ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 22, 2011

2

ಅತಿಯಾದ ಕಾಳಜಿಯೂ ಮುಳುವಾದೀತು ಜೋಕೆ…!

‍ನಿಲುಮೆ ಮೂಲಕ

-ವಿಷ್ಣುಪ್ರಿಯ

ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ.

ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಕೆಲವೊಂದು ಬಾರಿ ನಮ್ಮ ವಿಪರೀತ ಕಾಳಜಿಯೇ ನಮಗೆ ಮುಳುವಾಗುವಂಥ ಪ್ರಸಂಗಗಳೂ ಬರುತ್ತವೆ. ದಪ್ಪಗಾಗುತ್ತೇವೆ ಎಂಬ ಆತಂಕದಲ್ಲಿ ಆಹಾರ ಬಿಡುತ್ತೇವೆ; ಪೋಷಕಾಂಶದ ಕೊರತೆ ಎದುರಾಗುತ್ತದೆ; ನಿತ್ರಾಣ ಆವರಿಸಿಕೊಳ್ಳುತ್ತದೆ; ಮತ್ತೆ ಅದನ್ನು ಸರಿಪಡಿಸುವುದಕ್ಕೆ ಔಷಧಿ ತೆಗೆದುಕೊಳ್ಳುತ್ತೇವೆ; ಉಪ್ಪು ತಿಂದರೆ ಬಿಪಿ ಬರುತ್ತೆ ಅಂತ ಉಪ್ಪು ತೀರಾ ಕಡಿಮೆ ತಿನ್ನುತ್ತೇವೆ; ಬಿಪಿ ಕಡಿಮೆಯಾಗುತ್ತದೆ; ಮತ್ತೆ ಗಿಡ್ಡಿನೆಸ್ ಕಾಡುತ್ತದೆ; ಅದಕ್ಕೆ ಔಷಧಿ.

ಹೌದು, ಮನುಷ್ಯ ಸದಾ ಏನೋ ಮಾಡುತ್ತೇನೆಂದು ಹೊರಡುತ್ತಾನೆ. ಅದಿನ್ನೇನೋ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೋಗಗಳೇ ಪ್ರಪಂಚವನ್ನು ಆಳುತ್ತಿರುವಂಥ ಸಂದರ್ಭದಲ್ಲಿ ಮಾನವ ಯಾವುದೋ ಹೊಸ ರೋಗದ ಹೆಸರು ಕೇಳಿದರೆ ಭೀತಿಗೊಳಗಾಗುತ್ತಿದ್ದಾನೆ. ಅದರಿಂದ ರಕ್ಷಣೆ ಪಡೆಯಬೇಕು ಅಂತ ಮೊದಲೇ ಔಷಧಿ ತೆಗೆದುಕೊಳ್ಳುವ ಆತುರ ತೋರುತ್ತಾನೆ. ಇದಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ; ಆ ಉಪಕರಣಗಳ ಪ್ರಾಮಾಣಿಕತೆಯನ್ನು, ಅವುಗಳ ವಿಶ್ವಾಸಾರ್ಹತೆಯನ್ನು ಪರಿಗಣಿಸುವ, ಈ ವಿಚಾರದ ಬಗ್ಗೆ ಅರೆಕ್ಷಣವೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೊಂಡುಕೊಂಡು ಬಿಡುತ್ತೇನೆ. ತಪ್ಪು ಮಾಹಿತಿ ನಿಡಿ ರೋಗ ಇದೆ ಎಂದು ಹೇಳಿತೋ ನಮ್ಮ ಆತಂಕ ಹೆಚ್ಚುತ್ತದೆ, ಒಂದು ವೇಳೆ ಇರುವ ರೋಗವನ್ನು ಸೂಚಿಸದೇ ಇದ್ದಲ್ಲಿ, ನಮ್ಮ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತದೆ.

ಇನ್ನು ಕೆಲವೊಂದು ಬಾರಿ ಯಾವುದೇ ಸಮಸ್ಯೆಗೆಂದು ಚಿಕಿತ್ಸೆ ಪಡೆಯುತ್ತೇವೆ. ಆದರೆ ಆ ಚಿಕಿತ್ಸೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹಲವಾರು ಬಾರಿ ಔಷಧಿಗಳು ಅಡ್ಡ ಪರಿಣಾಮ ಬೀರಿ ಆ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಇನ್ನೊಂದಷ್ಟು ಸಮಯ ಹೆಣಗಾಡಬೇಕಾದಂಥ ಪರಿಸ್ಥಿತಿ ಬರುತ್ತದೆ. ಇಷ್ಟೇ ಆಗಿದ್ದರೆ ಹೀಗೆಯೋ ಸುಧಾರಿಸಬಹುದಿತ್ತು. ಆದರೆ ಕೆಲವೊಂದು ಚಿಕಿತ್ಸೆಗಳು ಕ್ಯಾನ್ಸರ್ನಂಥ ಗಂಭೀರ ರೋಗಗಳಿಗೆ ಕಾರಣವಾಗುತ್ತವೆ. ಹೀಗೆಲ್ಲ ಆಗುತ್ತದೆಯೇ? ನಿಜಕ್ಕೂ ಈ ಉಪಕರಣಗಳು ನಿಖರವಾದ ಮಾಹಿತಿಯನ್ನು ಕೊಡುವುದಿಲ್ಲವೇ? ಒಂದು ಚಿಕಿತ್ಸೆ ಇನ್ನೊಂದು ರೋಗವನ್ನು ಸೃಷ್ಟಿ ಮಾಡಿತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಎಚ್ಐವಿ ಪರೀಕ್ಷಕದ ಅವಾಂತರ
ರೋಗ ಪರೀಕ್ಷಕ ಉಪಕರಣಗಳು ಜನರನ್ನು ಎಷ್ಟು ಪ್ರಮಾಣದಲ್ಲಿ ವಂಚಿಸುತ್ತವೆ ಎಂಬುದಕ್ಕೆ ಎಚ್ಐವಿ ಪರೀಕ್ಷಕ ಉಪಕರಣವೇ ಸಾಕ್ಷಿ. ಆನ್ಲೈನ್ ಮೂಲಕ, ಕೆಲವು ಮಾರುಕಟ್ಟೆಗಳಲ್ಲಿ ಇಂಥ ಉಪಕರಣಗಳು ಮಾರಾಟ ಮಾಡಲ್ಪಡುತ್ತವೆ. ಅಗ್ಗದ ಬೆಲೆಯವು ಎಂಬ ಕಾರಣಕ್ಕೆ ಜನ ಖರೀದಿಸುತ್ತಾರೆ. ಆದರೆ ಇವು ನಿಯಮ ಬಾಹಿರ ಉಪಕರಣಗಳು. ಹಾಗಂತ ಎಲ್ಲ ಉಪಕರಣಗಳೂ ಇದೇ ರೀತಿ ಇರುತ್ತವೆ ಎಂದು ಹೇಳುವುದಕ್ಕಾಗುವುದಿಲ್ಲ. ಮುಖ್ಯವಾಗಿ ಚೀನಾ ನಿರ್ಮಿತ ಉಪಕರಣಗಳು ಇಂಥ ಸಮಸ್ಯೆಗಳನ್ನು ಕೊಡುತ್ತವೆ ಎಂದು ಬ್ರಿಟನ್ನಿನ ಆರೋಗ್ಯ ಜಾಗೃತಿ ಸಂಸ್ಥೆ ದಿ ಮೆಡಿಸಿನ್ಸ್ ಆಂಡ್ ಹೆಲ್ತ್ಕೇರ್ ರೆಗ್ಯುಲೇಟರಿ ಏಜೆನ್ಸಿ ಹೇಳಿದೆ.

ಲೈಂಗಿಕವಾಗಿ ಹರಡುವಂಥ ರೋಗಗಳನ್ನು ಪರಿಶೀಲಿಸುವಂಥ ಹಲವಾರು ಉಪಕರಣಗಳು ಮಾರುಕಟ್ಟೆಯಲ್ಲಿವೆ. ಆದರೆ ಇವೆಲ್ಲವೂ ಮಾಹಿತಿಗಳನ್ನು ನಿಖರವಾಗಿ ಕೊಡುತ್ತವೆ ಎಂದು ಹೇಳಲಾಗದು. ಇಂಥ ಉಪಕರಣಗಳು ತಪ್ಪು ಮಾಹಿತಿಗಳನ್ನು ನೀಡಿದ ಬಗ್ಗೆ ಈಗಾಗಲೇ ಹಲವಾರು ದೂರುಗಳು ಬಂದಿವೆಯಂತೆ. ಬಹಳಷ್ಟು ಜನ ಇಂಥ ಉಪಕರಣಗಳನ್ನು ಖರೀದಿಸಿ ಮೋಸ ಹೋಗಿದ್ದಾರೆ. ಲೈಂಗಿಕವಾಗಿ ಹರಡುವಂಥ ರೋಗಗಳನ್ನು ಕೆಲವೇ ನಿಮಿಷಗಳಲ್ಲಿ ಪರಿಶೀಲಿಸುವುದಕ್ಕೆ ಸಾಧ್ಯವಿಲ್ಲ. ಅಷ್ಟು ಬೇಗ ಫಲಿತಾಂಶ ಸಿಗುವುದೂ ಇಲ್ಲ. ಆಸ್ಪತ್ರೆಗಳಿಗೆ ಹೋದರೂ ಸಹ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಿದ ಬಳಕವಷ್ಟೇ ರೋಗವನ್ನು ದೃಢಪಡಿಸಲಾಗುತ್ತದೆ. ಯಾವುದೋ ಒಂದು ನಿದರ್ಶನದಿಂದ ರೋಗ ಇದೆ ಎಂದು ಖಡಾಖಂಡಿತವಾಗಿ ಹೇಳುವುದಕ್ಕೆ ಸಾಧ್ಯವಾಗದು. ಹೀಗಾಗಿ ಇಂಥ ಉಪಕರಣಗಳ ಬಗ್ಗೆ ಜನ ಎಚ್ಚರದಿಂದಿರಬೇಕು ಎಂದಿದೆ ಈ ಸಂಸ್ಥೆ.

ಕ್ಯಾನ್ಸರ್ ತಂದೀತು ಐವಿಎಫ್
ಕೆಲವೊಬ್ಬರಿಗೆ ಸಂತಾನೋತ್ಪತ್ತಿಯ ಸಾಮರ್ಥ್ಯ ಇರುವುದಿಲ್ಲ. ಹಿಂದಿನ ಕಾಲದಲ್ಲಾದರೆ ಅದರ ಬಗ್ಗೆಯೇ ಚಿಂತಿಸಿ ಕೊರಗುತ್ತಿದ್ದರು. ನೆಂಟರಿಷ್ಟರ ಮೂದಲಿಕೆಗೆ ಒಳಗಾಗುತ್ತಿದ್ದರು. ಆದರೆ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಇಂದು ಅಂತಹ ಪರಿಸ್ಥಿತಿ ಇಲ್ಲ. ಇನ್ವಿಟ್ರೋ ಫರ್ಟಿಲೈಸೇಶನ್ ಮೂಲಕ ಗರ್ಭಧರಿಸುವುದಕ್ಕೆ ಸಾಧ್ಯವಿದೆ. ದಂಪತಿಯ ಪೈಕಿ ಯಾರೊಬ್ಬರಿಗೇ ಸಮಸ್ಯೆ ಇದ್ದರೂ ಸಹ ಈ ತಂತ್ರಜ್ಞಾನ ನೆರವಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಬೆಳೆದುಬಿಟ್ಟಿದೆ. ಆದರೆ ಈ ತಂತ್ರಜ್ಞಾ ಎಂಥ ಹಾನಿ ಮಾಡುವ ಸಾಧ್ಯತೆ ಇದೆ ಗೊತ್ತಾ?

ಇನ್ವಿಟ್ರೋ ಫರ್ಟಿಲೈಸೇಶನ್ಗೆ ಒಳಗಾದವರಿಗೆ ಗರ್ಭಕೋಶದ ಕ್ಯಾನ್ಸರ್ ಬರಯವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ನೆದರ್ಲೆಂಡಿನ ಕ್ಯಾನ್ಸರ್ ಸಂಶೋಧನಾ ಕೇಂದ್ರದ ವಿಜ್ಞಾನಿಗಳು. ಅಲ್ಲದೆ ಗರ್ಭಕೋಶಗಳ ಗಡ್ಡೆಗಳೂ ಅಧಿಕಗೊಳ್ಳುತ್ತವೆ. ಇನ್ವಿಟ್ರೋಫರ್ಟಿಲೈಸೇಶನ್ಗೆ ಒಳಗಾದ ಬಹಳಷ್ಟು ಮಹಿಳೆಯರಲ್ಲಿ ಗರ್ಭಕೋಶದ ಗಡ್ಡೆ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಅವರು ಗರ್ಭಕೋಶದ ಯಾವುದಾದರೊಂದು ಬಗೆಯ (ಗರ್ಭಕೋಶದ ಕ್ಯಾನ್ಸರ್ನಲ್ಲಿಯೇ ಹಲವಾರು ವಿಧಗಳಿವೆ.) ಕ್ಯಾನ್ಸರ್ಗೆ ತುತ್ತಾಗುವಂಥ ಅಪಾಯವಿದೆ. ಸಂಶೋಧನೆಗೆ ಒಳಪಡಿಸಲ್ಪಟ್ಟ ಬಹಳಷ್ಟು ಮಹಿಳೆಯರು ಐವಿಎಫ್ ಕಾರಣದಿಂದಾಗಿಯೇ ಗರ್ಭಕೋಶದ ಕ್ಯಾನ್ಸರ್ಗೆ ತುತ್ತಾದದ್ದು ಕಂಡುಬಂದಿದೆ ಎನ್ನುತ್ತಾರೆ ಸಂಶೋಧಕಿ ಫ್ಲೋರಾ ವಾನ್ ಲೀವನ್.

ಆದರೆ ಈ ಬಗ್ಗೆ ಇನ್ನಷ್ಟು ಸ್ಪಷ್ಟವಾದ ಕಾರಣಗಳನ್ನು ಹುಡುಕಬೇಕಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸಂಶೋಧಕರು ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದಾರೆ. ಇನ್ನಷ್ಟು ದತ್ತಾಂಶಗಳನ್ನು ಕಲೆ ಹಾಕಿ, ಐವಿಎಫ್ ಚಿಕಿತ್ಸೆಗೆ ಒಳಗಾಗುವ ಮಹಿಳೆಯರಲ್ಲಿ ಕ್ಯಾನ್ಸರ್ ಉಂಟುಮಾಡುವಂಥ ಅಂಶ ಯಾವುದು ಎಂಬುದನ್ನು ಕಂಡುಕೊಳ್ಳಬೇಕಿದೆ ಎಂದಿದ್ದಾರೆ ಫ್ಲೋರಾ.

ಇನ್ನೂ ಹಲವು ಸಮಸ್ಯೆಗಳು
ಸಮಸ್ಯೆಗಳು ಇಷ್ಟೇ ಅಲ್ಲ. ಇನ್ನೂ ಹಲವಾರು ರೀತಿಯಲ್ಲಿ ಜನರು ತೊಂದರೆಗೆ ಸಿಲುಕುತ್ತಿದ್ದಾರೆ. ಯಾವುದೋ ಒಂದು ಚಿಕಿತ್ಸೆ ಇನ್ನು ಯಾವುದೋ ಸಮಸ್ಯೆಯನ್ನು ಸೃಷ್ಟಿ ಮಾಡುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ರಕ್ತ ಪರೀಕ್ಷೆ ನಡೆಸುವುದಕ್ಕೆ ರಕ್ತವನ್ನು ಪಡೆಯುವಾಗಲೂ ಸಹ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲೂ ವೈರಾಣು ಸೋಂಕು ತಗುಲುವ ಸಾಧ್ಯತೆಗಳಿವೆ.
ಅದೆಷ್ಟೋ ಬಾರಿ ವೈಜ್ಞಾನಿಕ ಪ್ರಯೋಗಗಳು ಅಡ್ಡ ಹಾದಿಗೆ ಹೋಗುವುದು, ಏನನ್ನೋ ಸಂಶೋಧಿಸಬೇಕು ಎಂದು ಹೊರಟಾಗ ಇನ್ನೇನೋ ಸೃಷ್ಟಿಯಾಗುವುದು ನಡೆಯುತ್ತಲೇ ಇದೆ. ಆಟಂ ಬಾಂಬ್ ಕೂಡಾ ಸೃಷ್ಟಿಯಾದದ್ದು ಪ್ರಯೋಗದಲ್ಲಿನ ಒಂದು ತಪ್ಪಿನ ಕಾರಣದಿಂದಾಗಿ. ವೈದ್ಯಕೀಯ ಕ್ಷೇತ್ರದಲ್ಲಂತೂ ಇಂಥ ಸಮಸ್ಯೆಗಳು ತೀರಾ ಅಧಿಕ. ಅಲರ್ಜಿ ಇದ್ದವರಿಗೆ ಕೆಲವೊಂದು ಮಾತ್ರೆಗಳನ್ನು ಕೊಡುವುದಕ್ಕೆ ವೈದ್ಯರು ಒಪ್ಪುವುದಿಲ್ಲ. ಸಮಸ್ಯೆಗಳು ಇಲ್ಲದ ಕ್ಷೇತ್ರ ಯಾವುದಿದೆ ಹೇಳಿ. ಜಗತ್ತಿಗೆ ಉಪಕಾರ ಮಾಡುತ್ತೇವೆ ಎಂದು ಹೊರಟು, ತಮ್ಮ ಸಂಶೋಧನೆಯ ಲಾಬವನ್ನು ತುರ್ತಾಗಿ ಪಡೆಯಬೇಕು ಎಂಬ ದುರಾಸೆಗೆ ಬಿದ್ದು, ಪ್ರಯೋಗಗಳ ಅಡ್ಡಪರಿಣಾಮಗಳ ಬಗ್ಗೆ ಚಿಂತಸದೇ ಇರಬಾರದು. ಸಮಸ್ಯೆಗಳು ಬಂದ ಮೇಲೆ ಅದಕ್ಕೆ ಪರಿಹಾರ ಹುಡುಕುವ ಬದಲು, ಸಮಸ್ಯೆಗಳನ್ನು ಸೃಷ್ಟಿಗೂ ಮುನ್ನವೇ ತಡೆಯಬೇಕು ಎಂಬುದು ಕಳಕಳಿ ಅಷ್ಟೆ.

* * * * * * *

ಚಿತ್ರಕೃಪೆ : ಅಂತರ್ಜಾಲ

2 ಟಿಪ್ಪಣಿಗಳು Post a comment
  1. tumkur s prasd's avatar
    tumkur s prasd
    ನವೆಂ 25 2011

    fine sir

    ಉತ್ತರ
  2. gunavardhana shetty's avatar
    ನವೆಂ 26 2011

    ಸಣ್ಣ ಸಣ್ಣ ಕಾಯಿಲೆಗಳಿಗೆ ಅತಿಯಾದ ಮುತುವರ್ಜಿ ವಹಿಸಲು ಹೋದರೆ ನೀವು ಹೇಳಿದಂತೆ ಇನ್ನೇನೊಅಚಾತುರ್ಯ ಆಗುವುದರಲ್ಲಿ ಸಂದೇಹವಿಲ್ಲ. ನಿಮ್ಮ ಲೇಖನಕ್ಕೆ ಧನ್ಯವಾದಗಳು

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments