ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೩
– ಮು. ಅ. ಶ್ರೀರಂಗ, ಬೆಂಗಳೂರು
ಭಾನುವಾರ ಬೆಳಗ್ಗೆ ಪೀರಾಯರು ಎಂದಿನಂತೆ ವಾಯುವಿಹಾರ ಮುಗಿಸಿಕೊಂಡು ಬಂದು, ಸ್ನಾನ ಮುಗಿಸಿ ತಿಂಡಿ ತಿನ್ನಲು ಹೊರಡಬೇಕು ಆ ವೇಳೆಗೆ ಮೊಬೈಲ್ ರಿಂಗಾಯಿತು. Raju Vasishtha calling ಎಂದು ಮೊಬೈಲ್ ಸ್ಕ್ರೀನ್ ಮೇಲೆ ಮೂಡಿ ಬಂದ ಪದಗಳನ್ನು ನೋಡಿ ಇವತ್ತು ಬರುತ್ತೇನೆ ಎಂದು ಹೇಳಲು ಫೋನ್ ಮಾಡಿರಬೇಕು ಎಂದು ಕೊಂಡು ಕಾಲ್ ರಿಸೀವ್ ಮಾಡಿದರು. ‘ಹಲೋ ಪೀರಾವ್ ಸಾರಿ ಕಣಯ್ಯಾ. ಇವತ್ತು ನಾನು ಬರಕ್ಕೆ ಆಗ್ತಿಲ್ಲ. ಅರ್ಜೆಂಟ್ ಆಗಿ ಡೆಲ್ಲಿಗೆ ಹೋಗಬೇಕಾಗಿದೆ. ಈಗ ಏರ್ ಪೋರ್ಟ್ಗೆ ಆಫೀಸ್ ಕಾರ್ ನಲ್ಲಿ ಹೋಗ್ತಾಯಿದೀನಿ. ನಿನಗೆ ನಮ್ಮೂರು ಬೇಸರವಾದರೆ ಬೆಂಗಳೂರಿಗೆ ಹೊರಡು. ನಾನು ಬೆಂಗಳೂರಿಗೆ ಬಂದ ಮೇಲೆ ಫೋನ್ ಮಾಡ್ತೀನಿ. ಈಗ ಇನ್ನೂ ಒಂದಿಬ್ಬರಿಗೆ ಫೋನ್ ಮಾಡಬೇಕು. see you’ ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದ. ಕಾಲ್ ಕಟ್ ಆಯ್ತು.
ಪೀರಾಯರಿಗೂ ಮೂರು ದಿನಗಳಲ್ಲೇ ಯಾಕೋ ಈ ಒಂಟಿತನ ಬೇಸರ ಬಂದ ಹಾಗೆ ಆಗಿತ್ತು. ವಯಸ್ಸಿನ ಪರಿಣಾಮವಿರಬಹುದೇ? ಒಂಟಿತನ ರಾಯರಿಗೆ ಹೊಸದೇನಲ್ಲ. ಹಾಗೆ ನೋಡಿದರೆ ರಾಯರಿಗೆ ಮಾತೆಂದರೆ ಸ್ವಲ್ಪ ಅಲರ್ಜಿಯೇ. ಯಾರಾದರೂ ನೆಂಟರು ಮನೆಗೆ ಬಂದಾಗಲೂ ಸಹ ಸೌಜನ್ಯಕ್ಕಾಗಿ ಸುಮ್ಮನೆ ಅವರ ಜತೆ ಕೂತಿರುತ್ತಿದ್ದರು. ಅಣುರೇಣು ತೃಣಕಾಷ್ಠದಿಂದ ಹಿಡಿದು ಅಮೆರಿಕಾ ತನಕ, ಯೋಗ, ಆಧ್ಯಾತ್ಮ, ಬೆಂಗಳೂರಿನ ಭೂಮಾಫಿಯಾ, ಕಸದ ರಾಜಕೀಯ, ಬೆಳ್ಳಂದೂರಿನ ಕೆರೆಯಲ್ಲಿ ಆಗಾಗ ಬರುವ ನೊರೆ, ಬೆಂಕಿ ಇವೆಲ್ಲದರ ಬಗ್ಗೆ ಅವರುಗಳು ಆಡುತ್ತಿದ್ದ ಮಾತಿಗೆ ರಾಯರು ಮೂಕ ಪ್ರೇಕ್ಷಕರಾಗಿರುತ್ತಿದ್ದರು. ಅವರುಗಳು ಹೋದ ಮೇಲೆ ರಾಯರ ಹೆಂಡತಿ ‘ಅವರು ಅಷ್ಟು ಮಾತಾಡುತ್ತಿದ್ದರೂ ನೀವೊಳ್ಳೆ ಕಲ್ಲಿನ ಬಸವನ ತರ ಕೂತಿದ್ದೀರಲ್ಲ. ಅವರಿಗೆ ಬೇಸರವಾಗುತ್ತದೆ ಎಂಬ ಕಾಮನ್ ಸೆನ್ಸ್ ಇಲ್ಲವೇ? ನೀವೂ ಒಂದೆರೆಡು ಮಾತಾಡಿದ್ದರೆ ಮುತ್ತು ಸುರಿದು ಹೋಗುತ್ತಿತ್ತೇ ? ದಿನಾ ಎರಡು ಪೇಪರ್ ಅನ್ನು ಎರಡು ಗಂಟೆಗಳ ಕಾಲ ಕೂತು ಓದುತ್ತೀರಲ್ಲಾ? ಏನು ಪ್ರಯೋಜನ?’ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದರೂ ಸಹ ರಾಯರ ವರ್ತನೆಯಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ತೀರಾ ಹತ್ತಿರದವರು, ಹೆಂಡತಿಯ ಅಣ್ಣ, ತಮ್ಮ ಬಂದಾಗ ಒಂದೆರೆಡು ಮಾತಾಡುತ್ತಿದ್ದರು. ಹೀಗೆ ಬೆಂಗಳೂರಿನ ತಮ್ಮ ಮನೆಯಲ್ಲಿ ಇದ್ದರೂ ಅವರ ಪಾಡಿಗೆ ಅವರು ತಾವಾಯಿತು ತಮ್ಮ ರೂಮಾಯ್ತು; ಬೆಳಗ್ಗೆ ಸಂಜೆ ವಾಕಿಂಗ್ ಅಷ್ಟೇ. ಹೆಂಡತಿ ಊಟ ತಿಂಡಿಗೆ ಕರೆದಾಗ ಡೈನ್ನಿಂಗ್ ಹಾಲ್ ಗೆ ಹೋಗುವುದು. ಆದರೂ ಮನೆಯಲ್ಲಿ ಇತರ ಮೂರು ಜೀವಗಳ ಜತೆಯಲ್ಲಿ ಇದ್ದೇನೆಂಬ ಅರಿವು ನೆಮ್ಮದಿ ತರುತ್ತಿರಬಹುದೇನೋ? ಈಗ ಅದಿಲ್ಲವಾದ್ದರಿಂದ ಈ ಬೇಸರವೇ? ಇರಬಹುದು. ಕೆಲಸದಿಂದ ನಿವೃತ್ತರಾಗಿ ಐದು ವರ್ಷಗಳಾಗುತ್ತಾ ಬಂದಿರುವುದರಿಂದ ಅವರ ಸಮವಯಸ್ಕ ಸಹೋದ್ಯೋಗಿಗಳ, ಹತ್ತಾರು ವರ್ಷ ಚಿಕ್ಕವರ ಸಂಪರ್ಕವೂ ವರ್ಷಗಳು ಕಳೆದಂತೆ ಕಮ್ಮಿಯಾಗುತ್ತಾ ಬಂದಿದೆ. ಯಾರಾದರೂ ಜ್ಞಾಪಕ ಇಟ್ಟುಕೊಂಡು ಅವರ ಮಗಳದ್ದೋ, ಮಗನದ್ದೋ ಮದುವೆಯ ಲಗ್ನಪತ್ರಿಕೆ ಕಳಿಸುತ್ತಾರೆ. ಅಷ್ಟೇ. ಅಲ್ಲಿಗೆ ಮುಗಿಯಿತು. ವಯಸ್ಸಾಗುತ್ತಾ ಬಂದಂತೆ ಗಂಡು, ಹೆಣ್ಣು ಯಾರಿಗೇ ಆಗಲಿ ಒಂಟಿತನದಲ್ಲಿ ಅಭದ್ರತೆ ಕಾಡಬಹುದೇನೋ? ನಾನು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದೇನೆ ಎಂದು ಹೆಂಡತಿಗೆ ಫೋನ್ ಮಾಡಿದರು. ತಿಂಡಿ ತಿಂದು ಬಂದ ಮೇಲೆ ತಮ್ಮ ಕಿಟ್ ಬ್ಯಾಗಿಗೆ ಬಟ್ಟೆ ಪುಸ್ತಕಗಳನ್ನು ಹಾಕಿಕೊಂಡು ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳಿಗೆ ಕೊಟ್ಟು ಗೇಟಿನಿಂದ ಈಚೆ ಬಂದರು. ಅದೇ ಸಮಯಕ್ಕೆ ಆ ದಾರಿಯಲ್ಲಿ ಒಂದು ಖಾಲಿ ಆಟೋ ಹೋಗುತ್ತಿತ್ತು. ಅದರಲ್ಲಿ ಕೂತು ಬಸ್ ಸ್ಟ್ಯಾಂಡಿಗೆ ಬಂದರು. ಸದ್ಯ ಆ ಲಿಂಗೇಗೌಡ, ಬಾಳಪ್ಪ ಮತ್ತು ರಮಾದೇವಿ ಇವರಲ್ಲಿ ಯಾರೊಬ್ಬರೂ ನಿನ್ನೆ ಬರಲಿಲ್ಲ. ಲಿಂಗೇಗೌಡ, ಬಾಳಪ್ಪ ಹೋಗಲಿ ರಮಾದೇವಿಗಾದರೂ at least ಒಂದು ಫೋನ್ ಅಥವಾ ಮೆಸೇಜ್ ಮಾಡಿ ನಾನು ವಾಪಸ್ಸು ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಹೇಳಬೇಕಾಗಿತ್ತು ಅನಿಸಿತು. ನಾನು ಏಕೆ ರಮಾದೇವಿ ವಿಷಯದಲ್ಲಿ ಸ್ವಲ್ಪ soft corner ಆಗುತ್ತಿದ್ದೇನೆ? ಲಿಂಗೇಗೌಡ ಆಕೆಯ ಜೀವನದ ಬಗ್ಗೆ ಹೇಳಿದ ಒಂದೆರೆಡು ವಿಷಯಗಳಿಂದಲೇ? ಹೀಗೆ ಯೋಚಿಸುತ್ತಿರುವಾಗ ಆಟೋ ಬಸ್ ಸ್ಟಾಂಡ್ ಬಳಿಗೆ ಬಂದಾಗಿತ್ತು. ಮೂವತ್ತು ರೂಪಾಯಿ ಕೊಟ್ಟು ಇಳಿದರು. ಬೆಂಗಳೂರಿಗೆ ಒಂದು ಬಸ್ ಇನ್ನೇನು ಹೊರಡಲಿತ್ತು. ಸೀಟೂ ಇತ್ತು. ರಾಯರು ಕುಳಿತ ಐದು ನಿಮಿಷದಲ್ಲಿ ಬಸ್ಸು ಬೆಂಗಳೂರಿನ ಕಡೆ ಮುಖ ಮಾಡಿ ಹೊರಟಿತು. ಮನೆಯಿಂದ ನಾಲ್ಕಾರು ದಿನಗಳಾದರೂ ದೂರವಿರಬೇಕು ಎಂಬ ರಾಯರ ಆಸೆಯು, ಬಸ್ಸು ಬೆಂಗಳೂರು ಬರುವಷ್ಟರಲ್ಲಿ ಆವಿಯಾಗಿ ಹೋಗಿತ್ತು.
-೨-
ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ರಾಯರ ಹೆಂಡತಿ ಬಂದು ಬಾಗಿಲು ತೆಗೆದು ‘ರಾಯರೇ ಚೆನ್ನಾಗಿತ್ತೇ ಪ್ರವಾಸ? ನಮ್ಮಗಳ ಕಾಟ ಇಲ್ಲದೆ ಆರಾಮಾಗಿದ್ರಾ?’ ಅಪ್ಪ ಬಂದಿದ್ದು ಗೊತ್ತಾಗಿ ರಾಯರ ಮಗ ಸೊಸೆ ತಮ್ಮ ರೂಮಿನಿಂದ ಹೊರಬಂದು ‘ಅಪ್ಪ ಮನೆಯಲ್ಲಿ ನೀವಿಲ್ಲದಿದ್ದರೆ ನಮಗೆ ತುಂಬಾ ಬೇಸರ?… ”ಮಾವ ಇನ್ಮೇಲೆ ನೀವೊಬ್ಬರೇ ಎಲ್ಲಿಗೂ ಹೋಗಬಾರದು. ನಿಮಗೆ ಬೇಸರವಾದಾಗ ಹೇಳಿ ಶನಿವಾರ, ಭಾನುವಾರ ನಾವೆಲ್ಲರೂ ಒಟ್ಟಿಗೆ ಹೋಗೋಣ’.. ‘ಇದೇನಪ್ಪ ನಾನು ಮೂರು ದಿನ ಮನೆಯಿಂದ ಆಚೆ ಇದ್ದಿದ್ದಿಕ್ಕೇ ನಿಮಗೆಲ್ಲಾ ನನ್ನ ಮೇಲೆ ಇಷ್ಟೊಂದು ಪ್ರೀತಿ, ಅಕ್ಕರೆ ಬಂದುಬಿಟ್ಟಿದೆ. ನೀವುಗಳು ಧೈರ್ಯವಾಗಿರಬೇಕು. ನನಗೂ ಅರವತ್ತಾಯಿತು. ಕೈಕಾಲು ಗಟ್ಟಿ ಮುಟ್ಟಾಗಿರುವಾಗಲೇ ನಿಮಗ್ಯಾರಿಗೂ ತೊಂದರೆ ಕೊಡದೆ, ಆಸ್ಪತ್ರೆಗೆ ಹೋಗದೆ ರಾಮಾ ಕೃಷ್ಣಾ ನಾರಾಯಣ ಅಂತ ನನ್ನ ಕೊನೆಯ ಪ್ರಯಾಣ ಆದ್ರೆ ಸಾಕು ಅಂತ ನಾನು ಕಾಯ್ತಾಯಿದೀನಿ. ಅಂತದ್ರಲ್ಲಿ’
‘ಶುರು ಮಾಡಿಕೊಂಡ್ರಾ ನಿಮ್ಮ ಆಧ್ಯಾತ್ಮ. ಏಳಿ ಕೈಕಾಲು ತೊಳೆದುಕೊಳ್ಳಿ. ನಿಮಗೆ ಇಷ್ಟ ಅಂತ ಗಸಗಸೆ ಪಾಯಸ, ಕಾಯಿಸಾಸುವೆ ಚಿತ್ರಾನ್ನ, ಮೆಣಸಿನಕಾಯಿ ಬೊಂಡ ಮಾಡಿದ್ದೀವಿ. ಜತೆಗೆ ಮೊಸರಿಗೆ ಟಮೋಟಾ ಹಣ್ಣು ಹೆಚ್ಚಿಹಾಕಿ ಒಗ್ಗರಣೆ ಹಾಕ್ದದೀವಿ. ಊಟ ಮಾಡಿ. ರಾಯರ ಮಠದಲ್ಲಿ ಯಾರೋ ಆಚಾರ್ರು ನಿನ್ನೆಯಿಂದ ಸಂಜೆ ಹೊತ್ತು ರಾಮಾಯಣ, ಮಹಾಭಾರತ, ಭಾಗವತ ಮೂರನ್ನೂ ಸೇರಿಸಿ ಪ್ರವಚನ ಕೊಡ್ತಿದ್ದಾರಂತೆ. ಹದಿನೈದು ದಿನ ಇರ್ತಾರಂತೆ. ಬೇಕಾದ್ರೆ ಸಂಜೆ ವಾಕಿಂಗ್ ಮುಗಿಸಿಕೊಂಡು ಆ ಕಡೆ ಹೋಗೋರಂತೆ. ಆಯ್ತಾ. ಈಗ ಎದ್ದೇಳಿ’.
ಮೂರು ದಿನಗಳಿಂದ ಮನೆ ಊಟ ಇಲ್ಲದೆ ಇದ್ದಿದ್ದಕ್ಕೆ ರಾಯರು ಮಾಮೂಲಿಗಿಂತ ಸ್ವಲ್ಪ ಜಾಸ್ತಿನೇ ಊಟ ಮಾಡಿದರು. ಮಧ್ಯಾಹ್ನ ಊಟವಾದ ಮೇಲೆ ತಮ್ಮ ರೂಮಿಗೆ ಹೋಗಿ ಆರಾಮವಾಗಿ ಹಾಸಿಗೆ ಮೇಲೆ ಅಡ್ಡಾದರು. ಬಸ್ಸಿನ ಪ್ರಯಾಣ, ಮಧ್ಯಾಹ್ನದ ರುಚಿರುಚಿಯಾದ ಊಟದ ದೆಸೆಯಿಂದ ಸಂಜೆ ಐದೂವರೆ ತನಕ ಒಳ್ಳೇ ನಿದ್ದೆ ಬಂತು. ಎಚ್ಚರವಾದಾಗ ಮೈ ಹಗುರವಾಗಿತ್ತು. ಮನಸ್ಸಿನಲ್ಲಿ ಏನೋ ಒಂದು ಲವಲವಿಕೆ. ಮುಖ ತೊಳೆದು ವಾಕಿಂಗ್ ಹೋಗೋಣ ಎಂದು ಮಂಚದಿಂದ ಎದ್ದರು. ‘ನಾನು ವಾಕಿಂಗ್ ಗೆ ಹೋಗ್ತಾಯಿದಿನಿ ಬಾಗಿಲು ಹಾಕ್ಕೋ’ ಎಂದು ಅಡುಗೆ ಮನೆಯಲ್ಲಿದ್ದ ಹೆಂಡತಿಗೆ ಹೇಳಿ ಹೊರಟರು. ‘ಒಂದು ನಿಮಿಷ ಬಂದೆ ತಾಳಿ’ ಎನ್ನುತ್ತಾ ರಾಯರ ಹೆಂಡತಿ ಬಂದು ‘ಮೊಬೈಲ್ ಇಟ್ಕೊಂಡಿದೀರಾ ? ಮನೆ ಕೀ ಒಂದು ಸೆಟ್ ಇಕೋ ತೊಗೊಳ್ಳಿ. ಮಗ ಸೊಸೆ ಸಿನಿಮಾಕ್ಕೆ ಹೋಗಿದಾರೆ. ರಾತ್ರಿ ಹತ್ತು ಗಂಟೆಗೆ ಬರ್ತಾರೆ. ಅದೇ ಮಧ್ಯಾಹ್ನ ಹೇಳಿದ್ನಲ್ಲ. ರಾಯರ ಮಠದಲ್ಲಿ ಆಚಾರ್ಯರು ಪ್ರವಚನ ಕೊಡ್ತಿದಾರೆ ಅಂತ. ನಾನು ಹೋಗ್ತೀನಿ. ಏಳು ಗಂಟೆಯಿಂದ ಎಂಟುಗಂಟೆ ತನಕ. ನನ್ನ ಹತ್ತಿರ ಮನೆ ಕೀ ಇನ್ನೊಂದು ಸೆಟ್ ಇದೆ. ಕೀ ಹುಷಾರು’.
‘ಆಯ್ತು’
ಮನೆ ಬಿಟ್ಟಾಗಲೇ ಆರು ಗಂಟೆಯಾಗಿತ್ತು. ಏಳು ಗಂಟೆ ತನಕ ಪಾರ್ಕಿನ ವಾಕಿಂಗ್ ಪಾತ್ ನಲ್ಲಿ ಎರಡು ಮೂರು ಸುತ್ತು ಹಾಕಿದರು. ಮೂರ್ನಾಲಕ್ಕು ಪರಿಚಿತರು ಎಲ್ಲಿ ರಾಯರು ಮೂರ್ನಾಲಕ್ಕು ದಿನಗಳಿಂದ ವಾಕಿಂಗ್ ಗೆ ಬರಲಿಲ್ಲವಲ್ಲ? ಊರಲ್ಲಿ ಇರಲಿಲ್ಲವೇನೋ? ಎಂದು ತಾವೇ ಪ್ರಶ್ನೆಹಾಕಿ ಉತ್ತರವನ್ನೂ ಊಹಿಸಿದರು. ರಾಯರು ಹೌದು ಎಂದು ಹೇಳಿ ವಾಕಿಂಗ್ ಮುಂದುವರಿಸಿದರು. ಏಳು ಗಂಟೆಯಾಯ್ತು. ಈಗಲೇ ಮನೆಗೆ ಹೋಗಿ ಮಾಡುವುದೇನು? ಹೆಂಡತಿ ಮಠಕ್ಕೆ ಬಂದಿರ್ತಾಳೆ. ಮಗ ಸೊಸೆ ಸಿನಿಮಾಕ್ಕೆ ಹೋಗಿದಾರೆ. ನೋಡೋಣ ಆ ಆಚಾರ್ಯ ಏನು ಹೇಳುತ್ತಾನೋ ಎಂಬ ಕುತೂಹಲದಿಂದ ಮಠದ ಕಡೆ ನಡೆದರು.
ಮಠದ ಸಭಾಂಗಣ ತುಂಬಿತ್ತು. ಮುಂದುಗಡೆ ಮೂರ್ನಾಲಕ್ಕು ದೊಡ್ಡ ದೊಡ್ಡ ಜಮಖಾನ ಹಾಕಿದ್ದರು. ಕೂತು ಎದ್ದು ಮಾಡಲಾಗದಂತಹ ವಯಸ್ಸಾದವರಿಗೆಂದು ನಾಲ್ಕೈದು ಸಾಲು ಗಟ್ಟಿಮುಟ್ಟಾದ ಪ್ಲಾಸ್ಟಿಕ್ ಕುರ್ಚಿ ಹಾಕಿದ್ದರು. ಸಾಕಷ್ಟು ಜನ ಬಂದಿದ್ದರು. ರಾಯರು ಕೊನೆಯ ಸಾಲಿನಲ್ಲಿ ಖಾಲಿಯಿದ್ದ ಒಂದು ಕುರ್ಚಿಯ ಮೇಲೆ ಕೂತರು. ಪ್ರವಚನ ಕೊಡುತ್ತಿದ್ದ ಆಚಾರ್ಯರು ಅಸ್ಖಲಿತವಾಗಿ ಮಾತಾಡುತ್ತಿದ್ದರು. ಸಂಸ್ಕೃತ, ಕನ್ನಡ, ಇಂಗ್ಲಿಷ್ ಕಾವ್ಯಗಳಿಂದ ಸಮಕಾಲೀನ ಸಮಾಜದ ರೀತಿ ನೀತಿಗಳಿಂದ ಉದಾಹರಣೆ ಕೊಡುತ್ತಿದ್ದರು. ಸಭ್ಯತೆಯ ಎಲ್ಲೆ ಮೀರದಂತಹ ಹಾಸ್ಯ ಮಾಡುತ್ತಿದ್ದರು. ಅಂತೂ ಕೇಳುಗರನ್ನು ಮಾತಿನ ಮೋಡಿಯಿಂದ ಹಿಡಿದಿಡುವ ಎಲ್ಲಾ ಪಟ್ಟುಗಳನ್ನೂ ಸಾಕಷ್ಟು ಕರಗತ ಮಾಡಿಕೊಂಡಿದ್ದಾರೆ ಅನಿಸಿತು ರಾಯರಿಗೆ. ಒಂದು ಹಂತದಲ್ಲಿ ಆ ಆಚಾರ್ಯರು ಇತ್ತೀಚಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಮೇಲೆ ಈ ಕಾಲದ ವಿದ್ಯಾವಂತರು, ಸಾಹಿತಿಗಳು ತಮ್ಮ ಭಾಷಣ, ಬರವಣಿಗೆಗಳಿಂದ ಮಾಡುತ್ತಿರುವ ಬೌದ್ಧಿಕ ಹಲ್ಲೆಯ ಬಗ್ಗೆ ಪ್ರಸ್ತಾಪಿಸಿದರು. ಮಹಾಭಾರತ, ರಾಮಾಯಣಗಳನ್ನು ದೇವ ಭಾಷೆಯಾದ ಸಂಸ್ಕೃತದಿಂದ ಬಿಡಿಸಿ ಮಾಮೂಲಿ, ದಿನನಿತ್ಯದ ಆಡುಭಾಷೆಯಾದ ಕನ್ನಡದಲ್ಲಿ ಕಾದಂಬರಿಗಳನ್ನು ಬರೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪೀರಾಯರಿಗೆ ಕುತೂಹಲವಾಯ್ತು. ಎಲಾ ಆಚಾರ್ಯರೇ ಪರವಾಗಿಲ್ಲ. ಒಂದು ಗಂಟೆಯಾಗಿದ್ದೇ ತಿಳಿಯಲಿಲ್ಲ. ಇವತ್ತಿನ ಪ್ರವಚನ ಮುಗಿಯಿತು ಮತ್ತೆ ನಾಳೆ ಮುಂದುವರಿಯುತ್ತದೆ ಎಂದು ಸಭೆಗೆ ಕೈ ಮುಗಿದು ಆಚಾರ್ಯರು ಎದ್ದರು. ಮೂರ್ನಾಲಕ್ಕು ಜನ ಅವರ ಹಿಂದೆ ಹೋಗಿ ಕಾರಿನಲ್ಲಿ ಕೂರಿಸಿ ಬಂದರು. ಅವರು ಮುಂಚೆ ಹೋಗಲಿ ಎಂದು ಎದ್ದು ನಿಂತು ಕಾದಿದ್ದು, ಹೋದಮೇಲೆ ಪ್ರವಚನ ಕೇಳಲು ಸೇರಿದ್ದ ಶೋತೃಗಳು ‘ಏನು ವಿದ್ವತ್ತು ಏನು ಕಥೆ’, ‘ಅಲ್ವೇ ಮತ್ತೆ’, ‘ಒಟ್ಟಿನಲ್ಲಿ ನಾವು ನಮ್ಮ ಹಿರಿಯರ ಮಾರ್ಗ ಬಿಟ್ಟು ನಡೆಯುತ್ತಿರುವುದು, ನಮ್ಮಲ್ಲೇ ಒಗ್ಗಟ್ಟು ಇಲ್ಲದಿರುವುದೇ ನಮ್ಮ ಇಂದಿನ ದುಸ್ಥಿಗೆ ಕಾರಣ’ ಎಂದು ತೀರ್ಮಾನ ಕೊಡುತ್ತಾ ಆಚೆ ನಡೆದರು. ಅವರುಗಳ ಮಾತು ಕೇಳುತ್ತಾ ರಾಯರೂ ಇನ್ನೇನು ಆ ಸಭಾ ಭವನದ ಗೇಟು ದಾಟಬೇಕು ಅಷ್ಟರಲ್ಲಿ ಹಿಂದಿನಿಂದ ಯಾರೋ ಜೋರಾಗಿ ‘ಪದ್ಮನಾಭರಾವ್, ಪೀರಾವ್’ ಎಂದು ಕೂಗುತ್ತಾ ಬಂದರು. ರಾಯರು ನಿಂತು ಹಿಂತಿರುಗಿ ನೋಡಿದರು.
‘ನನ್ನ ನೆನಪಿದೆಯೆನಯ್ಯಾ ಪೀರಾವ್?’ ಮಸುಕು ಮಸುಕಾಗಿ ನೆನಪು. ಪೂರ್ತಿ ಜ್ಞಾಪಕಕ್ಕೆ ಬರುತ್ತಿಲ್ಲ. ಇರಲಿ ಕೇಳೋಣ ಎಂದು ಕೊಂಡು ‘ಕೃಷ್ಣಾಚಾರ್ಯರು ಅಲ್ಲವೇ? ಬೆಂಗಳೂರಿನ ಹಾಸ್ಟೆಲ್ ನಲ್ಲಿ ನನ್ನ ರೂಮ್ ಮೇಟ್ ಆಗಿದ್ದವರು?’.. ‘ಹ್ಞೂ ಕಣಯ್ಯಾ. ಅವನೇ ನಾನು. ಕೃಷ್ಣಾಚಾರ್ಯ. ಏನಯ್ಯಾ ನೀನು ಇಲ್ಲಿ ? ಹಾಸ್ಟೆಲ್ ನಲ್ಲಿದ್ದಾಗ ವೈಚಾರಿಕ ಮನೋಭಾವ; ವಯಸ್ಸಾಗ್ತಾ ಆಗ್ತಾ ಆಧ್ಯಾತ್ಮ, ದೇವರು ಈ ಕಡೆ ಗಮನ ಹರಿತೋ?’.. ‘ಏನಿಲ್ಲಯ್ಯಾ. ಅವರವರ ನಂಬಿಕೆ ಅವರಿಗೆ. ಸಮಾಜ ತಿದ್ದುತ್ತೀನಿ, ಬೆಟ್ಟಕ್ಕೆ ಚಳಿ ಆಗತ್ತೆ ಅಂತಾ ಕಂಬಳಿ ಹೊದುಸ್ತೀನಿ ಅಂತಾ ಹೋಗೋ ದಡ್ದತನ ನನಗೇನೂ ಇಲ್ಲ. ಸುಮ್ಮನೆ ಕುತೂಹಲಕ್ಕೆ ಬಂದೆ. ಅದಿರ್ಲಿ ಎಷ್ಟು ವರ್ಷಗಳಾಯ್ತಲ್ಲಯ್ಯಾ ನಿನ್ನ ನೋಡಿ. ನಡಿ ನಮ್ಮನೆಗೆ ಹೋಗೋಣ. ಇಲ್ಲೇ ಹತ್ತಿರ. ಹತ್ತು ನಿಮಿಷಕ್ಕೆ ಹೋಗ್ಬಹುದು’. ‘ಇನ್ನೊಂದಿನ ಬರ್ತೀನಯ್ಯಾ. ನಿನ್ನ ಮೊಬೈಲ್ ನಂಬರ್ ಕೊಡು. ನಾನು ಈ ಮಠದ ಹಣ ಕಾಸಿನ ವ್ಯವಹಾರದ ಮೇಲ್ವಿಚಾರಣೆ ನೋಡಕ್ಕೆ ದಿನಾ ಮಧ್ಯಾಹ್ನ ಮೂರಕ್ಕೆ ಬಂದು ರಾತ್ರಿ ಒಂಭತ್ತು ಗಂಟೆ ತನಕ ಇರ್ತೀನಿ’. ಅಷ್ಟೊತ್ತಿಗೆ ರಾಯರ ಹೆಂಡತಿ ಬಂದು ‘ಕೃಷ್ಣಾಚಾರ್ಯರೇ ಚೆನ್ನಾಗಿದೀರಾ? ಎಲ್ಲಿ ಸೀತಮ್ಮನವರು ಬರ್ಲಿಲ್ವೇ?’.. ‘ಇಲ್ಲಮ್ಮ. ಅವ್ಳು, ಅವಳ ಸ್ನೇಹಿತೆಯರ ಜತೆ ಮಂತ್ರಾಲಯಕ್ಕೆ ಹೋಗಿದಾಳೆ’. ರಾಯರು ಹೆಂಡತಿಯನ್ನು ‘ಇವರು ಕೃಷ್ಣಾಚಾರ್ಯರು ಅಂತ ನಿಂಗೆ ಹೇಗೆ ಗೊತ್ತಾಯ್ತು? ಎಂದು ಕೇಳಿದರು.
‘ನಾನು ನಮ್ಮ ಪಕ್ಕದ ಬೀದೀಲಿ ಇದಾರಲ್ಲ ಕಾಮಾಕ್ಷಮ್ಮ ಅವರ ಮಗನ ಮದುವೆಗೆ ಹೋಗಿದ್ದೆ. ಒಂದು ವರ್ಷ ಆಯ್ತು ಅನ್ನಿ. ಅವರಿಗೆ ಕೃಷ್ಣಾಚಾರ್ಯರು, ಸೀತಮ್ಮನವರು ತುಂಬಾ ಪರಿಚಯವಂತೆ. ಇವರಿಬ್ಬರೂ ಬಂದಿದ್ದರು. ಹೆಂಗಸರು ಸೇರಿದ ಮೇಲೆ ಮಾತಿಗೆ ಬರವೇ? ಪರಿಚಯ ಆಯ್ತು. ನೀವು ಕೃಷ್ಣಾಚಾರ್ಯರು ಹಾಸ್ಟೆಲ್ ನಲ್ಲಿ ಒಂದೇ ರೂಮ್ನಲ್ಲಿ ಇದ್ರಿ ಅನ್ನೋದೂ ತಿಳೀತು. ನಾನು ಹೇಳಿರ್ತೀನಿ. ನಿಮಗೆ ಇತ್ತೀಚಿಗೆ ಮರೆವು ಜಾಸ್ತಿ ಆಗ್ತಿದೆ. ಮರ್ತಿದೀರಿ. ಅಷ್ಟೇ’.
‘ಹಾಗಾದರೆ ನಡೀರಿ ನಮ್ಮ ಮನೆಗೆ ಹೋಗೋಣ’.
‘ನಡಿಯಯ್ಯಾ ಇವತ್ತು ನಮ್ಮ ಮನೇಲೆ ಊಟ ಮಾಡಿ ಮಲಗಿದ್ದು ಬೆಳಗ್ಗೆ ಹೋದರಾಯ್ತು. ನಿನ್ನ ಹತ್ತಿರ ಮಾತಾಡೋದು ಬೇಕಾದಷ್ಟಿದೆ’.
‘ರೀ ಪಕ್ಕದ ಮನೆ ವಿಶಾಲಕ್ಷಮ್ಮ ಕಾಯ್ತಿದಾರೆ. ಅವರ ಜತೆ ನಾನು ಹೋಗಿರ್ತೀನಿ. ನೀವು ಕೃಷ್ಣಾಚಾರ್ಯರನ್ನ ಕರಕೊಂಡು ಬನ್ನಿ’.
‘ಆಯ್ತಪ್ಪ ಪೀರಾಯ. ಬರ್ತೀನಿ ನಡಿ. ಒಂದು ಹತ್ತು ನಿಮಿಷ. ಈ ಮಠದ ಮ್ಯಾನೇಜರ್ ಗೆ ಹೇಳ್ಬಿಟ್ಟು ಬರ್ತೀನಿ. ಒಳಗೇ ಕೂತ್ಕೋ ಬಾ’.
-೩-
ರಾತ್ರಿ ಊಟವಾದ ಮೇಲೆ ರಾಯರು ಮತ್ತು ಕೃಷ್ಣಾಚಾರ್ಯ ಹಾಲಿನಲ್ಲಿ ಎರಡು ಹಾಸಿಗೆ ಹಾಸಿಕೊಂಡು ಮಲಗಿದರು. ಸುಮಾರು ನಲವತ್ತು ವರ್ಷಗಳ ಹಿಂದೆ ಕಾಲೇಜು, ಹಾಸ್ಟೆಲ್ ನಲ್ಲಿ ಪ್ರಾರಂಭವಾದ ಗೆಳೆತನ. ಇಬ್ಬರೂ ಒಟ್ಟಿಗೆ ಒಂದೇ ಕಡೆ ಕೆಲಸಕ್ಕೆ ಸೇರಿದರೂ ಕೃಷ್ಣಾಚಾರ್ಯ ಒಂದೆರೆಡು ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಪ್ರೊಬೇಷನರಿ ಆಫೀಸರ್ ಎಕ್ಸಾಮ್ ಬರೆದು ಪಾಸಾಗಿ ಅಲ್ಲಿಗೆ ಸೇರಿದ. ನಂತರ ಒಂದೆರೆಡು ವರ್ಷ ಪತ್ರಗಳು, ಒಂದೆರೆಡು ಭೇಟಿಗಳ ಮೂಲಕ ಇಬ್ಬರ ನಡುವೆ ಇದ್ದ ಸಂಪರ್ಕ ಆ ನಂತರದಲ್ಲಿ ತಪ್ಪಿಹೋಯಿತು. ಪೀರಾಯರು ಅದೇ ಆಫೀಸಿನಲ್ಲೇ ನಿವೃತ್ತರಾಗುವ ತನಕ ದುಡಿದು ಆರಕ್ಕೇರದೆ, ಮೂರಕ್ಕಿಳಿಯದೇ ಜೀವನ ಸಾಗಿಸಿದರು. ಕೃಷ್ಣಾಚಾರ್ಯ ಬೆಂಗಳೂರು, ಮದ್ರಾಸು, ಬಾಂಬೆ, ದಿಲ್ಲಿ ಹೀಗೆ ವರ್ಗವಾಗುತ್ತಾ ರಿಟೈರ್ಡ್ ಆಗುವ ಹೊತ್ತಿಗೆ ಬೆಂಗಳೂರಿನ ದೊಡ್ಡ ಶಾಖೆಯೊಂದರಲ್ಲಿ ಚೀಫ್ ಮ್ಯಾನೇಜರ್ ಆಗಿದ್ದ. ಬೆಂಗಳೂರಿನಲ್ಲಿ ಸ್ವಂತ ಮನೆ, ಕಾರು ಎಲ್ಲಾ ಸವಲತ್ತುಗಳು. ಪೀರಾಯರ ಮಕ್ಕಳು ಓದಿ ಕೆಲಸಕ್ಕೆ ಸೇರಿದ ನಂತರ ಬೆಂಗಳೂರಿನಲ್ಲಿ ಈಗ ಎರಡು ಬೆಡ್ ರೂಮಿನ ಒಂದು ಫ್ಲಾಟ್ ಅನ್ನು ಬ್ಯಾಂಕಿನಿಂದ ಸಾಲ ಪಡೆದು ಕೊಂಡಿದ್ದರು.
‘ಅಲ್ಲಯ್ಯಾ ನಿನಗೆ ಪೆನ್ಷನ್ ಬರತ್ತೆ, ಸ್ವಂತ ಮನೆ ಇದೆ. ಸುಮ್ಮನೆ ಮನೆಯಲ್ಲಿ ಹಾಯಾಗಿ ಇರುವುದು ಬಿಟ್ಟು ಈ ಮಠದ ಕೆಲಸವನ್ನು ಏಕಯ್ಯಾ ಗಂಟು ಹಾಕೊಂಡೆ?’.. ‘ಕಾಲ ಕಳೀಬೇಕಲ್ಲಯ್ಯಾ ಅದಕ್ಕೆ. ನಂದು ಸುಮ್ಮನೆ ಮೇಲ್ವಿಚಾರಣೆ. ನಾನೇನು ಗೌರವಧನನೂ ತೊಗೊತ್ತಿಲ್ಲ. ಮಠದೋರು ಕೊಡ್ತೀವಿ ಅಂದ್ರು. ನಾನು ಬೇಡ ಅಂದೆ. ಮಗ ಸೊಸೆ ದೂರ ಇದಾರೆ. ಅವರ ಕೆಲಸದ ಮಧ್ಯೆ ವರ್ಷಕ್ಕೆ ಎರಡು ಮೂರು ಸಲ ಬರ್ತಾರೆ. ಪ್ರತಿ ಸಲ ಬಂದಾಗ ಒಂದು ಹತ್ತು ದಿನ ಇದ್ದು ವಾಪಸ್ ಹೋಗ್ತಾರೆ. ನನ್ನ ಹೆಂಡ್ತೀನೂ ನಾನು ದಿನಕ್ಕೆ ಎಷ್ಟು ಹೊತ್ತು ಏನು ಅಂತ ಮಾತಾಡ್ಕೊಂಡು ಕಾಲ ಕಳೆಯೋದಪ್ಪ. ನಾವೇನು ನವ ದಂಪತಿಗಳೇನಯ್ಯಾ? ಅವಳೂ ಬೇಜಾರು ಅಂತ ಕಾಲ ಕಳೆಯೋಕ್ಕೆ ಅಲ್ಲೇ ಒಂದು ವಿಪ್ರ ಮಹಿಳೆಯರ ಸಂಘ ಅಂತ ಮಾಡ್ಕೊಂಡು ದಿನಾ ಮೂರ್ನಾಲಕ್ಕು ಗಂಟೆ ಭಜನೆ, ಹಾಡು ಅದೂ ಇದೂ ಅಂತ ಮಾಡ್ತಾಳೆ. ಅಲ್ಲಿಗೆ ಬರೋ ಎಲ್ಲಾ ಹೆಂಗಸರದ್ದೂ ಇದೇ ಕಥೆ. ಇವತ್ತು ಆ ಆಚಾರ್ಯರ ಪ್ರವಚನಕ್ಕೆ ಅಷ್ಟು ಜನ ಬಂದಿದ್ದರಲ್ಲ ಅವರಲ್ಲಿ ಸುಮಾರು ಜನದ್ದೂ ಅದೇ ಕಥೆ. ಜತೆಗೆ ತಮ್ಮ ತಮ್ಮ ಸೊಸೆಯಂದರ ಮೇಲಿನ ಚಾಡಿಗಳ ವಿನಿಮಯ, ಅದು ಇದು ಮಾತು, ಪ್ರವಚನ ಕೇಳ್ತಾ ಕೇಳ್ತಾ ಹೂಬತ್ತಿ ಹೊಸ್ಕೊಂಡು ಹೋಗೋದು. ಸ್ವಾಮೀ ಕಾರ್ಯ ಸ್ವಕಾರ್ಯ. ಎರಡೂ ಆಯ್ತು’
‘ಇವತ್ತು ಪ್ರವಚನ ಮಾಡಿದ್ರಲ್ಲ ಅವರ ಹೆಸರೇನು? ಮಠದ ಬೋರ್ಡ್ ನಲ್ಲಿ ನೋಡ್ದೆ. ಮರೆತು ಹೋಯ್ತು’. ‘ರಾಮನಹಳ್ಳಿ ರಾಮಾಚಾರ್ಯರು ಅಂತ’. ‘ರಾಮನಹಳ್ಳಿನಾ ? ಯಾವ ತಾಲ್ಲೋಕ್ಗೆ ಸೇರತ್ತೆ ಅದು?’. ‘ಯಾಕಯ್ಯಾ ರಾಮನಹಳ್ಳಿನಾ ಅಂತ ಅಷ್ಟೊಂದು ಕುತೂಹಲವಾಗಿ ಕೇಳ್ತಿಯಾ? ನೀನು ಆ ಆಚಾರ್ಯರನ್ನ ಈ ಮುಂಚೆ ಎಲ್ಲಾದರೂ ನೋಡಿದ್ಯಾ?’. ‘ನಾವು ಹಾಸ್ಟೆಲ್ ನಲ್ಲಿದ್ದಾಗ ಬಹುಷಃ ಕೊನೆ ವರ್ಷ ಅಂತ ಕಾಣತ್ತೆ ಒಬ್ಬರು ನಮಗಿಂತ ಒಂದು ಐದು ವರ್ಷ ದೊಡ್ಡರು ಸಂಜೆ ಕಾಲೇಜಲ್ಲಿ ಇಂಗ್ಲಿಷ್ ಎಂ ಎ ಮಾಡಕ್ಕೆ ಅಂತ ಬಂದಿದ್ದರು. ನಾನು ನೀನೂ ಇದ್ವಲ್ಲ ಆ ರೂಂ ನ ಪಕ್ಕದ ರೂಮ್ನಲ್ಲೇ ಇದ್ದರು. ಅವರ ಹೆಸರೂ ರಾಮನಹಳ್ಳಿ ರಾಮಾಚಾರ್ಯ ಅಂತ ನನಗೆ ಜ್ಞಾಪಕ’. ‘ನಿಂದೊಳ್ಳೆ ತಮಾಷೆಯಾಯ್ತಪ್ಪ. ನೋಡು ಈ ನಮ್ಮ ಬಯಲು ಸೀಮೆ ಕಡೆ ಹೊಸಹಳ್ಳಿ, ಹಳೇಹಳ್ಳಿ, ಹೊಸೂರು, ಹಳೆಊರು, ಹೊಸಕೋಟೆ, ಹಳೆ ಕೋಟೆ ಹೇಗೆ ಕಾಮನ್ ನೋ ಹಾಗೆ ಈ ರಾಮನಹಳ್ಳಿ ಅನ್ನೋದೂ ಅಷ್ಟೇ ಕಾಮನ್. ಹಾಸ್ಟೆಲ್ನಲ್ಲಿ ಇದ್ದೋರ್ದು ಯಾವ ತಾಲೋಕಿನ ರಾಮನಹಳ್ಳಿನೊ ಇವರದ್ದು ಯಾವ್ದೋ?’.. ‘ಇಲ್ಲಾ ಕಣಯ್ಯಾ. ಅವರ ಮುಖ ನನಗೆ ಚೆನ್ನಾಗಿ ಜ್ಞಾಪಕ ಇದೆ. ಆಗ ಟ್ರಿಮ್ ಆಗಿ ದಿನಾ ಶೇವ್ ಮಾಡ್ಕೊಂಡು, ಪ್ಯಾಂಟು, ಶರ್ಟು, ಪಂಪ್ ಶೂಸು ಹಾಕ್ಕೊಂಡು ಇರ್ತಿದ್ರು. ಈಗ ಎದೆ ದಾಟಿ ಹೋಗ್ತಾ ಇರೋ ಅಷ್ಟು ಬಿಳಿ ಗಡ್ಡ ಬಿಟ್ಟಿದ್ದಾರೆ, ವಯಸ್ಸಿಗೆ ತಕ್ಕ ಹಾಗೆ ದೇಹ ಸ್ವಲ್ಪ ಕುಗ್ಗಿದೆ ಅಷ್ಟೇ.’
