ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 5, 2011

1

ಬುವಿಯ ಸುಡುತ್ತವೆಯೇ ಸೌರಜ್ವಾಲೆಗಳು?

‍ನಿಲುಮೆ ಮೂಲಕ

-ವಿಷ್ಣುಪ್ರಿಯ

ನಿಜಕ್ಕೂ ಪ್ರಳಯವಾಗುತ್ತದೆಯೇ? ಸೌರಜ್ವಾಲೆಗಳು ಭೂಮಿಯನ್ನು ಸುಡುತ್ತವೆಯೇ? ಸೂರ್ಯನಲ್ಲಿನ ಕಾಂತವಲಯದಲ್ಲಿ ಅತಿಯಾದ ಚಟುವಟಿಕೆಗಳು ಕಾಣಿಸಿಕೊಳ್ಳುವ ಮೂಲಕ ಉತ್ಪತ್ತಿಯಾಗುವಂಥ ಶಕ್ತಿಯುತ ಸೌರಜ್ವಾಲೆಗಳಿಂದ ಭೂಮಿ ಸರ್ವನಾಶವಾಗುತ್ತದೆ ಎಂಬ ಮಾತು ನಿಜವೇ?… ಈ ವಿಚಾರವಾಗಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಕೊನೆಯಿಲ್ಲ. ಅವಕ್ಕೆ ಸ್ಪಷ್ಟವಾದ ಉತ್ತರಗಳೂ ಇಲ್ಲ.

ಇನ್ನು ಕೆಲವೇ ವಾರಗಳು. 2012ನೇ ಇಸವಿ ಕಾಲಿಡುತ್ತಿದೆ. `2012′ ಎಂಬ ಧ್ವನಿ ಕೆಳಿದ ತಕ್ಷಣ ಬಹಳಷ್ಟು ಜನ ಜೀವನದ ಬಗೆಗಿನ ಎಲ್ಲ ಆಸೆಗಳನ್ನೂ, ಭರವಸೆಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಭೂಮಿಯ ಕಥೆಯೇ ಮುಗಿದು ಹೋಯಿತು; ಪ್ರಳಯ ಆಗುತ್ತೆ; ಸೂರ್ಯ ಉಗುಳಿದ ಸೌರಜ್ವಾಲೆಗಳು ಭೂಮಿಯನ್ನು ಸುಟ್ಟು ಹಾಕುತ್ತವೆ… ಎಂಬೆಲ್ಲ ಸುದ್ದಿಗಳು ಮೇಲಿಂದ ಮೇಲೆ ಪ್ರಸಾರವಾಗಿ ಜನರಲ್ಲಿನ ಭೀತಿಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಹಲವು ಜನರಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಭೀತಿಯಿದೆ ನಿಜ. ಆದರೆ ಅವರೆಲ್ಲ ಇಂಥದ್ದೇನೂ ಆಗುವುದಿಲ್ಲ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ನಿಜಕ್ಕೂ ಪ್ರಳಯವಾಗುತ್ತದೆಯೇ? ಸೌರಜ್ವಾಲೆಗಳು ಭೂಮಿಯನ್ನು ಸುಡುತ್ತವೆಯೇ? ಸೂರ್ಯನಲ್ಲಿನ ಕಾಂತವಲಯದಲ್ಲಿ ಅತಿಯಾದ ಚಟುವಟಿಕೆಗಳು ಕಾಣಿಸಿಕೊಳ್ಳುವ ಮೂಲಕ ಉತ್ಪತ್ತಿಯಾಗುವಂಥ ಶಕ್ತಿಯುತ ಸೌರಜ್ವಾಲೆಗಳಿಂದ ಭೂಮಿ ಸರ್ವನಾಶವಾಗುತ್ತದೆ ಎಂಬ ಮಾತು ನಿಜವೇ?… ಈ ವಿಚಾರವಾಗಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಕೊನೆಯಿಲ್ಲ. ಅವಕ್ಕೆ ಸ್ಪಷ್ಟವಾದ ಉತ್ತರಗಳೂ ಇಲ್ಲ. ವಿಜ್ಞಾನಿಗಳನ್ನೇ ಕೇಳೋಣ ಎಂದರೆ ಒಂದಷ್ಟು ವಿಜ್ಞಾನಿಗಳು ಸೌರಜ್ವಾಲೆ ಭೂಮಿಯನ್ನು ಸುಟ್ಟು ಹಾಕುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ. ಇನ್ನೊಂದಷ್ಟು ಜನ `ಇಲ್ಲ, ಸಾಧ್ಯವೇ ಇಲ್ಲ’ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸೌರಜ್ವಾಲೆ ಮತ್ತು ಪ್ರಳಯದ ವಿಚಾರವಾಗಿ ವಿಜ್ಞಾನಿಗಳಲ್ಲಿಯೂ ಸಹ ವಿಭಿನ್ನ ಚಿಂತನೆಗಳು ಸೃಷ್ಟಿಯಾಗಿವೆ; ಅದು ಸಹಜ ಬಿಡಿ! 2012ಕ್ಕೂ ಸೌರಜ್ವಾಲೆಗೂ ಪ್ರಳಯಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಪರಿಣತರ ತಂಡವೊಂದು ಹೇಳುತ್ತಿದೆ. ಇದಕ್ಕೆ ಪ್ರತಿಯಾಗಿ ನಾಸಾ ಮತ್ತು ನೋವಾ (ಎನ್ಒಎಎ) ವಿಜ್ಞಾನಿಗಳು `ಸೌರಜ್ವಾಲೆಗಳು ಅಷ್ಟೊಂದು ಹಾನಿ ಮಾಡಲಿಕ್ಕಿಲ್ಲ ನಿಜ. ಹಾಗಂತ ಸಂಪೂರ್ಣ ನಿರ್ಲಕ್ಷಿಸುವುದಕ್ಕೂ ಆಗದು. ಸಮಸ್ಯೆ ಬರುವ ಮೊದಲೇ ನಾವು ಬೇಕಾದಂಥ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಏನಾದರೂ ಸಮಸ್ಯೆ ಇದೆಯೇ?’ ಎಂದು ಪ್ರಶ್ನಿಸುತ್ತಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಸಾಮಾನ್ಯ ಜನರು ಗೊಂದಲಕ್ಕೊಳಗಾಗುವುದರಲ್ಲಿ ಸಂಶಯವಿಲ್ಲ. ಆದರೆ ಎಲ್ಲವೂ ಭಗವಂತನಿಚ್ಛೆ ಎಂದು ಸ್ವೀಕರಿಸುವ ಗುಣ ಹೊಂದಿರುವ ಭಾರತೀಯರು ಈ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಲಿಕ್ಕಿಲ್ಲ.

