ಕಾನೂನಿನಂಗಳ ೩ : ವ್ಯವಹಾರಧರ್ಮ ಮತ್ತು ರಾಜಧರ್ಮ
– ಉಷಾ ಐನಕೈ ಶಿರಸಿ
ಭಾರತೀಯ ಸಂಸ್ಕೃತಿಯಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಕಾನೂನುಗಳು ಅಸ್ತಿತ್ವದಲ್ಲಿತ್ತು ಎಂಬ ಬಗ್ಗೆ ಹಲವಾರು ಆಧಾರಗಳು ಸಿಗುತ್ತವೆ. ಶ್ರುತಿ, ಸ್ಮೃತಿ, ಧರ್ಮ, ಸಂಪ್ರದಾಯ ಪದ್ಧತಿ ಎಲ್ಲವೂ ಕಾನೂನಿನಂತೆ ಕೆಲಸ ಮಾಡಿ ಸಮಾಜವು ಸುಸ್ಥಿತಿ ಯಲ್ಲಿ ನಡೆಯಲು ಸಹಾಯಕವಾಗಿದ್ದವು. ಇವು ಗಳಲ್ಲಿ ಕೆಲವು ಲಿಖಿತವಾಗಿ ಇನ್ನೂ ಕೆಲವು ಅಲಿಖಿತ ವಾಗಿ ನಮಗೆ ಗೋಚರವಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆಧುನಿಕ ಕಾನೂನುಗಳ ಎಲ್ಲ ಅಂಶಗಳೂ ಪರೋಕ್ಷವಾಗಿ ಭಾರತೀಯದ್ದಾಗಿ ನಮ್ಮ ಸಂಸ್ಕೃತಿಯಲ್ಲಿ ನೆಲೆಗೊಂಡಿತ್ತು.
ಮುಖ್ಯವಾಗಿ ‘ಧರ್ಮ’ ಭಾರತೀಯ ಮನುಷ್ಯರನ್ನು ನಿಯಂತ್ರಿಸುತ್ತಿತ್ತು. ಧರ್ಮ ಅಂದರೆ ಗುಣ, ನಿಜವಾದ ಯಾವುದರಲ್ಲಿ ಯಾವುದು ಇರಬೇಕೋ ಅದೇ ಧರ್ಮ. ಇದು ಸಾಮರಸ್ಯಗೊಳ್ಳುವುದು ಹೇಗೆ? ಅದೇ ಧರ್ಮದ ಶಕ್ತಿ. ಕಾಮ, ಕ್ರೋಧ, ಮೋಹ, ಮದ ಲೋಭ, ಮಾತ್ಸರ್ಯ ಈ ಅರಿಷಡ್ವರ್ಗಗಳನ್ನು ಗೆಲ್ಲದೇ ಮೋಕ್ಷ ಸಾಧ್ಯವಿಲ್ಲ ಎಂಬುದು ನಮ್ಮ ಪ್ರಾಚೀನ ಪರಂಪರೆಯ ನಂಬಿಕೆಯಾಗಿತ್ತು. ಮೋಕ್ಷ ಎಂದರೆ ಒಂದು ಆದರ್ಶ. ಒಂದು ಅಪವಾದವಿಲ್ಲದ ಸ್ಥಿತಿ. ಆ ಕಾರಣಕ್ಕಾಗೇ ಧರ್ಮ ಮನುಷ್ಯನನ್ನು ಮೋಕ್ಷದೆಡೆಗೆ ಮುಖ ಮಾಡಿ ಸುತ್ತಿತ್ತು. ಈ ಮೋಕ್ಷವನ್ನು ಸಾಧಿಸುವ ಮಾರ್ಗದಲ್ಲೇ ಮನುಷ್ಯ ತನಗೆ ತಾನೇ ಹಲವಾರು ಕಟ್ಟು ಪಾಡುಗಳಿಗೆ ಬದ್ಧನಾಗುತ್ತಿದ್ದ. ಸನ್ನಡ ತೆಗೆ ಪ್ರಾಮುಖ್ಯತೆ ಕೊಡುತ್ತಿದ್ದ. ಹೀಗೇ ತಮಗೆ ತಾವೇ ಸ್ವಯಂ ಆರೋಪಿಸಿಕೊಳ್ಳುವ ಕಾನೂನು ಎಂದರೆ ಧರ್ಮ.
ಆಚಾರ, ವ್ಯವಹಾರ, ಪ್ರಾಯಶ್ಚಿತ ಈ ಮೂರು ಅಂಶಗಳು ಸ್ಮೃತಿಗಳಲ್ಲಿ ವಿಶ್ಲೇಷಿಸಲ್ಪಡುತ್ತವೆ. ಆಚಾರ ಎಂದರೆ ಮನುಷ್ಯನ ನಡೆ-ನುಡಿ ಹಾಗೂ ಬದುಕಿನ ರೀತಿ ಅಥವಾ ಬದುಕಿನ ನಡಾವಳಿಕೆ. ಒಂದು ಒಳ್ಳೆಯ ನಡವಳಿಕೆ ನಮ್ಮ ಬದುಕಿನಲ್ಲಿ ಇರಬೇಕು ಎಂದರೆ ನಮ್ಮ ಬದುಕಿನ ನಡೆ ಒಂದು ಸುಸಂಬದ್ಧವಾದ ಚೌಕಟ್ಟಿ ನಲ್ಲಿರಬೇಕು. ಈ ಚೌಕಟ್ಟನ್ನು ನಿರ್ಧರಿಸುವುದೇ ಆಚಾರ. ವ್ಯವಹಾರ ಎಂದರೆ ನಮ್ಮ ದಿನನಿತ್ಯದ ಬದುಕಿನ ರೀತಿ. ನಾವು ಹೇಗೆ ಬದುಕಬೇಕು, ನಮ್ಮ ಹಾಗೂ ಇತರರ ಸಂಬಂಧ ಹೇಗಿರಬೇಕು, ಎರಡು ವ್ಯಕ್ತಿಗಳ ನಡುವಿನ ಹಕ್ಕು-ಭಾದ್ಯತೆಗಳು ಮುಂತಾದವುಗಳೆಲ್ಲ ವ್ಯವಹಾರ ನಿರ್ಧರಿಸುತ್ತದೆ. ಪ್ರಾಯಶ್ಚಿತ ಅಂದರೆ ನಾವು ಮಾಡಿದ ತಪ್ಪಿಗೆ, ಅಪರಾಧಕ್ಕೆ ನಾವೇ ಪಶ್ಚಾತ್ತಾಪಕ್ಕೊಳಪಟ್ಟುಕೊಳ್ಳುವುದು ಅಥವಾ ಶಿಕ್ಷೆಗೊಳಪಟ್ಟುಕೊಳ್ಳುವುದು. ಇದು ಒಂದು ರೀತಿಯ ಆತ್ಮ ಸಾಕ್ಷಾತ್ಕಾರ ಇದ್ದಂತೆ. ಹೀಗೆ ಆಚಾರ, ವ್ಯವಹಾರ, ಪ್ರಾಯಶ್ಚಿತ ಅನ್ನುವುದು ಒಂದು ರೀತಿಯ ಹೇರಲ್ಪಟ್ಟ ಕಾನೂನುಗಳಲ್ಲ. ಧರ್ಮದ ಹೆಸರಿನಲ್ಲಿ ಮನುಷ್ಯ ಸ್ವಯಂ ಅನುಸರಿಸುವ ನೀತಿಗಳು. ಇವೇ ನಿಜವಾದ ಕಾನೂನಿನ ಮೂಲಗಳು.
ಮನುಸ್ಮೃತಿಯಲ್ಲಿ ಹೀಗೊಂದು ಶ್ಲೋಕ ಬರುತ್ತದೆ.
ವಾಗ್ದಂಡೋಥ ಮನೋದಂಡಃ ಕಾಯದಂಡಸತಚೇನಚ
ಯಸೈತ ನಿಹಿತಾ ಬ್ರಹ್ಮಾ ತ್ರಿದಂಡೇತಿ ಸ ಉಚ್ಯತೆ
ತ್ರಿದಂಡ ಮೇತ ನಿಕ್ಷೆಪ್ಯ ಸರ್ವಭೂತೇಷು ಮಾನವಃ
ಕಾಮ ಕ್ರೋಧಾ ತು ಸಂಯಸ್ಯ ತತಃ ಸಿದ್ಧಿ ನಿಯಚ್ಛತೆ
ಮನಸ್ಸು ಮರ್ಕಟವಿದ್ದಂತೆ. ಮನಸ್ಸನ್ನು ಹರಿ ಬಿಟ್ಟರೆ ಎಲ್ಲಿಂದೆಲ್ಲಿಗೋ ಹೋಗುತ್ತದೆ. ಏನೆಲ್ಲಾ ಯೋಚಿಸುತ್ತದೆ. ಮನಸ್ಸಿನ ಓಟವನ್ನು ಹಿಡಿದಿಡುವ ಶಕ್ತಿ ನಮಗೆ ಬೇಕು. ಆದ್ದರಿಂದ ಯೋಚನೆಗೆ ಕಡಿವಾಣ ಹಾಕುವ ಪರಿಯೇ ಮನೋದಂಡ. ಚಂಚಲ ಮನಸ್ಸಿನಂತೆ ಮಾತೂ ಕೂಡಾ ಅಪಾಯಕಾರಿ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆಯಂತೆ ಮಾತಿಗೊಂದು ಅರ್ಥ ಇರಬೇಕು. ನಾವು ಏನನ್ನು ಹೇಳುತ್ತಿದ್ದೇವೆ, ಅದು ಎದುರಿಗಿನವರಿಗೆ ಯಾವ ಪರಿಣಾಮ ಮಾಡ ಬಹುದು, ಆಡುವ ಮಾತು ನಮ್ಮನ್ನೂ ಮೀರಿ ಬೇರೆಯೇ ಧ್ವನಿಬಹುದೇ ಎಂಬಿತ್ಯಾದಿ ಪ್ರಜ್ಞೆ ಇರ ಬೇಕು. ಮಾತಿನ ಮೇಲೆ ಈ ರೀತಿಯ ಹಿಡಿತ ಸಾಧಿಸುವುದೇ ವಾಗ್ದಂಡ. ಅದೇ ರೀತಿ ನಮ್ಮ ಇಡೀ ಭೌತಿಕ ಶರೀರದ ಮೇಲೆ ನಿಯಂತ್ರಣ ಇರಬೇಕು. ಇದನ್ನೇ ದೇಹದ ಭಾಷೆ ಎನ್ನುವುದು. ಅನೇಕ ಸಾರಿ ಈ ದೇಹದ ಭಾಷೆಯೇ ಸಂವಹನದ ಮಾಧ್ಯಮದಂತೆ ಕೆಲಸ ಮಾಡುತ್ತದೆ. ಚಂಚಲ ಮನಸ್ಸಿನಿಂದ ಪ್ರೇರಿತವಾದ ದೇಹ ಏನೆಲ್ಲಾ ಅನಾಹುತಗಳನ್ನು ಅವಗಡಗಳನ್ನು ಮಾಡಬಹುದು. ಯಾರು ಧರ್ಮವಂತರೋ, ಯೋಗ, ಧ್ಯಾನ ವ್ರತ ಆಚರಣೆಗಳಿಂದ ಪಕ್ವರಾಗಿರುತ್ತಾರೋ ಅವರು ಮಾತ್ರ ಇಡೀ ದೇಹದ ನಿಯಂತ್ರಣ ಸಾಧಿಸಲು ಸಾಧ್ಯ. ಇದನ್ನೇ ಕಾಯದಂಡ ಎನ್ನುವುದು. ಈ ಮನಸ್ಸು, ಮಾತು, ದೇಹದ ನಿಯಂತ್ರಣವನ್ನು ‘ತ್ರಿದಂಡೇತಿ’ ಎನ್ನುತ್ತಾರೆ. ಪ್ರತಿಯೊಂದು ಅಪರಾಧಗಳ ಹಿಂದೆ ನಮ್ಮ ಮನಸ್ಸು ಮಾತು ಹಾಗೂ ದೇಹದ ಕ್ರಿಯೆ ಕೆಲಸ ಮಾಡುತ್ತದೆ. ಇವುಗಳನ್ನು ಹತೋಟಿಯಲ್ಲಿಡುವ ಮೇಲಿನ ಅಂಶಗಳು ಪರೋಕ್ಷವಾದ ಕಾನೂನುಗಳೇ.
ಹೀಗೇ ನಮ್ಮ ಎಲ್ಲಾ ಸ್ಮೃತಿಗಳು ಮೇಲ್ನೋಟಕ್ಕೆ ತಾತ್ವಿಕ ಜಿಜ್ಞಾಸೆ ಎನಿಸಿದರೂ ಇದೊಂದು ರೀತಿಯ ಸರಳವಾದ, ಸುಲಭವಾದ ಮನುಕುಲದ ನೀತಿಗಳು. ಅಂದರೆ ನಮ್ಮ ಆಧುನಿಕ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳಲ್ಲಿ ಉಲ್ಲೇಖಿಸುವ ಎಲ್ಲ ಅಂಶಗಳನ್ನು ಇಲ್ಲಿ ಕಾಣಬಹುದು. ಇನ್ನೊಬ್ಬನನ್ನು ಅವಮಾನಗೊಳಿಸುವ, ಮೋಸಗೊಳಿಸುವ, ನೋವುಂಟು ಮಾಡುವ, ದೈಹಿಕವಾಗಿ ಹಲ್ಲೆ ಮಾಡುವ ಇತ್ಯಾದಿ ಅನೇಕ ಅಪರಾಧಿ ಕ್ರಿಯೆಗಳನ್ನು ತಡೆಯುವ ಎಲ್ಲ ಮಾರ್ಗಗಳನ್ನು ಕಾಣುತ್ತೇವೆ.
ಪ್ರಾಚೀನ ಭಾರತದಲ್ಲಿ ಕಾನೂನಿಗೆ ಸಂಬಂಧ ಪಟ್ಟಂತೆ ಮುಖ್ಯವಾಗಿ ಎರಡು ರೀತಿಯ ಧರ್ಮಗಳನ್ನು ಕಾಣಬಹುದು. ವ್ಯವಹಾರಧರ್ಮ ಮತ್ತು ರಾಜಧರ್ಮ. ಅಚ್ಚರಿಯೆಂದರೆ ಆಧುನಿಕ ಸಿವಿಲ್ ಪ್ರಕ್ರಿಯಾ ಸಂಹಿತೆಯೇ ಅಂದಿನ ವ್ಯವಹಾರ ಧರ್ಮ ಹಾಗೂ ದಂಡ ಸಂಹಿತೆಯೇ ಅಂದಿನ ರಾಜಧರ್ಮ. ವ್ಯವಹಾರ ಧರ್ಮದಲ್ಲಿ ಎಲ್ಲ ರೀತಿಯ ಸಿವಿಲ್ ವ್ಯವಹಾರಗಳಿಗೆ ನ್ಯಾಯ ನಿರ್ಣಯ ಸಿಗುತ್ತಿತ್ತು. ಅಂತೆಯೇ ರಾಜ ಧರ್ಮದಲ್ಲಿ ಎಲ್ಲ ರೀತಿಯ ಅಪರಾಧಿಕ ಕೃತ್ಯಗಳಿಗೆ ಶಿಕ್ಷೆ ವಿಧಿಸಲ್ಪಡುತ್ತಿತ್ತು. ಒಬ್ಬನ ಅಥವಾ ಒಂದು ಸಮೂಹದ ನ್ಯಾಯಯುತ ಉಪಭೋಗಕ್ಕೆ ಮತ್ತೊಬ್ಬನಿಂದ ಅಥವಾ ಮತ್ತೊಬ್ಬರಿಂದ ಧಕ್ಕೆಯಾದರೆ ಅದಕ್ಕೆ ವ್ಯವಹಾರ ಧರ್ಮದಿಂದ ಉತ್ತರ ಅಥವಾ ಪರಿಹಾರ ಸಿಗುತ್ತಿತ್ತು. ಆಧುನಿಕ ಕಾನೂನುಗಳಂತೇ ಆಗಲೂ ಕೂಡಾ ಬೇರೆ ಬೇರೆ ವಿಭಾಗಗಳ ಮೂಲಕ ಕಾನೂನಿನ ಪ್ರಕ್ರಿಯೆಯಂತೇ ನ್ಯಾಯ ನಿರ್ಣಯಗಳು ನಡೆಯುತ್ತಿದ್ದವು.
ಕುತೂಹಲಕ್ಕಾಗಿ ಮನುಸ್ಮೃತಿಯನ್ನು ನೋಡ ಬಹುದು. ಇಲ್ಲಿ ವ್ಯವಹಾರಧರ್ಮದ ಹದಿನೆಂಟು ವಿಭಾಗಗಳನ್ನು ಉಲ್ಲೇಖಿಸಲಾಗಿದೆ.
1. ಋಣದಾನ – ಮನುಷ್ಯನ ವ್ಯಾವಹಾರಿಕ ಋಣ ಒಂದಲ್ಲ ಒಂದು ರೀತಿಯಲ್ಲಿ ತೀರಿಸಲೇ ಬೇಕು. ಅಂದರೆ ಹಣದ ಮೂಲಕವೋ ಅಥವಾ ಹಣದ ಬದಲು ಕೆಲಸ ಮಾಡಿಯೋ, ಬೆಳೆ ಹಾಕುವುದರ ಮೂಲಕವೋ ಒಟ್ಟಿನಲ್ಲಿ ಋಣ ಕಡಿಮೆ ಮಾಡಿಕೊಳ್ಳಬೇಕು.
2. ನಿಕ್ಷೇಪ – ಇದೊಂದು ರೀತಿಯಲ್ಲಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ರಕ್ಷಿಸಿಡುವುದು.
3. ಅಸ್ವಾಮಿ ವಿಕ್ರಯ – ಒಡೆತನವಿಲ್ಲದೇ ಮಾರಾಟ ಮಾಡುವುದು.
4. ಸಂಭಾವ್ಯ ಸಮ್ಮುತ್ಥನ – ಪಾಲುದಾರಿಕೆ
5. ದತ್ತಸ್ಯನಪಾಕರ್ಮ- ಉಡುಗೊರೆ ಬಕ್ಷೀಸು ಇತ್ಯಾದಿ.
6. ವೇತನ ದಾನ – ಸಂಬಳ.
7. ಸಮುವಿದ್ಯಾತಿಕರ್ಮ – ಸಾರ್ವಜನಿಕ ಆಸ್ತಿ ಹಾನಿ.
8. ಕ್ರಯ ವಿಕ್ರಯಾನುಸಯ – ಮಾರಾಟ ಮತ್ತು ಖರೀದಿ.
9 ಸ್ವಾಮಿಪಾಲವಿವಾದ – ಒಡೆಯ ಮತ್ತು ಒಕ್ಕಲು ನಡುವಿನ ವಿವಾದ.
10. ಸೀಮಾ ವಿವಾದ – ಗಡಿ ಜಗಳ.
11. ವಾಕ್ಪರುಷ್ಯಾ – ಮಾನಹಾನಿ.
12. ದಂಡಪರು ಪರುಷ್ಯಾ – ಹಲ್ಲೆ.
13. ಸ್ಥೇಯ – ಕಳವು.
14. ಸಾಹಸ – ಹಿಂಸಾತ್ಮಕ ಅಪರಾಧ.
15. ಸ್ತ್ರೀ ಸಂಗ್ರಹಣ – ವ್ಯಭಿಚಾರ. 16. ಸ್ತ್ರೀಪುಂಧರ್ಮ – ಪತಿ-ಪತ್ನಿ ಕರ್ತವ್ಯ. 17. ವಿಭಾಗ – ಹಿಸೆ. 18. ದ್ಯುತಿಸಮಂಹ್ಯ – ಜೂಜು.
ಹೀಗೆ ವಿಭಾಗಿಸುವ ಮೂಲಕ ಸಿವಿಲ್ ಕಾನೂನುಗಳು ವ್ಯವಹಾರ ಧರ್ಮದ ಮೂಲಕ ನಿರ್ಣಯಿಲಪಡುತ್ತಿದ್ದವು. ಈ ವ್ಯವಹಾರಧರ್ಮಕ್ಕೆ ಧರ್ಮದ ಚೌಕಟ್ಟೂ ಸೇರಿರುವುದರಿಂದ ಮನುಷ್ಯರು ಸ್ವಯಂ ಪ್ರೇರಿತರಾಗಿ ಕಾನೂನನ್ನು ಗೌರವಿಸುತ್ತಿದ್ದರು.
ರಾಜಧರ್ಮ ಅಂದರೆ ರಾಜ್ಯದಲ್ಲಿ ನಡೆಯುವ ಅಪರಾಧಿಕ ಕೃತ್ಯಗಳಿಗೆ ರಾಜನೇ ನ್ಯಾಯ ನೀಡುತ್ತಿದ್ದ. ಶಿಕ್ಷೆ ನೀಡುತ್ತಿದ್ದ. ರಾಜ ಧರ್ಮದ ಪ್ರಕಾರ ಯಾವುದೇ ದೈಹಿಕ ಹಿಂಸೆ, ಕೊಲೆ, ಸುಲಿಗೆ, ದರೋಡೆ, ದಂಗೆ ಮುಂತಾದ ಅಪರಾಧಗಳೆಲ್ಲ ದಂಡನೆಗೆ ಹಾಗೂ ಶಿಕ್ಷೆಗೆ ಒಳಪಡುವಂತಹವುಗಳಾಗಿದ್ದವು. ಇದಕ್ಕೆಲ್ಲ ರಾಜನೇ ಅಂತಿಮ ತೀರ್ಪುಗಾರನಾಗಿರುತ್ತಿದ್ದನು. ಹಾಗಾಗಿ ರಾಜಧರ್ಮದಲ್ಲಿ ರಾಜನ ಜವಾಬ್ದಾರಿ ಗುರುತರದ್ದಾಗಿತ್ತು.
ಇಷ್ಟಾಗಿಯೂ ಪ್ರಾಚೀನ ಭಾರತದಲ್ಲಿ ಅಖಂಡ ಭಾರತಕ್ಕೆ ಒಂದೇ ಕಾನೂನಿನ ಕಲ್ಪನೆ ಇರಲಿಲ್ಲ. ದೇಶ ಹಲವು ಪ್ರಾಂತ್ಯಗಳಾಗಿ ಹಂಚಿಹೋಗಿದ್ದರಿಂದ ಆಯಾ ಪ್ರಾಂತ್ಯದ ಪದ್ಧತಿ ಸಂಪ್ರದಾಯ ಮುಂತಾದವುಗಳ ಆಧಾರಗಳ ಮೇಲೆ ನ್ಯಾಯ ನಿರ್ಣಯಗಳು ನಡೆಯುತ್ತಿದ್ದವು. ಇದಕ್ಕೆಲ್ಲ ವ್ಯವಹಾರಧರ್ಮ ಹಾಗೂ ರಾಜಧರ್ಮವೇ ಮೂಲ ನೆಲೆಯಾಗಿತ್ತು.
*****************
ಚಿತ್ರಕೃಪೆ: appscmaterial.blogspot.com