‘ಆಯ್ತಪ್ಪ ಅವರೇ ಇವರು ಅಂದ್ಕೊ. ಅದರಿಂದ ನಿನಗೆ ಏನು ಸಿಕ್ಕಹಾಗೆ ಆಯ್ತು?’. ‘ಹಾಗಲ್ಲ, ಲಾಭ ನಷ್ಟದ ಪ್ರಶ್ನೆ ಅಲ್ಲ. ಆಗ ಅವರು ನಮ್ಮಗಳ ಜತೆ ವ್ಯವಹರಿಸ್ತಿದ್ದ ರೀತಿ, ಮಾತು ಕತೆ ಇವುಗಳಿಗೂ ಇವತ್ತು ನಾನು ನೋಡಿದಕ್ಕೂ, ಅವರು ಆಡಿದ ಮಾತಿನ ರೀತಿಗೂ ಅಷ್ಟೊಂದು ವ್ಯತ್ಯಾಸ ಇದೆಯಲ್ಲ, ಇವೆಲ್ಲಾ ಏಕಾಏಕಿ, ಸುಂಸುಮ್ನೆ ಆಗತ್ತಾ? ಅಥವಾ ಅದರ ಹಿಂದೆ ಏನಾದರೂ ಬಲವಾದ ಕಾರಣ ಇರಬಹುದಾ ಅಂತಾ ಅವಾಗ್ನಿಂದ ಅನ್ಸ್ತಾಯಿದೆ’. ‘ಪೀರಾಯ ನೀನು ಕ್ರೈಂ ಪೊಲೀಸೊ, ಸಿಐಡಿನೋ ಆಗ್ಬೇಕಾಗಿತ್ತಯ್ಯಾ. ಒಳ್ಳೆ ಅನುಮಾನದ ಪಾರ್ಟಿ ಕಣಯ್ಯಾ. ನೋಡು ನೀನು ಹೇಳೋದನ್ನಾ ನಾನು ಪೂರ್ತಿ ಅಲ್ಲಗಳೆಯಲ್ಲಾ. ನಾವು ನೋಡಿರೋ ಹಾಗೆ ಎಷ್ಟೋ ಮಠದ ಸ್ವಾಮೀಜಿಗಳು ಪೀಠ ತ್ಯಜಿಸಿ ಸಂಸಾರಸ್ಥರಾಗಿದ್ದಾರೆ. ಇನ್ನು ಕೆಲವರು ಸಂಸಾರ ಬಿಟ್ಟು ಸ್ವಾಮಿಗಳಾಗಿದ್ದಾರೆ. ಅದನ್ನ ಪೂರ್ತಿ ತಪ್ಪು ಅನ್ನೋಕಾಗಲ್ಲ. ಆದ್ರೆ ಎರಡು ದೋಣಿ ಮೇಲೆ ಒಟ್ಟಿಗೆ ಪ್ರಯಾಣ ಮಾಡ್ತೀನಿ ಅನ್ನೋದು ಇದೆಯಲ್ಲಾ ಅದು ಮಾತ್ರ ಸರಿಯಲ್ಲ. ಒಂದು ಕಡೆ ತಮಗೆ ತಾವೇ ಮೋಸ ಮಾಡಿಕೊಂಡು ಜೀವಿಸೋದು; ಇನ್ನೊಂದು ಕಡೆ ಅವರಿಗೆ ಗೌರವ, ಭಕ್ತಿ ತೋರಿಸ್ತಿತ್ರಾರಲ್ಲ ಆ ಜನಗಳಿಗೆ ಮಾಡೋ ನಂಬಿಕೆ ದ್ರೋಹ’.
‘……… ‘
‘ಯಾಕಯ್ಯಾ ನನ್ನ ಭಾಷಣ ಕೇಳಿ ಬೇಜಾರಾಯ್ತೋ ಇಲ್ಲಾ ನಿದ್ದೆ ಬಂತೋ’. ಪೀರಾಯರಿಗೆ ರಾಜು ವಸಿಷ್ಠನ ಮನೆಯಲ್ಲಿ ಮೂರು ದಿನಗಳ ಹಿಂದೆ ಬಾಳಪ್ಪನೊಡನೆ ನಡೆದ ಮಾತುಕತೆ ಜ್ಞಾಪಕಕ್ಕೆ ಬಂತು. ಇನ್ಮೇಲೆ ಯಾರ ಜೀವನದ ಬಗ್ಗೆನೂ ಕುತೂಹಲ ತೋರಿಸಬಾರದು ಎಂದು ತಾವು ಮಾಡಿದ್ದ ಪ್ರತಿಜ್ಞೆ, ನಿರ್ಧಾರ ಇಷ್ಟು ಬೇಗ ಮರೆತು ಹೋಯ್ತಲ್ಲಾ? ಏಕೆ ಹೀಗೆ? ನನ್ನ ಮನಸ್ಸೇ ಸರಿಯಿಲ್ಲವೇ? ಯಾರಾದರೂ ಮನಶಾಸ್ತ್ರದ ಡಾಕ್ಟರ್ ಹತ್ತಿರ ಹೋಗಿ ಕೌನ್ಸೆಲ್ ಮಾಡಿಸಿಕೊಳ್ಳಲೇ? ಎಂದು ಯೋಚಿಸುತ್ತಿದ್ದರು.
‘ಆ ಏನಂದೆ?’
‘ನಿದ್ದೆ ಬಂತೆ ಅಂತಾ ಕೇಳ್ದೆ? ನೋಡು ಹಿಂದೆ ನಮ್ಮೋರು ಸ್ತ್ರೀ ಮೂಲ, ಋಷಿ ಮೂಲ, ನದಿ ಮೂಲ ಹುಡ್ಕೋಕೆ ಹೋಗ್ಬಾರ್ದು ಅಂತ ಹೇಳ್ತಿದ್ರು ಆಲ್ವಾ? ಈಗ ಇಂತಾ ಆಚಾರ್ಯರು, ಸ್ವಾಮಿಗಳು, ಆಮೇಲೆ ಟಿವಿ ಚಾನೆಲ್ ಗಳಲ್ಲಿ ದಿನಾಲೂ ಬರ್ತಾರಲ್ಲಾ ಭವಿಷ್ಯ ಹೇಳೋರು, ವಾಸ್ತು ಹೇಳೋರು ಇವರ ಮೂಲಾನೂ ಕೆದಕೋಕೆ ಹೋಗ್ಬಾರ್ದು ಅನ್ಸತ್ತೆ ನಂಗೆ’. ರಾಯರ ಕುತೂಹಲ ಮತ್ತೆ ಚಿಗುರಿತು. ‘ಅಂದ್ರೆ ಈ ರಾಮನಹಳ್ಳಿ ರಾಮಾಚಾರ್ಯರದ್ದೂ ಒಂದು ಮೂಲಕಥೆ ನಿನಗೆ ಗೊತ್ತಿದೆ ಅಂತ ಆಯ್ತು’.
‘ಅಲ್ಪ ಸ್ವಲ್ಪ ಗೊತ್ತಿದೆ. ಹೇಳ್ತಿನಿ ಬೇಕಾದ್ರೆ. ಆದ್ರೆ ಅದು ನಿನ್ನಲ್ಲೇ ಉಳಿಬೇಕು. ತಿಳಿತಾ’.
——
(ಮುಂದುವರಿಯುತ್ತದೆ)
ಭಾವನೆಗಳ ಸ್ಪಂದನೆಗೆ ಹೇಳಿಮಾಡಿಸಿದಂತಹ ವೇದಿಕೆ ಈ ನಿಲುಮೆ. ನಿಜವಾಗಿಯೂ ಕನ್ನಡಿಗನಾಗಿ ಮೆಚ್ಚಬೇಕಾದ್ದೆ, ನಮ್ಮ ಮಾತ್ರಭಾಷೆಯಲ್ಲಿ ಅನಿಸಿಕೆಗಳು, ” ಕೇಳುವುದಕ್ಕೆ ಹಿತವಾಗಿದೆ” ……..ಧನ್ಯವಾದ ನಿಲುಮೆ