ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು …
– ಎಸ್.ಎನ್ ಭಾಸ್ಕರ್
ಸರಿಸುಮಾರು ೧೦೦ ಕೆ.ಜಿಗೆ ತೂಗುವ ಆತನ ಮೈಯೆಲ್ಲಾ ವಿಭೂತಿಮಯ. ಕೊರಳಿನಿಂದ ಹೊಟ್ಟೆಯ ಹೊಕ್ಕುಳನ್ನು ತಾಕುವಷ್ಟು ಉದ್ದದ ಹಲವು ರುದ್ರಾಕ್ಷಿ ಮಾಲೆಗಳು. ಎತ್ತರದ ಆಕರ್ಷಕ ಆಸನದ ಮೇಲೆ ಪ್ರತಿಷ್ಟಾಪಿಸಲ್ಪಟ್ಟಿರುವ ವ್ಯಕ್ತಿಯ ಬಾಯಲ್ಲಿ ಅನಿಯಮಿತವಾಗಿ ಬರುತ್ತಿರುವ ಹಿತೋಪದೇಷಗಳು.
ಅಲ್ಲೆಲ್ಲೋ ಒಂದು ಗುಹೆ, ಅದರಲ್ಲಿದೆ ಅಚ್ಚರಿಯ ಕಲ್ಲು, ಮುಟ್ಟಿದರೆ ನಿಮ್ಮ ಪಾಪವೆಲ್ಲಾ ಮಾಯ….ಮತ್ತಿನ್ನಲ್ಲೋ ಇದೆ ಒಂದು ಕೆರೆ ಅದರ ನೀರಿನಲ್ಲಿ ಮಿಂದೆದ್ದರೆ ನಿಮ್ಮ ಕಷ್ಟ ಕಾರ್ಪಣ್ಯ ಅಷ್ಟ ದರಿದ್ರಗಳಿಗೂ ವಿರಾಮ.. ಹೀಗೂ ಉಂಟೇ..????
ಮುಂದೆ ಕಾದಿದೆ…..ಬರಲಿದೆ ಭೀಕರ ಪ್ರಳಯ, ಇದರಿಂದ ಜಗತ್ತು ಸರ್ವನಾಷ. ಅಲ್ಲೋಲ-ಕಲ್ಲೋಲ ಎಬ್ಬಿಸಲಿದೆ ಸುನಾಮಿ..ಇಡೀ ವಿಶ್ವವೇ ಮುಳಗಲಿದೆ ಸಮುದ್ರದಲ್ಲಿ..
ಕ್ಷಮಿಸಿ… ಇವೆಲ್ಲಾ ನಮ್ಮ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವಂತ ಕಾರ್ಯಕ್ರಮಗಳ ಒಂದು ಪಕ್ಷಿನೋಟ. ಇಂದು ಹುಟ್ಟಿಕೊಂಡಿರುವ ಟಿ.ವಿ ದೃಶ್ಯ ಮಾಧ್ಯಮಗಳ ಲೆಕ್ಕ ಬೆಳೆಯುತ್ತಲೇ ಇದೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಈ ಮಾದ್ಯಮಗಳಿಗೆ ಯಾವುದೇ ಬೇಲಿಯೇ ಇದ್ದಂತಿಲ್ಲ. ಟಿ.ವಿ೯, ಟಿವಿ೫, ನ್ಯೂಸ್೯, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಆ ಟಿವಿ, ಈ ಟಿವಿ. ಇತ್ಯಾದಿ..ಇತ್ಯಾದಿ..೨೪ ಘಂಟೆಗಳ ನಿರಂತರ ಸುದ್ದಿಪ್ರಸಾರಕ್ಕಾಗಿ ಈ ಚಾನೆಲ್ಗಳು ಮೀಸಲು. ಅದೆಂತಹ ಸುದ್ದಿಯೇ ಆಗಿರಬಹುದು ಅಥವಾ ಅಸಲು ಸುದ್ದಿಯೇ ಅಲ್ಲದಿರಬಹುದು, ಒಟ್ಟಿನಲ್ಲಿ ಹೇಳಲಿಕ್ಕೊಂದು ವಿಷಯ, ಬಿತ್ತರಿಸಲೊಂದು ಮಾಧ್ಯಮ, ನೋಡಲಿಕ್ಕೆಂದು ಪ್ರೇಕ್ಷಕರು…