ಐಪಿಎಲ್ 5 – ಈ ದುರಂತಕ್ಕೆ ಏನ್ ಅಂತೀರಿ?
– ಗಣೇಶ್ ಕೆ. ದಾವಣಗೆರೆ
ಆತ ಎಂಜಿನಿಯರಿಂಗ್ ಕಾಲೇಜು ಹುಡುಗ. ಕಾಲೇಜು ಫೀಸ್ ಕಟ್ಟು ಅಂತಾ 50,000 ಕೊಟ್ಟರು. ಆದರೆ, ಆತ ಐಪಿಎಲ್ ಬೆಟ್ಟಿಂಗ್ ಆಡಿ ಐವತ್ತನ್ನ ಲಕ್ಷ ಮಾಡಿಕೊಂಡರೆ ಹೇಗೆ ಅಂತಾ ಯೋಚಿಸಿ, ಬೆಟ್ಟಿಂಗೆ ಕಟ್ಟಿದ. ಪರಿಣಾಮ? ಅವರಪ್ಪ ಕಷ್ಟಪಟ್ಟು ವರ್ಷವೆಲ್ಲ ದುಡಿದ 50,000 ಯಾವನದೋ ಪಾಲಾಯಿತು. ಅವರ ಅಪ್ಪ ಅಮ್ಮ ಈಗ ಗೋಳಾಡ್ತಾ ಇದಾರೆ. ಇದು ನಾನು ಕಣ್ಣಾರೆ ಕಂಡ ಸತ್ಯ ಘಟನೆ.
ಒಂದೇ ಒಂದು ಬಾರಿ ಹುಡುಗರ ಪಿಜಿಗಳು, ಕಾಲೇಜು ಬಾಯ್ಸ್ ಹಾಸ್ಟೆಲ್ ಗಳು, ನಾಲ್ಕು ಜನ ಸೇರುವ ವೃತ್ತಗಳು ಎಲ್ಲವನ್ನ ಒಮ್ಮೆ ಅಡ್ಡಾಡಿ ಬನ್ನಿ. ನಿಮಿಷ ನಿಮಿಷಕ್ಕೂ ಬೆಟ್ಟಿಂಗ್. ಐನೂರಕ್ಕೆ D ಅನ್ನೋ ಕೋಡ್ ವರ್ಡ್. ಸಾವಿರಕ್ಕೆ S ಅನ್ನೋ ಕೋಡ್ ವರ್ಡ್. 1 D ಅಂದ್ರೆ 500. 2 D ಅಂದ್ರೆ 1000, 1 S ಅಂದ್ರೆ 1000. 2 S ಅಂದ್ರೆ 2000 ಹಿಂಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರಲ್ಲೂ ಫ್ಯಾನ್ಸಿ ಅನ್ನೋ ಆಟ ಬೇರೆ ಇದೆ. ಪ್ರತಿ ಬಾಲ್ ಮೇಲೆ ಬೆಟ್ಟಿಂಗ್. ಈ ಬಾಲ್ ಫೋರ್ ಹೋಗುತ್ತೆ. ಬೆಟ್ ಕಟ್ತೀಯಾ? ಹಳ್ಳಿಯಲ್ಲಿ ಕೂತಿರುವ ಬುಕ್ಕಿಯ ದನಿ. ಈತ ಇಲ್ಲಿಂದ 2 S ಅಂದ್ರೆ ಎರಡು ಸಾವಿರ ಬೆಟ್ಟಿಂಗ್. ಬಂತು ಅಂದ್ರೆ 4000. ಹೋಯ್ತು ಅಂದ್ರೆ 2000 ಖತಂ. ಸುಮ್ನೆ ಒಂದು ಆಟ ಆಡಿ ರೊಕ್ಕ ಮಾಡಿಕೊಂಡು ಹೋಗುವಂತಿಲ್ಲ. ಸೀಸನ್ ಮುಗಿಯುವವರೆಗೂ ಆಡಬೇಕು. ಹೊಸಬರಾದರೆ 50,000 ಠೇವಣಿ ಕೂಡಾ ಇಡಬೇಕು. ಅಮೇಲೆ ಆಟ.
ಇಷ್ಟೆಲ್ಲಾ ಮಾತುಕತೆಗಳು ನಾಲ್ಕೈದು ಸೆಕೆಂಡುಗಳಲ್ಲಿ ಆಗುವಂಥದ್ದು. ಬುಕ್ಕಿಗಳು ಜಾಸ್ತಿ ಹೊತ್ತು ಮಾತಾಡಲ್ಲ. ನಿರ್ಧರಿಸಲು ನಿಮಿಷಗಟ್ಲೇ ಟೈಮ್ ಕೂಡಾ ಕೊಡಲ್ಲ. ಬರೀ Guess work ಮೇಲೆ ಹೌದು ಇಲ್ಲಾ ಅನ್ಬೇಕು.