ಸೌರಜ್ವಾಲೆಗಳು ಸಹಜ
ಸೂರ್ಯನ ಕಾಂತವಲಯದಲ್ಲಿ ನಡೆಯುವಂಥ ಸೌರಚಟುವಟಿಕೆಗಳು ಗರಿಷ್ಠ ಮಟ್ಟಕ್ಕೆ ಹೋಗುವುದು, ಮತ್ತೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಯುವುದು ಸಹಜವಾದಂಥ ಪ್ರಕ್ರಿಯೆ. ಸುಮಾರು 11 ವರ್ಷಗಳಿಗೊಮ್ಮೆ ಸೂರ್ಯನ ಕಾಂತವಲಯದಲ್ಲಿನ ಚಟುವಟಿಕೆಗಳು ಗರಿಷ್ಠ ಮತ್ತು ಕನಿಷ್ಠ ಮಟ್ಟಕ್ಕೆ ಏರಿಳಿಯುತ್ತಾ ಚಕ್ರವನ್ನು ನಿರ್ಮಿಸುತ್ತವೆ. ಅಂದರೆ ಪ್ರತಿ 11 ವರ್ಷಕ್ಕೊಮ್ಮೆ ಸೌರಚಟುವಟಿಕೆಗಳು ಗರಿಷ್ಠ ಮಟ್ಟವನ್ನು ತಲುಪುತ್ತವೆ. ಅದೇ ರೀತಿ ಪ್ರಸ್ತುತ ಸೂರ್ಯನಲ್ಲಿನ ಕಾಂತವಲಯದಲ್ಲಿನ ಚಟುವಟಿಕೆಗಳು ಗರಿಷ್ಠ ಮಟ್ಟದತ್ತ ಬರುತ್ತಿವೆ. ಹಾಗಂತ ಪ್ರಚಾರದಲ್ಲಿರುವಂತೆ 2012ರಲ್ಲಿ ಈ ಚಟುವಟಿಕೆಗಳು ಅತ್ಯಂತ ಗರಿಷ್ಠವಾಗುವುದಿಲ್ಲ. ಬದಲಾಗಿ ಈ ಘಟನೆ 2013ರ ಅಂತ್ಯದಲ್ಲಿ ಅಥವಾ 2014ರ ಆರಂಭದಲ್ಲಿ ಸಂಭವಿಸಲಿದೆ. 2012ರಲ್ಲಿ ಪ್ರಳಯವಾಗುತ್ತದೆ ಎಂಬ ಕಾಲ್ಪನಿಕ ಸುದ್ದಿ ಹರಡಿರುವ ಕಾರಣ ಈ ವಿಚಾರದೊಂದಿಗೇ ಸೌರಜ್ವಾಲೆಗಳು ಕಾಕತಾಳೀಯವಾಗಿ ಬೆಸೆದುಕೊಂಡಿವೆ ಅಷ್ಟೆ.

11 ವರ್ಷಕ್ಕಿಂತ ಹೆಚ್ಚು ಪ್ರಾಯವಾದವರು ಈಗಾಗಲೇ ಕನಿಷ್ಠ ಒಂದು ಬಾರಿಯಾದರೂ ಸೂರ್ಯನ ಕಾಂತವಲಯದ ಗರಿಷ್ಠ ಚಟುವಟಿಕೆಯ ಪರಿಣಾಮವನ್ನು ಎದುರಿಸಿ ಯಾವ ಸಮಸ್ಯೆಯೂ ಇಲ್ಲದೇ ಈಗಲೂ ಜೀವಿಸುತ್ತಿದ್ದಾರೆ. ಇಂತಿರುವಾಗ 2013-14ರಲ್ಲಿ ಸಂಭವಿಸಬಹುದಾದಂಥ ಗರಿಷ್ಠ ಸೌರಚಟುವಟಿಕೆಗಳು ಹಾನಿ ಮಾಡುತ್ತವೆ ಎಂದರೆ ಅದನ್ನು ಒಪ್ಪಿಕೊಳ್ಳುವುದಕ್ಕಾಗದು. ಅಲ್ಲದೆ ಭೂಮಿಯ ಮೇಲಿರುವ ಎಲ್ಲ ಚರಾಚರ ವಸ್ತುಗಳು ಮತು ಜೀವಿಗಳನ್ನು ಭಸ್ಮ ಮಾಡುವಷ್ಟು ಸಾಮಥ್ರ್ಯದ 9.3 ಕೋಟಿ ಮೈಲಿಯ ಬೆಂಕಿಯುಂಡೆಯನ್ನು ಭೂಮಿಯತ್ತ ಉಗುಳುವುದಕ್ಕೆ ಬೇಕಾದಷ್ಟು ಶಕ್ತಿ ಸೂರ್ಯನಲ್ಲಿಯೇ ಇಲ್ಲ. ಇನ್ನು ಭೂಮಿಗೆ ಭೂಮಿಯೇ ಭಸ್ಮವಾಗುವ ಮಾತೆಲ್ಲಿಂದ ಬಂತು? ಹಾಗಾದರೆ ಗರಿಷ್ಠ ಸೌರಚಟುವಟಿಕೆಗಳಿಂದ ಯಾವ ಸಮಸ್ಯೆಯೂ ಆಗುವುದಿಲ್ಲವೇ? ಆಗುತ್ತದೆ ಎಂದಾದರೆ ಸಮಸ್ಯೆಗಳ ಪ್ರಮಾಣ ಎಷ್ಟಿರಬಹುದು?

ಕೆಲವೊಂದು ಸಮಸ್ಯೆಗಳು
ಸೌರಚಟುವಟಿಕೆ ಗರಿಷ್ಠಗೊಂಡಾಗ ಸಹಜವಾಗಿಯೇ ವಾತಾವರಣದಲ್ಲಿ ಬದಲಾವಣೆಯಾಗುತ್ತದೆ. ಹಾಗಂತ ಈ ಬದಲಾವಣೆ ಭೂಮಿಯನ್ನು ಭಸ್ಮ ಮಾಡುವಷ್ಟು ಶಕ್ತಿಯುತವಾಗಿರುವುದಿಲ್ಲ. ಸೂರ್ಯನಿಂದ ಹೊಮ್ಮುವಂಥ ವಿದ್ಯುತ್ಕಾಂತೀಯ ವಿಕಿರಣಗಳು ಮತ್ತು ಶಕ್ತಿಯುತವಾದಂಥ ಕಣಗಳು ಒಂದಷ್ಟು ಪರಿಣಾಮವನ್ನು ಬೀರಬಹುದು. ಇದಕ್ಕಿಂತಲೂ ಹೆಚ್ಚಾಗಿ ಕರೋನಲ್ ಮಾಸ್ ಎಜೆಕ್ಷನ್ ಅಥವಾ ಸೌರಜ್ವಾಲೆಗಳಿಂದಾಗಿ ಭೂಮಿಯ ವಾತಾವರಣದ ಮೇಲ್ಬಾಗದಲ್ಲಿ ಒಂದಷ್ಟು ಪ್ರಕ್ಷುಬ್ದತೆ ಸೃಷ್ಟಿಯಾಗಬಹುದು. ಇದರಿಂದಾಗಿ ವಾತಾವರಣದಲ್ಲಿನ ಶಾಖ ಹೆಚ್ಚಾಗಬಹುದು. ಇದನ್ನು ತಡೆದುಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಅಷ್ಟೆ. ಚಂಡಮಾರುತ ಬಂತು ಎಂದಾದರೆ ನಮ್ಮಿಂದ ಎಷ್ಟು ರಕ್ಷಣೆ ಪಡೆಯುವುದಕ್ಕೆ ಸಾಧ್ಯವೋ ಅಷ್ಟೇ ರಕ್ಷಣೆ ಸೌರಜ್ವಾಲೆಗಳಿಗೂ ಸಾಕು. ಉಪಗ್ರಹಾಧಾರಿತ ವ್ಯವಸ್ಥೆಗಳು ಸ್ವಲ್ಪ ಹದಗೆಡಬಹುದು. ಉಪಗ್ರಹಗಳಿಂದ ಬರುವ ಸಂದೇಶಗಳಲ್ಲಿ ವ್ಯತ್ಯಯ ಕಾಣಿಸಿಕೊಳ್ಳಬಹುದು. ಸೌರಜ್ವಾಲೆಗಳು ಯಾವ ಕ್ಷಣದಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು ಎಂಬುದನ್ನು ಮೊದಲೇ ಅಂದಾಜಿಸುವುದಕ್ಕೆ ನಮ್ಮಿಂದ ಸಾಧ್ಯವಾಯಿತು ಎಂದಾದರೆ ಅದರಿಂದ ರಕ್ಷಣೆ ಪಡೆಯುವುದು ದೊಡ್ಡ ವಿಚಾರವೇನೂ ಅಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಪ್ರಕೃತಿ ಅಂಕೆಗೆ ಸಿಕ್ಕೀತೇ?
ಮಾನವ ಅಭಿವೃದ್ಧಿ ಸಾಧಿಸಿದ್ದು ಪ್ರಕೃತಿಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಮೂಲಕ. ಪ್ರತಿಯೊಂದಕ್ಕೂ ಅದರದ್ದೇ ಆದಂಥ ಇತಿ-ಮಿತಿಯಿದೆ. ಅದನ್ನು ಮೀರುವುದಕ್ಕೆ ಸಾಧ್ಯವಿಲ್ಲ. ಪ್ರಕೃತಿಗೂ ಅದರದ್ದೇ ಆದಂಥ ನಿಯಮಗಳಿವೆ. ನಾವು ಆ ನಿಯಮಗಳಿಗೆ ಬದ್ಧರಾಗಿರಬೇಕೇ ಹೊರತು ನಿಯಮಗಳು ನಮಗೆ ಹೊಂದಿಕೊಳ್ಳುವುದಿಲ್ಲ. ಅದೇ ರೀತಿ ಸೌರಜ್ವಾಲೆಗಳು. ಪ್ರಕೃತಿಯಲ್ಲಿ ಸಹಜವಾಗಿ ಉಂಟಾಗುವಂಥ ಕ್ರಿಯೆ ಇದು ಎಂಬುದು ನಿಜ. ಆ ಕ್ರಿಯೆಯಿಂದ ನಾವು ರಕ್ಷಣೆ ಪಡೆಯಬೇಕು ಎಂಬ ಸತ್ಯವೂ ನಮಗೆ ಗೊತ್ತಿದೆ. ಈ ಹಿಂದೆಯೂ ಸೌರ ಚಟುವಟಿಕೆಗಳು ಗರಿಷ್ಠವಾಗಿದ್ದವು, ಆಗಲೂ ಸೌರಜ್ವಾಲೆಗಳು ಸೂರ್ಯನಿಂದ ಹೊಮ್ಮಿದ್ದವು. ಆದರೂ ಭೂಮಿಯಲ್ಲಿರುವವರಿಗೆ ಯಾವ ಸಮಸ್ಯೆಯೂ ಆಗಿಲ್ಲ ಎಂಬುದೂ ನಿಜವೇ. ಆದರೆ ಇಲ್ಲಿ ನಮ್ಮ ಬುಡಕ್ಕೆ ನಾವೇ ಕೊಡಲಿಯೇಟು ಕೊಟ್ಟುಕೊಂಡಿದ್ದೇವೇನೋ ಎನ್ನಿಸುತ್ತದೆ.

ಸೂರ್ಯನ ವಿಕಿರಣಗಳಿಂದ ನಮ್ಮನ್ನು ರಕ್ಷಿಸುತ್ತಿರುವುದು ಓಜೋನ್ ಪದರ. ಈ ಓಜೋನ್ ಪದರ 10 ವರ್ಷ ಹಿಂದೆ ಇದ್ದದ್ದಕ್ಕಿಂತ ಈಗ ಹೆಚ್ಚು ಸವೆದಿದೆ. ಹೆಚ್ಚು ರಂಧ್ರಗಳು ಓಜೋನ್ ಪದರದಲ್ಲಿ ಸೃಷ್ಟಿಯಾಗಿವೆ. ಇದಕ್ಕೆ ಕಾರಣವಾದದ್ದು ನಾವೇ. 11 ವರ್ಷಗಳ ಹಿಂದೆ ಸೌರ ಚಟುವಟಿಕೆ ಗರಿಷ್ಠವಾದಾಹ ಓಜೋನ್ ಪದರದ ರಕ್ಷಣೆಯೂ ಅಧಿಕವಾಗಿತ್ತು. ಪ್ರಸ್ತುತ ಸವೆದಿರುವ ಓಜೋನ್ ಪದರ ಭೂಮಿಯನ್ನು ಎಷ್ಟು ರಕ್ಷಿಸಬಹುದು ಎಂಬುದನ್ನು ಯೋಚನೆ ಮಾಡಬೇಕಾಗುತ್ತದೆ. ಸೌರಜ್ವಾಲೆಗಳಿಂದ ಭೂಮಿಯೇ ಸುಟ್ಟು ಹೋಗಲಿಕ್ಕಿಲ್ಲ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ಈ ಹಿಂದೆ ಉಂಟಾಗಿದ್ದಂಥ ಗರಿಷ್ಠ ಸೌರಚಟುವಟಿಕೆಗಳಿಗಿಂತ ಹೆಚ್ಚು ಪರಿಣಾಮ ಈ ಬಾರಿ ಇರುತ್ತದೆ ಎಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಸೂರ್ಯನ ಕಿರಣಗಳ ಪರಿಣಾಮ ನಮ್ಮ ಮೇಲೆ ಬೀಳುವುದು ತನಗೆದುರಾಗುವ ಎಲ್ಲ ತಡೆಗಳನ್ನೂ ಮೀರಿ ಬಂದ ಬಳಿಕ. 11 ವರ್ಷಗಳಿಗಿಂತ ಹೊಂದೆ ಭೂಮಿಯ ಮೇಲಿದ್ದಂಥ ದೈತ್ಯ ಗಾತ್ರದ ಮರಗಳ ಪ್ರಮಾಣ ಎಷ್ಟು? ಈಗ ಎಷ್ಟು? ಎಂಬುದನ್ನು ಒಂದು ಬಾರಿ ಯೋಚನೆ ಮಾಡಿ. ದೈತ್ಯ ಮರಗಳನ್ನನು ದಾಟಿಕೊಂಡು ಬಂದಾಗ ಸಹಜವಾಗಿಯೇ ಕಿರಣಗಳ ಪ್ರಭಾವ ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತು. ಈಗ?

* * * * * * *

ಚಿತ್ರಕೃಪೆ : ಅಂತರ್ಜಾಲ

1 ಟಿಪ್ಪಣಿ Post a comment
  1. ಡಿಸೆ 5 2011

    ತುಂಬಾ ಒಳ್ಳೆಯ ಮಾಹಿತಿ ಪೂರ್ಣ ಲೇಖನ. ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು…

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments