ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 22, 2017

1

ಲಿಂಗಾಯತವೆಂಬುದು ಹೊಸ ಧರ್ಮವೇ? … ಭಾಗ 2

‍ನಿಲುಮೆ ಮೂಲಕ

– ದೇವು ಹನೆಹಳ್ಳಿ,
ಬಾರಕೂರು, ಉಡುಪಿ

ಮತ,ಪಂಥ,ಧರ್ಮ,Religion ಇತ್ಯಾದಿ… ಭಾಗ 1

Religion ಅನ್ನು `ಧರ್ಮ’ ವೆಂದು ಅನುವಾದಿಸಿದ್ದು ಶತಮಾನದ ದೊಡ್ಡ ಅಕ್ರಮ-ಸಕ್ರಮ ಯೋಜನೆ.    

ನಾವು ಭಾರತೀಯರು Religion ಎಂಬ ಏಕಸೂತ್ರದಲ್ಲಿ ಇಲ್ಲ ಎಂಬುದು ನಮ್ಮ ಸುಪ್ತಪ್ರಜ್ಞೆಗೆ ಗೊತ್ತು. ಏಕಸೂತ್ರಕ್ಕೆ ಏನೆನ್ನಬೇಕು? ಅದೊಂದು Religion ಅಲ್ಲ, ಜೀವನವಿಧಾನ ಎಂದು ಯಾರೋ ಅಂದರು. (ಎಂ.ಬಿ. ಪಾಟೀಲರೂ ಅದನ್ನೇ ಹೇಳುತ್ತಾರೆ! `ಹಿಂದೂ ಎಂಬುದಿಲ್ಲ; ಇಲ್ಲಿದ್ದುದು ಬರೇ ಜಾತಿಗಳು’ಎಂದು ಕಾಗೋಡು ತಿಮ್ಮಪ್ಪನವರು ಸರಿಯಾಗಿಯೇ ಹೇಳಿದ್ದಾರೆ.) ಜೀವನಧರ್ಮ ಎಂದರು. ಸನಾತನ ಪದ್ಧತಿ ಎಂದರು. ಸನಾತನ ಧರ್ಮ ಎಂದುಬಿಟ್ಟರು. `ಧರ್ಮ’ ಎಂದುಬಿಟ್ಟ ಅಚಾತುರ್ಯವಿದೆಯಲ್ಲಾ, ಅದು ಈ ಶತಮಾನದ ಒಂದು ದೊಡ್ಡ ಅಕ್ರಮ-ಸಕ್ರಮ ಯೋಜನೆ.

ಈ ಅಸ್ಪಷ್ಟವಾದ ‘ಧರ್ಮ’ ಎಂಬ ಪದ ಬಳಕೆಯಾದ ಕಾಲಘಟ್ಟದಲ್ಲಿ ನಡೆದುಹೋದ ಒಂದು ಚಾರಿತ್ರಿಕ ಘಟನೆಯೆಂದರೆ ಚಿಕಾಗೋದಲ್ಲಿ ನಡೆದ Parliament of World’s Religions. ಇದನ್ನು ಭಾರತೀಯ ಭಾಷೆಗಳಿಗೆ, ಕನ್ನಡಕ್ಕೆ ವಿಶ್ವ ಸರ್ವಧರ್ಮ ಸಮ್ಮೇಳನ ಎಂದು ಭಾಷಾಂತರಿಸಲಾಯಿತು. (ಅದಾಗಲೇ ಉತ್ತರಭಾರತದಲ್ಲಿ ಹಲವಾರು ಭಾಷೆಗಳ ಪದಗಳನ್ನು ಎರವಲು ಪಡೆದು ‘ಹಿಂದಿ’ ಎಂಬ ಹೊಸ ಭಾಷೆಯನ್ನು ತಯಾರಿಸುತ್ತಿದ್ದ  ಕಾಲದಲ್ಲಿ ಮತಕ್ಕೆ (Religion) ಬದಲಾಗಿ, ಧರಮ್ ಎನ್ನುವ ಪರಿಪಾಠ ಬಂದಿತ್ತು.) ಅದುವರೆಗೆ Religionಗೆ ಸಂವಾದಿಯಾಗಿ, ಸಮಾನಾರ್ಥಕವಾಗಿ ಬಳಕೆಯಾಗುತ್ತಿದ್ದ ‘ಮತ’ ಎಂಬ ಶಬ್ದವನ್ನು ಕದಲಿಸಿ ಅಲ್ಲಿ ‘ಧರ್ಮ’ ಎಂಬ ಪದವನ್ನು ಕೂರಿಸಲಾಯಿತು.  ಧರ್ಮ ಎಂಬುದು ಯಾವತ್ತೂ ಋತ, ನ್ಯಾಯ, ನೀತಿ, ಸತ್ಯ, ಋಜುತ್ವ, ದಯೆ, ಕರುಣೆ, ಕರ್ತವ್ಯ, ನ್ಯಾಯಸಮ್ಮತ ನಡವಳಿಕೆ ಮುಂತಾದ ಮಾನವೀಯ ಮೌಲ್ಯಗಳ ಮೊತ್ತವಾಗಿ ಗ್ರಹಿಸಿದ್ದೇ ವಿನಃ ಸಂಕುಚಿತ ಮತೀಯ ತೀರ್ಮಾನ, ಗ್ರಹಿಕೆಗಳಾಗಿ ಅಲ್ಲ.

ಭಾರತೀಯ ಸಂದರ್ಭದಲ್ಲಿ  Religionಗೆ ಸಂವಾದಿಯಾಗಿ ‘ಮತ’ ಎನ್ನುವುದಕ್ಕಿಂತ ‘ಧರ್ಮ’ಎಂದರೆ ಹೆಚ್ಚು ಸ್ವೀಕಾರಾರ್ಹತೆ, Legitimacy, ಬರುವ ವಾಸನೆ ಬಡಿಯುತ್ತಲೇ ರಕ್ತದಲ್ಲಿ ಮಿಂದೆದ್ದ Religion(ಮತ)ಗಳೆಲ್ಲ ತಮ್ಮನ್ನು ಧರ್ಮ ಎಂದು ಕರೆದುಕೊಳ್ಳಲಾರಂಭಿಸಿದವು. ಮತಪಂಥಗಳ ಕುರಿತಾದ ವಾಗ್ವಾದವನ್ನೇ ಹಾಳುಗೆಡವಿದ ಈ ವಿದ್ಯಮಾನ ಎಲ್ಲ ಭಾರತೀಯ ಭಾಷೆಗಳ ಪದಕೋಶಗಳನ್ನು ಕಲುಷಿತಗೊಳಿಸಿಬಿಟ್ಟಿತು. ಯುರೋಪಿಯನ್ ಭಾಷೆಗಳಲ್ಲಿ Religion ಮತ್ತು Munificence+Benevolence +Values+ Rectitude ಒಂದೇ ಅಲ್ಲ; ಆದರೆ ಭಾರತದಲ್ಲಿ ಮತ ಮತ್ತು ಧರ್ಮ ಎಂದರೆ ಒಂದೇ!

‘ನೂರು ಮತಗಳ ಹೊಟ್ಟ ತೂರಿ…’ ಎಂದು ಹಾಡುವ ಕಾಲದಲ್ಲಿ ಕುವೆಂಪು ಅವರ ಶಬ್ದಕೋಶ ಸರಿಯಿತ್ತು. ಆದರೆ ಅವರೇ `ಇಸ್ಲಾಂ ಧರ್ಮ’ ಎಂಬ ಹೊತ್ತಗೆ ಬರೆದರು! ಆದರೆ ಪಂಪನಿಗೆ ಈ ಗೊಂದಲವಿರಲಿಲ್ಲ. ಧರ್ಮ ಎಂದರೇನು, ಅಧರ್ಮ ಎಂದರೇನು? ಪಂಪ ಸ್ಪಷ್ಟವಾಗಿ ಹೇಳುತ್ತಾನೆ:

ಕಳಿಪಂ ಕಳ್ವನಗುರ್ವು ಪರ್ವೆ ಕೊಲಿಪಂ ಕೊಲ್ವಂ ಪರಸ್ತ್ರೀಯರಂ

ಕೊಳಿಪಂ ಕೊಳ್ವನೆನಿಪ್ಪ ಪಾಪಿಯುಮತಿಕ್ರೂರಾತ್ಮನುಂ ಸಾಧುಸಂ/

ಕುಳಮಂ ಕಂಡೊಡೆ ಕಾಯ್ವನುಂ ಪಳೆವನುಂ ಧರ್ಮಕ್ಕತಿದ್ರೋಹನುಂ

ಖಳನುಂ ಕಳ್ಳುಣಿಯುಂ ಘಳುಮ್ಮನಿಳಿಗುಂ ಶ್ವಭ್ರಾಂತಮಂ ತಾಪಿನಂ (ಆದಿಪುರಾಣ: ಪಂಚಾಶ್ವಾಸ)

ಭವಾವಳಿಗಳು, ನವವಿಧ ಪುಣ್ಯ, ಪಂಚಾಶ್ಚರ್ಯ, ತರತರದ ಪೂಜೆ, ತೀರ್ಥಗಳು ಈ ವಿಚಾರಗಳ ಕುರಿತು ಮಾತನಾಡುವಾಗ ಪಂಪ ‘ಜಿನಮತ’ ಎನ್ನುತ್ತಾನೆ. ಧರ್ಮ ಎನ್ನುವುದಿಲ್ಲ.(ಇದನ್ನೇ ಪೂರ್ಣಚಂದ್ರ ತೇಜಸ್ವಿಯವರು ‘ಕಳಬೇಡ, ಕೊಲಬೇಡ ಎನ್ನಲು Religion ಯಾಕ್ರೀ ಬೇಕು?’ ಎಂದು ಸರಿಯಾಗಿಯೇ ಹೇಳುತ್ತಾರೆ!)

`ನಿಮಗೆ ಸುಳ್ಳು, ಪರಸ್ತ್ರೀಗಮನ, ಶರಾಬು ಕುಡಿಯುವುದು, ಮಾಂಸಭಕ್ಷಣೆ, ದುರ್ವ್ಯಸನಗಳೇ ಆಗಮಗಳಾಗಿವೆ’ ಎನ್ನುತ್ತಾನೆ ಪಂಪ. `ಆಗಮ’ ಎಂದರೆ ಕಟ್ಟುಕಟ್ಟಳೆನಿಯಮಗಳು. ಆದರೆ 90ರ ದಶಕದಲ್ಲಿ ಆದಿಪುರಾಣವನ್ನು `ಕನ್ನಡಕ್ಕೆ’ ಭಾಷಾಂತರ ಮಾಡಿದ ಪುಣ್ಯಾತ್ಮರೊಬ್ಬರು ಪಂಪನಿಗೇ ಕನ್ನಡ ಕಲಿಸಿದ್ದಾರೆ. ಅವರ ಭಾಷಾಂತರದಲ್ಲಿ `ಆಗಮ’ ಎಂಬ ಶಬ್ದವನ್ನೇ ಬಿಟ್ಟು `ಇವೆಲ್ಲ ನಿಮಗೆ ಧರ್ಮಗ್ರಂಥಗಳಾಗಿವೆ’ ಎನ್ನುತ್ತಾರೆ!

ಧರ್ಮ ಮತ್ತು Religion ಒಂದೇ ಎಂದಾದರೆ ಕಾಲಧರ್ಮ, ಯುಗಧರ್ಮ, ಧರ್ಮಾತ್ಮ, ಯಮಧರ್ಮ, ಧರ್ಮರಾಜ, ರಾಜಧರ್ಮ, ಪತಿವ್ರತಾಧರ್ಮ… ಇವುಗಳಿಗೆಲ್ಲಾ ಯಾವ ಅರ್ಥವನ್ನು ನೀಡುತ್ತೀರಿ? ಮತೀಯ ಗಲಭೆ, ಕೋಮುಗಲಭೆ ಕೇಳಿದ್ದೇವೆ; ಧರ್ಮಗಲಭೆ ಎಂದರೇನು?! (ಹನೂರು ಕೃಷ್ಣಮೂರ್ತಿಯವರ ಅಜ್ಞಾತನೊಬ್ಬನ ಆತ್ಮಕತೆ ಕಾದಂಬರಿಯಲ್ಲಿ) ಧರ್ಮಾಂತರ ಎಂದರೇನು?! (ಕತೆ: ಪ್ರೀತಿಯೆಂದರೆ? ಸದಾನಂದ ಆರ್. ಪ್ರಜಾವಾಣಿ, ಮುಕ್ತಛಂದ, 10-9-2017; ಈ ಪ್ರಯೋಗ ಈಗ ಮಾಮಾಲಿಯಾಗಿದೆ.)

