ಇದಾವ ಪರಿಯ ‘ಜನಚೇತನ ???
-ಅರೆಹೊಳೆ ಸದಾಶಿವರಾವ್
ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಇಡೀ ಮಂಗಳೂರೇ ಸ್ತಬ್ಧ!!. ಬಜಪೆಂದ ಮಂಗಳೂರಿನ ನೆಹರೂ ಮೈದಾನದ ತನಕ ರಸ್ತೆಯ ಇಕ್ಕೆಲಗಳಿಗೂ ಆದಿನ ಒಂದು ರೀತಿಯ ವಿಶ್ರಾಂತಿ. ಎಲ್ಲೆಲ್ಲೂ ಪಾರ್ಕಿಂಗ್ ಇಲ್ಲ, ರಸ್ತೆಯ ಇಕ್ಕೆಲಗಳಲ್ಲೂ ಪೋಲೀಸರೇ ಪೋಲಿಸರು!
ಅಡ್ವಾಣಿ ಬರುತ್ತರೆಂದಾಗಲೇ ಪೋಲಿಸರಿಗೆ
ಶುರುವಾಗಿತ್ತು ಒಂದು ರೀತಿಯ ಚಳಿ-ಮಳೆ!
ಹಾಗಾಗಿ ಎದುರು ಸಿಕ್ಕವರಿಗೆಲ್ಲಾ ಸಿಕ್ಕಿದ್ದು ಕೇವಲ
ಪೋಲಿಸ್ ಭಾಷೆಯ ಬೈಗುಳದ ಸುರಿಮಳೆ!!
ಇದು ವಿಐಪಿಗಳು ಯಾವುದೇ ಊರಿಗೂ ಬಂದರೂ ಇರುವ ಸಾಮಾನ್ಯ ತೊಂದರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಇದರ ಬಗ್ಗೆ ಹೇಳುವುದು ಕೇಳುವುದು ಏನೂ ಬೇಕಿಲ್ಲ ಬಿಡಿ. ಆದರೆ ಇಲ್ಲಿ ಭಾರತೀಯ ಜನತಾ ಪಕ್ಷದ ಈ ನೇತಾರನ ಈ ಪರಿಯ ಜನ ಚೇತನ ಯಾತ್ರೆಯ ಬಗ್ಗೆ ಬರೆಯದಿದ್ದರೆ ಅದೇನೋ ಒಂದು ರೀತಿಯ ಕಿರಿ ಕಿರಿ ಕೊರೆಯುತ್ತಲೇ ಇರುತ್ತದೆ.
ಇಂದು ಕರ್ನಾಟಕದ ಪರಿಸ್ಥಿತಿ ನೋಡಿ. ಏನೋ ಮಾಡಲು ಹೋದ ಭಾಜಪ ಎಂಬ ಆಡಳಿತಾರೂಢ ಪಕ್ಷ, ಕಂಡ ಕಂಡಲ್ಲಿ ಗಳಿಸಿಕೊಂಡದ್ದು ಭ್ರಷ್ಟಾಚಾರದ ಹಣೆ ಪಟ್ಟಿ. ಸಂಪುಟದ ಹೆಚ್ಚಿನ ಸಚಿವರ ಮೇಲೆ ಒಂದಲ್ಲ ಒಂದು ರೀತಿಯ ಆಪಾದನೆ ಬಂದಾಗ, ದೆಹಲಿಯ ನಾಯಕರು ತೇಪೆ ಹಚ್ಚುವ ನೆಪದಲ್ಲಿ ಯಡ್ಯೂರಪ್ಪನವರಿಗೆ ಮತ್ತೆ ಮತ್ತೆ ಅಧಿಕಾರದಲ್ಲಿ ಮುಂದುವರಿಯುವ ಅವಕಾಶವನ್ನು ಕೊಟ್ಟರೇ ಹೊರತು, ಆಗಿದ್ದೇನು ಎಂದು ನೋಡುವ ಪ್ರಾಥಮಿಕ ಜ್ಞಾನವನ್ನೂ ತೋರಲಿಲ್ಲ. ಒಂದೆಡೆ ರೆಡ್ಡಿ ಬಣ, ಮತ್ತೊಂದೆಡೆ ಯಡ್ಡಿಬಣ, ಇದೆರಡಲ್ಲದೇ ಬೇರೆ ಬೇರೆ ಇನ್ನಿತರ ಬಣಗಳು, ಹೊರ ಪ್ರಪಂಚದಲ್ಲಿ ಕೈ ಕೈ ಹಿಡಿದು, ಕಮಲವನ್ನು ಒಡೆದು ‘ದಳ ದಳ’ವನ್ನೂ ಬೇರೆ ಮಾಡಿದ್ದಂತೂ ಸತ್ಯ. ಎಷ್ಟೇ ಸಲ ಇದರ ಬಗ್ಗೆ ವರಿಷ್ಠರಿಗೆ ದೂರು ಹೋದರೂ, ವರಿಷ್ಠರದ್ದು ಅಲ್ಲಿ ಜಾಣ ಕುರುಡು.
ಭಾಜಪದಲ್ಲಿ ಎಲ್ಲವೂ ಸರಿ ಇಲ್ಲ ಅಂದುಕೊಂಡವರೇ
ಎಲ್ಲರೂ; ಅಲ್ಲಿ ಏನೂ ಸರಿ ಇಲ್ಲ ಎಂದುಕೊಳ್ಳಲಾರದೇ
ಹೋದವರೇ ವರಿಷ್ಠರು; ಅದಕ್ಕೇ ಯಡ್ಯೂರಪ್ಪನವರು
ಮಾಡುತ್ತಾ ಹೋದರು ತಪ್ಪು ಒಂದಲ್ಲ ನೂರು!!
ಯಡ್ಯೂರಪ್ಪನವರ ನೂರನೆಯ ತಪ್ಪು ತುಂಬಿದಾಗಲೇ ವರಿಷ್ಠರಿಗೆ ಜ್ಞಾನೋದಯವಾಗಿದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು, ಕೆಳಗಿಳಿಸುವಾಗಲು ಯಡ್ಡಿ ತಮ್ಮ ಪಾರಮ್ಯ ಮೆರೆದು ನಮ್ಮ ಸುಳ್ಯದ ಗೌಡರಿಗೆ ಅದು ವರದಾನವಾಗಿದ್ದು, ಲೋಕಾಯುಕ್ತ ಕೋರ್ಟ್ ಜಾಮೀನು ನಿರಾಕರಿಸಿ ಯಡ್ಡಿ ಜೈಲು ಸೇರಿದ್ದು, ಅದೇ ಹಂತದಲ್ಲಿ ಭಾಜಪದ ವರಿಷ್ಠರಲ್ಲಿ ವರಿಷ್ಠ ಅಡ್ವಾಣಿಜೀಯವರಿಗೆ ದೇಶದ ಭ್ರಷ್ಠಾಚಾರದ ಬಗ್ಗೆ ಜ್ಞಾನೋದಯವಾಗಿದ್ದು…..ಎಲ್ಲಾ ಹಳೆಯ ಸುದ್ದಿ. ಆದರೆ ಹಾಗೆ ಜ್ಞಾನೋದಯವಾದಾಗ, ನಮ್ಮ ದಕ್ಷಿಣ ಭಾರತದ ಏಕೈಕ ಭಾಜಪ ಶಕ್ತಿ ಕೇಂದ್ರದಲ್ಲೇ ಎಲ್ಲಾ ಎಡವಟ್ಟಾಗಿದ್ದು, ಅಡ್ವಾಣಿಯವರಿಗೆ ಮುಜುಗುರ ತರಿಸದೇ ಇದ್ದದ್ದು ಮಾತ್ರ……ಸಾಮಾನ್ಯ ಭಾರತೀಯನಿಗೂ ಅರ್ಥವಾಗದ್ದು.
ಅಡ್ವಾಣಿಯವರೇನೋ ತಮ್ಮ ಮಾತಿನ ಚಾತುರ್ಯದಿಂದ ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟ ಪ್ರತೀ ಭ್ರಷ್ಟರಿಗೂ ಸಂಬಂಧಿಸಿದ್ದು ಮತ್ತು ಅದು ‘ಪಕ್ಷಾತೀತ’ವಾದದ್ದು ಎಂಬ ಹೇಳಿಕೆ ಕೊಟ್ಟು, ಯಡ್ಯೂರಪ್ಪ ಬಳಗಕ್ಕೆ ಮುಖ ಮೂತಿ ಹೊಡೆದಂತೆ ‘ಭಾವಿಸಿ’ ಹೋಗಿದ್ದಾರೆ. ಆದರೆ ಇಲ್ಲಿ ಹತ್ತು ಹಲವು ಪ್ರಶ್ನೆಗಳು ಉಳಿದೇ ಬಿಟ್ಟವಲ್ಲ…ಅದು ಈಗ ಯಕ್ಷ ಪ್ರಶ್ನೆ.
ಮೊದಲ ಪ್ರಶ್ನೆ ಎಂದರೆ, ಕರ್ನಾಟಕದ ತಮ್ಮ ಪಕ್ಷದ ಆಡಳಿತ ಯಂತ್ರ, ಸಂಪೂರ್ಣ ಭ್ರಷ್ಟ ಮಯವಾಗಿದೆ ಎಂಬ ದೂರಿನೊಂದಿಗೆ, ತಮ್ಮದೇ ಪಕ್ಷದ ಕಾರ್ಯಕರ್ತರು ತಮ್ಮ ಬಳಿ ಬಂದಾಗಲೂ ಅಡ್ವಾಣಿ ನೇತ್ರತ್ವದ ವರಿಷ್ಠ ಮಂಡಳಿ ಕಣ್ಣು ಮುಚ್ಚಿ ಯಡ್ಯೂರಪ್ಪ ಬಣಕ್ಕೆ ಹೆದರಿದ್ದು. ದೆಹಲಿಯಲ್ಲೇ ಕುಳಿತು ಮೊದಲ ಬಾರಿಗೇ ಅದು ಯಡ್ಡಿ ಅಥವಾ ರೆಡ್ಡಿ ಬಣಗಳನ್ನು ಕಾಲ ಕಸದಂತೆ ಬದಿಗೆ ತಳ್ಳಿ, ಸರಕಾರ ಬಿದ್ದರೂ ಪರವಾಗಿಲ್ಲ, ಭ್ರಷ್ಟರು ತಮಗೆ ಬೇಡ ಎಂದು ಜನತೆಗೆ ತೋರಿಸಿಕೊಟ್ಟಿದ್ದರೆ, ಈ ಸಲದ ಅಡ್ವಾಣಿಯವರ ಜನ ಚೇತನ ಯಾತ್ರೆಯ ಕರ್ನಾಟಕ ಯಾತ್ರೆಗೆ ವಿಶೇಷ ಅರ್ಥ, ಬೆಂಬಲ ಮತ್ತು ನೈತಿಕತೆ ಬರುತ್ತಿತ್ತು!. ಆದರೆ ಆಗ ದೆಹಲಿಯ ಭಾಜಪ ವರಿಷ್ಠ ಮಂಡಳಿ ತೋರಿದ್ದು ದಿವ್ಯ ನಿರ್ಲಕ್ಷ್ಯ ಮತ್ತು ಜಾಣ ಮೌನ.
ವರಿಷ್ಠರ ಮೌನ ಯಡ್ಡಿ-ರೆಡ್ಡಿಗೆ ಆಯ್ತು ವರ
ಹಾಗಾಗಿಯೇ ಈಗವರೇ ಭಾಜಪಕ್ಕೆ ಭಾರ!
ಈಗ ಜನಚೇತನದಲ್ಲಿ ಇರದೇ ಹೋಯ್ತು ಒಗ್ಗಟ್ಟು
ಕರ್ನಾಟಕ ಮಟ್ಟಿಗಂತೂ ಅದು ಮತ್ತೊಂದು ಬಿಕ್ಕಟ್ಟು!
ಹೀಗೆ ಕಾಂಗ್ರೆಸ್ ಈ ಜನಚೇತನದ ವಿರುದ್ದ ಏನೇ ಮಾತಾಡಿದರೂ ಭಾಜಪ ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ಅಡ್ವಾಣಿಯವರು ಬೆಂಗಳೂರಿಗೆ, ಮತ್ತೆ ಮಂಗಳೂರಿಗೆ ಬಂದರು. ಆದರೆ ಯಡ್ಯೂರಪ್ಪ ಬಳಗ ಇಲ್ಲೂ ತಮ್ಮ ‘ತಾಕತ್ತು’ ತೋರಿಸಿದ್ದು ಈಗ ಭಾಜಪಕ್ಕೆ ಮತ್ತೊಂದು ತಲೆನೋವು. ಈಗ ಎಲ್ಲಿ ತಪ್ಪಿದ್ದೇವೆ ಎಂದು ಅಡ್ವಾಣಿಯವರು ರಾಜ್ಯದ ನಾಯಕರಿಗೆ ಕೇಳಿದರಂತೆ;ನಾಯಕರು ತಬ್ಬಿಬ್ಬಂತೆ!!. ಇದಕ್ಕೆಲ್ಲಾ ಒಂದೇ ಉತ್ತರ,
ಅಡ್ವಾಣೀಜೀ, ತಪ್ಪಿದ್ದು ನಾವಲ್ಲ, ನೀವು
ಅಂದು ತಪ್ಪಿದ ಎಚ್ಚರಕ್ಕೆ ಇಂದು
ಬೆಲೆ ತೆರುತ್ತಿರುವುದು ನಾವು ಮಾತ್ರವಲ್ಲ, ನೀವೂ!!
ಹೀಗೆಂದು ರಾಜ್ಯದ ನಾಯಕರು ಹೇಳುತ್ತಿದ್ದಾರಂತೆ. ಬಹುಶ: ಅಡ್ವಾಣಿಯವರು ಈ ಯಾತ್ರೆ ಹೊರಡುವ ಮೊದಲು, ರೆಡ್ಡಿ-ಯೆಡ್ಡಿಗಳೆಲ್ಲರೂ ಜೈಲು ಯಾತ್ರೆ ಕೈಗೊಂಡಾಗ, ಅದನ್ನು ದೆಹಲಿಯಲ್ಲೇ ಕುಳಿತು ರಿಪೇರಿ ಮಾಡಿಯೇ ಹೊರಡಬಹುದಿತ್ತು. ಎಲ್ಲರೂ ಆರೋಪಿಗಳು ಎಂದಾಕ್ಷಣ, ಅಪರಾಧಿಗಳು ಎಂದಲ್ಲ ಎಂಬ ಮಾತನ್ನು ನಾವೂ ಒಪ್ಪಲೇ ಬೇಕು ಬಿಡಿ. ಆದರೆ ತಾವು ನಿರಪರಾಧಿಗಳು ಎಂದು ಸಾಬೀತಾದ ನಂತರವೇ ನೀವು ಪಕ್ಷದಲ್ಲಿ ಮುಂದುವರಿಯಬಹುದ ಎಂದು ಅಡ್ವಾಣಿಯವರು ಅಥವಾ ಅವರ ಪರವಾದ ಯಾವುದೇ ವರಿಷ್ಠರು, ಕರ್ನಾಟಕ ‘ಜೈಲು’ ಸಂಪುಟಕ್ಕೆ ಮುಖಕ್ಕೆ ಹೊಡೆದಂತೆ ಹೇಳಿ, ಪಕ್ಷದಿಂದ ಹೊರ ಹಾಕಿದ್ದರೆ, ಈ ಜನ ಚೇತನ ಯಾತ್ರೆಗೆ ವಿಶೇಷ ಬಲ ಬರುತ್ತಿತ್ತು!. ಆದರೆ ಹಾಗೇನಾದರೂ ಮಾಡಿದ್ದರೆ ಇಲ್ಲಿ ಭಾಜಪ ಸರಕಾರ ಕುಸಿದು ಬೀಳುವ ಅಪಾಯವೂ ಇತ್ತು. ನಿಜಕ್ಕೂ ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಬೇಕು ಎಂಬುದು ಅಡ್ವಾಣಿಯವರ ಕಳಕಳಿ ಆಗಿದ್ದರೆ, ಇಂತಹ ಆಪಾದನೆಯಲ್ಲಿ ನಲುಗಿದ ತಮ್ಮ ಸರಕಾರ ಇರುವುದಕ್ಕಿಂತಲೂ, ಅದು ಪತನ ಹೊಂದಿ, ಮತ್ತೆ ಚುನಾವಣೆಗೆ ಹೋಗಿ, ಗೆದ್ದು ಬರುವ ಧೈರ್ಯ ತೋರಬಹುದಿತ್ತು!!. ಅದನ್ನು ಭಾಜಪದ ದೆಹಲಿ ತಂಡ ಮಾಡಲಿಲ್ಲವೆಂದಾದರೆ, ಅದೂ ಯುಪಿಎ ಸರಕಾರದಿಂದ ಭಿನ್ನ ಎಂದರೆ ನಂಬುವುದಾದರೂ ಹೇಗೆ?
ಎಲ್ಲಾ ರಾಜಕಾರಣಿಗಳದ್ದೂ ಒಂದೇ ಮಂತ್ರ,
ತಾನು ಮಾಡಿದರೆ ಅದು ರಾಜಕೀಯ ತಂತ್ರ
ವಿರೋಧಿ ಮಾಡಿದರೆ ಅದುವೇ ಜನತೆಗೆ ಕುತಂತ್ರ!!
ಇದನ್ನೇ ಅಡ್ವಾಣಿಯವರೂ ಮಾಡಿದರೆ? ಇಲ್ಲವೆನ್ನಲು ಯಾವ ಕಾರಣವೂ ಕಾಣುತ್ತಿಲ್ಲ!
ಇನ್ನು ಪ್ರಧಾನಿಯ ಪದವಿಯ ಬಗ್ಗೆ. ಈ ಹಿಂದೆ ನಾವೆಲ್ಲರೂ ಗಮನಿಸಿದ್ದೇವೆ. ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ‘ಯಶ ಕಂಡಂತೆ ಭ್ರಮಿಸಿ’ ಹಿಂದೆ ಸರಿದಾಗ, ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿಯವರೂ ಒಂದು ದಿನ ನಿರಶನ ಮಾಡಿದರು. ಆಗೆಲ್ಲಾ ಅವರನ್ನು ಮುಂದಿನ ಪ್ರಧಾನಿಯ ಪದವಿಯ ಅಭ್ಯರ್ಥಿ ಎಂದು ಮಾಧ್ಯಮಗಳು ಬಿಂಬಿಸಿದುವು. ಇದು ಭಾಜಪಕ್ಕೂ ಅಚ್ಚರಿಯ ವಿಷಯವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಏಕೆಂದರೆ ಭಾಜಪಕ್ಕಿಂತಲೂ ಈ ವಿಷಯದಲ್ಲಿ ‘ಏಕಪಕ್ಷೀಯ’ವಾಗಿ ನಿರ್ಧರಿಸಿದ್ದು ನಮ್ಮ ‘ಮಾಧ್ಯಮ’ಗಳು. ಅದು ಮುಗಿಯುತ್ತಲೇ ಏಕಾ ಏಕಿ ಅಡ್ವಾಣಿಯವರಿಗೆ ದೇಶದ ಭ್ರಷ್ಟಾಚಾರದ ನೆನಪಾತು ಮತ್ತು ತಡ ಮಾಡದೇ ಹೊರಟದ್ದು ಜನ ಚೇತನ ಯಾತ್ರ. ಈ ಯಾತ್ರೆಯ ತನಕವೂ ತಾನು ಪ್ರಧಾನಿ ಪದವಿ ಆಕಾಂಕ್ಷಿ ಅಲ್ಲ ಎಂದೇ ಹೇಳುತ್ತಿದ್ದ ಅಡ್ವಾಣಿಯವರ ಹೇಳಿಕೆ, ಒಂದೆರಡು ರಾಜ್ಯ ಸುತ್ತುವುದರೊಳಗೆ ನಿಧಾನವಾಗಿ ಬದಲಾಗಿದ್ದನ್ನೂ ನೀವೂ ಗಮನಿಸಿರಬಹುದು. ಈಗ ಅಡ್ವಾಣಿಯವರು, ‘ತಾವು ಪ್ರಧಾನಿ ಪವಿಗೆ ಮುಂದಿನ ಚುನಾವಣೆಗೆ ಅಭ್ಯರ್ಥಿಯೇ’ ಎಂಬ ಪ್ರಶ್ನೆ ಕೇಳಿದರೆ, ಚುನಾವಣೆಯ ವೇಳೆಗೆ ಪಕ್ಷ ಅದನ್ನು ತೀರ್ಮಾನಿಸುತ್ತದೆ ಎಂಬ ಹಾರಿಕೆಯ ಮತ್ತು ‘ಆಶಾವಾದ’ದ ಉತ್ತರ ನೀಡುತ್ತಿದ್ದಾರೆ. ಈ ಜನ ಚೇತನ ಯಾತ್ರ ಮುಗಿಯುತ್ತಲೇ ಅವರ ತೀರ್ಮಾನ ಬದಲಾಗಿ, ಕೊನೆಯ ಹಂತದಲ್ಲಿ ತಾನೇ ಪ್ರಧಾನಿ ಪದವಿಯ ಉಮೇದುವಾರ ಎಂದರೂ ಅಚ್ಚರಿ ಪಡಬೇಕಾಗಿಲ್ಲ.
ಅಡ್ವಾಣಿಗೆ ಪ್ರಧಾನಿ ಪದ ನಮಗಿಲ್ಲ ಅಚ್ಚರಿ
ಅದಕ್ಕೊಳಗಾಗ ಬೇಕಾದ್ದು, ಮೋದಿ-ಗಡ್ಕರಿ!!
ಇನ್ನು ಕರ್ನಾಟಕದಲ್ಲಿ ಯಡ್ಡಿ ಬಣದ ಕಥೆ. ಅಡ್ವಾಣಿಯವರ ಯಾತ್ರೆಗೆ ಕಾಂಗ್ರೆಸ್ ಜೊತೆಗೆ, ಭಾಜಪವೂ ವಿರೋಧ ವ್ಯಕ್ತ ಪಡಿಸಿದ್ದು ಜೆಡಿಎಸ್ ಅಥವಾ ಬೇರಾರೋ ಅಲ್ಲ; ಭಾಜಪವೇ! ಇದು ಬಹಿರಂಗ ಸತ್ಯ. ಅದಕ್ಕೆ ಸಾಕ್ಷಿಯಾಗಿದ್ದು ಯಡ್ಡಿ ಬಣದ ಅನುಪಸ್ಥಿತಿ. ಈಗ ಯಡ್ಡಿಬಣದ ವಿರುದ್ದ ಕ್ರಮತೆಗೆದುಕೊಳ್ಳುವ ಮಾತನ್ನು ಭಾಜಪ ಆಡುತ್ತಿದೆ. ಆದರೆ ಈ ಕ್ರಮವನ್ನು ಯಡ್ಡಿ ಮೇಲೆ ಮೊದಲನೇ ಬಾರಿಗೆ ಆರೋಪ ಬಂದಾಗಲೇ ತೆಗೆದುಕೊಂಡಿದ್ದರೆ, ಇಂದು ಯೆಡ್ಡಿ, ರೆಡ್ಡಿಗಳಂತಹವರು ಸ್ವಲ್ಪವಾದರೂ ನಿರಾಳವಾಗುತ್ತಿದ್ದರು-ಆ ಮೂಲಕ ಭಾಜಪವೂ.
ಒಟ್ಟಾರೆ ದೆಹಲಿಯಲ್ಲಿದ್ದೇ ಪರಿಹರಿಸಬಹುದಾಗಿದ್ದ, ಮುಳ್ಳಿನಿಂದ ತೆಗೆಯಬಹುದಾಗಿದ್ದ ಮುಳ್ಳಿಗೆ ಕೊಡಲಿ ಹಿಡಿದು, ಇಂದು ಜನಚೇತನ ಯಾತ್ರೆಯ ಮೂಲಕ ಅಡ್ವಾಣಿ ಅವರಿಗರಿವಿದ್ದೇ ಮುಜುಗುರಕ್ಕೊಳಗಾಗಿದ್ದಾರೆ. ಅವರಿಗಿರಿವಿದ್ದ ಕಾರಣದಿಂದಲೇ ಈ ಮುಜುಗುರ ತಪ್ಪಿಸಿಕೊಳ್ಳುವ ಎಲ್ಲಾ ಯತ್ನಗಳನ್ನು ಅವರು ತಮ್ಮ ಭ್ರಷ್ಟಾಚಾರ ವಿರುದ್ಧದ ಆಂದೋಲನ ‘ಪಕ್ಷಾತೀತ’ ವಾದದ್ದು ಎಂದು ಹೇಳಿ ತಮ್ಮ ಮೇಲೆ ನೇರವಾಗಿ ಎರಗುವ ಕೊಳಚೆಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅದೇ ವೇದಿಕೆಯ ಮೇಲಿನಿಂದಲೇ, ಈ ಎಲ್ಲಾ ಆರೋಪಿಗಳೂ ತಮ್ಮ ಮೇಲಿನ ಆರೋಪದಿಂದ ಮುಕ್ತವಾಗಿ ಬರುವ ತನಕ, ಪಕ್ಷದಿಂದ ಹೊರಗಿರಲಿ ಎಂದೇನಾದರೂ ಒಂದು ಠರಾವು ಮಾಡಿದ್ದರೆ, ಅಡ್ವಾಣಿ ದೊಡ್ಡವರಾಗುತ್ತಿದ್ದರು-ಆ ಮೂಲಕವೂ ಭಾಜಪವೂ!!.
ಕರ್ನಾಟಕದ ಯಾತ್ರೆಯ ನಂತರ
ಎಲ್ಲರ ಬಾಯಲ್ಲೂ ಒಂದೇ ಮಾತು!
ತುರ್ತು ಪರಿಸ್ಥಿತಿಯಲ್ಲಿ ಅಡ್ವಾಣಿ ಇದ್ದದ್ದು
ಜೈಲಿನಲ್ಲಿ ತಿಂಗಳು ಹತ್ತೊಂಭತ್ತು!
ದಾಖಲೆ ಮುರಿದಾರು ನಮ್ಮ ಕರ್ನಾಟಕದ
ಭಾಜಪದ ನಾಯಕ ಮಣಿಗಳು!!
ಕೊನೆಗೂ ಉಳಿದ ಒಂದೇ ಪ್ರಶ್ನೆ. ಅಡ್ವಾಣಿಯವರ ಮೇಲೆ ನಮಗಿನ್ನೂ ಬಹಳವಾದ ಗೌರವ ದೇವರಾಣೆಗೂ ಇದೆ. ಆದರೆ ದೇವರೇ ದಾರಿ ತಪ್ಪಿದರೆ ನಮ್ಮಂತ ಜನರನ್ನು ರಕ್ಷಿಸಬೇಕಾದರೂ ಯಾರು..?? ಅಷ್ಟಕ್ಕೂ ಈ ಸಂದಿಗ್ಧದಲ್ಲಿ ಅಡ್ವಾಣಿಯವರ ಕರ್ನಾಟಕದಲ್ಲಿ ಹಾದು ಹೋದ ಈ ಜನ ಚೇತನ ಯಾತ್ರೆಗೆ ಏನಾದರೂ ಪುರುಷಾರ್ಥ ಇದೆ ಅನಿಸುತ್ತದೆಯೇ!!??
* * * * * * *
ಚಿತ್ರಕೃಪೆ : ಅಂತರ್ಜಾಲ




