ನಮ್ಮ ಇತಿಹಾಸ ನಾವೇ ಬರೆದು ಓದೋದು ಬೇಡವೆ?
– ಚಕ್ರವರ್ತಿ ಸೂಲಿಬೆಲೆ
ಬ್ರಿಟಿಷ್ ಅಧಿಕಾರಿ ಮ್ಯಾಲೆಸನ್ ಈ ದೇಶದ ಜನರನ್ನು ಹುಚ್ಚರು ಅಂತ ಕರೀತಾನೆ. ಏಕೆ ಗೊತ್ತೇನು? ನೇಣು ಶಿಕ್ಷೆಗೆ ಕಳಿಸಿದರೆ ಈ ದೇಶದ ಜನ ಹೆದರೋದಿರಲಿ, ತಾವೇ ನೇಣುಗಂಬದ ಬಳಿ ಧಾವಿಸಿ ನೇಣು ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡುಬಿಡ್ತಾ ಇದ್ದರಂತೆ. ಆದಷ್ಟು ಬೇಗ ನನ್ನ ನೇಣಿಗೇರಿಸಿ ಅಂತ ಗೋಗರಿಯುತ್ತಾ ಇದ್ದರಂತೆ. ಹೀಗೇಕೆಂದು ಪ್ರಶ್ನಿಸಿದಾಗ, ಪುನರ್ಜನ್ಮ ನಂಬೋರು ನಾವು, ಬೇಗ ಹೊರಟರೆ, ಬೇಗ ಮರಳಿ ಬರುತ್ತೇವಲ್ಲ! ಅನ್ನುವ ವಾದ ಮಂಡಿಸುತ್ತಿದ್ದರಂತೆ. ಹೆದರಿಸಬೇಕೆಂದು ನೇಣಿಗೇರಿಸಿದರೆ, ಅದೇ ಪ್ರೇರಣೆಯಾಗುವ ರೀತಿ ಅತೀ ವಿಶಿಷ್ಟವಲ್ಲವೆ? ಅದಕ್ಕೇ ಬ್ರಿಟಿಷರಿಗೆ ಅಷ್ಟೊಂದು ಕೋಪ.
ಮೇ ೧೦ಕ್ಕೆ ೧೮೫೭ರಲ್ಲಿ ಸಂಗ್ರಾಮವೊಂದಕ್ಕೆ ಮುನ್ನುಡಿ ಬರೆಯಲಾಗಿತ್ತು. ಬ್ಯಾರಕ್‌ಪುರದ ಮಂಗಲ್‌ಪಾಂಡೆ ಆಂಗ್ಲ ಪೊಲೀಸ್ ಅಧಿಕಾರಿಯತ್ತ ಗುಂಡು ಸಿಡಿಸಿ, ತಿಂಗಳ ಕೊನೆಯಲ್ಲಿ ಆರಂಭವಾಗಬೇಕಾಗಿದ್ದ ಕ್ರಾಂತಿಗೆ ಆಗಲೇ ಕಿಡಿ ಹಚ್ಚಿಬಿಟ್ಟಿದ್ದ. ಅಲ್ಲಿಂದಾಚೆಗೆ ಮೀರತ್, ದೆಹಲಿಗಳು ಕ್ರಾಂತಿಯ ಕಿಡಿಗೆ ಉರಿದು ಬಿದ್ದವು. ಕಾನ್‌ಪುರ, ಝಾನ್ಸಿಗಳು ಜಯಘೋಷ ಮೊಳಗಿಸಿದವು. ಬಿಹಾರ ಕುದಿಯಿತು. ದಕ್ಷಿಣದಲ್ಲೂ ಬ್ರಿಟಿಷರ ಬುಡಕ್ಕೆ ಬಲವಾದ ಪೆಟ್ಟು ಬಿತ್ತು. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ, ಇತಿಹಾಸದ ಹಾದಿ ಬೇರೆಯೇ ಇರುತ್ತಿತ್ತು. ಆ ವೇಳೆಗೆ ಆಂಗ್ಲರೊಟ್ಟಿಗೆ ಕಾದಾಡಿ ಹೈರಾಣಾಗಿದ್ದ ಸಿಕ್ಖರು ಭಾರತೀಯ ಸೈನಿಕರ ಬೆಂಬಲಕ್ಕೆ ಬರಲಿಲ್ಲ. ಅಯ್ಯೋ ಪಾಪ! ಅನ್ನುವ ಕೆಲವಷ್ಟು ಜನ ಆಂಗ್ಲ ಅಧಿಕಾರಿಗಳಿಗೆ ಉಳಿದುಕೊಳ್ಳುವ ಮಾರ್ಗ ತೋರಿದರು. ಅಂತೂ ಮಹಾಯುದ್ಧವೊಂದರಲ್ಲಿ ನಾವು ಸೋತಿದ್ದೆವು.