ಬಲು ಹಿಂದೆ ನಮ್ಮೂರಿನ ಓರ್ವ ಬಡ, ಅನಕ್ಷರಸ್ಥ, ನೀತಿವಂತ, ಸ್ವಾಭಿಮಾನಿ ಮುದುಕನ ಕುರಿತು ರೇಡಿಯೋ ರೂಪಕವನ್ನು ರಚಿಸಿದ್ದೆ. ‘ನೀವು ದೇವಸ್ಥಾನಕ್ಕೆ ಹೋಗುವ ಕ್ರಮವಿಲ್ಲ, ಪೂಜೆಪುನಸ್ಕಾರ ಮಾಡುವ ರೂಢಿ ಇಲ್ಲ, ಯಾರಿಂದಲೂ ಏನನ್ನೂ ಪುಕ್ಕಟೆ ಪಡೆಯುವುದಿಲ್ಲ, ಯಾರ ಮನೆಯ, ದೇವಾಲಯಗಳ ಸಮಾರಂಭಗಳಿಗೆ ಹೋಗುವುದಿಲ್ಲ, ಅಲ್ಲಿ ಊಟವನ್ನೂ ಮಾಡುವುದಿಲ್ಲ’ ಎಂದು ಕೇಳಿದೆ. ಅದಕ್ಕಾತ ‘ಅದೆಲ್ಲ ಯಾಕೆ ಬೇಕು? ಅದೆಲ್ಲ ಮಾಡು ಎಂದು ದೇವರು ಎಂದಾದರೂ ಹೇಳಿದ್ದಾನಾ? ಇಲ್ಲ. ಆದರೆ ಧರ್ಮ ಮುಖ್ಯ, ಅದನ್ನು ಬಿಡಬಾರದು’ ಎಂದ. ಇಲ್ಲಿ ಧರ್ಮ ಎಂದರೇನು? ಒಬ್ಬ ಅನಕ್ಷರಸ್ಥ ಹಳ್ಳಿಗನಿಗಿರುವ ಭಾಷಾಜ್ಞಾನ ಚಿಂತಕರಿಗೆ, ಪತ್ರಕರ್ತರಿಗೆ, ನಾಯಕರಿಗೆ ಇಲ್ಲವಾಯಿತಲ್ಲ? ಭಿಕ್ಷುಕರು `ಧರ್ಮ ಮಾಡಿ ತಾಯಿ’ ಎನ್ನುತ್ತಾರೆ. ಅಂದರೆ ನಮಗೊಂದು Religion ಕೊಡಿ ಎಂದರ್ಥವೇ? (ಸಿದ್ಧರಾಮಯ್ಯನವರು ಕೊಟ್ಟಾರು, ಜತೆಗೊಂದು ಧ್ವಜ ಕೂಡಾ!) ‘ದಯೆ ತೋರಿ’,’ಕರುಣೆ ತೋರಿ’ ಎಂದರ್ಥ ಅಷ್ಟೇ ತಾನೇ? ಧರ್ಮದ ವ್ಯಾಪ್ತಿ ಬಲು ಚಿಕ್ಕದು. ಅದನ್ನು ಹಿಡಿದು ಚರ್ಚೆ ಮಾಡಲಾಗುವುದಿಲ್ಲ. ಭಾಷಾಜ್ಞಾನದಲ್ಲಿ ನಮ್ಮ ವಿಚಾರವಾದಿಗಳಿಗಿಂತ, ಮಠಾಧೀಶರಿಗಿಂತ ಭಿಕ್ಷುಕರೇ ವಾಸಿಯಲ್ಲವೇ?

`ಧರ್ಮೋ ರಕ್ಷತಿ ರಕ್ಷಿತಃ’ ಎಂಬಲ್ಲಿ ಧರ್ಮ ಎಂದರೆ Religion, ಮತ ಅಲ್ಲ; ಅದು ನ್ಯಾಯಮಾರ್ಗ, ಋತ ಅಷ್ಟೆ. ಎಂತಹ ಅನಾಹುತವಾಗಿದೆಯೆಂದರೆ  ಜೆಹಾದ್, ಕ್ರುಸೇಡ್ಗಳಿಗೆ ಪರ್ಯಾಯವಾಗಿ ಈ ಮಾತನ್ನು ಬಳಸುವ ರೂಢಿ ಬಂದಿದೆ! ‘ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎಂದರೆ Religion, ಮತಸ್ಥಾಪನೆಗೆ ಆಗಾಗ ಬರುತ್ತೇನೆ ಎಂದು ಆಶ್ವಾಸನೆ ನೀಡಿದ್ದಲ್ಲ. ಸತ್ಯ, ನ್ಯಾಯ ಸ್ಥಾಪನೆಗೆ ಬರುತ್ತೇನೆ ಎಂದರ್ಥ ಅಷ್ಟೆ.  ವೈಯಾಕರಣಿಗಳಿಗೆ ಸಮಾಧಾನ ತರುವ ಸಂಗತಿಯೆಂದರೆ ಕೇರಳ ಮತ್ತು ಕನ್ನಡ ಕರಾವಳಿಯ ಮುಸ್ಲಿಮರು `ಮತಪಂಡಿತರು’,’ಗಂಭೀರ ಮತಪ್ರಸಂಗ’ ಎಂಬ ಸೂಕ್ತ ಪದಗಳನ್ನೇ ಉಳಿಸಿಕೊಂಡಿರುವುದು.

ಹಾಗಾದರೆ ಭಾರತವೆಂಬ ನೆಲದಲ್ಲಿ, ಹಿಂದೂಗಳೆಂದು ಕರೆಯಿಸಿಕೊಳ್ಳುವ ಜನರಲ್ಲಿ ಮತ, Religion ಇರಲಿಲ್ಲವೇ? ಎಸ್.ಎನ್. ಬಾಲಗಂಗಾಧರ ಮತ್ತವರ ಶಿಷ್ಯವರ್ಗದವರು `ಭಾರತದಲ್ಲಿ Religionಗಳಿಲ್ಲ, ಇಲ್ಲಿರುವುದು ಪದ್ಧತಿ, ಸಂಪ್ರದಾಯಗಳು ಮಾತ್ರ’ ಎನ್ನುತ್ತಾರೆ. ಅವಿರುವುದು ನಿಜ. ಆದರೆ ಅನ್ಯ ಅನನ್ಯತೆಗಳನ್ನು ಒಪ್ಪದಿರುವ, ವಿಸ್ತರಣೆಯ ಆಕಾಂಕ್ಷೆಯಿರುವ ಮತಗಳು ಭಾರತದಲ್ಲಿ ಇಲ್ಲ ಎಂಬುದು ಸರಿಯಾದ ಮಾತಲ್ಲ. ಒಂದಷ್ಟು ದಿನ ವಿಸ್ತರಣೆಯನ್ನು ನಡೆಸಿ ಅನಂತರ ವಿಸ್ತರಣೆಯ ಆಕಾಂಕ್ಷೆ ಮತ್ತು ಉಪಕರಣವನ್ನು ನೀಗಿಕೊಂಡ ಬೌದ್ಧ, ಜೈನ ಮತ್ತು ಸಿಖ್ ಮತಗಳು ಮತ್ತು ಸದಾ ಖಂಡನ, ಮಂಡನ, ವಾಕ್ಯಾರ್ಥ, ಭಾಷ್ಯ, ತರ-ತಮ ವಾದದಲ್ಲಿಯೇ ಮುಳುಗಿದ್ದ ಅದ್ವೈತ, ದ್ವೈತ ಮತ್ತು ವಿಶಿಷ್ಟಾದ್ವೈತ ಮತಗಳಿದ್ದವು. ಇವೂ ಆದಿಮ ಆಚರಣೆಗಳನ್ನು ತಿರಸ್ಕರಿಸಿದ್ದವು. ಪ್ರಭುತ್ವವು ನಿರುತ್ಸಕವೂ, ಬಲಶಾಲಿಯೂ ಆಗಿದ್ದ ಕಾರಣ ಇವುಗಳಿಗೆ ತಮ್ಮ ಉದ್ದೇಶ ಸಾಧನೆಗಾಗಿ militant ಶಕ್ತಿಯನ್ನು ಸಂಚಯಿಸುವುದು ಸಾಧ್ಯವಾಗಲಿಲ್ಲ. ಇನ್ನೂ ಮೂರು ಮತಗಳಿವೆ. ಗಾಣಪತ್ಯ, ಶೈವ ಮತ್ತು ವೈಷ್ಣವ. ಒಂದು ಕಡೆ  ಅದ್ವೈತ-ದ್ವೈತ-ವಿಶಿಷ್ಟಾದ್ವೈತ ಬಣ, ಇನ್ನೊಂದೆಡೆ ಶಾಖೋಪಶಾಖೆಗಳಾಗಿ ಛಿದ್ರಗೊಂಡ ಗಾಣಪತ್ಯ-ಶೈವ-ವೈಷ್ಣವ ಬಣ ಪರಸ್ಪರ ಮೀರುವ, ಒಳಗೊಳ್ಳುವ, ಬಳಸಿಕೊಳ್ಳುವ ಮೇಲಾಟವನ್ನು ನಡೆಸುತ್ತಾ ಬಂದವು. ಆದಿಮ ಆಚರಣೆಗಳಲ್ಲಿ ಮತ್ತು ಅವುಗಳನ್ನು ಆಚರಿಸುವ ಸಮುದಾಯಗಳಲ್ಲಿ ತರ-ತಮ ಹುಟ್ಟಲು ಈ ಮತಗಳೇ ಕಾರಣವಾಗಿದ್ದಿರಬಹುದು.ಈ ಮತಗಳು ಭಾರತದ ಆದಿಮ ಆಚರಣೆ ಮತ್ತು ದೈವಗಳ ಚಹರೆಯನ್ನು ನಿರಂತರ ಬದಲಿಸುತ್ತಾ ಬಂದಿರುವುದು, ಕೆಡಿಸುತ್ತಾ ಬಂದಿರುವುದು ಕೂಡಾ ಅಷ್ಟೇ ವಾಸ್ತವ. ಭಾರತದಲ್ಲಿ ಎಲ್ಲ ಜಾತಿಗಳಿಗೂ ‘ಮೇಲೆ-ಕೆಳಗೆ’ಬೇರೆ ಜಾತಿಗಳಿದ್ದವು. ಈ ಮತಗಳ ತಿರುಳನ್ನು ಗರಿಷ್ಠ ಆವಾಹನೆ ಮಾಡಿಕೊಂಡ ಬ್ರಾಹ್ಮಣರು ಸಹಜವಾಗಿಯೇ ತರ-ತಮದ ಗರಿಷ್ಠ ಅಸಹಿಷ್ಣುತೆಯನ್ನು ತೋರುವವರಾಗಿದ್ದಾರೆ. ಆದರೆ ಅನೇಕ ಚಾರಿತ್ರಿಕ ಮತ್ತು ಭೌಗೋಳಿಕ ಕಾರಣಗಳಿಂದಾಗಿ ಅವುಗಳನ್ನು ಸಂಪೂರ್ಣ ನಾಶಪಡಿಸುವುದು ಸಾಧ್ಯವಾಗಲಿಲ್ಲ. ಆದಿಮ ಆಚರಣೆಗಳಿದ್ದ ಅಮೇರಿಕಾಗಳು, ಚೀನಾ, ಪುರಾತನ ಅರ್ಮೇನಿಯಾ ಮತ್ತು ಇಲ್ಯೀರಿಯಾಗಳಲ್ಲಿ ಆಚರಣೆ ಮತ್ತು ಸಮುದಾಯಗಳ ನಡುವೆ ತರ-ತಮವಿದ್ದಿರಲಿಕ್ಕಿಲ್ಲ.

ಇದೇನೂ ಹೊಸ ವಿಚಾರವಲ್ಲ, ತರ್ಕವಲ್ಲ. ಇದು ಸಾಮಾನ್ಯ ಜ್ಞಾನ. 40ರ ದಶಕದಿಂದ 70ರ ದಶಕದವರೆಗೆ ಎಲ್ಲಾ ಪಠ್ಯಪುಸ್ತಕಗಳಲ್ಲಿ ಬೌದ್ಧಮತ – ಗೌತಮ ಬುದ್ಧ; ಜೈನ ಮತ – ಮಹಾವೀರ; ಕ್ರೈಸ್ತಮತ – ಏಸು ಕ್ರಿಸ್ತ; ಇಸ್ಲಾಂ ಮತ – ಮಹಮ್ಮದ್ ಪೈಗಂಬರ್; ಅದ್ವೈತ ಮತ – ಶಂಕರಾಚಾರ್ಯ; ದ್ವೈತ ಮತ – ಮಧ್ವಾಚಾರ್ಯ; ವಿಶಿಷ್ಟಾದ್ವೈತ – ರಾಮಾನುಜಾಚಾರ್ಯ; ಸಿಖ್ ಮತ – ಗುರುನಾನಕ್ ಎಂದೇ ಇತ್ತು! ಯಾವಾಗ ಮತಗಳು ತಮ್ಮನ್ನು ತಾವು ಸ್ವೀಕಾರಾರ್ಹ, legitimize, ಮಾಡಿಕೊಳ್ಳಲು ‘ನಾವೂ ಧರ್ಮ’ ಎಂದವೋ ಅಲ್ಲಿಗೆ ಧರ್ಮಗ್ಲಾನಿ ಉಂಟಾಯಿತು!

ಸರಿ, ಸಧ್ಯದ ತುರ್ತು.’ಲಿಂಗಾಯತ’ ಕ್ಕೆ ಸ್ವತಂತ್ರ Religion, ಮತವಾಗಿ ಪದಚ್ಯುತಿ ಹೊಂದುವ ಅರ್ಹತೆ (!?) ಇದೆಯೇ? ಹೌದು ಎನ್ನಬೇಕಾಗುತ್ತದೆ. ಅರ್ಹತೆಯ ಕೋಷ್ಟಕವನ್ನು ಶ್ರೀ ಜಾಮದಾರ್ ಮತ್ತು ಅಸಂಖ್ಯ ಮಠಾಧೀಶರು, ಚಿಂತಕರು ನೀಡಿರುವಾಗ ಪುನರುಕ್ತಿಯ ಅವಶ್ಯವಿಲ್ಲ. ಅವರು ಹೇಳದೇ ಬಿಟ್ಟ ಅರ್ಹತೆಗಳೇ ಮುಖ್ಯ. ಅನ್ಯ ಮತ, ಪಂಥ ಸಂಪ್ರದಾಯ ಮತ್ತು ಆದಿಮ ಆಚರಣೆ-ಸಂಪ್ರದಾಯಗಳ ಕುರಿತಾದ ಅಸಹನೆ, ದ್ವೇಷ, ತಿರಸ್ಕಾರ, ಅಸಹಿಷ್ಣುತೆಗಳ ಮಟ್ಟ ಮತ್ತು ಪ್ರಮಾಣವನ್ನು ನೋಡುವಾಗ, ವಚನಕಾರರು (ಅವರನ್ನು ಪ್ರವಾದಿಗಳೆಂದು ಸಂಬೋಧಿಸಿದವರೂ ಇದ್ದಾರೆ!) ಕಂಡ ಸತ್ಯವೇ ಅಂತಿಮ, ಪ್ರಶ್ನಾತೀತ ಎಂಬ ಮನೋಭಾವವನ್ನು ನೋಡುವಾಗ ಲಿಂಗಾಯತಕ್ಕೆ ಮತವಾಗಿ ತೇರ್ಗಡೆಹೊಂದುವ ಅರ್ಹತೆ ಇದೆ ಎನ್ನಬೇಕಾಗುತ್ತದೆ.

ವಚನಗಳಿಗೆ ಮತಗ್ರಂಥ ಅಥವಾ ಪವಿತ್ರಗ್ರಂಥವಾಗುವ ಅರ್ಹತೆ ಇದೆಯೇ? ಲಿಂಗಾಯತ ಮತಾಚಾರಗಳ ಉಗ್ರ ಪ್ರತಿಪಾದನೆ, ಅನ್ಯದೈವಗಳ ಹಳಿಕೆ, ನಿರಾಕರಣದ ರಾಶಿ ನೋಡುವಾಗ ‘ಹೌದು’ ಎನ್ನಬೇಕಾಗುತ್ತದೆ. (ಫತೇಪುರ್ ಸಿಕ್ರಿ ನಗರವು ಅಸಂಖ್ಯ ಜೈನ ಚೈತ್ಯಾಲಯಗಳ ಅವಶೇಷಗಳ ಮೇಲೆ ನಿಂತಿದ್ದರೆ ಹಾವೇರಿ ಮತ್ತು ನನ್ನೂರು ಬಾರಕೂರಿನ ಅಸಂಖ್ಯ ಶಿವದೇವಾಲಯಗಳೆಲ್ಲ ಉತ್ತರ ಕರ್ನಾಟಕದ ಶೈವ-ಲಿಂಗಾಯತ-ವೀರಶೈವ ಸೇನಾಪತಿಗಳು ಪುಡಿಗಟ್ಟಿದ ಜೈನ ಚೈತ್ಯಾಲಯಗಳ ಅವಶೇಷಗಳ ಮೇಲೆಯೇ ನಿಂತಿವೆ. ಈ ಮಾತು ಬಂದ ಕೂಡಲೇ ದೇವಾಲಯದ ಶಿವನೇ ಬೇರೆ, ನಮ್ಮ ಇಷ್ಟಲಿಂಗದ ಶಿವನೇ ಬೇರೆ ಎನ್ನುತ್ತಾರೆ!) ಮೂರ್ತಿಭಂಜನೆಯ ಭ್ರಮೆ, Queen is dead, long live the Queen ಮಾದರಿಯಲ್ಲಿ ಪುನಃ ಒಂದಿಷ್ಟು ಸಂಕೀರ್ಣ ಆರಾಧನಾ ವಿಧಿನಿಷೇಧಗಳ ನಿರ್ಮಾಣ ನೋಡುವಾಗ ಹೌದು ಎನ್ನಬೇಕಾಗುತ್ತದೆ. ನಮ್ಮಂತಹ `ಭವಿ’ಗಳ, ಕಂದಾಚಾರಿಗಳ ಪಾಡು ಬಿಡಿ; ಮಾನ್ಯ ಎಂ.ಬಿ. ಪಾಟೀಲರು, ಮಾನ್ಯ ಬಸವರಾಜ ಹೊರಟ್ಟಿಯವರು `ಇವನ್ಯಾರವ’ `ಇವನ್ಯಾರವ’ ಎನ್ನುತ್ತಾ ವೀರಶೈವರನ್ನು ತಿರಸ್ಕರಿಸುವ ಪರಿಯ ನಾನೆಂತು ಪೇಳ್ವೆನು! `ನಮ್ಮನ್ನು ಒಪ್ಪಿ, ಬಂದರೆ ಬನ್ನಿ ನಮ್ಮೊಟ್ಟಿಗೆ; ಇಲ್ಲವಾದರೆ ನಿಮ್ಮನ್ನು ಬಿಟ್ಟು ಮುಂದೆ ಹೋಗುತ್ತೇವೆ’ ಎಂದು ಎಂತಹ ಬೆದರಿಕೆಯನ್ನು ಹಾಕಿಬಿಟ್ಟರು! `ಇವ ನಮ್ಮವ’ `ಎನಗಿಂತ ಕಿರಿಯರಿಲ್ಲ, ಶರಣು ಶರಣಾರ್ಥಿ’ ಎಂದ ಬಸವಣ್ಣ ಮಾತ್ರ ಅನಾಥ!

ನಮ್ಮ ಹಠಮಾರಿ ನಿಲುವೇ ನಮ್ಮ ಅನನ್ಯತೆ ಎಂದಾಗ ಸಂವಾದಕ್ಕೆ ಆಸ್ಪದವಿಲ್ಲ. ಸಂವಾದಕ್ಕೆ ಆಸ್ಪದ, ಅವಕಾಶ ಇಲ್ಲದಿರುವುದೇ ಮತದ ಮುಖ್ಯ ಲಕ್ಷಣ. ಮತ, Religion, ತನ್ನನ್ನು ಬಿಟ್ಟು ಈ ವಿಶ್ವದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುತ್ತದೆ. ಪ್ರಶ್ನಿಸುವುದಕ್ಕಿಂತ ಮೊದಲು ನಿರಾಕರಿಸುತ್ತದೆ. ಈ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದು, ತಾನು ಮಾತ್ರ ಉತ್ತರ ಎನ್ನುವುದು Religion ಮಾತ್ರ. ಆದುದರಿಂದ ಮತಕ್ಕೆ ಬೆಳವಣಿಗೆಯಿಲ್ಲ. ಧರ್ಮ ಯಾರನ್ನೂ ಪ್ರಶ್ನಿಸುವುದಿಲ್ಲ. ಪ್ರಶ್ನಿಸುವ ಶಕ್ತಿಯೇ ಅದಕ್ಕಿಲ್ಲ. ವಿಜ್ಞಾನ ತನ್ನನ್ನು ಮಾತ್ರ ನಿರಂತರ ಪ್ರಶ್ನಿಸಿಕೊಳ್ಳುತ್ತದೆ; ಆದುದರಿಂದ ಅದು ಬೆಳೆಯುತ್ತದೆ.

‘ಇದು ಕೋಟಿಗಟ್ಟಲೆ ಜನರ ಬೇಡಿಕೆ’ ಎಂದು ನಾಯಕರೆನ್ನಿಸಿಕೊಂಡವರು ಹೇಳುತ್ತಾರೆ. ನಿಜವೆಂದರೆ ಕೋಟಿಗಟ್ಟಲೆ ಜನರು ಕೆಲವರ ಮಾತಿಗೆ ಹೂಂಗುಟ್ಟುತ್ತಿರುತ್ತಾರೆ ಅಷ್ಟೆ. ಸಮಾಜದಲ್ಲಿ ಎಲ್ಲ ಕಾಲಕ್ಕೂ,ಎಲ್ಲ ವಿಚಾರಗಳಿಗೂ ನೂರಕ್ಕೆ ತೊಂಬತ್ತು ಜನರಿಗೆ ಸ್ವಂತ ನಿಲುವು ಎಂಬುದು ಇರುವುದಿಲ್ಲ. ಅವರು ತಟಸ್ಥರೋ, ಉದಾಸೀನರೋ, ನಿರಾಮಯರೋ ಆಗಿ ತಮಗೆ ತಿಳಿಯದಂತೆ ಯಾರನ್ನೋ ಅನುಸರಿಸುತ್ತಿರುತ್ತಾರೆ. ಅದರರ್ಥ ಅವರು ದಡ್ಡರೋ, ಮೂರ್ಖರೋ ಆಗಿರುತ್ತಾರೆ ಎಂದಲ್ಲ. ಎಲ್ಲ ಕಾಲದಲ್ಲಿಯೂ ಚಳುವಳಿ, ಕ್ರಾಂತಿ, ಜನಾಂದೋಲನ ಮುಂತಾದವೆಲ್ಲ ತೀರಾ ಸಣ್ಣ ಸಂಖ್ಯೆಯ ಜನರ ಯೋಚನೆ-ಯೋಜನೆಗಳಷ್ಟೆ. ಅದು ಲೋಕರೂಢಿ.

ಇವೆಲ್ಲ ವೈಚಾರಿಕ, ಮತೀಯ ತೊಡಕುಗಳು. ಲಿಂಗಾಯತ ಎಂಬುದೊಂದು ಸ್ವತಂತ್ರ ಮತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಲೇವಾರಿ ಮಾಡಬೇಕಾದವರು ಮುಖ್ಯಮಂತ್ರಿಯವರೋ, ಪ್ರಧಾನಿಯವರೋ, ರಾಷ್ಟ್ರಪತಿಯವರೋ, ನ್ಯಾಯಾಲಯವೋ ಅಥವಾ ಕೂಡಲಸಂಗಮದೇವನೋ ಎಂಬುದನ್ನು ಈಗ ಹೇಳುವುದು ಶಕ್ಯವಿಲ್ಲ. ಸ್ವತಂತ್ರ ಮತವೆಂದು ಪರಿಗಣಿತವಾದ ಪಕ್ಷದಲ್ಲಿ ನನ್ನ ಅಲ್ಪಮತಿಗೆ ಕೆಲವು ಲೌಕಿಕ ತೊಡಕುಗಳು, ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸ್ವತಂತ್ರ ಮತವೆಂದು ಗೆಲ್ಲಲಿರುವವರು ಮತ್ತು ಅದನ್ನು ಮಾನ್ಯ ಮಾಡಲಿರುವ ಪ್ರಭುತ್ವ, ಅಜ್ಞಾನಿಯೂ, ದಡ್ಡನೂ ಆದ ನನ್ನ ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಔದಾರ್ಯವನ್ನು ತೋರಬೇಕಾಗುತ್ತದೆ.

1.ಇದುವರೆಗೂ ವಚನಗಳಲ್ಲಿರುವ ಲಿಂಗಾಯತ ಆಚಾರ-ವಿಚಾರಗಳ ಪ್ರತಿಪಾದನೆಯನ್ನು ಮತ್ತು ಅನ್ಯದೈವ, ಅನ್ಯಸಂಪ್ರದಾಯಗಳ ತೆಗಳಿಕೆಗಳನ್ನು ನಿರ್ಲಕ್ಷಿಸಿ ಸಾಹಿತ್ಯಾಂಶಗಳನ್ನು, ಸಾಮಾಜಿಕ ಕಾಳಜಿಯ ವಿಷಯಗಳನ್ನು ಹಿತವಚನಗಳೆಂದು ಸ್ವೀಕರಿಸಿದ್ದೆವು.  ಈಗ `ಅವು ನಮ್ಮ ಹೊಸ ಮತದ ಪವಿತ್ರಗ್ರಂಥ’ ಎನ್ನುತ್ತಿದ್ದೀರಿ! ಹಾಗಾದರೆ ಇದು ತನಕ ನೀವು ಮಾಡಿದ್ದು ವಂಚನೆಯಲ್ಲವೇ? ಶಾಲಾ ಪಠ್ಯಗಳಲ್ಲಿ ಮತೀಯ ವಿಚಾರಗಳನ್ನು ಬೋಧಿಸಬಾರದು ಎಂಬುದು ನಿಯಮ. ಹಾಗಾದರೆ ಒಂದನೆಯ ತರಗತಿಯಿಂದಲೇ ನಮಗೆಲ್ಲ ವಚನಗಳನ್ನು ಕಲಿಸಿದ್ದು ವಂಚನೆಯಲ್ಲವೇ? ನಾಳೆ ದಿನ ಕರ್ನಾಟಕದ ಶಾಲಾ ಮಕ್ಕಳಿಗೆ ಬೈಬಲ್, ಕುರ್ಆನ್, ಗುರುಗ್ರಂಥಸಾಹಿಬ್, ವೇದ, ಭಗವದ್ಗೀತೆಗಳ ಓದನ್ನು ಕಡ್ಡಾಯಗೊಳಿಸಬಹುದೇ? (ವೇದ, ಗೀತೆಗಳನ್ನು ನನಗೆ ಪವಿತ್ರವೆಂದು ನಾನೆಂದೂ ಹೇಳಿಲ್ಲ; ಅವುಗಳನ್ನು ನಾನೂ ಸೇರಿದಂತೆ ಶೇಕಡಾ 99 ಕಾಫಿರ-ಭವಿ-ಹಿಂದೂಗಳು ಓದಿಕೊಂಡಿಲ್ಲ ಮತ್ತು ಅವುಗಳ ಓದು ಯಾರಿಗೂ ಕಡ್ಡಾಯವಲ್ಲ – ಪುರೋಹಿತರಿಗೂ!)

2.ಮತಗ್ರಂಥವೂ, ಮತಪ್ರಚಾರ ಸಾಮಗ್ರಿಯೂ ಆದ ವಚನಗಳ ಸಂಪಾದನೆಗೆ, ಸಂಶೋಧನೆಗೆ, ಪ್ರಕಟಣೆಗೆ ಸರಕಾರವು ತೆರಿಗೆದಾರನ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದ್ದು ಸರಿಯೇ?

3.ಬಸವಣ್ಣನನ್ನು ಲಿಂಗಾಯತ ಮತಸ್ಥಾಪಕ ಎನ್ನುತ್ತಿದ್ದೀರಿ.ಹಾಗಿದ್ದರೆ ಬಸವಣ್ಣನನ್ನು ಸಮಾಜ ಸುಧಾರಕನೆಂದು ಹೇಗೆ ಒಪ್ಪಿಕೊಳ್ಳಬೇಕು? ಹಾಗೆಂದು ಇದುವರೆಗೆ ನಾಡಿನ ಮಕ್ಕಳಿಗೆ ಕಲಿಸಿದ್ದು ವಂಚನೆಯಲ್ಲವೇ? ಹಾಗಿದ್ದರೆ ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿ ಮತಸ್ಥಾಪಕರೂ, ಮತಪ್ರಚಾರಕರೂ ಆದ ಬಸವಣ್ಣನವರ ಭಾವಚಿತ್ರವನ್ನು ಇರಿಸಿಕೊಳ್ಳಬಹುದೇ? ನಾಳೆದಿನ ಶ್ರೀ ರಮಾನಾಥ ರೈಯವರು ಮುಖ್ಯಮಂತ್ರಿಯಾದರೆ ಒಡಿಯೂರು ಮಠಾಧೀಶ ಶ್ರೀ ಗುರು ದೇವದತ್ತಾನಂದ ಸ್ವಾಮೀಜಿ ಅಥವಾ ಬಾರಕೂರು ಸಂಸ್ಥಾನಾಧೀಶ ಶ್ರೀ ಸಂತೋಷ ಗುರೂಜಿಯವರ ಭಾವಚಿತ್ರಗಳನ್ನು ತಮ್ಮ ಕಚೇರಿಯಲ್ಲಿ ಹಾಕಿಕೊಳ್ಳಬಹುದೇ? ಸಾಂಗ್ಲಿಯಾನಾ ಅವರು ಮುಖ್ಯಮಂತ್ರಿಯಾದರೆ ಬೆನ್ನಿ ಹಿನ್ ಅಥವಾ ಪೌಲ್ ದಿನಕರನ್ ಅವರ ಭಾವಚಿತ್ರಗಳನ್ನು ಹಾಕಿಕೊಳ್ಳಲು ಅವಕಾಶ ನೀಡುವಿರಾ? ವಿಶ್ವವಿದ್ಯಾಲಯವೊಂದಕ್ಕೆ ಅಕ್ಕಮಹಾದೇವಿ ಎಂದು ನಾಮಕರಣ ಮಾಡಿದ್ದೀರಿ. ಸರಕಾರವು ಮತಪ್ರಚಾರಕರ ಹೆಸರನ್ನು ಹಾಗೆ ಬಳಸಿಕೊಳ್ಳಬಹುದೇ?

4.ಶಾಲಾ ಮಕ್ಕಳಿಗೆ ಕೊಡಮಾಡುವ ಮಧ್ಯಾಹ್ನದ ಊಟಕ್ಕೆ ‘ದಾಸೋಹ’ ಎಂಬ ಮತೀಯ ಪರಿಕಲ್ಪನೆಯನ್ನು ಬಳಸಿದ್ದೀರಿ. ಇಂದಿರಾ ಕ್ಯಾಂಟೀನಿನ ಊಟವನ್ನು ಪ್ರಸಾದ, ಬಲಿ, ಎಡೆ, ಬಾರಣೆ, ಬೋಗ, ನೈವೇದ್ಯ ಎಂದೆಲ್ಲ ಕರೆಯಬಹುದೇ?

5.ಉತ್ತರ ಕರ್ನಾಟಕದಿಂದ ಹೊರಗೆ, ಅಂದರೆ ಲಿಂಗಾಯತ ‘ಮತೀಯರು’ ನೆಲೆಸಿಲ್ಲದ ಮಂಗಳೂರು, ಕಾರವಾರ, ಬೆಂಗಳೂರು ಮುಂತಾದೆಡೆ ಉದ್ಯೋಗಾರ್ಥವಾಗಿ ನೆಲೆಸಿದ ಲಿಂಗಾಯತರು ಸ್ಥಳೀಯ ‘ಸಾಹಿತ್ಯಾಭಿಮಾನಿಗಳ’,’ಆಧ್ಯಾತ್ಮಾಸಕ್ತರ’ ಮನೆಗಳಲ್ಲಿ ವಚನಗೋಷ್ಠಿಗಳನ್ನು ಏರ್ಪಡಿಸುತ್ತಾರೆ. (ಅನುಭಾವ ಸಂಗಮ ಎಂದೋ ಏನೋ ಹೆಸರಿಟ್ಟುಕೊಂಡಿದ್ದರಿಂದ ಅಂತಹ ಎರಡು ಗೋಷ್ಠಿಗಳಲ್ಲಿ ಈ ಲೇಖಕನೂ ಪ್ರೇಕ್ಷಕನಾಗಿ ಭಾಗವಹಿಸಿದ್ದುಂಟು) ಸ್ಥಳೀಯ ವ್ಯವಸ್ಥಾಪಕರನ್ನು ಶರಣ, ದಾಸೋಹಿ ಎಂಬಿತ್ಯಾದಿಯಾಗಿ ಸಂಬೋಧಿಸುತ್ತಾರೆ. ಇದು ಮತಪ್ರಚಾರವಲ್ಲವೇ? ಮತಾಂತರವಲ್ಲವೇ?

6.ಉತ್ತರಕರ್ನಾಟಕದ ಕೇರಿಗಳಲ್ಲಿ New Life ಇತ್ಯಾದಿ ಕ್ರೈಸ್ತ ಪಂಥಗಳ ಪ್ರಚಾರಕರು ಬಂದರೆ ಬೈದು ಭಂಗಿಸಿ, ಹಲ್ಲೆ ನಡೆಸಿ ಪೋಲೀಸರಿಗೆ ಒಪ್ಪಿಸಿದ ಹಲವಾರು ನಿದರ್ಶನಗಳಿವೆ. ಮಂಗಳೂರು, ಉಡುಪಿ, ಕುಂದಾಪುರ ಮುಂತಾದೆಡೆ ವಚನಗೋಷ್ಠಿಗಳನ್ನು ಏರ್ಪಡಿಸುವವರನ್ನು ಮತಾಂತರಿಗಳೆಂದು (ಸರಿಯಾಗಿಯೇ) ತೀರ್ಮಾನಿಸಿ ತದುಕಬಹುದೇ?

7.ಲಿಂಗಾಯತ ಮಠಗಳು ಮಕ್ಕಳಿಗೆ ಅನ್ನ, ವಸತಿ, ವಸ್ತ್ರ, ವಿದ್ಯಾಭ್ಯಾಸ ನೀಡುವುದನ್ನು ಸಮಾಜಸೇವೆ ಎಂದು ತಿಳಿದಿದ್ದೆವು. ಹಾಗಾದರೆ ಅವೆಲ್ಲ ಕೇವಲ ಮತಾಂತರದ ಆಮಿಷಗಳೇ?

ಮುಚ್ಚಳಿಕೆ: ಅಲ್ಲಮಪ್ರಭುದೇವ ಈ ಜಗತ್ತು ಕಂಡ ಶ್ರೇಷ್ಠ ಅನುಭಾವ ಕವಿ, ತತ್ವಜ್ಞಾನಿ, ದಾರ್ಶನಿಕ, ಪ್ರೇಮಿ, ಕತ್ತಿ-ಸುತ್ತಿಗೆ ಹಿಡಿಯದ ಮೂರ್ತಿಭಂಜಕ, ಎಂದೆಲ್ಲ ತಿಳಿದಿದ್ದೆ. ಕಳೆದ ಮೂರು ದಶಕಗಳಿಂದ ಪ್ರತಿದಿನವೆಂಬಂತೆ ಅವನನ್ನು  ಓದುತ್ತಿದ್ದೆ, ಮನದಲ್ಲಿಯೇ ಮಥಿಸುತ್ತಿದ್ದೆ. ಆದರೆ ಕೊನೆಗೂ ಆತ ಒಬ್ಬ ಮತಪ್ರಚಾರಕ ಅಷ್ಟೆ ಎಂದು ನೀವು ತಿಳಿದವರು ಹೇಳುತ್ತಿದ್ದೀರಿ! ಒಬ್ಬ ಭವಿಯಾಗಿ, ಅಜ್ಞಾನಿಯಾಗಿ, ಪಾಪಿಯಾಗಿ ಆತನನ್ನು ಓದುವ ಅಪರಾಧ ಮಾಡಿದ್ದೇನೆ. ಕ್ಷಮೆಯಿರಲಿ. ಇನ್ನೆಂದೂ ಆ ತಪ್ಪನ್ನು ಮಾಡುವುದಿಲ್ಲ.

ಚಿತ್ರಕೃಪೆ : 123rf.com

1 ಟಿಪ್ಪಣಿ Post a comment
  1. sudish mohan
    ಆಕ್ಟೋ 30 2017

    ಅತ್ಯುತ್ತಮ ಲೇಖನ. ನಿಜಕ್ಕೂ ಚಿಂತನೀಯವಾದ ಬರವಣಿಗೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments