ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೨ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಟೀಕೆಗಳ ಸ್ವರೂಪದಲ್ಲಿ ಆಗಿರುವ ಬದಲಾವಣೆಯನ್ನು ಅರಿಯಬೇಕಾದರೆ ಪಾಶ್ಚಿಮಾತ್ಯರಲ್ಲಿ ಕ್ರಿಶ್ಚಿಯಾನಿಟಿಯಿಂದ ಆರಂಭವಾದ ಹೊಸ ಟೀಕೆಯ ಪ್ರಕಾರವನ್ನು ನಾವಿಲ್ಲಿ ಗಮನಿಸಬೇಕು. ಕ್ರಿಶ್ಚಿಯಾನಿಟಿಯು ಪ್ರಸಾರವಾಗುವಾಗ ಅದರ ನಂಬಿಕೆಗಳು ಯಹೂದಿ ಹಾಗೂ ಗ್ರೀಕರಿಂದ ವ್ಯಾಪಕ ಟೀಕೆಗೊಳಗಾದವು. ಹಳೆ ಒಡಂಬಡಿಕೆಯಲ್ಲಿ ಗಾಡ್ ಮಸೀಹನ ಕುರಿತು ನೀಡಿರುವ ಭರವಸೆಯನ್ನು ಜೀಸಸ್ ನೆರವೇರಿಸಿರುವದರಿಂದ ಯಹೂದಿಗಳು ಜೀಸಸ್ ನ ಪ್ರಾಫಸಿಯನ್ನು ಒಪ್ಪಿ ಕ್ರಿಶ್ಚಿಯನ್ನರಾಗಬೇಕೆಂಬ ವಾದವನ್ನು ಯಹೂದಿಗಳು ಸ್ಪಷ್ಟವಾಗಿ ನಿರಾಕರಿಸಿದರು. ಹಳೇ ಒಡಂಬಡಿಕೆಯ ಕತೆಗಳೇ ಮಾನವನ ನಿಜವಾದ ಚರಿತ್ರೆಯಾಗಿರುವದರಿಂದ ಉಳಿದೆಲ್ಲ ಗತಕಾಲದ ಕತೆಗಳು ಇವಿಲ್ ನಿಂದ ಪ್ರಭಾವಿತವಾಗಿದ್ದು, ಗ್ರೀಕರು ಅವುಗಳನ್ನು ತ್ಯಜಿಸಿ ಕ್ರಿಶ್ಚಿಯಾನಿಟಿಯನ್ನು ಸ್ವೀಕರಿಸಬೇಕು ಎಂಬ ವಾದವನ್ನು ಗ್ರೀಕರು ನಿರಾಕರಿಸಿದರು.