ಇದಾವ ಪರಿಯ ‘ಜನಚೇತನ ???
-ಅರೆಹೊಳೆ ಸದಾಶಿವರಾವ್
ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಇಡೀ ಮಂಗಳೂರೇ ಸ್ತಬ್ಧ!!. ಬಜಪೆಂದ ಮಂಗಳೂರಿನ ನೆಹರೂ ಮೈದಾನದ ತನಕ ರಸ್ತೆಯ ಇಕ್ಕೆಲಗಳಿಗೂ ಆದಿನ ಒಂದು ರೀತಿಯ ವಿಶ್ರಾಂತಿ. ಎಲ್ಲೆಲ್ಲೂ ಪಾರ್ಕಿಂಗ್ ಇಲ್ಲ, ರಸ್ತೆಯ ಇಕ್ಕೆಲಗಳಲ್ಲೂ ಪೋಲೀಸರೇ ಪೋಲಿಸರು!
ಅಡ್ವಾಣಿ ಬರುತ್ತರೆಂದಾಗಲೇ ಪೋಲಿಸರಿಗೆ
ಶುರುವಾಗಿತ್ತು ಒಂದು ರೀತಿಯ ಚಳಿ-ಮಳೆ!
ಹಾಗಾಗಿ ಎದುರು ಸಿಕ್ಕವರಿಗೆಲ್ಲಾ ಸಿಕ್ಕಿದ್ದು ಕೇವಲ
ಪೋಲಿಸ್ ಭಾಷೆಯ ಬೈಗುಳದ ಸುರಿಮಳೆ!!
ಇದು ವಿಐಪಿಗಳು ಯಾವುದೇ ಊರಿಗೂ ಬಂದರೂ ಇರುವ ಸಾಮಾನ್ಯ ತೊಂದರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಇದರ ಬಗ್ಗೆ ಹೇಳುವುದು ಕೇಳುವುದು ಏನೂ ಬೇಕಿಲ್ಲ ಬಿಡಿ. ಆದರೆ ಇಲ್ಲಿ ಭಾರತೀಯ ಜನತಾ ಪಕ್ಷದ ಈ ನೇತಾರನ ಈ ಪರಿಯ ಜನ ಚೇತನ ಯಾತ್ರೆಯ ಬಗ್ಗೆ ಬರೆಯದಿದ್ದರೆ ಅದೇನೋ ಒಂದು ರೀತಿಯ ಕಿರಿ ಕಿರಿ ಕೊರೆಯುತ್ತಲೇ ಇರುತ್ತದೆ.
ಇಂದು ಕರ್ನಾಟಕದ ಪರಿಸ್ಥಿತಿ ನೋಡಿ. ಏನೋ ಮಾಡಲು ಹೋದ ಭಾಜಪ ಎಂಬ ಆಡಳಿತಾರೂಢ ಪಕ್ಷ, ಕಂಡ ಕಂಡಲ್ಲಿ ಗಳಿಸಿಕೊಂಡದ್ದು ಭ್ರಷ್ಟಾಚಾರದ ಹಣೆ ಪಟ್ಟಿ. ಸಂಪುಟದ ಹೆಚ್ಚಿನ ಸಚಿವರ ಮೇಲೆ ಒಂದಲ್ಲ ಒಂದು ರೀತಿಯ ಆಪಾದನೆ ಬಂದಾಗ, ದೆಹಲಿಯ ನಾಯಕರು ತೇಪೆ ಹಚ್ಚುವ ನೆಪದಲ್ಲಿ ಯಡ್ಯೂರಪ್ಪನವರಿಗೆ ಮತ್ತೆ ಮತ್ತೆ ಅಧಿಕಾರದಲ್ಲಿ ಮುಂದುವರಿಯುವ ಅವಕಾಶವನ್ನು ಕೊಟ್ಟರೇ ಹೊರತು, ಆಗಿದ್ದೇನು ಎಂದು ನೋಡುವ ಪ್ರಾಥಮಿಕ ಜ್ಞಾನವನ್ನೂ ತೋರಲಿಲ್ಲ. ಒಂದೆಡೆ ರೆಡ್ಡಿ ಬಣ, ಮತ್ತೊಂದೆಡೆ ಯಡ್ಡಿಬಣ, ಇದೆರಡಲ್ಲದೇ ಬೇರೆ ಬೇರೆ ಇನ್ನಿತರ ಬಣಗಳು, ಹೊರ ಪ್ರಪಂಚದಲ್ಲಿ ಕೈ ಕೈ ಹಿಡಿದು, ಕಮಲವನ್ನು ಒಡೆದು ‘ದಳ ದಳ’ವನ್ನೂ ಬೇರೆ ಮಾಡಿದ್ದಂತೂ ಸತ್ಯ. ಎಷ್ಟೇ ಸಲ ಇದರ ಬಗ್ಗೆ ವರಿಷ್ಠರಿಗೆ ದೂರು ಹೋದರೂ, ವರಿಷ್ಠರದ್ದು ಅಲ್ಲಿ ಜಾಣ ಕುರುಡು.
ಭಾಜಪದಲ್ಲಿ ಎಲ್ಲವೂ ಸರಿ ಇಲ್ಲ ಅಂದುಕೊಂಡವರೇ
ಎಲ್ಲರೂ; ಅಲ್ಲಿ ಏನೂ ಸರಿ ಇಲ್ಲ ಎಂದುಕೊಳ್ಳಲಾರದೇ
ಹೋದವರೇ ವರಿಷ್ಠರು; ಅದಕ್ಕೇ ಯಡ್ಯೂರಪ್ಪನವರು
ಮಾಡುತ್ತಾ ಹೋದರು ತಪ್ಪು ಒಂದಲ್ಲ ನೂರು!!
ಮತ್ತಷ್ಟು ಓದು
“ಫೇಸ್ಬುಕ್” ನಿಸ್ತಂತು ಕನ್ನಡ ಸಾಹಿತ್ಯ – ಒಂದು ಇಣುಕು ನೋಟ!
– ರವಿ ಮುರ್ನಾಡು
ನವೆಂಬರ‍್ ತಿಂಗಳು ಬಂತಲ್ಲ…! ಸಂತಸದ ಸಂಗತಿಯೆಂದರೆ, ಮಾನ್ಯ ಕಂಬಾರರು ಜ್ಞಾನಪೀಠ ಪ್ರಶಸ್ತಿ ತಂದು,ಈ “ನವೆಂಬರ‍್ ಕನ್ನಡದ ಹಬ್ಬ” ವನ್ನು ಶ್ರೀಮಂತಗೊಳಿಸಿದರು. ಹನ್ನೊಂದು ತಿಂಗಳು ನಿದ್ದೆಗೆ ಬಿದ್ದು, ಒಂದು ತಿಂಗಳು ಭಾರೀ ಪ್ರಚಾರ ಪಡೆದುಕೊಳ್ಳುವ ಈ “ಕನ್ನಡದ ಹಬ್ಬ” ಅಂದಾಗ ಅದರ ಇನ್ನಿಲ್ಲದ ದೌರ್ಬಲ್ಯಗಳು ಬೀದಿಗೆ ಬರುತ್ತವೆ. ಕನ್ನಡದ ಕಾರ್ಯಕ್ರಮಗಳಲ್ಲಿ ವಿದೇಶಿ ಮೇಕಪ್ ಮೆತ್ತಿಕೊಂಡು, ಅರೆಬರೆಯ ಫ್ಯಾಷನ್ ಷೋ ವೇದಿಕೆಯಲ್ಲಿ ಇಂಗ್ಲೀಷ್- ಹಿಂದಿ ಹಾಡಿಗೆ ನೃತ್ಯ ಮಾಡುವ ಅವೇಶಗಳು ಮೈಮೇಲೆ ಬರುತ್ತವೆ. ರಾಷ್ಟ್ರದಲ್ಲಿ ಸಾಹಿತ್ಯಕ್ಕಾಗಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರ ಆಡಂಭರ ಇದು !. ಅಭಿಮಾನದ ಬಗ್ಗೆ ಮಾತು ಒಕ್ಕಣಿಸುವಾಗ ಹೊರಗೆಡವಲಾರದ ನೋವು. ದೇಶದ ಇತರ ರಾಜ್ಯಗಳ ಜನರಲ್ಲಿರುವ ಅವರ ಮಣ್ಣಿನ ಭಾಷಾಭಿಮಾನಕ್ಕೆ ಹೋಲಿಸಿದಾಗ, ನಮ್ಮಲ್ಲಿ ಪ್ರಚಾರಕ್ಕೆ ಅಭಿಮಾನದ ಸೋಗು ಹಾಕಿದ ಉದಾಹರಣೆಗಳೇ ಹೆಚ್ಚು. ಒಂದು ಕಡೆ ರಾಜ್ಯದ ಹೃದಯ ಭಾಗಗಳೇ ತಾಯಿ ಭಾಷೆಯನ್ನು ಹರಾಜಿಗಿಟ್ಟಿವೆ. ಇನ್ನೊಂದೆಡೆ ನೆಲ ನಮ್ಮದು ಅಂತ ಕಾಳಗಕ್ಕಿಳಿದು, ಜೈಲೊಳಗೆ ಬಂಧಿಯಾದಂತೆ, ಕನ್ನಡ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದೆ. ಯಾಕೆ ಹೀಗೆ? ಈ ನವೆಂಬರ‍್ ತಿಂಗಳಲ್ಲಿ ಮಾತ್ರ ಏಕೆ ಕನ್ನಡಕ್ಕೆ ಆವೇಶ..?
ಎಲ್ಲವನ್ನು ಮೌನದ ಕನ್ನಡಿಯಲ್ಲಿ ನೋಡಿದಾಗ ಕನ್ನಡದ ಭಾವಚಿತ್ರ ಒಡೆದ ಗಾಜಿನಂತೆ ನೂರಾರು ಬಿರುಕುಗಳು ಅಟ್ಟಹಾಸಗೈಯ್ಯುತ್ತಿವೆ. ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬಂದ ಪರಭಾಷಿಗರು ಕನ್ನಡದ ಬಗ್ಗೆ ಹಿಗ್ಗಾಮುಗ್ಗ ಮಾತಾಡಿದರು. ಕನ್ನಡದ ಮನಸ್ಸುಗಳು ನೋವು ಅನುಭವಿಸಿದ್ದು ಯಾವತ್ತಿಗೂ ಮರೆತಿಲ್ಲ. ಎಲ್ಲಿ ಹೋದವು ಭಾಷಾಭಿವೃದ್ಧಿಗೆ ಸರಕಾರ ತಂದ ನೀತಿಗಳು ?. ಶಾಲಾ-ಕಾಲೇಜುಗಳಲ್ಲಿ ಭಾಷೆಯ ಬಗೆಗಿನ ಲಘು ವಿಚಾರಗಳು ವಿದ್ಯಾರ್ಥಿಗಳಲ್ಲಿ ಅಸಡ್ಡೆಗೆ ದಾರಿ ತೋರಿಸುತ್ತಿದೆ. ಕನ್ನಡ ಸಂಘಟನೆಗಳಲ್ಲಿ ಮುತುವರ್ಜಿ ವಹಿಸಿ ಬೀದಿ-ಬೀದಿಯಲ್ಲಿ ಕನ್ನಡದ ಆವೇಷ ಉಕ್ಕಿಸುವ ಉಮ್ಮಸ್ಸು ಮಂಕಾಗಿದೆ. ಗಣ್ಯ ವ್ಯಕ್ತಿಗಳ ರಣ ಕಹಳೆ ಮೊಳಗಿಸುವ ಕನ್ನಡದ ಬಗೆಗಿನ ಮಾತುಗಳು ಜಡ ಹಿಡಿದು ಮಲಗಿವೆ. ಇದು ಇಂದಿನ ಕನ್ನಡದ ದೌರ್ಬಲ್ಯಗಳಲ್ಲಿ ಮೊದಲು ಕಾಣುವಂತಹದ್ದು. ಆಂಗ್ಲ ಮತ್ತು ಹಿಂದಿ ಭಾಷೆಗಳ ನಡುವೆ ಬೇಧಭಾವ ಭಿತ್ತಿದ ಹಲವು ಉದಾಹರಣೆಗಳು ಹಲವು ವಿಧದಲ್ಲಿ ಅಭಿಮಾನ ಕುಸಿಯುವಂತೆ ಮಾಡಿದೆ ಅಂತ ಖೇಧ ವ್ಯಕ್ತಪಡಿಸುವುದು ಅನಿರ್ವಾಯ. ಪ್ರಶಸ್ತಿ ಕೊಡುವುದು ಪ್ರಚಾರಕ್ಕೆ ಅಲ್ಲ. ಅದು ಹೊಣೆಗಾರಿಕೆಯನ್ನು ಹೆಚ್ಚಿಸಲಿಕ್ಕೆ. ಪ್ರಶಸ್ತಿ ಅನ್ನುವ ಪದದ ಇನ್ನೊಂದು ಅರ್ಥ ಇದು. ಟಿ.ವಿ.ಮಾಧ್ಯಮ, ಆಕಾಶವಾಣಿ ಮಾಧ್ಯಮಗಳಂತೂ ಕನ್ನಡದ ಹೆಸರಿಟ್ಟು ಕನ್ನಡಿಗರನ್ನೇ ಬೀದಿಗೆ ತರುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದವರಿಗೆ ಕನ್ನಡದ ನೆಲದಲ್ಲೇ ಕನ್ನಡತನದ ಚುಕ್ಕಾಣಿ ಹಿಡಿದವರ ಉತ್ತರ ಮೌನ.