ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 29, 2011

7

ಕೋಲ್ಕತ್ತಾದಲ್ಲಿ ಕುವೆಂಪು

‍ನಿಲುಮೆ ಮೂಲಕ

-ಪ್ರೊ. ಬಿ ಎ ವಿವೇಕ ರೈ

ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ )  ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು ರಾಮಕೃಷ್ಣ ಮಠದಲ್ಲಿ ಸ್ವಾಮಿ ಶ್ರದ್ಧಾನಂದರಿಂದ ಮಂತ್ರ ದೀಕ್ಷೆ ಪಡೆದದ್ದು. ಎರಡನೆಯದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ಎಲ್ಲ ಆಪ್ತರ ಒತ್ತಾಯದ ಮೇಲೆ ದೆಹಲಿಗೆ ಹೋದದ್ದು ೧೯೬೮.ಅವರ ಕಲ್ಕತ್ತಾದ ಭೇಟಿಯ ವೇಳೆಗೆ ಅವರಿಗೆ ಸುಮಾರು ಇಪ್ಪತ್ತೈದು ವರ್ಷ ಪ್ರಾಯ.ಅದೇ ವರ್ಷ ಅವರು ಎಂ ಎ ಮುಗಿಸಿದ್ದು.ಕಲ್ಕತ್ತಾ ಸಂದರ್ಶನ ಮತ್ತು ರಾಮಕೃಷ್ಣ ಆಶ್ರಮದ  ದರ್ಶನ ಕುವೆಂಪು ಬದುಕಿನ ಮೇಲೆ ಅಪಾರ ಪ್ರಭಾವವನ್ನು ಬೀರಿತು.ಅವರ ಸಾಹಿತ್ಯದ ದ್ರವ್ಯಗಳನ್ನು ರೂಪಿಸಿತು.

ಅಂತಹ ಕಲ್ಕತ್ತಾದಲ್ಲಿ ,ಅಂದರೆ ಈಗಿನ ಕೊಲ್ಕೊತ್ತಾದಲ್ಲಿ ‘ಕುವೆಂಪು’ ಬಗ್ಗೆ ಎರಡು ದಿನಗಳ ರಾಷ್ಟೀಯ ವಿಚಾರಸಂಕಿರಣ ಮೊನ್ನೆ ಮತ್ತು ನಿನ್ನೆ (ಸಪ್ಟಂಬರ ೧೦ ಮತ್ತು ೧೧ ) ನಡೆಯಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಜಂಟಿಯಾಗಿ ನಡೆಸಿದ ಈ ಮಹತ್ವದ ಸಂಕಿರಣಕ್ಕೆ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆ ಮತ್ತು ಕನ್ನಡ ವಿಶ್ವವಿದ್ಯಾಲಯ ಸಹಯೋಗ ಕೊಟ್ಟಿದ್ದವು.ವಿಚಾರಸಂಕಿರಣ ನಡೆದದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಲ್ಕತ್ತಾದ ಪ್ರಾದೇಶಿಕ ಕಚೇರಿಯಲ್ಲಿ .

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ದೂರದ ಮೈಸೂರಿನಿಂದ ಕನ್ನಡದ ಹಿರಿಯ ಸಾಹಿತಿ ೯೪ ವರ್ಷ ವಯಸ್ಸಿನ ದೇ ಜವರೇ ಗೌಡರು ಬಂದದ್ದು ವಿಶೇಷವಾಗಿತ್ತು.ಅವರು ಎರಡು ದಿನಗಳ ಸಂಕಿರಣದಲ್ಲಿ ಪೂರ್ಣವಾಗಿ ಭಾಗವಹಿಸಿ ಎಲ್ಲ ಉಪನ್ಯಾಸಗಳಲ್ಲಿ ಹಾಜರಾಗಿ  ಸಕ್ರಿಯವಾಗಿ ಪಾಲುಗೊಂಡದ್ದು ಹೊಸ ಪೀಳಿಗೆಯ ಲೇಖಕರಿಗೆ ಆದರ್ಶವಾಗಿತ್ತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಕುವೆಂಪು ಬಗ್ಗೆ ಪ್ರಾಥಮಿಕ ವಿವರಗಳ ಸಹಿತ ಇಂಗ್ಲಿಷಿನಲ್ಲಿ ಮಾತಾಡಿದ್ದು ,ಕುವೆಂಪು ಬಗ್ಗೆ ಏನೂ ಗೊತ್ತಿಲ್ಲದ ಬಂಗಾಳಿ ಜನರಿಗೆ ಉಪಯುಕ್ತವಾಗಿತ್ತು.ದೇಜಗೌ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕುವೆಂಪು ಬದುಕು ಬರಹ ಮತ್ತು ದರ್ಶನಗಳ ಬಗ್ಗೆ ಅಚ್ಚುಕಟ್ಟಾಗಿ ಸಿದ್ಧಪಡಿಸಿಕೊಂಡು ತಂದ ಭಾಷಣವನ್ನು ಇಟ್ಟುಕೊಂಡು ವಿವರವಾಗಿ ಮಾತಾಡಿದರು.ಕುವೆಂಪು ಕವನಗಳು ಮತ್ತು ಅಭಿಪ್ರಾಯಗಳನ್ನು ಇಂಗ್ಲಿಶ್ ಅನುವಾದದ ಮೂಲಕ ಕೊಟ್ಟದ್ದು  ಬಂಗಾಳಿಗಳಿಗೆ ಕುವೆಂಪು ತೆರೆದುಕೊಳ್ಳಲು ಅನುಕೂಲವಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಬಂಗಾಳದವರೇ ಆದ ಸುನಿಲ್ ಗಂಗೋಪಾಧ್ಯಾಯ ಅವರು ತಮ್ಮ ಕಿರು ಭಾಷಣದಲ್ಲಿ ಒಂದು ಮಾತು ಹೇಳಿದರು :” ಕುವೆಂಪು ಒಬ್ಬರು ರಾಷ್ಟ್ರೀಯ ಕವಿ .ಆದರೆ ಅವರು ಕರ್ನಾಟಕದ ಹೊರಗೆ ಹೆಚ್ಚು ಪರಿಚಿತರಲ್ಲ.” ಇದು ತುಂಬಾ ವಿಷಾದದ ,ಆದರೆ ಸತ್ಯವಾದ ಮಾತು.ನನ್ನ ಸಮಾರೋಪ ಭಾಷಣದಲ್ಲಿ ಇದನ್ನೇ ಉಲ್ಲೇಖಿಸಿ ವಿಸ್ತರಿಸುತ್ತಾ ಹೋದೆ.ಕುವೆಂಪು ಅವರ ಯಾವುದೇ ಕೃತಿಯು ,ಒಂದು ಕವನ ಕೂಡ ಬಂಗಾಳಿ ಭಾಷೆಗೆ ಅನುವಾದ ಆಗಿಲ್ಲ. ಆದರೆ ಕುವೆಂಪು ಅವರು ಟಾಗೋರರ ‘ಗೀತಾಂಜಲಿ’ಯ ಹತ್ತು ಪದ್ಯಗಳನ್ನು  ಕನ್ನಡಕ್ಕೆ ಅನುವಾದ ಮಾಡಿದ್ದಾರೆ.ಟಾಗೋರರ ಒಂದೇ ಕವನದ ೨೭ ಅನುವಾದಗಳು ಕನ್ನಡದಲ್ಲಿ  ಬಂದಿವೆ ಎಂದು ಪುಸ್ತಕಮನೆಯ ಹರಿಹರಪ್ರಿಯ ತಿಳಿಸಿದರು.ಇನ್ನಾದರೂ ಕಲ್ಕತ್ತಾದ ಈ ಕುವೆಂಪು ಸಂಕಿರಣದ ಫಲಶ್ರುತಿಯಾಗಿ ಆದರೂ ಕುವೆಂಪು ಕೃತಿಗಳ ಬಂಗಾಳಿ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಮಾಡಬೇಕು ಎಂಬ ಸಲಹೆಯನ್ನು ನನ್ನ ಭಾಷಣದಲ್ಲಿ ಕೊಟ್ಟೆ.ನನ್ನ ಪಕ್ಕ ಇದ್ದ ಅಗ್ರಹಾರ ಕೃಷ್ಣಮೂರ್ತಿ ಮತ್ತು ಎದುರುಗಡೆ ಕುಳಿತಿದ್ದ ಪ್ರಧಾನ ಗುರುದತ್ತ ಒಪ್ಪಿಗೆಯ ತಲೆಯಲ್ಲಾಡಿಸಿದರು.

ಸಂಕಿರಣದಲ್ಲಿ ಬಂಗಾಳಿ ಲೇಖಕರ ದೃಷ್ಟಿಯಿಂದ ಕುವೆಂಪು ಅವರನ್ನು ನೋಡುವ ಗೋಷ್ಠಿ ಒಂದು ಇತ್ತು.ಜಯಿತ  ಸೇನ್ ಗುಪ್ತ ಅವರು ಕುವೆಂಪು ಅವರ ‘ಕಾನೂರು ಹೆಗ್ಗಡಿತಿ ‘ಯ ಇಂಗ್ಲಿಶ್ ಅನುವಾದವನ್ನು ಓದಿಕೊಂಡು ,ಅದರೊಂದಿಗೆ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ‘ಕಾನೂರು ಹೆಗ್ಗಡಿತಿ’ಸಿನೆಮಾವನ್ನು ಮುಖಾಮುಖಿಯಾಗಿಸಿ ,ಆ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಕ್ರಮ ವಿಶಿಷ್ಟವಾಗಿತ್ತು.ಕೆಲವು ಮುಖ್ಯ ಭಾಗಗಳನ್ನು ಆಯ್ಕೆಮಾಡಿಕೊಂಡು ,ಅವುಗಳ  ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರು.’ಮನೆ’ಯ ಕಲ್ಪನೆಯ ವಿಸ್ತರಣೆ,ಜೋಯಿಸರು ಮತ್ತು ಹೂವಯ್ಯನ ನಡುವಿನ ಸಂಘರ್ಷ,ಅಧ್ಯಾತ್ಮಿಕ ಮತ್ತು ಆದರ್ಶದ ಬದುಕಿನ ಮುಖಾಮುಖಿ,ಮಾನವ ಧರ್ಮದ ಪರಿಕಲ್ಪನೆ,ಮನೋವೈಜ್ಞಾನಿಕ ನೆಲೆ-ಹೀಗೆ ಭಿನ್ನ ನೆಲೆಗಳಲ್ಲಿ ಕುವೆಂಪು ಕಾದಂಬರಿಯನ್ನು ನೋಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು ಸೇನ್ ಗುಪ್ತ.ಹಿರಿಯ ಲೇಖಕ ಪ್ರಾದ್ಯಾಪಕ ಸ್ವಪನ್ ಮಜುಂದಾರ್ ಅವರು ಕನ್ನಡ ಸಾಹಿತ್ಯ ಮತ್ತು ಕುವೆಂಪು ಬಗ್ಗೆ ತಮಗೆ ದೊರೆತಷ್ಟು ಸಾಮಗ್ರಿಗಳ ಸಹಾಯದಿಂದ ಕೆಲವು ಮುಖ್ಯ ಪ್ರಶ್ನೆಗಳನ್ನು ಎತ್ತಿದರು.ಆಧುನಿಕತೆಯನ್ನು ನಾವು ಅರ್ಥಮಾಡಿಕೊಳ್ಳುವ ಕ್ರಮದ ಬಗ್ಗೆ ,ಅದನ್ನು ಸರಳೀಕರಿಸುವುದರ ಬಗ್ಗೆ ಅವರ ಆಕ್ಷೇಪಗಳು ಗಮನ  ಸೆಳೆದುವು.ಮಾರ್ಗ ಮತ್ತು ದೇಸಿಗಳ ಚರ್ಚೆ ನಡೆಸುತ್ತ ಅವರು  ಬಂಗಾಳಿ ಲೇಖಕರನ್ನು ಕುರಿತು ನಡೆಸಿದ ಚರ್ಚೆ ಕುತೂಹಲಕಾರಿಯಾಗಿತ್ತು. ಕರ್ನಾಟಕದಲ್ಲಿ ಬೆಂಗಳೂರಲ್ಲಿ ನೆಲಸಿರುವ , ಬಂಗಾಳಿ ಮಾತೃಭಾಷೆಯ ಪ್ರಾಧ್ಯಾಪಕಿ ಮೀರಾ ಚಕ್ರವರ್ತಿ ಅವರು ಕುವೆಂಪು ಬಗ್ಗೆ ಬಂಗಾಳಿ ಭಾಷೆಯಲ್ಲಿ ಕೊಟ್ಟ ವಿವರಣೆ ಸಭೆಯಲ್ಲಿ ಇದ್ದ ಬಂಗಾಳಿ ಕೇಳುಗರಿಗೆ ಖುಷಿ ಕೊಟ್ಟಿತು.ಅವರು ಕುವೆಂಪು  ಮತ್ತು ಟಾಗೋರ್ ಅವರನ್ನು ಹೋಲಿಸುತ್ತಾ ವಿಶ್ವಮಾನವ ಸಂದೇಶ ಹೇಗೆ ಇಬ್ಬರನ್ನೂ ಹತ್ತಿರಕ್ಕೆ ತರುತ್ತದೆ ಎಂದು ವಿವರಿಸಿದರು.ಕುವೆಂಪು  ಅವರ ಕೃತಿಗಳು ಬಂಗಾಳಿ ಭಾಷೆಗೆ ಅನುವಾದ ಆಗಬೇಕು ಎಂದರು.ಅದನ್ನು ಅವರೇ ಮಾಡಲು ಆರಂಭಿಸಬೇಕು ಎನ್ನುವ ಸಲಹೆಯನ್ನು ನಾನು ಕೊಟ್ಟೆ.

ಕರ್ನಾಟಕದಿಂದ ಬಂದ ಎಲ್ಲ ವಿದ್ವಾಂಸರು ಅಚ್ಚುಕಟ್ಟಾಗಿ ಪ್ರಬಂಧಗಳನ್ನು ಸಿದ್ಧಪಡಿಸಿಕೊಂಡು ಬಂದದ್ದು ಒಂದು ಒಳ್ಳೆಯ ಬೆಳವಣಿಗೆ.ಅದರಲ್ಲೂ ಕಲ್ಕ ತ್ತಾದ ಜನರಿಗೆ ಕುವೆಂಪು ಅವರನ್ನು ಪರಿಚಯಿಸಲು ಹೊಸನೋಟಗಳೊಂದಿಗೆ ಇಂಗ್ಲಿಷಿನಲ್ಲಿ ಬರೆದುತಂದದ್ದನ್ನು ಮಂಡಿಸಿದರು.ಮೊದಲ ಗೋಷ್ಟಿಯ ಆರಂಭದ ಪ್ರಬಂಧ ಮಂಡಿಸಿದ ಎಚ್ .ಎಸ.ರಾಘವೇಂದ್ರ ರಾವ್ ಕುವೆಂಪು ಮತ್ತು ಟಾಗೋರ್ ಅವರನ್ನು ಮುಖಾಮುಖಿಯಾಗಿಸಿ ಮಾಡಿದ ಚರ್ಚೆ ಮಹತ್ವದ್ದಾಗಿತ್ತು.ಬಂಗಾಳಿ ಭಾಷೆಯ ಪರಿಚಯ ಇರುವ ರಾಘವೇಂದ್ರ ರಾವ್, ಟಾಗೋರ್ ಕವನಗಳನ್ನು ಬಂಗಾಲಿಯಲ್ಲೇ ವಾಚಿಸಿ ಅವಕ್ಕೆ ಸಂವಾದಿಯಾಗಿ ಕುವೆಂಪು ಕನ್ನಡದಲ್ಲಿ  ಮಾಡಿದ ಅನುವಾದಗಳನ್ನು ಓದಿ ,ಅದಕ್ಕೆ ಪೂರಕವಾಗಿ ರವೀಂದ್ರ ಸಂಗೀತದಲ್ಲಿ ಅದರ ಹಾಡಿನ  ರೂಪವನ್ನು ಕೇಳಿಸಿದ್ದು ತುಂಬಾ ಮೆಚ್ಚುಗೆ ಪಡೆಯಿತು.೧೯೨೪ರಲ್ಲೆ ಟಾಗೋರ್ ಬಗ್ಗೆ ಕುವೆಂಪು ಬರೆದ ಸಾನೆಟ್,ಗೀತಾಂಜಲಿಯ ಕುವೆಂಪು ಅನುವಾದಗಳು,ಜನಪದ ಸಾಹಿತ್ಯದಿಂದ ಟಾಗೋರ್ ಪಡೆದ ಪ್ರೇರಣೆ,ಟಾಗೋರ್ ಅವರ ‘ಚಿತ್ರಾ’ದ ಪ್ರಭಾವದಿಂದ ಕುವೆಂಪು ರಚಿಸಿದ ‘ಚಿತ್ರಾಂಗದಾ’ ,ವಿಶ್ವ ಮಾನವ ಸಂದೇಶದ ಪರಿಕಲ್ಪನೆಯ ಸಾಮ್ಯ -ಹೀಗೆ ಹಲವು ವಿಷಯಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.’ದರ್ಶನ ಎನ್ನುವುದು ಧಾರ್ಮಿಕವೇ ಆಗಿರಬೇಕಾಗಿಲ್ಲ ,ಅದು ಸಾಮಾಜಿಕವೂ  ಆಗಿರಬಹುದು ‘ಎನ್ನುವ ಎಚ್ ಎಸ ಆರ್ ಹೇಳಿಕೆ ಕುವೆಂಪು ಅವರ ಸೆಕ್ಯೂಲರ್ ನಿಲುವಿಗೆ ಪೂರಕವಾಗಿತ್ತು.ತತ್ವಶಾಸ್ತ್ರ ಮತ್ತು ಸಾಹಿತ್ಯದ ಸಂಬಂಧದ ಚರ್ಚೆಯ ಸಂದರ್ಭದಲ್ಲಿ ಅವರು ಎ.ಆರ್.ಕೃಷ್ಣಶಾಸ್ತ್ರಿಗಳು ಕುವೆಂಪು ಅವರಿಗೆ ಹೇಳಿದ ಮಾತನ್ನು ಉಲ್ಲೇಖಿಸಿದರು :’ ನೀವು ಅರವಿಂದರಾಗುವುದು ಬೇಡ ,ನೀವು  ರವೀಂದ್ರರಾಗಿರಿ.’

ಕುವೆಂಪು ಕಾವ್ಯಗಳ ಬಗ್ಗೆ ಸಿ.ನಾಗಣ್ಣ ವಿವರವಾಗಿ ವಿಶ್ಲೇಷಿಸಿದರು .ಬಂಗಾಳದ ನಸೃಲ್ ಇಸ್ಲಾಂ ಅವರ ಉಲ್ಲೇಖ ಮಾಡಿದರು.ಶ್ರೀಸಾಮಾನ್ಯ ಕಲ್ಪನೆ ಸಾಕಾರಗೊಂಡ ಬಗೆ,ಗೊಬ್ಬರದ ಬಗ್ಗೆ ಕವನ ಬರೆದದ್ದು, ,ಕರಿಸಿದ್ದ ಕನ್ನಡ ಕಾವ್ಯದೊಳಗೆ ಪ್ರವೇಶಮಾಡಿದ್ದು ,ಯಂತ್ರರ್ಷಿಯ ನಿರ್ಮಿತಿ -ಹೀಗೆ ಹೊಸ ಕಾವ್ಯ ಸೃಷ್ಟಿಯ ಬಗೆಗಳನ್ನು ವಿವೇಚಿಸಿ ದರು.ರಾಜೇಂದ್ರ ಚೆನ್ನಿ ಕುವೆಂಪು ನಾಟಕಗಳ ಕುರಿತು ಮಾತಾಡುತ್ತಾ ಕುವೆಂಪು ಅವರು ಭಾರತದ ಆಧುನಿಕತೆಗೆ ಮುಖ್ಯ ಕೊಡುಗೆ ಕೊಟ್ಟವರು ಎಂದು ವ್ಯಾಖ್ಯಾನಿಸಿದರು.ಗತಕಾಲದೊಂದಿಗೆ ಮುಖಾಮುಖಿ ಆಗುತ್ತಾ ಅದನ್ನು ವಿಮರ್ಶೆ ಮಾಡುತ್ತಾ ಕುವೆಂಪು ತಮ್ಮ ನಾಟಕಗಳ ಮೂಲಕ ಪುರಾಣಗಳನ್ನು ಹೊಸದಾಗಿ ಬರೆದರು ಎನ್ನುವ ವಿವರಣೆ ಕೊಟ್ಟರು.’ಕುವೆಂಪು ಟಾಗೋರ್ ಗಿಂತ ತುಂಬಾ ದೊಡ್ಡ ಲೇಖಕರು’ ಎಂದು ಬಂಗಾಲಿಗಳ ಮುಂದೆ ಹೇಳುವ ಧೈರ್ಯ ಮಾಡಿದರು.ಓ.ಎಲ್.ನಾಗಭೂಷಣ ಸ್ವಾಮಿ ಅವರು ಕುವೆಂಪು ವಿಮರ್ಶೆ ಮತ್ತು ಕಾವ್ಯಮೀಮಾಸೆಯ ಬಗ್ಗೆ ಹೊಸ ಚಿಂತನೆಯನ್ನು ನಡೆಸಿದರು.ಕುವೆಂಪು ಅವರ ವಿಮರ್ಶೆಯ ಪುಸ್ತಕಗಳ ಶೀರ್ಷಿಕೆಗಳೇ ಅವುಗಳ ಪ್ರಕಟಣೆಯ ಅನುಕ್ರಮಣಿಕೆಯಲ್ಲಿ ಒಂದು ವಿಕಾಸದ ತತ್ವವನ್ನು ಧ್ವನಿಸುತ್ತವೆ ಎನ್ನುವ ಹೊಳಹನ್ನು ಕೊಟ್ಟರು.

ಸಾಹಿತ್ಯಪ್ರಚಾರ,ಕಾವ್ಯವಿಹಾರ,ತಪೋನಂದನ,ವಿಭೂತಿಪೂಜೆ ,ದ್ರೌಪದಿಯ ಶ್ರೀಮುಡಿ,ರಸೋ ವೈ ಸಃ-ಹೀಗೆ ‘ಪ್ರಚಾರ”ವಿಹಾರ’ತಪಸ್ಸು”ಪೂಜೆ”ಶ್ರೀಮುಡಿ”ಅದೇ ರಸ’ : ಇದು ಹಂತ ಹಂತದ ವಿಕಾಸ ಎನ್ನುವುದು ಓ ಎಲ್ ಎನ್ ವಿವರಣೆ.ರಾಷ್ಟ್ರೀಯತೆಯ ಹೊಸ ಪರಿಕಲ್ಪನೆ, ಕನ್ನಡ ಭಾಷೆಯ ಅನನ್ಯತೆ,ಕರ್ನಾಟಕದ ಸಾಂಸ್ಕೃತಿಕ ಏಕೀಕರಣ -ಇವುಗಳಿಗೆ ಕುವೆಂಪು ನೀಡಿದ ಚಿಂತನೆಗಳನ್ನು ಅವರು ವಿವರಿಸಿದರು .ಕೆ.ಎಸ.ಭಗವಾನ್ ಅವರು ಕುವೆಂಪು ಕಾದಂಬರಿಗಳನ್ನು ಪರಿಚಯಿಸುತ್ತಾ ಜಾತಿ ವ್ಯವಸ್ಥೆಯ ಒಳಗಿನ ವರ್ಗ ಹೋರಾಟದ ಸ್ವರೂಪವನ್ನು ಪ್ರಸ್ತಾವಿಸಿದರು.ಟಾಲ್ ಸ್ಟಾಯ್ ಕಾದಂಬರಿಗಳೊಂದಿಗೆ ಹೋಲಿಸಿ ಚರ್ಚಿಸಿದರು. ಪ್ರಧಾನ  ಗುರುದತ್ತ ಅವರು ಕಲ್ಕತ್ತಾ ಶ್ರೋತೃ ಗಳಿಗಾಗಿ ಕುವೆಂಪು ಅವರ ರಾಮಾಯಣ ದರ್ಶನಂ ಬಗ್ಗೆ ಹಿಂದಿಯಲ್ಲಿ ಬರೆದು ತಂದ ತಮ್ಮ ಪ್ರಬಂಧ ವಾಚಿಸಿದರು.ತಾವು ಹಿಂದಿಗೆ ಅನುವಾದಿಸಿದ ಆ ಕಾವ್ಯದ ಭಾಗಗಳನ್ನು ವಾಚಿಸಿದರು.

ಬಹುತೇಕ ಇಂಗ್ಲಿಷಿನಲ್ಲಿ ನಡೆದ ಈ ರಾಷ್ಟ್ರೀಯ  ವಿಚಾರಸಂಕಿರಣದಲ್ಲಿ ಒಂದು ಗೋಷ್ಠಿ ಕನ್ನಡದಲ್ಲಿ ಇತ್ತು.ರಂಗಾಯಣದ ಹೊಸ ನಿರ್ದೇಶಕ ಬಿ.ವಿ.ರಾಜಾರಾಂ ಅವರು ಕುವೆಂಪು ನಾಟಕಗಳ ಬಗ್ಗೆ ವಿವರವಾಗಿ ಮಾತಾಡಿದರು.ಅವುಗಳ ರಂಗಪ್ರಯೋಗಗಳ ಸಾಧ್ಯತೆಗಳು ,ಭಿನ್ನ ಆಯಾಮಗಳು,ಕುವೆಂಪು ಕವನ ಕಾದಂಬರಿ ಆಧಾರಿತ ಇತ್ತೀಚೆಗಿನ ರಂಗ ಪ್ರಯೋಗಗಳು -ಹೀಗೆ ಅನುಭವಪೂರ್ಣ ಮಾಹಿತಿ ಕೊಟ್ಟರು.ಕುವೆಂಪು ಕಾವ್ಯದ ಬಗ್ಗೆ ಮಳಲಿ ವಸಂತಕುಮಾರ್ ಬಸವಣ್ಣ ಮತ್ತು ಕುವೆಂಪು ತೌಲನಿಕ ಚರ್ಚೆ ನಡೆಸಿದರು.ಕವನಗಳನ್ನು ಶಕ್ತಿಯುತವಾಗಿ ವಾಚಿಸಿ ,ಕುವೆಂಪು ಭಾಷೆಯ ಲಯಗಳ ಪರಿಚಯ ಮಾಡಿಕೊಟ್ಟರು.ಹರಿಹರಪ್ರಿಯ ಅವರು ಕುವೆಂಪು ಪತ್ರ ಸಾಹಿತ್ಯವನ್ನು ಅಧಿಕೃತ ದಾಖಲೆಗಳ ಮೂಲಕ ಅನಾವರಣ ಮಾಡಿ ,ಕುವೆಂಪು ಬಗೆಗಿನ ಅನೇಕ ಅಪಕಲ್ಪನೆಗಳನ್ನು ನಿವಾರಿಸಿದರು.ಚಿಕ್ಕಣ್ಣ ಎಣ್ಣೆಕಟ್ಟೆ -ಕುವೆಂಪು ಕಾದಂಬರಿಗಳು ಕರ್ನಾಟಕದಲ್ಲಿ ಸಂಸ್ಕೃತಿಯ ಅಧ್ಯಯನಕ್ಕೆ ಪ್ರೇರಣೆ ಕೊಟ್ಟದ್ದನ್ನು ತಿಳಿಸಿದರು.ಹಿ.ಚಿ.ಬೋರಲಿಂಗಯ್ಯ ‘ಭಾರತೀಯ ಪುರಾಣಗಳ ಪ್ರಕ್ಷೇಪಗಳು ಅನೇಕ ಬಾರಿ ಉದ್ದೇಶ ಪೂರ್ವಕ ಆದುವು.ಕುವೆಂಪು ಅಂತಹ ಕಲ್ಪಿತ ಪುರಾಣಗಳನ್ನು ತಮ್ಮ ನಾಟಕಗಳ ಮೂಲಕ ಒಡೆದು ಹೊಸ ಚಿಂತನೆಗೆ ಅವಕಾಶ ಕಲ್ಪಿಸಿದರು’ ಎನ್ನುವ ವಿವರಣೆ ಕೊಟ್ಟರು.

ಇಡೀ ವಿಚಾರಸಂಕಿರಣದ ಪರಿಕಲ್ಪನೆಯಿಂದ ತೊಡಗಿ ,ಎಲ್ಲ ವಿದ್ವಾಂಸರನ್ನು  ಕಲೆಹಾಕಿ ಬೆಂಗಳೂರು ವಿಮಾನ ನಿಲ್ದಾಣದಿಂದ ವ್ಯವಸ್ಥಿತವಾಗಿ ಒಟ್ಟಾಗಿ ಕರೆದುಕೊಂಡು ಬಂದು ,ಕಲ್ಕತ್ತಾದಲ್ಲಿ ಎಲ್ಲ ಭೌತಿಕ ಸೌಲಭ್ಯ ಕಲ್ಪಿಸಿ.ಎರಡು ದಿನದ ಸಂಕಿರಣದ ಎಲ್ಲ ಉಪನ್ಯಾಸಗಳನ್ನೂ  ಆಲಿಸಿ,ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ,ಕುವೆಂಪು ಬಗ್ಗೆ ಬಂಗಾಳಿಗಳಿಗೆ ಆಸಕ್ತಿ ಕುದುರಿಸಿ,ಲವಲವಿಕೆಯಿಂದ ಓಡಾಡುತ್ತಿದವರು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ,೭೬ರ ಹರೆಯದ ಹಂಪನಾ.ಕೇಂದ್ರ ಸಾಹಿತ್ಯ ಅಕಾಡೆಮಿಯ ಕಲ್ಕತ್ತಾ ಪ್ರಾದೇಶಿಕ ಕಾರ್ಯದರ್ಶಿ ಹಾಗೂ ಬಂಗಾಳಿ ಲೇಖಕ ರಾಮಕುಮಾರ್ ಮುಖೋಪಾಧ್ಯಾಯ ಎರಡೂ ದಿನ ಪಾದರಸದಂತೆ ಓಡಾಡುತ್ತಾ ಅಚ್ಚುಕಟ್ಟಾಗಿ ಪ್ರೀತಿಯಿಂದ ಈ ಕಾರ್ಯಕ್ರಮ ನಡೆಸಿದರು.ಬೆಂಗಳೂರಿನಿಂದ ಬಂದ ಕನ್ನಡ ಬಾಲಕಿ ಶ್ರೇಯಾ ಜೈನ್ ತನ್ನ ಸುಮಧುರ ಕಂಠದಿಂದ ಕುವೆಂಪು ಕವನಗಳನ್ನು ಹಾಡಿ ಎಲ್ಲರನ್ನು ಕುವೆಂಪು ಗುಂಗಿನಲ್ಲಿ ತನ್ಮಯಗೊಳಿಸಿದಳು.

ಈಗ ಬೆಳಗ್ಗೆ ಇಲ್ಲಿ ಕಲ್ಕತ್ತಾದಲ್ಲಿ ಸಣ್ಣಗೆ ಮಳೆ ಬೀಳುತ್ತಿದೆ.ಹಾದಿಬೀದಿಗಳಲ್ಲಿ ಕೆಸರು ತುಂಬಿದೆ.

ಕುವೆಂಪು ಹೆಚ್ಚಾಗಿ ಬರೆದ ಕವನಗಳು ಮೂರು ಬಗೆಯವು: ಪ್ರೇಮ, ಕ್ರಾಂತಿ,ಅನುಭಾವ

ಇವತ್ತು ‘ಪ್ರೇಮ’ವು ‘ಸೆಕ್ಸ್ ”  ಆಗಿದೆ.’ಕ್ರಾಂತಿ’ಯು ‘ಈವೆಂಟ್ ಮೆನೆಜ್ ಮೆಂಟ್ ‘ಆಗಿದೆ.’ಅನುಭಾವ’ವು ‘ಮತೀಯತೆ’ ಆಗಿದೆ.

‘ಆಗು ಆಗು ಆಗು ಆಗು ‘ ಎಂದು ನಮ್ಮ ಚೇತನಗಳಿಗೆ ಗಟ್ಟಿಯಾಗಿ ಹೇಳಿಕೊಳ್ಳಲು ಇಲ್ಲಿದೆ  ಇನ್ನೊಂದು ‘ಶಾಂತಿ ಅನಿಕೇತನ ‘.

* * * * * * * * * *

ಚಿತ್ರಕೃಪೆ : ಕುವೆಂಪು.ಕಾಂ

7 ಟಿಪ್ಪಣಿಗಳು Post a comment
  1. Nataraju
    ಡಿಸೆ 29 2011

    ಕೊಲ್ಕತ್ತಾದಲ್ಲಿದ್ದರು ಆ ಸಮಾರಂಭದ ಬಗ್ಗೆ ಗೊತ್ತಾಗಲೇ ಇಲ್ಲ. ಗೊತ್ತಿದ್ದರೆ ಹೋಗಬಹುದಾಗಿತ್ತು. ಇನ್ನು ಮುಂದೆ ಅಂತಹ ಸಮಾರಂಭಗಳ ಬಗ್ಗೆ ತಿಳಿಸಿ..

    ಉತ್ತರ
  2. ಡಿಸೆ 29 2011

    Thanks for the Info. and for superb article. Kuvempu jannuma dinake . Nillume odugarige..Oleya udugare. – Santhosha vaithu.. Dhanayvadagalu Sir

    ಉತ್ತರ
  3. ಜನ 3 2012

    ತಂತ್ರಜ್ಞಾನ ಬರವಣಿಗೆಯ ತಂತ್ರಾಂಶ ಅಂದಕೂಡಲೇ ನಮಗೆ ತೇಜಸ್ವಿ ನೆನಪಿಗೆ ಬರದಿದ್ದರೆ ಹೇಗೆ? ತೇಜಸ್ವಿ ತಂತ್ರಜ್ಞಾನದ ಬಗ್ಗೆ ತಮಗಿದ್ದ ಪ್ರಭುತ್ವವನ್ನು ಉಪಯೋಗಿಸಿ ಕುವೆಂಪು ಅವರ ಕೈಬರಹದ ರಾಮಾಯಣ ದರ್ಶನಂ ಹೊತ್ತಿಗೆಯನ್ನು ಪ್ರಕಟಿಸಿದ್ದರು. ಈಗಿನ ತಂತ್ರಜ್ಞಾನವನ್ನ ಉಪಯೋಗಿಸು ಕುವೆಂಪು ಅವರ ಕೈಬರಹವನ್ನೇ ಒಂದು ಫಾಂಟನ್ನಾಗಿ ಅವರು ಪರಿವರ್ತಿಸಿದ್ದರು. ಆದರೆ ಆ ಪುಸ್ತಕ ಹೊರಗೆ ಬಂದಾಗ ಕೆಲವು ಅಪಸ್ವರಗಳೂ ಎದ್ದುವು. ಅದೆಂದರೆ, ಇದು ಕುವೆಂಪು ಅವರ ಮೂಲ ಬರವಣಿಗೆಯಲ್ಲ, ಬದಲಿಗೆ ಅವರ ಕೈಬರಹವನ್ನು ಮಾತ್ರ ಬಳಸಿದ ಚಿತ್ತಿಲ್ಲದ ಕೃತಿ ಎಂದು. ಅರ್ಥಾತ್: ಕುವೆಂಪು ಮೂಲ ಕರಡಿನಲ್ಲಿದ್ದ ಎಲ್ಲ ಸುಕ್ಕುಗಳನ್ನೂ ತೆರೆದು ಅವಕ್ಕೆ ಇಸ್ತ್ರಿ ಹಾಕಿ ಈ ಪುಸ್ತಕವನ್ನು ಹೊರತರಲಾಗಿತ್ತು. ಆದರೆ ಜನರಿಗೆ ಆಸಕ್ತಿಯಿದ್ದದ್ದು ಮುದ್ರಣಕ್ಕೆ ಕುವೆಂಪು ಕಳಿಸಿದ ಕರಡು ಹೇಗಿದ್ದಿರಬಹುದು ಅನ್ನುವ ವಿಚಾರದಲ್ಲಿ. ಬದಲಿಗೆ ಅವರಿಗೆ ದೊರೆತದ್ದು ಕುವೆಂಪು ಕೈಬರಹದಲ್ಲಿ ಅಚ್ಚಾದ, ಅದೇ ಹಳೆಯ ಅಚ್ಚಿನ ಮನೆಯ ಕಾವ್ಯವೇ.

    ಉತ್ತರ
  4. ಜನ 3 2012

    ಕನ್ನಡ ಪತ್ರಕರ್ತ, ಲೇಖಕ ಮತ್ತು ಲೋಕ ಪ್ರಸಿದ್ಧ ವಿಜಯ ಕರ್ನಾಟಕದ ವಿಶ್ವ ಪ್ರಸಿದ್ಧ ವಿಶ್ವೇಶ್ವರ ಭಟ್ ಅವರು ಅಂತರಜಾಲ ಕಕ್ಷೆಗೆ ತಮ್ಮನ್ನು ತಾವು ಉಡಾಯಿಸಿಕೊಂಡಿದ್ದಾರೆ. ಅವರದೇ ನಾಮಾಂಕಿತ, ” ವಿಶ್ವೇಶ್ವರ ಭಟ್ ” ವೆಬ್ ಸೈಟು ಆರಂಭವಾಗಿದ್ದು ಕಳೆದ ಮೂರು ದಿನಗಳಿಂದ ಸೈಟು ಸೈಬರ್ ಗಲ್ಲಿಗಳಲ್ಲಿ ಗಿರಗಿರಗಿರ ತಿರುಗಲಾರಂಭಿಸಿದೆ. ಅನೇಕ ಪತ್ರಕರ್ತರು ತಮ್ಮದೇ ಆದ ವೆಬ್ ಸೈಟು ಇಟ್ಟುಕೊಂಡಿದ್ದಾರೆ. ಆದರೆ, ಭಟ್ಟರ ವೆಬ್ ಸೈಟು ತೆರೆದಿರುವುದು ಸುದ್ದಿ ಆಗುತ್ತಿರುವುದು ಏಕೆ ಎಂದು ತಾವು ಕೇಳುವ ಮುನ್ನ, ವೆಬ್ ಸೈಟಿನಲ್ಲಿ ಭಟ್ಟರು ಅವರ ಬಗ್ಗೆ ಅವರೇ ಬರೆದುಕೊಂಡಿರುವ ಅವರ ಪರಿಚಯವನ್ನು ಮೊದಲು ಓದಿಕೊಳ್ಳಿ. ಅದು ಹೀಗಿದೆ.

    ಉತ್ತರ
  5. ಜನ 3 2012

    ತಂತ್ರಜ್ಞಾನ ಬರವಣಿಗೆಯ ತಂತ್ರಾಂಶ ಅಂದಕೂಡಲೇ ನಮಗೆ ತೇಜಸ್ವಿ ನೆನಪಿಗೆ ಬರದಿದ್ದರೆ ಹೇಗೆ? ತೇಜಸ್ವಿ ತಂತ್ರಜ್ಞಾನದ ಬಗ್ಗೆ ತಮಗಿದ್ದ ಪ್ರಭುತ್ವವನ್ನು ಉಪಯೋಗಿಸಿ ಕುವೆಂಪು ಅವರ ಕೈಬರಹದ ರಾಮಾಯಣ ದರ್ಶನಂ ಹೊತ್ತಿಗೆಯನ್ನು ಪ್ರಕಟಿಸಿದ್ದರು. ಈಗಿನ ತಂತ್ರಜ್ಞಾನವನ್ನ ಉಪಯೋಗಿಸು ಕುವೆಂಪು ಅವರ ಕೈಬರಹವನ್ನೇ ಒಂದು ಫಾಂಟನ್ನಾಗಿ ಅವರು ಪರಿವರ್ತಿಸಿದ್ದರು. ಆದರೆ ಆ ಪುಸ್ತಕ ಹೊರಗೆ ಬಂದಾಗ ಕೆಲವು ಅಪಸ್ವರಗಳೂ ಎದ್ದುವು. ಅದೆಂದರೆ, ಇದು ಕುವೆಂಪು ಅವರ ಮೂಲ ಬರವಣಿಗೆಯಲ್ಲ, ಬದಲಿಗೆ ಅವರ ಕೈಬರಹವನ್ನು ಮಾತ್ರ ಬಳಸಿದ ಚಿತ್ತಿಲ್ಲದ ಕೃತಿ ಎಂದು. ಅರ್ಥಾತ್: ಕುವೆಂಪು ಮೂಲ ಕರಡಿನಲ್ಲಿದ್ದ ಎಲ್ಲ ಸುಕ್ಕುಗಳನ್ನೂ ತೆರೆದು ಅವಕ್ಕೆ ಇಸ್ತ್ರಿ ಹಾಕಿ ಈ ಪುಸ್ತಕವನ್ನು ಹೊರತರಲಾಗಿತ್ತು. ಆದರೆ ಜನರಿಗೆ ಆಸಕ್ತಿಯಿದ್ದದ್ದು ಮುದ್ರಣಕ್ಕೆ ಕುವೆಂಪು ಕಳಿಸಿದ ಕರಡು ಹೇಗಿದ್ದಿರಬಹುದು ಅನ್ನುವ ವಿಚಾರದಲ್ಲಿ. ಬದಲಿಗೆ ಅವರಿಗೆ ದೊರೆತದ್ದು ಕುವೆಂಪು ಕೈಬರಹದಲ್ಲಿ ಅಚ್ಚಾದ, ಅದೇ ಹಳೆಯ ಅಚ್ಚಿನ ಮನೆಯ ಕಾವ್ಯವೇ.

    ಉತ್ತರ
  6. jayakumarcsj@gmail.com
    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments