ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 21, 2011

ಶ್ರೀರಾಮುಲು ಪುರಾಣದೊಳ್ ಭಾಜಪದ ಅವಸ್ಥೆ….!!

‍ನಿಲುಮೆ ಮೂಲಕ

-ಅರೆಹೊಳೆ ಸದಾಶಿವರಾವ್

ಇಡೀ ಕರ್ನಾಟಕದ ರಾಜಕೀಯ ನಕ್ಷೆಯ ಮೇಲೆ ತನ್ನ ಪ್ರಭಾವ ಬೀರಿ, ಒಂದು ಹಂತದಲ್ಲಿ ಪಕ್ಷದ ಹೈಕಮಾಂಡ್‌ನ್ನೂ ತನ್ನ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಬಳ್ಳಾರಿಯ ಕಥೆ ನೋಡಿ. ಇಂದು ತಮ್ಮಿಂದ ಉಪಕಾರ ಪಡೆದ ಎಲ್ಲರಿಗೂ ತಲೆನೋವಾಗಿ, ಉಪಚುನಾವಣೆಗೆ ಕಾರಣವಾಗಿ, ’ಬಹಿರಂಗ’ವಾಗಿ, ಅ ಕಾರಣವಾಗಿ ಭಾಜಪದಿಂದ ಡೈವೋರ್ಸ್ ಪಡೆದು, ಶ್ರೀರಾಮುಲು ನಡೆಸಿರುವ ಕಾರುಬಾರು, ಎಲ್ಲರ ಹುಬ್ಬೇರಿಸಿದೆ.
ಅಲ್ಲಿ, ಚಂಚಲಗೂಡಿನಲ್ಲಿ ಗಣಿಯ ಹಿರಿಧಣಿ,
ಪರಪ್ಪನ ಅಗ್ರಹಾರದಲ್ಲಿ ಭಾಜಪದ ಕಣ್ಮಣಿ!
ಈ ನಡುವೆ ಶ್ರೀರಾಮುಲುದ್ದೇ ಬೇರೆ ಹಣಾಹಣಿ.
ಈಗ ಬಳ್ಳಾರಿಗೆ ಮತ್ತೆ ಚುನಾವಣೆಯ ಸಗಣಿ!!!

ಈ ಸಗಣಿ ಎಂದ ಬಗ್ಗೆ ನಿಮಗೆ ಆಶ್ಚರ್ಯವಿರಬಹುದು. ಆದರೆ ಇದು ಶ್ರೀರಾಮುಲು ತಮ್ಮ ಮುಖಕ್ಕೆ ಮೆತ್ತಿದ ಸಗಣಿಯನ್ನು ಯಾರದ್ದೋ  ಮುಖಕ್ಕೆ ಹಚ್ಚಿ, ಏನೋ ಮಾಡಲು ಹೊರಟಿದ್ದಾರೆ. ಇನ್ನುಳಿದ ಕೇವಲ ಅಲ್ಪ ಸಮಯಕ್ಕೆ ಅಲ್ಲಿ ಚುನಾವಣೆಯ ಕಾವೇರುವಂತೆ ಮಾಡಿದ ಶ್ರೀರಾಮುಲು ಒಂದು ರೀತಿಯಲ್ಲಿ ತನ್ನ ಆಪ್ತ ಜನಾರ್ದನ ರೆಡ್ಡಿಯೊಂದಿಗೆ ಸೇರಿಕೊಂಡು, ರಾಜ್ಯಕ್ಕೆ ಸಾಲು ಸಾಲಾಗಿ ಉಪಚುನಾವಣೆಗಳನ್ನೇ  ತಂದವರು ಎಂಬುದು ಗಮನಾರ್ಹ!. ಇನ್ನೇನು ಸರಕಾರ ರಚನೆಗೆ ಅಣಿಯಾಗಬೇಕು ಎಂದು ಭಾಜಪ ಶಾಲು ಕೊಡವಿಕೊಳ್ಳುವಷ್ಟರಲ್ಲಿ ಎದುರಾದದ್ದು ಬಹುಮತದ ಕೊರತೆ. ಆಗ ಪಕ್ಷೇತರರಿಗೆ ಲಾಟರಿ ಹೊಡೆಸಿ, ಅವರನ್ನು ಹೆಲಿಕಾಪ್ಟರ್‌ನಲ್ಲಿಯೇ ತಂದು, ಖರೀದಿಸಿ ಸರಕಾರ ರಚಿಸಿದ ನಂತರ, ’ಆಪರೇಷನ್ ಕಮಲ’ದ ಆಮಿಷದ ಹಬ್ಬ. ಈ ಮೂಲಕ ಮತ್ತೆ ಮತ್ತೆ ಉಪಚುನಾವಣೆಗಳನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಜನತೆಯ ಮೇಲೆ ಹೇರಿದ್ದು, ಇದೇ ರೆಡ್ಡಿ ಮತ್ತು ಕಂಪೆನಿ.

ಈ ರೆಡ್ಡಿ ಕಂಪೆನಿ ರಾಜ್ಯಕ್ಕೆ ಏನು
ಮಾಡಿತೋ ಕಾಣೆ! ಆದರೆ, ಸಾಲಾಗಿ
ಉಪಚುನಾವಣೆ, ಇವರದ್ದೇ  ಕೃಪೆ!

ಅದೇನೇ ಇರಲಿ. ರೆಡ್ಡಿಯವರು ಚಂಚಲಗೂಡು ಜೈಲು ಸೇರಿದಾಗ, ಇದೇ ಶ್ರೀರಾಮುಲು ತನ್ನ ರಾಜೀನಾಮೆ ಎಂಬ ಹೊಸ ಪ್ರಹಸನ ಮುಂದಿಟ್ಟದ್ದು, ಯಡ್ಡಿಯವರೂ ಪದತ್ಯಾಗ ಮಾಡಿ ಪರಪ್ಪರನ ಅಗ್ರಹಾರ ಸೇರಿದ್ದು, ಮುಂದೆ ಯೆಡ್ಡಿಯವರು ಬಿಡುಗಡೆ ಭಾಗ್ಯ ಹೊಂದಿ ಹೊರಬರುವಷ್ಟರಲ್ಲಿ ಅವರ ವಿರೋಧಿಗಳಾಗಿದ್ದ ಕುಮಾರಸ್ವಾಮಿಯಂತವರೇ ಮೃಧುವಾದದ್ದು, ಸದಾನಂದರು ಆನಂದವಾಗಿರದಂತೆ ನೋಡಿಕೊಳ್ಳುವಲ್ಲಿ ಎಲ್ಲವೂ ಕಾರಣವಾಯಿತು. ಅದಕ್ಕೆ ಸರಿಯಾಗಿ ಉಪಚುನಾಣೆಗೆ ಬಳ್ಳಾರಿ ಅಣಿಯಾಯ್ತು ಮತ್ತು ಶ್ರೀರಾಮುಲು ಮನೆಯ ಮುಂದಿನ ಭಾಜಪದ ಬ್ಯಾನರ್ ಕೆಳಗಿಳಿಯಿತು. ಇದಿಷ್ಟು ಕಣ್ಣಿಗೆ ಕಾಣುವ ಘಟನೆಗಳ ಸಾರಾಂಶವಾದರೆ, ಕಣ್ಣಿಗೆ ಕಾಣದ್ದು ಅನೇಕ.

ಯಡ್ಡಿ ಜೈಲಿಗೆ ಹೋದರೆ ಕುಮಾರಣ್ಣಗೆ
ಅನುಕಂಪ-ಅವರು ಹೊರಬರುತ್ತಲೇ
ರೆಡ್ಡಿಗೆ ಯೆಡ್ಡಿ ಮೇಲೆ ಪ್ರೀತಿ!. ಜೈಲು
ವಾಸವೆಂದರೆ ಹೆಚ್ಚುತ್ತದಾ ಸಾಮರಸ್ಯ..?

ಗೊತ್ತಿಲ್ಲ. ಹಿಂದೆ ಸ್ವಾತಂತ್ರ್ಯ ಸಂಗ್ರಾಮದ ವೇಳೆಗೆ ಜೈಲಿನಲ್ಲೇ ಹಲವು ಯೋಜನೆ, ಯೋಚನೆಗಳು ಜಾರಿಗೊಳ್ಳುತ್ತಿದ್ದುವು. ಮುಂದೆ ಅವುಗಳು ಜೈಲಿನಿಂದ ಹೊರಬಂದು ಕಾರ್ಯರೂಪಕ್ಕೆ ಬರುತ್ತಿದ್ದುವು ಎಂದು ನಾವೂ ಓದಿದ್ದೇವೆ. ಆದರೆ ಈ ಜೈಲುವಾಸದ ನಂತರ, ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಹಾಗೂ ಬಳಗ ಮತ್ತು ಯಡ್ಯೂರಪ್ಪ ಒಂದಾಗುವ ಲಕ್ಷಣ ಕಾಣುತ್ತದೆ. ಆ ಮೂಲಕ ರಾಜಕೀಯದಲ್ಲಿ ಎಲ್ಲವೂ ಮತ್ತು ತತ್ವಾದರ್ಶಗಳನ್ನು ಗಾಳಿಗೆ ತೂರುವ ಎಲ್ಲವೂ ಸಾಧ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!!

ಈಗ ನಾವು ಭಿನ್ನವಾದ ವಿಶ್ಲೇಷಣೆಯನ್ನು ಮಾಡ ಬೇಕಾಗುತ್ತದೆ. ಮೊದಲಾಗಿ ಈ ಶ್ರೀರಾಮುಲು, ನಮ್ಮ ವಿಧಾನಸಭಗೆ ಅದೆಷ್ಟು ಅಗತ್ಯವೆಂದು. ಶ್ರೀರಾಮುಲುವನ್ನು ನಾವು ೧೦೮ ಅಂಬುಲೆನ್ಸ್‌ನಲ್ಲಿ ನೋಡದಾಗಲೆಲ್ಲಾ ಇವರ ಆರೋಗ್ಯ ಕ್ಷೇತ್ರಕ್ಕೆ ಅಓಬುಲೆನ್ಸ್‌ನ ಕೊಡುಗೆಯ ಬಗ್ಗೆ ಮೆಚ್ಚಿಕೊಂಡಿದ್ದೆವು. ಇದೇ ಶ್ರೀರಾಮುಲು, ಜನಾರ್ದನ ರೆಡ್ಡಿ ಜೈಲು ಸೇರುವ ತನಕ, ಪಕ್ಷದ ಕಾರ್ಯಕರ್ತನೋ, ರಾಜ್ಯ ಸರಕಾರದ ಸಚಿವನೋ ಆಗಿದ್ದಕ್ಕಿಂತಲೂ ಹೆಚ್ಚಾಗಿ ಜನಾರ್ದನ ರೆಡ್ಡಿಯವರ ’ಹಿಂಬಾಲಕ’ನಾಗಿದ್ದನ್ನೂ ಗಮನಿಸಿದ್ದೇವೆ. ಯಡ್ಡಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಕೆಲಸಮಾಡದ ಹಾಗೆ ನೋಡಿಕೊಂಡು, ಅವರನ್ನು ಹೇಗೆ ಬೇಕೋ ಹಾಗೆ ಆಡಿಸುವಾಗ ಈ ಶ್ರೀರಾಮುಲು, ’ಬಹುಮತ ಸಂಖ್ಯಾಶಾದಸ್ತ್ರ’ದ ಒಂದು ಭಾಗವಾಗಿದ್ದನ್ನೂ ಗಮನಿಸಿದ್ದೇವೆಯೇ ಹೊರತಾಗಿ ಮತ್ತೇನೂ ಅಲ್ಲವಾಗಿತ್ತು. ಮತ್ತೇನಾದರೂ ಅವರು ಆಗಿದ್ದರೆ, ಜನಾರ್ದನ ರೆಡ್ಡಿಯವರ ಒಂದು ಅಸ್ತ್ರ ಮತ್ತು ಭಾಜಪ ಸರಕಾರದ ಸ್ವಯಂಕೃತ ಅಪರಾಧವಾಗಿತ್ತು!!.

ಎಲ್ಲಿ ಸರಕಾರದ ಹಣೆ ಬರಹ ತಿರುಗಲು ಶುರುವಾಯ್ತೋ ಆಗ ಎಲ್ಲರಂತೇ ರೆಡ್ಡಿ ಬಳಗಕ್ಕೂ ತಲೆನೋವು ಆರಂಭವಾಯ್ತು. ನೋಡನೋಡುತ್ತಲೇ ರೆಡ್ಡಿ ಜೈಲು ಸೇರಿದ್ದು, ಯೆಡ್ಡಿಯವರೂ ಇಲ್ಲಿಯೂ ಕಂಪೆನಿಕೊಟ್ಟದ್ದು, ಸದಾನಂದರಿಗೆ ಆನಂದವಾದದ್ದು ಎಲ್ಲವೂ ಕಣ್ಣೆದುರಿಗೇ ಇದೆ. ಶ್ರೀರಾಮುಲು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಎಸೆದು, ಚುನಾವಣೆಯ ವೇಳೆಯ ತಕ ಸುಮ್ಮನಿದ್ದು, ಮತ್ತೆ ರೆಡ್ಡಿಯವರ ಸಲಹೆಯಂತೆ ಪಕ್ಷೇತರನಾಗಿದ್ದು……ಎಲ್ಲವೂ ನಾಟಕದಂತೆ ನಡೆಯುತ್ತಿದೆ.

ಇಲ್ಲಿ ಎರಡು ಬದಲಾವಣೆಗಳು ಪ್ರಾಮುಖ್ಯತೆ ಪಡೆಯುತ್ತವೆ. ಮೊದಲನೆಯದು ಯಡ್ಯೂರಪ್ಪ ಜೈಲು ಸೇರುತ್ತಲೇ ಭಾಜಪ ಸರಕಾರಕ್ಕೆ ವಿರೋಧ ಪಕ್ಷವಾಗಿ ಬೆಳೆದದ್ದು! ಮತ್ತೊಂದು ಜನಾರ್ದನ ರೆಡ್ಡಿ ಮತ್ತು ಕುಮಾರಸ್ವಾಮಿಯವರು ಈ ಯಡ್ಯೂರಪ್ಪನವರ ವಿಷಯದಲ್ಲಿ ಅಚ್ಚರಿಯೆಂಬಷ್ಟು ಮೃಧುವಾದದ್ದು!!. ಈ ಎರಡೂ ಬೆಳವಣಿಗೆಗಳು ಭಾಜಪಕ್ಕೆ ತಲೆನೋವಾಗಿದ್ದು ಸುಳ್ಳಲ್ಲ.  ಅದರಲ್ಲೂ.

ರೆಡ್ಡಿಯಿಂದ ಯೆಡ್ಡಿಗೆ ಜೈಲಿನಿಂದಲೇ
ಪ್ರೇಮ ಪತ್ರ! ಶ್ರೀರಾಮುಲುಗಿರಲಿ
ಶ್ರೀರಕ್ಷೆ ಎಂಬುದೇ ಮೊದಲ ಒಕ್ಕಣೆ
ಬಂದು ತೀರಿಸುವೆ ಋಣ ಎಂಬುದೂ
ಯೆಡ್ಡಿಗೆ ಸಕ್ಕರೆಯಷ್ಟೇ ಸವಿ-ಒಗ್ಗರಣೆ!!

ಇಲ್ಲಿ ರೆಡ್ಡಿ ತಮ್ಮ ತಪ್ಪಿಗೆ ಕ್ಷಮೆ ಕೋರಿದರಂತೆ ಎಂಬುದರಿಂದ ಹಿಡಿದು, ಚುನಾವಣೆಯ ಪ್ರಚಾರಕ್ಕೆ ಯಾರ್‍ಯಾರು ಹೋಗುತ್ತಾರೆ ಎಂಬುದೇ ದೊಡ್ಡ ಪ್ರಚಾರ ಪಡೆದುಕೊಂಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ರಾಜಕೀಯ ನಾಯಕರು, ಅದೆಷ್ಟು ಕೆಳದರ್ಜೆಯ ರಾಜಕಾರಣ ಮಾಡುತ್ತಾರೆ ಎಂಬದು ಜಗಜ್ಜಾಹೀರಾಗಿದೆ.

ಇರಲಿ. ಇವೆಲ್ಲವೂ ಬೆಳವಣಿಗೆಗಳಾದರೆ ಈ ಶ್ರೀರಾಮುಲು ಮತ್ತೆ ಶಾಸಕನಾಗಬೇಕೇ ಎಂಬುದನ್ನೂ ಬಳ್ಳಾರಿಗ ಯೋಚಿಸಬೇಕು!. ಇಂದು ನೀವು ಬಳ್ಳಾರಿಯಲ್ಲಿ ಹೋಗಿ ನೋಡಿದರೆ, ಇಡೀ ಜಿಲ್ಲಯನ್ನೇ ನಾಶಗೊಳಿಸಿ, ತಮ್ಮ ಬೊಕ್ಕಸ ತುಂಬಿಕೊಂಡ ಕೀರ್ತಿ ಈ ರೆಡ್ಡಿಬಳಗದ್ದು!. ಚುನಾವಣೆಯ ವೇಳೆಗೆ ಇಡೀ ಊರ ಜನರಿಗೆ ಹಗಲು ರಾತ್ರಿ ಊಟ ಹಾಕಿ, ಹಣವನ್ನು ನೀರಿನಂತೆ ಚೆಲ್ಲಿ, ಪ್ರಾಥಮಿಕವಾಗಿ ಆಗಿರುವ ಅಭಿವೃದ್ದಿ ಕಾರ್ಯಗಳನ್ನು ತಮ್ಮಿಂದಲೇ ಆಗಿದ್ದು ಎಂದು ಪ್ರಚಾರ ಗಿಟ್ಟಿಸಿ, ಐಷಾರಾಮಿ ಜೀವನ ಸಾಗಿಸಿದ್ದು ಬಿಟ್ಟರೆ ಇವರು ನಾಡಿನ ಜನತೆಗಾಗಿ ಮಾಡಿದ್ದು ಏನೂ ಇಲ್ಲ. ಭಾಜಪದ ಮಟ್ಟಿಗೆ, ಆಪರೇಷನ್ ಕಮಲ ಮತ್ತು ಶಾಸಕರ ಖರೀದಿಯನ್ನು ಮಾಡಿ, ಒಂದು ರೀತಿಯ ಋಣ ಭಾರದಲ್ಲಿ ಸಿಲುಕಿಸಿದ್ದು ಆ ಪಕ್ಷದ ತಲೆನೋವು.

ರೆಡ್ಡಿ ಜೈಲು ಸೇರುತ್ತಲೇ, ತಮ್ಮನ್ನು ಕೂದಲು ಕೊಂಕಿಸಲು ಆಗದು ಎಂಬ ಅಹಂಗೆ ಹೊಡೆತ ಬಿದ್ದಾಗ, ತಮ್ಮ ಕೆಲಸ ಸಾಧಿಸಿಕೊಳ್ಳಲು ಸರಕಾರದ ಮೇಲೆ ಒತ್ತಡ ಹೇರಿ, ಇವರ ಒತ್ತಡವನ್ನು ಸರಕಾರ ಧನಾತ್ಮವಾಗಿ ಸ್ಪಂದಿಸದೇ ಇದ್ದಾಗ ರಾಜೀನಾಮೆ ಬಿಸಾಕಿ, ಅದಕ್ಕೂ ಸರಕಾರ ಸ್ಪಂದಿಸದಿದ್ದಾಗ ಪಕ್ಷ ತೊರೆದು…….ಮೇಲ್ನೋಟಕ್ಕೇ ಕಾಣುವುದೆಲ್ಲವೂ ಬಳ್ಳಾರಿಯ ಮೇಲೆ ಪ್ರೀತಿಯ ಹೊರತಾಗಿ ಸ್ವಾರ್ಥವೇ!..

ಈ ಸರಕಾರದಿಂದ ಶ್ರೀರಾಮುಲುಗೆ
ಆಗಿದೆಯಂತೆ ಅನ್ಯಾಯ-ಅದಕ್ಕೇ
ರಾಜೀನಾಮೆ ಶಾಸಕ ಪದಕ್ಕೆ!
ಚುನಾಣೆಯ ಬಿಸಿ ಮಾತ್ರ ಪಾಪ
ಬಳ್ಳಾರಿಯ ಜನಕ್ಕೆ- ಯಾರದ್ದೋ
ಗಾಯಕ್ಕೆ ಮತ್ತಾರಿಗೋ ಬರೆಯಂತೆ!!

ಇದು ವಾಸ್ತವ. ಈ ಚುನಾವಣೆ ತಮ್ಮ ತಮ್ಮ ಸ್ವಾರ್ಥಕ್ಕಾಗಿ ಗಣಿ ಧಣಿಗಳು ರಾಜ್ಯದ ಜನತೆಯ ಮೇಲೆ ಎಳೆತಂದ ಬರೆಯೇ ಹೊರತು ಮತ್ತೇನಲ್ಲ. ಇಂತಹ ರಾಜಕಾರಣಿಗಳು ನಿಜಕ್ಕೂ ನಮಗೆ ಬೇಕಾ ಎಂಬ ಪ್ರಶ್ನೆಯೊಂದಿಗೆ ಕುಳಿತರೆ, ಎಲ್ಲರೂ ಒಂದೇ ತಕ್ಕಡಿಯಲ್ಲಿ ಸಮಾನವಾಗಿ ತೂಗುತ್ತಿರುವಾಗ ಮತ್ತೇನು ಮಾಡಲಾದೀತು ಎಂಬ ಅಚ್ಚರಿಯ ಉತ್ತರವೊಂದೇ ಖಾಯಂ ಆಗುತ್ತದೆ.

ಈ ಎಲ್ಲದರ ಹಿಂದೆ ಮತ್ತು ಮುಂದೆ ಶ್ರೀರಾಮುಲು ತನ್ನ ಅಭ್ಯರ್ಥಿತನದ ಚಿಹ್ನೆಯ ಆಯ್ಕೆಯಲ್ಲಿ ಫ್ಯಾನ್‌ನ್ನು ಆಯ್ದುಕೊಂಡು, ಆಂಧ್ರದ ಜಗನ್ಮೋಹನ್ ರೆಡ್ಡಿ ನೇತ್ರತ್ವದ ವೈಎಸ್ಸರ್‌ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಅಡಿಗಲ್ಲು ಹಾಕುತ್ತಾರೆಂಬ ಸುದ್ದಿ ಮತ್ತು ತನ್ನ ಪಕ್ಷದವರಿಂದಲೇ ತನಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಯೆಡ್ಡಿಯವರು ಹೇಳಿರುವುದು, ಎಲ್ಲವೂ ಮತ್ತೊಂದು ಸಂದೇಶಕ್ಕೆ ತಾಳೆಯಾಗುತ್ತಿವೆ. ಎಲ್ಲವೂ ರಾಜಕೀಯ ಲಾಭದ ಲಕ್ಕಾಚಾರದಂತೇ ನಡೆಯುತ್ತಿದ್ದು, ಒಂದೊಮ್ಮೆ ಶ್ರೀರಾಮುಲು ಗೆದ್ದರೆ ಭಾಜಪ ಸರಕಾರಕ್ಕೇನೂ ತಲೆನೋವಿಲ್ಲ ಎಂದು ರಾಜ್ಯ ಭಾಜಪ  ನಡುಗುವ ಧ್ವನಿಯಲ್ಲಿ ಹೇಳಿಕೊಳ್ಳುತ್ತಿದ್ದರೂ, ನಿಜಕ್ಕೂ ಈ ಚುನಾವಣೆಯ ನಂತರ ಸರಕಾರ ಉಳಿಯುವ ಬಗ್ಗೆ ಮತ್ತು ಉಳಿದರೂ ಭಾಜಪ ’ಇಡಿ’ಯಾಗಿರುವ ಬಗ್ಗೆ ಸಂಶಯ ಇದ್ದೇ ಇದೆ.

ಮೊದಲೆಲ್ಲಾ ಚುನಾವಣೆಯಲ್ಲಿ ರಾಮ
ಗೆದ್ದರೆ ಅದು ಭಾಜಪದ ಗೆಲುವು!
ಈ ಸಲ ರಾಮ ಗೆದ್ದರೆ ಅದುವೇ
ಭಾಜಪದ ಸೋಲು-ಮುಳುಗು!!

ಇದು ಇಂದಿನ ಭಾಜಪ, ಶ್ರೀರಾಮುಲು ಮತ್ತು ಯಡ್ಡಿಯವರ ಒಳಗೇ ಆಡುತ್ತಿರುವ ತಾಕಲಾಟ. ಈ ತಾಕಲಾಟದ ನೋವು ಮಾತ್ರ…..ಪಾಪ…..ಎಂದಿನಂತೆ ಮಹಾನ್ ಪ್ರಜಾಪ್ರಭುತ್ವ ಭಾರತದ ’ಪ್ರಭು’-ಪ್ರಜಾ ಪ್ರಭುಗಳದ್ದು!!!!

* * * * * * * * * *

ಚಿತ್ರಕೃಪೆ : ಅಂತರ್ಜಾಲ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments