ವಿಶ್ವ ಸಂಸ್ಥೆ ಹೆಸರಲ್ಲಿ ಮತ್ತಿತರ ಮಿಂಚೆ ಮೋಸಗಳು!!!
–ಪ್ರಶಸ್ತಿ ಪಿ
ಶೀರ್ಷಿಕೆ ನೋಡಿ ಆಶ್ಚರ್ಯ ಆಗ್ತಾ ಇದೆಯಾ? ಜೊತೆಗಿರುವ ಚಿತ್ರಗಳನ್ನು ನೋಡಿ.. ವಿಶ್ವಸಂಸ್ಥೆಯಿಂದ ಎಂಬ ಸಂದೇಶವನ್ನು ಒಳಪಟ್ಟಿಯಲ್ಲಿ ನೋಡಿ ಒಮ್ಮೆ ಆಶ್ಚರ್ಯವಾಯಿತು.. ಅದು spam ಗೆ ಹೋಗದೇ ಒಳಪೆಟ್ಟಿಗೆಗೇ ಬಂದಿದೆಯೆಂದು ಒಮ್ಮೆ ಆಶ್ಚರ್ಯವಾಯಿತು..
ತೆಗೆದು ನೋಡಿದರೆ “ನಿಮಗೆ ಬರಬೇಕಾದ ಸಂಬಳ ಬಂದಿದೆಯಾ?” ಎಂಬ ಸಂದೇಶ. ತಕ್ಷಣ ನಿಮ್ಮ ಹೆಸರು, ವಿಳಾಸ, ಪಾಸಪೋರ್ಟು ನಂಬರ್, ಮೊಬೈಲು, ಸ್ಥಿರ ದೂರವಾಣಿ ನಂಬರುಗಳೊಂದಿಗೆ ಪ್ರತಿಕ್ರಯಿಸಿ ಎಂಬ ಒಕ್ಕಣೆ ಬೇರೆ. ಅವರು ಕೊಟ್ಟಿದ್ದ ವೆಬ್ ಕೊಂಡಿ ಸರಿಯಾಗೇ ಇದೆ.. ಸಂಶಯ ಶುರು ಆಯ್ತು..
ನಾನು ವಿಶ್ವಸಂಸ್ಥೆಗೆ ಯಾವ ರೀತಿಯಲ್ಲೂ ಸಂಬಂಧ ಪಟ್ಟವನಲ್ಲ..ಅಂತಹದರಲ್ಲಿ ಅವರೇಕೆ ನನಗೆ, ಯಾತಕ್ಕಾಗಿ ಸಂಬಳ ಕೊಡಬೇಕು? ಮೊಬೈಲ್ ನಂಬರು, ಇತರೆ ಮಾಹಿತಿಗಳನ್ನ ದುರುಪಯೋಗಪಡಿಸಿಕೊಳ್ಳುವ ಯಾವುದೋ ವ್ಯವಸ್ಥಿತ ಜಾಲ ಅದಿರಬೇಕು ಅಂತ ಆ ಮಿಂಚೆಯನ್ನು ನಾಶ ಮಾಡಿದೆ. ಅದಕ್ಕೂ ಮೊದಲು ಯಾವ ಸಂಬಳ ಎಂಬ ಉತ್ತರ ಕಳಿಸಿದೆ. ಯಾವ ಪ್ರತಿಕ್ರಿಯೆಯೂ ಬರಲಿಲ್ಲ..
ನಿಮಗೂ ಇಂಥಹ ಸಂದೇಶ ಬರಬಹುದು.. ಅವರು ಕೇಳಿದ ಮಾಹಿತಿ ಕೊಟ್ಟು ಮೋಸ ಹೋಗದಿರಿ.. ಮತ್ತು ಆ ಮಿಂಚೆಯನ್ನು ಈ ವಿಳಾಸಕ್ಕೆ forward ಮಾಡಿರಿ.. FraudDesk@city-of-london.pnn.police.uk
ಇಲ್ಲೂ ದೂರು ನೀಡಬಹುದು http://www.indiacyberlab.in/cybercrimes/report.htm. ಅದರಲ್ಲಿ ನೀಡಿರೋ ಕೊಂಡಿ ಕೆಲವೊಮ್ಮೆ ತೆರೆಯುವುದಿಲ್ಲ.. ಆಗ ಮತ್ತೆ ಪ್ರಯತ್ನಿಸಿ
ಇನ್ನೊಂದು ಉದಾಹರಣೆ – ನಾನು ಸಾರಾ:
ನಾನಲ್ಲ ಕಣ್ರಿ. ಊಟ ಮಾಡೋ ಸಾರೂ ಅಲ್ಲ. ಅದು ನಂಗೆ ಬಂದ ಮಿಂಚೆಯ ಒಕ್ಕಣೆಯದು. ಸಾರಾ ಅಂತೆ. ೨೪ ವರ್ಷವಂತೆ. ಆಫ್ರಿಕಾದವಳಂತೆ. ಅವಳಪ್ಪ ಇತ್ತೀಚೆಗಷ್ಟೇ ತೀರಿಕೊಂಡರಂತೆ. ಕೋಟ್ಯಾಂತರ ಬಿಲಿಯ ಆಸ್ತಿಯಿದೆಯಂತೆ. ಅದನ್ನು ಹೂಡಲು ಜನ ಬೇಕಂತೆ. ಯಾರೂ ಇಲ್ಲದೇ ಆ ಆಸ್ತಿ ೩೦ ವರ್ಶ ಆಗುವವರೆಗೂ ಆಕೆಗೆ ಸಿಗದಂತೆ.. ಅಡುಗೂಲಜ್ಜಿಯ ಕಥೆ ಇದ್ದಾಗೆ ಇದೆಯಾಲ್ವಾ? ಇದೂ ಕೇಳುವುದು ನಿಮ್ಮ ವಿಳಾಸ ಕೊಡಿ ಅಂತನೇ. ಕೊಟ್ಟಿರೋ. ಕೆಟ್ಟಿರೆಂದೇ ಲೆಕ್ಕ
U.K Lottery:
ಇದು ಮತ್ತೊಂತರ. ನೀವು ಲಾಟರಿ ಗೆದ್ದಿದ್ದೀರ. ಇಷ್ಟು ಕೋಟಿ ಬಂದಿದೆ. ಅದು ಬೇಕೆಂದರೆ ಇಂಥಾ ಸಂಖ್ಯೆಗೆ ಕರೆ ಮಾಡಿ, ಈ ಮಿಂಚೆಗೆ ಸಂದೇಶ ಕಳಿಸಿ ಅಂತ. ಉತ್ತರಿಸಿದಿರೋ ಕೆಟ್ಟಿರಿ ಅಂಥ.
You Have won 10 million Dollors from Google
ಕಂಡಕಂಡವರಿಗೆ ದುಡ್ಡು ಕೊಡೋಕೆ ಗೂಗಲ್ಲಿನವರಿಗೇನು ಹುಚ್ಚೆ? ಇದೂ ಅದೇ ತರಹದ ಮೋಸ ಸ್ವಾಮಿ. ನಂಬಿ ಕುರಿಗಳಾಗದಿರಿ
Microsoft has Selected You
ಇಷ್ಟೊತ್ತಿಗಾಗಲೇ ನಿಮಗೆ ಗೊತ್ತಾಗಿರಬೇಕು. ಇದೂ ಒಂದು ಮೋಸ ಅಂಥ. ಈ ತರಹದ ಹಲವಾರು ಬರುತ್ತಿರುತ್ತದೆ. ನಾಮ ಹಲವು.. ಹೂಂ ಕಣ್ರಿ. ಅವ್ರು ನಾಮ ಹಾಕಕ್ಕೆ ಇರೋದು. ಬೇರೆ ಬೇರೆ ತರ ಅಷ್ಟೆ 🙂
ಮುಕ್ತಾಯ
ಪ್ರತೀ ಮಿಂಚೆಗೂ HTML Header ಗಳು ಅಂತ ಇರುತ್ತದೆ. ಮಿಂಚೆಯ ಮೇಲಿರುವ Show Headers ಅನ್ನೋ ಆಯ್ಕೆ ಬಳಸಿ ಅದನ್ನು ನೋಡಬಹುದು ಅನ್ನೋದನ್ನು ಗೆಳೆಯ ಆದಿಯಿಂದ ಕಲಿತಿದ್ದೆ. ಅದರಲ್ಲಿ ನೀವು ಏನೇ ಹೆಸರು ಕೊಟ್ಟಿದ್ದರೂ ಕಳುಹಿಸಲ್ಪಟ್ಟ ಕಂಪ್ಯೂಟರಿನ IP ವಿಳಾಸ ಇತ್ಯಾದಿ ನಮೂದಾಗಿರುತ್ತದೆ. ಅದರಿಂದ ಕಳಿಸಿದವರನ್ನು ಪತ್ತೆ ಹಚ್ಚಬಹುದಲ್ಲಾ. IP ಕೊಟ್ಟರೆ ಅದು ಎಲ್ಲಿಯದು ಅಂತ ಹೇಳೋ ದತ್ತಾಂಶಗಳಿರುವಾಗ ಚಿಂತೆಯೇಕೆ ಎಂಬ ಆಲೋಚನೆಯೂ ನಿಮಗೆ ಬಂದಿರಬಹುದು. ಆದರೆ ಈ ಕಳ್ಳರು ಅಷ್ಟು ದಡ್ಢರಲ್ಲ ಸ್ವಾಮಿ. ಅವರು ಹಲ ತರದ Proxy ಗಳನ್ನು ಸೃಷ್ಟಿ ಮಾಡಿ , ಅದಕ್ಕೆ ಇನ್ನೆಂಲ್ಲಿಂದಲೋ ಕಳಿಸಿ, ಅದಕ್ಕೆ ಮತ್ತೆಲ್ಲಿಂದಲೋ ಕಳಿಸಿ.. ಅದಕ್ಕೆ ಮಗದೊಂದು ಸ್ಥಳದಿಂದ.. ಹೀಗೆ ಆಟ ಆಡಿರುತ್ತಾರೆ. ಹಾಗಾಗಿ ಅದನ್ನು ಕಂಡು ಹಿಡಿಯೋದು ಅಷ್ಟು ಸುಲಭದ ಕೆಲಸವಲ್ಲ.. ತಲೆ ಚಿಟ್ಟು ಹಿಡಿಯುತ್ತಿದೆಯೇ? ತಲೆ ಕೆಡಿಸಿಕೊಳ್ಳಬೇಡಿ. ಆ ಮಿಂಚೆಯನ್ನು ಮೇಲೆ ಹೇಳಿದ ವಿಳಾಸದಲ್ಲಿ Forward ಮಾಡಿ ಮರೆತುಬಿಡಿ. ಅಥವಾ ಸುಮ್ಮನೇ Delete ಮಾಡಿಬಿಡಿ. ಯಾವುದೇ ಕಾರಣಕ್ಕೂ ಪ್ರತಿಕ್ರಿಯೆ ಮಾತ್ರ ನೀಡಬೇಡಿ.
* * * * * * *
ಚಿತ್ರಕೃಪೆ: ಪ್ರಶಸ್ತಿ ಪಿ




