ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಬಹುದೇ?
– ಸುರೇಶ್ ಮುಗಬಾಳ್
ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ಇದರ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ, ದೇಶದ ಘನತೆಗೆ ತಕ್ಕಂತೆ ಹುಲಿಯು ರಾಷ್ಟ್ರ ಪ್ರಾಣಿಯಾಗಿರುವುದು ದೇಶಪ್ರೇಮಿಗಳಾದ ನಮಗೆ ಒಂದು ರೀತಿಯ ಗೌರವವೆಂದೇ ಭಾವಿಸಿದ್ದೇವೆ. 2006ರ ಹುಲಿಗಣತಿಯ ಪ್ರಕಾರ ಇಡೀ ಭಾರತದಲ್ಲಿ ಕೇವಲ 1411 ಹುಲಿಗಳು ಮಾತ್ರ ಬದುಕಿದ್ದವು. ಇನ್ನೇನು ನಮ್ಮ ರಾಷ್ಟ್ರ ಪ್ರಾಣಿ ನಮ್ಮ ದೇಶದಲ್ಲೇ ಇಲ್ಲವಾಗುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಹುಲಿಗಳ ರಕ್ಷಣೆಗಾಗಿ ಹಲವಾರು NGO ಗಳು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಎಚ್ಚೆತ್ತುಕೊಂಡ ಭಾರತ ಸರ್ಕಾರ ಹುಲಿಗಳ ರಕ್ಷಣೆಗೆ ಮುಂದಾಯಿತಲ್ಲದೆ ಹುಲಿಗಳನ್ನು ಸಂರಕ್ಷಿಸಿ ಉಳಿಸುವ ಕಾರ್ಯಕ್ಕೆ ಮೊದಲಾಯಿತು. ಈ ಎಚ್ಚರಿಕೆ ಕ್ರಮದ ಫಲವಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗತೊಡಗಿತು. 2011 ರ ಗಣತಿಯಲ್ಲಿ 1706 ರಷ್ಟಿದ್ದ ಹುಲಿಗಳ ಸಂಖ್ಯೆ 2014 ರಲ್ಲಿ 2226 ರಷ್ಟಾಯಿತು. ಭಾರತದ ಮಟ್ಟಿಗೆ ಇದೊಂದು ಧನಾತ್ಮಕ ಅಂಶವಾಗಿತ್ತು. ಇನ್ನು ಇತ್ತೀಚಿನ ಹುಲಿಗಣತಿಯ ಪ್ರಕಾರ ಗರಿಷ್ಠ 2500 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಸುಂದರ್ಬನ್ ಕಾಡುಗಳನ್ನು ಹುಲಿಗಳ ಸಂರಕ್ಷಿತಾರಣ್ಯ ಎಂದು ಗುರುತಿಸುವುದಕ್ಕೆ ಮೊದಲು ಈ ಅಂಶವನ್ನೊಮ್ಮೆ ನೋಡಿ. ಇಡೀ ಭಾರತದಲ್ಲಿ ಅತೀ ಹೆಚ್ಚು ಹುಲಿಗಳಿರುವುದು ನಮ್ಮ ಕರ್ನಾಟಕದಲ್ಲಿ.
ಇಂತಹ ಕರ್ನಾಟಕದಲ್ಲಿ ಜನಿಸಿ ಸಾಹಿತಿಗಳು, ಬರಹಗಾರರು ಎಂದು ಗುರುತಿಸಿಕೊಂಡಿರುವ ಕು.ವೀರಭದ್ರಪ್ಪನವರು ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಸ್ಥಾನಮಾನದಿಂದ ಕೆಳಗಿಳಿಸಿ ಕತ್ತೆಯನ್ನು ನಮ್ಮ ರಾಷ್ಟ್ರ ಪ್ರಾಣಿಯನ್ನಾಗಿ ಮಾಡಬೇಕೆಂದು ಹೇಳಿ ವಿವಾದಕ್ಕೆ ಗುರಿಯಾದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಗೆ ವಿಪರೀತ ಟೀಕೆಗಳು ಕೇಳಿಬಂದವು. ಇದಕ್ಕೆ ಅವರು ಕೊಟ್ಟ ಸಮಜಾಯಿಷಿ ಕತ್ತೆಯ ಹಾಲು ಅತ್ಯಂತ ಶ್ರೇಷ್ಠಗುಣಗಳನ್ನೊಂದಿರುವ ಕಾರಣಕ್ಕೆ ಅದನ್ನು ರಾಷ್ಟ್ರೀಯ ಪ್ರಾಣಿಯಾಗಿಸಬೇಕೆಂದು ಗೋವನ್ನು ಹಿನ್ನೆಲೆಯಾಗಿಟ್ಟುಕೊಂಡು ತಮ್ನ ಹೇಳಿಕೆಯನ್ನು ವ್ಯಂಗ್ಯವಾಗಿ ಬಲಪಂಕ್ತಿಯರನ್ನು ಅಣುಕಿಸುವ ಧಾಟಿಯಲ್ಲಿ ನೀಡಿದರು. ಇರಲಿ, ಅವರ ಮಾತಿನ ಅರ್ಥವೇನೇ ಇರಲಿ, ಅದು ಅವರ ಬುದ್ದಿಮಟ್ಟಕ್ಕೆ ಬಿಟ್ಟ ವಿಚಾರ. ಕೇವಲ ಹಾಲು ನೀಡುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ಕತ್ತೆಯನ್ನು ರಾಷ್ಟ್ರ ಪ್ರಾಣಿಯಾಗಿ ನಿರ್ಧರಿಸಲಾಗದು. ಒಂದು ದೇಶದ ರಾಷ್ಟ್ರೀಯ ಪ್ರಾಣಿ ಎಂದು ಕರೆಸಿಕೊಳ್ಳಬೇಕಾದರೆ ಅದಕ್ಕೆ ಕೆಲವು ಮಾನದಂಡಗಳ ಅವಶ್ಯವಿರುತ್ತದೆ. ಪ್ರಾಣಿಯ ಗುಣ, ಅದರ ಸ್ವಭಾವ, ದೇಹ ರಚನೆ, ಬುದ್ದಿವಂತಿಕೆ, ಚುರುಕುತನ, ಚಟುವಟಿಕೆ ಇನ್ನೂ ಮುಂತಾದವುಗಳು ಮಾನದಂಡಗಳಾಗಿರುತ್ತವೆ. ಒಂದು ದೇಶದ ರಾಷ್ಟ್ರ ಪ್ರಾಣಿ ಯಾವುದು ಎಂಬುದರ ಆಧಾರದ ಮೇಲೆಯೇ ಆ ದೇಶದ ಜನರನ್ನೂ ಹಾಗೂ ದೇಶದ ಚಿತ್ರಣವನ್ನೂ ಅಳೆಯಲು ಸಾಧ್ಯ.
ಜೈವಿಕ ಅಂಶಗಳ ಪ್ರಕಾರ, ಈ ದೇಶದಲ್ಲಿರುವಷ್ಟು ವ್ಯಾಘ್ರಗಳು ಇನ್ನಾವುದೇ ದೇಶದಲ್ಲೂ ಕಂಡುಬರುವುದಿಲ್ಲ, ಜಗತ್ತಿನಲ್ಲಿ ಬದುಕುಳಿದಿರುವ ಹುಲಿಗಳ ಪೈಕಿ ಶೇಕಡಾ 60% ಹುಲಿಗಳು ಭಾರತದಲ್ಲಿವೆ, ಇದಕ್ಕೆ ಭಾರತದ ವಾತಾವರಣ-ಹವಾಗುಣ ಮುಖ್ಯ ಕಾರಣವಿರಬಹುದು. ಹುಲಿಗಳ ಸ್ವಭಾವವೂ ಈ ಪ್ರದೇಶದ ಹವಾಗುಣಕ್ಕೆ ಹೊಂದಿಕೊಳ್ಳುವಂತಿದೆ, ಭಾರತದ ಕಾಡುಗಳು ನಿತ್ಯಹರಿದ್ವರ್ಣತೆಯಿಂದ ಕೂಡಿರುವುದರಿಂದ ದಟ್ಟ ಕಾಡುಗಳಲ್ಲಿ ಹುಲಿಗಳು ವಾಸಿಸಲು ಇಷ್ಟಪಡುತ್ತವೆ.. ಇಲ್ಲವಾದರೆ ಹುಲಿಗಳು ಈ ದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತೇ? ಸರಿ ಹುಲಿಯೇ ಏಕೆ? ಬೇರೆ ಪ್ರಾಣಿಗಳು ರಾಷ್ಟ್ರೀಯ ಪ್ರಾಣಿಗಳಾಗಿ ಸ್ವೀಕರಿಸಬಹುದಲ್ಲವೇ? ಅವುಗಳಿಗೆ ಯೋಗ್ಯತೆ ಇಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಹೌದು, ಸ್ವೀಕರಿಸಬಹುದು, ಹುಲಿಯೇ ದೇಶದ ರಾಷ್ಟ್ರೀಯ ಪ್ರಾಣಿಯಾಗಬೇಕೆಂದಿಲ್ಲ. ಈ ಹಿಂದೆ ಅಂದರೆ 1972ರಲ್ಲಿ ಇಂದಿರಾ ಗಾಂಧಿಯವರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಾಣಿಯನ್ನು ಹುಲಿಯೆಂದು ಘೋಷಿಸಿದರು. ಇದಕ್ಕೂ ಮುನ್ನ ಸಿಂಹ ನಮ್ಮ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ಗಳಿಸಿತ್ತು. ಆದರೆ ಭಾರತದ ಎಲ್ಲಾ ಸ್ಥಳಗಳಲ್ಲಿಯೂ ಸಿಂಹಗಳು ಕಂಡುಬರುವುದಿಲ್ಲ ಮತ್ತು ಹುಲಿಗಳು ದೇಶದ ಬಹುತೇಕ ರಾಜ್ಯಗಳಲ್ಲಿ ಕಂಡುಬರುತ್ತವೆ ಎಂಬ ಕಾರಣಕ್ಕೆ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಬೇಕೆಂಬ ಕೂಗು ಅಂದಿನ ಸರ್ಕಾರಕ್ಕೆ ಬಂದಿತು. ಹುಲಿಯು ಶಕ್ತಿ, ದೈಹಿಕ ಸೌಂದರ್ಯ, ಸಹಿಷ್ಣುತೆ, ಚಾಕಚಕ್ಯತೆ, ಬುದ್ದಿವಂತಿಕೆಯ ಪ್ರತೀಕವೆಂಬಂತೆ ಅದರ ವಿಶಿಷ್ಟ ಗುಣಗಳಿಗಾಗಿ ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಸ್ವೀಕರಿಸಲಾಯಿತು.
ಇಲ್ಲಿ ಇನ್ನೂ ಒಂದು ಮುಖ್ಯ ವಿಚಾರ ಪ್ರಸ್ತಾಪಿಸಬೇಕಿದೆ. 1972ರಲ್ಲಿ ಸಿಂಹಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದ ಕಾರಣವನ್ನು ನೀಡಿ ಹುಲಿಯನ್ನು ರಾಷ್ಟ್ರ ಪ್ರಾಣಿಯನ್ನಾಗಿಸಿದರು. ಆದರೆ ಸಿಂಹಗಳ ಸಂರಕ್ಷಣೆಯ ವಿಚಾರವಾಗಿ ಅಂದು ಯಾವುದೇ ಕಠಿಣ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳಲಿಲ್ಲ. ಅದೇ 2006ರಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿತ್ತು. ಕಳ್ಳ ಭೇಟೆ, ಅಪಘಾತ, ಅರಣ್ಯಗಳ ನಾಶ, ಮಾನವ-ವ್ಯಾಘ್ರಗಳ ಸಂಘರ್ಷದಿಂದಾಗಿ ಹುಲಿಗಳು ಕೇವಲ 1411 ಮಾತ್ರ ಉಳಿದಿತ್ತು ಎಂಬ ಅಂಶ ಬೆಳಕಿಗೆ ಬಂದಿತು. ಕೆಲ ಸಂಘಟನೆಗಳಂತು ಸರ್ಕಾರವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದನ್ನು ವಿರೋಧಿಸಿ ಭಾರತದಲ್ಲಿ ಹುಲಿಗಳ ನಿರ್ನಾಮದ ನಂತರ “ಕತ್ತೆ, ಆಡು, ಕೋತಿ ಹಾಗೂ ಇಲಿ” ಇವುಗಳಲ್ಲಿ ಒಂದನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವ ದಿನಗಳು ದೂರವಿಲ್ಲ ಎಂದು ರಸ್ತೆಗಿಳಿದಿದ್ದವು. ಅಲ್ಲಿಯವರೆಗೂ ಕೈಕಟ್ಟಿ ಕುಳಿತಿದ್ದ ಸರ್ಕಾರ ಹುಲಿಗಳ ಸಂರಕ್ಷಣೆಗಾಗಿ Save our Tiger 1411 ಅಭಿಯಾನವನ್ನು ಪ್ರಾರಂಬಿಸಿತು. ಇದಾದ ನಂತರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಯಿತು.
ದೇಶದ ರಾಷ್ಟ್ರೀಯ ಪ್ರಾಣಿಯಾಗಿ ಆನೆಯನ್ನು ಸ್ವೀಕರಿಸಬೇಕೆಂಬ ವಾದ ಅನೇಕ ಇತಿಹಾಸಜ್ಞರದ್ದು. ಭಾರತದ ಭವ್ಯ ಪರಂಪರೆಯಲ್ಲಿ, ಈ ದೇಶದ ನಿರ್ಮಾಣದಲ್ಲಿ ಹಾಗೂ ಪುರಾಣಗಳ ಆಧಾರದಲ್ಲಿ ಆನೆಯು ಶ್ರೇಷ್ಠ ಸ್ಥಾನವನ್ನು ಹೊಂದಿದೆ. ದೊಡ್ಡ ದೊಡ್ಡ ದೇವಾಲಯಗಳ ನಿರ್ಮಾಣದಲ್ಲಿ, ಬೃಹತ್ ಕಟ್ಟಡಗಳ ನಿರ್ಮಾಣ ಯೋಜನೆಗಳಲ್ಲಿ ಅಷ್ಟೇ ಏಕೆ ಭಾರತೀಯರ ರಾಜರುಗಳು ಆನೆಯನ್ನು ತಮ್ಮ ಯುದ್ಧದ ಪ್ರಮುಖ ಶಕ್ತಿಯಾಗಿ ಬಳಸಿಕೊಂಡಿದ್ದಾರೆ. ಆನೆಯ ಕೊಡುಗೆ ಬೇರೆಲ್ಲಾ ಪ್ರಾಣಿಗಳಿಗಿಂತ ಭಿನ್ನತೆಯಿಂದ ಕೂಡಿರುವಂತಹದ್ದು ಎಂಬ ಕಾರಣಕ್ಕೆ ಆನೆಯನ್ನು ನಮ್ಮ ರಾಷ್ಟ್ರ ಪ್ರಾಣಿಯಾಗಬೇಕೆಂಬ ಕೂಗು ಇದೆ.
ಹಾಗಾದರೆ ಕತ್ತೆ? ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಬಹುದೇ? ಏಕಿಲ್ಲ? ಕತ್ತೆಯನ್ನು ಬೆಂಬಲಿಸಿ ಅದರ ವಿಶಿಷ್ಟತೆಗಳನ್ನು ಪಟ್ಟಿಮಾಡಿ ಭಾರತದ ವಸ್ತುಸ್ಥಿತಿಗೆ ಆ ಪ್ರಾಣಿಯ ವೈಶಿಷ್ಟ್ಯತೆಗಳು ಹೊಂದಾಣಿಕೆಯಾಗುವುದಾದರೆ ಅದನ್ನೂ ಕೂಡ ಆ ಸ್ಥಾನಕ್ಕೇರಿಸಬಹುದು. ಕತ್ತೆ ಕಷ್ಟ ಜೀವಿ, ಸಾಮಾಜಿಕವಾಗಿ ಸೂಚಿಸುವಾಗ ಕತ್ತೆಯನ್ನು ಕಡಿಮೆ ಬುದ್ಧಿವಂತಿಕೆಯ ಪ್ರಾಣಿ ಎಂದು ಹೇಳುವುದುಂಟು, ಕುದುರೆಯಂತೆ ಕಂಡರು ಕುಳ್ಳ ದೇಹದ ಅತೀ ಮುಗ್ಧತೆಯ ಪ್ರಾಣಿಯದು. ಒಂದು ವೇಳೆ ಕತ್ತೆಯನ್ನು ಆ ಸ್ಥಾನಕ್ಕೇರಿಸಿದ್ದೇ ಆದರೆ ಅದರಿಂದಾಗುವ ಲಾಭಗಳೇನು? ಲಾಭಗಳೇನೂ ಇಲ್ಲ. ಭಾರತದ ಪರಿಸ್ಥಿತಿಗೆ ಆ ಪ್ರಾಣಿಯ ಗುಣಗಳು-ಸೂಚಕಗಳು ಹೊಂದಾಣಿಕೆಯಾಗದು. ಕುಂ.ವೀ.ರವರು ಬುದ್ದಿಜೀವಿಗಳೆಂದು ಕರೆಸಿಕೊಂಡವರು ಕತ್ತೆಯು ನೀಡುವ ಉತ್ತಮ ಹಾಲಿನ ಗುಣಗಳು ಅವರಿಗೆ ಮೆಚ್ಚುಗೆಯಾಯಿತು ಎಂಬ ಕಾರಣಕ್ಕೆ ಅದನ್ನು ರಾಷ್ಟ್ರ ಪ್ರಾಣಿಯನ್ನಾಗಿಸಲು ಸಾಧ್ಯವಿಲ್ಲ ( ಕತ್ತೆಯನ್ನು ಕೀಳಾಗಿ ನೋಡಿರುವುದಲ್ಲ ). ಅದೂ ಅಲ್ಲದೆ ಸನ್ಮಾನ್ಯ ಪ್ರಧಾನಿಗಳು ತಾವು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗಿನಿಂದ ಸಿಂಹವನ್ನು ಮತ್ತೆ ರಾಷ್ಟ್ರೀಯ ಪ್ರಾಣಿಯನ್ನಾಗಿಸಬೇಕೆಂಬ ಆಶಯವನ್ನಿಟ್ಟುಕೊಂಡಿರುವಾಗ ಕತ್ತೆಗೆ ಆ ಸ್ಥಾನಮಾನ ಸಧ್ಯಕ್ಕಂತು ಸಿಗುವ ಲಕ್ಷಣಗಳಿಲ್ಲ.
ಇನ್ನು ಕೊನೆಯದಾಗಿ, ರಾಷ್ಟ್ರ ಪ್ರಾಣಿಯ ಬಗ್ಗೆ ಚರ್ಚೆ ಎದ್ದಿರುವ ಈ ಸಂದರ್ಭದಲ್ಲಿ ಭಾರತದ ವಿಶಿಷ್ಟ ಪ್ರಾಣಿಗಳ ಸ್ಥಿತಿಗತಿಗಳ ಬಗ್ಗೆಯೂ ಯೋಚಿಸಬೇಕಾದ ಅನಿವಾರ್ಯತೆ ಇದೆ. ವಿನಾಶದ ಅಂಚಿನಲ್ಲಿರುವ ಪ್ರಾಣಿಗಳನ್ನು ಸಂರಕ್ಷಿಸಿ ಅವುಗಳ ಸಂತತಿಯ ಚಿಗುರುವಿಕೆಗೆ ಸರ್ಕಾರ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಡೀ ಭಾರತದಲ್ಲಿರುವ ಸಿಂಹಗಳ ಸಂಖ್ಯೆ 450 ಕ್ಕಿಂತಲೂ ಕಡಿಮೆಯೆಂದರೆ ಅವುಗಳನ್ನು ಉಳಿಸಿಕೊಳ್ಳುವ ಜರೂರು ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಕೇವಲ ಸಿಂಹವಷ್ಟೇ ಅಲ್ಲ, ಕೃಷ್ಣಮೃಗ, ಕೆಂಪು ಪಾಂಡ, ಹಿಮ ಚಿರತೆ, ಘೇಂಢಾಮೃಗದಂತಹ ಪ್ರಾಣಿಗಳು ಅಳಿವಿನಂಚಿನ ಪ್ರಾಣಿಗಳ ಪಟ್ಟಿಯಲ್ಲಿವೆ. ಹುಲಿಯನ್ನು ರಾಷ್ಟ್ರ ಪ್ರಾಣಿಯೆಂಬ ಕಾರಣಕ್ಕಾಗಿ ನೀಡಿದ ಮಹತ್ವ ಅಳಿವಿನಂಚಿನಲ್ಲಿರುವ ಇತರೆ ಪ್ರಾಣಿಗಳಿಗೂ ನೀಡಬೇಕಾಗುತ್ತವೆ. ಇಲ್ಲವಾದರೆ ಉಪಖಂಡದಲ್ಲಿ ಕಂಡುಬರುವ ಈ ಪ್ರಾಣಿಗಳು ಮುಂದೊಂದು ದಿನ ಪ್ರಾಣಿಸಂಗ್ರಹಾಲಯಗಳಲ್ಲೂ ನೋಡಲು ಸಿಗದಿರಬಹುದು.
ಧನ್ಯವಾದಗಳು.
ಕತ್ತಿಯೊಂದನ್ನೇ ಏಕೆ ನಾಯಿ, ನರಿ, ಹಂದಿ ಇತ್ಯಾದಿ ಎಲ್ಲ ಪ್ರಾಣಿಗಳನ್ನೂ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಾಣಿಗಳನ್ನಾಗಿ ಮಾಡಬಹುದು. ಮನುಷ್ಯರಿಗೆ ಮಾಡಲು ಬೇರೇನು ಕೆಲಸವಿಲ್ಲ ನೋಡಿ.