ದೀಪ ಭಾಗ -೩
-ವಿಜಯ ಹೂಗಾರ್
ಸೂರ್ಯ ನೆತ್ತಿಯಿಂದ ಇನ್ನೊಂದೆಡೆಗೆ ವಾಲುತ್ತಿದ್ದ.ಮನೆಯೊಳಗಿನ ಪೂಜೆ ಮುಗಿಸಿ ಎಂದಿನಂತೆ ಬೆಟ್ಟದ ಮೇಲಿರುವ ಲಕ್ಷ್ಮಿ ದೇವರ ಕಡೆಗೆ ಹೋಗಲು ನೈವಿದ್ಯದ ತಟ್ಟೆ ಸಿದ್ಧಪದಿಸುತ್ತಿದ್ದಳು.ಇಷ್ಟೊತ್ತಿಗೆ ಮೈದುನ ಸೂರಪ್ಪನ ಹೆಂಡತಿ ಗಿರಿಜಕ್ಕ ಪೂಜೆ ಮಾಡಿ ದೀಪ ಹಚ್ಚಿ ಬಂದಿರುತ್ತಾಳೆ ಅಂತ ಬೆಟ್ಟದ ಮೇಲಿರುವ ದೇವಸ್ಥಾನದ ಕಡೆ ಉರಿಬಿಸಿಲಲ್ಲಿ ಹೆಜ್ಜೆ ಹಾಕತೊಡಗಿದಳು.ನೂರಾಹನ್ನೊಂದು ಮೆಟ್ಟಿಲು ಏರಿದ ಮೇಲೆ ತುಂಡಿನಂತೆ ಬರುವ ಮಟ್ಟಸ ನೆಲದ ಮೇಲೆ ದೇವಸ್ಥಾನ ಕಟ್ಟಲಾಗಿತ್ತು.ಶಾಂತವಾಗಿ ತಂಗಾಳಿ ಸುಸುತ್ತಿರುವ ದೇವಸ್ಥಾನದಲ್ಲಿ ಊರ ಗೌಡರು ಮತ್ತು ಗಿರಿಜಕ್ಕ ಗುಸು ಗುಸು ಮಾತಾಡುವದು ಕೇಳಿ ಕಮಲಜ್ಜಿ ಬೆಚ್ಚಿದಳು.ಇವಳು ಒಳ ನಡೆದಳು.ಅವರು ಸುಮ್ಮನಾದರು.ಗರ್ಭ ಗುಡಿಯೊಳಗೆ ಸೇರಿದಳು .ಗಾಳಿಯ ಆಟಕ್ಕೆ ಆಡುವಂತೆ ನೀಲಾಂಜನ ಕುಣಿಯುತಿತ್ತು,ನಿನ್ನ ಕೈಗೆ ಸಿಗೋದಿಲ್ಲ ಅಂತ ಅಣುಕಿಸಿದಂತೆ.”ಸರದಿಯ ಪ್ರಕಾರ ನಿನಗೆ ದೀಪ ಹಚ್ಚುವ ಅವಕಾಶ ನಮಗೆ ಮಾಡಿ ಕೊಡು” ಅಂತ ದೇವರಿಗೆ ಅಧಿಕೃತವಾಗಿ ಬೇಡಿಕೊಂಡು ಹೊರಗೆ ಬಂದಳು.ಇನ್ನೇನು ಹೋಗಬೇಕು ಅನ್ನೋಷ್ಟರಲ್ಲಿ ಭೂಮಂಡಲದಂತಿರುವ ಹೊಟ್ಟೆಯ ಮೇಲೆ ಕೈ ಆಡಿಸುತ್ತ ಊರ ಗೌಡ ‘ಕಮಲಜ್ಜಿ ನಿಮ್ ಮಗ ರಾಮಪ್ಪನಿಗೆ ಊರಿಂದ ಕರೆಸು,ಅವನ ಜೊತೆ ಮಾತಾಡೋದಿದೆ’ ಅಂತ ಗೌಡರ ಉಗ್ಗಂಡ ಧ್ವನಿಯಲ್ಲೇ ಹೇಳಿದ.ಪರಕಿವಿಯಿಂದ ಆಲಿಸುವಂತೆ ಕೇಳಿ ಮನೆಕಡೆಗೆ ಧಾವಿಸಿದಳು.ಗಿರಿಜಕ್ಕ ಮಾಡುತ್ತಿರುವ ಹುನ್ನಾರ ಕಮಲಜ್ಜಿಗೆ ತುಸು ಅರ್ಥವಾಗತೊಡಗಿತು.ಸರದಿಯ ಪ್ರಕಾರ ನಾವು ಮಾಡಬೇಕಿದ್ದ ಪೂಜೆ ಹೇಗೋ ಗೌಡರನ್ನ ತನ್ನ ಬಲೆಗೆ ಸಿಲುಕಿಸಿ ಲಪಟಾಯಿಸಬೇಕೆನ್ನುವದು ಸ್ಪಷ್ಟವಾಗತೊಡಗಿತು.