಗಿ ಅವನು ಅಭಿನಯ ಮಾಡುತ್ತಿದ್ದರೆ ನನಗೆ ಹೊಟ್ಟೆ ಹುರಿದಂತಾಯಿತು. ಯಜಮಾನನೆಂಬುವ ಅಂಜಿಕೆ ಇಲ್ಲದೇ “ಓಹೋ, ತರ್ಕ ಎನ್ನುವುದಿದುವೇ? “ ಅಂತ ತನ್ನೊಳಗೆ ತಾನು ಗುಣಿಗುಣಿಸುತ್ತಿದ್ದರೆ ನಾನು ನಿಗ್ರಹ ಕಳೆದುಕೊಂಡು ಕಿರುಚಿದೆ.

“ಅಲ್ಲ, ಇದು ತರ್ಕವಲ್ಲ. ಅದು ನನಗೂ ಗೊತ್ತು. ನಾನು ಹೇಳಿದ್ದು ನಾಟಕ ಬರೆಯುವ ಮುಂಚೆ ನೀನು ತಾರ್ಕಿಕವಾಗಿ ಯೋಚನೆ ಮಾಡಿ ಯಾವುದನ್ನು ಸಮರ್ಥಿಸುವಿಯೋ, ಯಾವುದಕ್ಕೆ ಬೆಂಬಲ ನೀಡುವಿಯೋ ಯೋಚಿಸಿ, ನಿಶ್ಚಯ ಮಾಡಿಕೊಂಡು ಅದಕ್ಕೆ ತಕ್ಕಂಥಹ ಕಲ್ಪನೆ ಮಾಡಿರಬೇಕೆಂದು ಮಾತ್ರ..!” ಕಿಂಚಿತ್ ಪೌರುಷದಿಂದ ಅಂದೆ. “ಹಾಗೇ ರೀ ನಾನು ಬರೆದಿದ್ದು” ಎಂದು ಗಂಭೀರವಾಗಿ ಹೇಳಿದ. “ನೀವು ಹೇಳಿದ ತರ್ಕ ಒಂದೇ ಅಲ್ಲ. ಅದರ ಜೊತೆಯಲಿ ಹಿರಿಯರೂ, ಶ್ರೇಯೋಭಿಲಾಷಿಗಳೂ ಎಷ್ಟೋ ಜನರು ಕೊಟ್ಟ ಅನುಭವಸಾರ. ತಾಯಾಗಿ ದಿಶಾ ನಿರ್ದೇಶನ ಮಾಡುವ ಶಾಸ್ತ್ರ ಪ್ರಮಾಣವು.. ಇವೆಲ್ಲಾ ಸೇರಿಸಿ ಮನುಷ್ಯನಿಗೆ ಶ್ರೇಯಸ್ಸು ನೀಡುವುದು ಯಾವುದೆಂದು ನಿರ್ಣಯ ಮಾಡಿಕೊಂಡು, ಅದಕ್ಕೆ ಅನುಕೂಲವಾಗಿ ಮುಖ್ಯ ಪಾತ್ರವನ್ನು ಕಲ್ಪಿಸಿದೆ. ಅನಾಲೋಚಿತವಾಗಿ ಬರೆದಿಲ್ಲ.” ಎಂದ. ನಾನು ಸ್ಪಂದಿಸುವುದರೊಳಗೆ, “ತರ್ಕ ಎನ್ನುವುದು ಎಲ್ಲಾ ಕಡೆ ಕೆಲಸ ಮಾಡುವ ದಿವ್ಯೌಷಧವೇನಲ್ಲರಿ. ಅದಕ್ಕೂ ಮಿತಿ ಇದೆ.” ಎಂದ.

ನಾನು ನಿರಾಕರಿಸುತ್ತಾ, “ ತರ್ಕವನ್ನಷ್ಟು ಸುಲಭವಾಗಿ ತೆಗೆದು ಹಾಕಬೇಡ” ಎಂದೆ. ಒಂದು ಸಾಧಾರಣ ಕುಟುಂಬದಿಂದ ಬಂದು ನಾನು ಇವತ್ತು ಈ ಸ್ಥಾಯಿಗೆ, ಹುದ್ದೆಗೆ ಸೇರಿದೆನಂದರೆ ಅದಕ್ಕೆ ಕಾರಣ ತಾರ್ಕಿಕವಾದ ನನ್ನ ಯೋಚನೆಯೇ.” ಹೆಮ್ಮೆಯಿಂದ ಹೇಳಿಕೊಂಡೆ. “ಹೇಗೆ ಹೇಳಬಲ್ಲಿರಿ..?”. ಅವನು ನನ್ನ ರೇಗಿಸುತ್ತಿರುವನೆಂದು ಅನಿಸಿತು. ಗಂಟಲು ಸರಿಮಾಡಿಕೊಂಡು, ಗಂಭೀರವಾಗಿ ಹೇಳಿದೆ.
“ತರ್ಕ ನನ್ನ ಬೆಳವಣಿಗೆಗೆ ಹೇಗೆ ಉಪಯೋಗಕರವಾಗಿತ್ತು ಎಂದು ಹೇಳಲು ಬಹಳಷ್ಟು ಘಟನೆ ಇವೆ. ಆದರೆ ಅದರಲ್ಲೊಂದು ಮುಖ್ಯವಾಗಿದ್ದು ಹೇಳುವೆ. “ನೋಡು, ಯಾರ ಜೀವನದಲ್ಲೂ ಮೊದಲನೇ ಉದ್ಯೋಗ ಕೀಲಕ. ಆ ಹೆಜ್ಜೆ ಸರಿಯಾಗಿ ಬಿದ್ದರೇ ಇನ್ನು ತಿರುಗಿ ನೋಡುವುದೇ ಬೇಕಿಲ್ಲ. ನನ್ನ ಮೊದಲನೇ ಉದ್ಯೋಗ ನನಗಾಗೇ ಸಿಕ್ಕಿದೆ. ಉದ್ಯೋಗಕ್ಕೆಂತ ಅರ್ಜಿ ಸಲ್ಲಿಸುವುದು, ಇಂಟರ್ವ್ಯೂ ಗೆ ಹಾಜರಾಗುವುದು ಇದೆಲ್ಲಾ ಇಲ್ಲದೇನೇ ಒಬ್ಬ ದೊಡ್ಡ ಉದ್ಯಮಿ ನನ್ನ ಗುರುತಿಸಿ ತನ್ನ ಕಂಪೆನಿಯಲ್ಲಿ ಕೆಲಸ ಕೊಟ್ರು. ಐದಾರು ವರ್ಷಗಳ ಅನುಭವ ಇದ್ದರೂ ಸಿಗದಂಥಹಾ ಕೆಲಸ ನನಗೆ, ಅಂದರೆ ಆಗಲೇ ಓದು ಮುಗಿಸಿ ಬಂದವನಿಗೆ ಸಿಕ್ಕಿದೆ”.

“ಇರಬಹದು, ಆದರೆ ಅದು ನಿಮ್ಮ ತಾರ್ಕಿಕ ಯೋಚನೆಯಿಂದಲೇ ಹಾಗಾಗಿದೆ ಎಂದು ಹೇಗೆ ಹೇಳುವಿರಿ?” ವಿಸ್ಮಯವಾಗಿ ಕೇಳಿದ. “ಯಾಕೆಂದರೆ ಆತ ನನಗೆ ಪರಿಚಯವಾದ ಸಂದರ್ಭದಲ್ಲಿ ನಾನೊಂದು ವಿಷಯದ ಬಗ್ಗೆ ವಿಶ್ಲೇಷಣಾತ್ಮಕವಾಗಿ ಅದ್ಭುತ ಪ್ರಸಂಗವನ್ನು ಮಾಡಿದ್ದೆ. ಆ ವಿಷಯವೇನೆಂಬುದು ನನಗೀಗ ನೆನಪಿಲ್ಲ. ಆದರೇ ಆತ ನನ್ನ ಪ್ರಶಂಸಾಪೂರ್ವಕವಾಗಿ ನೋಡಿ ಉದ್ಯೋಗ ಕೊಡ್ತೀನಿ, ಮಾಡ್ತೀಯಾ ಅಂತ ಕೇಳಿದ.” ನನ್ನ ಮಾತು ಕೇಳಿದ ತಕ್ಷಣ “ಮೈಸೂರ್ ಚಾಮುಂಡೇಶ್ವರೀ ದೇವಸ್ಥಾನದ ಮುಂದೆ, ಅಲ್ವೇ..?” ಎಂದು ಕಿರಣ್ ಕೇಳಿದ.

“ಹೌದು..!, ನಿನಗೆ ಹೇಗೆ ಗೊತ್ತಾಯಿತು?” ಅವನ ಮಾತು ಕೇಳಿ ನನ್ನ ಆಶ್ಚರ್ಯಕ್ಕೆ ಮಿತಿ ಇಲ್ಲ. “ಹೇಳುವೆ. ನೀವೇಕೆ ಅಲ್ಲಿ ಹೋಗಿದ್ದರೆಂದು ಹೇಳಬಲ್ಲಿರಾ..?” ಎಂದ. “ತಪ್ಪದಾಗಿ ಹೇಳ್ತೀನಿ. ಇಂಜಿನಿಯರಿಂಗ್ ನಲ್ಲಿದ್ದ ರಾಘವ ಎನ್ನುವ ಗೆಳೆಯನೊಬ್ಬನು ನನ್ನನ್ನು ಒತ್ತಾಯದಿಂದ ಅಲ್ಲಿಗೆ ಕರೆದುಕೊಂಡು ಹೋಗಿದ್ದ. “ಅಲ್ಲಿ ಅವತ್ತು ಮುಂಜಾನೆ ಏನು ಮಾಡಿದ್ರಿ? ಕಿರುನಗೆಯಿಂದ ಕೇಳಿದ ಕಿರಣ್. “ಅವತ್ತು.. ಅಲ್ಲಿ ಗುಡಿಯಲ್ಲಿ ಆ ಉದ್ಯಮಿಯ ಹೆಂಡತಿ ದೀಪ ಹಚ್ಚುತ್ತಿದ್ದರೆ, ರಾಘವ ಆಕೆಯ ಬಳಿಗೆ ಹೋಗಿ, “ಆಂಟೀ, ನಮಗೆ ಸ್ವಲ್ಪ ತುಪ್ಪ ಕೊಡ್ತೀರಾ?” ಅಂತ ಕೇಳಿದ. ಆಕೆ ಪ್ರಸನ್ನವಾಗಿ ನಮ್ಮ ಕಡೆ ನೋಡಿ ತುಪ್ಪವನ್ನು ಕೊಟ್ಟಳು. ಅವನು ಅರ್ಧ ತುಪ್ಪ ದೀಪದಲ್ಲಿ ಹಾಕಿ ನನಗೆ ಕೊಟ್ಟು ನೀನೂ ಹಾಕು ಎಂದ. ನಾನೂ ಅವನು ಹೇಳಿದ್ದಕ್ಕೆ ಹಾಕಿದೆ. ಆ ಮೇಲೆ ಗುಡಿ ಒಳಗೆ ಹೋದೆವು.” ನಾನು ನೆನಪು ಮಾಡಿಕೊಳ್ಳುತ್ತಾ ಹೇಳುತ್ತಿದ್ದೆ. ಅಷ್ಟರಲ್ಲೇ ಕಿರಣ್.. “ಆಕೆ ಗಂಡನಿಗೆ ಹೇಳಿದರಂತೆ, ನೋಡಿ ಹುಡುಗರು ದೇವರ ದರ್ಶನಕ್ಕೆ ಬಂದಿರುವುರು. ತುಪ್ಪ ಕೇಳಿ ತಗೊಂಡು ದೀಪವನ್ನು ಹಚ್ಚಿದರು. ಇವರಿಗೆ ನೀವು ಯಾವುದಾದರೂ ಉದ್ಯೋಗ ಕೊಡಬಾರದೇ..?” ಎಂದು.

ಕಿರಣ್ ಮಾತು ಕೇಳಿ ನನಗೆ ಚಕ್ಕರ್ ಬಂತು. “ಯಾರು ಹೇಳಿದರು?”.. “ರಾಘವ ಎನ್ನುವರೇ ನಮ್ಮ ತಂದೆಯವರು. ಆಕೆ ನಮ್ಮ ಅಪ್ಪನ ಮುಂದೆ ಆ ಮಾತನ್ನು ತನ್ನ ಗಂಡನಿಗೆ ಹೇಳಿದರಂತೆ. ನಿಮ್ಮನ್ನು ಕೇಳಲಿಕ್ಕೆ ಮೊದಲು ಆತ ನಮ್ಮ ಅಪ್ಪನನ್ನು ಕೇಳಿದ್ದಾರೆ. ಆದರೇ ನಮ್ಮ ಅಪ್ಪ ಊರು ಬಿಟ್ಟು ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೆ ಉದ್ಯೋಗ ಬೇಡವೆಂದಿದ್ದಾರೆ.. ಅವರ ಪರಿಸ್ಥಿತಿ ನಿಮಗೆ ಗೊತ್ತೇ ಇರಬಹುದು. ”ನಾನು ಅಯೋಮಯವಾಗಿ ತಲೆಯಾಡಿಸಿದೆ. “ಜೀವನದಲ್ಲಿ ನಮಗೆ ಅರ್ಥವಾಗದ ಅದ್ಭುತಗಳು ಎಷ್ಟೋ ನಡೆಯುತ್ತಲೇ ಇರುತ್ತವೆ. ಕೆಲವರು ಅದನ್ನ ಅದೃಷ್ಟ, ಪೂರ್ವಜನ್ಮ ಸುಕೃತ ಎನ್ನುವರು. ಕೆಲವರು ಆ ಸಮಯಕ್ಕೆ ತಮಗೆ ತೋಚಿದಂತಾ ‘ಹೇತುವು’ ಗಳನ್ನು ಹೇಳುವರು. ಆದರೇ ಅನಂತ ಕಾಲ ಪ್ರವಾಹದಲ್ಲಿ ಮಾರದೇ ಇರುವ ಹೇತುವೆಲ್ಲಿದೆ? ನಿಜಕ್ಕೂ ಅಂಥಾದೊಂದು ಇದೆಯೇ ? ಇದ್ದರೇ ತರ್ಕವನ್ನೇ ಬಳಸಿ ಅದನ್ನು ಹಿಡಿಯಬಹುದೇ ? ಪರಿಮಿತವಾದ ಈ ಜೀವನದಲ್ಲಿ ಅಷ್ಟಕ್ಕೂ ಮಿತವಾದ ಕಾಲವ ತಗೊಂಡು ನಾವು ಮಾಡುವ ಕಲ್ಪನೆಯ ಉಳುಸಬಲ್ಲೆವಿಯೇ? ಹೇಗೆ? ಅದಕ್ಕೆ ಯಾರನ್ನು ಶರಣು ಬೇಡಬೇಕು? ಯಾರನ್ನು ಆದರ್ಶವಾಗಿ ತಗೊಳ್ಳಬೇಕು?- ಈ ಪ್ರಶ್ನೆಗಳನೆಲ್ಲಾ ಯೋಚಿಸಿದ ನಂತರವೇ ಆ ನಾಟಕವನ್ನು ಬರೆದಿದ್ದೀನಿ. ಅನಾಲೋಚಿತವಾಗಿ ಮಾತ್ರ ಅಲ್ಲ. ಈ ಮಾತನ್ನು ಹೇಳಿ ಕಿರಣ್ ಹೋಗ್ಬಿಟ್ಟ. ನನ್ನ ಮೆದುಳನ್ನ ದೋಸೆಯನ್ನು ತಿರುವಿ ಹಾಕಿದ ಹಾಗೆ ಹಾಕಿ ಹೋಗ್ಬಿಟ್ಟ.

                     *                      *                      *

ಶಿವು ಹೇಳಿ ಮುಗಿಸಿದ ನಂತರ ಎಲ್ಲರು ಮೌನವನ್ನಾಶ್ರಯಿಸಿದೆವು. “ಇಷ್ಟರವರೆಗೂ ಎಂಥಾ ದೊಡ್ಡ ವಿಷಯನ್ನಾದರೂ, ಎಂಥಾ ಕ್ಲಿಷ್ಟವಾದ ಅಂಶವನ್ನಾದರೂ ಚಿಕ್ಕ ತುಂಡುಗಳ ಹಾಗೆ ಹೊಡೆದು ಅರ್ಥ ಮಾಡಿಕೊಳ್ಳುವುದು, ಅದನ್ನ ಎಲ್ಲರಿಗೂ ವಿಶದಪಡಿಸಿ, “ಅರೇ, ಇಷ್ಟೇನಾ? ಎನ್ನಿಸುವನಾಗಿದ್ದೆ. ಆದರೆ ಆ ತುಂಡುಗಳ ಸಹಾಯದಿಂದ ಮೂಲವನ್ನು ಅರಿಯಲು, ಅಣುವಲ್ಲೇ ಬ್ರಹ್ಮಾಂಡವನ್ನು ನೋಡಲು ಬೇರೇ ಏನೋ ವಿಧಾನವಿರಬೇಕನಿಸುತ್ತಿದೆ. ಅದನ್ನು ಹಿಡಿಯಲು ಬರೀ ತರ್ಕ ಸಾಲದು.. ವಿಶ್ಲೇಷಣೆ ಸಾಲದು.. ತಿಳುವಳಿಕೆ ಸಾಲದು.. ಇನ್ನೇನೋ ಬೇಕಿದೆ. ಕಾಲವನ್ನು ಗಂಟೆಗಳು, ನಿಮಿಷಗಳಾಗಿ ಬಿಡಿಸಿ ಬಳಸಿದ ಮಾತ್ರಕ್ಕೇ.. ಗಡಿಯಾರವನ್ನು ತಯಾರಿಸಿದ ಮಾತ್ರಕ್ಕೇ .. ಕಾಲಸ್ವರೂಪವನ್ನೇ ತಿಳಿದುಕೊಂಡ ಹಾಗಲ್ಲ. ಕಾಲವೆಲ್ಲಾ ನಮ್ಮ ಅಧೀನವಾದ ಹಾಗಲ್ಲ.. ಅದಕ್ಕಾಗಿ…” ಶಿವು ಅರ್ಧದಲ್ಲೇ ಬಿಟ್ಟ ಆ ವಾಕ್ಯದನಂತರ ಒಂದು ಗಾಢವಾದ ನಿಶ್ಶಬ್ದವೊಂದು ರೂಮು ತುಂಬಿತು. ಒಂದು.. ಎರಡು.. ಮೂರು.. ಕೆಲವು ಕ್ಷಣಗಳ ನಂತರ.. “ಈಗೇನು ಮಾಡೋಣ?” ಎಂದೆ.. ನಾನು ಆ ನಿಶ್ಶಬ್ದವನ್ನು ಕಳಚುತ್ತಾ…

“ಮಹಾಕಾಲನ ದರ್ಶನಕ್ಕೆ ಹೋಗೋಣವೇ?” ಹರಿ ಕಂಠ ಮೆಲ್ಲಕ್ಕೆ ಕೇಣಿಸಿತು. ತನ್ನ ಅಭಿಮತವೂ ಅದೇ ಎಂದು ಶಿವು ತಲೆಯಾಡಿಸಿದ್ದು ಕಂಡೆ.

ಚಿತ್ರ ಕೃಪೆ:- http://raisingchildren.net.au

Read more from ಲೇಖನಗಳು
2 ಟಿಪ್ಪಣಿಗಳು Post a comment
 1. Achanta Hymavathi
  ಫೆಬ್ರ 24 2017

  ನಮಸ್ತೇ ! ಕಥೆ ಚೆನ್ನಾಗಿದೆ … ಲಕ್ಷ್ಮೀದೇವಿಯವರು ಕಥೆಯಲ್ಲಿ ಮೂಲ ರಚಯಿತ್ರಿ ಬರೆದ ಭಾವವನ್ನು , ಕನ್ನಡ ಪಾಠಕರಿಗೆ
  ಅರ್ಧವಾಗುವ ರಿತಿಯಲ್ಲಿ ಅನುವಾದ ಮಾಡಿದಾರೆ ! ಲಕ್ಷ್ಮೀದೇವಿ ಅವರಿಗೆ ನನ್ನ ಅಭಿನಂದನೆಗಳು !
  ——ಆಚಂಟಹೈಮವತಿ .

  ಉತ್ತರ
 2. ಮಾರ್ಚ್ 6 2017

  ಧನ್ಯವಾದಗಳು ಹೈಮಾವತಿ ಅವರಿಗೆ. /\

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments