ವೈಜ್ಞಾನಿಕ ಮನೋಧರ್ಮ ಉಳ್ಳ ಶ್ರೀಸಾಮಾನ್ಯ
-ಎ.ವಿ.ಜಿ ರಾವ್
ಶಾಲೆಗೇ ಹೊಗದಿರುವ ಶ್ರೀಸಾಮಾನ್ಯನೂ ವಿಜ್ಞಾನ ಪದವೀಧರನಿಗಿಂತ ಹೆಚ್ಚು ವೈಜ್ಞಾನಿಕ ಮನೋಧರ್ಮ ಉಳ್ಳವನಾಗಿರುವುದು ಸಾಧ್ಯ. ವೈಜ್ಞಾನಿಕ ಮನೋಧರ್ಮ ಅಂದರೇನು ಅನ್ನುವುದರ ಕುರಿತು ಪಾಂಡಿತ್ಯಪೂರ್ಣ ಪ್ರವಚನ ನೀಡಬಲ್ಲವರು, ವೈಜ್ಞಾನಿಕ ಸಂಶೋಧನೆ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ‘ವೃತ್ತಿಪರ’ ವಿಜ್ಞಾನಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ವೈಜ್ಞಾನಿಕ ಮನೋಧರ್ಮ ಪ್ರದರ್ಶಿಸದಿರುವ ಅಸಂಖ್ಯ ನಿದರ್ಶನಗಳು ಲಭಿಸುತ್ತವೆ. ವೈಜ್ಞಾನಿಕ ಮನೋಧರ್ಮ ಅಂದರೇನು ಎಂಬುದನ್ನು ತಿಳಿಯದೆಯೂ (ನೋಡಿ:ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು) ವಿಜ್ಞಾನದ ಗಂಧಗಾಳಿ ಇಲ್ಲದೆಯೂ ನಿತ್ಯಜೀವನದಲ್ಲಿ ವೈಜ್ಞಾನಿಕ ಮನೋಧರ್ಮ ಉಳ್ಳವರಾಗಿರುವುದು ಸಾಧ್ಯ.
ಈ ಮುಂದೆ ವಿವರಿಸಿರುವ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವೂ ವೈಜ್ಞಾನಿಕ ಮನೋಧರ್ಮ ಉಳ್ಳವರು. ಇಲ್ಲದೇ ಇದ್ದರೆ ಅವನ್ನು ಪ್ರಜ್ಞಾಪೂರ್ವಕವಾಗಿ ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ, ಮುಂದೊಂದು ದಿನ ನಿಮಗರಿವಿಲ್ಲದೆಯೇ ವೈಜ್ಞಾನಿಕ ಮನೋಧರ್ಮ ಉಳ್ಳವರು ನೀವಾಗಿರುತ್ತೀರಿ.
ಈ ಮುಂದಿನ ಕಾಲ್ಪನಿಕ ವಿದ್ಯಮಾನದ ನಿದರ್ಶನದಲ್ಲಿ ವರ್ಣಿಸಿದ ವ್ಯಕ್ತಿ ನೀವಾಗಿರಬಹುದೇ—–