ವಿಷಯದ ವಿವರಗಳಿಗೆ ದಾಟಿರಿ

Archive for

25
ನವೆಂ

ನಮ್ಮೂರ ಕನ್ನಡ ರಾಜ್ಯೋತ್ಸವ – ‘ಕೆಳದಿ’

ಪ್ರಹಸ್ತಿ ಪಿ.

ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿರೋರಿಗೆ ಕೆಳದಿಯ ಬಗ್ಗೆ ಗೊತ್ತೇ ಇರುತ್ತದೆ. ಹೊಸಬರಿಗೆ ಹೇಳಬೇಕೆಂದರೆ, ನೀವು ಜಗತ್ಪ್ರಸಿದ್ಧ ಜೋಗ ಜಲಪಾತದ ಹೆಸರನ್ನು ಕೇಳಿಯೇ ಕೇಳಿರುತ್ತೀರಿ. ಅದಕ್ಕೆ ಹೋಗಬೇಕಾದರೆ ಸಾಮಾನ್ಯವಾಗಿ ಸಾಗರಕ್ಕೆ ಬಂದೇ ಹೋಗುತ್ತಾರೆ. ಸಾಗರದಿಂದ ಎಂಟು ಕಿ.ಲೋ ಮೀಟರು ದೂರವಿರುವ ಊರು ಕೆಳದಿ. ಇಲ್ಲಿಯ ಪಾಳೇಗಾರ ಶಿವಪ್ಪನಾಯಕ, ರಾಣಿ ಚೆನ್ನಮ್ಮ… ಈ ಹೆಸರುಗಳನ್ನು ಎಲ್ಲೋ ಕೇಳಿದ/ಓದಿದ ನೆನಪಾಗುತ್ತಿದೆಯೇ? ಹಾ ಅದೇ ಕೆಳದಿ. ಅದರ ಹತ್ತಿರವೇ ನಮ್ಮೂರು.

ಪ್ರತೀವರ್ಷವೂ ಕನ್ನಡ ರಾಜ್ಯೋತ್ಸವ ಬಂತೆಂದರೆ ನಮಗೆಲ್ಲಾ ಹಬ್ಬದ ವಾತಾವರಣ.ಹಂಪಿಯಿಂದ ಕೆಳದಿಗೆ ಬರುತ್ತಿದ್ದ ವಿದ್ಯಾರಣ್ಯ ಜ್ಯೋತಿಯದು ಕೆಳದಿಯಿಂದ ಸಾಗರದವರೆಗೆ ಮೆರವಣಿಗೆ..ಆ ಸಂದರ್ಭವೆಂದರೆ ನಮಗೆಲ್ಲಾ ಸಂಭ್ರಮವೋ ಸಂಭ್ರಮ.ಪ್ರತೀ ಮನೆಯೆದುರ ರಸ್ತೆಯನ್ನೂ ತೊಳೆದು ಎಳೆದ ದೊಡ್ಡದೊಡ್ಡ ರಂಗೋಲಿಗಳು,”ವಿದ್ಯಾರಣ್ಯ ಜ್ಯೋತಿಗೆ ಸ್ವಾಗತ”, “ರಾಜ್ಯೋತ್ಸವದ ಶುಭಾಶಯಗಳು” ಇತ್ಯಾದಿ ಬರಹಗಳೇನು, ಪ್ರತೀ ಹಳ್ಳಿಯ ಬಾಗಿಲುಗಳಲ್ಲಿ, ಹೆಚ್ಚೆಚ್ಚು ಮನೆಗಳಿದ್ದ ಕಡೆ ಹೀಗೆ ಸಾಲು ತೋರಣಗಳೇನು, ಪೇಟೆ ಹತ್ತಿರ ಸಾಗುತ್ತಿದ್ದಂತೆ ಸಾಲು ಸಾಲು ವಿದ್ಯುತ್ ದೀಪಗಳೇನು..ಅಬ್ಬಾ!! ಜ್ಯೋತಿಯೊಂದಿಗೆ ಎಂಟು ಕಿಲೋಮೀಟರಿಗಿಂತಲೂ ದೂರ ಸಾಗುವುದೆಂದರೆ ಒಂದು ಅವಿಸ್ಮರಣೀಯ ಅನುಭವ.. ವಿದ್ಯಾರಣ್ಯರು ಹಕ್ಕ-ಬುಕ್ಕರ ಗುರುಗಳಲ್ಲವೇ, ಆ ವಿಜಯನಗರ ಸಾಮ್ರಾಜ್ಯಕ್ಕೂ ಕೆಳದಿಗೂ, ಅವರ ಹೆಸರಿನ ಜ್ಯೋತಿಗೂ , ನಾನು ಹೇಳಹೊರಟಿರುವ ಮೆರವಣಿಗೆಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅಂತ ಸಂದೇಹ ಶುರು ಆಯ್ತಾ? ತಡೀರಿ ಒಂದೊಂದಾಗಿ ಹೇಳುತ್ತಾ ಹೋಗ್ತೇನೆ. ಮುಂದೆ ಓದಿ.

ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕೆಳದಿಯ ಸಾಮಾನ್ಯ ರೈತನೊಬ್ಬನಾದ ಭದ್ರಗೌಡನೆಂಬುವನಿಗೆ ನಿಕ್ಷೇಪ ದೊರೆತು ಅದರಿಂದ ಅವನು ಪಾಳೆಯವನ್ನು ಕಟ್ಟಿಕೊಂಡನಂತೆ. ಅವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಅವನಿಗೆ ಎಂಟು ಮಾಗಣಿಗಳ ನಾಯಕತ್ವವನ್ನು ಕೊಟ್ಟನೆಂದು ಇತಿಹಾಸವಿದೆ .ಕಾಲ ಕಳೆದಂತೆ ಸಂಸ್ಥಾನ ಬೆಳೆಯಿತು. ಕೆಳದಿ, ಇಕ್ಕೇರಿ, ಗೌರಿ ಬಿದನೂರು ಹೀಗೆ ಕೋಟೆ ಕೊತ್ತಲಗಳನ್ನು, ದೇವಾಲಯಗಳನ್ನು ಕಟ್ಟಿದರು. ಶಿವಪ್ಪನಾಯಕ, ಚೆನ್ನಮ್ಮ ರಾಣಿಯಂತಹವರು ಬಂದು ಹೋದರು.  ಕೆಳದಿಯ ವೀರಭದ್ರ ದೇವಸ್ಥಾನದ ಪ್ರಧಾನ ಬಾಗಿಲ ಬಳಿ ಶ್ರೀಕೃಷ್ಣನ ಸಣ್ಣ ವಿಗ್ರಹವಿದೆ. ಇದು ಅಂದಿನಾ ಘಟನೆಯ ಸವಿನೆನಪಿಗಾಗಿ ಎಂದು ಅನೇಕರು ಹೇಳುತ್ತಾರೆ.

೧೯೫೬ ರಲ್ಲಿ ಕರ್ನಾಟಕ ಏಕೀಕರಣವಾಯಿತು. ರಾಜ್ಯೋತ್ಸವ ಆಚರಣೆಗಳು ಪ್ರಾರಂಭವಾದವು. ೭೦ರ ದಶಕದ ಕೊನೆಭಾಗದಲ್ಲಿ ರಾಜ್ಯೋತ್ಸವ ಆಚರಣೆಯ ಭಾಗವಾಗಿ ಇತಿಹಾಸ ಪ್ರಸಿದ್ದ ಸ್ಥಳಗಳಿಂದ ಜ್ಯೋತಿಯೊಂದನ್ನು ತಂದು ಮೆರವಣಿಗೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತಂತೆ. ಅದಾಗಿ ಕೆಲಸಮಯದಲ್ಲಿ ಅಂದರೆ ಈಗ್ಗೆ ಸುಮಾರು ಇಪ್ಪತ್ತು ವರ್ಶಗಳ ಹಿಂದಿಂದ ಕೆಳದಿಯಿಂದ ಜ್ಯೋತಿಯ ಮೆರವಣಿಗೆ ನಡೆಸುವ ಸಂಪ್ರದಾಯ ಶುರುವಾಗಿದೆ ಅಂತ ಅಲ್ಲಿನ ಹಿರಿಯರು ಹೇಳುತ್ತಾರೆ. ಮೊದಲಿಗೆ ನವೆಂಬರ್ ಒಂದರ ಹಿಂದಿನ ರಾತ್ರಿ ಹಂಪಿಯಿಂದಲೇ ವಿದ್ಯಾರಣ್ಯ ಜ್ಯೋತಿ ಕೆಳದಿಗೆ ಬರುತ್ತಿತ್ತಂತೆ. ಜೀಪಲ್ಲಿ ಹಿಂದಿನ ದಿನ ಮಧ್ಯರಾತ್ರಿಯ ಹೊತ್ತಿಗೆ ಕೆಳದಿಗೆ ಬರುತ್ತಿತ್ತು ಆ ಜ್ಯೋತಿ.  ಮಧ್ಯರಾತ್ರಿ ಎಷ್ಟೊತ್ತಾದರೂ ಕೆಳದಿಗೆ ಬಂದೇ ತಲುಪುತ್ತಿದ್ದ ಜ್ಯೋತಿ ಹೊತ್ತು ತಂದವರು ಕೆಳದಿ ದೇಗುಲದ ಪ್ರಾಂಗಣದಲ್ಲೇ ಮಲಗಿರುತ್ತಿದ್ದರಂತೆ. ನಂತರ ಬೆಳಗ್ಗೆ ಆರೂ ಮುಕ್ಕಾಲರ ಹೊತ್ತಿಗಾಗಲೇ ಅದಕ್ಕೆ ಪೂಜೆಯಾಗಿ ಕೆಳದಿ ರಾಮೇಶ್ವರ ದೇವಸ್ಥಾನದಿಂದ ಸಾಗರದ ಕಡೆಗೆ ಹೊರಡುತ್ತಿತ್ತು.

Read more »

25
ನವೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 12 -ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು

-ರಾಮಚಂದ್ರ ಪಿ

ಶಿರ್ವದಲ್ಲಿ ಆಟ ಮುಗಿದ ತರುವಾಯ, ಮುಂದಿನ ಪ್ರದರ್ಶನಕ್ಕೆ ನನಗೆ ಅವಕಾಶ ಕೊಡಿ ಎಂದು ಬೇಡುವ ಸಂದರ್ಭ ಬರಲೇ ಇಲ್ಲ. ನಾನು ಬಣ್ಣ ತೆಗೆಯುತ್ತಿದ್ದಲ್ಲಿಗೆ ಬಂದ ಕಟ್ಪಾಡಿಯ ಶ್ರೀ ಮುದ್ದು ಸುವರ್ಣರು ನಮ್ಮೂರಿಗೆ ಬನ್ನಿ ಎಂದು ವೀಳ್ಯ ಕೊಟ್ಟರು. ಅವರ ಹಿಂದೆಯೇ ಇನ್ನಿಬ್ಬರು ಬಂದರು. ಅವರಿಗಿಂತಲೂ ಮೊದಲೇ 3 ಆಟಗಳಿಗೆ ವೀಳ್ಯ ಪಡೆದಿದ್ದ ಫಲಿಮಾರಿಗೆ, ಮಾತು ಕೊಟ್ಟಂತೆ ಹೋಗಿ ಆಟಗಳನ್ನು ಆಡಿದೆವು.

ಅಲ್ಲಿಯೂ “ಬ್ರಹ್ಮ ಕಪಾಲ”. ಅದನ್ನು ನೋಡಲು ಉಡುಪಿ, ಮಲ್ಪೆ, ಕಲ್ಯಾಣಪುರಗಳಿಂದ ಜನರು ಬಂದಿದ್ದರು. ಅವರೆಲ್ಲ ಹಿಂತಿರುಗಿದಾಗ ಮಾಡಿದ್ದ ಪ್ರಚಾರವೇ ನಾವು ಕಟ್ಪಾಡಿ-ಕಾಪುಗಳ ಆಟ ಮುಗಿಸಿ, ಮಲ್ಪೆಯ ಸಮೀಪದ ಕ್ರೋಢಪುರಕ್ಕೆ (ಅದಕ್ಕೆ ಶಂಕರ ನಾರಾಯಣವೆಂಬ ಹೆಸರೂ ವಾಡಿಕೆಯಲ್ಲಿದೆ) ಬಂದಾಗ, ನಮಗೆ ಬಡಗು ನಾಡಿನಿಂದ ಅನಿರೀಕ್ಷಿತ ಸ್ವಾಗತವನ್ನು ಕೊಡಿಸಿತು.

“ವಿಶ್ವಾಮಿತ್ರ-ಮೇನಕೆ” ಮತ್ತು “ಕಂಸವಧೆ” ಎಂಬ ಎರಡು ಕಥಾಭಾಗಗಳನ್ನು ಇರಿಸಿಕೊಂಡು ಕ್ರೋಢಪುರದಲ್ಲಿ ನಾವು ಆಟವಾಡಿದೆವು. ಮೊದಲು ವಿಶ್ವಾಮಿತ್ರನಾಗಿಯೂ,ಅನಂತರ ಕೃಷ್ಣನಾಗಿಯೂ ಪಾತ್ರ ವಹಿಸಿದ ನಾನು, ಪ್ರೇಕ್ಷಕರ ಹರ್ಷಭರಿತ ಕರತಾಡನಗಳ ಆನಂದವನ್ನು ಅನುಭವಿಸುತ್ತಿದ್ದೆ. ಜನಸಮೂಹದಲ್ಲಿದ್ದ, ಅಲ್ಲಿನ ಪಂಡಿತರೊಬ್ಬರು ನಮಗೆಲ್ಲ ಹಾರ ಸಮರ್ಪಣೆ ಮಾಡಿದರು.

ನಡುವೆ, ಅಂತಹ ಕಾರಣದಿಂದ ಕೆಲವು ನಿಮಿಷಗಳ ಕಾಲ ಬಿಡುವು ದೊರೆತರೆ, ಮುಂದಿನ ಆಟ ನಡೆಯಲಿರುವ ಸ್ಥಳವನ್ನು ರಂಗಸ್ಥಳದಿಂದ ಕರೆದು ಹೇಳುವ ಪದ್ಧತಿ. ಮುಂದಿನ ಒಂದು ದಿನದ ವಿವರವನ್ನು ಸಾರಲೆಂದು ಹಾಸ್ಯಗಾರರು ರಂಗಸ್ಥಳವನ್ನು ಸೇರುವಾಗಲೇ ಅವರ ಕೈಗೆ ಆರು ಕಡೆಗಳ ಆಟ ನಿರ್ಣಯವಾದ ಚೀಟಿ ಸೇರಿತು. ಅವುಗಳನ್ನೂ ಹೇಳತೊಡಗಿದಾಗ ಇನ್ನೂ ಕೆಲವು ಸ್ಥಳಗಳೂ ತಾರೀಕುಗಳೂ ಸೂಚಿಸಲ್ಪಟ್ಟವು. ಬೇಡಿಕೆ ಹೆಚ್ಚುವ ಸೂಚನೆ ಕಂಡು ಬಂದಾಗ, ಮುಂದಿನ ಎಲ್ಲ (ನಿಶ್ಚಯವಾದ) ಆಟಗಳ ಕುರಿತು ಸ್ಥಳ ಮತ್ತು ತಾರೀಕುಗಳ ಒಂದು ಯಾದಿಯನ್ನು ತಯಾರಿಸಿ ಅವರ ಕೈಗೆ ಕೊಟ್ಟಾಗ, ಒಟ್ಟು 33 ಆಟಗಳು ನಿಶ್ಚಯವಾದುದು ಗೊತ್ತಾಯಿತು.
Read more »