ವಿಷಯದ ವಿವರಗಳಿಗೆ ದಾಟಿರಿ

Archive for

8
ಮೇ

ಡಬ್ಬಿಂಗ್ ಅವಶ್ಯಕವೇ?

 ಡಾ ಅಶೋಕ್. ಕೆ. ಆರ್.

ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.
ಡಬ್ಬಿಂಗ್ ಪರವಾಗಿರುವವರು ವಾದಿಸುವುದೆಂದರೆ ‘ ನಾವು ಗ್ರಾಹಕರು. ಏನು ಪಡೆಯಬೇಕು ಎಂಬುದನ್ನು ನಾವು ನಿರ್ಧರಿಸಬೇಕೆ ಹೊರತು ಚಿತ್ರರಂಗದ ಕೆಲವರಲ್ಲ. ಇತರೆ ರಾಜ್ಯದವರು ತಮ್ಮ ತಮ್ಮ ಮಾತೃಭಾಷೆಯಲ್ಲೇ ಕಾರ್ಟೂನ್, ಡಿಸ್ಕವರಿ, ಪೋಗೋದಂಥಹ ವಾಹಿನಿಗಳನ್ನು, ಆಂಗ್ಲ ಸಿನಿಮಾಗಳನ್ನು ನೋಡುತ್ತಿರುವಾಗ ನಾವ್ಯಾಕೆ ಪರಭಾಷೆಯಲ್ಲೇ ಅವುಗಳನ್ನು ವೀಕ್ಷಿಸಬೇಕು? ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಕನ್ನಡದಲ್ಲಿ ಚಿತ್ರ – ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯದಿಂದ ವಂಚಿತನಾಗಬೇಕೇಕೆ? ಅರ್ಥವಾಗದ ಭಾಷೆಯ ಸಿನಿಮಾಗಳನ್ನು ನೋಡಿ ಅರ್ದಂಬರ್ಧ ತಿಳಿದುಕೊಳ್ಳುವ ಬದಲು ಡಬ್ಬಿಂಗ್ ಮಾಡಿದರೆ ನನ್ನ ಭಾಷೆಯಲ್ಲೇ ನೋಡಿ ಆನಂದಿಸಿ ಸಂಪೂರ್ಣ ಅರಿತುಕೊಳ್ಳುವುದು ಒಳ್ಳೆಯದಲ್ಲವೇ? ತಮಿಳಿನಲ್ಲೇ ಪೋಗೋ ವೀಕ್ಷಿಸುವ ಹುಡುಗನಿಗೆ ತನ್ನ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆಯೇ ಹೊರತು ಅದೇ ಕಾರ್ಯಕ್ರಮಗಳನ್ನು ಇಂಗ್ಲೀಷಿನಲ್ಲಿ ನೋಡುವ ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಬೆಳೆಯಲು ಹೇಗೆ ಸಾಧ್ಯ? ನಮ್ಮ ಹಕ್ಕನ್ನು ಕಸಿದುಕೊಂಡಿರುವ ಚಿತ್ರೋದ್ಯಮದ ಈ ನೀತಿ ಸಂವಿಧಾನಬಾಹಿರ’
ಇನ್ನು ಡಬ್ಬಿಂಗ್ ವಿರೋಧಿಸುವವರು ಮುಂದಿಡುವ ವಾದವೆಂದರೆ ‘ಡಬ್ಬಿಂಗ್ ವಿರೋಧಿ ಚಳುವಳಿಗೆ ದಶಕಗಳ ಇತಿಹಾಸವಿದೆ. ಅನಕೃರಂಥ ಹಿರಿಯ ಲೇಖಕರು ಆರಂಭಿಸಿದ ಈ ಚಳುವಳಿ ರಾಜ್ ಕುಮಾರ್ ರಂಥ ಮೇರು ನಟರ ನೇತೃತ್ವದಲ್ಲಿ ಮುಂದುವರಿದು ಕನ್ನಡ ಚಿತ್ರೋದ್ಯಮದ ಉಳಿವಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧಿಸಲಾಗಿದೆ. ಈ ನಿಷೇಧ ತೆರವುಗೊಳಿಸಿದರೆ ಹೆಚ್ಚು ಬಂಡವಾಳದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಿತ್ತುಕೊಳ್ಳುತ್ತದೆ. ಚಿತ್ರೋದ್ಯಮವನ್ನೇ ಅವಲಂಬಿಸಿದ ಜನರ ಹೊಟ್ಟೆಪಾಡಿಗೆ ಚ್ಯುತಿಯುಂಟಾಗುತ್ತದೆ. ಮೇಲಾಗಿ ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಎಂದಿಗೂ ನಮ್ಮವಲಾಗಲಾರವು ಮತ್ತು ನಮ್ಮ ಕನ್ನಡ ಸಂಸ್ಕೃತಿಯನ್ನು ಅವನತಿಗೆ ದೂಡುತ್ತದೆ’ ಮತ್ತಷ್ಟು ಓದು »
8
ಮೇ

ಡಬ್ಬಿಂಗ್ ಆದರೇನು ಶಿವ, ನಮಗೆ ಬೇಕಾಗಿರುವುದು ಎಂಟರ್ಟೇನ್ಮೆಂಟ್… ಎಂಟರ್ಟೇನ್ಮೆಂಟ್…

-ಶ್ರೀಧರ್ ಜಿ ಬನವಾಸಿ

ಕನ್ನಡಿಗರಿಗೆ ಇದಕ್ಕಿಂತ ದೊಡ್ಡ ದೌಭಾರ್ಗ ಇನ್ನೊಂದಿಲ್ಲ. ಬಿಬಿಸಿ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ನಂತಹ ಜಗತ್ತೇ ಮೆಚ್ಚಿದ ಚಾನೆಲ್ಗಳನ್ನು  ಕರ್ನಾಟಕದಲ್ಲಿದ್ದುಕೊಂಡು ತಮಿಳು,  ತೆಲಗು, ಹಿಂದಿ ಭಾಷೆಯಲ್ಲಿ ನೋಡಬೇಕಾದ ಪರಿಸ್ಥಿತಿ ಮಾತ್ರ ಆಗಿರುವುದು ಕನ್ನಡದದವರ ದುರಂತ. ಈ ದುರಂತದ ಅಧ್ಯಾಯಕ್ಕೆ ಕಾರಣವಾಗಿರುವವರು ಕೂಡ ನಮ್ಮ ಕನ್ನಡಿಗರೇ. ಡಬ್ಬಿಂಗ್ ಸಂಸ್ಕೃತಿ ನಮ್ಮ ಕನ್ನಡಕ್ಕಲ್ಲ ಅಂತ ಹೇಳುವ ಕನ್ನಡ ಚಿತ್ರರಂಗದ ಒಂದು ಪ್ರಭಾವಿ ವರ್ಗ ಒಂದು ರೀತಿಯಲ್ಲಿ ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕನುಸಾರಕ್ಕಾಗಿ ಡಬ್ಬಿಂಗ್ ಬೇಡ ಅನ್ನುವ ಅಸ್ತ್ರವನ್ನು ಇಂದಿಗೂ ತಮ್ಮಲ್ಲಿ ಇಟ್ಟುಕೊಂಡು ಕನ್ನಡ ಚಿತ್ರೋದ್ಯಮದ ಹಾಗೂ ಮನರಂಜನಾ ಟೀವಿ ಉದ್ಯಮದ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದ್ದಾರೆ. ಅಷ್ಟಕ್ಕೂ ಡಬ್ಬಿಂಗ್ ಕನ್ನಡ ಸಂಸ್ಕೃತಿಯಲ್ಲ ಅಂತ ಹೇಳುವವರಿಗೆ, ಮೊದಲು ನಮ್ಮ ಕನ್ನಡ ಸಂಸ್ಕೃತಿ ಏನು ಎಂಬುವನ್ನು ದಯವಿಟ್ಟು ಬಿಡಿಸಿಹೇಳಬೇಕಾಗಿದೆ. ಕನ್ನಡ ಮಣ್ಣಿನ ಸೊಗಡು ಅಂತ ಹೇಳಿಕೊಂಡು ರಿಮೇಕ್ ಚಿತ್ರಗಳು ಹಾಗೂ  ರಿಮೇಕ್ ಧಾರಾವಾಹಿಗಳ ಮೇಲೆ ನೂರಾರು ಕೋಟಿ ರೂಪಾಯಿ ಹರಿದು ಹಾಳಾಗಿ ಕನ್ನಡ ಉದ್ಯಮಶೀಲದ ಬುಡಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವುದು, ಇದರ ಜೊತೆಗೆ ಆಗುತ್ತಿರುವ ಅನ್ಯ ಭಾಷೆಯ ಸಂಸ್ಕೃತಿಯ ಹೇರಿಕೆ ಮಾತ್ರ ಡಬ್ಬಿಂಗ್ ವಿರೋಧಿಸುತ್ತಿರವವರಿಗೆ ಕಾಣುತ್ತಿಲ್ಲ.

ಡಬ್ಬಿಂಗ್ ಬಗ್ಗೆ ಈ ಹಿಂದೆ ಅಂದರೆ ಸುಮಾರು ನಾಲ್ಕು ದಶಕಗಳ ಹಿಂದೆ ದೊಡ್ಡ ಹೋರಾಟವಾಗಿದ್ದು ನಿಜಕ್ಕೂ ಒಪ್ಪುವಂತದ್ದು. ಆಗಿನ ಸಮಯದಲ್ಲಿ ಡಬ್ಬಿಂಗ್ ವಿರುದ್ಧ ಹೋರಾಟ ಆಗಿಲ್ಲದಿದ್ದರೆ ಈಗಿನ ನಮ್ಮ ಕನ್ನಡ ಚಿತ್ರರಂಗವನ್ನು ನಾವು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ ಸಾಧ್ಯ.  ವರನಟ ಡಾ.ರಾಜ್ಕುಮಾರ್ ಸಾರಥ್ಯದಲ್ಲಿ ಕನ್ನಡ ಚಿತ್ರರಂಗ ಹಾಗೂ ಅನಕೃ ಅವರ ನೇತೃತ್ವದಲ್ಲಿ ಸಾಹಿತ್ಯವಲಯ ಒಟ್ಟಾಗಿ ಅಂದು ದೊಡ್ಡ ಹೋರಾಟ ಮಾಡಿದ್ದವು. ಆಗಿನ ಡಬ್ಬಿಂಗ್ ಹೋರಾಟಕ್ಕೆ ನೂರಕ್ಕೆ ನೂರರಷ್ಟು ಅರ್ಥ ಇತ್ತು. ಆಗಿನ ಪರಿಸ್ಥಿತಿ ಕೂಡ ಹೋರಾಟಕ್ಕೆ ಪೂರಕವಾಗಿತ್ತು. ಇದಕ್ಕೆ ನೀಡುವ ಕಾರಣಗಳನ್ನು ಕೂಡ ಪಟ್ಟಿಮಾಡುವುದಾದರೆ,  ಅಂದು ಸಿನಿಮಾ ಹಾಗೂ ಕನ್ನಡ ಸಾಹಿತ್ಯ ಒಂದೇ ನಾಣ್ಯದ ಮುಖಗಳಾಗಿದ್ದವು. ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಸಿನಿಮಾ ಉದ್ಯಮದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿಯೇ ಅಂದಿನ ಕನ್ನಡ ಸಿನಿಮಾಗಳಲ್ಲಿ ದ.ರಾ.ಬೇಂದ್ರೆ, ಶಿವರಾಮಕಾರಂತ, ಕುವೆಂಪು, ತ್ರಿವೇಣಿ, ಅನಕೃ, ತರಾಸು, ಎಸ್.ಎಲ್.ಭೈರಪ್ಪ, ಯು.ಆರ್.ಅನಂತಮೂರ್ತಿ, ಎಂ.ಕೆ.ಇಂದಿರಾ, ಆಲನಳ್ಳಿ ಕೃಷ್ಣ, ಪಿ.ಲಂಕೇಶ್, ರಾಮರಾಯರು, ಗಿರಡ್ಡಿ ಗೋವಿಂದರಾಜು ಇನ್ನು ಹಲವಾರು ಸಾಹಿತಿಗಳ ಕೃತಿಗಳು ಕನ್ನಡ ಸಿನಿಮಾ ಉದ್ಯಮಕ್ಕೆ ಉಸಿರಾಗಿದ್ದವು. ಅಕಸ್ಮಾತ್ ಬೇರೆ ಭಾಷೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಬಿಡುವುದರಿಂದ ಮೂಲ ಕನ್ನಡ ಕೃತಿಗಳನ್ನು ಬಳಸಿಕೊಳ್ಳಲು ಆಗುವ ತೊಡಕನ್ನು ಮನಗಂಡು ಡಬ್ಬಿಂಗ್ಗೆ ಸಾಹಿತ್ಯವಲಯದ ಕಡೆಯಿಂದ ಬೆಂಬಲ ಸಿಕ್ಕಿತ್ತು. ಕನ್ನಡ ಚಿತ್ರರಂಗ ಆಗಿನ್ನೂ ಮದ್ರಾಸ್ ಪ್ರಾಂತ್ಯದಲ್ಲಿ ನೆಲೆಯೂರಿದ್ದರಿಂದ ಕನ್ನಡ ಸಿನಿಮಾಗಳ ನಿರ್ಮಾಣವೇ ದೊಡ್ಡ ಸವಾಲಾಗಿತ್ತು. ವರ್ಷಕ್ಕೆ 40-50 ಕನ್ನಡ ಸಿನಿಮಾಗಳು  ನಿರ್ಮಾಣವಾದರೆ ಹೆಚ್ಚಾಗಿತ್ತು,  ನಿರ್ಮಾಣವಾದ ಈ ಅಷ್ಟೂ ಸಿನಿಮಾಗಳಲ್ಲಿ ಹೆಚ್ಚಿನವರು ಪರಭಾಷಾ ತಂತ್ರಜ್ಞರು,  ನಿರ್ಮಾಪಕ, ನಿರ್ದೇಶಕರಿಗೇನೆ ಹೆಚ್ಚೆಚ್ಚು ಕೆಲಸ ಸಿಗುತ್ತಿತ್ತು. ತಂತ್ರಜ್ಞರಿಗೆ ಅಗಾಧ ಬೆಲೆ ಇದ್ದ ಸಂದರ್ಭದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಸಿನಿಮಾ ತಂತ್ರಗಾರಿಕೆ ಹಾಗೂ ನೈಪುಣ್ಯತೆಯ ವಿಷಯ ಬಂದಾಗ ಕನ್ನಡಿಗರು ಅವಕಾಶ ವಂಚಿತರಾಗಿದ್ದರು. ಅಂದು ಕರ್ನಾಟಕದಲ್ಲಿ ಸಿನಿಮಾಭಾಷೆಯನ್ನು ಕಲಿಸುವಂತಹ ತರಬೇತಿ ಸಂಸ್ಥೆಗಳು, ಸ್ಟುಡಿಯೋಗಳು ಯಾವುವು ಇಲ್ಲಿರಲಿಲ್ಲ.
ಇಂತಹ ಸಂದರ್ಭದಲ್ಲಿ ಕನ್ನಡ ಸಿನಿಮಾ ಉದ್ಯಮವೇ ಪರಭಾಷಾದವರ ಹಿಡಿತಕ್ಕೆ ಬಂದು, ಬೇರೆ ಭಾಷೆಯ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಬಿಡುವಂತಹ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಕನ್ನಡ ಕಲಾವಿದರು ಈ ಬಂಧನ ಹಾಗೂ ತಮ್ಮ ಅಸ್ತ್ತಿತ್ವವನ್ನು ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಅಂದಿತ್ತು. ಇದೆಲ್ಲಾ ಡಬ್ಬಿಂಗ್ ಹೋರಾಟಕ್ಕೆ ಅಂದು ದೊಡ್ಡ ಕಾರಣವಾಗಿತ್ತು. ಆದರೆ ಇಂದು ನಮ್ಮ ಕನ್ನಡ ಚಿತ್ರರಂಗ ಆ ತರಹದ ಪರಿಸ್ಥಿತಿಯನ್ನು ಎದುರಿಸುತ್ತಿದೆಯೇ? ಕನ್ನಡ ಚಿತ್ರರಂಗದಲ್ಲಿ ಇಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಸಿನಿಮಾಗಳು  ನಿರ್ಮಾಣವಾಗುತ್ತಿವೆ. ಇಂದು ತಾಂತ್ರ್ರಿಕವಾಗಿ ಬೇರೆ ಭಾಷೆಯವರಷ್ಟೇ ನಾವು ಮುಂದುವರೆದಿದ್ದೇವೆ. ಸ್ವಂತ ಸ್ಟುಡಿಯೋಗಳಿವೆ, ವರ್ಷಕ್ಕೆ 400 ರಿಂದ 500 ಕೋಟಿ ರೂಪಾಯಿಗಳು ಕನ್ನಡ ಚಿತ್ರರಂಗದಲ್ಲಿ ಒಳ ಹಾಗೂ ಹೊರಹರಿವು ಆಗುತ್ತಿದೆ. ಇದೆಲ್ಲಾ ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಎತ್ತಿಹಿಡಿಯುತ್ತದೆ. ಬೇರೆ ಭಾಷೆಯಲ್ಲೂ  ಇದೇ ಪರಿಸ್ಥಿತಿ ಇದೆ. ಅವರೆಲ್ಲ ಡಬ್ಬಿಂಗ್  ಉದ್ಯಮವನ್ನು ಒಪ್ಪಿಕೊಂಡು ಬದುಕುತ್ತಿಲ್ಲವೇ?

ಮತ್ತಷ್ಟು ಓದು »