ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 28, 2017

ನಿಜವಾಗಿ ಭಾಷೆ ಅಂದರೆ ಇಷ್ಟೇಯಾ..?

‍ನಿಲುಮೆ ಮೂಲಕ

– ಮಲ್ಲಿ ಶರ್ಮ

eu-languagesಭಾಷೆ. ಭಾಷೆ ಅಂದ್ರೆ ಸಾಕಷ್ಟು ಜನ ಹೇಳೋದೊಂದೇ, “ನಮ್ಮ ಹಿರಿಯರಿಂದಲೇ ಬಂತು, ನಾವು ಅದನ್ನೇ‌ ಬಳಸ್ತಾ ಇದ್ದೇವೆ” ಅಂತಷ್ಟೇ ಹೇಳ್ತಾರೆ.. ಆದರೆ ಅದರ ಮೂಲ, ಅದೆಷ್ಟು ಬದಲಾವಣೆ ಪಡೆದಿದೆ, ಈಗ ಯಾವ ಸ್ಥಿತಿಯಲ್ಲಿದೆ? ಅಂತೆಲ್ಲ ತಿಳಿದೂ ಇರಲ್ಲ, ಅದರ ಕುರಿತು ತಲೆ ಕೆಡಿಸಿಕೊಂಡಂತು ಖಂಡಿತಾ ಇರಲ್ಲ. ಅದರ ಅಗತ್ಯವೂ ಅವರ್ಯಾರಿಗೂ ಇಲ್ಲ. ಭಾಷೆ ಅನ್ನೋದು “ಸಂವಹನ ನಡೆಸಲು ಉಪಯೋಗಿಸುವ ಒಂದಷ್ಟು ಪದಗಳ ಪುಂಜ” ಅಷ್ಟೇ ಎಂದು ಎಲ್ಲರೂ ಡಿಸ್ಕ್ರೈಬ್ ಮಾಡಿ ಡೆಫಿನಿಷನ್ ಕೊಟ್ಟುಬಿಟ್ಟಾರು. ನಿಜವಾಗಿ ಭಾಷೆ ಅಂದರೆ ಅಷ್ಟೇಯಾ!!?

ಅದು ನಾನು ೫ನೇ ತರಗತಿಗೆ ಹೊಗ್ತಾ ಇದ್ದಂತಹ ಸಮಯ. ಹವ್ಯಕ ಕನ್ನಡ(ಮಾತೃ ಭಾಷೆ) ಕನ್ನಡ, ತುಳು, ಅಲ್ಪ ಸ್ವಲ್ಪ ಮಲಯಾಳ ಇವಿಷ್ಟೇ ನಂಗೆ ಗೊತ್ತಿದ್ದ ಭಾಷೆ ಆ ಕಾಲದಲ್ಲಿ. ಒಂದು ದಿನ ಹೀಗೇ ಆಟ ಆಡ್ತಾ ಆಡ್ತಾ ಅಜ್ಜಿಯ ಮೈ ಮೇಲೆ ಹಾರೋಕೆ ಹೋದೆ. ಕೂಡಲೇ ಅಜ್ಜಿ “ಎನ್ನ ಮೈ ಕಿಟ್ಟೆಡಾ” ಅಂದ್ರು.. ಎನ್ನ ಮೈ ಅಂದ್ರೆ ನನ್ನ ಮೈ/ಶರೀರ ಅಂತರ್ಥ. ಆದರೆ ಈ “ಕಿಟ್ಟೆಡಾ” ಅನ್ನೋ ಪದ ಇದೆಯಲ್ಲಾ ಇದನ್ನ ಅಜ್ಜಿ ಬಳಸಿದ್ದು ನನ್ನಲ್ಲಿ ನಗು ಉಕ್ಕಿ ಬರುವಂತೆ ಮಾಡ್ತು.. ಕಿಟ್ಟು/ಕಿಟ್ಟೆಡಾ ಅನ್ನೋ ಪದದ ಅರ್ಥ ಹವ್ಯಕ ಕನ್ನಡದಲ್ಲಿ ಹಚ್ಚು/ಹಚ್ಬೇಡಾ ಎಂಬ ಅರ್ಥ ಕೊಡುತ್ತೆ. ಉದಾ:-” ಎನಗೆ ಮುಲಾಮು ಕಿಟ್ಟೆಡಾ” ಅಂದರೆ ನನಗೆ ಮುಲಾಮು ಹಚ್ಚಬೇಡಾ ಅಂತ ಅರ್ಥ ಕೊಡುತ್ತೆ. ನಾನು ಕೂಡಲೇ ‘ನನ್ನ ಕೈಯಲ್ಲಿ ಮುಲಾಮು ಇಲ್ಲ ಕಿಟ್ಟಲೆ(ಹಚ್ಚಲು) ಅಂತಂದು ಆಜ್ಜಿ ಮೈ ಮೇಲೆ ಬಿದ್ದೆ.. ಅಷ್ಟೇ ಗೊತ್ತು, ಅಷ್ಟರಲ್ಲಿ ಕುಂಡೆಗೆ ಎರಡು ಪೆಟ್ಟು ಅಮ್ಮನ ಕೈಯಿಂದ ಬಿದ್ದಿತ್ತು.. ಏನೂ ಅರ್ಥವಾಗದೆ, ಅಮ್ಮನ ಮುಖ ನೋಡುತ್ತಾ ನಿಂತೆ.

“ಅಜ್ಜಿ ಮೈ ಮುಟ್ಟಬೇಡಾ ಅಂದ್ರೂ ಮೈ ಮೇಲೆ ಬಿದ್ದು ಉಪದ್ರ ಕೊಡ್ತೀಯಾ!?” ಅಂತ ಗದರಿದ್ರು ಅಮ್ಮ. ನಂಗೆ ಆವಾಗ ಕುತೂಹಲ ಹುಟ್ತು. ‘ಅಜ್ಜಿ “ಮುಟ್ಟೆಡಾ” ಹೇಳಿದ್ದವಿಲ್ಲೆ ( ಮುಟ್ಬೇಡ ಅಂತ ಹೇಳ್ಲಿಲ್ಲ ) ಕಿಟ್ಟೆಡಾಲಿ ಹೇಳಿದ್ದು'(ಹಚ್ಚಬೇಡಾ ಅಂದಿದ್ದು) ಅಂತಂದೆ ಮುಖ ಸಿಂಡರಿಸುತ್ತಾ.. ಅದೇ ‘ಕಿಟ್ಟೆಡಾ’ ಅಂದರೆ ‘ಮುಟ್ಟಬೇಡ’ ಅಂತರ್ಥ..
ಹಾಗಾದರೆ ನೀನು ಹೇಳಿ ಕೊಟ್ಟದು ಹಚ್ಚಬೇಡ ಅಂತಲ್ವೇ..? ‘ಹೌದು ಆದರೆ ಹೀಗೂ ಅರ್ಥ ಇದೆ’. “ನಮ್ಮ ಭಾಷೆ ಸೀಮೆಯಿಂದ ಸೀಮೆಗೆ ಕೆಲವೊಂದು ಪದಗಳು ಬದಲಾಗುತ್ತೆ” ಅಂತ ಅಮ್ಮ ಹೇಳಿದಾಗ ಒಂದೂ ಅರ್ಥ ಆಗದೆ ಮುಖ ಮುಖ ನೋಡುತ್ತಾ ನಿಂತಿದ್ದೆ.. ಒಂದಷ್ಟು ವರ್ಷಗಳು ಕಳೆದವು.. ಹೀಗೇ ಸಂಬಂಧಿಕರ ಮನೆಗೆ ಹೋಗಿದ್ದಾಗ, ‘ಎನಗೊಂದು ತೋರ್ತು ಕೊಡಿ'(ನಂಗೊಂದು ಟವೆಲ್/ಬೈರಾಸ್ ಕೊಡಿ) ಅಂದೆ. ಅವರು ಅರ್ಥ ಆಗದೆ ಮುಖ ನೋಡ್ತಾ ನಿಂತ್ರು. ಸ್ನಾನಕ್ಕೆ ಹೋಗ್ತೇನೆ ತೋರ್ತು ಕೊಡಿ ಅಂದೆ. ಹೋ ಬೈರಾಸು ಅಂತ ಹೇಳಿ ಒಳಹೋಗಿ ತಂದುಕೊಟ್ರು.. ಇದೊಂದು ರೀತಿ ಜಿಜ್ಞಾಸೆ ಹುಟ್ಟಿಸ್ತು ನನ್ನಲ್ಲಿ. ಭಾಷೆ ಒಂದೇ ಆದರೆ ಪದದ ಅರ್ಥ ಬೇರೆ ಬೇರೆ, ಕೆಲವೊಮ್ಮೆ ಪದವೇ ಬೇರೆ ಯಾಕೆ ಹೀಗೆ? ಅಂತ..

ಅದಾಗಿ ಒಂದೆರಡು ವರ್ಷಕ್ಕೆಲ್ಲ ಇಂತಹ ಪ್ರಸಂಗ ಒಂದೆರಡು ನಡೆದೂ ಬಿಡ್ತು. ಅಷ್ಟೆಲ್ಲ ಘಟನೆ ನಡೆದಾಗ ಅಮ್ಮ ಹೇಳಿದ ಮಾತು ಮನಸಲ್ಲಿ ಗುಂಯ್‌ಗುಡೋಕೆ ಶುರು ಆಯ್ತು..
“ಸೀಮೆಯಿಂದ ಸೀಮೆಗೆ ಭಾಷೆಯಲ್ಲಿ ವ್ಯತ್ಯಾಸ ಉಂಟಾಗುತ್ತೆ” ಇದು ಕೇವಲ ಹವ್ಯಕ ಕನ್ನಡದಲ್ಲಿ ಮಾತ್ರವಲ್ಲಾ, ಪ್ರತಿಯೊಂದು ಭಾಷೆಯಲ್ಲೂ ಹೀಗೆ ಊರಿಂದ ಊರಿಗೆ ಭಾಷೆ ಬದಲಾಗುತ್ತೆ ಅಂತ ಕ್ರಮೇಣ ತಿಳೀತಾ ಬಂತು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು ಕನ್ನಡ, ಬೆಂಗಳೂರು ಕನ್ನಡ, ಕುಂದಗನ್ನಡ ಅಬ್ಬಾ!! ಕರುನಾಡೊಳಗೆ ಕನ್ನಡದಲ್ಲೇ ಎಷ್ಟೊಂದು ಬೇಧ.. ಈ ಪ್ರಪಂಚದಲ್ಲಿ ಎಷ್ಟೊಂದು ಭಾಷೆ ಇದೆ. ಯುನಿವರ್ಸಲ್ ಲ್ಯಾಂಗ್ವೇಜ್ ಅಂತ ಕರೆಯಲ್ಪಡುವ ಆಂಗ್ಲ ಭಾಷೆಯೂ ಕೂಡ ಇನ್ಯಾವುದೋ ಒಂದಷ್ಟು ಭಾಷೆಗಳ ರೂಪಾಂತರ, ಒಗ್ಗೂಡುವಿಕೆಯಿಂದ ರೂಪುಗೊಂಡಿದೆ ಅಂತ ಸ್ವತಃ ಇಂಗ್ಲೀಷ್ ಮಾತನಾಡುವವನಿಗೇ ಗೊತ್ತು.. ಅತ್ತ ಗ್ರೀಕ್, ಇತ್ತ ರಷ್ಯನ್, ಜರ್ಮನ್ ಇನ್ಯಾವುದ್ಯಾವುದೋ ಭಾಷಾ ಸಂಗಮದಿಂದ ಆಂಗ್ಲ ಭಾಷೆ ರೂಪುಗೊಂಡಿದೆ. ಸಂಸ್ಕೃತ ಮೊದಲ್ಗೊಂಡು ಭಾರತೀಯ ಭಾಷೆಗಳ ಕೆಲವು ಪದಗಳೂ ಆಂಗ್ಲದಲ್ಲಿ ಬಳಕೆಯಲ್ಲಿವೆ ಹಾಗೂ ರೂಪಾಂತರಗೊಂಡಿದೆ ಎಂಬುದು ಜಗತ್ತಿಗೇ ತಿಳಿದ ವಿಷಯ. ಭಾರತೀಯ ಭಾಷೆಗಳಲ್ಲಿ ಅತ್ತ ಹಿಂದಿಯಿಂದ ಹಿಡಿದು ಪ್ರಾದೇಶಿಕ ಭಾಷೆಯಾದ ತುಳು, ಕೊಡವ ಪ್ರತಿಯೊಂದರಲ್ಲೂ ಸಂಸ್ಕೃತದ ಅಂತರಾತ್ಮ ಇದ್ದೇ ಇದೆ. ( ಇದಕ್ಕೆ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಬಹುದು ಅವರಿಷ್ಟ ) ಯಾಕೆ ಹೀಗೆ ? ಭಾಷೆಯಲ್ಲಿ ವ್ಯತ್ಯಾಸ ಯಾಕಾಗಿ ಹುಟ್ಟಿಕೊಳ್ಳುತ್ತೆ?

‌ಇಲ್ಲಿ ಒಂದು ಪ್ರಸಂಗವನ್ನು ಹೇಳಲೇಬೇಕು. ನಾನು ೪ ವರ್ಷದ ಹಿಂದೆ LG ಕಂಪನಿಯಲ್ಲಿ ಫೀಲ್ಡ್ ವರ್ಕ್ ಮಾಡ್ತಾ ಇರಬೇಕಾದರೆ ಓರ್ವ ಕಸ್ಟಮರ್‌ಗೆ ಕರೆ ಮಾಡುವಾಗ ಕರೆತಪ್ಪಿ ಅರುಣ್ ಕುಮಾರ್ ಅನ್ನೋ ವ್ಯಕ್ತಿಗೆ ಹೋಗಿತ್ತು. ಮಾತನಾಡ್ತಾ ಇದು ರಾಂಗ್ ನಂಬರ್ ನಾನು ಕಾಸರಗೋಡಿನವನಲ್ಲ, ಪಾಲಕ್ಕಾಡಿನವ ಅಂತ ಅಚ್ಚ ಕನ್ನಡದಲ್ಲೇ ಹೇಳಿದಾಗ ಕುತೂಹಲಗೊಂಡು ಮಾತು ಮುಂದುವರೆಸಿದೆ. ಆತ ನನ್ನ ಬಳಿ ಮಾತನಾಡಿದ ಐದು ನಿಮಿಷದಲ್ಲಿ ಕೇವಲ ನಾಲಕೈದು ಪದಗಳು ಮಾತ್ರ ಮಲಯಾಳ ಇದ್ವು ಉಳಿದಂತೆ ಅಚ್ಚಕನ್ನಡದಲ್ಲಿ ಮಾತನಾಡಿದ್ದ ಆತ. ಮೂರು ತಲೆಮಾರುಗಳ ಹಿಂದೆ ಮೈಸೂರು ಬಳಿಯ ಊರಿಂದ ವಲಸೆ ಹೋಗಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನೆಲೆಸಿರುವುದು ಎಂದು ಆತ ತಿಳಿಸಿದಾಗ, ಭಾಷೆ ಯಾವ ರೀತಿ ಹುಟ್ಟಿಕೊಳ್ಳುತ್ತೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ‌‌ಸಿಕ್ತು ನನಗೆ. ಈಗಾಗಲೇ ಮೂರು ತಲೆಮಾರು ಕೇರಳದಲ್ಲಿ ಕಳೆದಾಗ ಕನ್ನಡದ ಜೊತೆ ಒಂದಷ್ಟು ಮಲಯಾಳ ಪದಗಳು ಸೇರಿಕೊಂಡವು, ಕ್ರಮೇಣ ಇವು ಹೊಸದೊಂದು ಭಾಷೆಯಾಗಿ ಮಾರ್ಪಾಡಾಗುತ್ತೆ.

ವ್ಯಕ್ತಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋದಾಗ ಆತನ ಭಾಷೆ ಹಾಗೂ ಅಲ್ಲಿಯ ಮೂಲ ಭಾಷೆ ಬೆರೆತು ಕಾಲಾಂತರದಲ್ಲಿ ಹೊಸಭಾಷೆಯೊಂದು ಹುಟ್ಟಿಕೊಳ್ಳುತ್ತೆ. ಈ ರೀತಿ ಹುಟ್ಟಿಕೊಂಡ ನೂರಾರು ಭಾಷೆಗಳು ಭಾರತದಲ್ಲಿವೆ. ಅದರಲ್ಲೂ ಬುಡಕಟ್ಟು ಜನಾಂಗದವರ ಭಾಷೆಗಳು, ಲಂಬಾಣಿಯಂತಹ ಅಲೆಮಾರಿ ಜೀವನ ನಡೆಸುವವರ ಭಾಷೆಗಳು ಅತೀ ಹೆಚ್ಚು ರೂಪಾಂತರಗೊಂಡಿದೆ. ಅದಕ್ಕೆ ಸಾಕಷ್ಟು ಸಾಕ್ಷ್ಯ ಸಿಗುತ್ತೆ ನಮಗೆ. ಒಂದಂತೂ ಸತ್ಯ, ಭಾಷೆ ಅಂದರೆ ಹೊಳೆಯ ಕಲ್ಲಿನಂತೆ. ನದಿಯ ನೀರಿನ ಕೊರೆತಕ್ಕೆ ಸಿಕ್ಕಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಿ ಹೊಸತೊಂದು ರೂಪ ಪಡೆದುಕೊಂಡು ಮುಂದುವರೆಯುತ್ತಾ ಇರುತ್ತೆ. ಅದರಲ್ಲೂ ಕೆಲವೊಂದು ಭಾಷೆ ಇವೆಯಲ್ಲ ಅವು ವಿಶೇಷವಾದವು, ಹೊಳೆಯಲ್ಲಿ ಸಿಗೋ ಸಾಲಿಗ್ರಾಮ ಕಲ್ಲಿನಂತೆ. ಅದು ಜಾಗತಿಕ ಮಟ್ಟದಲ್ಲಿ ಯಾವುದೇ ಹೊಡೆತಕ್ಕೂ ಕೊರೆತಕ್ಕೂ ಸಿಕ್ಕು ನಲುಗದೆ ತನ್ನತನದಲ್ಲೇ ಇರುತ್ತೆ. ಸಂಸ್ಕೃತ, ಚೈನೀಸ್, ಜಪಾನೀಸ್ ಭಾಷೆಗಳಂತೆ, ಎಷ್ಟೇ ಭಾಷೆಗಳು ಬಂದರೂ‌ ಹೋದರೂ ಅವು ಬದಲಾವಣೆ ಹೊಂದುವೂದೇ ಇಲ್ಲ..

ಭಾಷೆ ಉಳಿಸುವೂದು ಎಷ್ಟು ಮುಖ್ಯವೋ ಅದನ್ನ‌ ಬೆಳೆಸೋದೂ ಅಷ್ಟೇ ಅಗತ್ಯ.. ಭಾಷೆ ಹೊಸ ರೂಪ ಪಡೆಯಬಹುದೇ ಹೊರತು, ಭಾಷೆ ನಶಿಸಿಹೋಗಿ ಬೇರಿನ್ಯಾವುದೋ ಭಾಷೆ ಹೇರಿಕೆಯಾಗಬಾರದಷ್ಟೇ. ಭಾಷೆಯ ಉಳಿಸಿ ಬೆಳೆಸೋಣ..

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments