ವಿಷಯದ ವಿವರಗಳಿಗೆ ದಾಟಿರಿ

Archive for

24
ನವೆಂ

ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಹ್ಯಾಕ್ ಆದದ್ದಾದರೂ ಹೇಗೆ?

-ಓಂ ಶಿವಪ್ರಕಾಶ್

ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ನಲ್ಲೊಂದು ದೊಡ್ಡ ಸುದ್ದಿ. ೨ಮಿಲಿಯನ್ ಸಿಟಿಬ್ಯಾಂಕ್ ಗ್ರಾಹಕರ ಅಕೌಂಟುಗಳು, ಹೆಸರು, ಕ್ರೆಡಿಟ್ ಕಾರ್ಡುಗಳ ಸಂಖ್ಯೆ, ವಿಳಾಸ ಜೊತೆಗೆ ಇ-ಮೈಲ್ ಎಲ್ಲವೂ ಹ್ಯಾಕರ್‌ಗಳ ಕೈಗೆ ಸಿಕ್ಕಿವೆ ಎಂದು. ಇದು ಸಾಧ್ಯವಾದದ್ದಾದರೂ ಹೇಗೆ? ಇಲ್ಲಿದೆ ಒಂದು ಸಣ್ಣ ಇಣುಕು ನೋಟ.

ಸಿಟಿಬ್ಯಾಂಕ್ ಆನೈಲ್ ಖಾತೆಗೆ ಲಾಗಿನ ಆಗಿ ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಬರುವ ವಿಳಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಮ್ಮ ಅಕೌಂಟ್ ನಂಬರ್ ಅದರಲ್ಲಿ ಸುಲಭವಾಗಿ ಕಾಣಿಸುತ್ತದೆ. ಉದಾಹರಣೆಗೆ  citibank.com/user/12345 . ಇಲ್ಲಿ ಕಂಡುಬರುವ ಸಂಖ್ಯೆಯನ್ನು ಮತ್ತೊಂದು ಸಂಖ್ಯೆಗೆ  citibank.com/user/123456 ಬದಲಿಸಿದರೆ ನೀವು ಮತ್ತಾವುದೋ ಗ್ರಾಹಕನ ಖಾತೆಯನ್ನು ಹೊಕ್ಕಲು ಸಾದ್ಯ ಎಂಬ ಅಂಶವನ್ನು ಅರಿತ ತಂಡವೊಂದು ಸುಲಭವಾಗಿ ಮಿಲಿಯನ್ ಗಟ್ಟಲೆ ಗ್ರಾಹಕರ ಜೇಬನ್ನು ಹೊಕ್ಕಲು ಅಣಿಯಾಗಿವೆ.
ಮೇಲೆ ತಿಳಿದಷ್ಟು ವಿಷಯವಷ್ಟೇ ಗೊತ್ತಿದ್ದರೆ ಸಾಕು ಒಂದು ವೆಬ್‌ಸೈಟ್‌ನಿಂದ ತಮಗೆ ಬೇಕಿರುವ ಮಾಹಿತಿಗಳನ್ನು ಸುಲಭವಾಗಿ ಇಳಿಸಿಕೊಳ್ಳಲು ಸಣ್ಣ ಸ್ಕ್ರಿಪ್ಟ್ ಒಂದನ್ನು ಬರೆದು ಕೆಲಸವನ್ನು ಸರಾಗಗೊಳಿಸಿಕೊಳ್ಳಬಹುದು. ಕೆಲವು ವರ್ಷ ಇಂಟರ್ನೆಟ್ ನಲ್ಲಿ ಸುತ್ತಾಡಿರುವವನಿಗೆ ಇಂತದ್ದೊಂದು ಕೆಲಸ ನೀರು ಕುಡಿದಷ್ಟೇ ಸುಲಭ. ಮಕ್ಕಳು ಕೂಡಾ ಹ್ಯಾಕ್ ಮಾಡಬಲ್ಲಂತಹ ದೋಷವೊಂದನ್ನು, ಜಗತ್ತಿಗೇ ೨೪ ತಾಸು ಹಣಕಾಸು ವ್ಯವಸ್ಥೆ ನೀಡುವ ಬ್ಯಾಕಿಂಗ್ ಸಂಸ್ಥೆಯೊಂದು ತೆರೆದಿಟ್ಟದ್ದು ಬಹಳ ನಾಚಿಕೆಗೇಡಿನ ವಿಷಯವಾಗಿದೆ. ಜೊತೆಗೆ ಆನ್ಲೈನ್ ಬ್ಯಾಂಕಿಂಗ್ ಎಷ್ಟೇ ಸುರಕ್ಷಿತವಾಗಿದ್ದರೂ ಕೆಲವೊಂದು ಮನುಷ್ಯನ ಕಣ್ತಪ್ಪಿನಿಂದಾಗಿ ಆಗಬಹುದಾದ ಅಚಾತುರ್ಯ ಹೇಗೆ ೨೧ನೇ ಶತಮಾನದಲ್ಲಿ ವಿಶ್ವವನ್ನೇ ಅಲುಗಾಡಿಸಬಹುದೆಂಬುದನ್ನು ಈ ಘಟನೆ ತಿಳಿಸುತ್ತದೆ.
ದೊಡ್ಡ ದೊಡ್ಡ ವ್ಯಾವಹಾರಿಕ ಸಂಬಂದಗಳಿಗೆ ಇಂದು ಇಂಟರ್ನೆಟ್‌ನ ಅನೇಕ ತಾಣಗಳು ಆನ್‌ಲೈನ್ ಬ್ಯಾಂಕಿಗ್ ವ್ಯವಸ್ಥೆಯನ್ನು ಬಳಸುತ್ತವೆ. ಹೀಗೆ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸುವಾಗ ಅನೇಕ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. PCI DSS (Payment Card Industry Data Security Standard) ಎಂಬ ಇನ್ಮಾರ್ಮೇಷನ್ ಸ್ಟಾಂಡರ್ಡ್‌ಗಳಿಗೆ ಅನುಗುಣವಾಗಿ ತಮ್ಮ ತಾಣಗಳನ್ನು ಸುರಕ್ಷತೆಯ ಕವಚಕ್ಕೆ ಒಳಪಡಿಸಬೇಕಾಗುತ್ತದೆ. ಆದರೆ ಬ್ಯಾಂಕಿನ ತಾಣವೇ ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ಬ್ಯಾಂಕನ್ನು ನಂಬಿದ ಗ್ರಾಹಕನ ಸ್ಥಿತಿ ನೇಣುಗಂಬಕ್ಕೆ ತಂತಾನೇ ಕೊರಳುಕೊಟ್ಟಂತಾಗುತ್ತದೆ.
24
ನವೆಂ

ಸಂಸ್ಕೃತಿ ಸಂಕಥನ – ೧೨- ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ

– ರಮಾನಂದ ಐನಕೈ

ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ

ಕೆಲವು ವೈದ್ಯರಿರುತ್ತಾರೆ. ಔಷಧಿ ಕೊಟ್ಟಾಕ್ಷಣ ರೋಗ ವಾಸಿಯಾಗುತ್ತದೆ. ನಾವಂದುಕೊಳ್ಳುತ್ತೇವೆ ‘ಅವರು ತುಂಬಾ ಚೆನ್ನಾಗಿ ಔಷಧಿ ಕೊಡುತ್ತಾರೆ’ ಎಂದು. ಹಾಗಾದರೆ ಮಾರುಕಟ್ಟೆಯಲ್ಲಿ ಎಷ್ಟೊಂದು ವೈವಿಧ್ಯಮಯವಾದ ಔಷಧಿಗಳು ಸಿಗುತ್ತವೆ. ಎಲ್ಲ ವೈದ್ಯರು ಕೊಡಬಹುದಲ್ಲ? ಇಲ್ಲೇ ಇದೆ ಸೂಕ್ಷ್ಮ. ವೈದ್ಯರ ಯಶಸ್ಸು ಇರುವುದು ಔಷಧಿ ಕೊಡುವುದರಲ್ಲೊಂದೇ ಅಲ್ಲ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯಲ್ಲಿರುವ ರೋಗ ಪತ್ತೆಮಾಡುವುದರಲ್ಲಿರುತ್ತದೆ. ಒಮ್ಮೆ ರೋಗ ಗೊತ್ತಾದರೆ ಅದಕ್ಕೆ ಔಷಧ ಯಾವುದೆಂಬುದು ವೈದ್ಯಕೀಯ ಸಾಮಾನ್ಯಜ್ಞಾನ.

ಸದ್ಯದ ಸಮಾಜವಿಜ್ಞಾನ ಪ್ರಕಾರ ಭಾರತೀಯ ಸಮಾಜದ ಪರಿಸ್ಥಿತಿಯೂ ಇದೇ ಆಗಿದೆ. ಭಾರತೀಯ ಸಮಾಜ ವ್ಯವಸ್ಥೆ ಸರಿಯಾಗಿಲ್ಲ. ಮೌಢ್ಯ ಮತ್ತು ಅಸಮಾನತೆಯಿಂದ ಕೊಳೆಯುತ್ತ ರೋಗಗ್ರಸ್ತವಾಗಿವೆ ಎಂಬುದು ಚಿಂತಕರ ಅಭಿಮತ. ಜಾತಿವ್ಯವಸ್ಥೆ ಭಾರತೀಯಸಮಾಜಕ್ಕೆ ಅಂಟಿಕೊಂಡ ದೊಡ್ಡ ರೋಗ. ಹಾಗಾಗಿ ಈ ರೋಗ ಹೋಗಬೇಕಾದರೆ ಜಾತಿವ್ಯವಸ್ಥೆಯನ್ನು ಆಮೂಲಾಗ್ರವಾಗಿ ನಾಶಮಾಡಬೇಕು ಎಂಬ ಮಾತು ದಿನನಿತ್ಯ ಕೇಳಿಬರುತ್ತವೆ. ಭಾರತೀಯ ಸಮಾಜಕ್ಕೆ ಈ ರೀತಿಯ ರೋಗವಿದೆಯೆಂಬ ತಿಳುವಳಿಕೆ ಎಲ್ಲಿಂದ ಬಂತು? ಇದು ನಿಜವಾಗಿಯೂ ರೋಗ ಹೌದೋ ಎಂಬುದರ ಬಗ್ಗೆ ನಾವು ಚಿಂತಿಸಿಲ್ಲ. ನೂರಾರು ವರ್ಷಗಳಿಂದ ಹಲವಾರು ರೀತಿಯ ಔಷಧ ಮಾಡುತ್ತಲೇ ಬಂದಿದ್ದೇವೆ. ರೋಗ ಗುಣಾಗುವುದರ ಬದಲು ಉಲ್ಭಣಿಸುತ್ತ ಬಂದಿದೆ. ಅಂದರೆ ನಾವು ರೋಗವನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ಹಾಗಾಗಿ ನಾವು ನೀಡುವ ಔಷಧಿಗಳು ವ್ಯರ್ಥವಾಗುತ್ತಿವೆ. ರೋಗ ಇಲ್ಲದೆಯೇ ಔಷಧ ಕೊಡುವುದು ಅಥವಾ ಸರಿಯಾದ ರೋಗಕ್ಕೆ ಸರಿಯಾದ ಔಷಧ ಕೊಡದೇ ಇರುವುದು ಯಾವತ್ತೂ ಅಪಾಯ. ಅದು ದೊಡ್ಡ ರೋಗಕ್ಕೆ ನಾಂದಿಯಾಗುತ್ತದೆ.

ಮತ್ತಷ್ಟು ಓದು »